ಕೊರೊನಾದಿಂದ ಬದಲಾದ ಟ್ರೆಂಡ್: ಯೂಟ್ಯೂಬ್‌ನಲ್ಲೇ ಪೂಜೆ ನೇರ ಪ್ರಸಾರ, ನಿತ್ಯ ಪ್ರವಚನ, ಸತ್ಸಂಗ
– ಗೌರಿಪುರ ಚಂದ್ರು ಬೆಂಗಳೂರು.
ಕೊರೊನಾ ಲಾಕ್‌ಡೌನ್‌ನಿಂದಾಗಿ ಮಠ, ಮಂದಿರಗಳಿಗೆ ಹೋಗುವುದು ನಿಂತಿದೆ. ಆದರೆ ಆನ್‌ಲೈನ್ ಮಾರ್ಗದ ಮೂಲಕ ಮನೆಮನೆಗಳಲ್ಲಿ ಭಕ್ತಿ ದಾಸೋಹ ಮುಂದುವರಿದಿದೆ. ಸ್ಕೈಪ್, ಫೇಸ್‌ಬುಕ್ ಪೇಜ್ ಹಾಗೂ ವಿಡಿಯೊ ಚಾಟಿಂಗ್ ಮೂಲಕ ವೇದ, ಉಪನಿಷತ್, ಸುಧಾಮಂಗಳ ಪಾಠ ಕಲಿಯುವವರ ಸಂಖ್ಯೆ ಹೆಚ್ಚಿದೆ. ಪ್ರವಚನ ಪ್ರಿಯರು, ಅಧ್ಯಾತ್ಮ ಆಸಕ್ತರು ಯೂಟ್ಯೂಬ್ ಮೊರೆ ಹೋಗುತ್ತಿದ್ದಾರೆ.
ಫೇಸ್‌ಬುಕ್‌ನಲ್ಲೂ ಸ್ಪಿರಿಚುಯಲ್ ಉಪನ್ಯಾಸಗಳು ನಿತ್ಯ ಬಿತ್ತರವಾಗುತ್ತಿವೆ. ಉತ್ತರಾದಿಮಠದ ಗುರುಗಳಾದ ಸತ್ಯಾತ್ಮತೀರ್ಥರು, ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥರು, ತಂಬಿಹಳ್ಳಿಯ ಮಾಧವತೀರ್ಥ ಸಂಸ್ಥಾನದ ವಿದ್ಯಾಸಿಂಧು ಮಾಧವ ತೀರ್ಥರು ಯೂಟ್ಯೂಬ್‌ನಲ್ಲಿ ನಿತ್ಯ ಸಂಜೆ ಪ್ರವಚನಗಳನ್ನು ಮಾಡುತ್ತಿದ್ದಾರೆ. ಹಲವು ವಿದ್ವಾಂಸರು, ವೇದ ಶಿಕ್ಷಕರು ಇದೇ ಮಾದರಿ ಅನುಸರಿಸುತ್ತಿದ್ದಾರೆ. ಹೋಮ್ ಟ್ಯೂಷನ್‌ನಂತೆ ಆನ್‌ಲೈನ್‌ನಲ್ಲೂ ವೇದಪಾಠ, ಭಗವದ್ಗೀತೆ ಶ್ಲೋಕ ಕಲಿಕೆ ಹಾಗೂ ಸಂಸ್ಕೃತ ಅಭ್ಯಾಸ ಶುರುವಾಗಿರುವುದು ಹೊಸ ಟ್ರೆಂಡ್ ಎನ್ನುತ್ತಾರೆ ಬೆಂಗಳೂರಿನ ಉತ್ತರಾದಿ ಮಠದ ಆನ್‌ಲೈನ್ ಬೋಧಕರಾದ ಕಾಂತೇಶಾಚಾರ್.
ನಿತ್ಯ ಪ್ರಸಾರ
ಟಿಟಿಡಿ ತನ್ನ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್‌ನಲ್ಲಿ ನಿತ್ಯ ಬೆಳಗ್ಗೆ 7ರಿಂದ ಶ್ರೀವಾರಿ ಕ್ಷೇತ್ರದ ಪಂಡಿತರಿಂದ ಲೋಕ ಕಲ್ಯಾಣಾರ್ಥವಾಗಿ ನಡೆಯುವ ಧನ್ವಂತರಿ ಮಂತ್ರ, ದುರ್ಗಾ ಪರಿಹಾರ ಶ್ಲೋಕ, ಶ್ರೀನಿವಾಸ ಕಲ್ಯಾಣ ಮತ್ತಿತರ ಪಾರಾಯಣವನ್ನು ಪ್ರಸಾರ ಮಾಡುತ್ತಿದೆ. ಶಿರಡಿ ಸಾಯಿಬಾಬಾ ಜಾಲತಾಣದಲ್ಲಿ ನಿತ್ಯ ಬಾಬಾರಿಗೆ ನಡೆಯುವ ತ್ರಿಕಾಲ ಆರತಿ ಸೇವೆಯ ನೇರ ಪ್ರಸಾರವಾಗುತ್ತಿದೆ.
