ಕಾಶ್ಮೀರದಲ್ಲಿ ಭಾರತ ವಿರೋಧಿ ಭಾವನೆಗಳನ್ನಷ್ಟೇ ತೋರಿಸುವ ಫೋಟೊಗಳನ್ನು ತೆಗೆದ ಮೂವರಿಗೆ ಈ ಬಾರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಕೊಡಮಾಡಲಾಗಿದೆ. ಅಲ್ಲಿ ಉಗ್ರರ ದಾಳಿಗೆ ಬಲಿಯಾದ ಯೋಧರ ಕುಟುಂಬಗಳ ಕಣ್ಣೀರು ಅವರ ಕ್ಯಾಮೆರಾದ ಕಣ್ಣಿಗೆ ಬೀಳಲೇ ಇಲ್ಲ.
– ರಮೇಶ್ ಕುಮಾರ್ ನಾಯಕ್.
‘ಪ್ರತಿಷ್ಠಿತ’ ಎಂಬ ಲೇಬಲ್ ಅಂಟಿಸಿಕೊಂಡಿರುವ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೇಶ ವಿರೋಧಿ, ದೇಶವಾಸಿಗಳ ಭಾವನೆ ವಿರೋಧಿ ಸರಕುಗಳ ಸರದಾರರನ್ನು ಹುಡುಕಿಕೊಂಡು ಬರುವುದು ಹೊಸ ಸಂಗತಿಯೇನಲ್ಲ. ಭಾರತದ ಉನ್ನತ ಸಂಸ್ಕೃತಿ, ಆದರ್ಶ, ಆಚಾರ-ವಿಚಾರ, ಉದಾತ್ತ ಮನೋಭಾವ, ಮಾನವೀಯ ಮೌಲ್ಯಗಳನ್ನಾಧರಿಸಿದ ಕೃತಿಗಳಾಗಲಿ, ಚಿತ್ರಗಳಾಗಲಿ ಅಥವಾ ಚಲನಚಿತ್ರಗಳಾಗಲಿ ಈ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಆಯ್ಕೆಗಾರರಿಗೆ ಅಪಥ್ಯ. ಅದೇ, ಭಾರತದಲ್ಲಿನ ಹಾವಾಡಿಸುವವರ ಕತೆ, ಮೌಢ್ಯಗಳ ಅನಿಷ್ಟತೆ, ಕೋಮು ಸಂಘರ್ಷ, ದೇಶ ವಿರೋಧಿಗಳ ಅಟ್ಟಹಾಸ, ಸದಾ ಭಾರತದಲ್ಲಿ ಅರಾಜಕತೆ-ಅಶಾಂತಿ ಸೃಷ್ಟಿಸಲು ಹಪಹಪಿಸುವ ಪಾಕಿಸ್ತಾನದ ಮೇಲಿನ ಮಮಕಾರ, ದೇಶದ ಪರಂಪರೆಯ ಅವಹೇಳನ…ಇಂತಹ ಸಂಗತಿಗಳ ‘ಕ್ರಿಯೇಟಿವ್ ಬಂಡವಾಳಗಾರ’ರೆಂದರೆ ಅಚ್ಚುಮೆಚ್ಚು. ಇಂತಹ ನೆಗೆಟಿವ್ ಸಂಗತಿಗಳನ್ನು ಬಿಂಬಿಸುವವರಿಗೇ ಅಗ್ರ ಪೂಜೆ!
ಅಮೆರಿಕ ಮೂಲದ ‘ಪುಲಿಟ್ಜರ್’ ಪ್ರಶಸ್ತಿಗೆ ಜಮ್ಮು ಮತ್ತು ಕಾಶ್ಮೀರದ ಮೂವರು ಛಾಯಾಗ್ರಾಹಕರು ಈ ಬಾರಿ ಪಾತ್ರರಾಗಿದ್ದಾರೆ. 1917ರಿಂದ ಈವರೆಗೆ ನೂರಾರು ಅದ್ಭುತ ಚಿತ್ರಗಳನ್ನು ಗುರುತಿಸಿರುವ, 15 ಸಾವಿರ ಡಾಲರ್ (ಸುಮಾರು 12 ಲಕ್ಷ ರೂ.) ಬಹುಮಾನದ ಈ ಅವಾರ್ಡ್‌ಗೆ ಈ ಬಾರಿ ಭಾರತೀಯ ಛಾಯಾಗ್ರಾಹಕರು ಪಾತ್ರರಾಗಿರುವುದು ಸಂತೋಷದ ವಿಷಯವೇನೋ ಹೌದು. ಆದರೆ ಈ ಬಾರಿಯ ಪುಲಿಟ್ಜರ್ ಮಂಡಳಿ ಆಯ್ಕೆ ಮಾಡಿರುವ ಫೋಟೊಗಳು ಮತ್ತು ಈ ಫೋಟೊಗಳಿಗೆ ಅವರು ನೀಡಿರುವ ವ್ಯಾಖ್ಯಾನ ಅಪ್ಪಟ ಭಾರತ ವಿರೋಧಿ.
ಕಾಶ್ಮೀರಿ ‘ಉಗ್ರ ಸಹಾನುಭೂತಿ’ ಪರವಾದವನೊಬ್ಬ ಭಾರತೀಯ ಸೇನೆಯ ವಾಹನದ ಮೇಲೆ ಕೋತಿಯಂತೆ ಕುಪ್ಪಳಿಸುತ್ತಿರುವ, ಮಹಿಳೆಯರು ಗುಂಪಾಗಿ ಭಾರತ ವಿರೋಧಿ ಸ್ಲೋಗನ್ ಕೂಗುತ್ತಿರುವ, ಯುವಕರು ಆಜಾದಿ ಘೋಷಣೆ ಹಾಕುತ್ತಿರುವ ಇತ್ಯಾದಿ ಚಿತ್ರಗಳನ್ನು ಪುಲಿಟ್ಜರ್ ಆಯ್ಕೆ ಮಾಡಿದೆ. ಅಷ್ಟೇ ಅಲ್ಲ, ಈ ಫೋಟೊಗಳಿಗೆ ಅವರು ಬರೆದ ಷರಾ ಹೀಗಿದೆ: ಭಾರತದಿಂದ ಸ್ವಾತಂತ್ರ್ಯ ಕಳೆದುಕೊಂಡಿರುವ, ಸಂವಹನ ಸಂಪರ್ಕ ಕಡಿದುಕೊಂಡಿರುವ ಕದಡಿದ ಕಾಶ್ಮೀರ ಕಣಿವೆಯ ಜನಜೀವನ ಬಿಂಬಿಸುವ ಚಿತ್ರಗಳಿವು!
ಅನುಮಾನವೇ ಬೇಕಿಲ್ಲ. ಯಾವ ಕೋನದಿಂದ ನೋಡಿದರೂ ಪುಲಿಟ್ಜರ್ ಮಂಡಳಿ ಕಾಶ್ಮೀರದ ಅಸಲಿ ಸಂಗತಿಗಳನ್ನು ದುರುದ್ದೇಶಪೂರ್ವಕವಾಗಿ ಮುಚ್ಚಿಟ್ಟು ಭಾರತ ವಿರೋಧಿ ನೀತಿ ಪ್ರದರ್ಶಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅವಮಾನಿಸಿದೆ.
ಪುಲಿಟ್ಜರ್ ಆಯ್ಕೆ ಮಾಡಿ ಬಿಡುಗಡೆ ಮಾಡಿರುವ ಆ ಎಂಟು-ಹತ್ತು ಚಿತ್ರಗಳೇ ಕಾಶ್ಮೀರದ ನೈಜ ಚಿತ್ರಣ ಎಂದು ವಿಶ್ವದ ಕಣ್ಣುಗಳು ನಂಬಬೇಕೆ? ಈ ಪ್ರಶಸ್ತಿ ಘೋಷಣೆಯ ಮರುದಿನವೇ ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಹುಸೇನ್ ಅವರು, ಜೋಹ್ರಾ ರಶೀದ್ ಎಂಬ ಬಾಲಕಿ ಪೊಲೀಸ್ ಅಧಿಕಾರಿಯಾಗಿದ್ದ ತನ್ನ ತಂದೆಯ ಅಂತ್ಯಕ್ರಿಯೆ ವೇಳೆ ಬಿಕ್ಕಳಿಸುತ್ತಿರುವ ಚಿತ್ರದ ಸಹಿತ ಮಾಡಿರುವ ಟ್ವೀಟ್ ಎಷ್ಟು ಹೃದಯಸ್ಪರ್ಶಿಯಾಗಿದೆ ನೋಡಿ. ಇಮ್ತಿಯಾಜ್ ಹೀಗೆ ಪ್ರಶ್ನಿಸಿದ್ದರು: ಈ ಕಂದಮ್ಮನ ಚಿತ್ರ ನಿಮ್ಮ ಮಾನವೀಯ ಪ್ರಜ್ಞೆಯನ್ನು ನಾಟಲಿಲ್ಲವೆ? ಈ ಚಿತ್ರಕ್ಕೆ ಯಾವ ಪ್ರಶಸ್ತಿ?
