ಬಡತನ ಮೀರಿ ಮಿಂಚಿದವರು

ಪ್ರತಿಭೆಗೆ ಬಡತನ ಎಂದೂ ಅಡ್ಡಿಯಲ್ಲ. ಬಹಳಷ್ಟು ವಿಷಯ ಮತ್ತು ಸಂದರ್ಭದಲ್ಲಿ ಇದು ಸಾಬೀತಾಗಿದೆ. ದ್ವಿತೀಯ ಪಿಯು ಫಲಿತಾಂಶದಲ್ಲೂ ಅನೇಕ ಪ್ರತಿಭಾವಂತರು ಬಡತನ ಸೇರಿದಂತೆ ಇರುವ ಇತರ ಅಡ್ಡಿ, ಆತಂಕಗಳನ್ನು ಮೀರಿ ಅದ್ಭುತ ಸಾಧನೆ ತೋರಿದ್ದಾರೆ. ಅಂಥ ವಿದ್ಯಾರ್ಥಿಗಳ ಪರಿಚಯ ಇಲ್ಲಿದೆ.

ಮುಂದುವರಿದ ಯಶೋಗಾಥೆ
ಮೈಸೂರು: ಇಲ್ಲಿನ ಲಕ್ಷ್ಮಿಪುರಂನ ಗೋಪಾಲಸ್ವಾಮಿ ಶಿಶು ವಿಹಾರ ಪಿಯು ಕಾಲೇಜಿನ ವಿದ್ಯಾರ್ಥಿ ಎಂ.ಎಸ್.ಯಶಸ್ ವಿಜ್ಞಾನದ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾನೆ. ವಿದ್ಯಾರಣ್ಯಪುರಂನ ನಿವಾಸಿಯಾದ ಶಿವಮಲ್ಲಪ್ಪ ಹಾಗೂ ಚಂದ್ರಕಲಾ ದಂಪತಿ ಮಗನಾದ ಯಶಸ್ ಕಠಿಣ ಪರಿಶ್ರಮದಿಂದ 600 ಅಂಕಕ್ಕೆ 594 ಅಂಕ ಪಡೆದಿದ್ದಾನೆ. ಆಶ್ಚರ್ಯವೆಂದರೆ ಯಶಸ್ ಎಸ್ಸೆಸ್ಸೆಲ್ಸಿಯಲ್ಲಿ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದ. ‘‘ಪ್ರತಿದಿನ 4 ಗಂಟೆ ಓದುತ್ತಿದ್ದೆ. ನಾನು ಓದಿನ ಜತೆಗೆ ಸಂಗೀತ ಕೇಳುವುದು, ಬ್ಯಾಡ್ಮಿಂಟನ್ ಆಟ ಆಡುತ್ತಿದ್ದೆ. ಮುಂದೆ ಎಂಬಿಬಿಎಸ್ ಮಾಡುವ ಕನಸು ಇಟ್ಟುಕೊಂಡಿದ್ದೇನೆ,’’ ಎನ್ನುತ್ತಾನೆ ಯಶಸ್.

ಕಣ್ಣೀರು ಸ್ವಾತಿ ಮುತ್ತಾಯ್ತು
ತೇರದಾಳ(ಬಾಗಲಕೋಟೆ): ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ತಂದೆ ಅಪಘಾತದಲ್ಲಿ ಮಡಿದಾಗ ಎಲ್ಲರೂ ತಲೆಯ ಮೇಲೆ ಕೈ ಹೊತ್ತು ಕುಳಿತರು. ಇಂಥ ವಿಷಮ ಪರಿಸ್ಥಿತಿಯಲ್ಲಿ ಅಚಲವಾಗಿ ನಿಂತ ಸ್ವಾತಿ ನೀಲಕಂಠ ಬಿಜ್ಜರಗಿ ಓದಿನ ಛಲವನ್ನು ಬಿಟ್ಟುಕೊಡಲಿಲ್ಲ. ಪಿಯು ವಿಜ್ಞಾನ ವಿಭಾಗದಲ್ಲಿ ಶೇ.94 ಅಂಕ ಗಳಿಸಿದಳು, ಇದನ್ನು ನನ್ನ ತಂದೆಗೆ ಸಮರ್ಪಣೆ ಎಂದು ಕಣ್ಣೀರು ಮಿಡಿದು ಹೇಳಿದಳು. ‘‘ನನ್ನ ತಂದೆಯ ಅಕಾಲಿಕ ಅಗಲಿಕೆ ನನಗೆ ಬಹಳಷ್ಟು ನೋವು ನೀಡಿದೆ. ಅವರು ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ,’’ ಎಂದು ಆಕೆ ಹೇಳಿದಳು.

