ಆನ್‌ಲೈನ್‌ನಿಂದ ಪಾಠ ಸಿಗಬಹುದು, ಆದರೆ ಸಾಮಾಜೀಕರಣ ಸಾಧ್ಯವಾಗಲಾರದು

ಡಾ. ರೋಹಿಣಾಕ್ಷ ಶಿರ್ಲಾಲು.

The class room with all its limitations, remains a location of great possibility ಎನ್ನುವ ಮಾತಿದೆ. ಇಂದಿಗೂ ತರಗತಿ ಕೊಠಡಿಗಳ ಬೋಧನೆಗೆ ಪರ್ಯಾಯವಿಲ್ಲ. ಜಗತ್ತಿನಾದ್ಯಂತ ಮಕ್ಕಳ ಶಿಕ್ಷಣ ಎನ್ನುವುದು ತರಗತಿ ಕೊಠಡಿಗಳ ಮೂಲಕವೇ ಸಾಕಾರಗೊಳ್ಳುವುದು. ಅದಕ್ಕೆ ಪೂರಕವಾಗಿ ಬೇರೆ ಬೇರೆ ತಂತ್ರಜ್ಞಾನ, ಮಾಧ್ಯಮಗಳ ಬಳಕೆಯಾಗುತ್ತಿದೆಯೇ ಹೊರತು ಪರ್ಯಾಯ ಮಾರ್ಗವೇನು ಆಗಿಲ್ಲ. ಆದರೆ ಇತ್ತೀಚಿನ ಕೋವಿಡ್‌ ಸಾಂಕ್ರಾಮಿಕ ರೋಗಭೀತಿಯು ಪರ್ಯಾಯದ ಹುಡುಕಾಟವನ್ನು ಒತ್ತಾಯಿಸಿದೆ. ಕೋವಿಡ್‌ ಕಾರಣದಿಂದ ಕಳೆದ ಮಾರ್ಚ್‌ನಿಂದ ಅನಿರ್ದಿಷ್ಟ ಕಾಲದವರೆಗೆ ತರಗತಿ ಕೊಠಡಿಯೊಳಗಿನ ಪಾಠ ಚಟುವಟಿಕೆಗಳು ನಿಷೇಧಿಸಲ್ಪಟ್ಟಿದೆ. ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ವಿಶ್ವದಾದ್ಯಂತ ತರಗತಿಯ ಶೈಕ್ಷಣಿಕ ಚಟುವಟಿಕೆಗೆ ನಿರ್ಬಂಧ ಹೇರಲಾಗಿದೆ.

ಸದ್ಯ ಭಾರತದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಿದರೆ ಮುಂದಿನ ಕನಿಷ್ಠ 4-5 ತಿಂಗಳು ಶಾಲೆ ಕಾಲೇಜುಗಳ ಬಾಗಿಲು ತೆರೆಯುವ ಸಾಧ್ಯತೆ ಇಲ್ಲ. ಶೈಕ್ಷಣಿಕ ವಲಯದೊಳಗೆ ಇದು ಭಾರಿ ಆಘಾತ. ಇಷ್ಟೊಂದು ಸುದೀರ್ಘ‌ಕಾಲ ಶೈಕ್ಷಣಿಕ ಚಟುವಟಿಕೆಗಳು ಸ್ತಬ್ಧಗೊಂಡ ಘಟನೆ ಕಳೆದೊಂದು ಶತಮಾನದಲ್ಲಿ ಘಟಿಸಿಲ್ಲ. ಹೀಗಾಗಿ ಈ ಸ್ಥಗಿತಗೊಂಡ ಶೈಕ್ಷಣಿಕ ಸ್ಥಿತಿಯ ಪರಿಣಾಮ ಏನಾದೀತು ಎನ್ನುವುದನ್ನು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಕೆಲವೊಂದು ಅಂಕಿ ಅಂಶಗಳ ಆಧಾರದಲ್ಲಿ ಪರಿಣಾಮವನ್ನು ಊಹಿಸುವುದಾದರೆ, ಈ ಪರಿಣಾಮವನ್ನು ಎದುರಿಸಲು ನಾವು ಶಕ್ತರಾಗಿದ್ದೇವೆಯೇ? ಅದಕ್ಕೆ ಬೇಕಾದ ಸಿದ್ಧತೆ ಸರಕಾರಗಳ ಮಟ್ಟದಲ್ಲಿ ನಡೆದಿದೆಯೇ ಎಂದು ಯೋಚಿಸಿದರೆ ಇನ್ನಷ್ಟು ಆಘಾತವೇ ಆದೀತು !

