ನಮ್ಮ ಆರೋಗ್ಯ ನಮ್ಮ ಕೈಗಳಲ್ಲಿ – ಮುದ್ರೆಗಳು ಯೋಗತಂತ್ರ ಪರಂಪರೆಯ ಭಂಡಾರ

– ಎಚ್‌ ಎಸ್‌. ಶಿವಪ್ರಕಾಶ್‌.

ಯೋಗದಲ್ಲಿ ಪಂಚಭೂತಗಳ ಮಹತ್ವಪೂರ್ಣತೆ ಅಪಾರವಾದುದು. ಕುಂಡಲಿನಿ ಯೋಗ, ಸ್ವರ ಯೋಗ, ಭೂತ ಶುಧ್ಧಿಯೋಗ ಇತ್ಯಾದಿಗಳಿಗೆ ಪೃಥಿವ್ಯಾದಿ ಪಂಚಭೂತಗಳೇ ಬುನಾದಿ. ಯೋಗಾಸನಗಳ ಆಚರಣೆಯೂ ಶರೀರರದ ಹಲವು ಅಂಗಗಳ ಮೇಲೆ ಒತ್ತಡ ಹಾಕಿ ಸಂಬಂಧಿತ ಚಕ್ರಗಳಿಗೆ ಹೊಂದಿಕೊಂಡ ಭೂತತತ್ತ್ವಗಳನ್ನು ಪ್ರಭಾವಿಸುತ್ತದೆ. ಪ್ರಾಣಾಯಾಮ ಮುಂತಾದ ಕ್ರಿಯೆಗಳು ಮುದ್ರಾಬಂಧಗಳ ಜೊತೆಗೆ ಆಚರಣೆಯಾಗುವುದರಿಂದ ಅವುಗಳಲ್ಲೂ ಪಂಚಭೂತಗಳ ಭೂಮಿಕೆಯಿದೆ.
ಶರೀರ ಯೋಗದ ಬಹುಮಟ್ಟಿಗೆ ಉದಾಸೀನಕ್ಕೆ ಒಳಗಾಗಿರುವ ಮುದ್ರಾಯೋಗದ ಚೌಕಟ್ಟಿನಲ್ಲಿ ಪಂಚತತ್ತ್ವಗಳನ್ನು ಅರ್ಥ ಮಾಡಿಕೊಳ್ಳೋಣ. ಹೇಗೆ ಶರೀರದ ಬೇರೆ ಬೇರೆ ಭಾಗಗಳು ಬೇರೆಬೇರೆ ತತ್ವಗಳ ಜೊತೆಗೆ ಗುರುತಿಸಲ್ಪಡುವುವೋ ಅದೇ ರೀತಿ ನಮ್ಮ ಕೈಯ ಐದು ಬೆರಳುಗಳು ಐದು ತತ್ವಗಳ ಕುರುಹುಗಳಾಗಿವೆ. ನಮ್ಮ ಉಂಗುರದ ಬೆರಳು ಪೃಥ್ವೀ ತತ್ವದ ಬೆರಳು. ಕಿರುಬೆರಳು ಜಲ ತತ್ವ. ಹೆಬ್ಬೆರಳು ಅಗ್ನಿ. ತೋರು ಬೆರಳು ವಾಯು ಮತ್ತು ನಡುಬೆರಳು ಆಕಾಶ.
ಈ ಐದು ಬೆರಳುಗಳನ್ನು ಬೇರೆಬೇರೆ ವಿಧಗಳಲ್ಲಿ ಕೂಡಿಸಿ ಜೋಡಿಸಿ ಮಡಿಚಿ ನೀಡಿ ಹಲವು ಮದ್ರೆಗಳನ್ನು ನಾವು ರಚಿಸಬಹುದು. ಪ್ರತಿಮುದ್ರೆಯೂ ಬೇರೆ ಬೇರೆ ವಿಧದಲ್ಲಿ ನಮ್ಮ ತನುಮನಗಳನ್ನು ಪ್ರಭಾವಿಸುತ್ತವೆ. ಯಾಕೆಂದರೆ ಅವು ನಮ್ಮೊಡಲಿನೊಳಗಣ ಪಂಚತತ್ವಗಳ ವಿವಿಧ ಸಂಯೋಜನೆಗಳಾಗುತ್ತವೆ.
