ಮುಳುಗಿದ ಭಾರಂಗಿಯಿಂದ ಹೊರಟ ಹಾಡು

– ದೀಪಾ ರವಿಶಂಕರ್‌. 

ಕೆಲವು ಕೃತಿಗಳು ನಮ್ಮ ಬದುಕು, ಹೋರಾಟ, ಸಂಬಂಧಗಳ ಪಲ್ಲಟದೊಂದಿಗೆ ಅಭಿವೃದ್ಧಿಗಾಗಿ ಪ್ರಕೃತಿ- ಜನಪದದ ಮೇಲೆ ಮನುಷ್ಯರು ನಡೆಸಿದ ಅತ್ಯಾಚಾರವನ್ನೂ ಸಾರಿ ಹೇಳುತ್ತಿರುತ್ತವೆ. ಅಂಥ ಒಂದು ಕಾದಂಬರಿ ಗಜಾನನ ಶರ್ಮ ಅವರ ‘ಪುನರ್ವಸು’.

ಹಲವು ತಲೆಮಾರುಗಳ ಕತೆಯನ್ನು ಹೇಳುವ ಅನೇಕ ಕೃತಿಗಳು ನಮ್ಮಲ್ಲಿ ಬಂದಿವೆ- ಮರಳಿ ಮಣ್ಣಿಗೆ, ಮೂರು ತಲೆಮಾರು, ಸ್ವಪ್ನ ಸಾರಸ್ವತ ಇತ್ಯಾದಿ. ಹಾಗೇ ಒಂದು ಪ್ರದೇಶದ ಜನಜೀವನದ ಏರಿಳಿತ, ಸಾಂಸ್ಕೃತಿಕ ಪಲ್ಲಟಗಳ ಕತೆಯನ್ನು ಹೇಳುವ ಕೃತಿಗಳು ಕೂಡ- ಮಲೆಗಳಲ್ಲಿ ಮದುಮಗಳು, ಗ್ರಾಮಾಯಣ ಹೀಗೆ. ಈ ಕೃತಿಗಳು ತಮ್ಮ ವ್ಯಾಪ್ತಿ ವಿಸ್ತಾರ ಜೀವನಚಿತ್ರಣಗಳಿಂದಾಗಿಯೇ ಕ್ಲಾಸಿಕ್‌ಗಳು ಎನಿಸಿಕೊಳ್ಳುತ್ತವೆ. ಗಜಾನನ ಶರ್ಮ ಅವರ ಕಾದಂಬರಿ ‘ಪುನರ್ವಸು’ ಇಂಥ ಒಂದು ಕೃತಿ. ಕಾಲಘಟ್ಟವೊಂದರಲ್ಲಿ ಒಂದು ಸಮುದಾಯ, ಅದರ ಪರಂಪರೆ, ಜೀವನಶೈಲಿ, ಆ ಸಮುದಾಯ ಎದುರಿಸಿದ ಸವಾಲುಗಳು, ಕಂಡ ವಿಪ್ಲವಗಳು, ಅದನ್ನು ಎದುರಿಸಿ ಗೆದ್ದು ಬರಲು ಕಾರಣಗಳು, ಅಥವಾ ಸೋತ ಕಥೆ, ಆ ಸೋಲಿನ ದೀರ್ಘಕಾಲದ ಪರಿಣಾಮಗಳನ್ನು ಆಕರ್ಷಕವಾಗಿ ಜನರಿಂದ ಓದಿಸಿಕೊಂಡು ಹೋಗುವ ಹಾಗೆ, ಸರಳವಾದ ಭಾಷೆಯಲ್ಲಿ ಬರೆದು ಮನಸ್ಸಿಗೆ ನಾಟುವಂತೆ ಮಾಡುವ ಕಲೆ ಬಹಳ ಕಷ್ಟದ್ದು. ಅಂಥದೊಂದು ಕಷ್ಟವನ್ನು ಎದುರಿಸಿ ಹುಟ್ಟಿದ ಕೃತಿ ಪುನರ್ವಸು.