ವಿಶ್ವದಾದ್ಯಂತ ಈಗ ಈ ಕುರಿತು ಚರ್ಚೆಗಳು ಆರಂಭವಾಗಿದೆ. ಯುನೆಸ್ಕೋ ನಡೆಸಿರುವ ಒಂದು ಅಧ್ಯಯನದ ಪ್ರಕಾರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ದಿಡೀರ್‌ ಹೆಚ್ಚಳವಾಗುವ ಸಾಧ್ಯತೆ ಇದೆ. ಅದರಲ್ಲೂ ಹದಿಹರೆಯದ ಹೆಣ್ಣು ಮಕ್ಕಳು ಶಾಲೆಯಿಂದ ದೂರವಾಗುವ ಅಪಾಯವಿದೆ. ಪರಿಣಾಮವಾಗಿ ಶೈಕ್ಷಣಿಕ ವ್ಯವಸ್ಥೆಯೊಳಗೆ ಲಿಂಗಾನುಪಾತ ವ್ಯತ್ಯಾಸವು ಮತ್ತಷ್ಟು ಹೆಚ್ಚುತ್ತದೆ. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ವಿವಾಹ, ಒತ್ತಾಯದ ಮದುವೆಗಳು ಹೆಚ್ಚಾಗಿ ಅಸುರಕ್ಷಿತ ಗರ್ಭಧಾರಣೆಯ ಸಾಧ್ಯತೆಯೂ ಏರಿಕೆಯಾಗಬಹುದು. ಹದಿಯರೆಯದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಶೋಷಣೆಗೆ ಇದು ಕಾರಣವಾಗಬಹುದು. ಈಗಾಗಲೇ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪ್ರದೇಶ, ಜನಸಮುದಾಯಗಳನ್ನು ಗಮನದಲ್ಲಿರಿಸಿಕೊಂಡು ಚಿಂತನೆ ನಡೆಸಿದರೆ, ಶಿಕ್ಷಣದಿಂದ ಹೊರಗುಳಿಯುವ ಪ್ರಮಾಣ ಹೆಚ್ಚವುದರಲ್ಲಿ ಅನುಮಾನವಿಲ್ಲ.

ಸಾಮಾನ್ಯವಾಗಿ ಆರ್ಥಿಕ ಅಭದ್ರತೆಯಿಂದ ಬಳಲುತ್ತಿರುವ ಹಿಂದುಳಿದ ಸಮುದಾಯಗಳ ಕುಟುಂಬಗಳಲ್ಲಿ ಈ ಅಭದ್ರತೆಯ ವೊದಲ ಬಲಿಪಶುಗಳು ಹೆಣ್ಣುಮಕ್ಕಳೆ ಆಗಿರುತ್ತಾರೆ. ಪ್ರಸ್ತುತ ಲಾಕ್‌ಡೌನ್‌ ಕಾಲದ ವ್ಯಾವಹಾರಿಕ ಸ್ಥಗಿತತೆಯಿಂದ ಆರ್ಥಿಕವಾಗಿ ತೊಂದರೆಗೆ ಸಿಲುಕಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಅನಿವಾರ್ಯವಾಗಿ ಶಾಲೆ ಬಿಡುವ ಒತ್ತಡ ನಿರ್ಮಾಣವಾಗಬಹುದು. ಸೋಂಕು ಹರಡುವ ಸಾಧ್ಯತೆ ತಗ್ಗಿದ ಬಳಿಕ ಶಾಲೆ ಕಾಲೇಜುಗಳು ಪುನರಾರಂಭಗೊಂಡಾಗ ಶಾಲೆಗೆ ಮರಳುವ ಹೆಣ್ಣು ಮಕ್ಕಳ ಸಂಖ್ಯೆ ಸ್ತ್ರೀ ಶಿಕ್ಷಣದ ಪ್ರಗತಿಯ ಪ್ರಮಾಣದ ಮಾಪನದಲ್ಲಿ ಕನಿಷ್ಠ 15-20 ವರ್ಷ ಹಿಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ನಮ್ಮ ದೇಶದಲ್ಲೂ ಇಂದಿಗೂ ಶಾಲೆ/ಕಾಲೇಜುಗಳು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮದುವೆಯನ್ನು ತಡೆದು, ಮುಂದೂಡುತ್ತಿದೆ ಎನ್ನುವುದನ್ನು ನಿರಾಕರಿಸಲಾಗದು. ಶಾಲೆ/ಕಾಲೇಜಿಗೆ ಹೋಗುತ್ತಿರುವ ಕಾರಣದಿಂದ ಅದೆಷ್ಟೋ ಗ್ರಾಮೀಣ, ಹಿಂದುಳಿದ ವರ್ಗಗಳ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಮದುವೆ ಸ್ವಲ್ಪ ಮುಂದೂಡಲ್ಪಡುತ್ತಿದೆ. ಇದು ಎಳವೆಯ ವಯಸ್ಸಿನಲ್ಲೇ ಒತ್ತಾಯದಿಂದ ವಿವಾಹಕ್ಕೊಳಗಾಗಿ, ಗರ್ಭಿಣಿಯರಾಗುವ ಅಪಾಯವನ್ನು ಸ್ವಲ್ಪಮಟ್ಟಿಗಾದರೂ ತಡೆದಿದೆ. ಆದರೆ ಲಾಕ್‌ಡೌನ್‌ ಕಾಲದ ಈ ಶಾಲಾ-ಕಾಲೇಜುಗಳು ಮುಚ್ಚಿದ ಸ್ಥಿತಿ ಅದೆಷ್ಟೋ ಕುಟುಂಬಗಳಲ್ಲಿ ಅಪ್ರಾಪ್ತ ಅಥವಾ ಒತ್ತಾಯದ ವಿವಾಹಗಳನ್ನು ಮಾಡಲು ಕಾರಣವಾಗಿರಬಹುದು. ಇಂತಹ ಹೆಣ್ಣು ಮಕ್ಕಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣಕ್ಕೆ ಮರಳುವ ಸಾಧ್ಯತೆ ಇಲ್ಲ. ಶಾಲೆಯಿಂದ ಹೊರಗುಳಿಯುವ ಹೆಣ್ಣು ಮಕ್ಕಳು ಅವರ ಕುಟುಂಬ / ಪರಿಸರದಲ್ಲೇ ದೈಹಿಕ ಹಾಗೂ ಲೈಂಗಿಕ ಶೋಷಣೆಗೆ ಒಳಗಾಗುವ ಅಪಾಯವನ್ನೂ ಹೆಚ್ಚಿಸಬಹುದು. ಇಂತಹ ಸಂದರ್ಭಲ್ಲಿ ಸುರಕ್ಷಿತತೆಯ ಕಾರಣಕ್ಕೂ ಅಪ್ರಾಪ್ತರ ವಿವಾಹಗಳು ಹೆಚ್ಚಾಗಬಹುದು. ಶಾಲೆಗಳು ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಾಮಾಜಿಕ ಸುರಕ್ಷೆಯನ್ನು ನೀಡಿ ಅವರನ್ನು ಅನೇಕ ಬಗೆಯ ಶೊಷಣೆಗಳಿಂದ ಕಾಪಾಡಿದೆ ಎನ್ನುವುದನ್ನು ನೆನಪಿಸಿಕೊಂಡರೆ ಶಾಲೆಯಿಂದ ಹೊರಗುಳಿಯುವಿಕೆಯ ಅಪಾಯದ ತೀವ್ರತೆ ಅರಿವಾಗಬಹುದು. ಈಗಾಗಲೇ ಮನೆಗಳಲ್ಲೇ ಇರುವ ಮಕ್ಕಳನ್ನು ಪಾಲಕರು ಬೇರೆ ಬೇರೆ ರೀತಿಯ ಗೃಹಕೃತ್ಯಗಳಿಗೆ ತೊಡಗಿಸಿದ್ದು ಅನೇಕ ಕುಟುಂಬಗಳಿಗೆ “ಸಂಪಾದನೆ’ಯ ಮೂಲವೂ ಆಗಿದ್ದರೆ ಆ ಮಕ್ಕಳು ಶಾಲೆಗೆ ಮರಳಲು ತಡೆಯಾಗಬಹುದು.