ನಾವು ಸಾಮಾನ್ಯ ಸಂದರ್ಭಗಳಲ್ಲಿ ಜನರ ನಡವಳಿಕೆಯನ್ನು ನಿಗಾ ಮಾಡುತ್ತಾ ಹೋದಾಗ ಅವರು ಮಖ ಮುಂತಾದ ಅಂಗಗಳಿಂದ ವಿವಿಧ ಭಂಗಿಗಳನ್ನು, ವಿನ್ಯಾಸಗಳನ್ನು ಧಾರಣೆ ಮಾಡುವುದು ಕಾಣುತ್ತದೆ. ಉದಾಹರಣೆಗೆ ಸಿಟ್ಟಾದಾಗ ಹುಬ್ಬು ಗಂಟಿಕ್ಕಿಕೊಳ್ಳುತ್ತಾರೆ. ನಿರಾಶರಾದಾಗ ಇಳಿಮುಖವಾಗುತ್ತದೆ. ಆಶ್ಚರ್ಯ ಮನದಲ್ಲಿ ಮೂಡಿದಾಗ ಕಣ್ಣು ಅಗಲವಾಗುತ್ತವೆ. ಹಟ ಮಾಡುವಾಗ ಮುಷ್ಟಿ ಬಿಗಿಯತ್ತದೆ. ವಿಷಯ ಹಿಡಿಸದೆ ಹೋದಾಗ ಮೂಗು ಮುರಿಯುತ್ತಾರೆ.
ಹೀಗೆ ಸುಲಭವಾಗಿ ಕಣ್ಣಿಗೆ ಕಾಣುವ ಅಂಗಗಳಲ್ಲಿ ಕಾಣುವ ಪರಿವರ್ತನೆಗಳು ಅಷ್ಟು ಗೋಚರವಾಗದ ಹೆಗಲು, ತೊಡೆ, ಮಂಡಿ ಮುಂತಾದ ಭಾಗಗಳಲ್ಲೂ ಉಂಟಾಗುತ್ತವೆ. ತೀರಾ ದಿಗಿಲಾದಾಗ ಮಂಡಿಗಳು ಕುಸಿಯತೊಡಗುತ್ತವೆ. ಅಸಹ್ಯವಾದಾಗ ಹೊಟ್ಟೆ ಕಿವುಚಿದಂತಾಗುತ್ತದೆ.
ನಮ್ಮ ಕೈಯಿ ನಮ್ಮ ಮನಸಿನ ಭಾವಗಳಿಗೆ ಕಣ್ಣಿನಷ್ಟೇ ಬೇಗ ಪ್ರತಿಸ್ಪಂದಿಸುತ್ತದೆ. ಕಣ್ಣನ್ನು ಪ್ರಕಟ ಮನಸ್ಸೆಂದು ಕರೆಯುತ್ತಾರೆ. ಹಾಗೆಯೇ ಕೈಗಳನ್ನು ಮನಸ್ಸಿನ ಸಂದೇಶವಾಹಕರೆನ್ನಬಹುದು. ಉದಾಹರಣೆಗೆ ಸದಾ ಚಿಂತಾಕ್ರಾಂತರಾದವರು ಕೈಗಳನ್ನು ಕಿವುಚುವುದು, ಸದಾ ಬೆರಳುಗಳನ್ನು ಆಡಿಸುವುದು ಇತ್ಯಾದಿಯಾಗಿ ಮಾಡುತ್ತಿರುತ್ತಾರೆ. ಬಿಗಿಮನದವರ ಬೆರಳುಗಳೂ ಬಿಗಿಯಾಗಿರುತ್ತವೆ. ಆಪತ್ತು ಎದುರಾದಾಗ ಬೆರಳು ತಾವೇ ಮಡಿಚಿಕೊಳ್ಳುತ್ತವೆ. ಯಾರನ್ನಾದರೂ ದೂರುವಾಗ ದೂಷಿಸುವಾಗ ತೋರುಬೆರಳು ಬಹಳ ಸಕ್ರಿಯವಾಗುತ್ತದೆ. ಮನ ನಿಸೂರಾದಾಗ ಕೈ ಮತ್ತು ಬೆರಳುಗಳು ಸಡಿಲವಾಗುತ್ತವೆ.
