ಬೆಳೆಯಲು ಶತಮಾನದ ಅವಕಾಶ – ಪರಿಸರ ಸಂರಕ್ಷಣೆಯ ಜೊತೆಗೆ ಅಭಿವೃದ್ಧಿಯಾಗಲಿ

– ಅರುಣ್‌ ಪದಕಿ.

ಕಳೆದ ಹಲವು ದಶಕಗಳಿಂದ ಉತ್ತಮ ಆದಾಯ ಗಳಿಸುವ ಉದ್ಯೋಗಗಳು, ಉದ್ಯಮಗಳು, ಕೃಷಿ ಆದಾಯ, ವೈದ್ಯಕೀಯ ಮತ್ತು ಶಿಕ್ಷಣ ಸೌಲಭ್ಯಗಳ ಕೊರತೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇದು ಹೆಚ್ಚಿನ ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗಲು ಕಾರಣವಾಗಿದೆ. ಏಕೆಂದರೆ ಜೀವನೋಪಾಯಗಳು, ಉದ್ಯೋಗಗಳು ಮತ್ತು ವೃತ್ತಿಜೀವನಗಳು ನಗರದಲ್ಲಿ ಹೆಚ್ಚು ಮತ್ತು ಸುಲಭ. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಅಸಡ್ಡೆ ಇದೆ. ಕೆಲವೆಡೆ ಅಭಿವೃದ್ಧಿ ವೇಗವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಈ ಆಕಾಂಕ್ಷೆಗಳು ಮೆಗಾಸಿಟಿಗಳನ್ನು ಸೃಷ್ಟಿಸಲು ಕಾರಣವಾದ ಬೃಹತ್‌ ನಗರೀಕರಣ ಪ್ರಕ್ರಿಯೆಯ ಭಾಗವಾಗಿದ್ದವು. ಗ್ರಾಮೀಣತೆ ಅಸಹಾಯಕ ಪ್ರೇಕ್ಷಕವಾಗಿತ್ತು.
ಆದರೆ ಕೋವಿಡ್‌ ಸೋಂಕಿನ ಆಗಮನ ಈ ತಿಳಿವಳಿಕೆಯನ್ನು ಬದಲಿಸಿಹಾಕಿತು. ನಾವು ನಂಬಿಕೊಂಡ ನಗರೀಕರಣದ ಕಲ್ಪನೆಯನ್ನು ಅದು ಬುಡಮೇಲು ಮಾಡಿತು. ದಿಲ್ಲಿಯಿಂದ ಹಿಡಿದು ಸಿಂಗಾಪುರದವರೆಗೂ, ನಮ್ಮ ಬೆಂಗಳೂರಿನವರೆಗೂ ಎಲ್ಲ ದೇಶಗಳಲ್ಲೂ ನಗರಗಳು ಬಂದ್‌ ಆದವು. ದಟ್ಟ ಜನಸಂಖ್ಯಾ ಬಾಹುಳ್ಯ, ವೈದ್ಯಕೀಯ ವ್ಯವಸ್ಥೆಯ ಮೇಲೆ ಒತ್ತಡ, ಆಡಳಿತ ವ್ಯವಸ್ಥೆಯಲ್ಲಿ ವೈಫಲ್ಯ ಇವೆಲ್ಲವೂ ಗೋಚರಿಸಿದವು. ಎಲ್ಲದಕ್ಕಿಂತ ಹೆಚ್ಚಿನ ಆಘಾತವೆಂದರೆ ಆರ್ಥಿಕ ವಿನಾಶ.
ಬೆಂಗಳೂರು ಜಾಗತಿಕ ಚಿತ್ರಣದಲ್ಲಿ ತುಂಬ ಬ್ಯುಸಿಯಾಗಿದ್ದ ಊರು. ಹೊಸ ಕಾಲದ ಉದ್ಯೋಗ, ಸ್ಟಾರ್ಟಪ್‌ಗಳು, ಶಿಕ್ಷಣ, ಮನರಂಜನೆ, ಆಹಾರ, ಪಬ್‌ಗಳು, ಬಿಯರ್‌, ಸಂಗೀತ, ಥಿಯೇಟರ್‌, ಆಧುನಿಕ ಮತ್ತು ಪರಂಪರೆಯ ಸಮ್ಮಿಲನ- ಹೀಗೆ ಎಲ್ಲರದಲ್ಲೂ ಮುಂದಿತ್ತು. ಲಕ್ಷಾಂತರ ವಲಸಿಗರು ಈ ನಗರಕ್ಕೆ ಹೊಸ ಚಿತ್ರಣವನ್ನು ನೀಡಿದ್ದರು. ಕೆಲವರು ಬದುಕಲು ಹೋರಾಡುತ್ತಿದ್ದರೆ, ಇನ್ನು ಹಲವರು ಬ್ಯಾಂಕಿಗೆ ನಗುನಗುತ್ತ ಹೋಗುತ್ತಿದ್ದರು.
