ಅಂಚೆ ಮತದಾನ ಜನತಂತ್ರ ವಿರೋಧಿ

– ಕೆ.ದಿವಾಕರ್‌. 

ಚುನಾವಣೆಗಳು ಭಾರತದ ಜನತಂತ್ರವನ್ನು ಶಕ್ತಿಶಾಲಿಯಾಗಿ ಇಟ್ಟಿರುವ ಒಂದು ಪ್ರಮುಖ ಪ್ರಕ್ರಿಯೆ. ಒಬ್ಬನಿಗೆ ಒಂದೇ ಓಟು, ಎಲ್ಲರಿಗೂ ಅದರ ಹಕ್ಕು ಎಂಬುದು ಕೂಡಾ ಶಕ್ತಿಶಾಲಿಯಾಗಿರುವ ಆದರ್ಶ. ಎಲ್ಲ ದೋಷಗಳ ನಡುವೆಯೂ ಇದೊಂದು ಜನರ ಕೈಯಲ್ಲಿರುವ ಆಯುಧ. ಜನಸಂಖ್ಯೆಯ ಎಲ್ಲ ಜಾತಿ, ಪಂಥ, ಧರ್ಮ, ವಿದ್ಯಾವಂತರು, ನಿರಕ್ಷರಿಗಳೂ ಒಂದು ಪ್ರಜಾತಂತ್ರದ ಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸುತ್ತಿರುವುದು, ಅವಿದ್ಯಾವಂತರು ಹಾಗೂ ಗ್ರಾಮೀಣ ಪ್ರದೇಶದ ಜನ ನಗರದ ಮತದಾರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವ ಪ್ರಕ್ರಿಯೆಗೆ ಭಾರತದಲ್ಲಿ ಬಿಬಿಸಿಯ ಪ್ರತಿನಿಧಿಯಾಗಿದ್ದ ಖ್ಯಾತ ಪತ್ರಕರ್ತ ಮಾರ್ಕ್‌ ಟುಲಿ ‘‘mandate of illiterate inteligentia” ಎಂದು ವಿವರಿಸಿದ್ದಾನೆ.
ಚುನಾವಣೆಯ ಪ್ರಕ್ರಿಯೆ ಚುನಾವಣಾ ಆಯೋಗದ ಸ್ವತಂತ್ರ ನಿರ್ವಹಣೆಯಡಿಯಲ್ಲಿ ನಡೆಯುತ್ತದೆ. 1950ರ ಜನಪ್ರಾತಿನಿಧ್ಯ ಕಾಯಿದೆಯ ಒಪ್ಪಿತ ನಿಯಮಾವಳಿಯಲ್ಲಿ ಆಯೋಗ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುತ್ತಿದೆ. ದಿ. ಟಿ.ಎನ್‌. ಶೇಷನ್‌ ಮುಖ್ಯ ಚುನಾವಣಾ ಆಯುಕ್ತರಾಗಿ ಜಾರಿಗೆ ತಂದ ಕಠಿಣ ನಿಯಮಾವಳಿಗಳ ಕಾರ್ಯಾನ್ವಯದ ಕಾರಣ, ಏಕ ಸದಸ್ಯ ಚುನಾವಣಾ ಆಯೋಗವನ್ನೆ ತ್ರಿ ಸದಸ್ಯ ಚುನಾವಣಾ ಆಯೋಗವಾಗಿ ಬದಲಾವಣೆ ಮಾಡಲಾಯಿತು.
ಜನಪ್ರತಿನಿಧಿ ಕಾಯ್ದೆಯ ಕಲಂ 20 ಮತ ಹಾಕುವ ಹಕ್ಕುಗಳನ್ನು ನೀಡುತ್ತದೆ. ಮತ ಚುಲಾವಣೆಯ ವಿಧಾನಗಳಲ್ಲಿ ಕೂಡಾ ಮತಯಂತ್ರಗಳನ್ನು ಬಳಸುವ ಅವಕಾಶ ಕೂಡ ಕಲಂ 61-ಎ ಅನ್ವಯ ಪಾರ್ಲಿಮೆಂಟಿನ ಅಂಗೀಕಾರದ ಮೂಲಕ 1989ರಿಂದ ಜಾರಿಯಾಗಿ. 1991ರ ನಂತರ ಎಲ್ಲ ಚುನಾವಣೆಗಳಲ್ಲಿ ಬಳಕೆಯಾಗುತ್ತಿದೆ.
