ಹಿಮದಲ್ಲಿ ಅರಳಿದ ನೆನಪಿನ ಹೂವು ಪಾಮುಕ್

ಭಾರತದಂತೆಯೇ ಸೆಕ್ಯುಲರ್ ಚಿಂತನೆ ಹಾಗೂ ಧಾರ್ಮಿಕ ಮೂಲಭೂತವಾದಗಳ ನಡುವೆ ನಲುಗುತ್ತಿರುವ ನಾಡು ಟರ್ಕಿಯಿಂದ ಬಂದ ಕಾದಂಬರಿಗಾರ ಒರ್ಹಾನ್ ಪಾಮುಕ್. ಟರ್ಕಿಯ ಬದುಕಿನ ಸಂಕೀರ್ಣ ಚಿತ್ರಣ ನೀಡುವ ಪಾಮುಕ್‌ನ ‘ಸ್ನೋ’ ಕಾದಂಬರಿಯನ್ನು ಕನ್ನಡಕ್ಕೆ ತಂದ ಲೇಖಕಿ ಇಲ್ಲಿ ಬರೆದಿದ್ದಾರೆ.

– ಕೆ.ಎಸ್. ವೈಶಾಲಿ.

ಅಸಂಖ್ಯಾತ ಆಂತರಿಕ ತಿಕ್ಕಾಟಗಳು, ಘರ್ಷಣೆಗಳಲ್ಲಿ ಕಳೆದುಹೋಗಿದ್ದ ನಾಡೊಂದು ಆಧುನಿಕತೆಯತ್ತ ಸಾಗುತ್ತ ಒಂದು ಪ್ರಜಾತಂತ್ರ ರಾಷ್ಟ್ರವಾಗಿ ಬದಲಾಗುವುದು ಕಳೆದ ಶತಮಾನದ ಬಹುಮುಖ್ಯ ಚಲನೆಗಳಲ್ಲೊಂದು. ಅದರಲ್ಲೂ ಭಾರತದಂತಹ ವಸಾಹತೀಕರಣಗೊಂಡ ರಾಷ್ಟ್ರಗಳಿಗೆ ಅದೊಂದು ಬೇಗುದಿಯ ಇತಿಹಾಸ. ಯುರೋಪ್ ಹಾಗೂ ಏಷ್ಯಾ ಖಂಡಗಳ ನಡುವೆ ಸೇತುವೆಯಂತೆ ಇರುವ ಯೂರೇಷ್ಯನ್ ರಾಷ್ಟ್ರ ಟರ್ಕಿಯೂ ಇದಕ್ಕೆ ಹೊರತಲ್ಲ. ಭಾರತದಂತೆ ಟರ್ಕಿಯೂ ಹತ್ತಾರು ಭಿನ್ನತೆಗಳನ್ನು ಒಳಗೊಂಡಿರುವ ವಿಶಿಷ್ಟ ದೇಶ. ಇತಿಹಾಸದ ಪುಟಗಳಲ್ಲಿ ಟರ್ಕಿಗೆ ಅದರದ್ದೇ ಆದ ಸ್ಥಾನವಿದ್ದರೂ, ಸಾಂಸ್ಕೃತಿಕ ವಲಯದಲ್ಲಿ ಅದು ಅಷ್ಟು ಪರಿಚಿತವಾಗಿರಲಿಲ್ಲ. ಆದರೆ ಒರ್ಹಾನ್ ಪಾಮುಕ್ ಎಂಬ ಟರ್ಕಿಯ ಬರಹಗಾರ ತನ್ನ ಬರಹಗಳ ಮೂಲಕ ಜಗತ್ತನ್ನೇ ನಿಬ್ಬೆರಗುಗೊಳಿಸಿ, ಟರ್ಕಿಯ ಚಿತ್ರಣವನ್ನು ಬಿಡಿಸಿದ. ಅವನ ಕಾದಂಬರಿಗಳು ಇಂಗ್ಲಿಷಿಗೆ ತರ್ಜುಮೆಗೊಂಡು ಮಿಲಿಯನ್ನುಗಟ್ಟಲೆ ಮಾರಾಟಗೊಂಡು ಲಕ್ಷಾಂತರ ಓದುಗರನ್ನು ತೀವ್ರವಾಗಿ ಸೆಳೆದುಕೊಂಡವು. ಪಾಮುಕ್‌ನ ಕಾದಂಬರಿಗಳ ಮೂಲಕ ಟರ್ಕಿ ಹೊಸ ‘ಐಡೆಂಟಿಟಿ’ ಪಡೆದುಕೊಂಡಿತು ಎಂದರೆ ಅತಿಶಯೋಕ್ತಿಯಾಗಲಾರದು. ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯ ಗೌರವ ಪಡೆದ ಈ ಟರ್ಕಿಷ್ ಕಾದಂಬರಿಕಾರ ನಮ್ಮ ಸಮಕಾಲೀನ ಪ್ರಮುಖ ಬರಹಗಾರ ಮತ್ತು ಚಿಂತಕ.
ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಟರ್ಕಿಯಲ್ಲಿದ್ದ ಮಿಲಿಯಗಟ್ಟಲೆ ಅರ್ಮೇನಿಯರನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ನರಹತ್ಯೆಗಳನ್ನು ಜರ್ಮನಿಯಲ್ಲಿ ನಾಝಿಗಳು ಯೆಹೂದಿಗಳ ಮೇಲೆಸಗಿದ ಹತ್ಯಾಕಾಂಡದಷ್ಟೇ ಘೋರವಾದ ಕೃತ್ಯಗಳೆಂದು ಪರಿಗಣಿಸಿದ್ದರೂ, ಟರ್ಕಿಯಲ್ಲಿ ಇದನ್ನು ಅವಸಾನದ ಹಂತದಲ್ಲಿದ್ದ ಒಟೋಮನ್ ಚಕ್ರಾಧಿಪತ್ಯದಲ್ಲಿ ಜರುಗಿದ ಆಂತರಿಕ ಗಲಭೆಯೆಂದು ಬಿಂಬಿಸಲಾಗುತ್ತದೆ. ಅರ್ಮೇನಿಯನ್ನರ ಕಗ್ಗೊಲೆಯ ಪ್ರಸ್ತಾಪ ಮಾಡುವುದೂ ಇಂದಿನ ಟರ್ಕಿಯಲ್ಲಿ ಶಿಕ್ಷಾರ್ಹ ಅಪರಾಧ. ಇಂತಹ ಸಮಯದಲ್ಲಿ ಆ ಕುರಿತು ಕಾದಂಬರಿ ಬರೆಯುವುದೆಂದರೆ ಸುಲಭದ ಮಾತೆ? ಹಾಗೆ ನಿಲ್ಲುವ ಅಸಾಮಾನ್ಯ ಧೈರ್ಯವಂತ ಈ ಪಾಮುಕ್.
ಸ್ವಿಸ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಾಮುಕ್, ಅರ್ಮೇನಿಯನ್ನರ ಹತ್ಯಾಕಾಂಡವನ್ನು ನಿರ್ಭಿಢೆಯಿಂದ ಖಂಡಿಸಿದ್ದರು. ಇದು ಅವರಿಗೆ ಅಂತಾರಾಷ್ಟ್ರೀಯ ಪ್ರಾಮುಖ್ಯ ತಂದುಕೊಟ್ಟಿದ್ದಲ್ಲದೆ ವಿವಾದಾತ್ಮಕ ವ್ಯಕ್ತಿಯನ್ನಾಗಿ ಮಾರ್ಪಡಿಸಿತು. ಟರ್ಕಿಷ್ ಸರಕಾರ ಈ ಕುರಿತು ಮೆದು ಧೋರಣೆ ಅನುಸರಿಸಿದರೂ, ಇದು ಧಾರ್ಮಿಕ ಮೂಲಭೂತವಾದಿಗಳ ಕೈಗಳಲ್ಲಿ ಆಯುಧವಾಗಿ ಮಾರ್ಪಾಡಾಯಿತು. ಈ ರಾಜಕೀಯ ಹಿನ್ನೆಲೆಯಲ್ಲಿ ಪಾಮುಕ್ ಟರ್ಕಿಷ್ ಭಾಷೆಯಲ್ಲಿ ‘ಕಾರ್ಸ್’ ಎಂಬ ಕಾದಂಬರಿ ಬರೆದರು. ಈ ಕಾದಂಬರಿಯ ಕಾಲಘಟ್ಟ 1990ರ ದಶಕ. ಆ ಕಾಲದ ಭೀಕರ ಅಸಹಿಷ್ಣುತೆ, ಜನಾಂಗೀಯ ದ್ವೇಷ, ಹಿಂಸೆಯ ಚಿತ್ರಣ ಈ ಕಾದಂಬರಿಯಲ್ಲಿವೆ. ಮೂಲ ಕಾದಂಬರಿ 2002ರಲ್ಲಿ ಪ್ರಕಟಗೊಂಡಿತು. ಪಾಮುಕ್ರ ಸಹಪಾಠಿ ಮೌರೀನ್ ಫ್ರೀಲಿ ಇದನ್ನು ‘ಸ್ನೋ’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದರು.
