ವೃತ್ತಿಪರತೆಯ ರುಜುವಾತಿಗೆ ರಸ್ತೆಗಳನ್ನು ನೋಡಿದರೆ ಸಾಕು!

ವೃತ್ತಿಪರತೆಯ ರುಜುವಾತಿಗೆ ರಸ್ತೆಗಳನ್ನು ನೋಡಿದರೆ ಸಾಕು! ರಸ್ತೆಯೆಂದರೆ ನಾಗರಿಕತೆಯ ಸಂಕೇತ ಎಂದ ಅರಸು ಮಾತು ನಮಗೆ ಅರ್ಥವಾಗುವುದು ಯಾವಾಗ..?

ಕೆಲವೊಂದು ವ್ಯಕ್ತಿಗಳೇ ಹಾಗೆ! ಅವರಿಗೆ ಅವರೇ ಸಾಠಿ. ಅಂಥವರಿಗೆ ಪರ್ಯಾಯ ಸೃಷ್ಟಿಸುವುದು ಅಸಾಧ್ಯ ಮಾತು. ಅಟಲ್‌ ಬಿಹಾರಿ ವಾಜಪೇಯಿ, ರಾಮಕೃಷ್ಣ ಹೆಗಡೆ, ದೇವೇಗೌಡರು, ಯಡಿಯೂರಪ್ಪ, ನಿತಿನ್‌ ಗಡ್ಕರಿ ಅವರನ್ನು ನೋಡಿದಾಗ ಈ ಹೇಳಿಕೆ ಎಷ್ಟು ಸಮಂಜಸ, ಪ್ರಾಕ್ಟಿಕಲ್‌ ಎಂಬುದು ಮನದಟ್ಟಾಗುತ್ತದೆ. ಮುತ್ಸದ್ದಿ(ಸ್ಟೇಟ್ಸ್‌ಮನ್‌)ತನದ ಪ್ರಸ್ತಾಪ ಬಂದರೆ ದಿವಂಗತ ವಾಜಪೇಯಿ ಅವರನ್ನು ಬಿಟ್ಟು ಬೇರೆ ಹೆಸರು ಕಣ್ಣಮುಂದೆ ಬರಲು ಸಾಧ್ಯವೇ ಇಲ್ಲ. ಛಲ ಅಂತ ಬಂದಾಗ ದೇವೇಗೌಡರು, ಅಂದುಕೊಂಡದ್ದನ್ನು ಸಾಧಿಸುವ ಹಟದ ವಿಚಾರಕ್ಕೆ ಬಂದರೆ ಯಡಿಯೂರಪ್ಪ, ತಂತ್ರಗಾರಿಕೆ, ಚಾಣಾಕ್ಷ ತನದ ವಿಷಯಕ್ಕೆ ಬಂದರೆ ಆರ್‌.ಕೆ.ಹೆಗಡೆ ಮಾತ್ರ.

ಹಾಗೆಯೇ ರಾಜಕೀಯದಲ್ಲಿ, ಆಡಳಿತದಲ್ಲಿ ವೃತ್ತಿಪರತೆ(ಪ್ರೊಫೆಷನಲಿಸಂ) ಛಾಪನ್ನು ಮೂಡಿಸಿದ್ದು ಒನ್‌ ಆ್ಯಂಡ್‌ ಓನ್ಲಿ ನಿತಿನ್‌ ಗಡ್ಕರಿ. ಇದೇನು ಅತಿಶಯೋಕ್ತಿ ಇಲ್ಲ. ಮಹಾರಾಷ್ಟ್ರದಲ್ಲಿ ಅಭಿವೃದ್ಧಿ ಶಕೆ ಅಂತ ಆರಂಭವಾಗಿದ್ದರೆ ಅದು 1995-2000ದ ಅವಧಿಯಲ್ಲಿ. ಬಿಜೆಪಿ-ಶಿವಸೇನೆ ಸರಕಾರದಲ್ಲಿ ಮನೋಹರ ಜೋಶಿ ಸಂಪುಟದಲ್ಲಿ ನಿತಿನ್‌ ಗಡ್ಕರಿ ಲೋಕೋಪಯೋಗಿ ಸಚಿವರಾಗಿದ್ದರು. ಆಗ ಅವರು ಮೊದಲು ಮಾಡಿದ ಕೆಲಸ ಅಲ್ಲಿನ ಲೋಕೋಪಯೋಗಿ ಇಲಾಖೆ ಪುನಾರಚನೆಗೆ ಸ್ಪಷ್ಟ ಕಾಯಕಲ್ಪ ನೀಡಿದ್ದು. ಮುಂಬೈ ಮಹಾನಗರ ಮಾತ್ರವಲ್ಲದೆ, ಮಹಾರಾಷ್ಟ್ರದ ಉದ್ದಗಲಕ್ಕೆ ಎರಡನೇ ಹಂತದ ನಗರಗಳಲ್ಲೂ ಸುಗಮ ಸಂಚಾರಕ್ಕೆ ಫ್ಲೈಓವರ್‌ಗಳನ್ನು ನಿರ್ಮಾಣ ಮಾಡಿ ಹುಬ್ಬೇರಿಸುವಂತೆ ಮಾಡಿದರು.