ತಂತ್ರ-ಯೋಗಗಳ ಮೂಲಭೂತ ತತ್ವ ‘ಸರ್ವಂ ಸರ್ವಾತ್ಮಕಂ’ ಅರ್ಥಾತ್‌ ಎಲ್ಲವೂ ಎಲ್ಲವನ್ನೂ ಒಳಗೊಂಡಿದೆ. ಇದನ್ನೇ ಬ್ರಹ್ಮಾಂಡ-ಪಿಂಡಾಂಡಗಳ ಸಮೀಕರಣವೆನ್ನುವುದು. ಹೊರಜಗತ್ತಿನಲ್ಲಿ ಪಂಚಭೂತಗಳಿರುವಂತೆ ಒಡಲಿನೊಳಗೂ ಇವೆ. ಈ ಎರಡೂ ಕೂಡಿದಾಗಲೇ ಪ್ರಪಂಚ ರಚನೆಯಾಗುತ್ತದೆ. ಬೃಹತ್ತಿನ ರಚನೆ ಅಣುವಿಲ್ಲೂ ಇರುತ್ತದೆ. ಈ ತತ್ವದನುಸಾರ ನಮ್ಮ ಎರಡೂ ಅಂಗೈ ಮತ್ತು ಬೆರಳುಗಳು ನಮ್ಮ ಇಡೀ ದೇಹದ ಕಿರುರೂಪವಾಗಿ ಕಂಡುಬರುತ್ತವೆ. ಅಕ್ಯೂಪ್ರೆಶರ್‌ ಇಲಾಜಿನಲ್ಲಿ ಈ ಆಧಾರದ ಮೇಲೆ ರೋಗ ನಿವಾರಣೆಯಾಗುವುದು.
ಉದಾಹರಣೆಗೆ: ನಮ್ಮ ಮುಖದ ವಿವಿಧ ಭಾಗಗಳ ಕಿರು ಅವಳಿಗಳು ನಮ್ಮ ಹೆಬ್ಬೆಟ್ಟಿನ ಮೇಲುಭಾಗದಲ್ಲಿದ್ದು ಅವನ್ನು ಒತ್ತುವ ಮೂಲಕ ಮುಖಪ್ರದೇಶದ ತೊಂದರೆಗಳನ್ನು ಪರಿಹರಿಸಬಹುದು.
ಹೇಗೆ ಬೇರೆ ಬೇರೆ ಭಂಗಿಗಳು ಮತ್ತು ಹಸ್ತಮುದ್ರೆಗಳು ವಿವಿಧ ಮನೋಭಾವಗಳ ಪರಿಣಾಮಗಳಾಗಿವೆಯೋ ಅದೇ ರೀತಿ ಅವನ್ನು ಮನೋಭಾವಗಳ ಕಾರಣಗಳನ್ನಾಗಿ ಮಾಡಬಹುದು. ಇದು ಮುದ್ರಾಯೋಗ ಮತ್ತು ಚಿಕಿತ್ಸೆಗಳ ಮೂಲ ವಿಚಾರ.