ಆದರೆ ಸಾಂಕ್ರಾಮಿಕ ಕಾಯಿಲೆ ಇದೆಲ್ಲವನ್ನೂ ತೊಡೆದುಹಾಕಿತು. ಈಗ ಯೋಜಿತ ನೂರು ಯೋಜನೆಗಳಲ್ಲಿ 95 ನಡೆಯಲು ಸಾಧ್ಯವಿಲ್ಲ ಎಂಬಂತಾಗಿದೆ. ದೊಡ್ಡ ದೊಡ್ಡ ಮಟ್ಟದಲ್ಲಿ ಪ್ರಕಟವಾದ ಮಹಾ ಯೋಜನೆಗಳು ಈಗ ನಡೆಯುವ ಯಾವುದೇ ಸಾಧ್ಯತೆಯಿಲ್ಲ. ಯಾಕೆಂದರೆ ನಾವು ಈಗ ಮೊದಲಿನಂತೆ ಉಣ್ಣುತ್ತಿಲ್ಲ. ಉಡುತ್ತಿಲ್ಲ, ಮನರಂಜನೆಗೆ ತೆರಳುತ್ತಿಲ್ಲ, ಸಿನಿಮಾ ನೋಡುತ್ತಿಲ್ಲ. ನಾವು ದೇವಾಲಯಗಳಿಗೂ ಭೇಟಿ ನೀಡುತ್ತಿಲ್ಲ.
ಜಗತ್ತಿನಾದ್ಯಂತ ಇರುವ ವೈದ್ಯರು ಈಗ ನಮಗೆ ಹೇಳುತ್ತಿರುವ ವಿಚಾರ ಒಂದೇ- ನಿಮ್ಮ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಿ ಎಂಬುದು. ಯಾಕೆಂದರೆ ನಾವು ನಿಧಾನವಾಗಿ, ಯೋಜಿತವಾಗಿ, ನಮ್ಮ ಪರಿಸರ ವ್ಯವಸ್ಥೆಯನ್ನು ನಾಶಪಡಿಸಿದ್ದೇವೆ. ಸೋಂಕುಕಾರಕ ವೈರಸ್‌ಗಳನ್ನು ಎದುರಿಸಲು ನಾವು ನಮ್ಮ ಪರಿಸರದಿಂದ ಗಳಿಸಿಕೊಳ್ಳುವ ರೋಗ ಪ್ರತಿರೋಧಕ ಶಕ್ತಿಯನ್ನು ಉಳಿಸಿಕೊಳ್ಳಬೇಕು. ನಮ್ಮ ಮಣ್ಣಿನ ಗುಣಮಟ್ಟ ಸಂಪೂರ್ಣ ಹಾನಿಗೊಳಗಾಗಿರುವುದು ಕೂಡ ನಾವು ಪಡೆಯುತ್ತಿರುವ ತರಕಾರಿಯ ಪೌಷ್ಟಿಕತೆಯನ್ನು ನಾಶಮಾಡಿದೆ. ಪರಿಸರವನ್ನು ಕಾಪಾಡಿದರೆ ಅದು ನಮಗೆ ಪೌಷ್ಟಿಕತೆ, ಆರೋಗ್ಯ ನೀಡುತ್ತದೆ. ಕೆಲವೇ ದಿನಗಳ ಲಾಕ್‌ಡೌನ್‌ನಿಂದ ಗಂಗೆ ಸ್ವಚ್ಛವಾದುದನ್ನು, ನಗರಗಳ ವಾಯು ಶುದ್ಧವಾದುದನ್ನು ನಾವು ನೋಡಿದ್ದೇವೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಬದಲು ಸರಳವಾದ ಮಾರ್ಗೋಪಾಯಗಳನ್ನು ಕಂಡಿದ್ದೇವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕುಸಿದ ಆರ್ಥಿಕತೆಗೆ ನೆರವಿನ ಪ್ಯಾಕೇಜ್‌ ಘೋಷಿಸಿದ್ದಾರೆ. ಆದರೆ ಅದು ತಾತ್ಕಾಲಿಕ. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ, ಆರ್ಥಿಕತೆಯನ್ನು ಹಳಿಗೆ ತರಲು ಆಯಾ ರಾಜ್ಯ ಸರಕಾರಗಳು ಕಟ್ಟುನಿಟ್ಟಾಗಿ ಶ್ರಮಿಸಬೇಕು. ರಾಜ್ಯಗಳು ತಮ್ಮ ನಿಧಿಯನ್ನು ಆದ್ಯತೆಯ ಮೇರೆಗೆ ವೆಚ್ಚ ಮಾಡಬೇಕು. ಅನಗತ್ಯ ವೆಚ್ಚ ಕೈಬಿಡಬೇಕು. ಈಗ ಯಾರೂ 5 ಅಥವಾ 8 ಜಿಡಿಪಿ ಬೇಕೆಂದು ಬಯಸುತ್ತಿಲ್ಲ. ಸುಸ್ಥಿರ ಆರ್ಥಿಕತೆ ಅಗತ್ಯವಾಗಿದೆ.
ಇಂಥ ಹೊತ್ತಿನಲ್ಲಿ ನಮ್ಮ ಕರ್ನಾಟಕ ಸರಕಾರ ಕೂಡ ನಮ್ಮ ಹಣವನ್ನು ವಿಸ್ತೃತವಾಗಿ ಹಾಗೂ ದೂರಗಾಮಿಯಾಗಿ ಲಾಭಕರವಾದ ಯೋಜನೆಗಳಲ್ಲಿ ತೊಡಗಿಸಬೇಕು. ಸಮಾಜದ ಒಳಿತಿಗೆ ಹಾಗೂ ದುಡಿಯಬಲ್ಲವರು ತಮ್ಮ ಕಾಲ ಮೇಲೆ ನಿಲ್ಲಬಲ್ಲಂತಾಗಲು ಸಹಕಾರವಾಗಬೇಕು. ಇಲ್ಲಿ ಪರಿಸರದ ಸಂರಕ್ಷಣೆ ಎಲ್ಲಕ್ಕಿಂತ ಆದ್ಯತೆ ಆಗಬೇಕು. ರಾಜ್ಯದ ಬೆಳವಣಿಗೆಗಾಗಿ ಬೆಂಗಳೂರಿನಿಂದ ಆಚೆಗೂ ನೋಡಬೇಕು. ಪ್ರಾಮಾಣಿಕವಾಗಿ ನಡೆಸಿದರೆ ಇವೆರಡೂ ಉದ್ದೇಶಗಳಿಂದ ರಾಜ್ಯದೆಲ್ಲೆಡೆ ಹೊಸ ಭರವಸೆ ಚಿಗುರಬಹುದು.
ಇದನ್ನು ಸಾಧ್ಯವಾಗಿಸು, ಸರಕಾರದ ಮುಂದಿರುವ ಬೆಂಗಳೂರು ಮಾಸ್ಟರ್‌ ಪ್ಲಾನ್‌-2031ನ್ನು ರದ್ದುಪಡಿಸಬೇಕು. ಅದರಲ್ಲಿ ಆ ಹೊತ್ತಿಗೆ 2 ಕೋಟಿ ಜನಸಂಖ್ಯೆಯ ಬೆಂಗಳೂರಿಗೆ ಯೋಜನೆ ರಚಿಸಲಾಗಿದೆ. ಆದರೆ ಅದರ ಬದಲು ಎರಡನೇ ಸ್ತರದ ನಗರಗಳು, ಹೊರಗಿನ ಜಿಲ್ಲೆಗಳಿಗೆ ಯೋಜನೆಗಳನ್ನು ಕೇಂದ್ರೀಕರಿಸಬೇಕು. ಅದರಿಂದ ರಾಜಧಾನಿಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಈಗ ಕೊರೊನಾ ಸಮಯದಲ್ಲಿ ತಂತ್ರಜ್ಞಾನದ ವಿಸ್ತರಣೆ, ಕೌಶಲ್ಯಗಳು ರಾಜ್ಯದ ಎಲ್ಲೆಡೆ ಹರಡಿಕೊಂಡು ತಮ್ಮ ಸೇವೆಯನ್ನು ನೀಡುತ್ತಿರುವುದು ಇತ್ಯಾದಿಗಳಿಂದಾಗಿ ಇದು ಮುಂದಿನ ದಿನಗಳಲ್ಲಿ ಸುಲಭವಾಗಲಿದೆ.