ಮೇಲ್ನೋಟಕ್ಕೆ ಇದೊಂದು ಮುಳುಗಡೆಯ ಕೃತಿ. ಮುಳುಗಡೆಯಾದ ಪ್ರಾಂತ್ಯದಲ್ಲೇ ಹುಟ್ಟಿ ಬೆಳೆದು, ಮುಳುಗಡೆಯ ದುಷ್ಪರಿಣಾಮವನ್ನು ಬದುಕಿನುದ್ದಕ್ಕೂ ಎದುರಿಸಿ, ವಿದ್ಯುತ್‌ ಇಲಾಖೆಯಲ್ಲಿಯೇ ಮೂರೂವರೆ ದಶಕಗಳ ಕಾಲ ಇಂಜಿನಿಯರ್‌ ಆಗಿ ಸೇವೆ ಸಲ್ಲಿಸಿದವರು ಗಜಾನನ ಶರ್ಮ. ಈ ಕಾದಂಬರಿಯ ವಿಶಾಲವಾದ ಹರಹು, ಪ್ರತಿ ಪಾತ್ರದ ಒಳಹೊರಗುಗಳನ್ನು ಅವರು ಬಿಚ್ಚಿಟ್ಟಿರುವ ಪರಿ, ಮುಳುಗಡೆಯಾದ ಪ್ರಾಂತ್ಯಗಳ ಭೌಗೋಳಿಕ ವಿವರಣೆಗಳೆಲ್ಲವೂ ಅವರು ಅದೇ ನೆಲದಲ್ಲಿ ಹುಟ್ಟಿ ಬೆಳೆದು ಆ ನೆಲದೊಡನೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವುದರಿಂದ ಮಾತ್ರ ಸಾಧ್ಯವಾಗಿದೆ. ಅಷ್ಟೇ ಅಲ್ಲ ಒಂದು ಅಣೆಕಟ್ಟು ಕಟ್ಟಬೇಕೆಂದರೆ ಅದು ಯಾವ ಬೆಲೆಯನ್ನು ಕೇಳುತ್ತದೆ ಎಂದು ಸಚಿತ್ರವಾಗಿ ಬರೆಯಲು, ಅದರ ತಾಂತ್ರಿಕತೆಯನ್ನು, ಅದರ ಹಿಂದಿರುವ ಶ್ರಮವನ್ನು, ಅದು ಇಡೀ ದೇಶವನ್ನು ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲದು ಎಂದು ಬರೆಯಲು ಆ ಪ್ರಾಜೆಕ್ಟಿನ ಜೊತೆಗೆ, ಏಕಾಗ್ರಚಿತ್ತದಿಂದ ಒಳಗೊಂಡ ಒಬ್ಬ ಇಂಜಿನಿಯರ್‌ನಿಂದ ಮಾತ್ರ ಸಾಧ್ಯ. ಗಜಾನನ ಶರ್ಮ ಅವರು ಇವೆರಡೂ ಆಗಿದ್ದಾರೆ. ಹಾಗಾಗಿಯೇ ಇಂಥದೊಂದು ಕಾಲವನ್ನೇ ಹಿಡಿದು ನಿಲ್ಲಿಸುವ ಕೃತಿಯ ರಚನೆ ಅವರಿಂದ ಸಾಧ್ಯವಾಗಿದೆ.
