ಪುರಿ ಜಗನ್ನಾಥನ ಜಾಗತಿಕ ರಥಯಾತ್ರೆ

– ಡಾ.ಆರತೀ ವಿ.ಬಿ.

ಓಡಿಶಾದ ಪುರಿ ಕ್ಷೇತ್ರದ ಜಗನ್ನಾಥ ರಥಯಾತ್ರೆಯು ಜಗದ್ವಿಖ್ಯಾತ. ಭವ್ಯ ಸಾಂಸ್ಕೃತಿಕ ಇತಿಹಾಸವಿರುವ ಈ ರಥಯಾತ್ರೆಯಲ್ಲಿ ನೆರೆಯುವ ಭಕ್ತಸ್ತೋಮದ ಭಕ್ತಿಕ್ತ್ಯುತ್ಸಾಹಗಳಿಗಂತೂ ಎಲ್ಲೆಯೇ ಇರದು! ಯಾವುದೇ ಔಪಚಾರಿಕ ಆಹ್ವಾನವಿಲ್ಲದೆ ಬಂದು ನೆರೆಯುವ ದೇಶವಿದೇಶದ ಲಕ್ಷಗಟ್ಟಲೆ ಜನ ಶ್ರದ್ಧೆಯು ನಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ರಥಯಾತ್ರೆಯ ಸಂದರ್ಭದಲ್ಲಿ ಓಡಿಶಾದ ಪ್ರಾದೇಶಿಕ ಸಾಹಿತ್ಯ- ಕಲೆ- ಕ್ರೀಡೆಗಳೂ, ಧಾರ್ಮಿಕ ಕಲಾಪಗಳೂ, ವ್ಯಾಪಾರ- ಪ್ರವಾಸೋದ್ಯಮಗಳೂ ಗರಿಗೆದರಿ ನಿಲ್ಲುತ್ತವೆ!
ಭಾರತದ ಪ್ರಾಚೀನ ರಥೋತ್ಸವಗಳ ಪೈಕಿ ಒಂದಾದ ಇದು, ವಿಶೇಷವೂ ವಿಭಿನ್ನವೂ ಆದದ್ದು. ಪುರಿ ಕ್ಷೇತ್ರವು ಭಾರತೀಯರು ಜನ್ಮದಲ್ಲಿ ಒಮ್ಮೆಯಾದರೂ ಸಂದರ್ಶಿಸಲೇಬೇಕೆನ್ನುವ ಪವಿತ್ರ ಚತುರ್ಧಾಮಗಳಲ್ಲಿ ಒಂದು. ಪೂರ್ವ ಭಾರತ ಪೌರಾಣಿಕ-ಐತಿಹಾಸಿಕ-ಸಾಂಸ್ಕೃತಿಕ ಪರಂಪರೆಗಳ ತವರು. ಇದಕ್ಕೆ ಪುರುಷೋತ್ತಮ ಕ್ಷೇತ್ರ, ನೀಲಾಚಲ ಕ್ಷೇತ್ರ, ಶಂಖಕ್ಷೇತ್ರ (ಊರು ಶಂಖಾಕಾರದಲ್ಲಿದೆ), ಪುರುಷೋತ್ತಮ ಪುರೀ, ಜಗನ್ನಾಥ ಪುರೀ, ಬಡಾ- ದೇವುಲ್‌ ಎನ್ನುವ ನಾಮಾಂತರಗಳಿವೆ. ಮಹಾನದಿಯ ಉಪನದಿ- ಭಾರ್ಗವೀ ನದಿಯು ಪಶ್ಚಿಮ ಸಮುದ್ರವನ್ನು ಸೇರುವ ಪ್ರದೇಶ. (ದೇಗುಲಕ್ಕೂ ಗುಂಡೀಚಾಮಹಲ್‌ಗೂ ಮಧ್ಯದಲ್ಲಿದ್ದ ನದಿಯು ದಶಕಗಳ ಹಿಂದೆ ದಿಕ್ಕನ್ನು ಬದಲಿಸಿರುವುದರಿಂದ ಈಗ ಅಲ್ಲಿ ಕಾಣಬರುವುದಿಲ್ಲ) ಆದಿ ಶಂಕರಾಚಾರ್ಯರು ವೇದಾಂತ ಪ್ರಚಾರಕ್ಕಾಗಿ ಸ್ಥಾಪಿಸಿದರೆನ್ನುವ ಚತುರಾಮ್ನಾಯ ಮಠಗಳಲ್ಲೊಂದಾದ ಗೋವರ್ಧನ ಮಠವು ಪುರಿ ಕ್ಷೇತ್ರದಲ್ಲಿದೆ.
