ದಿಕ್ಕು ತಪ್ಪಿದ್ದ ಭಾರತದ ಅಖಂಡತೆಯಯನ್ನು ರಾಜಪಥದತ್ತ ಎಳೆದುತಂದ ಐತಿಹಾಸಿಕ ಸಂವತ್ಸರ. 2019ರ ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿ ರದ್ದು. 2020ರ ಆಗಸ್ಟ್ 5ರಂದು ಭಾರತದ ಬಹುಜನರ ಮಹಾ ನಿರೀಕ್ಷೆಯ ರಾಮಜನ್ಮಭೂಮಿ ಶಿಲಾನ್ಯಾಸ. ಒಮ್ಮೊಮ್ಮೆ ಐತಿಹಾಸಿಕ ತಪ್ಪುಗಳು ದಶಕಗಳು ಕಳೆದರೂ ಉಳಿದುಕೊಂಡಿರುತ್ತವೆ. ಇಂತಹ ಸ್ಥಗಿತ ವ್ಯವಸ್ಥೆಗೆ ಚಲನಶೀಲತೆ ನೀಡುವ ಯುಗಪ್ರವರ್ತಕ ನಾಯಕತ್ವದ ಉದಯ ಆಗುತ್ತದೆ. ಅಂತಹ ನಾಯಕತ್ವದಲ್ಲಿ ಅತಿದೊಡ್ಡ ಸಮಸ್ಯೆಗಳಾಗಿದ್ದ ಐತಿಹಾಸಿಕ ತಪ್ಪುಗಳನ್ನು ತಿದ್ದುವ ಕೆಲಸ ನಡೆದು ಹೋಗುತ್ತದೆ.
ಬ್ರಿಟಿಷ್ ಚಕ್ರಾಧಿಪತ್ಯದಲ್ಲಿ ಐನೂರ ಅರವತ್ತಕ್ಕೂ ಹೆಚ್ಚು ದೇಶೀಯ ಸಂಸ್ಥಾನಗಳಿದ್ದವು. ಈ ಸಂಸ್ಥಾನಗಳ ರಾಜ-ಮಹಾರಾಜರ ಅನೈಕ್ಯ ದ್ವೇಷ ಅಸೂಯೆಯ ಪರಿಣಾಮ ಬ್ರಿಟಿಷರು ಭಾರತದಲ್ಲಿ ಮುನ್ನೂರು ವರ್ಷಗಳಿಗೂ ಹೆಚ್ಚು ಕಾಲ ಚಕ್ರವರ್ತಿಗಳಾಗಿ ಮೆರೆದಿದ್ದರು. ಅವರು ಅಧಿಕಾರದಲ್ಲಿದ್ದಷ್ಟೂ ಕಾಲ ಒಬ್ಬರ ಮೇಲೆ ಇನ್ನೊಬ್ಬ ರಾಜರನ್ನು ಎತ್ತಿ ಕಟ್ಟುತ್ತಿದ್ದರು. ರಾಜರಿಗೆ ಸ್ವಂತ ರಾಜ್ಯದ ಅಧಿಕಾರವಿದ್ದರೂ ಬ್ರಿಟಿಷ್ ಚಕ್ರಾಧಿಪತ್ಯದ ಅಂಕುಶವೂ ಇರುತ್ತಿತ್ತು. ಪ್ರತಿ ರಾಜ್ಯಗಳಲ್ಲಿಯೂ ರೆಸಿಡೆಂಟ್ ಕಮಿಷನರ್ ಇರುತ್ತಿದ್ದರು. ಬ್ರಿಟಿಷರೇ ಆಗಿರುತ್ತಿದ್ದ ರೆಸಿಡೆಂಟ್ ಕಮಿಷನರ್ ಮೇಲುಸ್ತುವಾರಿಯಲ್ಲಿಯೇ ರಾಜರ ರಾಜ್ಯಾಧಿಕಾರ ನಡೆಯುತ್ತಿತ್ತು. ಮಹಾರಾಜರು ಪ್ರತಿವರ್ಷ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಕಪ್ಪ-ಕಾಣಿಕೆ ಸಲ್ಲಿಸಲೇಬೇಕಿತ್ತು. ಯಾವುದೇ ರಾಜ ಆಡಳಿತ ನಡೆಸಲು ಅಸಮರ್ಥನಾದರೆ ಅವನನ್ನು ಪದಚ್ಯುತಗೊಳಿಸಿ ಕಮಿಷನರ್‌ಗಳ ಮೂಲಕ ಬ್ರಿಟಿಷ್ ಚಕ್ರಾಧಿಪತ್ಯ ಆಡಳಿತ ನಡೆಸುತ್ತಿತ್ತು. ಇಂಥ ಕ್ರಮವನ್ನು ಬ್ರಿಟಿಷರು ಮೈಸೂರು ರಾಜ್ಯದ ಮೇಲೆಯೇ ಪ್ರಯೋಗಿಸಿದ್ದರು. ಟಿಪ್ಪು ಸುಲ್ತಾನ್ ಚಕ್ರಾಧಿಪತ್ಯದ ಪತನಾನಂತರ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಮೈಸೂರು ರಾಜ್ಯದ ಆಡಳಿತ ವಹಿಸಲಾಗಿತ್ತು. ಒಡೆಯರ್ ಇನ್ನೂ ಪ್ರೌಢಾವಸ್ಥೆ ತಲುಪದ ಕಾರಣ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ, ದಿವಾನ್ ಪೂರ್ಣಯ್ಯನವರ ನೆರವಿನಿಂದ ಮೈಸೂರು ರಾಜ್ಯದ ರಾಜ್ಯಭಾರ ನಡೆಸುತ್ತಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರೌಢಾವಸ್ಥೆ ತಲುಪಿದ ನಂತರ ರಾಜ್ಯ ಆಡಳಿತವನ್ನು ನಿಯಂತ್ರಿಸಲಾರಂಭಿಸಿದ್ದರು. ಬ್ರಿಟಿಷರಿಗೆ ಒಡೆಯರ್ ಆಡಳಿತದಲ್ಲಿ ದಕ್ಷತೆಯ ಕೊರತೆ ಕಂಡು ಬಂದಿತ್ತು. 1831ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ರನ್ನು ಪದಚ್ಯುತಗೊಳಿಸಿ, ಬ್ರಿಟಿಷರೇ ರಾಜ್ಯಾಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಐವತ್ತು ವರ್ಷ ಮೈಸೂರು ಆಡಳಿತ ನಡೆಸಿದ ಬ್ರಿಟಿಷರು 1881ರಲ್ಲಿ ಮತ್ತೆ ಮೈಸೂರು ಅರಸರಿಗೆ ರಾಜ್ಯಾಧಿಕಾರ ನೀಡಿದ್ದರು. ನಂತರ ರಾಜ್ಯದ ಅಧಿಕಾರ ಸೂತ್ರ ಹಿಡಿದ ಚಾಮರಾಜ ಒಡೆಯರ್, ತಮ್ಮ ತಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗಂಟಿದ್ದ ಅಸಮರ್ಥ ಆಡಳಿತ ಕಳಂಕವನ್ನು ತೊಡೆದು ಹಾಕುವ ಪ್ರಯತ್ನ ಮಾಡಿದ್ದರು. ಹಿಂದಿನ ತಪ್ಪುಗಳನ್ನು ಸರಿಪಡಿಸುವ ಗಟ್ಟಿ ಹೆಜ್ಜೆಗಳನ್ನಿಟ್ಟಿದ್ದರು. ಆದರೆ ವಿಧಿವಿಲಾಸವೇ ಬೇರೆ ಆಗಿತ್ತು. ಚಾಮರಾಜ ಒಡೆಯರ್ ಕಿರಿಯ ವಯಸ್ಸಿನಲ್ಲಿಯೇ ಗಂಟಲು ಬೇನೆಗೆ ಗುರಿಯಾಗಿ ಅಕಾಲ ಮರಣಕ್ಕೆ ಗುರಿ ಆಗಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದ ತಪ್ಪುಗಳನ್ನು ಸರಿಪಡಿಸುವ ಅವರ ಪ್ರಯತ್ನಗಳು ಅಪೂರ್ಣವಾಗಿದ್ದವು. 