ಕಾಶ್ಮೀರದ ದಕ್ಷ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಹುಸೇನ್ ಈ ರೀತಿ ಪ್ರಶ್ನಿಸುವ ಮೂಲಕ ಶತಕೋಟಿ ಭಾರತೀಯರ ಪರವಾಗಿ ಪುಲಿಟ್ಜರ್‌ನ ಭಾರತ ವಿರೋಧಿ ಆಯ್ಕೆ ಮಂಡಳಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಅಂದು ಅಪ್ಪನ ಅಂತ್ಯಕ್ರಿಯೆಯಲ್ಲಿ ದುಃಖ ಉಮ್ಮಳಿಸಿ ರೋದಿಸಿದ್ದ ಆ ಬಾಲಕಿ ಜೋಹ್ರಾಗೆ ಆಗ ಎಂಟು ವರ್ಷ. ಆಕೆಯ ತಂದೆ ಅಬ್ದುಲ್ ರಶೀದ್‌ರನ್ನು ಉಗ್ರರು ಅನಂತನಾಗ್‌ನಲ್ಲಿ ಗುಂಡಿಟ್ಟು ಕೊಂದಿದ್ದರು. ಬಲಿಯಾಗುವ ಕೆಲವೇ ದಿನಗಳ ಮೊದಲು ಅಪ್ಪ ಫೋನ್ ಮಾಡಿ, ‘‘ಇನ್ನು ಕೆಲವೇ ದಿನ ಅಷ್ಟೆ. ರಜೆ ಹಾಕಿ ಬಂದು ಬಿಡುತ್ತೇನೆ. ಈದ್ ಹಬ್ಬಕ್ಕೆ ನಿನಗೆ ಹೊಸ ಬಟ್ಟೆ ತಂದು ಕೊಡುತ್ತೇನೆ,’’ ಎಂದಿದ್ದರಂತೆ. ಆದರೆ ಜೋಹ್ರಾ ಅಪ್ಪನನ್ನು ಕಂಡಿದ್ದು ಗುಂಡುಗಳಿಂದ ಜರ್ಝರಿತಗೊಂಡ ಶವದ ರೂಪದಲ್ಲಿ. ಜೋಹ್ರಾಳ ಅಂದಿನ ರೋದನ, ಸ್ಥಳದಲ್ಲಿದ್ದ ಹಿರಿಯ ಸೇನಾಧಿಕಾರಿಗಳ ಕಣ್ಣುಗಳನ್ನು ತೇವಗೊಳಿಸಿತ್ತು. ‘ಜೋಹ್ರಾ, ನಿನ್ನ ಕಂಬನಿ ನನ್ನ ಕಠಿಣ ಹೃದಯವನ್ನೂ ಅದುರಿಸಿಬಿಟ್ಟಿದೆ’ ಎಂದು ಅಂದಿನ ಡಿಐಜಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದನ್ನು ಓದಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ‘‘ಜೋಹ್ರಾ ನೀನು ಅಳುವುದನ್ನು ದಯವಿಟ್ಟು ನಿಲ್ಲಿಸು. ನಿನ್ನ ಕಂಬನಿಯ ಭಾರವನ್ನು ಭೂಮಾತೆಗೂ ಹೊರಲಾಗದು,’’ ಎಂದು ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲ‘‘ಮುದ್ದು ಜೋಹ್ರಾ, ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ನೀನು ನನ್ನ ಮೂರನೇ ಮಗಳು. ನಿನ್ನ ಕನಸನ್ನು ನನಸು ಮಾಡುವ ಹೊಣೆ ನನಗಿರಲಿ,’’ ಎಂದು ಮಾತು ಕೊಟ್ಟಿದ್ದರು ಗಂಭೀರ್. ಆ ಬಳಿಕ ಜೋಹ್ರಾ, ‘ಗಂಭೀರ್ ಸರ್ ನಾನು ಡಾಕ್ಟರ್ ಆಗ್ತೇನೆ’ ಎಂದಿದ್ದಳು. ಆ ಬಾಲಕಿಯ ಶೈಕ್ಷಣಿಕ ಜೀವನದ ಅಷ್ಟೂ ಖರ್ಚನ್ನು ಗೌತಮ್ ಗಂಭೀರ್ ಭರಿಸಲಿದ್ದಾರೆ.
ಕಾಶ್ಮೀರ ಕಣಿವೆಯ ಅಂಚಂಚಿನಲ್ಲಿ ದೇಶನಿಷ್ಠ ಪೊಲೀಸ್ ಅಥವಾ ಯೋಧರಾಗಿದ್ದ ತಂದೆಯನ್ನು ಕಳೆದುಕೊಂಡ ನೂರಾರು ಜೋಹ್ರಾಗಳಿದ್ದಾರೆ. ಇವರ ದುಃಖಭರಿತ ಜೀವನಚಿತ್ರ ಕಾಶ್ಮೀರದ ಜನಜೀವನದ ಪ್ರತಿಬಿಂಬ ಅಲ್ಲವೇನು?
ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕಾಶ್ಮೀರದಲ್ಲಿ ಪಾಕ್ ಪ್ರೇರಿತ ಉಗ್ರರನ್ನು ಸದೆಬಡಿಯುತ್ತಿರುವ ಭಾರತೀಯ ಯೋಧರನ್ನು ಪುಲಿಟ್ಜರ್ ಮಂಡಳಿ ವಿಲನ್‌ಗಳಂತೆ ಬಿಂಬಿಸಿದೆ. ಕಾಶ್ಮೀರಿಗಳ ಜತೆ ಆತ್ಮೀಯತೆಯಿಂದ ವರ್ತಿಸುತ್ತಿರುವ, ಅವರ ಜತೆ ಕೂತು ಊಟ ಮಾಡುತ್ತಿರುವ, ಕಾಶ್ಮೀರಿ ಮಕ್ಕಳೊಂದಿಗೆ ಫುಟ್ಬಾಲ್ ಆಡುತ್ತಿರುವ, ಪಾಕ್‌ನ ಷೆಲ್ ದಾಳಿಗೆ ಸಿಲುಕಿ ಗಾಯಗೊಂಡ ನಾಗರಿಕರನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ದೌಡಾಯಿಸುತ್ತಿರುವ, ರಕ್ತಸ್ರಾವಕ್ಕೊಳಗಾದ ಬಾಣಂತಿಯರಿಗೆ ರಕ್ತದಾನ ಮಾಡುತ್ತಿರುವ… ಯೋಧರ ಇಂತಹ ನೂರಾರು ಚಿತ್ರಗಳು ಕಾಶ್ಮೀರದ ಜನಜೀವನದ ಭಾಗ ಅಲ್ಲವೆ?
2014ರಲ್ಲಿ ಕಾಶ್ಮೀರ ಭೀಕರ ಪ್ರವಾಹಕ್ಕೊಳಗಾಯಿತು. ಸಾವಿರಾರು ಮಂದಿ ನಿರಾಶ್ರಿತರಾದರು. ಅವರಿಗೆಲ್ಲ ತಮ್ಮ ಶಿಬಿರಗಳಲ್ಲಿ ನೆಲೆ ಒದಗಿಸಿದ್ದು ಊಟ ಬಡಿಸಿದ್ದು ಭಾರತೀಯ ಸೇನೆಯೇ ಹೊರತು ಉಗ್ರಗಾಮಿ ಸಂಘಟನೆಗಳಲ್ಲ. ಅಂದು ಸೇನಾ ವಾಹನಗಳಲ್ಲಿ ಪ್ರವಾಹಪೀಡಿತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿತ್ತು. ಗಂಡಸರೇನೋ ಎತ್ತರದ ಸೇನಾ ವಾಹನಗಳಿಂದ ಕೆಳಗೆ ಧುಮುಕಿದರು. ಆದರೆ ಮಹಿಳೆಯರು ಇಳಿಯಲಾಗದೆ ಒದ್ದಾಡುತ್ತಿದ್ದರು. ಆಗ ಸೇನಾ ಯೋಧರು ವಾಹನದ ಹಿಂಭಾಗ ಬಾಗಿ ನಿಂತರು. ಕಾಶ್ಮೀರಿ ಮಹಿಳೆಯರು ಯೋಧರ ಬೆನ್ನಿನ ಮೇಲೆ ಕಾಲಿಟ್ಟು ಕೆಳಗಿಳಿದರು. ಈ ದೃಶ್ಯ ಕಾಶ್ಮೀರದಲ್ಲಿನ ಭಾರತೀಯ ಯೋಧರ ಮಾನವೀಯತೆಯನ್ನು ಬಿಂಬಿಸುವುದಿಲ್ಲವೆ?
ಈಗ ಪುಲಿಟ್ಜರ್ ಅವಾರ್ಡ್‌ಗೆ ಪಾತ್ರರಾಗಿರುವ ದರ್ ಯಾಸಿನ್, ಮುಕ್ತಾರ್ ಖಾನ್ ಮತ್ತು ಚನ್ನಿ ಆನಂದ್ ಅಮೆರಿಕ ಮೂಲದ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಯ ಪ್ರತಿನಿಧಿಗಳು. ಇಂತಹ ಹೃದಯ ತಟ್ಟುವ, ಕಾಶ್ಮೀರದ ಸಾವಿರಾರು ಚಿತ್ರಗಳು ಅಸೋಸಿಯೇಟೆಡ್ ಪ್ರೆಸ್‌ನ ಬತ್ತಳಿಕೆಯಲ್ಲಿವೆ. ಅವುಗಳಿಗೇಕಿಲ್ಲ ಪ್ರಶಸ್ತಿ?