ಅದಕ್ಕಿಂತ ಆಸಕ್ತಿಕರವಾದದ್ದು ಉತ್ತಮ ರಸ್ತೆಗಳೆಂದರೆ ಏನು ಎಂದು ಗೊತ್ತಿರದ ಮಹಾರಾಷ್ಟ್ರದ ಕುಗ್ರಾಮಗಳಿಗೆ 7 ಶತಕೋಟಿ ರೂಪಾಯಿ ವೆಚ್ಚದಲ್ಲಿ 13,736 ಕಿ.ಮೀ. ಉದ್ದದ ಗ್ರಾಮೀಣ ಸರ್ವಋುತು ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡಿದರು. ಮಹಾರಾಷ್ಟ್ರದಲ್ಲಿ ಗಡ್ಕರಿ ಮಾಡಿದ ಗ್ರಾಮೀಣ ರಸ್ತೆ ಕ್ರಾಂತಿ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಗಮನ ಸೆಳೆಯಿತು. ಅದರ ಪರಿಣಾಮವಾಗಿ ಪ್ರಧಾನಿ ವಾಜಪೇಯಿ, ಗಡ್ಕರಿ ಅಧ್ಯಕ್ಷ ತೆಯಲ್ಲಿ ನ್ಯಾಷನಲ್‌ ರೂರಲ್‌ ರೋಡ್‌ ಡೆವಲಪ್‌ಮೆಂಟ್‌ ಕಮಿಷನ್‌ ಸ್ಥಾಪನೆ ಮಾಡಿದರು. ಮಹಾರಾಷ್ಟ್ರದ ಸಚಿವಾಲಯದ ಕೆಲಸದ ಜೊತೆಗೆ ದಿಲ್ಲಿಯಲ್ಲಿ ಕೇಂದ್ರ ಸರಕಾರದ ಮೂಲಸೌಕರ್ಯ ಇಲಾಖೆ ಸಚಿವರು, ಮಂತ್ರಿಗಳ ಜೊತೆಗೆ ಗಡ್ಕರಿ ಹಲವು ಸುತ್ತು ಸಭೆಗಳನ್ನು ನಡೆಸಿದರು. ಅದರ ಫಲವಾಗಿ ರೂಪ ತಾಳಿದ್ದು ಇಂದು ಜನಜನಿತವಾಗಿರುವ ‘ಪ್ರಧಾನಮಂತ್ರಿ ಗ್ರಾಮಸಡಕ್‌’(ಪಿಎಮ್‌ಜಿಎಸ್‌ವೈ) ಯೋಜನೆ. ಮೊದಲ ಹಂತದಲ್ಲಿ ಆ ಯೋಜನೆಗೆ 600 ಶತಕೋಟಿ ಮೊತ್ತದ ಹಣಕಾಸನ್ನು ಕೇಂದ್ರ ಸರಕಾರ ತೆಗೆದಿರಿಸಿತು. ಅಂದಿನಿಂದ ಇಂದಿನವರೆಗೆ ಕೇಂದ್ರ ಸರಕಾರದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಪಿಎಂಜಿಎಸ್‌ವೈ ಮೊದಲ ಸ್ಥಾನದಲ್ಲಿದೆ. ಗ್ರಾಮಸಡಕ್‌ ಯೋಜನೆಯ ಕಾರಣ ದೇಶದ ಉದ್ದಗಲಕ್ಕೆ ಕೋಟ್ಯಂತರ ಗ್ರಾಮೀಣ ನಿವಾಸಿಗಳು ಸುಸಜ್ಜಿತ ರಸ್ತೆ ಸೌಕರ್ಯವನ್ನು ಪಡೆಯುವಂತಾಗಿದೆ.