ಈ ಹಿನ್ನೆಲೆಯಲ್ಲಿ, ನಮ್ಮ ರಾಜ್ಯದ ಹೆಮ್ಮೆ ಎನಿಸಿರುವ ಪಶ್ಚಿಮ ಘಟ್ಟಗಳನ್ನು ನಾಶ ಮಾಡಲು ಹೊರಟಿರುವ ಯೋಜನೆಗಳ ಬಗ್ಗೆ ನಾವು ಗಮನ ಹರಿಸಬೇಕು. ನಾವು ಕುಡಿಯುವ ನೀರಿಗಾಗಿ ಇದನ್ನೇ ಅವಲಂಬಿಸಿದ್ದೇವೆ. ಹೀಗಾಗಿ ಇವುಗಳನ್ನು ಕಾಪಾಡಲು ನಾವು ಮುಂದಾಗಲೇಬೇಕು. ಶರವಾತಿ ನೀರನ್ನು ಬೆಂಗಳೂರಿನತ್ತ ತಿರುಗಿಸುವ ಮಾತುಗಳು ಕೇಳಿಬರುತ್ತಿವೆ. ಇದು ಈಗಿನ ಜಲವಿದ್ಯುತ್‌ ಯೋಜನೆಯನ್ನೂ ಸುತ್ತಮುತ್ತಲಿನ ನೀರಾವರಿಯನ್ನೂ ಹದಗೆಡಿಸಬಹುದು. ಎತ್ತಿನಹೊಳೆ ಯೋಜನೆ ಕೂಡ ಇಷ್ಟೇ ವಿನಾಶಕಾರಿಯಾದುದು. ಅನಿರೀಕ್ಷಿತ ಮಳೆಯ ವಿನ್ಯಾಸ ಈ ಯೋಜನೆಯ ಫಲಿತಾಂಶವನ್ನು ಸಂಶಯಾಸ್ಪದಗೊಳಿಸಿದೆ. ಬೆಂಗಳೂರಿನ ಐಐಎಸ್‌ಸಿಯ ವಿಜ್ಞಾನಿಗಳು ಕೂಡ ಈ ಯೋಜನೆಯನ್ನು ಕೈಬಿಟ್ಟು ಸ್ಥಳೀಯ ಯೋಜನೆಗಳತ್ತ ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ. ಅಂತರ್ಜಲ ಹೆಚ್ಚಳ, ಮಳೆನೀರು ಕೊಯ್ಲು ಮುಂತಾದವು ಸೂಚಿತ ಪರ್ಯಾಯಗಳು ಹಾಗೂ ಸ್ಥಳೀಯ ಉದ್ಯೋಗಗಳನ್ನೂ ಕೊಡಬಲ್ಲವು. ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆಯನ್ನೂ ನಾವು ಮರುವಿಮರ್ಶಿಸಬೇಕು. ಯಾಕೆಂದರೆ ಇದರಲ್ಲಿ ಲಾಭ ಕಡಿಮೆ- ಹಾನಿ ಹೆಚ್ಚು.