1902ರಲ್ಲಿ ರಾಜ್ಯದ ಅಧಿಕಾರ ಸೂತ್ರ ಹಿಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೂವತ್ತೆಂಟು ವರ್ಷಗಳ ಆಡಳಿತದಲ್ಲಿ ರಾಜ್ಯವನ್ನು ನಿಜಕ್ಕೂ ರಾಮರಾಜ್ಯ ಮಾಡಿದ್ದರು. ಕೃಷಿ, ನೀರಾವರಿ, ಕೈಗಾರಿಕೆ, ವಿದ್ಯುತ್, ಶಿಕ್ಷ ಣ, ಮೂಲಭೂತ ಸೌಕರ್ಯ ಅಭಿವೃದ್ಧಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ್ದರು. ಭಾರತದ ಐದುನೂರ ಅರವತ್ತು ದೇಶೀಯ ಸಂಸ್ಥಾನಗಳಲ್ಲಿಯೇ ಮೈಸೂರು ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯ ಎಂದು ಬ್ರಿಟಿಷ್ ಪಾರ್ಲಿಮೆಂಟ್ ಪ್ರಶಂಸೆ ಮಾಡಿತ್ತು. ಒಂದು ರೀತಿಯಲ್ಲಿ ಆತ್ಮನಿರ್ಭರ ಆಡಳಿತ ಆ ಕಾಲದಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಅನಾವರಣಗೊಂಡಿತ್ತು.
ಹೀಗೆ ನಿರ್ದಿಷ್ಟ ಕಾಲಘಟ್ಟದಲ್ಲಿ ಘಟಿಸಿದ ತಪ್ಪುಗಳು, ಕಾಲಗರ್ಭದಲ್ಲಿ ಹಾಗೆಯೇ ಹೂತು ಹೋಗಬಾರದು. ಸಣ್ಣ ತಪ್ಪುಗಳು ದಿನ ಕಳೆದಂತೆ ಬೃಹದಾಕಾರವಾಗಿ ಬೆಳೆದು ಸಮಾಜದ ನೆಮ್ಮದಿಗೆ ಧಕ್ಕೆಯುಂಟು ಮಾಡಬಹುದು. ತಪ್ಪುಗಳನ್ನು ಸರಿಪಡಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಯಾವುದಾದರೊಬ್ಬ ನಾಯಕ ಪ್ರದರ್ಶಿಸಲೇಬೇಕು. ಸ್ವಾತಂತ್ರ್ಯಾನಂತರ ಐದು ದಶಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅನೇಕ ತಪ್ಪು ಹೆಜ್ಜೆಗಳನ್ನಿಟ್ಟಿತ್ತು. ಪಂಡಿತ್ ಜವಹರಲಾಲ್ ನೆಹರು ಆಡಳಿತಾವಧಿಯಲ್ಲಿ ಘಟಿಸಿದ ಐತಿಹಾಸಿಕ ತಪ್ಪುಗಳನ್ನು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹ ರಾವ್ ಅವರ ಆಡಳಿತದಲ್ಲಿಯೂ ಮುಂದುವರಿಸಲಾಯಿತು. ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆ ರಾಜ್ಯದಲ್ಲಿ ಅಧಿಕಾರ ಹಿಡಿದ ಸರಕಾರಗಳಿಂದ ಗಣನೀಯ ಪ್ರಮಾಣದಲ್ಲಿ ದುರ್ಬಳಕೆ ಆಯಿತು. ವಿಶೇಷ ಸ್ಥಾನಮಾನದ ನೆಪದಲ್ಲಿ ಕಾಶ್ಮೀರಿ ಬ್ರಾಹ್ಮಣರೂ ಸೇರಿದಂತೆ ಹಿಂದುಗಳನ್ನು ನಿರಂತರ ಶೋಷಣೆಗೆ ಗುರಿಪಡಿಸಲಾಯಿತು. ತಮ್ಮದೇ ನೆಲದಲ್ಲಿ ಅವರು ಅನಾಥರಾಗಿ ಧಾರ್ಮಿಕ ಹಿಂಸೆಗೆ ಗುರಿಯಾದರು. ಅಭಿವೃದ್ಧಿ ಗಗನಕುಸುಮ ಆಗಿತ್ತು.