ಹಾಗೆಯೇ ಸುವರ್ಣ ಚತುರ್ಭುಜ ಹೆದ್ದಾರಿ ಯೋಜನೆಯನ್ನು ನಾವು ಹಾಡಿ ಹೊಗಳುತ್ತೇವೆ. ಆದರೆ ಅದಕ್ಕೆ ಪ್ರೇರಣೆ ಕೂಡ ಇದೇ ಗಡ್ಕರಿ ಎಂಬುದು ಎಷ್ಟು ಜನರಿಗೆ ಗೊತ್ತು? ಮಹಾರಾಷ್ಟ್ರ ಸರಕಾರದಲ್ಲಿ ಪಿಡಬ್ಲ್ಯುಡಿ ಸಚಿವರಾಗಿದ್ದ ಗಡ್ಕರಿ ವಿಶ್ವದರ್ಜೆಯ 94.5 ಕಿ.ಮೀ ಉದ್ದದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿ (ಯಶವಂತರಾವ್‌ ಚವ್ಹಾಣ್‌ ಎಕ್ಸ್‌ಪ್ರೆಸ್‌ ವೇ) ನಿರ್ಮಾಣದ ಕನಸು ಕಂಡು ಯೋಜನೆ ರೂಪಿಸಿ ಮೂರು ವರ್ಷಗಳಲ್ಲಿ ಅದನ್ನು ಸಾಕಾರ ಮಾಡಿದರು. ಗಡ್ಕರಿ ಲೋಕೋಪಯೋಗಿ ಸಚಿವರಾಗುವುದಕ್ಕಿಂತ ಐದು ವರ್ಷ ಮೊದಲೇ ಆ ಕುರಿತ ಕಾರ್ಯಸಾಧು ಯೋಜನೆ ಸರಕಾರದ ಕೈ ಸೇರಿತ್ತು. ಮೂರ್ನಾಲ್ಕು ಬಾರಿ ಸಭೆಗಳ ಮೇಲೆ ಸಭೆ, ಚರ್ಚೆಯ ಮೇಲೆ ಚರ್ಚೆ ನಡೆದಿತ್ತು. ಯೋಜನೆಗೆ ಮಾತ್ರ ಚಾಲನೆ ಸಿಕ್ಕಿರಲಿಲ್ಲ. ಸಚಿವ ಗಡ್ಕರಿ ಸಂಪೂರ್ಣ ಕಾಂಕ್ರೀಟ್‌, ಪೂರ್ತಿ ಹೈಟೆಕ್‌ ಆದ ಹೆದ್ದಾರಿಯನ್ನು ಕೇವಲ ಮೂರು ವರ್ಷಗಳಲ್ಲಿ ಕಾರ್ಯಗತಗೊಳಿಸಿದರು.