ಈಶಾನ್ಯ ಟರ್ಕಿಯ ‘ಕಾರ್ಸ್’ ಎಂಬ ಸಣ್ಣ ನಗರದಲ್ಲಿ ನಡೆಯುವ ಘಟನಾವಳಿಗಳ ಸುತ್ತ ಈ ಕಾದಂಬರಿ ಹೆಣೆಯಲಾಗಿದೆ. ಟರ್ಕಿಯ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳನ್ನು ಅನಾವರಣಗೊಳಿಸುವ ಕೆಲಸವನ್ನು ಈ ಕಾದಂಬರಿಯಲ್ಲಿ ಪಾಮುಕ್ ಅದ್ಭುತವಾಗಿ ಮಾಡುತ್ತಾರೆ. ಇಸ್ತಾನ್‌ಬುಲ್‌ನಲ್ಲಿ ವಾಸವಾಗಿರುವ ಪಾಮುಕ್ ಪ್ರಜಾಸತ್ತಾತ್ಮಕತೆಯ ಆಮ್ಲಜನಕವನ್ನು ಟರ್ಕಿಯೊಳಗೆ ಬರಮಾಡಿಕೊಂಡು, ಟರ್ಕಿಷ್ ಜನತೆಯ ದಾರುಣ ಯಾತನಾಮಯ ಅನುಭವಗಳನ್ನು ಹೊರಪ್ರಪಂಚಕ್ಕೆ ರವಾನಿಸುವ ಕೆಲಸವನ್ನು ಎಷ್ಟು ಸಮರ್ಪಕವಾಗಿ ಮಾಡುತ್ತಾರೆಂದರೆ ತಮ್ಮ ಸೃಜನಶೀಲ ಸಂವೇದನೆಗಳಿಗೆ ವ್ಯತಿರಿಕ್ತವಾಗಿ ಅವರೊಬ್ಬ ರಾಜಕೀಯ ಸಿದ್ಧಾಂತಿಯಾಗಿಯೂ ಹೊರಹೊಮ್ಮುತ್ತಾರೆ.
ಕಾದಂಬರಿಯ ನಾಯಕ ಕರೀಂ ಅಲಕುಸೋಗ್ಲು ಆಲಿಯಾಸ್ ‘ಕ’, ಕಾರ್ಸ್ ನಗರಕ್ಕೆ ಬರುತ್ತಾನೆ. ಕಾರ್ಸ್ ಎಂದರೆ ಹಿಮ. ಒಂದು ಕಾಲದಲ್ಲಿ ಕಾರ್ಸ್ ನಗರ ವಾಣಿಜ್ಯ ವಹಿವಾಟುಗಳಿಗೆ ಟರ್ಕಿ, ಸೋವಿಯೆಟ್ ಜಾರ್ಜಿಯ, ಅರ್ಮೇನಿಯ ಹಾಗೂ ಇರಾನ್‌ಗಳ ನಡುವಿನ ಕೊಂಡಿಯಾಗಿತ್ತು. ಗಡಿಭಾಗದ ಈ ಸಣ್ಣ ಊರು ಹಲವಾರು ಸಂದಿಗ್ಧಗಳಿಗೆ ಸಿಲುಕಿತ್ತು. ಈ ನಗರದಲ್ಲಿ, ದೇಶದ ಅಧ್ಯಕ್ಷನಾಗಿ, ಟರ್ಕಿ ನವರಾಷ್ಟ್ರ ನಿರ್ಮಾಣದ ರೂವಾರಿಯಾದ ಕೆಮಲ್ ಅಟಾಟರ್ಕ್ ರೂಪಿಸಿದ ಪ್ರಜಾಸತ್ತಾತ್ಮಕ ಆಧುನಿಕ ಗಣರಾಜ್ಯದ ಪ್ರತಿಪಾದಕರಾದ, ಮತ ಧರ್ಮಾತೀತ ನಿಲುವುಗಳನ್ನು ಹೊಂದಿದ ಧರ್ಮನಿರಪೇಕ್ಷವಾದಿಗಳು, ಅವರ ಬೆಂಬಲಕ್ಕೆ ನಿಂತ ಸೈನ್ಯ ಒಂದು ಕಡೆಯಿದ್ದರೆ, ಕುರ್ಡಿಷ್ ಹಾಗೂ ಟರ್ಕಿಷ್ ರಾಷ್ಟ್ರೀಯತಾವಾದಿಗಳು ಇನ್ನೊಂದು ಕಡೆ. ಇವೆಲ್ಲದರ ನಡುವೆ ಕಾರ್ಸ್‌ನ ನಾಗರಿಕರು ಮತ್ತು ಇಸ್ಲಾಮಿ ಮೂಲಭೂತವಾದಿಗಳ ನಡುವಿನ ಸಂಘರ್ಷ, ಹಿಂಸೆ ಹಾಗೂ ತಳಮಳಗಳನ್ನು ಬಿಂಬಿಸುವಲ್ಲಿ ಎಲ್ಲೂ ಸರಳೀಕೃತ ಚಿತ್ರಣವೆನಿಸುವುದಿಲ್ಲ. ರಾಜಕೀಯ ಕೈದಿಯಾಗಿ ಟರ್ಕಿಯಿಂದ ಗಡೀಪಾರಾದ ‘ಕ’ ತಾಯಿಯ ಉತ್ತರಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಟರ್ಕಿಗೆ ಮರಳಿದ್ದಾನೆ. ಇಸ್ತಾನ್‌ಬುಲ್‌ನಲ್ಲಿರುವ ‘ಕ’ನ ಪತ್ರಕರ್ತ ಮಿತ್ರ, ಆತನಿಗೆ ಕಾರ್ಸ್‌ಗೆ ಭೇಟಿ ನೀಡಿ ಅಲ್ಲಿ ಉಗ್ರಗಾಮಿಗಳು ಗೆಲ್ಲುವ ಸಾಧ್ಯತೆಗಳಿವೆಯೆಂದು ಹೇಳಲಾದ ನಗರಸಭೆಯ ಚುನಾವಣೆಯ ಬಗ್ಗೆ ವರದಿ ಮಾಡಲು ಹೇಳುತ್ತಾನೆ. ಈ ಕೆಲಸದೊಂದಿಗೆ ಆತ ಕಾರ್ಸ್‌ನಲ್ಲಿ ಶಿರವಸ್ತ್ರಧಾರಿಣಿಯರಾದ ಯುವತಿಯರ ಆತ್ಮಹತ್ಯಾ ಪ್ರಕರಣಗಳ ಕುರಿತಾಗಿಯೂ ತನಿಖೆ ನಡೆಸಬೇಕಾಗಿರುತ್ತದೆ. ಆತನಿಗೆ ಇನ್ನೊಂದು ಖಾಸಗಿ ಉದ್ದೇಶವೂ ಇದೆ. ಕಾರ್ಸ್‌ನಲ್ಲಿ ತಂದೆ ಹಾಗೂ ತಂಗಿಯೊಡನೆ ವಾಸಮಾಡುತ್ತಿರುವ, ಕಾಲೇಜಿನ ಸಹಪಾಠಿ ಐಪೆಕ್ಳನ್ನು ಸಂಧಿಸಿ ಆಕೆಯನ್ನು ಜೀವನಸಂಗಾತಿಯಾಗಿ ಮಾಡಿಕೊಳ್ಳುವ ತವಕವೂ ಆತನಿಗಿದೆ.
ಕ ತನ್ನ ಸ್ವಯಿಚ್ಛೆಯಿಲ್ಲದೆ, ಟರ್ಕಿಯ ಜನತೆಯನ್ನು ಪ್ರಜ್ಞಾವಂತರನ್ನಾಗಿ ಮಾಡಲು ಹೆಣಗುವ ಎಡಪಂಥೀಯ ರಂಗ ಕಲಾವಿದ ದಂಪತಿ ಸುನೈ ಜೈಂ ಮತ್ತು ಅವನ ಪತ್ನಿ ಫಂಡಾ ಈಸರ್ ಹಾಗೂ ಬ್ಲೂ ಎಂಬ ಉಗ್ರ ಧಾರ್ಮಿಕ ಮೂಲಭೂತವಾದಿಯ ಮಧ್ಯವರ್ತಿಯಾಗಬೇಕಾಗುತ್ತದೆ. ‘ಕ’ ಕಾಸ್ಮೊಪಾಲಿಟನ್ ನಗರವಾದ ಇಸ್ತಾನ್‌ಬುಲ್‌ನವನು, ನಾಸ್ತಿಕ. ಪಾಶ್ಚಿಮಾತ್ಯರ ನಾಡು ಜರ್ಮನಿಯಲ್ಲಿ ಬಹುಕಾಲ ಕಳೆದವನು. ಟರ್ಕಿಯ ಸೆಕ್ಯುಲರ್ ಸರಕಾರಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡ ಹುಡುಗಿಯರ ಬಗ್ಗೆ ಬರೆಯುವುದು ಅಪ್ರಿಯ ಸಂಗತಿ. ಆದ್ದರಿಂದ ಅವರು ಕನನ್ನು ಹಿಂಬಾಲಿಸಲು ಗೂಢಚರರನ್ನು ನೇಮಿಸುತ್ತಾರೆ. ಬೇಹುಗಾರರ ಕಣ್ಣು ತಪ್ಪಿಸಿ ಉಗ್ರಗಾಮಿ ಬ್ಲೂನನ್ನು ಭೆಟ್ಟಿಯಾಗುತ್ತಾನೆ. ಬ್ಲೂನ ವ್ಯಕ್ತಿತ್ವವನ್ನು ಪಾಮುಕ್ ಸಂಕೀರ್ಣವಾಗಿ ಚಿತ್ರಿಸಿದ್ದಾರೆ. ಬ್ಲೂನಲ್ಲಿ ಕವಿಯ ಹೃದಯವೂ ಇದೆ. ಆತ ಕನಸುಗಾರ. ಪ್ರಖ್ಯಾತ ಕವಿ ಫಿರ್ದೂಸಿಯ ‘ಷಾ ನಾಮೆ’ ಕಾವ್ಯ ಆತನಿಗೆ ಕಂಠಪಾಠ. ಈ ಕಾವ್ಯವನ್ನು ನೂರಾರು ಬಾರಿ ಓದಿದ್ದರೂ ಶ್ರೇಷ್ಠ ಯೋಧರಾದ ಸೊಹ್ರಾಬ್ ಮತ್ತು ರುಸ್ತುಂ ಯುದ್ಧಭೂಮಿಯಲ್ಲಿ ತಾವು ತಂದೆ ಮಗ ಎಂಬ ಅರಿವಿಲ್ಲದೇ ವೈರಿಗಳಾಗಿ ಪರಸ್ಪರ ಎದುರಾಗುವ ದೃಶ್ಯಕ್ಕೆ ತಲುಪಿದಾಗ ತಾನು ತತ್ತರಿಸತೊಡಗುತ್ತೇನೆ, ತನ್ನ ಹೃದಯ ಜೋರಾಗಿ ಹೊಡೆದುಕೊಳ್ಳುತ್ತದೆಯೆಂದು ‘ಕ’ನಿಗೆ ಹೇಳುತ್ತಾನೆ. ಆ ಸಂದರ್ಭವನ್ನು ನೆನೆದು ಕಣ್ಣೀರುಗರೆಯುವ ಬ್ಲೂಕನಿಗೆ, ‘‘ಒಂದಾನೊಂದು ಕಾಲದಲ್ಲಿ ಸಾವಿರಾರು ಜನರಿಗೆ ಕಂಠಪಾಠವಾಗಿದ್ದ ಕತೆಯಿದು- ತಬ್ರೀಸಿನಿಂದ ಇಸ್ತಾನ್‌ಬುಲ್‌ವರೆಗೆ, ಬೋಸ್ನಿಯಾದಿಂದ ತ್ರಾಬ್ಜಾನ್ವರೆಗೆ. ಜನರು ಈ ಕತೆಯನ್ನು ನೆನಪಿಸಿಕೊಂಡಾಗ ತಮ್ಮ ಬದುಕಿನಲ್ಲಿ ಅರ್ಥ ಕಂಡುಕೊಳ್ಳುತ್ತಿದ್ದರು. ಪಾಶ್ಚಿಮಾತ್ಯ ಜಗತ್ತಿನ ಜನರಿಗೆ ಈಡಿಪಸ್ ತನ್ನ ತಂದೆಯನ್ನು ಹತ್ಯೆ ಮಾಡುವ ಕತೆ, ಮ್ಯಾಕ್ಬೆಥ್‌ನ ಅಧಿಕಾರ ದಾಹ ಹಾಗೂ ದುರಂತ ಸಾವಿನ ಕತೆಗಳು ಯಾವ ರೀತಿ ಅವರ ಬದುಕಿನ ಅರ್ಥದ ಅಭಿವ್ಯಕ್ತಿಗಳಾಗಿಬಿಡುತ್ತವೆಯೋ ಅದೇ ರೀತಿ ಈ ಕತೆ ನಮ್ಮ ಜನತೆಗೆ ಆದರ್ಶಪ್ರಾಯವಾಗಿತ್ತು. ಆದರೆ ಈಗ ನಾವು ಪಶ್ಚಿಮದ ಮಾಯೆಗೆ ಸಿಲುಕಿ ನಮ್ಮ ಕತೆಗಳನ್ನು ಮರೆತುಬಿಟ್ಟಿದ್ದೇವೆ. ಎಲ್ಲಾ ಹಳೆಯ ಕತೆಗಳನ್ನೂ ನಮ್ಮ ಮಕ್ಕಳ ಪಠ್ಯಪುಸ್ತಕಗಳಿಂದ ತೆಗೆದುಹಾಕಲಾಗಿದೆ. ಇಡೀ ಇಸ್ತಾನ್‌ಬುಲ್‌ನಲ್ಲಿ‚ ಷಾ ನಾಮೆ ಮಾರುವ ಒಬ್ಬ ಪುಸ್ತಕ ವ್ಯಾಪಾರಿಯೂ ಇಲ್ಲ! ಅದಕ್ಕೇನು ವಿವರಣೆ ನೀಡಬಲ್ಲೆ?’’ ಎಂಬ ಮಾರ್ಮಿಕವಾದ ಪ್ರಶ್ನೆಗಳನ್ನು ಕೇಳುತ್ತಾನೆ.
ಸ್ವಯಿಚ್ಛೆಯಿಂದಲೇ ತಲೆಯ ಮೇಲೆ ಮುಸುಕು ಹಾಕಿಕೊಳ್ಳುವ ಶಿರವಸ್ತ್ರಧಾರಿಣಿ ಯುವತಿಯರ ಪಡೆಯ ನಾಯಕಿಯಾದ ಕ್ಯಾಡಿಫ್ಳನ್ನು ಕಕ್ಕುಲಾತಿ ಮತ್ತು ಮಾರ್ದವತೆಯಿಂದ ಅವರು ಚಿತ್ರಿಸಿರುವ ಬಗ್ಗೆ ಟರ್ಕಿಯ ಸೆಕ್ಯುಲರ್ವಾದಿಗಳು ಮುನಿಸಿಕೊಂಡಿದ್ದರು. ರಾಜಕೀಯ ಇಸ್ಲಾಮಿಗಳ ದೌರ್ಜನ್ಯಗಳಿಗೆ ಮಹಿಳೆಯರು ಹೇಗೆ ಬಲಿ ಪಶುಗಳಾಗುತ್ತಾರೆ ಎಂಬುದನ್ನು ಪಾಮುಕ್ ವರ್ಣಿಸಿರುವುದರ ಬಗ್ಗೆ ಅನೇಕರಿಗೆ ಅಸಮಾಧಾನವಿದೆ. ಪ್ರಜಾಪ್ರಭುತ್ವವನ್ನು ಕಾಪಾಡಲು, ರಾಷ್ಟ್ರದ ಪರಿಕಲ್ಪನೆಯನ್ನುಳಿಸಿಕೊಳ್ಳಲು ಅಮಾನುಷವಾದ ಸೈನ್ಯಾಡಳಿತಕ್ಕೆ ಮೊರೆ ಹೋದ ರಾಷ್ಟ್ರೀಯತಾವಾದಿಗಳಿಗೆ, ಪಾಮುಕ್ ಸೈನ್ಯದ ಕಾರ್ಯಾಚರಣೆಯ ದೌರ್ಜನ್ಯಗಳನ್ನು ಖಂಡಿಸಿದ್ದರ ಬಗ್ಗೆ ಆಕ್ರೋಶವಿದೆ. ಕುರ್ಡಿಷ್ ಸಮುದಾಯದವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಾರೆಂದು ಪಾಮುಕ್ರ ಮೇಲೆ ದ್ವೇಷ ಕಾರಿದವರಿದ್ದಾರೆ. ಆದರೆ ಇಂತಹ ಯಾವ ಕಟುವಾಸ್ತವಗಳನ್ನು ಚಿತ್ರಿಸಲೂ ಪಾಮುಕ್ ಹಿಂಜರಿಯುವುದಿಲ್ಲ. ಎಲ್ಲ ಇಸ್ಲಾಮೀಯರನ್ನೂ ಉಗ್ರಗಾಮಿಗಳೆಂದು ಖಂಡಿಸುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ. ಆದರೆ ಸೆಕ್ಯುಲರ್ವಾದಿಗಳ ಮೇಲಿರುವ ಇಸ್ಲಾಮೀಯರ ಆಕ್ಷೇಪವನ್ನೂ ಅವರು ಒಪ್ಪುವುದಿಲ್ಲ. ಹೀಗೆ ಕ್ಲೀಷೆಗಳನ್ನು ನಾಶ ಮಾಡುವುದೇ ತನ್ನ ಕಾದಂಬರಿಯ ಮೂಲ ಉದ್ದೇಶ ಎಂದು ಪಾಮುಕ್ ಅಭಿಪ್ರಾಯಪಡುತ್ತಾರೆ.
ಯಾವುದೇ ಪೂರ್ವಗ್ರಹಗಳಿಗೆ ಒಳಗಾಗದೆ ಗತಕಾಲವನ್ನು ಅದರ ಸಂಕೀರ್ಣತೆಯಲ್ಲೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಪಾಮುಕ್‌ನ ‘ಹಿಮ’ ಕಾದಂಬರಿ ವಿಶ್ವಸಾಹಿತ್ಯದ ಸ್ಥಾಪಿತ ಅರ್ಥಗಳನ್ನು ನಿರಚನಗೊಳಿಸಿ ಇತಿಹಾಸವನ್ನು ಮರುಓದಿಗೆ ಒಳಪಡಿಸುತ್ತದೆ. ಇಂತಹ ವಿಶಿಷ್ಟ ಕಾದಂಬರಿಯನ್ನು ಕನ್ನಡಕ್ಕೆ ತರಲೇಬೇಕೆಂದು ನಾನು ತೀರ್ಮಾನಿಸಿದ್ದು ಒರ್ಹಾನ್ ಪಾಮುಕ್ ಬೆಂಗಳೂರಿಗೆ ಬಂದಿದ್ದ ಗಳಿಗೆಯಲ್ಲಿ. ತಮ್ಮ ಕಾದಂಬರಿಗಳು ಕನ್ನಡ ಸೇರಿದಂತೆ ಭಾರತದ ಭಾಷೆಗಳಿಗೆ ಅನುವಾದಗೊಂಡರೆ ಎಷ್ಟು ಚೆನ್ನ ಎಂದು ಅವರು ಅಂದು ಆಸೆ ವ್ಯಕ್ತಪಡಿಸಿದ್ದರು. ಅದನ್ನು ಕೇಳುತ್ತಿದ್ದಂತೆ ನಾನು ಪುಳಕಿತಳಾಗಿದ್ದೆ. ಕಾದಂಬರಿಯ ಪಾತ್ರಗಳು ನನ್ನೊಡನೆ ಕನ್ನಡದಲ್ಲಿ ಮಾತನಾಡತೊಡಗಿದ್ದವು. ಭಾರತದ ಸಾಮಾಜಿಕ ವ್ಯವಸ್ಥೆಗೆ ಬಹಳ ಪ್ರಸ್ತುತವೆನಿಸುವ ಕಾದಂಬರಿ ಇದು. ಅಲ್ಲದೇ ಜೆಂಡರ್ಡ್ ಸಬಾಲ್ಟರ್ನ್‌ಗೆ (ತೃತೀಯ ಜಗತ್ತಿನ ದಮನಿತ ಮಹಿಳೆ) ಸಂಬಂಧಿಸಿ ಸಾಂಪ್ರದಾಯಿಕ ವ್ಯವಸ್ಥೆಯೊಂದು ಆಧುನಿಕತೆಯನ್ನು ಒಪ್ಪಿಕೊಳ್ಳುವ ಸಂಕ್ರಮಣ ಕಾಲದಲ್ಲಿ, ಮಹಿಳಾ ವಿಮೋಚನೆಯ ಪ್ರಶ್ನೆ ಯಾವ ರೀತಿಯ ರೂಪಾಂತರಗಳನ್ನು ಹೊಂದುತ್ತದೆ, ಅಲ್ಲಿ ನಮ್ಮನ್ನು ಕಂಗೆಡಿಸುವಂಥ ಯಾವ ಬಗೆಯ ವಿಲಕ್ಷ ಣ ಪರಿಸ್ಥಿತಿಗಳು ಉಂಟಾಗುತ್ತವೆ ಎನ್ನುವುದನ್ನು ಅದ್ಭುತವಾದ ಕಥನಗಾರಿಕೆಯ ಮೂಲಕ ನಮ್ಮನ್ನು ಬೆಚ್ಚಿ ಬೀಳಿಸುತ್ತ ಮನವರಿಕೆ ಮಾಡಿಕೊಡುವ ‘ಸ್ನೋ’ ಕಾದಂಬರಿ ಕನ್ನಡದಲ್ಲಿ ‘ಹಿಮ’ವಾಗಿ ಮೈದಾಳಿದರೆ ಎಷ್ಟು ಸೊಗಸಾಗಿರುತ್ತದೆ ಎಂಬ ಕನಸಿನಲ್ಲೇ ನಾನು ತೇಲತೊಡಗಿದೆ. ಪರಿಣಾಮವಾಗಿ 600 ಪುಟಗಳ ಕಾದಂಬರಿ ‘ಹಿಮ’ ಎನ್ನುವ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಬಂತು. ಪಾಮುಕ್‌ರ ಸಾಹಿತ್ಯ ಸೃಷ್ಟಿ ವಿಪುಲವಾಗಿದೆ: ದಿ ವೈಟ್ ಕ್ಯಾಸಲ್, ದಿ ಬ್ಲ್ಯಾಕ್ ಬುಕ್, ದಿ ನ್ಯೂ ಲೈಫ್, ಮೈ ನೇಮ್ ಈಸ್ ರೆಡ್, ಸ್ನೋ, ದಿ ಮ್ಯೂಸಿಯಂ ಆಫ್ ಇನ್ನೋಸೆನ್ಸ್, ದಿ ಸೈಲೆಂಟ್ ಹೌಸ್, ಎ ಸ್ಪ್ರೇಂಜ್ನೆಸ್ ಇನ್ ಮೈ ಮೈಂಡ್ ಕಾದಂಬರಿಗಳು. 2006ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಪಾಮುಕ್‌ರ ಕೃತಿಗಳು 61 ಭಾಷೆಗಳಿಗೆ ಅನುವಾದಗೊಂಡು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿವೆ. ಕನ್ನಡದಲ್ಲಿ ಇವರ ಅನುವಾದಗಳು ಇಲ್ಲದ ಕೊರತೆಯನ್ನು ‘ಹಿಮ’ದ ಅನುವಾದದ ಮೂಲಕ ನೀಗಿಸಿದ, ವಿಶ್ವ ಸಾಹಿತ್ಯದ ಅಗ್ರಪಂಕ್ತಿಯ ಕಾದಂಬರಿಯೊಂದನ್ನು ನನ್ನ ಮಾತೃಭಾಷೆಯ ಓದುಗರಿಗೆ ಓದಲು ಅನುವು ಮಾಡಿಕೊಟ್ಟ ಸಾರ್ಥಕತೆ ನನ್ನದು.
(ಲೇಖಕರು ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ, ಅನುವಾದಕಿ, ಗಾಯಕಿ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top