ಎಸ್ಸೆಸ್ಸೆಲ್ಸಿಗೂ ಮಾದರಿ – ಯಶಸ್ವಿಯಾದ ಪಿಯುಸಿ ಪರೀಕ್ಷೆ

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಯಾವುದೇ ಆತಂಕವಿಲ್ಲದೆ, ಸುಸಜ್ಜಿತವಾಗಿ ಹಾಗೂ ಅಹಿತಕರ ಘಟನೆಗಳಿಲ್ಲದೆ ನೆರವೇರಿದೆ. ಪರೀಕ್ಷಾ ಕೇಂದ್ರಗಳ ಒಳಗೆ ಮತ್ತು ಹೊರಗೆ ಸಾಮಾಜಿಕ ಅಂತರ, ಆರೋಗ್ಯ ನಿಗಾಕ್ಕೆ ವ್ಯವಸ್ಥೆ, ಪರೀಕ್ಷಾ ಕೇಂದ್ರದ ಗೇಟ್‌ಗಳ ಬಳಿಯೇ ವಿದ್ಯಾರ್ಥಿಗಳಿಗೆ ದೇಹದ ಉಷ್ಣಾಂಶ ಪರೀಕ್ಷೆ, ಸ್ಯಾನಿಟೈಸರ್‌ನಿಂದ ಸ್ವಚ್ಛತೆ, ಪ್ರತಿ ವಿದ್ಯಾರ್ಥಿಗೂ ಮಾಸ್ಕ್‌ ಕಡ್ಡಾಯ, ಎಲ್ಲಾ ಕೊಠಡಿಗಳು ಮತ್ತು ಪೀಠೋಪಕರಣಗಳ ಸಂಪೂರ್ಣ ಸ್ಯಾನಿಟೈಸೇಷನ್‌, ಕಂಟೈನ್ಮೆಂಟ್‌ ವಲಯದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದವರಿಗೂ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ – ಇವೇ ಮುಂತಾದ ಎಚ್ಚರಿಕೆಯ ಕ್ರಮಗಳೊಂದಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಯಶಸ್ವಿಯಾಗಿ ಪರೀಕ್ಷೆಯನ್ನು ಮುಗಿಸಿ ಉತ್ತೀರ್ಣಗೊಂಡಿದೆ. ರಾಜ್ಯದ 1,016 ಕೇಂದ್ರಗಳಲ್ಲಿ ಒಟ್ಟು 5,72,665 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಇಲ್ಲಿಗೆ, ಕೊರೊನಾ ಆತಂಕದ ನಡುವೆಯೂ ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದಂತಾಗಿದೆ. ಇಷ್ಟರಲ್ಲಾಗಲೇ ಎಸ್ಸೆಸ್ಸೆಲ್ಸಿಯ ಪರೀಕ್ಷೆ ಮುಗಿದು ಫಲಿತಾಂಶವೂ ಬಂದು ಪಿಯುಸಿ ತರಗತಿಗಳು ಆರಂಭವಾಗಬೇಕಿತ್ತು. ಆದರೆ ಅದಕ್ಕೂ ಕೊರೊನಾ ತಡೆಯಾಗಿತ್ತು. ಈ ಮಧ್ಯೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕೆ ಬೇಡವೆ ಎಂಬ ಬಗ್ಗೆಯೂ ಸಾರ್ವಜನಿಕ ಚರ್ಚೆಯಾಗಿತ್ತಲ್ಲದೆ, ಪರೀಕ್ಷೆ ನಡೆಸದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ನ್ಯಾಯಾಲಯದಲ್ಲಿ ದಾಖಲಾಗಿತ್ತು. ಆದರೆ, ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿ, ಪರೀಕ್ಷೆ ನಡೆಸಲು ಸರಕಾರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿತ್ತು.
ಜೂ.25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಸರಕಾರ ನಿಗದಿಪಡಿಸಿದೆ. ಈಗಾಗಲೇ ಪಿಯುಸಿ ಇಂಗ್ಲಿಷ್‌ ಪರೀಕ್ಷೆಯ ಯಶಸ್ಸು ಸರಕಾರದ ಆತ್ಮವಿಶ್ವಾಸವನ್ನು ಹೆಚ್ಚಿಸಿರಬಹುದು. ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸಿ ಈ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದ ರೀತಿಯನ್ನು ಒಂದು ಮಾನದಂಡವಾಗಿ ಪರಿಗಣಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ಇದೇ ಮಾದರಿಯಲ್ಲಿ ನಡೆಸಬೇಕು. ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪಿಯುಸಿಗಿಂತ ವಿದ್ಯಾರ್ಥಿ ಸಂಖ್ಯೆಯ ಪ್ರಮಾಣದಲ್ಲಿ ಹಾಗೂ ಪರೀಕ್ಷಾ ಕೇಂದ್ರಗಳ ಸಂಖ್ಯೆಯಲ್ಲಿ ದೊಡ್ಡದಾದ ಈ ಪರೀಕ್ಷೆಗೆ ಇನ್ನೂ ಹೆಚ್ಚಿನ ಎಚ್ಚರ ವಹಿಸಬೇಕಿದೆ. ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಈ ಪರೀಕ್ಷೆ ನಿರ್ಣಾಯಕ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಹದಿಹರೆಯದ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಂಡು, ಆರೋಗ್ಯ ರಿಸ್ಕ್‌ಗಳಿಗೆ ತುತ್ತಾಗದಂತೆ ಕಾಪಾಡಿಕೊಳ್ಳುವುದು ಒಂದು ಸವಾಲು. ಈ ವಿಚಾರದಲ್ಲಿ ಸರಕಾರ ವಿದ್ಯಾರ್ಥಿಗಳಲ್ಲಿ ಸಕಲ ಭರವಸೆ ವಿಶ್ವಾಸ ಮೂಡಿಸಬೇಕು.
ಮೌಲ್ಯಮಾಪನದ ದೊಡ್ಡ ಸವಾಲೂ ಮುಂದಿದೆ. ಈಗ ನಡೆಸಿರುವ ಪಿಯುಸಿ ಇಂಗ್ಲಿಷ್‌ ಹಾಗೂ ಲಾಕ್‌ಡೌನ್‌ಗೆ ಮುನ್ನವೇ ನಡೆಸಲಾದ ಪಿಯುಸಿಯ ಕೆಲವು ವಿಷಯಗಳ ಪರೀಕ್ಷೆ ಉತ್ತರಪತ್ರಿಕೆಗಳ ಮೌಲ್ಯಮಾಪನ ನಡೆಯಬೇಕಿದೆ. ಇಂಗ್ಲಿಷ್‌ ಪರೀಕ್ಷೆ ಬಾಕಿಯಿಂದಾಗಿ ಫಲಿತಾಂಶ ತಡವಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಹಂತಕ್ಕೆ ಹೋಗುವ ಯೋಜನೆ ರೂಪಿಸಲು ಅಡ್ಡಿಯಾಗಿತ್ತು. ಹಾಗೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಂತರ ಅದರ ಉತ್ತರಪತ್ರಿಕೆಗಳ ಮೌಲ್ಯಮಾಪನ ಕೂಡ ಶೀಘ್ರವಾಗಿ ಆಗಬೇಕಿದೆ. ಯಾಕೆಂದರೆ ಶೈಕ್ಷಣಿಕ ಕ್ಷೇತ್ರವೇ ಇಂದು ಈ ಎರಡು ಹಂತಗಳ ಫಲಿತಾಂಶಗಳ ಮೇಲೆ ನಿಂತಿದೆ. ಮೌಲ್ಯಮಾಪಕರ ಮುಷ್ಕರ ಅಥವಾ ಗೊಂದಲಗಳು ಈ ಹಂತದಲ್ಲಿ ಕಂಡುಬರುವುದು ಸಾಮಾನ್ಯ. ಮೌಲ್ಯಮಾಪನಕ್ಕೆ ಬರಬಹುದಾದ ಯಾವುದೇ ಅಡೆತಡೆಗಳನ್ನು ಸರಕಾರ ಈಗಲೇ ನಿವಾರಿಸಿಕೊಳ್ಳಬೇಕು.
ಕೊರೊನಾ ಆತಂಕದಿಂದ ನಿಂತುಹೋಗಿರುವ ಶೈಕ್ಷಣಿಕ ಚಕ್ರ ಹೀಗೆ ಮತ್ತೆ ತಿರುಗಲು ಹಾಗೂ ಹಳಿಗೆ ಮರಳಲು ಆರಂಭವಾಗಿರುವುದು ಒಳ್ಳೆಯ ಸೂಚನೆ. ವಿದ್ಯಾರ್ಥಿಗಳು ಕೂಡ ಆತಂಕಿತರಾಗಿರದೆ, ಭರವಸೆ ಪಡೆದು ಆತ್ಮವಿಶ್ವಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಮುಂದಾಗಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top