ಕಳೆದ ಶತಮಾನದ ಆದಿಯಲ್ಲಿ ಎಂದರೆ ಸುಮಾರು 1930ರ ಆಸುಪಾಸಿನಲ್ಲಿ ಜೋಗದ ಬಳಿಯ ಹಿರೇಭಾಸ್ಕರದಲ್ಲಿ, ಸರ್‌. ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಶರಾವತಿ ನದಿಯ ಅಣೆಕಟ್ಟೆಯ ಪ್ರಾಜೆಕ್ಟ್ ಆರಂಭವಾಗುತ್ತದೆ. ಸುತ್ತಮುತ್ತಲಿನ ಜನಗಳ ಸಂಪೂರ್ಣ ಸಹಕಾರದಲ್ಲಿ ಅದು ಸಂಪೂರ್ಣಗೊಂಡ ನಾಲ್ಕೇ ವರ್ಷಗಳಲ್ಲಿ ಅದಕ್ಕಿಂತ ಆರೇಳು ಪಟ್ಟು ದೊಡ್ಡದಾದ ಲಿಂಗನಮಕ್ಕಿ ಅಣೆಕಟ್ಟು ಪ್ರಾರಂಭವಾಗುತ್ತದೆ. ಆ ಸಂದರ್ಭದಲ್ಲಿ ಹಂತ ಹಂತವಾಗಿ ಮುಳುಗಡೆಗೊಂಡ ಮಲೆನಾಡಿನ ಭಾರಂಗಿ ಎಂಬ ಪ್ರಾಂತ್ಯದ ಪರಂಪರೆ, ಸಾಮಾಜಿಕ ಬದುಕು, ಅವರ ನಂಬಿಕೆ, ಶ್ರದ್ಧೆಗಳು, ಎಲ್ಲವನ್ನೂ ‘ಪುನರ್ವಸು’ ವಿವರಿಸುತ್ತಾ ಸಾಗುತ್ತದೆ. ಹಾಗೆಯೇ ಸಮಾನಾಂತರವಾಗಿ ಈ ಅಣೆಕಟ್ಟುಗಳು, ಅಲ್ಲಿ ಉತ್ಪತ್ತಿಯಾಗುವ ವಿದ್ಯುತ್‌ ಸ್ವಾತಂತ್ರ್ಯ ಬಂದ ಹೊಸದರಲ್ಲಿ ದೇಶಕ್ಕೆ ತನ್ನ ಕಾಲ ಮೇಲೆ ತಾನು ನಿಲ್ಲುವುದಕ್ಕೆ ಹೇಗೆ ಸಹಾಯ ಮಾಡಿತು ಎಂದು ಕೂಡಾ ವಿವರಿಸುತ್ತದೆ. ಅದೆಷ್ಟು ಜನ ಇಂಜಿನಿಯರ್‌ಗಳು ತಮ್ಮಿಡೀ ಜೀವನ, ಯೌವನಗಳನ್ನು ತಮ್ಮ ಕುಟುಂಬಗಳಿಂದ ದೂರವಿದ್ದು ಈ ಯೋಜನೆಗಾಗಿ ಸಮರ್ಪಿಸಿಕೊಂಡಿದ್ದಾರೆ ಎಂದೂ ತೋರಿಸುತ್ತದೆ. ಆದಾಗ್ಯೂ ಕೊನೆಗೆ ಓದುಗನ ಜೀವ ಮಿಡಿಯುವುದು ಯಾವ ತಪ್ಪೂ ಮಾಡದ, ಪ್ರಕೃತಿಯಲ್ಲಿ ಒಂದಾಗಿ ತಲೆತಲಾಂತರಗಳಿಂದ ಆ ಪ್ರಾಂತ್ಯಗಳಲ್ಲಿ ಶಾಂತವಾಗಿ ಬಾಳಿ ಬದುಕಿದ ಆ ಜನರ ಬಗೆಗೆ. ಅವರ ಬದುಕಿನ ಶೈಲಿಯನ್ನೇ ಕದಡಿ, ಅವರ ನಂಬಿಕೆಗಳು, ಶ್ರದ್ಧೆಗಳು, ಆಚಾರ ವಿಚಾರಗಳು ಏನೂ ಅಲ್ಲವೆಂಬ ನಿರ್ಲಕ್ಷ್ಯ ತೋರಿ, ಅವೆಲ್ಲವೂ ದೇಶದ ಒಟ್ಟು ಅಭಿವೃದ್ಧಿಗೆ ಯಾರೂ ಮಾಡಲೇಬೇಕಾದ ತ್ಯಾಗವೆಂದು ನಿರಾಸಕ್ತಿಯಿಂದ ಜಗತ್ತು ನೋಡಿದ ಬಗೆಗೆ. ಆ ಪ್ರಾಂತ್ಯದ ಜನರ ಕಣ್ಣೀರಿಗೆ.