2018-2019ರ ಸಾಲಿನಲ್ಲಿ 16 ವರ್ಷಕ್ಕಿಂತ ಕೆಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕಲಬುರ್ಗಿ ಜಿಲ್ಲೆಯಲ್ಲಿ 5752, ಯಾದಗಿರಿ ಜಿಲ್ಲೆಯಲ್ಲಿ 5741, ಬಳ್ಳಾರಿ ಜಿಲ್ಲೆಯಲ್ಲಿ 5132, ವಿಜಯಪುರ ಜಿಲ್ಲೆಯಲ್ಲಿ 4417. ಲಾಕ್‌ಡೌನ್‌ ಕಾರಣದಿಂದ ಉಂಟಾದ ಮರುವಲಸೆಯು, ವಲಸೆಯ ಸಂದರ್ಭದಲ್ಲಿ ಸಿಕ್ಕಿದ್ದ ಶಾಲೆಗೆ ಹೋಗುವ ಅವಕಾಶವನ್ನೂ ಕಸಿದುಕೊಳ್ಳಬಹುದು. ಉದಾಹರಣೆಗೆ ಕರ್ನಾಟಕದಲ್ಲಿ 2018-19ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒಬಿಸಿ ವಿದ್ಯಾರ್ಥಿಗಳಿಗಾಗಿ ಇದ್ದ ಮೆಟ್ರಿಕ್‌ಪೂರ್ವ ಹುಡುಗರ ಹಾಸ್ಟೆಲ್‌ಗ‌ಳ ಸಂಖ್ಯೆ 1055. ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ 54731. ಮೆಟ್ರಿಕ್‌ಪೂರ್ವದ ಹೆಣ್ಣು ಮಕ್ಕಳ ಹಾಸ್ಟೆಲ್‌ಗ‌ಳ ಸಂಖ್ಯೆ 285. ಇಲ್ಲಿನ ವಿದ್ಯಾರ್ಥಿನಿಯರು 15111. ಮೆಟ್ರಿಕ್‌ ನಂತರದ ಹುಡುಗರ ಹಾಸ್ಟೆಲ್‌ಗ‌ಳ ಸಂಖ್ಯೆ 442. ವಿದ್ಯಾರ್ಥಿಗಳ ಸಂಖ್ಯೆ 45763. ಮೆಟ್ರಿಕ್‌ ನಂತರದ ಹುಡುಗಿಯರ ಹಾಸ್ಟೆಲ್‌ಗ‌ಳ ಸಂಖ್ಯೆ 626. ವಿದ್ಯಾರ್ಥಿನಿಯರ ಸಂಖ್ಯೆ 64852. ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್‌ಪೂರ್ವದ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಹಾಸ್ಟೆಲ್‌ಗ‌ಳ ಸಂಖ್ಯೆ 1233. ಸೇರ್ಪಡೆಗೊಂಡ ವಿದ್ಯಾರ್ಥಿಗಳು 87567, (ಹುಡುಗರು ಮತ್ತು ಹುಡುಗಿಯರು ಸೇರಿ). ಮೆಟ್ರಿಕ್‌ ನಂತರದ ಹಾಸ್ಟೆಲ್‌ಗ‌ಳ ಸಂಖ್ಯೆ 634. ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸಂಖ್ಯೆ 79261.(ಇಲಾಖೆಯಿಂದ ಮಂಜೂರಾದ ವಿದ್ಯಾರ್ಥಿಗಳ ಸಂಖ್ಯೆ 67600. ಅಂದರೆ ಮಂಜೂರಾದ ಸಂಖ್ಯೆಗಿಂತ 11661 ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.) ಇದೇ ರೀತಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗ‌ಳಲ್ಲಿ ಆಶ್ರಮ ಶಾಲೆಗಳಲ್ಲಿ ಮತ್ತೆ ಸಾವಿರಾರು ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಾರೆ.