ತಾಂಡಾ ಹುಡುಗ ಬೊಂಬಾಟ್
ವಿಜಯಪುರ: ಕಡುಬಡತನವನ್ನೂ ಲೆಕ್ಕಿಸಿದೆ ತಾಂಡಾದ ಹುಡುಗ ವಿಜ್ಞಾನ ವಿಭಾಗದಲ್ಲಿ ಶೇ.93.3 ಅಂಕ ಗಳಿಸಿದ್ದಾನೆ. ವಿಜಯಪುರ ತಾಲೂಕಿನ ಬರಟಗಿ ತಾಂಡಾದ ಅಭಿಷೇಕ್ ರಾಠೋಡ್ ಪ್ರತಿಭೆಗೆ ಬಡತನ ಲೆಕ್ಕಕ್ಕಿಲ್ಲ ಎಂಬುದನ್ನು ತೋರಿಸಿದ್ದು, ಒಟ್ಟು 560 ಪಡೆದಿದ್ದಾನೆ. ಈತನ ತಂದೆ ಭಗವಂತ ರಾಠೋಡ್‌ಗೆ  ಕ್ರಷರ್‌ನಲ್ಲಿ ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ತಾಯಿ ಮನೆ ಕೆಲಸ ಮಾಡುತ್ತಾರೆ.

ಅನುಷಾ ಪರಿಶ್ರಮಕ್ಕೆ ಒಲಿದ ಗೆಲುವು
ಬೆಳಗಾವಿ: ತರಕಾರಿ ಮಾರಿ ಜೀವನ ನಿರ್ವಹಣೆ ಮಾಡುತ್ತಿರುವ ಹಳ್ಳಿಯ ರೈತ ಕುಟುಂಬದ ವಿದ್ಯಾರ್ಥಿನಿ ಅನುಷಾ ಭಮ್ಮನ್ನವರ ವಿಜ್ಞಾನ ವಿಭಾಗದಲ್ಲಿ ಶೇ. 94.5 ರಷ್ಟು ಪಡೆದು ಹೆತ್ತವರ ಪರಿಶ್ರಮಕ್ಕೆ ಯೋಗ್ಯ ಕಾಣಿಕೆ ಸಲ್ಲಿಸಿದ್ದಾಳೆ. ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದ ಈಕೆಯ ಓದಿಗೆ ಬಡತನ ತೊಡಕಾಗಲಿಲ್ಲ. ಅನುಷಾ ಅವರ ತಂದೆ, ತಾಯಿ ಇಬ್ಬರೂ ಹೊಲದಲ್ಲಿ ದುಡಿಯುತ್ತಾರೆ. ಅನುಷಾ ಅಡುಗೆ, ದನ, ಆಡುಧಿಗಳ ಆರೈಕೆ ಮಾಡುತ್ತಲೇ ಅಭ್ಯಾಸವನ್ನೂ ನಡೆಸಿ ಉತ್ತಮ ಅಂಕ ಗಳಿಸಿದ್ದಾಳೆ.

ಕೂಲಿ ಕಾರ್ಮಿಕನ ಮಗನ ಓದಿನ ಹೆಮ್ಮೆ
ಕಲಬುರಗಿ: ಕೂಲಿ ಕಾರ್ಮಿಕರ ಮಗ ಅಭಿಷೇಕ್ ರಾಜು ರಾಠೋಡ್ ಕಲಾ ವಿಭಾಗದಲ್ಲಿ ಶೇ.95.16 ಅಂಕ ಗಳಿಸಿದ್ದಾನೆ. ಈತನ ತಂದೆ ರಾಜು ರಾಠೋಡ್ ದಿನಗೂಲಿ ಕಾರ್ಮಿಕರಾಗಿದ್ದಾರೆ. ನಿತ್ಯ 6ರಿಂದ 8 ತಾಸು ಓದಿಗೆ ಮೀಸಲಿಟ್ಟು ಕಷ್ಟ ಪಟ್ಟು ಓದಿದ್ದು ಫಲ ಸಿಕ್ಕಿತು ಎಂದು ಆತ ಖುಷಿಯಾಗಿ ಹೇಳಿಕೊಂಡ.

ಚಿಲ್ಲರೆ ಅಂಗಡಿ, ಅಂಕ ಭರ್ಜರಿ
ಕಂಪ್ಲಿ(ಬಳ್ಳಾರಿ): ತಾಲೂಕಿನ ರಾಮಸಾಗರದ ಚಿಲ್ಲರೆ ಅಂಗಡಿ ಇಟ್ಟುಕೊಂಡಿರುವ ಬಿ.ಮಹ್ಮದ್‌ ಗೌಸ್‌ ಹಾಗೂ ಅಂಜುಬೇಗಂ ಅವರ ಪುತ್ರಿ ಬಿ.ಫಿಜಾಬೇಗಂ ವಿಜ್ಞಾನ ವಿಭಾಗದಲ್ಲಿ 572(ಶೇ.95.33) ಅಂಕ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈಕೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.94ರಷ್ಟು ಅಂಕ ಪಡೆದಿದ್ದಳು. ಚಿಲ್ಲರೆ ಕಿರಾಣಿ ಅಂಗಡಿಯಿಂದ ಬರುವ ಅಲ್ಪ ಸ್ವಲ್ಪ ಆದಾಯವೇ ಕುಟುಂಬ ನಿರ್ವಹಣೆಗೆ ಆಸರೆಯಾಗಿದೆ.

ಕ್ಯಾಂಟೀನ್‌ನಲ್ಲಿ ಬೆಳಗಿದ ‘ಜ್ಯೋತಿ’
ಮೈಸೂರು: ಅಮ್ಮ ಕ್ಯಾಂಟೀನ್‌ನಲ್ಲೇ ಕೆಲಸ ಮಾಡಿ ಓದಿಸಿದ ಪರಿಣಾಮ ಮಗಳು ಪಿಯುಸಿ ವಾಣಿಜ್ಯ ವಿಭಾಗದಲ್ಲಿ 583 (ಶೇ.97.16)ಅಂಕ ಗಳಿಸಿದ್ದಾಳೆ. ಮೈಸೂರಿನ ಹೂಟಗಳ್ಳಿಯ ಜ್ಯೋತಿ ಲಕ್ಷ್ಮೀ ಎಸ್. ಬಡತನದಲ್ಲೇ ಅರಳಿದ ಪ್ರತಿಭೆ. ಭವಿಷ್ಯದಲ್ಲಿ ಸಿಎ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದಾಳೆ. ‘‘ನನ್ನ ತಾಯಿ ದೀಪಾ ಅವರು ಕ್ಯಾಂಟೀನ್‌ನಲ್ಲಿ ಕಷ್ಟಪಡುವುದನ್ನು ನೋಡಿಯೇ ನಾನು ದೊಡ್ಡ ಸಾಧನೆ ಮಾಡಿ ಅವರನ್ನು ಸುಖವಾಗಿ ನೋಡಿಕೊಳ್ಳುವ ಸಂಕಲ್ಪ ಮಾಡಿದೆ,’’ ಎಂದು ಜ್ಯೋತಿ ಹೇಳಿಕೊಂಡಳು. ದೀಪಾ ಅವರಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಒಂದು ಗಂಡು ಮಗು.

ಟೈಲರ್ ಮಗಳು ಶೈನ್
ಕಲಬುರಗಿ: ನಿತ್ಯ ಕಾಲೇಜಿಗೆ ತಪ್ಪದೆ ಹೋಗಿ, ಪಾಠಗಳನ್ನು ಚನ್ನಾಗಿ ಕೇಳಿ ಮನೆಯಲ್ಲೂ ಓದಿದರೆ ಖಂಡಿತ ಹೆಚ್ಚಿನ ಅಂಕಗಳನ್ನು ಗಳಿಸಬಹುದು ಎಂದು ಸಾಧಿಸಿ ತೋರಿಸಿದ್ದಾಳೆ ಶಹೀನ್ ಸುಲ್ತಾನ್. ಈ ಸೈನ್ಸ್‌ನಲ್ಲಿ ಶೇ. 93.50 ಅಂಕ ಗಳಿಸಿದ್ದಾಳೆ. ತಂದೆ ಸಾಹೇಬ್ ಪಟೇಲ್ ಟೈಲರ್ ವೃತ್ತಿ ಮಾಡುತ್ತಿದ್ದಾರೆ. ‘‘ಮುಂದಿನ ಉನ್ನತ ಶಿಕ್ಷಣ ಕೊಡಿಸಬೇಕಾದರೆ ಆರ್ಥಿಕ ತೊಂದರೆಯಿದೆ. ಆರ್ಥಿಕ ಸಹಾಯ ದೊರೆತರೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ,’’ ಎಂದು ಪಟೇಲ್ ಮನವಿ ಮಾಡುತ್ತಾರೆ.

ಅಂಕದಲ್ಲೂ ಅವಳಿಗಳ ಮೋಡಿ
ಸಿಂಧನೂರು (ರಾಯಚೂರು): ತಾಲೂಕಿನ ಜವಳಗೇರಾ ಗ್ರಾಮದ ಶರಣಬಸವೇಶ್ವರ ಕಾಲೊನಿಯ ನಿವಾಸಿ ಪೋಸ್ಟ್ ಮನ್ ವೆಂಕಟೇಶ ಶ್ರೇಷ್ಠಿ ಮತ್ತು ಲೀಲಾವತಿ ಅವರ ಅವಳಿ ಭಾನುಶ್ರೀ ಮತ್ತು ಭೂಮಿಶ್ರೀ, ವಿಜ್ಞಾನ ವಿಭಾಗದಲ್ಲಿ ಶೇ.97 ಅಂಕ ಗಳಿಸಿದ್ದಾರೆ. ಇವರು ರಾಯಚೂರು ಜಿಲ್ಲೆಗೇ ಟಾಪರ್. ಅನುಶ್ರೀ ಒಟ್ಟು 582 ಅಂಕ ಗಳಿಸಿದರೆ ಭೂಮಿ ಶ್ರೀ 581 ಅಂಕ ಗಳಿಸಿದ್ದಾರೆ. ಆದರೆ, ಶೇಕಡಾವಾರು ಲೆಕ್ಕದಲ್ಲಿ ಇಬ್ಬರೂ ಅವಳಿ ಸಾಧನೆ ಮಾಡಿದ್ದಾರೆ. ಇವರು ಸಿಂಧನೂರಿನ ಎ.ವಿ.ಎಸ್. ಬ್ರಿಲಿಯಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top