ಮುಸಲ್ಮಾನರ ಆಕ್ರಮಣದಲ್ಲಿ ನಾಶವಾದ ಕೋಣಾರ್ಕ ದೇವಸ್ಥಾನದ ಮೂಲ ಸೂರ್ಯವಿಗ್ರಹವೂ ಜಗನ್ನಾಥಪುರಿಯ ದೇಗುಲದ ಪ್ರಾಕಾರದಲ್ಲಿ ಸಂರಕ್ಷಿಸಿಡಲಾಗಿದೆ. ಕರ್ನಾಟದ ಪಶ್ಚಿಮಗಂಗರ ಅನುವರ್ತಿಗಳು ಎಂದೆನಿಸುವ ಪ್ರಾಚ್ಯಗಂಗರು 5ರಿಂದ 15ನೇ ಶತಮಾನದ ಕಾಲದಲ್ಲಿ ಪೂರ್ವ ಭಾರತವನ್ನಾಳಿ ಪೋಷಿಸಿದ ಭವ್ಯ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯ ಅಮರ ದ್ಯೋತಕಗಳು ಕೋಣಾರ್ಕದ ದೇಗುಲ ಹಾಗೂ ಪುರಿ ಕ್ಷೇತ್ರದ ಜಗನ್ನಾಥ ದೇಗುಲಗಳು. ಜಗನ್ನಾಥ ದೇಗುಲವನ್ನು ಪೂರ್ವಗಂಗರ ದೊರೆ ಅನಂತವರ್ಮನ್‌ ಚೋಳಗಂಗನು 1078ರಲ್ಲಿ ಕಟ್ಟಿಸಲಾರಂಭಿಸಿದ್ದು, ಅವನ ಮಗ ಅನಂಗಭೀಮನ ಕಾಲಕ್ಕೆ ಪೂರ್ಣಗೊಂಡಿತು. ಕಾಲಾಂತರದಲ್ಲಿ ಸೂರ್ಯವಂಶಿಗಳಾದ ಗಜಪತಿ ರಾಜವಂಶದವರು ಇದರ ನಿರ್ವಹಣೆಯನ್ನು ವಹಿಸಿದ್ದು, ಇಂದಿಗೂ ದೇಗುಲದ ಮುಖ್ಯ ಸಂಪ್ರದಾಯಗಳನ್ನು ನೆರವೇರಿಸುತ್ತ ಬಂದಿದ್ದಾರೆ. ಈ ದೇಗುಲವು ಶತಮಾನಗಳಿಂದ ಹಲವಾರು ಮಠಮಂದಿರಗಳನ್ನು ಪೋಷಿಸಿದೆ. ದೇಗುಲದ ಆವರಣ 4 ಲಕ್ಷ ಚದರಗಳು. ಹೊರಾವರಣಕ್ಕೆ 20 ಅಡಿ ಎತ್ತರದ ಗೋಡೆಯೂ, 120 ದೇವತಾ ಸನ್ನಿಧಿಗಳಿರುವ ಮುಖ್ಯ ದೇವಸ್ಥಾನಕ್ಕೆ ‘ಕೂರ್ಮಭೇದ’ ಗೋಡೆಯೂ ಇವೆ. ದೇಗುಲಕ್ಕೆ ನಾಲ್ಕು ಪ್ರವೇಶದ್ವಾರಗಳು. ಧರ್ಮ-ಅರ್ಥ-ಕಾಮ-ಮೋಕ್ಷ ವೆಂಬ ಪುರುಷಾರ್ಥಗಳನ್ನು ಬಯಸುವವರು, ನಿರ್ದಿಷ್ಟ ದ್ವಾರಗಳಿಂದ ಪ್ರವೇಶಿಸುವ ಪದ್ಧತಿಯಿದೆ. ಈ ದೇವಸ್ಥಾನವು ಪೂರ್ವಭಾರತದ ಕಳಿಂಗಶೈಲಿಯ ವಾಸ್ತುಶಿಲ್ಪ ಕಲೆಯ ಅದ್ವಿತೀಯ ದ್ಯೋತಕವಾಗಿದೆ. ಗರ್ಭಗುಡಿಯ ವಿಮಾನಗೋಪುರವಂತೂ ಗಾತ್ರದಿಂದಲೂ ವಿನ್ಯಾಸದಿಂದಲೂ ಕಣ್ಮನಗಳನ್ನು ಸೆಳೆಯುತ್ತದೆ! ಬುಡದಿಂದ 214 ಅಡಿ ಎತ್ತರವೂ ಸಮುದ್ರಮಟ್ಟದಿಂದ 240 ಅಡಿ ಎತ್ತರವೂ ಇದ್ದು, ಅಷ್ಟಧಾತುಗಳ ನೀಲಚಕ್ರವು ಇದರ ಮುಡಿಯಲ್ಲಿ ರಾರಾಜಿಸುತ್ತದೆ. ದರ್ಶನ ಮಾತ್ರದಿಂದ ಪಾಪವನ್ನು ಕಳೆವ ‘ಪತಿತಪಾವನ-ಚಕ್ರ’ವೆಂದು ಇದಕ್ಕೆ ಹೆಸರು. ಗಗನದೆತ್ತರದ ವಿಮಾನಗೋಪುರದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ ದೇಗುಲದ ಇತರ ಚಿಕ್ಕದೊಡ್ಡ ಗೋಪುರಗಳು. ಜಗನ್ನಾಥನ ವಿಮಾನಗೋಪುರದ ಕುರಿತಾಗಿ ಹಲವು ವಿಸ್ಮಯಗಳು ಕೇಳಿಬರುತ್ತವೆ- ‘ಗೋಪುರದ ಮೇಲೆ ಯಾವುದೇ ಪಕ್ಷಿಯೂ ಕೂರುವುದಿಲ್ಲ; ನೀಲಚಕ್ರವು ಯಾವ ದಿಕ್ಕಿನಿಂದ ನೋಡಿದರು ಎದುರಿಗಿದ್ದಂತೆಯೇ ಕಾಣುತ್ತದೆ; ಧ್ವಜವು ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ; ವಿಮಾನಗೋಪುರದ ನೆರಳು ಯಾವ ಸಮಯದಲ್ಲೂ ಎಲ್ಲಿಯೂ ಕಾಣಬರದು; ಸಮುದ್ರದ ಅಲೆಗಳ ಭೋರ್ಗರೆತವೂ ದೇಗುಲದ ಪಕ್ಕದ ಸ್ಮಶಾನದ ಚಿತಾಗ್ನಿಯ ಸದ್ದೂ ಆವರಣದೊಳಗೆ ಮಾತ್ರ ಸ್ವಲ್ಪವೂ ಕೇಳಿಬರದು’ ಎಂದು.
ಮೂಲ ದೇವರು: ಇಲ್ಲಿನ ಆರಾಧ್ಯ ದೇವರು ಜಗನ್ನಾಥ ಸ್ವಾಮಿ ಹಾಗೂ ಬಲಭದ್ರ ಮತ್ತು ಸುಭದ್ರೆಯರು(ಯೋಗಮಾಯೆ). ಬಲಭದ್ರನ ಮತ್ತು ಜಗನ್ನಾಥನ ಮೂರ್ತಿಗಳು 8 ಅಡಿಯೂ ಸುಭದ್ರೆಯ ಮೂರ್ತಿಯು 7.5 ಅಡಿ ಎತ್ತರ ಇವೆ. ಅತಿಪ್ರಾಚೀನ ಕಾಲದ ಈ ಮೂರ್ತಿಗಳು ವೈದಿಕ ಹಾಗೂ ಜಾನಪದೀಯ ಹಾಗೂ ವನ್ಯಜನಾಂಗೀಯ ಶೈಲಿಗಳನ್ನೊಳಗೊಂಡಿವೆ. ‘ದಾರುಬ್ರಹ್ಮ’ ಎಂಬ ಬಗೆಯ ಬೇವಿನ ಮರದಿಂದ ನಿರ್ಮಿಸಲಾದ ಇವು ‘ಚಲ’ಮೂರ್ತಿಗಳು! ರಥಯಾತ್ರೆಯಲ್ಲಿ ಇವನ್ನೇ ಮೆರವಣಿಗೆಗೆ ಒಯ್ಯಲಾಗುತ್ತದೆ! ಇವುಗಳ ರೂಪವೂ ‘ರೂಪಾರೂಪ’! ದೇಹವಿದ್ದರೂ ಅಂಗಾಂಗಗಳ ವಿವರಧಿಗಳಿಲ್ಲ, ತಲೆ-ಮುಖಗಳಿದ್ದರೂ ಉಪಾಂಗಗಳಿಲ್ಲ, ಕೈಯಿದ್ದರೂ ಬೆರಳುಗಳಿಲ್ಲ! ಹೀಗೆ ‘ರೂಪಾರೂಪ’ನಾಗಿ ಆರಾಧಿಸಲ್ಪಡಲು ಜಗನ್ನಾಥನೇ ಇಚ್ಛಿಸಿದನೆಂದು ನಂಬಲಾಗಿದೆ. ವರ್ಣಲಿಂಗ ಭೇದವಿಲ್ಲದೇ ಎಲ್ಲ ಧಾರ್ಮಿಕರೂ ಈ ಮೂಲವಿಗ್ರಹಗಳನ್ನು ಸ್ಪರ್ಶಿಸಬಹುದು. ಜನನಿಬಿಡತೆಯ ಕಾರಣದಿಂದಾಗಿ, ‘ಸಹನ್‌-ಮೇಲಾ’ ಎನ್ನುವ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರಿಗೆ ವಿಗ್ರಹವನ್ನೇ ಸ್ಪರ್ಶಿಸುವ ಅವಕಾಶ. ಮಿಕ್ಕ ದಿನಗಳಲ್ಲಿ ದೇಗುಲದ ಆವರಣದಲ್ಲಿರುವ ಮೂಲವಿಗ್ರಹದ ಪ್ರತಿರೂಪವನ್ನು ಅಪ್ಪಿಕೊಳ್ಳಬಹುದು. ಜಗನ್ನಾಥನಿಗೆ 64 ದಿವ್ಯೋಪಚಾರಗಳು ನೆರವೇರುತ್ತವೆ. ಅಲಂಕಾರ, ಅರ್ಚನೆ, ನೈವೇದ್ಯ, ಆರತಿ, ಚಾಮರಸೇವೆ- ಒಂದೊಂದು ಸೇವೆಗೂ ಒಂದೊಂದು ವಂಶದವರು ನಿಯುಕ್ತರು! ರಥಯಾತ್ರೆಯ ಸಂದರ್ಭದಲ್ಲಿ ಕೃಷ್ಣ-ಬಲರಾಮ-ಸುಭದ್ರೆಯರ ವಿಗ್ರಹಗಳನ್ನು ಗರ್ಭಗೃಹದಿಂದ ರಥಕ್ಕೂ, ಮರಳಿ ರಥದಿಂದ ಗರ್ಭಗೃಹಕ್ಕೂ ಸಾಗಿಸುವುದೂ ಒಂದಾನೊಂದು ವಂಶದವರ ವಾರ್ಷಿಕ ಸೇವೆ. ಯಾವ ಉಪಕರಣಗಳನ್ನೂ ಬಳಸದೆ ಮೂರ್ತಿಗಳನ್ನು ಕೈಯಿಂದಲೇ ಎತ್ತುವ ಹೆಬ್ಬಲಕ್ಕಾಗಿ ಈ ವಂಶದವರು ಆಹಾರನೇಮಗಳನ್ನೂ, ಕುಸ್ತಿ, ವ್ಯಾಯಾಮಾದಿಗಳನ್ನು ವರ್ಷವಿಡೀ ಅಭ್ಯಾಸ ಮಾಡುತ್ತಾರೆ! ದೇಹದಾಢ್ರ್ಯಕ್ಕಾಗಿ ಪ್ರಖ್ಯಾತರಾದ ಈ ವಂಶದವರ ಪೈಕಿ ಹಲವರು ವಿಶ್ವಖ್ಯಾತಿಯ ಜಟ್ಟಿಗಳೂ ಆಗಿದ್ದಾರೆ.