ಈ ಬಾರಿ ಕೋವಿಡ್‌ ನಂತರ ಶಾಲೆ ಕಾಲೇಜುಗಳು ಪುನರಾರಂಭಗೊಂಡಾಗ ಆರೋಗ್ಯ ಇಲಾಖೆಯು ಈಗಾಗಲೇ ನಿಗದಿಪಡಿಸಿದ ಸುರಕ್ಷತಾ ಮಾನದಂಡವಾದ ದೆ„ಹಿಕ ಅಂತರದ ನಿಯಮವನ್ನು ಪಾಲನೆ ಮಾಡಬೇಕಾಗಿ ಬಂದಾಗ ಈ ಹಾಸ್ಟೆಲ್‌ಗ‌ಳಲ್ಲಿ ಪ್ರವೇಶ ಪಡೆಯಬಹುದಾದ ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ 50%ದಷ್ಟು ಕಡಿಮೆಯಾಗಬಹುದು. ಅಂದರೆ ಕಳೆದ ಶೆ„ಕ್ಷಣಿಕ ವರ್ಷದಲ್ಲಿ 4 ಜನ ವಾಸ್ತವ್ಯವಿದ್ದ ಕೊಠಡಿಯಲ್ಲಿ ಈ ಬಾರಿ 2 ಜನರಿಗಷ್ಟೇ ಅವಕಾಶ ಸಿಗಬಹುದು. ಕೆಲವೊಮ್ಮೆ ಒಂದೇ ದೊಡ್ಡ ಕೊಠಡಿಯಲ್ಲಿ 15-20 ವಿದ್ಯಾರ್ಥಿಗಳು ವಾಸ್ತವ್ಯ ಇರುವುದಿದೆ. ಒಂದೋ ಎರಡೋ ಶೌಚಾಲಯ ಮಾತ್ರ ಇದೆ. ಗುಂಪುಗೂಡದೆ ಊಟ-ತಿಂಡಿ ಸ್ವೀಕರಿಸಲು ಬೇರೆ ಸ್ಥಳಾವಕಾಶವೇ ಇಲ್ಲದಿರುವ ಹಾಸ್ಟೆಲ್‌ಗ‌ಳಿವೆ. ಹೀಗಿರುವಾಗ ಈಗಾಗಲೇ ಅಲ್ಲಿ ಪ್ರವೇಶ ಪಡೆದು ಓದುತ್ತಿರುವ ವಿದ್ಯಾರ್ಥಿಗಳಿಗೆ ಹಂಚಿದರೂ ಕೊಠಡಿಗಳು ಸಾಲದೆ ಹೋಗಬಹುದು. ಹಾಗಾದರೆ ಈ ವರ್ಷ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರವೇಶದ ಅವಕಾಶವೇ ಸಿಗದೆ ಹೋಗಬಹುದು.