ಇತ್ತೀಚೆಗೆ ಮುಂಬರುವ ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ಚುನಾವಣೆಗಳಲ್ಲಿ, ಪ್ರಸ್ತುತ ಕೋವಿಡ್‌ ಪರಿಸ್ಥಿತಿಯ ದೆಸೆಯಿಂದ 65 ವರ್ಷ ವಯಸ್ಸಾದವರು ಹಾಗೂ ಕೊರೊನಾ ಪೀಡಿತರು, ಅಂಚೆಯ ಮೂಲಕ ಮತ ಚಲಾಯಿಸಬಹುದೆಂಬ ಆಯೋಗದ ಅಧಿಸೂಚನೆ ಹಾಗೂ ಕೇಂದ್ರ ಸರಕಾರ ಇದಕ್ಕೆ ನೀಡಿರುವ ಒಪ್ಪಿಗೆ ರಾಜಕೀಯ ಪಕ್ಷಗಳ ವಲಯದಲ್ಲಿ ಕಟುಟೀಕೆಗೆ ಕಾರಣವಾಗಿದೆ. ನಿಯಮಾವಳಿಯಲ್ಲಿ ಈ ವರೆಗೆ 80 ವರ್ಷ ಮೀರಿದವರಿಗೆ ಈ ಅವಕಾಶವನ್ನು 65 ವರ್ಷಕ್ಕೆ ಇಳಿಸಲಾಗಿರುವ ದಿಡೀರ್‌ ಕ್ರಮದ ಬಾಧಕಗಳ ಕುರಿತು ಬಿಜೆಪಿ ನಿಲುವು ಎಲ್ಲ ವಿರೋಧಿ ಪಕ್ಷಗಳ ಟೀಕೆಗೆ ಆಹಾರವಾಗಿದೆ.
2003ರ ತಿದ್ದುಪಡಿಯ ಕಾರಣದಿಂದ ಕಾಲಂ 59ರನ್ವಯ ಒಬ್ಬ ಮತದಾರ ಖುದ್ದಾಗಿ ಅಥವಾ ಅಂಚೆ ಮೂಲಕ ಮತ ಚಲಾಯಿಸುವ ಕ್ರಮವನ್ನು ಸೃಷ್ಟಿಸಲಾಗಿದೆ. ಇದರನ್ವಯ ಜೈಲಿನಲ್ಲಿರುವ ವ್ಯಕ್ತಿಗೆ ಮತದಾನಕ್ಕೆ ಅವಕಾಶವಿಲ್ಲ. ಆರ್ಮಿ ಆ್ಯಕ್ಟ್ನ ಅನ್ವಯ ಸೈನ್ಯದಲ್ಲಿ ಕೆಲಸ ನಿರ್ವಹಿಸುವವರು ಬದಲಿ ವ್ಯಕ್ತಿಯ ಮೂಲಕ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಚುನಾವಣಾ ಕಾರ‍್ಯದಲ್ಲಿ ನಿರತರಾದ ಸಿಬ್ಬಂದಿಗೂ ಕೂಡಾ ಅಂಚೆ ಮತದಾನಕ್ಕೆ ಅವಕಾಶವಿದೆ. ಕಲಂ 61ಎ ಅನ್ವಯ ಮತಯಂತ್ರಗಳಲ್ಲಿ ಮತದಾನ ಮಾಡುವ ಕ್ರಮ ಮತಗಟ್ಟೆಗಳಲ್ಲಿ ನಡೆಯುವ ಕಾರಣ, ಅಂಚೆ ಮತದಾನದ ಅವಕಾಶವಿದೆ. ಆದರೆ ಅಂಚೆ ಮತದಾನ ಮಾಡಿದ ಮತಗಳು ಅದಕ್ಕೆ ಪೂರಕವಾದ ಕಠಿಣ ನಿಯಮಾವಳಿಗಳ ಕಾರಣ ಅಂದರೆ ಪ್ರತಿ ಮತದ ಜತೆ ಇಡಬೇಕಾದ ಫಾರಂ ನಂ 13ಎ ಹಾಗೂ ಈ ಮತ ಪತ್ರದ ಲಕೋಟೆ, ಚುನಾವಣಾಧಿಕಾರಿಗೆ ನೀಡಬೇಕಾದ ಫಾರಂ 13ಬಿ ಹಾಗೂ ಆಯ್ಕೆಯನ್ನು ಸೂಚಿಸುವ 13 ಸಿ ಘೋಷಣೆಗಳ ಕಾರಣ, ತಾಂತ್ರಿಕ ವ್ಯತ್ಯಯಗಳ ಕಾರಣ ತಿರಸ್ಕೃತವಾದ ಹೆಚ್ಚು ಘಟನೆಗಳು ಈ ವರೆಗಿನ ಚುನಾವಣೆಗಳಲ್ಲಿ ನಡೆದಿವೆ ಹಾಗೂ ಮತದಾನ ದಿನಕ್ಕಿಂತ ಪೂರ್ವಾನ್ವಯವಾಗಿ ನಿರ್ದಿಷ್ಟ ಸಮಯದಲ್ಲಿ ಚುನಾವಣಾಧಿಕಾರಿಯನ್ನು ತಲುಪದಿದ್ದಲ್ಲಿ ಕೂಡಾ ಈ ಮತ ಗಣನೆಗೆ ಬರುವುದಿಲ್ಲ.
ಇತ್ತೀಚೆಗೆ ಜೂನ್‌ 19ರ ರಾಜ್ಯಸಭೆ ಚುನಾವಣೆಯಲ್ಲಿ ಅಂಚೆ ಮತಕ್ಕೆ ನೀಡಿದ್ದ ಅವಕಾಶವನ್ನು ಕಾಂಗ್ರೆಸ್‌ ಪಕ್ಷ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿಯವರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಜೂನ್‌ 18ರಂದು ಜಾರಿಗೊಳಿಸಿದ ಈ ಅವಸರದ ಕ್ರಮದ ಕುರಿತು ಈಗಾಗಲೇ ಚುನಾವಣಾ ಆಯೋಗಕ್ಕೆ ತ್ರಿಸದಸ್ಯ ಪೀಠದ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಬೊಬ್ಡೆ ನೋಟಿಸ್‌ ಜಾರಿ ಮಾಡಿ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಗಡುವು ವಿಧಿಸಿದ್ದಾರೆ.
ರಾಜಕೀಯ ಪಕ್ಷಗಳ ಜತೆ ಸಮಾಲೋಚಿಸದೆ ಜಾರಿ ಮಾಡಿದ ಚುನಾವಣಾ ಆಯೋಗದ ಅಧಿಸೂಚನೆಯನ್ನು ಬಿಹಾರದ ಪ್ರಮುಖ ವಿರೋಧಿ ಪಕ್ಷ ಆರ್‌ಜೆಡಿ ಟೀಕಿಸಿದೆ. ಈ ಕ್ರಮ ನಿತಿನ್‌ಕುಮಾರ್‌ ನೇತೃತ್ವದ ಎನ್‌ಡಿಎ ಮೈತ್ರಿ ಸರಕಾರಕ್ಕೆ ಅನುಕೂಲ ಮಾಡುವ ಉಪಕ್ರಮವೆಂದು ರಾಜ್ಯಸಭೆ ಸದಸ್ಯ ಮನೋಜ್‌ ಜಾ ಪ್ರತಿಕ್ರಿಯಿಸಿದ್ದಾರೆ. ಆಯೋಗದ ಕ್ರಮ ಏಕಪಕ್ಷೀಯ, ಅಸಂವಿಧಾನಾತ್ಮಕ ಎಂದು ತೃಣಮೂಲ ಕಾಂಗ್ರೆಸ್‌ ಟೀಕಿಸಿದೆ. ಸಿಪಿಐನ ಡಿ. ರಾಜಾರವರ ಪ್ರಕಾರ ಸ್ಥಿತಿವಂತ ರಾಜಕೀಯ ಪಕ್ಷಗಳ ಮತ್ತು ಸಂಪನ್ಮೂಲ ಹೊಂದಿದವರ ಭ್ರಷ್ಟ ಮಾರ್ಗಗಳಿಗೆ ಅಂಚೆ ಮತದಾನ ರಾಜಮಾರ್ಗವೆಂದು ಹೇಳಿದ್ದಾರೆ. ಟಿಎಂಸಿ, ಆಯೋಗಕ್ಕೆ ಬರೆದ ಪತ್ರದಲ್ಲಿ 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಪ್ರಧಾನಿ ಮೋದಿ, ಹಾಗೂ 13ಕ್ಕೂ ಹೆಚ್ಚು ಮುಖ್ಯಮಂತ್ರಿಗಳೂ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸುವಾಗ ಅಂಥವರೂ ಮತಗಟ್ಟೆಗೆ ಬಂದು ಮತ ಚಲಾಯಿಸುವಂತಿಲ್ಲ ಎಂಬುದು ತಪ್ಪು ನಿಲುವು ಎಂದಿದೆ. ಕಾಂಗ್ರೆಸ್‌ ಪಕ್ಷ ಹಿರಿಯ ನಾಗರಿಕರಿಗೆ ಪ್ರತ್ಯೇಕ ಮತಗಟ್ಟೆಗಳು ಅಂಚೆ ಮತದಾನಕ್ಕಿಂತ ಸೂಕ್ತವೆಂದು ಅಭಿಪ್ರಾಯಿಸಿದೆ.
ಅಂಚೆ ಮತದಾನ ಮಾಡುವ ವ್ಯಕ್ತಿ, ನೋಟರಿಗಳ ಅಥವಾ ಪತ್ರಾಂಕಿತ ಅಧಿಕಾರಿಯ ಮುಂದೆ ಫಾರಂ 13ಎ ಅನ್ವಯ ಘೋಷಣೆಯ ಪ್ರಮಾಣ ಪತ್ರವನ್ನು ನೀಡಬೇಕು. ನಂತರ 13ಬಿ ಲಕೋಟೆಯಲ್ಲಿ 13 ಸಿಯ ಮತಪತ್ರವನ್ನು ಅಂಟಿಸಿ ಚುನಾವಣೆ ಅಧಿಕಾರಿಗೆ ರವಾನಿಸಬೇಕು ಹಾಗೂ ಇದು ಚುನಾವಣಾ ದಿನಾಂಕಕ್ಕಿಂತ ಮೊದಲು ಚುನಾವಣಾಧಿಕಾರಿಗೆ ತಲುಪಬೇಕು. ಇಲ್ಲಿ ಘೋಷಣಾ ಪತ್ರಕ್ಕೆ ಸಹಿ ಪಡೆಯಲು ಮನೆಯಿಂದ ಹೊರಗೆ ಹೋಗಬಹುದು, ಆದರೆ ಮತಗಟ್ಟೆಗೆ ಹೋಗುವುದು ಅಪಾಯಕಾರಿ ಎಂದು ಭಾವಿಸುವುದು ವಿಪರ್ಯಾಸ. ಹಾಗಾಗಿ ಈ ಅಧಿಸೂಚನೆಯಂತೆ ಮತದಾನ ಮಾಡಿದರೂ ತಾಂತ್ರಿಕ ತೊಂದರೆಗಳ ಕಾರಣ ತಿರಸ್ಕೃತವಾಗುವ ಸಾಧ್ಯತೆ ಹಾಗೂ ಇದರ ಮೂಲಕ ಬದಲಿ ಮತದಾನ ಹೆಚ್ಚು ನಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಕೊರೊನಾ ಈವರೆಗೆ ಸಮಾಜದ ಎಲ್ಲ ವ್ಯವಸ್ಥೆಗಳನ್ನು ಪಲ್ಲಟಗೊಳಿಸಿತು. ಈಗ ಬಿಹಾರ ಚುನಾವಣೆಯಲ್ಲಿ ಕೋವಿಡ್‌ ಪೀಡಿತರು ಹಾಗೂ 65 ವರ್ಷದ ಮತದಾರರೂ ಮತಗಟ್ಟೆಗೆ ಬರುವ ಅವಕಾಶವನ್ನು ತಡೆದು ಹಾಕುತ್ತಿದೆ.

(ಲೇಖಕರು ಹೈಕೋರ್ಟ್‌ ವಕೀಲರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top