ಬೆಲೆ ಏರಿಕೆ ಎರಡಲಗಿನ ಕತ್ತಿ – ರೈತರಿಗೂ ಗ್ರಾಹಕರಿಗೂ ಭರವಸೆ ತುಂಬಬೇಕು

ಲಾಕ್‌ಡೌನ್‌ ಬಹುತೇಕ ತೆರವಾಗಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳಲು ಕಾತರಿಸುತ್ತಿದೆ. ಸಹಜ ಸ್ಥಿತಿಗೆ ಬರಬೇಕೆಂದರೆ ಬದುಕಲು ಅಗತ್ಯವಾದ ದಿನಸಿ ವಸ್ತುಗಳ ಬೆಲೆ ಸಹಜ ಸ್ವರೂಪಕ್ಕೆ ಬರಬೇಕು. ಹಾಗೆಯೇ ರೈತರ ಉತ್ಪನ್ನಗಳು ಲಾಭಕರ ಬೆಲೆಗೆ ಮಾರಾಟವಾಗಬೇಕು, ಅವರೂ ಕೂಡ ಅಗತ್ಯ ವಸ್ತುಗಳಿಗೆ ವೆಚ್ಚ ಮಾಡಲು ಸಾಧ್ಯವಾಗಬೇಕು. ಆದರೆ ಲಾಕ್‌ಡೌನ್‌ ತೆರವಾಗುತ್ತಿರುವಂತೆ ಮಾರುಕಟ್ಟೆಯಲ್ಲಿ ಕಾಣಿಸುತ್ತಿರುವ ಸ್ಥಿತಿ ಭಿನ್ನವಾಗಿದೆ.  ಸಿಮೆಂಟ್, ಕಬ್ಬಿಣ ಇತ್ಯಾದಿ ನಿರ್ಮಾಣ ಸಾಮಗ್ರಿಗಳು, ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಮಗ್ರಿಗಳ ಬೆಲೆಗಳು ಹೆಚ್ಚಿವೆ. ಕಟ್ಟಡ ಸಾಮಗ್ರಿಗಳ ಬೆಲೆ ಬಹುತೇಕ ದುಪ್ಪಟ್ಟು ಆಗುತ್ತಿದೆ. ಆದರೆ ಬದುಕಿಗೆ ಅತ್ಯಗತ್ಯವಾದ ಕೃಷಿ- ತೋಟಗಾರಿಕೆ ಉತ್ಪನ್ನಗಳ ದರಗಳು ಕುಸಿದಿವೆ. ರೈತರಿಗೆ ಬೆಳೆದದ್ದಕ್ಕೆ ತಕ್ಕ ಬೆಲೆ ದೊರೆಯುತ್ತಿಲ್ಲ. ಅದೇ ವೇಳೆಗೆ ಗ್ರಾಹಕನಿಗೆ ಮಾತ್ರ ಈ ಬೆಲೆಯಿಳಿಕೆಯ ಲಾಭ ದೊರೆಯದೆ, ಆತ ಬೆಲೆಯೇರಿಕೆಯ ಬಿಸಿ ಅನುಭವಿಸುವಂತಾಗಿದೆ.