ರತ್ನಗಿರಿ ಪರ್ವತ ಪ್ರದೇಶದ ಕೊರೆದು ಆ ರಸ್ತೆ ನಿರ್ಮಿಸಿದ್ದೇ ಒಂದು ಸಾಹಸಗಾಥೆ. ಎಂಪಿ ಎಕ್ಸ್‌ಪ್ರೆಸ್‌ ರಸ್ತೆ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ವಾಜಪೇಯಿ ಆ ರಸ್ತೆಯನ್ನು ಕಂಡು ಥ್ರಿಲ್‌ ಆಗುತ್ತಾರೆ. ಅಂಥದ್ದೇ ರಸ್ತೆಯನ್ನು ದೇಶದ ಉದ್ದಗಲಕ್ಕೆ ಏಕೆ ನಿರ್ಮಾಣ ಮಾಡಬಾರದು ಎಂದು ಗಡ್ಕರಿ ಅವರನ್ನು ಪ್ರಶ್ನೆ ಮಾಡುತ್ತಾರೆ. ಮಾಡಬಾರದು ಅಲ್ಲ, ಮಾಡಲೇಬೇಕು ಎಂದು ಗಡ್ಕರಿ ಉತ್ತರಿಸುತ್ತಾರೆ. ಹಾಗಾದರೆ ತಡವೇಕೆ ದಿಲ್ಲಿಯಲ್ಲಿ ಸಭೆ ಸೇರಿ ಮುಂದಿನ ಕಾರ್ಯ ಕೈಗೆತ್ತಿಕೊಳ್ಳಿ ಎಂದು ಅಲ್ಲೇ ಸೂಚನೆ ನೀಡುತ್ತಾರೆ. ಅಟಲ್‌ ಅಂದು ನೀಡಿದ ಸೂಚನೆಯನ್ನು ಶಿರಸಾವಹಿಸಿ ಸ್ವೀಕರಿಸಿದ ಗಡ್ಕರಿ ಇಂದು ಅನುಭವಿಸಿ ಆನಂದಿಸುವ ಸುವರ್ಣ ಚತುರ್ಭುಜ ರಸ್ತೆ ಯೋಜನೆ ಕೇವಲ ನಾಲ್ಕೂವರೆ ವರ್ಷಗಳಲ್ಲಿ ಸಾಕಾರ ಆಗುವಂತೆ ನೋಡಿಕೊಳ್ಳುತ್ತಾರೆ. ಆ ರಸ್ತೆ ನಿರ್ಮಾಣದ ಯೋಜನೆ ಶುರುವಾದಾಗ ಇಷ್ಟೊಂದು ದೊಡ್ಡ ಪ್ರಮಾಣದ ದುಡ್ಡು ಖರ್ಚು ಮಾಡಿದ ಇಷ್ಟು ವಿಶಾಲವಾದ ರಸ್ತೆ, ಮಾಡಬೇಕಿತ್ತೇ ಎಂದು ಮೂಗು ಮುರಿದವರೂ ಇದ್ದರು ಎಂದರೆ ಅಚ್ಚರಿ ಆಗಬಹುದು! ಇಂದು ಅದರ ಮಹತ್ವ ಎಂಥವನಿಗೂ ಅರ್ಥವಾಗುವ ಹಾಗಿದೆ.

ಹಾಗಾದರೆ ರಸ್ತೆಗಳು ನಮಗೆ ಏಕೆ ಮಹತ್ವದ್ದು. ರಸ್ತೆಗಳನ್ನು ಕೇವಲ ವಾಣಿಜ್ಯಿಕ ದೃಷ್ಟಿಯಿಂದ, ಭೌತಿಕ ಸೌಕರ್ಯದ ದೃಷ್ಟಿಯಿಂದ ಮಾತ್ರ ನೋಡಬೇಕೆ? ಈ ವಿಚಾರದಲ್ಲಿ ಕೆಲ ಪ್ರಮುಖರ ಅಭಿಪ್ರಾಯಗಳನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ರಸ್ತೆಗಳು ಯಾವುದೇ ಊರಿನ ನಾಗರಿಕತೆಯ ಸಂಕೇತ ಅಂತ ಅನಂತಮೂರ್ತಿಯವರು ಸ್ಪಷ್ಟವಾಗಿ ಪ್ರತಿಪಾದನೆ ಮಾಡಿ, ಆ ರಸ್ತೆಗಳು ಹೇಗಿರಬೇಕೆಂದರೆ, ಆ ರಸ್ತೆಯಲ್ಲಿ ಹಾದುಹೋಗುವ ಕಾರೂ, ನಿಧಾನವಾಗಿ ಹೋಗುವ ಪಾದಚಾರಿ- ಇಬ್ಬರೂ ನಿರ್ಭಯವಾಗಿ ಚಲಿಸುವಂತಿರಬೇಕು ಎಂದಿದ್ದರು! ಹಾಗೆಯೇ ನನ್ನೂರ ಮುಂದೆ ಹೋಗುವ ರಾಷ್ಟ್ರೀಯ ಹೆದ್ದಾರಿ ನನಗೆ ಪ್ರಪಂಚದ ದಾರಿ ತೋರಿಸಿತು. ನಾನು ವಿಶಾಲ ಹೊರಜಗತ್ತನ್ನು ತಲುಪಲು ಹೆದ್ದಾರಿ ಕಾರಣ ಎಂದು ಇತ್ತೀಚೆಗೆ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಒಂದು ಕಡೆ ಬರೆದುಕೊಂಡಿದ್ದಾರೆ.

