ವಿಕ ಸುದ್ದಿಲೋಕ ಬೆಂಗಳೂರು
ಗೊಂದಲಕಾರಿ ಪ್ರಶ್ನೆಗಳು ಹಾಗೂ ಸುಮಾರು ಎರಡು ತಿಂಗಳ ಕಾಲ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಈ ಬಾರಿ ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷಾ ವಿಷಯದಲ್ಲಿ ಶೇ.5ರಷ್ಟು ಕಡಿಮೆ ಫಲಿತಾಂಶ ಬಂದಿದೆ ಎನ್ನಲಾಗಿದೆ.
ಅದರಲ್ಲೂ ಪ್ರಮುಖವಾಗಿ ಕಲಾ ವಿಭಾಗದ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣಗೊಂಡಿರುವುದು ಕಂಡು ಬಂದಿದೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಲಾ ವಿಭಾಗದ ಫಲಿತಾಂಶವು ಶೇ.9.26ರಷ್ಟು ಕುಸಿತಗೊಂಡಿದೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 1,98,875 ವಿದ್ಯಾರ್ಥಿಗಳ ಪೈಕಿ ಕೇವಲ 82,077 (ಶೇ.41.27) ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಕಳೆದ ಬಾರಿ ಶೇ.50.53ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದರು. ಅದೇ ರೀತಿ ಕಳೆದ ಬಾರಿ ಶೇ.79ರಷ್ಟಿದ್ದ ಇಂಗ್ಲಿಷ್ ಭಾಷಾ ಫಲಿತಾಂಶ ಶೇ.74ಕ್ಕೆ ಇಳಿಕೆಯಾಗಿದೆ.
ಈ ಬಾರಿ ಇಂಗ್ಲಿಷ್ ಭಾಷಾ ವಿಷಯದಲ್ಲಿ ನೇರ ಪ್ರಶ್ನೆಗಳಿಗೆ ಬದಲು, ವಿಶ್ಲೇಷಣಾತ್ಮಕ ಉತ್ತರಗಳನ್ನು ಬರೆಯುವಂತಹ ಪ್ರಶ್ನೆಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಹಾಗಾಗಿ, ಇಂಗ್ಲಿಷ್ ವಿಷಯದ ಫಲಿತಾಂಶ ಕುಸಿತಕ್ಕೆ ಇದು ಪ್ರಮುಖ ಕಾರಣ ಎನ್ನಲಾಗಿದೆ. ವಿಶ್ಲೇಷಣಾತ್ಮಕ ಉತ್ತರ ಬರೆಯುವಲ್ಲಿ ಕಲಾ ವಿಭಾಗ, ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಫಲರಾಗಿದ್ದಾರೆ.
ವಿಜ್ಞಾನ ಹಾಗೂ ಕಾಮರ್ಸ್ ವಿಷಯಗಳಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದಿರುವ ಕೆಲವು ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಶೇ.60ರಿಂದ 70 ಅಂಕಗಳನ್ನು ಪಡೆಯಲು ಮಾತ್ರ ಸಫಲರಾಗಿರುವುದು ಕಂಡು ಬಂದಿದೆ. ಸುಮಾರು 35ರಿಂದ 40 ಅಂಕಗಳಿಗೆ ಈ ರೀತಿಯ ಗೊಂದಲಕಾರಿ ಪ್ರಶ್ನೆಗಳನ್ನು ನೀಡಲಾಗಿತ್ತು ಎನ್ನಲಾಗಿದೆ.
ಜತೆಗೆ, ಪ್ರತಿ ವರ್ಷ ಕೇವಲ ಏಳೆಂಟು ಕೇಂದ್ರಗಳಲ್ಲಿ ನಡೆಯುತ್ತಿದ್ದ ಇಂಗ್ಲಿಷ್ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಈ ಬಾರಿ ವಿಕೇಂದ್ರೀಕರಣಗೊಳಿಸಿ, ರಾಜ್ಯಾದ್ಯಂತ 20 ಜಿಲ್ಲೆಗಳಲ್ಲಿ ಮೌಲ್ಯಮಾಪನ ಮಾಡಿಸಲಾಗಿತ್ತು. ಈ ವೇಳೆ ಮೌಲ್ಯಮಾಪನ ಕೇಂದ್ರಗಳ ಮುಖ್ಯಸ್ಥರು ಕಠಿಣ ನಿಯಮಗಳನ್ನು ಪಾಲಿಸಿದ ಕಾರಣ, ಇಂಗ್ಲಿಷ್‌ನಲ್ಲಿ ಹೆಚ್ಚು ಮಂದಿ ಫೇಲ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ, ಮಾರ್ಚ್ 21ರ ವರೆಗೆ ಒಟ್ಟು 38 ವಿಷಯಗಳ ಪರೀಕ್ಷೆ ನಡೆಸಿದ ಪಿಯು ಮಂಡಳಿ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಸುಮಾರು ಎರಡು ತಿಂಗಳ ಬಳಿಕ ಅಂದರೆ, ಜೂ.18ರಂದು ಇಂಗ್ಲಿಷ್ ಪರೀಕ್ಷೆ ನಡೆಸಿತು. ಆದರೆ, ಈ ದೀರ್ಘ ಅವಧಿಯಲ್ಲಿ ಪರೀಕ್ಷೆಯ ಅನಿಶ್ಚಿತತೆಯಿಂದಾಗಿ ವಿದ್ಯಾರ್ಥಿಗಳು ಪುಸ್ತಕಗಳಿಂದ ಸಂಪೂರ್ಣ ದೂರವಾಗಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಫೇಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.
– ಯಾಕೆ ಹೀಗಾಯ್ತು? –
– ವಿಶ್ಲೇಷಣಾತ್ಮಕ ಉತ್ತರಗಳನ್ನು ಬರೆಯುವಂತಹ ಪ್ರಶ್ನೆಗಳಿದ್ದವು
– ಸುಮಾರು 35ರಿಂದ 40 ಅಂಕಗಳಿಗೆ ಗೊಂದಲಕಾರಿ ಪ್ರಶ್ನೆಗಳು
– ಕೊರೊನಾ ಹಿನ್ನೆಲೆಯಲ್ಲಿಪರೀಕ್ಷೆ ನಡೆಯುವ ಬಗ್ಗೆ ಅನಿಶ್ಚಿತತೆ
– ಕಲಾ ವಿಭಾಗ, ಕನ್ನಡ ಮಾಧ್ಯಮ, ಗ್ರಾಮೀಣ ವಿದ್ಯಾರ್ಥಿಗಳು ವಿಫಲ
– ಇಂಗ್ಲಿಷ್ ವಿಷಯದಲ್ಲಿಶೇ.5ರಷ್ಟು ಕಡಿಮೆ ಫಲಿತಾಂಶ