ಕಾದಂಬರಿಯ ಮುಖ್ಯ ಪ್ರಾಣ ನೆಲೆಸಿರುವುದು ದತ್ತಪ್ಪ ಹೆಗಡೆ ಎಂಬ ಮೇರು ವ್ಯಕ್ತಿತ್ವದ ಪಾತ್ರದಲ್ಲಿ. ಆತ ಇಡೀ ಶರಾವತಿ ಎಡದಂಡೆ ಪ್ರಾಂತ್ಯದ ಪರಂಪರೆಯ ಪ್ರತೀಕವಾಗಿ ಇಡೀ ಕಾದಂಬರಿಯಲ್ಲಿ ಕಾಣಿಸುತ್ತಾರೆ. ಆತನ ಕುಟುಂಬ- ಮನೆ ಆ ಸಂಪೂರ್ಣ ಪ್ರಾಂತ್ಯವನ್ನು ಪ್ರತಿನಿಧಿಸುತ್ತದೆ. ಇಡೀ ಕಥೆಯಲ್ಲಿ ಹೆಚ್ಚು ಮೇಲೆ ಬರದ ಆದರೆ ತನ್ನಿರುವಿಕೆಯನ್ನು ಮಧ್ಯ ಮಧ್ಯ ಪ್ರಕಟಿಸುವ ಎಳೆಯ ಹುಡುಗಿ, ಕಿವುಡಿ, ಮೂಗಿ ಶರಾವತಿ ನದಿಯಂತೆಯೇ ಮೌನವಾಗಿ ಎಲ್ಲಾ ಬದಲಾವಣೆಗಳಿಗೂ ಒಡ್ಡಿಕೊಳ್ಳುತ್ತಾ ಸಾಗುತ್ತಾಳೆ. ಬಾಯಿ ಬಾರದ ಅವಳ ಮೇಲೆ ಅತ್ಯಾಚಾರವಾಗುತ್ತದೆ. ಬೇಡದ ಬಸಿರು ಮೂಡುತ್ತದೆ. ಕೊನೆಗೆ ಗರ್ಭಪಾತವೂ. ತನ್ನ ಮಾತನ್ನು ಆಡಲಾರದ ನದಿಗಳ ಮೇಲೆ, ಗುಡ್ಡ ಬೆಟ್ಟಗಳ ಮೇಲೆ ಮನುಷ್ಯ ನಡೆಸುವ ಅತ್ಯಾಚಾರಗಳ ಪ್ರತೀಕವಾಗಿ ನಿಲ್ಲುವ ಶರಾವತಿ, ತಾನು ತನ್ನದೇ ಸಮಾಜಕ್ಕೆ ಅಪ್ರಸ್ತುತನಾದೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ದೋಣಿ ಗಣಪ, ತಾನು ಉತ್ತು ಬಿತ್ತು ಬೆಳೆದ ಭೂಮಿಗೆ ಕಾಗದ ಪತ್ರಗಳಿಲ್ಲದ ಕಾರಣ ಬದಲಿ ಜಮೀನೂ ಸಿಗದೇ ಮನೆ ಮುಂದೆ ಕರಿಬೇವು ಬೆಳೆದು ಬದುಕುವ ಮಾದೇಭಟ್ಟ, ಪ್ರತೀ ಹಂತದಲ್ಲೂ ಈ ‘ಅಭಿವೃದ್ಧಿ’ಯನ್ನು ಧಿಕ್ಕರಿಸುತ್ತಾ ಹುಚ್ಚನ ಪಟ್ಟ ಕಟ್ಟಿಸಿಕೊಳ್ಳುವ ಮುರಾರಿ ಭಟ್ಟ… ಹೀಗೆ ಒಂದೊಂದು ಪಾತ್ರವೂ ಓದುಗರ ಮನಸ್ಸಿನ ಮೇಲೆ ಅಳಿಸಲಾರದ ಅಚ್ಚಾಗಿ ಕೂರುತ್ತಾ ಸಾಗುತ್ತವೆ.
ತಮ್ಮ ನೆಲ, ನೆಲೆ, ದೇವರು, ಕೋಟೆ, ಮರಗಿಡಗಳು ಎಲ್ಲದರೊಡನೆ ಮಾನವೀಯ ಬಂಧಗಳಿಂದ ಬೆಸೆದುಕೊಂಡಿರುವ ತಲೆಮಾರಿಗೆ ಅವುಗಳಿಂದ ಅಗಲುವ ನೋವಿನ ಅನುಭವಕ್ಕೆ ಮೊದಲೇ ತಮ್ಮದೇ ನೆಲದಲ್ಲಿ ತಾವು ಪರಕೀಯರಾಗುತ್ತಿರುವ ವಾಸ್ತವ ಅನುಭವಕ್ಕೆ ಬರುತ್ತದೆ. ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ, ವರ್ಷಾನುಗಟ್ಟಲೆ ತಾವು ಮಾಡಿಕೊಂಡು ಬಂದಿದ್ದ ಕೆಲಸಗಳಿಗೆ, ಕರ್ತವ್ಯಗಳಿಗೆ ಸರಕಾರದಿಂದ ಅನುಮತಿ ಪತ್ರ ಪಡೆಯಬೇಕಾಗಿ ಬರುವ ಮುಜುಗರ. ಇವೆಲ್ಲವನ್ನೂ ಮೀರಿ ತಮ್ಮದೇ ಹೊಸ ಪೀಳಿಗೆ ತಮ್ಮ ತಾಯಿ ಬೇರಿನಿಂದ ಅಗಲುವ ನೋವಿಗೆ ಬದಲು ಸಿಕ್ಕುವ ಮೂರು ಕಾಸಿನ ಪರಿಹಾರ ಧನ, ಬದಲಿ ಜಮೀನುಗಳ ಮೂಲಕ ನಿರ್ಭಾವುಕವಾಗಿ ಹೊಸ ಬದುಕು ಕಟ್ಟಿಕೊಳ್ಳಲು ಹೊರಡುವ ರೀತಿ, ಇಡೀ ಪ್ರಾಂತ್ಯವನ್ನು ಆಘಾತದಿಂದ ಮೊದಲು ಮುಳುಗಿಸುತ್ತದೆ; ನಂತರ ನೀರಿನಿಂದ.
