ಸಮರ್ಪಕ ಜಾರಿ ಅಗತ್ಯ – ಹಲ್ಲೆ ತಪ್ಪಿಸಲು ಕೇಂದ್ರ, ರಾಜ್ಯದಿಂದ ಸುಗ್ರೀವಾಜ್ಞೆ

ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ತೊಡಗಿಸಿಕೊಂಡಿದ್ದಾರೆ. ಆದರೆ, ಕರ್ನಾಟಕವೂ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಈ ‘ಕೊರೊನಾ ವಾರಿಯರ್ಸ್’ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಆದರೆ, ಇಂಥ ಸಂದರ್ಭವನ್ನು ಎದುರಿಸುವ ಸಮರ್ಪಕ ಕಾನೂನು ಬಲ ನಮ್ಮ ಸರಕಾರಗಳಿಗೆ ಇರಲಿಲ್ಲ. ಆ ಕೊರತೆಯನ್ನು ಕೇಂದ್ರ ಮತ್ತು ಕರ್ನಾಟಕ ಸರಕಾರಗಳು ಸುಗ್ರೀವಾಜ್ಞೆಗಳ ಮೂಲಕ ತುಂಬಿಕೊಳ್ಳುತ್ತಿವೆ. ಕೊರೊನಾ ಸೇನಾನಿಗಳ ಮೇಲೆ ಹಲ್ಲೆ ಮಾಡುವವರನ್ನು ಹೆಡೆಮುರಿ ಕಟ್ಟುವ ಕೆಲಸಕ್ಕೆ ಈಗ ಬಲ ಬರಲಿದೆ.
ಬುಧವಾರ ‘ಕರ್ನಾಟಕ ಸಾಂಕ್ರಾಮಿಕ ರೋಗ ಸುಗ್ರೀವಾಜ್ಞೆ-2020’ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರೆ, ಕೇಂದ್ರ ಸಚಿವ ಸಂಪುಟವು ಕೇಂದ್ರ ಸುಗ್ರೀವಾಜ್ಞೆಗೆ ತನ್ನ ಒಪ್ಪಿಗೆ ನೀಡಿದೆ. ಈ ಎರಡೂ ಸುಗ್ರೀವಾಜ್ಞೆಗಳ ಉದ್ದೇಶವೊಂದೆ, ಈ ಸಂಕಟದ ಕಾಲದಲ್ಲಿ ಕೊರೊನಾ ಸೇನಾನಿಗಳ ವಿರುದ್ಧ ನಡೆಯುತ್ತಿರುವ ಹಿಂಸೆ, ಹಲ್ಲೆಯನ್ನು ತಡೆಯುವುದಾಗಿದೆ. ಹಾಗಾಗಿ, ಸರಕಾರಗಳು ತೆಗೆದುಕೊಂಡಿರುವ ಈ ತ್ವರಿತ ಕ್ರಮಗಳನ್ನು ಸ್ವಾಗತಿಸೋಣ.
ಕೇಂದ್ರ ಸರಕಾರದ ಸುಗ್ರೀವಾಜ್ಞೆಯ ಪ್ರಕಾರ ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆಗೆ 7 ವರ್ಷ ಜೈಲು, 5 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಈ ಅಪರಾಧ ಎಸಗಿದವರಿಗೆ ಜಾಮೀನು ಸಿಗುವುದಿಲ್ಲ. ಸಿಬ್ಬಂದಿಗೆ, ಆಸ್ತಿಪಾಸ್ತಿಗೆ ಆದ ನಷ್ಟದ ದುಪ್ಪಟ್ಟು ಪರಿಹಾರ ಹಲ್ಲೆಕೋರರಿಂದಲೇ ವಸೂಲಿ ಮಾಡುವ ಅವಕಾಶ ದೊರೆಯಲಿದೆ. ಅದೇ ರೀತಿ, ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಯ ಅನ್ವಯ, 3 ವರ್ಷ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ ಮತ್ತು ಪ್ರಚೋದನೆ ಇಲ್ಲವೇ ಸಾರ್ವಜನಿಕ/ಖಾಸಗಿ ಆಸ್ತಿಗೆ ಹಾನಿ ಉಂಟು ಮಾಡಿದರೆ ಅಂಥ ವ್ಯಕ್ತಿಗಳಿಗೆ ಕನಿಷ್ಠ 6 ತಿಂಗಳಿಂದ 3 ವರ್ಷಗಳವರೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ. ಕೇಂದ್ರ ಸರಕಾರ ರೂಪಿಸಿರುವ ಕಾನೂನಿಗೆ ಹೋಲಿಸಿದರೆ ರಾಜ್ಯ ಸರಕಾರ ರೂಪಿಸಿರುವ ಕಾನೂನು ದುರ್ಬಲವಾಗಿ ಕಾಣಿಸುತ್ತದೆ.