ಯಾವ ವ್ಯಾಪಾರಗಳು ಅಪ್ರಜ್ಞಾಪೂರ್ವಕ ನಡೆಯುತ್ತವೋ ಅವನ್ನು ಪ್ರಜ್ಞಾಪೂರ್ಪಕ ನೆರವೇರಿಸುವುದು ಮತ್ತು ನಿಶ್ಚಿತ ಪರಿಣಾಮಗಳನ್ನು ತಲುಪುವುದು ಯೋಗತಂತ್ರಗಳ ಕಾರ್ಯವಿಧಾನ. ಅನಿಯಂತ್ರಿತ ಮನದ ಅಧೀನವಾಗಿ ಹುಚ್ಚುಹುಚ್ಚಾಗಿ ಚಲನವಲನ ಮಾಡುತ್ತಿರುವ ಬೆರಳುಗಳನ್ನು ನಿರ್ದಿಷ್ಟವಾಗಿ ಹಿಡಿದಿಟ್ಟರೆ ಆ ಮಟ್ಟಿಗೆ ಮನಸು ಹತೋಟಿಗೆ ಬರುತ್ತದೆ. ಅಲ್ಲದೆ ಆ ನಿರ್ದಿಷ್ಟ ಹಿಡಿತ ಅಂದರೆ ಮುದ್ರೆಯಿಂದ ನಿರ್ದಿಷ್ಟವಾದ ಸ್ವಾಸ್ಥ್ಯದ ಲಾಭಗಳೂ ಉಂಟಾಗುತ್ತವೆ.
ಬಹಳ ವಿಸ್ತೃತವೂ ಸಂಕೀರ್ಣವೂ ಆದರೂ ಕಲಿಯಲು ಆಚರಿಸಲು ಸುಲಭವಾದ ಹಸ್ತಮುದ್ರೆಗಳಿಗೆ ಒಂದೆರಡು ಉದಾಹರಣೆಗಳನ್ನು ನೋಡೋಣ. ನಮ್ಮ ಹೆಬ್ಬೆಟ್ಟುಗಳೆರಡನ್ನೂ ಒಂದಕ್ಕೊಂದು ಒತ್ತಿಹಿಡಿದು 5 ನಿಮಿಷ ಹಾಗೇ ಇದ್ದರೆ ಶರೀರ ಬೆಚ್ಚಗಾಗಿ ಮನಸ್ಸು ಚುರುಕಾಗುತ್ತದೆ. ಇದು ಅಗ್ನಿತತ್ವದ ಪ್ರಭಾವ. ಮನಸ್ಸು ಚಂಚಲವಾದಾಗ ನಡುಬೆರಳುಗಳನ್ನು ಜೊತೆಯಾಗಿ ಹಿಡಿದು ಒತ್ತಿದರೆ ಮನಸ್ಸು ಶಾಂತವಾಗುತ್ತದೆ- ಇದು ಆಕಾಶ ತತ್ವದ ಪರಿಣಾಮವಾಗಿ. ಹೆಬ್ಬೆರಳುಗಳ ಬುಡಗಳಿಗೆ ತೋರುಬೆರಳ ತುದಿಯನ್ನು ಒತ್ತಿಹಿಡಿದರೆ ನಮ್ಮ ಉಸಿರಾಟವು ಆಳವಾಗಿ ಮನಸ್ಸು ನೆಮ್ಮದಿ ಹೊಂದುತ್ತದೆ. ಜ್ಞಾನ ಮುದ್ರಾ ಎಂಬುದೊಂದು ಇದೆ. ಇದು ಪ್ರಸಿದ್ಧ. ಯೌಗಿಕ ಸಾಧನೆ ಮಾಡುವವರು, ಪದ್ಮಾಸನ ಹಾಕಿ ಧ್ಯಾನಕ್ಕೆ ಕುಳಿತಾಗ ಈ ಜ್ಞಾನಮುದ್ರೆಯನ್ನು ಹಾಕುತ್ತಾರೆ. ಪ್ರಾಚೀನ ಸಂತರ ಮೂರ್ತಿಗಳಲ್ಲಿ ಈ ಜ್ಞಾನಮುದ್ರೆಯನ್ನು ಕಾಣಬಹುದು. ಇದನ್ನು ಮಾಡುವುದು ಸುಲಭ- ಹೆಬ್ಬೆರಳಿನ ತುದಿ ಹಾಗೂ ತೋರುಬೆರಳಿನ ತುದಿಗಳನ್ನು ಮುಟ್ಟಿ ಹಿಡಿದುಕೊಳ್ಳುವುದು. ಇತರ ಮೂರು ಬೆರಳುಗಳು ಹರಡಿರಬೇಕು. ಯೋಗಿಗಳು ಇದನ್ನು ಮಾಡುವುದಕ್ಕೆ ಕಾರಣವೆಂದರೆ ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನೆನಪನ್ನು ಉದ್ದೀಪಿಸುತ್ತದೆ. ವಿದ್ಯಾರ್ಥಿಗಳಿಗೆ, ಅಧ್ಯಯನ ಮಾಡುತ್ತಿರುವವರಿಗೆ ಇದು ಒಳ್ಳೆಯದು. ಕೋಪ, ಖಿನ್ನತೆಗಳಿಗೆ ಒಳಗಾದಾಗ ಇದನ್ನು ಮಾಡಿದರೆ ಮನಸ್ಸು ತಂಪಾಗುತ್ತದೆ. ಎರಡೂ ಕೈಗಳ ಹೆಬ್ಬೆರಳಿನ ತುದಿಯನ್ನು ಅದೇ ಕೈಯ ಉಂಗುರ ಬೆರಳಿನ ತುದಿಗೆ ತಾಕಿಸಿ ಹಿಡಿದುಕೊಳ್ಳುವುದಕ್ಕೆ ಪೃಥ್ವಿ ಮುದ್ರೆ ಎಂದು ಹೆಸರು. ಮನಸ್ಸನ್ನೂ ಬುದ್ಧಿಯನ್ನೂ ದೇಹವನ್ನೂ ಏಕಕಾಲಕ್ಕೆ ಚುರುಕಾಗಿಡುವ ಮುದ್ರೆಯಿದು.
ಇವು ಕೆಲವು ಸರಳ ಮುದ್ರೆಗಳು ಮಾತ್ರ. ಆದರೆ ಮುದ್ರೆಗಳ ಒಟ್ಟು ಸಂಖ್ಯೆ ಬಹಳ ದೊಡ್ಢದು. ನೃತ್ಯದಲ್ಲಿ ಅವು ಭಾವಾಭಿವ್ಯಕ್ತಿಯ ಸಾಧನಗಳು. ಯೋಗದಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ ರೋಗಗಳಿಗೆ ಪರಿಹಾರಗಳು. ಮಹಾನ್‌ ಯೋಗಿಗಳ ಕುರಿತ ಚಿತ್ರಗಳನ್ನು ಮೂರ್ತಿಗಳನ್ನು ನೋಡಿದಾಗ ಅವರು ವಿವಿಧ ಮುದ್ರೆಗಳನ್ನು ಧರಿಸಿರುವುದು ಕಾಣುತ್ತದೆ. ಉದಾಹರಣೆಗೆ ಬುದ್ಧ- ಬೋಧಿಸತ್ವರ ಮೂರ್ತಿಗಳನ್ನು ನೋಡಬಹುದು. ಬುದ್ಧ ಮೂರ್ತಿಗಳಲ್ಲಿ ಎರಡು ಮುಖ್ಯ ಮುದ್ರೆಗಳು ಕಂಡುಬರುತ್ತವೆ. ಮೊದಲನೆಯದು ಚಿನ್ಮುದ್ರೆ. ಹೆಬ್ಬೆರಳು ಮತ್ತು ತೋರುಬೆರಳಿನ ತುದಿಗಳನ್ನು ಸೇರಿಸಲಾಗಿದೆ. ಹೆಬ್ಬೆರಳು ಅಗ್ನಿಯ ಸಂಕೇತವೂ ತೋರುಬೆರಳು ವಾಯುತತ್ವದ ಕುರುಹೂ ಆಗಿದೆ. ಇದರಿಂದ ಮನಸ್ಸು ಶಾಂತವಾಗಿ ಅಂತರ್ಮುಖತೆಗೆ ದಾರಿಯಾಗಿ ಧ್ಯಾನದ ದ್ವಾರಗಳನ್ನು ತೆರೆಯುತ್ತದೆ.