ದೇಶಕ್ಕೆ ಬಲು ಮಹತ್ವದ್ದಾದ ಅಣೆಕಟ್ಟು ಅದೇ ದೇಶದ ಒಂದಿಡೀ ಪ್ರಾಂತ್ಯವನ್ನು ಅದರ ಬೇರುಗಳ ಸಮೇತ ಅನಾಮತ್ತು ಮುಳುಗಿಸಿ ಕೊನೆಗೆ ಕನಿಷ್ಠ ಪಾಪಪ್ರಜ್ಞೆಯೂ ಇಲ್ಲದೇ ಬದಲಿಗೆ ಹೆಮ್ಮೆ ಪಡುವ ವ್ಯವಸ್ಥೆಯ ಭಾಗವಾದ ಇಂಜಿನಿಯರ್‌ ಕೃಷ್ಣರಾವ್‌ ಮತ್ತವರ ಮಡದಿ ವಸುಧಾ ಮಕ್ಕಳಿಲ್ಲದೇ ಕೊರಗುವುದು, ಇದೇ ಮುಳುಗಡೆಯಾಗುವ ಪ್ರಾಂತ್ಯ ತಾಯಿಯಂತೆ ಆಕೆಯನ್ನು ಪೊರೆದು ಆಕೆಗೆ ಮಗುವಾಗುವುದು, ‘ರಸಗಂಧಗಳಿಲ್ಲದೇ ಸೊರಗಿದ್ದ ವಸುಂಧರೆಯನ್ನು ಮತ್ತೆ ಚಿಗುರಿಸಿದ ಮಗುವಿಗೆ’ ದತ್ತಪ್ಪ ಹೆಗಡೆಯವರು ‘ಪುನರ್ವಸು’ ಎಂದು ನಾಮಕರಣ ಮಾಡುವುದು ಮನಸ್ಸನ್ನು ತಟ್ಟುತ್ತದೆ.
ದೇಶದಲ್ಲೇ ಉಳಿಯುವ ವಸುಧಾ ಮತ್ತು ಪುನರ್ವಸು, ಏನಾದರೆಂದು ತಿಳಿಯದೇ ಕೇವಲ ಮರೆಯಾಗುವ ದತ್ತಪ್ಪ ಹೆಗಡೆ, ಕಾಯುವವನ ಕಣ್ಣು ತಪ್ಪಿಸಿ ಮರಳಿ ನೀರಿಗೆ ಜಿಗಿದು ತನ್ನ ಮನೆಯತ್ತ ಈಜತೊಡಗುವ ಮಂಗಳಗೌರಿ ಹಸು ಇವರೆಲ್ಲರೂ ಒಂದಿಲ್ಲೊಂದು ಕಡೆ ಮಲೆನಾಡಿನ ಮುಳುಗಡೆಯಾದ ಪ್ರಾಂತ್ಯದ ಪರಂಪರೆ, ಮಾನವ ಸಂಬಂಧಗಳು ಜೀವಂತವಾಗಿರಬಹುದಾದ ಆಶಾಭಾವನೆಯನ್ನು ಬಿತ್ತುತ್ತಾ ಕಾದಂಬರಿ ಮುಗಿಯುತ್ತದೆ.