ಇದಕ್ಕೆ ಹಲವು ಕಾರಣಗಳು ಇರಬಹುದು. ಎರಡು ತಿಂಗಳ ಕಾಲ ನಿಂತುಹೋದ ಉದ್ಯಮದ ನಷ್ಟ ಸರಿದೂಗಿಸಿಕೊಳ್ಳಲು ಕಟ್ಟಡ ನಿರ್ಮಾಣ ಸಾಮಗ್ರಿ, ಎಲೆಕ್ಟ್ರಾನಿಕ್ ಸಾಮಗ್ರಿಗಳ ಮಾರಾಟಗಾರರರು ಬೆಲೆ ಏರಿಸಿರಬಹುದು. ಇದು ತಪ್ಪು ಎಂದು ಹೇಳಿದರೆ ಇಷ್ಟು ದಿನಗಳ ಸಾಲದ ಬಡ್ಡಿಯ ಕಡೆಗೆ ಅವರು ಬೆಟ್ಟು ಮಾಡಿ ತೋರಿಸುವುದು ಸಹಜ. ಇದರ ಜೊತೆಗೆ ಹೋಟೆಲ್ ಉದ್ಯಮಕ್ಕೆ ಪೂರ್ತಿ ತೆರವು ಸಿಕ್ಕಿಲ್ಲ. ನಗರ ಪ್ರದೇಶಗಳ ಶೇ.50 ಜನತೆ ಹೋಟೆಲ್ ಉದ್ಯಮವನ್ನು ಊಟಕ್ಕಾಗಿ ಇಂದು ಅವಲಂಬಿಸಿದೆ. ಹೋಟೆಲ್ ಉದ್ಯಮ ಇಲ್ಲದೆ ಅಕ್ಕಿ, ತರಕಾರಿ, ಈರುಳ್ಳಿ, ಹಾಲು ಮತ್ತು ಹಾಲಿನ ಉಪ ಉತ್ಪನ್ನ ಸೇರಿ ಎಲ್ಲಆಹಾರ ಉತ್ಪನ್ನಗಳಿಗೆ ಬೇಡಿಕೆ ಹುಟ್ಟುತ್ತಿಲ್ಲ. ಬೇಡಿಕೆ ಇಲ್ಲದೆ ಬೆಲೆಯೂ ಇಲ್ಲ. ಅಕ್ಕಿ ಗೋಡೌನ್‌ಗಳಲ್ಲಿ ಉಳಿದಿದ್ದು, ಅದರ ನಡುವೆಯೇ ಹೊಸ ಸುಗ್ಗಿಯ ಬೆಳೆ ಬಂದಿದೆ. ಲಾಕ್‌ಡೌನ್‌ ಮುಗಿದ ನಂತರ ಎಲ್ಲ ದೊಡ್ಡ ಕಂಪನಿಗಳು ಕೊರೊನಾದಿಂದ ತಮಗೆ ಆದ ನಷ್ಟ ತುಂಬಿಕೊಳ್ಳಲು ಉತ್ಪನ್ನಗಳ ಬೆಲೆ ಹೆಚ್ಚಿಸಿದ್ದರೆ, ಕೃಷಿ ಕ್ಷೇತ್ರಕ್ಕೆ ಮಾತ್ರವೇ ಆ ಭಾಗ್ಯ ಇಲ್ಲವಾಗಿದೆ.
ಇದು ಎರಡು ರೀತಿಯಲ್ಲಿ ಜನರಿಗೆ ಹೊಡೆತ. ಒಂದು, ತಾವು ಬೆಳೆದ ಬೆಳೆಗಳಿಗೆ ಹಾಗೂ ತಮ್ಮ ಉತ್ಪಾದನೆಗಳಿಗೆ ಬೆಲೆಯಿಲ್ಲದಿರುವುದರಿಂದ ಅವರ ಕೈಗೆ ಹಣ ಸಿಗುತ್ತಿಲ್ಲ. ಹಣ ಸಿಗದಿರುವುದರಿಂದ ಮಾರುಕಟ್ಟೆಯಲ್ಲಿಅವರು ಹಣ ಖರ್ಚು ಮಾಡಲು ಮುಂದಾಗುತ್ತಿಲ್ಲ. ಮಾರುಕಟ್ಟೆಗೆ ಹಣ ಬರದೆ ಯಾವ ಆರ್ಥಿಕತೆಯೂ ಚೇತರಿಸಿಕೊಳ್ಳುವುದಿಲ್ಲ. ಇದೇ ವೇಳೆಗೆ ಕೊಂಡುಕೊಳ್ಳಬೇಕಾದ ವಸ್ತುಗಳ ಬೆಲೆ ಮಾತ್ರ ಹೆಚ್ಚಿದೆ. ಇದು ಎರಡು ಅಲಗಿನ ಕತ್ತಿಯಾಗಿದ್ದು, ಉತ್ಪಾದಕನಾಗಿಯೂ ಗ್ರಾಹಕನಾಗಿಯೂ ಬಳಲುವ ಪರಿಸ್ಥಿತಿ ಶ್ರೀಸಾಮಾನ್ಯನಿಗೆ ಸೃಷ್ಟಿಯಾಗಿದೆ. ಇಂಥ ಹೊತ್ತಿನಲ್ಲಿಸರಕಾರ ಮಧ್ಯ ಪ್ರವೇಶ ಮಾಡಬೇಕಿದೆ. ಕೃಷಿ ಮಾರುಕಟ್ಟೆಯಲ್ಲಿ ವಿಶ್ವಾಸ ಮೂಡಿಸುವ ವ್ಯವಸ್ಥೆ ಮಾಡಬೇಕು. ಕೃಷಿ ಉತ್ಪನ್ನಗಳ ಸುಗಮ ಸಾಗಾಣಿಕೆ, ಮಾರಾಟಕ್ಕೆ ಆಸ್ಪದ ಆಗಬೇಕು. ಕೃಷಿ ಉತ್ಪನ್ನಗಳನ್ನು ಲಾಭಕರ ಬೆಲೆಗೆ ಖರೀದಿಸಿ ಸಂಗ್ರಹಿಸುವ ವ್ಯವಸ್ಥೆಯಾಗಬೇಕು. ಮಧ್ಯವರ್ತಿಗಳ ಹಾವಳಿಗೆ ತಡೆ ಹಾಕಬೇಕು. ಎಪಿಎಂಸಿ ಕಾಯಿದೆಯನ್ನು ದುರ್ಬಲಗೊಳಿಸುವ ಯತ್ನವನ್ನು ಕೈಬಿಟ್ಟು, ಆ ವ್ಯವಸ್ಥೆಗೆ ಬಲ ತುಂಬಬೇಕು. ಹೋಟೆಲ್‌ಗಳು ಯಾವುದೇ ಸೋಂಕಿಗೆ ಆಸ್ಪದ ಕೊಡದಂತೆ ಎಚ್ಚರಿಕೆಯಿಂದ ಮರಳಿ ತೆರೆಯಲು ಅವಕಾಶ ನೀಡಬೇಕು. ಕಟ್ಟಡ ನಿರ್ಮಾಣ ಸಾಮಗ್ರಿಗಳು ಸೇರಿದಂತೆ ವ್ಯಾಪಾರಿಗಳು ಮಿತಿ ಮೀರಿ ಬೆಲೆ ಹೆಚ್ಚಿಸದಂತೆ ಒಂದು ಕಣ್ಣಿಡುವ, ಕಾನೂನು ಕ್ರಮ ತೆಗೆದುಕೊಳ್ಳುವ ನಿಗಾ ವ್ಯವಸ್ಥೆ ರೂಪಿಸಬೇಕು.
ರಾಜ್ಯ ಸರಕಾರದ ಹಾಗೂ ಕೇಂದ್ರ ಸರಕಾರದ ಪ್ಯಾಕೇಜ್ ಸರಿಯಾದ ಸಮಯಕ್ಕೆ ಫಲಾನುಭವಿಗಳನ್ನು ತಲುಪುವಂತೆ ನೋಡಿಕೊಳ್ಳುವುದರಿಂದಲೂ ಮಾರುಕಟ್ಟೆಯಲ್ಲಿ ವಿಶ್ವಾಸ ವೃದ್ಧಿ ಸಾಧ್ಯವಿದೆ. ಹಾಗಾಗಿ, ಇವು ಬರಿಯ ಘೋಷಣೆಗಳಾಗದೆ ತಳಮಟ್ಟದಲ್ಲಿ ತಲುಪುವಂತೆ ನೋಡಿಕೊಳ್ಳಲು ಆಡಳಿತ ಯಂತ್ರ ಚುರುಕಾಗಬೇಕು. ಸಚಿವರು, ಅಧಿಕಾರಿಗಳ ಚುರುಕುತನ ಪ್ರಾಮಾಣಿಕತೆಗಳು ಈ ನಿಟ್ಟಿನಲ್ಲಿಅಗತ್ಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top