ಶಿವನ ಗುರುಸ್ವರೂಪನಾದ ದಕ್ಷಿಣಾ ಮೂರ್ತಿಯೂ ಚಿನ್ಮುದ್ರೆಯನ್ನು ಧರಿಸಿದ್ದಾನೆ. ಅವನ ಕಣ್ಣುಗಳು ಅರ್ಧನಿಮೀಲಿತ ಮುದ್ರೆಯಲ್ಲಿದ್ದು ಜಾಗೃತ್‌ ಮತ್ತು ಸ್ವಪ್ನಗಳ ಮಧ್ಯಸ್ಥಿತಿಯನ್ನು ಅಂದರೆ ಅನಿಮೇಷ ಸಮಾಧಿಯನ್ನು ನಿರ್ದೇಶಿಸುತ್ತದೆ. ಬುದ್ಧನ ಇನ್ನೊಂದು ಮುದ್ರೆ ಭೂಮಿಸ್ಪರ್ಶ ಮುದ್ರೆ. ಧ್ಯಾನದಲ್ಲಿರುವಾಗ ಶರೀರದಲ್ಲಿ ಶಕ್ತಿಯ ಪ್ರಬಲ ಸಂಚಾರವಾಗಿ ಶರೀರ ಅನಿಯಂತ್ರಿತವಾಗಿ ಅಲುಗಾಡತೊಡಗುತ್ತದೆ. ಆದರೆ ತೋರುಬೆರಳನ್ನು ನೆಲಕ್ಕೆ ಸೋಕಿಸಿ ಇಟ್ಟುಕೊಂಡರೆ ಶರೀರ ಮನಸುಗಳೆರಡೂ ಸ್ಥಿರವಾಗುತ್ತವೆ.
ಹಸ್ತಮುದ್ರೆಗಳು ನಮ್ಮ ಋುಷಿಮುನಿಗಳ ಬಳುವಳಿ. ಧ್ಯಾನಕ್ಕೆ ಅಡ್ಡಿಗಳು ಬಂದಾಗ ಆಯಾ ಅಡ್ಡಿಗಳನ್ನು ದಾಟಲು ಅವರು ಮುದ್ರೆಗಳನ್ನು ಕಂಡುಹಿಡಿದರು. ತನ್ಮೂಲಕ ತಮ್ಮ ಉಪಾಧಿಗಳನ್ನು ನಿವಾರಿಸಿಕೊಂಡರು. ಋುಷಿಮುನಿಗಳಲ್ಲದ ನಾವೂ ಆ ಮುದ್ರೆಗಳ ಮೂಲಕ ನಮ್ಮ ನಮ್ಮ ಮೈಮನದ ರೋಗಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಮುದ್ರೆಗಳನ್ನು ಅಭ್ಯಸಿಸುವುದು ಯೋಗಾಸನ ಮತ್ತು ಪ್ರಾಣಾಯಾಮದಷ್ಟು ಕಠಿಣವಲ್ಲ. ರೋಗ ಚಿಕಿತ್ಸೆ ಮತ್ತು ಮಾನಸಿಕ ಮತ್ತು ಆಧ್ಯಾತ್ಮಿಕ ಚಿಕಿತ್ಸೆಗಳಿಗಾಗಿ ನಮ್ಮ ಯೋಗತಂತ್ರ ಪರಂಪರೆ ನೀಡಿರುವ ಅಮೂಲ್ಯ ಕೊಡುಗೆ ಹಸ್ತಮುದ್ರೆಗಳ ಭಂಡಾರ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top