ವಿಶೇಷಚೇತನರಿಗೆ ಸಿಗುತ್ತಿಲ್ಲ ಮಾನವೀಯತೆಯ ಆಸರೆ

ಕೊರೊನಾ ಭಯಕ್ಕೆ ಕೈ ಹಿಡಿದು ನಡೆಸೋರಿಲ್ಲ, ಬಸ್‌ ಹತ್ತಿಸುವುದಕ್ಕೂ ಹಿಂಜರಿಯುತ್ತಿರುವ ಜನರು.

ಗಿರೀಶ ಎಸ್‌. ಕಲ್ಗುಡಿ ತುಮಕೂರು.

ಯಾರನ್ನೂ ಸ್ಪರ್ಶಿಸಬಾರದು, ಸಾಮಾಜಿಕ ಅಂತರ ಕಾಯಬೇಕೆಂಬ ಕೊರೊನಾ ನಿಯಮಾವಳಿ ವಿಶೇಷಚೇತನರ ಜೀವನವನ್ನು ಇನ್ನಷ್ಟು ಹದಗೆಡಿಸಿದೆ.
ಹೀಗಾಗಿ ರಸ್ತೆ ದಾಟಲು ಸಹಾಯ ಮಾಡೋರಿಲ್ಲ, ಕೈ ಹಿಡಿದು ಬಸ್‌ ಹತ್ತಿಸೋರಿಲ್ಲ, ಕಚೇರಿಗಳಲ್ಲಿ ನೆರವು ನೀಡೋರಿಲ್ಲದೆ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಹೆಚ್ಚಿನವರಿಗೆ ಸಹಾಯ ಮಾಡುವ ಮನಸ್ಸಿದ್ದರೂ ಕೊರೊನಾ ಭಯ, ಸಾಮಾಜಿಕ ಕಿರಿಕಿರಿಗಳು ಅವರನ್ನು ಹತ್ತಿರ ಬರದಂತೆ ಮಾಡಿ, ಮನದಲ್ಲೇ ಮರುಗುವಂತೆ ಮಾಡಿದೆ.
ರಾಜ್ಯದಲ್ಲಿ 13.24 ಲಕ್ಷ ವಿಶೇಷಚೇತನರಿದ್ದು, ಸುಮಾರು ಐದು ಸಾವಿರಕ್ಕೂ ಅಧಿಕ ವಿಶೇಷಚೇತನ ನೌಕರರು ನಾನಾ ಇಲಾಖೆಗಳ ಸರಕಾರಿ ಕಚೇರಿಗಳಲ್ಲಿ ಕೊರೊನಾ ನಡುವೆಯೂ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದಾರೆ.

ಹಲವು ರೀತಿಯ ತೊಂದರೆ
ನಾನು ಎರಡೂ ಕೈ ಹಾಗೂ ಮಂಡಿಯನ್ನು ನೆಲಕ್ಕೂರಿ ನಡೆಯಬೇಕು. ಇದರಿಂದ ಕಚೇರಿಯಲ್ಲಿ ಕೈ ತೊಳೆಯಲು ಬೇಕಾದ ವ್ಯವಸ್ಥೆ ಇಲ್ಲ. ನಾನು ಕೈಯೂರಿ ನಡೆಯುತ್ತೇನೆಂಬ ಕಾರಣಕ್ಕೆ ಇವನು ಎಲ್ಲೆಲ್ಲಿ ಓಡಾಡಿರುತ್ತಾರೋ ಎಂದು ಕೆಲ ಸಹೊದ್ಯೋಗಿಗಳೇ ಸಹಾಯಕ್ಕೆ ಬರುತ್ತಿಲ್ಲ. ಆ ದೇವರು ಈ ಕೊರೊನಾದಿಂದ ಯಾವಾಗ ಮುಕ್ತಿ ಕೊಡುತ್ತಾನೋ ಎನ್ನುತ್ತಾರೆ ಪಾವಗಡ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಹಿರಿಯ ಗ್ರಂಥಪಾಲಕ ನಾಗರಾಜ್‌.

ಆನ್‌ಲೈನ್‌ ಶಿಕ್ಷಣದ್ದೇ ಚಿಂತೆ
ಕೊರೊನಾ ಹಿನ್ನೆಲೆಯಲ್ಲಿ ಸರಕಾರ ಆನ್‌ಲೈನ್‌ ಶಿಕ್ಷಣಕ್ಕೆ ಒತ್ತು ನೀಡಿದ್ದು, ವಿಶೇಷಚೇತನರ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಕಷ್ಟವಾಗಿ ಪರಿಣಮಿಸಿದೆ. ಜೀವನ ಸಾಗಿಸುವುದೇ ದುಸ್ತರವಾಗಿರುವಾಗ ಆನ್‌ಲೈನ್‌ ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳನ್ನು ಮಕ್ಕಳಿಗೆ ಕಲ್ಪಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಿವುಡ ಹಾಗೂ ಅಂಧ ಮಕ್ಕಳಿಗೆ ಆನ್‌ಲೈನ್‌ ತರಗತಿ ಅಸಾಧ್ಯವಾಗಿದೆ. ಹಾಗಾಗಿ ಸರಕಾರ ಈ ಬಗ್ಗೆ ಚಿಂತನೆ ನಡೆಸಿ ಅವರ ಶಿಕ್ಷಣಕ್ಕೆ ಬೇಕಾದ ಸೌಕರ್ಯ ಕಲ್ಪಿಸಬೇಕಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ವಿಶೇಷಚೇತನರಿಗೆ ಆಸರೆ ಇಲ್ಲದಂತಾಗಿದ್ದು, ಬಹುತೇಕ ಮಂದಿ ಇವರ ಸಹಾಯಕ್ಕೆ ಮುಂದಾಗುತ್ತಿಲ್ಲ. ಸರಕಾರ ವಿಶೇಷಚೇತನರ ಸುರಕ್ಷತಾ ಸಂಚಾರಕ್ಕೆ ಆದ್ಯತೆ ನೀಡಬೇಕು.
– ಸುಧೀಂದ್ರಕುಮಾರ್‌, ಜಿಲ್ಲಾ ಅಂಗವಿಕಲರ ಒಕ್ಕೂಟದ ಅಧ್ಯಕ್ಷ

ವಿಶೇಷಚೇತನರಿಗೆ ನೆರವಿನ ಹಸ್ತ ಬೇಕಾಗಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳೊಂದಿಗೆ ಅವರ ನೆರವಿಗೆ ಧಾವಿಸಬೇಕು. ಕೊರೊನಾದಿಂದ ವಿಶೇಷಚೇತನರಿಗೆ ಸಮಸ್ಯೆ ಇದ್ದಲ್ಲಿ ಅವರು ತಮ್ಮ ಗಮನಕ್ಕೆ ತಂದರೆ ಜಿಲ್ಲಾಡಳಿತದಿಂದ ಆ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ವಿಶೇಷಚೇತನರ ವಿಶೇಷ ಸುರಕ್ಷತಾ ವ್ಯವಸ್ಥೆ ಕಲ್ಪಿಸುವ ಬಗ್ಗೆ ಜಿಲ್ಲಾಡಳಿತ ಮತ್ತು ಸರಕಾರದ ಗಮನಕ್ಕೆ ತರಲಾಗುವುದು.
– ರಮೇಶ್‌, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top