ನೈವೇದ್ಯ: ಜಗನ್ನಾಥನಿಗೆ ದಿನಕ್ಕೆ ಆರು ಬಾರಿ 56 ಬಗೆಯ ಖಾದ್ಯಗಳ ಮಹಾಭೋಗ್‌ (ನೈವೇದ್ಯ). ಒಂದೊಂದು ಖಾದ್ಯವನ್ನು ಒಂದೊಂದು ವಂಶದವರು ತಲತಲಾಂತರಗಳಿಂದ ತಯಾರಿಸುತ್ತ ಬಂದಿದ್ದಾರೆ. ನೈವೇದ್ಯವನ್ನು ಮಣ್ಣಿನ ಮಡಕೆಗಳಲ್ಲೇ ತಯಾರಿಸಲಾಗುತ್ತದೆ. ಒಲೆಯ ಮೇಲೆ ಮಡಕೆಗಳನ್ನು ಒಂದರ ಮೇಲೊಂದರಂತೆ ಜೋಡಿಸಲಾಗಿ, ಕೆಳಗಿರುವ ಮಡಕೆಯಷ್ಟೇ ಬೇಗ ಮೇಲಿರುವ ಮಡಕೆಯ ಅನ್ನವೂ ಬೇಯುತ್ತದಂತೆ! ಅಡುಗೆಯನ್ನು ‘ಮೇಲ್ವಿಚಾರಕಿ’ಯಾದ ಮಹಾಲಕ್ಷ್ಮಿಗೆ ತೋರಿಸಿ, ಜಗನ್ನಾಥನಿಗೆ ನೈವೇದ್ಯಗೈಯಲಾಗುತ್ತದೆ! ಪ್ರಸಾದದಲ್ಲಿ ಸ್ವಲ್ಪವಾದರೂ ದೋಷ ಕಂಡುಬಂದಲ್ಲಿ, ಅಷ್ಟನ್ನೂ ವರ್ಜಿಸಿ, ಹೊಸದಾಗಿ ತಯಾರಿಸಲಾಗುತ್ತದಂತೆ! ಜಗನ್ನಾಥನ ಬಗೆಬಗೆಧಿಯ ಪ್ರಸಾದಗಳು ಹೊರಾವರಣದ ಆನಂದಬಝಾರ್‌ನಲ್ಲಿ ದೊರೆಯುತ್ತವೆ. ಅತ್ಯಂತ ರುಚಿಕರವಾದ ಈ ಪ್ರಸಾದಗಳನ್ನು ಒಣಗಿಸಿಟ್ಟುಕೊಂಡು ಪ್ರತಿದಿನ ಮೆಲ್ಲುವ ಧಾರ್ಮಿಕರಿದ್ದಾರೆ.
ನವಕಲೇವರ: 12 ವರ್ಷಗಳಿಗೊಮ್ಮೆ, ಅಧಿಕಮಾಸ ಬರುವ ವರ್ಷದಲ್ಲಿ, ಹಳೆಯ ವಿಗ್ರಹಗಳನ್ನು ದೇಗುಲದ ಪ್ರತ್ಯೇಕ ಪ್ರದೇಶದಲ್ಲಿ ಹೂತು, ಹೊಸವಿಗ್ರಹಗಳನ್ನು ಸ್ಥಾಪಿಸಲಾಗುತ್ತದೆ. ಪುರೋಹಿತರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಕತ್ತಲಲ್ಲಿ, ಏಕಾಂತದಲ್ಲಿ ಹಳೆಯ ವಿಗ್ರಹಗಳೊಳಗಿನ ‘ಪ್ರಾಣ’ವನ್ನು ತೆಗೆದು ಹೊಸ ವಿಗ್ರಹಗಳಲ್ಲಿ ಸ್ಥಾಪಿಸುತ್ತಾರೆ. ಈ ‘ಪ್ರಾಣ’ವೇನೆಂಬುದನ್ನು ಯಾರೂ ನೋಡಿದ್ದೇ ಇಲ್ಲವಂತೆ! ಹೊಸದೇಹವನ್ನು ಧರಿಸುವ ಜಗನ್ನಾಥನ ಈ ‘ನವಕಲೇವರ’ ಉತ್ಸವದಲ್ಲಿ ಭಾಗವಹಿಸಲು 30 ಲಕ್ಷ ಜನರು ನೆರೆಯುತ್ತಾರೆ!
