ಆನ್‌ಲೈನ್‌ ಕ್ಲೋಸ್

– ಎಲ್‌ಕೆಜಿಯಿಂದ 5ನೇ ತರಗತಿವರೆಗಿನ ಆನ್‌ಲೈನ್‌ ಪಾಠಕ್ಕೆ ಸರಕಾರ ತಡೆ
– ಆನ್‌ಲೈನ್‌ ಹೆಸರಲ್ಲಿ ಶುಲ್ಕ ಪಡೆದರೆ ಕ್ರಮ | ಶೈಕ್ಷಣಿಕ ಶುಲ್ಕ ಹೆಚ್ಚಳವೂ ಬೇಡ

ವಿಕ ಸುದ್ದಿಲೋಕ, ಬೆಂಗಳೂರು.
ಎಲ್‌ಕೆಜಿ-ಯುಕೆಜಿಯಿಂದ 5ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ‘ಆನ್‌ಲೈನ್‌ ತರಗತಿ’ ನಡೆಸಬಾರದು ಎಂದು ಸರಕಾರ ಆದೇಶಿಸಿದೆ ಮತ್ತು ಈಗ ಖಾಸಗಿ ಶಾಲೆಗಳು ನಡೆಸುತ್ತಿರುವ ತರಗತಿಗಳನ್ನು ನಿಲ್ಲಿಸುವಂತೆ ಸೂಚಿಸಿದೆ.
ನಗರದ ಸಮಗ್ರ ಶಿಕ್ಷಣ ಅಭಿಯಾನದ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್‌ ತರಗತಿಗಳನ್ನು ನಡೆಸುವುದು ಅಕ್ಷಮ್ಯ. ಈ ಸಂಬಂಧ ನಿಮ್ಹಾನ್ಸ್ ತಜ್ಞರು ನೀಡಿದ ವರದಿಯ ಆಧಾರದ ಮೇಲೆ ಶಿಕ್ಷಣ ತಜ್ಞರು, ವೈದ್ಯರು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಇಲಾಖೆಯೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಮಕ್ಕಳು ಮತ್ತು ಪೋಷಕರ ಹಿತಿದೃಷ್ಟಿಯಿಂದ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಿಗೆ ಆನ್‌ಲೈನ್‌ ತರಗತಿಗಳನ್ನು ರದ್ದುಗೊಳಿಸಲಾಗಿದೆ ಎಂದರು.

ಶುಲ್ಕಕ್ಕೂ ನಿರ್ಬಂಧ
ಆನ್‌ಲೈನ್‌ ತರಗತಿ ಹೆಸರಲ್ಲಿ ಕೆಲವು ಶಾಲೆಗಳು ಶುಲ್ಕ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಕೂಡಲೇ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಹೆಸರಲ್ಲಿ ಶುಲ್ಕ ಪಡೆಯುವುದನ್ನು ನಿಲ್ಲಿಸಬೇಕು. ಜತೆಗೆ, ಕೋವಿಡ್-19ನಿಂದಾಗಿ ಕೆಲಸವಿಲ್ಲದೆ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಈ ವರ್ಷ ಯಾವುದೇ ಶಾಲೆಗಳು ಶುಲ್ಕ ಹೆಚ್ಚಳ ಮಾಡಬಾರದು.
ಈ ಸಂಬಂಧ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆದೇಶ ಹೊರಡಿಸಲಾಗಿದೆ. ಇದು ವಿಶೇಷ ಸನ್ನಿವೇಶವಾಗಿದ್ದು, ಖಾಸಗಿ ಶಾಲೆಗಳು ಸಹ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಒಂದು ವೇಳೆ, ಖಾಸಗಿ ಶಾಲೆಗಳು ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಶುಲ್ಕ ಪಡೆದರೆ ಸ್ವಾಗತಿಸುವುದಾಗಿ ಸುರೇಶ್‌ಕುಮಾರ್‌ ತಿಳಿಸಿದರು.
ಸರಕಾರ ಈಗಾಗಲೇ ಆನ್‌ಲೈನ್‌ ತರಗತಿಗೆ ಶುಲ್ಕ ಪಡೆಯದಂತೆ ಮತ್ತೆ 2020-21ನೇ ಸಾಲಿಗೆ ಶುಲ್ಕ ಹೆಚ್ಚಳ ಮಾಡದಂತೆ ಆದೇಶ ಹೊರಡಿಸಿದೆ. ಈ ನಿಯಮಗಳನ್ನು ಮೀರುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವರು ಎಚ್ಚರಿಕೆ ನೀಡಿದರು.

ಗ್ರಾಮೀಣ ಮಕ್ಕಳಿಗೆ ನ್ಯಾಯ
6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿವೆ. ಆದರೆ, ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳು ಇಂಥ ಬೋಧನಾ ಕ್ರಮದಿಂದ ವಂಚಿತರಾದೆವು ಎಂಬ ನೋವಿಗೆ ಒಳಗಾಗಬಾರದು ಎಂಬ ಕಾರಣಕ್ಕೆ ಅವರಿಗೆ ಅನುಕೂಲವಾಗುವ ಮಾರ್ಗೋಪಾಯಗಳನ್ನು ಸಮಿತಿ ಸೂಚಿಸಲಿದೆ. ಗ್ರಾಮೀಣ ಮತ್ತು ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನೂ ಗಮನದಲ್ಲಿಟ್ಟು ಇವರಿಗೆ ಅನುಕೂಲವಾಗುವ ರೀತಿಯಲ್ಲಿ ಧ್ವನಿ ಮುದ್ರಿತ ಪಠ್ಯಗಳನ್ನು ನೀಡುವುದು ಸೇರಿದಂತೆ ಇತರೆ ಮಾರ್ಗೋಪಾಯಗಳನ್ನು ಸಮಿತಿಯು ಸೂಚಿಸಲಿದೆ.

ಮಕ್ಕಳೇನು ಮಾಡಬೇಕು?
ಕೊರೊನಾದಿಂದಾಗಿ ಶಾಲೆಗಳ ಆರಂಭ ಮುಂದೂಡಲ್ಪಟ್ಟಿದೆ. ಮಕ್ಕಳ ಕಲಿಕೆಯ ನಿರಂತರತೆಗಾಗಿ ಆನ್‌ಲೈನ್‌ ಶಿಕ್ಷಣ ಎಂಬ ಕಾರಣ ನೀಡಲಾಗುತ್ತಿದೆ. ಈಗ ಅದೂ ಬೇಡ ಎಂದಾದರೆ ನಿರಂತರತೆ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದು ಪ್ರಶ್ನೆ. ಈ ನಿಟ್ಟಿನಲ್ಲಿ ಸಮಗ್ರವಾಗಿ ಅಧ್ಯಯನ ನಡೆಸಿ ಅಗತ್ಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ತಜ್ಞರ ಸಮಿತಿ ನೇಮಿಸಲಾಗಿದೆ. ಶಿಕ್ಷಣ ತಜ್ಞರಾದ ಡಾ.ವಿ.ಪಿ. ನಿರಂಜನಾರಾಧ್ಯ, ಪ್ರೊ.ಎಂ.ಕೆ.ಶ್ರೀಧರ್, ಡಾ.ಗುರುರಾಜ ಕರ್ಜಗಿ, ಅಜೀಂ ಪ್ರೇಂಜಿ ಫೌಂಡೇಷನ್‌ನ ಋುಷಿಕೇಶ್, ನಿಮ್ಹಾನ್ಸ್‌ನ ತಜ್ಞ ವೈದ್ಯರಾದ ಡಾ.ಗಂಗಾಧರ್, ಸಮಗ್ರ ಶಿಕ್ಷಾ ಅಭಿಯಾನದ ನಿರ್ದೇಶಕ ಡಾ.ಎಂ.ಟಿ.ರೇಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಈ ಸಮಿತಿಯಲ್ಲಿದ್ದಾರೆ. ಸಮಿತಿಯು ಹತ್ತು ದಿನಗಳಲ್ಲಿ ಮಾರ್ಗಸೂಚಿಗಳನ್ನು ರಚಿಸಿ ಸರಕಾರಕ್ಕೆ ವರದಿ ನೀಡಲಿದೆ. ಇದರ ಅಧಾರದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಚಿವರು ವಿವರಿಸಿದರು.

ಮಲೆನಾಡಿನಲ್ಲಿ ಹಾಸ್ಟೆಲ್ ವ್ಯವಸ್ಥೆ
ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆಗೆ ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಿಂದ ನದಿ, ತೊರೆಗಳು ತುಂಬಿ ಹರಿಯುತ್ತವೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಅಂತಹವರಿಗೆ ಪರೀಕ್ಷೆ ಮುಗಿಯುವವರೆಗೆ ಪರೀಕ್ಷಾ ಕೇಂದ್ರದ ಹತ್ತಿರ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು. ಗಡಿ ರಾಜ್ಯಗಳಿಂದ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವರು ಹೇಳಿದರು.

ಆನ್‌ಲೈನ್‌ಗೆ ತಡೆ ಯಾಕೆ?
ಮಕ್ಕಳು ನಿರಂತರವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ‘ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ ಸೇರಿದಂತೆ ಇತರೆ ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಸ್ಕ್ರೀನ್’ಗಳನ್ನು ನೋಡಬಾರದು ಎಂಬುದು ಮಕ್ಕಳ ತಜ್ಞರ ಅಭಿಪ್ರಾಯ
ಮಕ್ಕಳ ದೈಹಿಕ, ಮಾನಸಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಯಾವ ತರಗತಿಯ ಮಕ್ಕಳಿಗೆ ಎಷ್ಟು ಹೊತ್ತು ನಡೆಸಬೇಕು, ಯಾವ ಮಾದರಿಯ ಆನ್‌ಲೈನ್‌ ಶಿಕ್ಷಣ ನೀಡಬೇಕು ಎಂದು ಸಮಿತಿ ತೀರ್ಮಾನಿಸಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top