ಅದೇ ರೀತಿ ರಸ್ತೆಗಳ ಕುರಿತು ಮಾಜಿ ಸಿಎಂ ದಿ. ದೇವರಾಜ ಅರಸು ಅವರು ಹೊಂದಿದ್ದ ಭಾವನೆ ವಿಶೇಷವಾಗಿದೆ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾದ ಬಳಿಕ ಸ್ವಕ್ಷೇತ್ರ ಹುಣಸೂರಿನ ವ್ಯಾಪ್ತಿಯಲ್ಲಿ ಬರುವ ಹುಟ್ಟೂರು ಕಲ್ಲಹಳ್ಳಿಗೆ ಭೇಟಿ ಕೊಡುತ್ತಾರೆ. ಊರವರು ನಾನಾ ಬೇಡಿಕೆಗಳನ್ನು ಅವರ ಮುಂದಿಡುತ್ತಾರೆ. ನೀರು ಬೇಕು, ಶಾಲೆ ಬೇಕು, ಅಂಗನವಾಡಿ ಬೇಕು, ಆಸ್ಪತ್ರೆ ಬೇಕು ಇತ್ಯಾದಿ ಇತ್ಯಾದಿ. ಆದರೆ ಅರಸು ಅವರು ಯಾರೂ ಕೇಳದಿದ್ದ ರಸ್ತೆಯೊಂದನ್ನು ಮೊದಲು ಮಂಜೂರು ಮಾಡುತ್ತಾರೆ. ಅರೆ ಕೇಳಿದ್ದನ್ನು ಬಿಟ್ಟು ಕೇಳದೇ ಇದ್ದದ್ದನ್ನು ಕೊಡುತ್ತಾರಲ್ಲ ಎಂದು ಜನ ತಕರಾರು ತೆಗೆದಾಗ ಅವರು ಹೇಳುತ್ತಾರೆ, ‘‘ರಸ್ತೆಗಳು ಅಂದರೆ ನಾಗರಿಕತೆಯ ಸಂಕೇತ ಕಣ್ರಯ್ಯ’’ ಎಂದು. ಒಂದು ಊರಿಗೆ ಒಂದೊಳ್ಳೆ ರಸ್ತೆ ಮಾಡಿದರೆ ಬಾಕಿ ಎಲ್ಲ ಹಿಂಬಾಲಿಸುತ್ತದೆ. ರಸ್ತೆಗಳು ಎಂದರೆ ನಾಗರಿಕತೆಯ ಸಂಪರ್ಕ ಸೇತು, ವಿಕಾಸದ ಸ್ರೋತ, ಭಾಗ್ಯದ ಬಾಗಿಲು ಎಂಬುದು ಅವರ ಖಚಿತ ನಿಲುವಾಗಿತ್ತು. ಇವತ್ತಿನ ಜನಪ್ರತಿನಿಧಿಗಳಿಗೆ ಈ ಭಾಷೆ ಮತ್ತು ಭಾವನೆ ಎರಡೂ ಅರ್ಥ ಆದರೆ ಎಷ್ಟು ಚಂದ ಅಲ್ಲವೇ!

ನಮಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಾಮರಾಜ್‌ ಗೊತ್ತು, ಕಾಂಗ್ರೆಸ್‌ ಪಕ್ಷ ಸಂಕಷ್ಟದಲ್ಲಿದ್ದಾಗ ಕ್ರಾಂತಿಕಾರಿ ಸಲಹೆ ನೀಡಿ ಪಕ್ಷ ವನ್ನು ಪುನಃಶ್ಚೇತನಗೊಳಿಸಲು ನೀಡಿದ ಕಾಮರಾಜ್‌ ಪ್ಲಾನ್‌ ಕೂಡ ಗೊತ್ತು. ಆದರೆ ಅದೆಲ್ಲಕ್ಕೂ ಮೀರಿ ಇಂಟೆರೆಸ್ಟಿಂಗ್‌ ಆಗಿರುವುದು ಕಾಮರಾಜ್‌ ಅವರ ವೈಯಕ್ತಿಕ ಜೀವನ ಮತ್ತು ಅವರು ತಮಿಳುನಾಡಿಗೆ ನೀಡಿದ ಕೊಡುಗೆಗಳು. ಕಾಮರಾಜ್‌ ಓದಿದ್ದು ಕೇವಲ ನಾಲ್ಕನೇ ಕ್ಲಾಸ್‌ವರೆಗೆ. ಪಂಚೆ ಮತ್ತು ತುಂಡು ಜುಬ್ಬಾ ಅವರಿಷ್ಟದ ಡ್ರೆಸ್ಸು. ಅಂಥ ಮನುಷ್ಯ ಮೂರು ಬಾರಿ ಸತತವಾಗಿ ತಮಿಳುನಾಡು ಸಿಎಂ ಆದರು. ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷ ರಾದರು. ಕೇಂದ್ರ ಸರಕಾರದಲ್ಲಿ ಯಶಸ್ವಿ ಕೃಷಿ ಮಂತ್ರಿಯಾಗಿದ್ದರು. ಲಾಲಬಹಾದ್ದೂರ ಶಾಸ್ತ್ರಿ, ಇಂದಿರಾ ಗಾಂಧಿ ಅವರನ್ನು ಪ್ರಧಾನಿ ಮಾಡಿ ಕಿಂಗ್‌ಮೇಕರ್‌ ಎಂಬ ಶಾಶ್ವತ ಬಿರುದು ಪಡೆದರು. ಅದೆಲ್ಲಕ್ಕಿಂತ ಹೆಚ್ಚಿನದ್ದು ಅವರ ಆಡಳಿತದ ಬಿಗಿ. ಬಡವರ ಏಳ್ಗೆ, ಸ್ಥಿರ ಅಭಿವೃದ್ಧಿ ಪರ ಅವರ ಚಿಂತನೆ. ಎಲ್ಲರಿಗೂ ಉಡಲು ಬಟ್ಟೆ, ವಾಸಕ್ಕೆ ಸೂರು, ಅಕ್ಷ ರ ಕಲಿಕೆ ವಿಕಾಸಕ್ಕೆ ಬುನಾದಿ ಎಂಬುದು ಕಾಮರಾಜ್‌ ಪ್ರತಿಪಾದನೆಯಾಗಿತ್ತು. ಐವತ್ತರ ದಶಕದಲ್ಲೇ ಕಾಮರಾಜ್‌ ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ (ಮಿಡ್‌ ಡೇ ಮೀಲ್‌) ಯೋಜನೆ ಜಾರಿಗೊಳಿಸಿದ್ದನ್ನು ಗಮನಿಸಿದರೆ ಅವರು ಹೊಂದಿದ್ದ ಆಗ್ರಹದ ಪರಿ ಅರ್ಥವಾಗುತ್ತದೆ.

ಅದೊಂದೇ ಅಲ್ಲ, ತಮಿಳುನಾಡಿನಲ್ಲಿ ಇಂದು ಎರಡನೇ ಹಂತದ ಹತ್ತಕ್ಕೂ ಹೆಚ್ಚು ನಗರಗಳು ರಾಜಧಾನಿ ಚೆನ್ನೈಗೆ ಸಮಾನವಾಗಿ ಬೆಳವಣಿಗೆ ಹೊಂದುವಲ್ಲೂ ಕಾಮರಾಜ್‌ ಅವರು ಕೈಗಾರಿಕೀಕರಣಕ್ಕೆ ಹಾಕಿದ ಭದ್ರ ಬುನಾದಿಯೇ ಕಾರಣ. ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದದ್ದು ತಮಿಳುನಾಡಿನಲ್ಲಿ ಯಾವುದೇ ಯೋಜನೆಯನ್ನು ಕರುಣೆಯಿಂದ ರೂಪಿಸುವುದಿಲ್ಲ, ಬದಲಾಗಿ ಕಮಿಟ್‌ಮೆಂಟ್‌ನಿಂದ, ಕಕ್ಕುಲಾತಿಯಿಂದ, ಕಳಕಳಿಯಿಂದ ರೂಪಿಸುತ್ತಾರೆ ಎಂಬುದನ್ನು. ಅವರ ಆ ಗುಣ ಕಾಮರಾಜ್‌ರಿಂದ ಆರಂಭವಾಗಿ ಈಗಿನ ಟಿಆರ್‌ ಬಾಲು ಅವರವರೆಗೆ ಹಾಗೇ ಮುಂದುವರಿದುಕೊಂಡು ಬಂದಿರುವುದು ವಿಶೇಷ. ಅಟಲ್‌ ಸುವರ್ಣ ಚತುರ್ಭುಜ ರಸ್ತೆ ಆರಂಭಿಸಿದಾಗ ಟಿ.ಆರ್‌. ಬಾಲು ಭೂಸಾರಿಗೆ ಖಾತೆ ಸಹಾಯಕ ಮಂತ್ರಿಯಾಗಿದ್ದರು. ಮುಂದೆ ಯಪಿಎ ಸರಕಾರದಲ್ಲೂ ಅವರು ಅದೇ ಖಾತೆಯನ್ನು ಕೇಳಿ ಪಡೆದು ಹಿಡಿದ ಕೆಲಸ ಪೂರ್ತಿ ಮಾಡಿದರು. ಎಲ್ಲದಕ್ಕೂ ಮಿಗಿಲಾಗಿ ಅಟಲ್‌ ರಸ್ತೆಯನ್ನು ಬೇರೆಲ್ಲ ರಾಜ್ಯಗಳಿಗಿಂತಲೂ ತಮಿಳುನಾಡಿನಲ್ಲಿ ಅದ್ಭುತವಾಗಿ ಕಾರ್ಯರೂಪಕ್ಕೆ ತಂದರು. ಈ ರಸ್ತೆ ಕತೆ ಎಷ್ಟು ಬರೆದರೂ ಕಡಿಮೆ ಬಿಡಿ.