ಈ ಕ್ಷೇತ್ರವು ಅತ್ಯಂತ ಪ್ರಾಚೀನ ಕಾಲದಿಂದಲೂ ದಾರುಬ್ರಹ್ಮ- ಕ್ಷೇತ್ರವೆಂದು ಪ್ರಸಿದ್ಧ. ‘ಅಧೋಃ ಯತ್‌ ದಾರು ಪ್ಲವತೇ ಸಿಂದೋಃ ಪಾರೇ ಅಪುರುಷಮ್‌’ ಎನ್ನುವ ವೇದೋಕ್ತಿಯು ಈ ಕ್ಷೇತ್ರವನ್ನೇ ಕುರಿತಾದದ್ದು ಎನ್ನಲಾಗುತ್ತದೆ. ಪುರಾಣ ಕಥೆಯ ಪ್ರಕಾರ ಮಾಲವ ವಂಶದ ಇಂದ್ರದ್ಯುಮ್ನ ಮಹಾರಾಜನೂ, (ಬೇಡರಕುಲದ) ಸಬರರಾಜ ವಿಶ್ವವಸುವೂ ಪಶ್ಚಿಮ ಸಮುದ್ರ ತಟದ ನೀಲಾದ್ರಿಯ ಮಾಧವನ ಸುಂದರ ಮೂರ್ತಿಗಾಗಿ ಸೆಣೆಸಾಡುತ್ತಿದ್ದರಂತೆ. ಅಷ್ಟರಲ್ಲಿ ಆ ವಿಗ್ರಹ ಆಶ್ಚರ್ಯಕರ ರೀತಿಯಲ್ಲಿ ಭೂಗತವಾಗಿಬಿಟ್ಟಿತಂತೆ! ‘ಇಬ್ಬರೂ ಭಕ್ತರೂ ಸ್ವಾರ್ಥವನ್ನು ಬಿಟ್ಟು, ಒಟ್ಟಾಗಿ ಹೊತ್ತು ತರುವ ದಾರುಬ್ರಹ್ಮದಿಂದಲೇ ತನ್ನ ಮೂರ್ತಿಯು ನಿರ್ಮಾಣವಾಗಿ ನೀಲಾಚಲದಲ್ಲಿ ಪುನಃಸ್ಥಾಪಿತವಾಗಬೇಕು’ ಎಂದು ಮಾಧವನೇ ಆದೇಶಿಸಿದನಂತೆ. ಸಲಕ್ಷ ಣವಾದ ದಾರುವು ಗೋಚರಿಸಲಾಗಿ, ವಿಶ್ವಕರ್ಮನೇ ಕೆತ್ತಿಕೊಟ್ಟ ಮೂಲವಿಗ್ರಹಗಳನ್ನು ಚತುರ್ಮುಖ ಬ್ರಹ್ಮನೇ ಪ್ರತಿಷ್ಠಾಪನೆ ಮಾಡಿದನಂತೆ. ಇಂದ್ರದ್ಯುಮ್ನನೂ ವಿಶ್ವವಸುವೂ ‘ಮನ್ನಾಥ’(ನನ್ನ ಪ್ರಭು) ಎನ್ನುವ ಸ್ವಾರ್ಥವನ್ನು ಬಿಟ್ಟು, ದೇವರಿಗೆ ಜಗನ್ನಾಥ (ಜಗತ್ತಿಗೇ ನಾಥ) ಎನ್ನುವ ನಾಮಕರಣ ಮಾಡಿದರಂತೆ! ಈಗ ಕಾಣಬರುವ ಭವ್ಯದೇಗುಲವನ್ನು 10-11ನೆ ಶತಮಾಧಿನಗಳಲ್ಲಿ ನಿರ್ಮಿಸಿದವರು ಪ್ರಾಚ್ಯಗಂಗರು. ಇಲ್ಲಿನ ರಾಜರು ಜಗನ್ನಾಥನ ಸೇವಕರಾಗಿಯೇ ನಡೆದುಕೊಳ್ಳುತ್ತಾರೆ. ರಾಜಲಾಂಛನಗಳನ್ನು ಬಿಚ್ಚಿಟ್ಟು ದೇಗುಲಪ್ರವೇಶ ಮಾಡುಧಿತ್ತಾರೆ. ರಥಯಾತ್ರೆಯ ವೇಳೆ ‘ಚೇರಾ-ಪೆಹನ್ರಾ’ ಎನ್ನುವ ಕೈಂಕರ್ಯ ಮಾಡುತ್ತಾರೆ.