ಪರಿಸರಕ್ಕೆ ಹಾನಿ ಮಾಡಿ ಉಂಟುಮಾಡುವ ಇಂಥ ಯೋಜನೆಗಳ ಸಮಾಜೋ ಆರ್ಥಿಕ ದುಷ್ಪರಿಣಾಮಗಳು ಸ್ಥಳೀಯರ ಮೇಲೆ ಅವು ಉಂಟುಮಾಡುವ ಆರೋಗ್ಯದ ಸಮಸ್ಯೆಗಳು ಬಲು ಗಂಭೀರ. ಈ ಇಡೀ ಪ್ರಾಂತ್ಯದ ಜೀವನಾಡಿಯಾಗಿದ್ದ ಕೃಷಿ ಸಂಸ್ಕೃತಿ, ಇಂದು ಲಾಭಕರವಾಗಿ, ಬಯಸುವ ವೃತ್ತಿಯಾಗಿ ಉಳಿದಿಲ್ಲ. ಇವರೂ ಬದುಕಿಗಾಗಿ ಬೆಂಗಳೂರಿಗೆ ಬರಬೇಕಾಗುತ್ತದೆ. ಆ ಪ್ರಾಂತ್ಯಗಳ ಬೆಳವಣಿಗೆ ಕೂಡ ಕುಂಠಿತಗೊಳ್ಳುತ್ತದೆ.
ರಾಜ್ಯದ ಸಣ್ಣ ಪಟ್ಟಣಗಳು ಹಾಗೂ ಗ್ರಾಮಗಳಿಗೆ, ಅಲ್ಲಿನ ಜನರು ಅಲ್ಲೇ ಬದುಕಿನ ದಾರಿ ಕಂಡುಕೊಳ್ಳುವಂಥ ಅವಕಾಶಗಳು ಈಗ ಅಗತ್ಯವಾಗಿವೆ. ಜನಸಂಖ್ಯೆಯ ಪಲ್ಲಟ ಉಂಟಾಗಬಾರದು, ಸಂಪ್ರದಾಯ ಹಾಗೂ ಸಂಬಂಧಗಳು ಉಳಿದುಕೊಳ್ಳಬೇಕು. ನಮ್ಮ ಸಂಸ್ಕೃತ ಜಾನಪದಗಳು ಹೆಚ್ಚು ಜನಪ್ರಿಯ ಆಗಬೇಕು. ಪ್ರತಿಯೊಂದು ರಾಜ್ಯವೂ ಹೀಗೆ ಬೆಳೆದರೆ ಇಡೀ ದೇಶ ಬೆಳೆಯುತ್ತದೆ. ರಾಜ್ಯ ಸರಕಾರ ಇಂಥ ಯೋಜನೆಗಳ ಮೇಲೆ ಹಣ ಚೆಲ್ಲಬಾರದು. ಜೊತೆಗೆ ಅನಗತ್ಯ ರಸ್ತೆ ವಿಸ್ತರಣೆ ಇತ್ಯಾದಿ ಕೂಡ.
ಬಹುಶಃ ಈ ವೈರಸ್‌ ಬಹುಕಾಲ ನಮ್ಮ ಜೊತೆ ಉಳಿಯಲಿದೆ. ನಮ್ಮ ನಗರಗಳನ್ನು ವಲಸಿಗರು ಕಟ್ಟಿದ್ದಾರೆ. ಅವರಲ್ಲಿ ಹೆಚ್ಚಿನವರು ಬಹುಶಃ ಮರಳಿ ಬರಲಾರರು. ಬಂದರೂ, ದೀರ್ಘಕಾಲ ಬೇಕಾಗಬಹುದು. ಅವರಿಗೆ ಅಲ್ಲೇ ಜೀವನಾವಕಾಶ ನೀಡುವುದು ಮರಳಿ ನಗರಕ್ಕೆ ಬರದಂತೆ ಮಾಡುವುದ ಒಳ್ಳೆಯದು. ಒಳ್ಳೆಯ ಶಿಕ್ಷಣ, ಸಮರ್ಪಕ ಆರೋಗ್ಯ ವ್ಯವಸ್ಥೆ, ಕೃಷಿ ಆದಾಯ ಹೆಚ್ಚಳ ಇವೆಲ್ಲ ರಾಜ್ಯ ಸರಕಾರದ ಕೈಯಲ್ಲೇ ಇವೆ. ನಮಗೆ ಶತಮಾನಗಳಿಗೆ ಒಮ್ಮೆ ಮಾತ್ರ ಸಿಗಬಹುದಾದ ಅವಕಾಶ ಸಿಕ್ಕಿದೆ. ಅದನ್ನು ಹಾಳು ಮಾಡಿಕೊಳ್ಳಬಾರದು.
(ಲೇಖಕರು ಹವ್ಯಾಸಿ ಬರಹಗಾರರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top