ಅಂದ ಹಾಗೆ ವಿಸ್ತಾರ ಅಂಕಣದ ಈ ಕಂತಿಗೆ ಕಾರಣವಾದದ್ದು ಈ ಹಿಂದಿನ ಕಂತಿನಲ್ಲಿ ಗುಡ್‌ ಗವರ್ನನ್ಸ್‌ ಕುರಿತು ಪ್ರಸ್ತಾಪಿಸಿದ ವಾಜಪೇಯಿ ರಸ್ತೆ ಮತ್ತು ಆಡಳಿತಗಾರರ ಧೋರಣೆ ಸಂಬಂಧಿತ ಚರ್ಚೆ. ಈ ಹಿಂದಿನ ಕಂತಿನಲ್ಲಿ ಪ್ರಸ್ತಾಪಿಸಿದ ಆಡಳಿತಾತ್ಮಕವಾಗಿ ತಮಿಳುನಾಡು ಮಾಡಿರುವ ಸಾಧನೆ ಕುರಿತು ಅನೇಕ ಹಿರಿ-ಕಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಐಎಎಸ್‌ ಅಧಿಕಾರಿಗಳ ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಅದು ಚರ್ಚೆಗೆ ಕಾರಣವಾಯಿತು. ಹಲವು ಪ್ರಮುಖರು ಮಹತ್ವದ ಪೂರಕ ಮಾಹಿತಿಯನ್ನು ನೇರವಾಗಿ ಹಂಚಿಕೊಳ್ಳಲು ಮುಂದೆ ಬಂದರು. ಅದರ ಪರಿಣಾಮ ಗುಡ್‌ ಗವರ್ನನ್ಸ್‌ ಕುರಿತೇ ಮತ್ತೊಂದು ಕಂತು ಬರೆಯಬೇಕಾಯಿತು.

ಓದುಗರ ಒಡಲಾಳ
ಈ ಸೋಷಿಯಲ್‌ ಮೀಡಿಯಾ ಬಳಕೆದಾರರು, ವಾಟ್ಸ್‌ಆ್ಯಪ್‌ ಸಂದೇಶದಂತಹ ಆಧುನಿಕ ಸಂವಹನ ಸಾಧನಗಳಿಂದ ಅನುಕೂಲಕ್ಕಿಂತ ಅನನುಕೂಲ, ಅನಾಹುತಗಳೇ ಹೆಚ್ಚಾಗುತ್ತಿವೆ. ಈಗ ದೇಶದಲ್ಲಿ ಉಂಟಾಗಿರುವ ಗೊಂದಲ, ಸಂಘರ್ಷದ ವಾತಾವರಣಕ್ಕೂ ಇದರ ಕೊಡುಗೆ ಹೆಚ್ಚಿದೆ. ಇಂಥವರ ನಿಯಂತ್ರಣಕ್ಕೆ ಇನ್ನೂ ಬಿಗಿ ಕಾನೂನು ತರಬೇಕಲ್ಲವೇ?
ರೂಪೇಶ್‌ ಶೆಟ್ಟಿ, ಹೆಬ್ರಿ

 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top