ರಥಯಾತ್ರೆ: ಈ ರಥಯಾತ್ರೆಗೆ ಜಾನಪದೀಯ ಸೊಗಡನ್ನು ಕೊಡುವಂತಹ ಮುಗ್ಧಸುಂದರ ಕಥೆಯೊಂದಿದೆ. ಕೃಷ್ಣ-ಬಲರಾಮ- ಸುಭದ್ರೆಯರು ಊರಲ್ಲಿ ಅಡ್ಡಾಡಲು ಹೊರಧಿಬರುತ್ತಾರೆ. ಕೃಷ್ಣನನ್ನು ರಂಜಿಸಲು ಯುವಯುವತಿಯರು ಗೀತ- ನೃತ್ಯ- ಕ್ರೀಡಾ- ವಿನೋದ ಆಯೋಜಿಸುತ್ತಾರೆ. ಕೃಷ್ಣನು ತನ್ನ ಅತ್ತೆ ಗುಂಡೀಚಾಳ ಮನೆಗೆ ಹೋಗುವ ದಾರಿಯಲ್ಲಿ ಸ್ನಾನೋತ್ಸವವಾಗುತ್ತದೆ. ಜಲಕ್ರೀಡೆಯಿಂದಾಗಿ ಕೃಷ್ಣನಿಗೆ ಆರೋಗ್ಯ ಸ್ವಲ್ಪ ಕೆಡುತ್ತದೆ. ಅತ್ತೆಯ ಮನೆಯಲ್ಲೇ 15 ದಿನ ವಿಶ್ರಮಿಸುತ್ತಾನೆ. ದೇಗುಲದ ವೈದ್ಯರು ಜಗನ್ನಾಥನಿಗೆ ಚಿಕಿತ್ಸೆಯಿತ್ತು, ಪಥ್ಯದಾಹಾರವನ್ನು ವಿಧಿಸುತ್ತಾರೆ. ಗುಣಮುಖನಾದ ಮೇಲೆ ಜಗನ್ನಾಥನು ಬಲರಾಮ- ಸುಭದ್ರೆಯರೊಡನೆ ದೇಗುಲಕ್ಕೆ ಮರಳಿ ಬರುತ್ತಾನೆ
ಇತಿಹಾಸ: ಅತಿಪ್ರಾಚೀನ ಕಾಲದಿಂದಲೂ ಪುರಿ ಕ್ಷೇತ್ರವು ಧಾರ್ಮಿಕ- ಸಾಂಸ್ಕೃತಿಕ-ವಾಣಿಜ್ಯ- ರಾಜವೈಭವಗಳ ಕೇಂದ್ರಧಿವಾಗಿ ಮೆರೆದಿದೆ. ಇಲ್ಲಿನ ಅಗಾಧ ಐಶ್ಚರ್ಯವನ್ನು ಲೂಟಿಗೈಯಲು 19ನೆ ಶತಮಾನದ ಮೊದಲ ಭಾಗದವರೆಗೂ ಮುಸಲ್ಮಾನ ಅರಸರು ಹಲವು ಬಾರಿ ಆಕ್ರಮಣವೆಸಗಿದ್ದಾರೆ. ಆದರೂ ದೇಗುಲವು ವೈಭವವು ಕಳೆಗುಂದಿಲ್ಲ. ಕ್ರೂರಿ ಔರಂಗಜೇಬನು 1692ರಲ್ಲಿ ದೇಗುಲಕ್ಕೆ ಬೀಗ ಹಾಕಿಸಿದ. ಆ ದುರುಳ 1707ರಲ್ಲಿ ಸತ್ತಾಗ, ದೇಗುಲವು ಮತ್ತೆ ಸಾರ್ವಜನಿಕರಿಗೆ ತೆರೆಯಿತು. ಅನಾದಿಯಿಂದಲೂ ಅಸಂಖ್ಯ ಮಹಾತ್ಮರು ಪುರಿ ಕ್ಷೇತ್ರಕ್ಕೆ ಭೇಟಿಯಿತ್ತಿದ್ದಾರೆ. ಅರ್ವಾಚೀನ ಕಾಲದಲ್ಲಿ ಚೈತನ್ಯ ಮಹಾಪ್ರಭುಗಳು (24 ವರ್ಷಗಳ ಕಾಲ ವಾಸವಿದ್ದರು), ಆದಿ ಶಂಕರಾಚಾರ್ಯರೂ, ಗುರುನಾನಕರೂ, ಮಧ್ವಾಚಾರ್ಯರೂ, ರಾಮಾನುಜಾಚಾರ್ಯರೂ, ವಲ್ಲಭಾಚಾರ್ಯರೂ, ರಮಾನಂದ ಸ್ವಾಮಿಗಳೂ ಭೇಟಿಯಿತ್ತಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top