ಕಾಯಿದೆಗಳ ಬಲಾಬಲದ ವಿಚಾರ ಹೇಗೂ ಇರಲಿ, ಕೊರೊನಾ ವಾರಿಯರ್ಸ್ ಮೇಲಿನ ನಿರಂತರ ಹಲ್ಲೆತಡೆಯಲು ಒಂದು ಉಪಕ್ರಮ ಆಗಬೇಕಿತ್ತ, ಅದಾಗಿದೆ. ಆದರೆ, ಕಾಯಿದೆ ರೂಪಿಸಿದರೆ ಸಾಲದು, ಅದು ಸಮರ್ಪಕವಾಗಿ ಅನುಷ್ಠಾಕ್ಕೆ ಬರುವ ಹಾಗೆ ನೊಡಿಕೊಳ್ಳುವ ಹೊಣೆಗಾರಿಕೆಯೂ ಸರಕಾರಗಳ ಮೇಲಿದೆ. ನಮ್ಮ ದೇಶದಲ್ಲಿ ಕಾಯಿದೆ, ಕಾನೂನುಗಳಿಗೇನೂ ಬರವಿಲ್ಲ. ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನುಗಳ ಬಲದಿಂದ ಕೊರೊನಾ ವಾರಿಯರ್ಸ್ ಮೇಲಿನ ಹಲ್ಲೆಗೆ ಕಾರಣವಾದವರನ್ನು ಉಗ್ರವಾಗಿ ಶಿಕ್ಷಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸುಗ್ರೀವಾಜ್ಞೆಯ ಮಾರ್ಗಕ್ಕೆ ಮೊರೆ ಹೋಗಲಾಗಿದೆ. ಯಾಕೆಂದರೆ, ನಮ್ಮ ದೇಶದಲ್ಲಿ ಬ್ರಿಟಿಷ್ರ ಕಾಲದಲ್ಲಿ ಅಂದರೆ, 1897ರ ಸಾಂಕ್ರಾಮಿಕ ರೋಗ ಕಾಯಿದೆ ಈಗಲೂ ಜಾರಿಯಲ್ಲಿದೆ. 1955ರಿಂದ 1968ರ ನಡುವೆ ಈ ಕಾಯಿದೆಗೆ ಒಂದಿಷ್ಟು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆಯಷ್ಟೇ. ಕೊರೊನಾ ವೈರಸ್ ಸಾಂಕ್ರಾಮಿಕವಾಗುವರೆಗೂ ಈ ಕಾಯಿದೆಯನ್ನು ಮರುಪರಿಶೀಲಿಸುವ ಅಗತ್ಯವೇ ಬಿದ್ದಿರಲಿಲ್ಲ. ಹಾಗಾಗಿ, ಈಗ ಜಾರಿಗೆ ತಂದಿರುವ ಸುಗ್ರೀವಾಜ್ಞೆಗಳನ್ನು ಸರಕಾರಗಳು ಶೀಘ್ರವೇ ಕಾಯಿದೆಗಳಾಗಿ ಬದಲಿಸಬೇಕು.
ಈ ಸುಗ್ರೀವಾಜ್ಞೆಗಳ ಭಯದಿಂದಲಾದರೂ ನಮ್ಮ ಜನರು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸುವುದನ್ನು ನಿಲ್ಲಿಸುವಂತಾಗಲಿ. ಸುಗ್ರೀವಾಜ್ಞೆಗಳ ಬಗ್ಗೆ ಜನರಲ್ಲಿ ಭಯ ಮೂಡಬೇಕಾದರೆ, ಅದರ ಅನುಷ್ಠಾನದಲ್ಲಿ ಒಂಚೂರು ಲೋಪವಾಗಬಾರದು. ಹಾಗೊಂದು ವೇಳೆ, ಲೋಪಗಳೇನಾದರೂ ಕಂಡಬಂದರೆ ಸುಗ್ರೀವಾಜ್ಞೆಯ ಮೂಲ ಉದ್ದೇಶವೇ ಹಾಳಾಗಲಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರ ಆತ್ಮವಿಶ್ವಾಸಕ್ಕೆ ಪೆಟ್ಟು ಬೀಳಲಿದೆ ಮತ್ತು ನಾಗರಿಕ ಸಮಾಜವಾಗಿ ನಾವು ವೈಫಲ್ಯವಾಗಿರುವುದನ್ನು ಅದು ತೋರಿಸುತ್ತದೆ. ಇದಕ್ಕೆ ಅವಕಾಶ ಕೊಡುವುದು ಬೇಡ. ಸರಕಾರದ ನಿರ್ಧಾರದೊಂದಿಗೆ ಹೆಜ್ಜೆ ಹಾಕಿ, ಒಗ್ಗಟ್ಟಿನ ಮೂಲಕ ನಾವು ವಿಪತ್ತನ್ನು ಎದುರಿಸೋಣ ಮತ್ತು ಗೆಲ್ಲೋಣ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top