ಶಿವಮೊಗ್ಗದಿಂದ ಜೋಗಕ್ಕೆ ಹೋಗುವ ದಾರಿಯಲ್ಲಿ ಸಿಗುವ ಲಿಂಗನಮಕ್ಕಿ ಜಲಾಶಯದ ನೀರನ್ನು ‘ಆಹಾ ಎಷ್ಟು ಚೆನ್ನಾಗಿದೆ’ ಎಂಬ ಬರೀ ಸೌಂದರ್ಯ ಪ್ರಜ್ಞೆಯೊಡನೆ ಎಂದೆಂದೂ ನೋಡಲಾಗದಂತೆ ನಮ್ಮನ್ನು ಕಾಡುತ್ತದೆ ಈ ಕಾದಂಬರಿ. ಪ್ರತೀ ಬಾರಿ ಸ್ವಿಚ್ಚು ಒತ್ತಿ ಟ್ಯೂಬ್‌ಲೈಟ್‌ ಝಗ್ಗೆಂದು ಹತ್ತಿದ ತಕ್ಷ ಣ ಅದರ ಹಿಂದೆ ಭೋರೆಂದು ಅಳುತ್ತಾ ಲಾರಿ ಹತ್ತಿದ ಮಾಣಿ ಚಿಕ್ಕಯ್ಯನಂಥ ಎಷ್ಟೋ ಜೀವಗಳು, ಹೊರಡುವ ಹಿಂದಿನ ದಿನ ತನ್ನ ನೆಲದಲ್ಲೇ ಪ್ರಾಣ ಬಿಟ್ಟ ತುಂಗಕ್ಕಯ್ಯನಂಥ ಹಲವಾರು ಜನಗಳು, ಮತಿಭ್ರಷ್ಟಗೊಂಡ ಸುಬ್ರಾಯ ಭಟ್ಟನಂಥ ನೂರಾರು ಜನಗಳು ಕಣ್ಣೆದುರು ಸುಳಿಯುವಂತೆ ಮಾಡುತ್ತದೆ ಈ ಕಾದಂಬರಿ.
ಇಂದು ನಾವು ನಗರಿಗರು ಅನುಭವಿಸುತ್ತಿರುವ ಪ್ರತೀ ಸೌಲಭ್ಯದ ಹಿಂದೆಯೂ ತಮ್ಮ ನೆಲ, ಜಲ, ಪ್ರಕೃತಿ, ಅಸ್ತಿತ್ವ, ಬದುಕು, ಪರಂಪರೆ, ಸಂಸ್ಕೃತಿಗಳನ್ನು ಒಟ್ಟಿನಲ್ಲಿ ತಮ್ಮದಾದ ಎಲ್ಲದರಿಂದಲೂ ಕಡ್ಡಾಯವಾಗಿ ಪ್ರತ್ಯೇಕಿತರಾದ ಮುಗ್ಧರ ಕಣ್ಣೀರಿದೆ ಎಂಬುದರ ಸ್ಪಷ್ಟವಾದ ಅರಿವು ನಮಗಿರಬೇಕು. ನಮ್ಮ ಮುಂದಿನ ಎಲ್ಲಾ ಪೀಳಿಗೆಗಳಿಗೂ ಇರಬೇಕು. ಆ ಅರಿವು ನಮಗೆ ಸಿಗುವ, ಸಿಕ್ಕಿರುವ ಸೌಲಭ್ಯಗಳು ‘ಟೇಕನ್‌ ಫಾರ್‌ ಗ್ರಾಂಟೆಡ್‌’ ಅಲ್ಲ ಎಂದು ಎಚ್ಚರಿಸುತ್ತಿರಬೇಕು. ಆಗ ಮಾತ್ರ ಅವೆಲ್ಲ ಸೌಲಭ್ಯಗಳಿಗೂ ಮತ್ತು ಅವು ಇಂದು ನಮಗೆ ದಕ್ಕಲು ಅಂದು ಬದುಕನ್ನು ಬಿಟ್ಟುಕೊಟ್ಟ ಸಮಸ್ತರಿಗೂ ನ್ಯಾಯ ಸಲ್ಲುತ್ತದೆ. ಆ ನಿಟ್ಟಿನಲ್ಲಿ ‘ಪುನರ್ವಸು’ ಮುಂದಿನ ಪೀಳಿಗೆಗಳಿಗೆ ಸಿಕ್ಕ ಅದ್ಭುತವಾದ ಉಡುಗೊರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top