ಪುಟ್ಟಪರ್ತಿಯ ಸತ್ಯಸಾಯಿಬಾಬಾ ಭಕ್ತರು, ಯಡತೊರೆಶ್ರೀಗಳ ಸೂಚನೆಯಂತೆ ವೇದಾಂತ ಭಾರತಿ ಸಂಸ್ಥೆಯ ಸದಸ್ಯರು ಸೇರಿದಂತೆ ಹಲವು ಧಾರ್ಮಿಕ ಸಂಘ, ಸಂಸ್ಥೆಗಳ ಅನುಯಾಯಿಗಳು ಲಾಕ್‌ಡೌನ್‌ನ ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಿಗದಿತ ಸಮಯದಲ್ಲಿ ಇರುವ ಸ್ಥಳದಲ್ಲೇ ಕೂತು ಬೆಳಗ್ಗೆ ಹಾಗೂ ಸಂಜೆ ಸೂಚಿತ ಶ್ಲೋಕ ಪಾರಾಯಣಗಳ ಜಪವನ್ನು ಮಾಡುತ್ತಿದ್ದಾರೆ.
ಯೋಗ, ಧ್ಯಾನ ಕಲಿಕೆ
ಹಾರ್ಟ್‌ಫುಲ್ ಮೆಡಿಟೇಷನ್ ಟೆಕ್ನಿಕ್‌ಗಳನ್ನು ದೂರವಾಣಿ ಹಾಗೂ ಜಾಲತಾಣದ ಮೂಲಕ ಇನ್‌ಸ್ಟ್ರಕ್ಷನ್ ಕೊಡುವ ಮೂಲಕ ಕೊಡುತ್ತಿದ್ದೇವೆ. ಇನ್ನೊಂದು ಬಗೆಯಲ್ಲಿ ಯುಟ್ಯೂಬ್‌ನಲ್ಲಿ ಮಾಸ್ಟರ್ ಕ್ಲಾಸಸ್ ಎಂದಿದೆ. ಅದಕ್ಕೆ ಲಾಗ್‌ಇನ್ ಆದರೆ ಪ್ರಶಿಕ್ಷಕರೇ ಮೂರು ದಿನದ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಮಾಸ್ಟರ್ ಕಮಲೇಶ್ ಪಟೇಲ್ ಅವರು ಹೈದರಾಬಾದಿನ ಕನ್ಹಾಟ್ ಪ್ರದೇಶದಿಂದಲೇ ಬೆಳಗ್ಗೆ 8.30ರಿಂದ ಅಲ್ಲಿಂದಲೇ ಪಾಠ ಹೇಳಿಕೊಡುತ್ತಿದ್ದಾರೆ. ಲಿಂಕ್: www.heartfulness.org/en/masterclass.
ಯೋಗ, ಧ್ಯಾನ ಕ್ರಮವನ್ನು ಎದುರು ಬದುರು ಕೂತೇ ಹೇಳಿಕೊಡಬೇಕಾಗುತ್ತದೆ. ಹಾಗಾಗಿ ಯೋಗದ ವಿಚಾರದಲ್ಲಿ ಆನ್‌ಲೈನ್ ಶಿಕ್ಷಣ ಅಷ್ಟೊಂದು ಫಲಕಾರಿಯಲ್ಲ ಎನ್ನುತ್ತಾರೆ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಅರವಿಂದ್ ಶ್ರೀನಿವಾಸ್. ”ನಮ್ಮ ಸಮಿತಿಯಿಂದ ಆನ್‌ಲೈನ್ ಝೂಮ್‌ನಲ್ಲಿ ಸತ್ಸಂಗ ನಡೆಸುತ್ತಿದ್ದೇವೆ. ನಿತ್ಯ ಮಧ್ಯಾಹ್ನ 12 ಗಂಟೆಗೆ ಪ್ರಸಾರ ಮಾಡುತ್ತಿದ್ದೇವೆ. ಅದಕ್ಕಾಗಿ ಝೂಮ್ ಆಪ್ ಡೌನ್‌ಮಾಡಿಕೊಂಡು ರಿಜಿಸ್ಟರ್ ಮಾಡಿಕೊಂಡು ಕೇಳಬಹುದು,” ಎಂದು ವಿವರಿಸುತ್ತಾರವರು.