ಇಂದು ಸರಕಾರ ಸಾಮಾಜಿಕ ನ್ಯಾಯದ ವಿತರಣೆಗಾಗಿ ಉಚಿತವಾಗಿ ನಡೆಸುತ್ತಿರುವ ಹಾಸ್ಟೆಲ್‌ಗ‌ಳ ಕಾರಣದಿಂದಲೇ ರಾಜ್ಯದ ಗ್ರಾಮೀಣ ಮತ್ತು ಹಿಂದುಳಿದ ವರ್ಗ, ದಲಿತ ವರ್ಗದ ಮಕ್ಕಳು, ಅದರಲ್ಲೂ ದೊಡ್ಡ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಶಾಲೆಯ ಹಾಗೂ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಒಂದು ವೇಳೆ ಹಾಸ್ಟೆಲ್‌ಗ‌ಳ ಪ್ರವೇಶದ ಅವಕಾಶ ಈ ಸಮುದಾಯದ ಮಕ್ಕಳಿಗೆ ದೊರಕದೇ ಹೋದರೆ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುತ್ತದೆ. ಆದರೆ ಈ ಕುರಿತು ಸರಕಾರ ಎಚ್ಚೆತ್ತುಕೊಂಡಿದೆಯೇ? ಹಾಸ್ಟೆಲ್‌ಗ‌ಳಿಗೆ ಪರ್ಯಾಯ ವ್ಯವಸ್ಥೆ ಮಾಡಿದೆಯೇ? ಬಹುಶಃ ಇಲ್ಲ. ಶಾಲೆ ಆರಂಭಿಸುವ ದಿನಾಂಕವನ್ನು ಪ್ರಕಟಿಸಲು ತುದಿಗಾಲಲ್ಲಿ ನಿಂತಿರುವ, ಆನ್‌ಲೈನ್‌‌ ಶಿಕ್ಷಣದ ಸಾಧಕ-ಬಾಧಕದ ಬಗ್ಗೆ ಪತ್ರಿಕಾ ಹೇಳಿಕೆಯ ಹೊರತಾಗಿ ಕೋರ್ಟ್‌ ನಲ್ಲಿ ಬಲವಾದ ವಾದವನ್ನು ಮಂಡನೆ ಮಾಡಲೂ ಬಯಸದ ಸರಕಾರ ಮುಂದಿನ ದಿನಗಳಲ್ಲಿ ತರಗತಿಗಳ ಒಳಗೆ ದೆ„ಹಿಕ ಅಂತರ ಕಾಪಾಡಲು ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿ ಬಂದರೆ, ಹಾಸ್ಟೆಲ್‌ಗ‌ಳ ಪ್ರವೇಶದ ಸಂಖ್ಯೆ ಕಡಿತಗೊಳಿಸಬೇಕಾಗಿ ಬಂದಾಗ, ಇದರಿಂದಾಗಿ ಹೊರಗುಳಿಯುವ ಅಂಚಿನ ಸಮುದಾಯಗಳ ಮಕ್ಕಳ ಶಿಕ್ಷಣದ ಬಗ್ಗೆ ಯಾವ ಯೋಜನೆಗಳನ್ನು ಹೊಂದಿದೆ ಎನ್ನುವುದು ಚರ್ಚೆಯಾಗಬೇಕಾಗಿದೆ.

ದೀರ್ಘ‌ಕಾಲ ಕಲಿಕೆಯಿಂದ ಹೊರಗುಳಿದ ಮಕ್ಕಳಲ್ಲಿ ಉಂಟಾಗಬಹುದಾದ ಕಲಿಕೆಯ ಸಮಸ್ಯೆ ನಿವಾರಿಸಲು ಏನು ಕಾರ್ಯಯೋಜನೆ ಸಿದ್ಧಪಡಿಸಿದೆ? ಮುಂದಿನ ತರಗತಿಗೆ ಪ್ರವೇಶವನ್ನು ಪಡೆಯುವ ವಿದ್ಯಾರ್ಥಿಗೆ ಹಿಂದಿನ ಶೈಕ್ಷಣಿಕ ವರ್ಷದ ಪಠ್ಯದ ಪುನರ್ಮನನ ಸಾದ್ಯವಾಗದ ಹೊರತು ಈ ಶೈಕ್ಷಣಿಕ ವರ್ಷದ ಕೊಂಡಿ ಜೋಡಲಾರದು. ಕಾಲ ಸರಿದಿದೆ ಎನ್ನುವ ಒತ್ತಡದೊಳಗೆ ಪಠ್ಯ ಮುಗಿಸುವ ಧಾವಂತಕ್ಕೆ ಬೀಳದಂತೆ ಮಾಡಲು ಪಠ್ಯ ಕಡಿತಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ? ಶಾಲೆಯ ಹೊರತಾದ ಕಲಿಕೆಯ ಅನುಕೂಲವೇ ಇಲ್ಲದಿರುವ ಹಿಂದುಳಿದ ಸಮುದಾಯಗಳಲ್ಲಿ ಈ ದೀರ್ಘ‌ಕಾಲೀನ ಶಾಲಾ ಚಟುವಟಿಕೆಗಳ ರಜೆ ಬಹಳ ಗಂಭೀರ ಸಮಸ್ಯೆ ಉಂಟುಮಾಡಿರುತ್ತದೆ. ಇದರ ಪರಿಹಾರಕ್ಕೆ ಏನು ಯೋಜನೆ? ಶಾಲಾ ಕೊಠಡಿಗಳೆಂದರೆ ಸಾಮಾಜೀಕರಣ ಕೇಂದ್ರ. ಆನ್ ಲೈನ್‌ನಿಂದ ಪಠ್ಯದೊಳಗಿರುವುದನ್ನು ಕಲಿಸಬಹುದು. ಆದರೆ ಸಾಮಾಜಿಕರಣವೆನ್ನುವ ಬಹು ಮುಖ್ಯ ಪ್ರಕ್ರಿಯೆಗೆ ಒಳಪಡುವ ಮಗು ಅದರಿಂದ ವಂಚಿತವಾಗಿ, ಹೆತ್ತವರ ಜತೆಗೇ ಉಳಿಯಬೇಕಾಗಿ ಬಂದ ಪರಿಣಾಮ ಸಮಸ್ಯೆಯ ಪರಿಹಾರದ ದಾರಿಯ ಬದಲಾಗಿ, ಸಮಸ್ಯೆಯ ಭಾಗವೆ ಆಗಿಬಿಡುವ ಅಪಾಯವಿದೆ. ಅದನ್ನು ತಪ್ಪಿಸಲು ಸರಕಾರದ ಬಳಿ ಇರುವ ಯೋಜನೆಗಳೇನು? ಕೋವಿಡ್‌ ಬಿಕ್ಕಟ್ಟು ಮುಂದಿನ ತಲೆಮಾರಿನಲ್ಲಿ ಇನ್ನೊಂದು ಹೊಸ ಅಂತರವನ್ನು ( ಈಗಾಗಲೇ ಇರುವ ನಗರ -ಹಳ್ಳಿ, ಕನ್ನಡ -ಇಂಗ್ಲಿಷ್‌ ಜತೆಗೆ ನೆಟ್‌ವರ್ಕ್‌ ಸಿಗುವ ಮತ್ತು ಸಿಗದಿರುವ, ಡೇಟಾ ಪ್ಯಾಕ್‌ ತುಂಬಬಲ್ಲ ಮತ್ತು ತುಂಬಲಾರದ ಎನ್ನುವ ವರ್ಗವೂ ಸೃಷ್ಟಿಯಾಗಬಹುದು) ಸೃಷ್ಟಿಸದೇ? ಈಗಾಗಲೇ ತನ್ನದಲ್ಲದ ಊರಿನಿಂದ ತನ್ನೂರಿಗೆ ಹೋಗುವ ಧಾವಂತದಲ್ಲಿ ಪುಸ್ತಕವೆಲ್ಲವನ್ನೂ ಬಿಟ್ಟು ಬರಿಗೈಯಲ್ಲಿ ಗೂಡು ಸೇರಿದ ಮಕ್ಕಳ ಕೈಗೆ ಮರಳಿ ಪುಸ್ತಕ-ಬಳಪವನ್ನು ನೀಡಲು ಯಾವ ಯೋಜನೆ ಸಿದ್ಧಪಡಿಸಿದೆ? ಇವುಗಳನ್ನು ಮಾಡಿಕೊಳ್ಳದೆ ಶಾಲೆ ಆರಂಭಿಸುವ ದಿನಾಂಕದ ಘೋಷಣೆಗಾಗಿ ಯುದ್ಧ ಘೋಷಣೆಯ ಉತ್ಸಾಹದಲ್ಲಿ ಕಾದುಕುಳಿತ ಇಲಾಖೆಯ ಮಂತ್ರಿಗಳ, ಅಧಿಕಾರಿಗಳ ಮನಸ್ಥಿತಿಗೆ ಏನೆನ್ನಬಹುದು?.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top