ಹಾಗೇ ಆಯೋಧ್ಯೆಯಲ್ಲಿ ರಾಮಜನ್ಮಭೂಮಿಗೆ ಸಂಬಂಧಿಸಿ ದ್ವೇಷದ ಕಿಡಿಗಳು ಸಿಡಿಯುತ್ತಲೇ ಇದ್ದವು. ದ್ವೇಷದ ಕಿಡಿ ಜ್ವಾಲೆಯಾಗಿ ಹಿಂದುಗಳು ಹಾಗು ಮುಸ್ಲಿಮರ ನಡುವಣ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆಯುಂಟು ಮಾಡಿತ್ತು. ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಕಾಂಗ್ರೆಸ್ ಸರಕಾರಗಳಿಂದ ನಡೆಯಲೇ ಇಲ್ಲ. 1949ರಲ್ಲಿ ಹಿಂದು ಮಹಾಸಭಾ ಬಾಬರಿ ಮಸೀದಿಯ ಅಸ್ತಿತ್ವವನ್ನು ಪ್ರಶ್ನಿಸಿತ್ತು. ಶ್ರೀರಾಮನ ದೇವಾಲಯವನ್ನು ಧ್ವಂಸ ಮಾಡಿ ಅಲ್ಲಿ ಮಸೀದಿ ಕಟ್ಟಲಾಗಿದೆ ಎಂದು ಆರೋಪಿಸಿತ್ತು. ಬಾಬರಿ ಮಸೀದಿಯಲ್ಲಿ ಶ್ರೀರಾಮನ ವಿಗ್ರಹವನ್ನಿಟ್ಟು ಪೂಜೆಗೆ ಚಾಲನೆ ನೀಡಿತ್ತು. ನಂತರ ಕೇಂದ್ರ ಸರಕಾರ ಬಾಬರಿ ಮಸೀದಿಗೆ ಬೀಗ ಹಾಕಿ ಮತ್ತಷ್ಟು ವಿವಾದ ಬೆಳೆಯದಂತೆ ನೋಡಿಕೊಂಡಿತ್ತು. ಶಾಬಾನೋ ಜೀವನಾಂಶ ಪ್ರಕರಣದಲ್ಲಿ ಮುಸ್ಲಿಮರನ್ನು ಓಲೈಸಲು ರಾಜೀವ್ ಗಾಂಧಿಯವರು ಸಂವಿಧಾನವನ್ನೇ ತಿದ್ದುಪಡಿ ಮಾಡುವ ಮಟ್ಟಕ್ಕೆ ಹೋದರು ಎನ್ನುವ ಟೀಕೆ ವ್ಯಾಪಕವಾಗಿತ್ತು. ಇಂತಹ ಸಂದರ್ಭದಲ್ಲಿ ಹಿಂದುಗಳನ್ನು ತೃಪ್ತಿಪಡಿಸಲು ಮಸೀದಿಗೆ ಹಾಕಿದ್ದ ಬೀಗ ತೆರವುಗೊಳಿಸಲು ಆದೇಶಿಸಿದ್ದರು. ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಗಿದ್ದ ಲಾಲ್‌ಕೃಷ್ಣ ಆಡ್ವಾಣಿ ರಥಯಾತ್ರೆ ಆರಂಭಿಸಿದ್ದರು. ಅಂತಿಮವಾಗಿ 1992ರ ಡಿ.6ರಂದು ಮಸೀದಿ ಧ್ವಂಸಗೊಂಡಿತ್ತು. ನಂತರ ಭಾರತದ ಉದ್ದಗಲಕ್ಕೂ ಹಿಂದುಗಳು ಮುಸ್ಲಿಮರ ನಡುವೆ ದ್ವೇಷ ಅಪನಂಬಿಕೆಯ ವಾತಾವರಣ ಸೃಷ್ಟಿಯಾಗಿತ್ತು.
ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಪಡಿಸುವ ನಿರ್ಧಾರ, ಶತಮಾನಗಳಷ್ಟು ಹಳೆಯದಾಗಿದ್ದ ರಾಮಜನ್ಮಭೂಮಿ ವಿವಾದಕ್ಕೆ ನ್ಯಾಯಾಲಯದ ಮೂಲಕವೇ ಪರಿಹಾರ ಕಂಡುಕೊಳ್ಳುವಲ್ಲಿ ಪ್ರದರ್ಶಿಸಿದ ಆಡಳಿತ ನೈಪುಣ್ಯ ನಿಜಕ್ಕೂ ಮೆಚ್ಚುವಂತಹುದು. 1949ರ ಅಕ್ಟೋಬರ್ 17ರಂದು ತಾತ್ಕಾಲಿಕ ವಿಷಯವನ್ನಾಗಿ 370ನೇ ವಿಧಿಯನ್ನು ಸಂವಿಧಾನದ ಭಾಗವಾಗಿ ಸೇರಿಸಲಾಯಿತು. ಇದರನ್ವಯ ಜಮ್ಮು- ಕಾಶ್ಮೀರ ತನ್ನದೇ ಸಂವಿಧಾನ ರಚಿಸಿಕೊಂಡು ಆಡಳಿತ ನಡೆಸಲು ಅವಕಾಶ ನೀಡಲಾಯಿತು. ಇದು ಜಮ್ಮು- ಕಾಶ್ಮೀರದ ಆಡಳಿತಕ್ಕೆ ಸಂಬಂಧಿಸಿ ಭಾರತ ಸಂಸತ್ತಿನ ಸಾಂವಿಧಾನಿಕ ಅಧಿಕಾರವನ್ನು ಮಿತಿಗೊಳಿಸಿತು. ರಕ್ಷ ಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹೊರತುಪಡಿಸಿ ಜಮ್ಮು-ಕಾಶ್ಮೀರ ತನ್ನದೇ ಕಾನೂನುಗಳನ್ನು ರೂಪಿಸಿಕೊಳ್ಳುವ ಪರಮಾಧಿಕಾರವನ್ನು ನೀಡಲಾಗಿತ್ತು. ಜಮ್ಮು- ಕಾಶ್ಮೀರ ಸಂವಿಧಾನ ರಚನಾ ಸಮಿತಿಗೆ ಭಾರತ ಸಂವಿಧಾನದ ಯಾವ ವಿಧಿಗಳನ್ನು ಅಳವಡಿಸಿಕೊಳ್ಳಬೇಕು ಅಥವ ಯಾವ ವಿಧಿಗಳನ್ನು ತಿರಸ್ಕರಿಸಬೇಕು, ವಿಧಿ 370ನ್ನು ತಿರಸ್ಕರಿಸಬೇಕೇ ಅಥವ ಉಳಿಸಿಕೊಳ್ಳಬೇಕೇ ಎನ್ನುವ ಅಧಿಕಾರವನ್ನೂ ನೀಡಲಾಗಿತ್ತು. ಜಮ್ಮು-ಕಾಶ್ಮೀರಕ್ಕೆ ತನ್ನದೇ ಸಂವಿಧಾನ ರಚಿಸಿಕೊಂಡ ಇಲ್ಲಿನ ಸಂವಿಧಾನ ರಚನಾ ಸಮಿತಿ ನಂತರ ವಿಸರ್ಜನೆಗೊಂಡಿತ್ತು. ಆದರೆ ಜಮ್ಮ-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದುಗೊಳಿಸುವ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಆದರೆ ಸಂವಿಧಾನದ 370ನೇ ವಿಧಿಯ 3ನೇ ಉಪವಾಕ್ಯದಂತೆ, ರಾಷ್ಟ್ರಪತಿಗಳು ಹಾಲಿ ವಿಧಿಯ ವ್ಯಾಪ್ತಿ ಮತ್ತು ಅಧಿಕಾರ ತಿದ್ದುಪಡಿ ಮಾಡುವ ಅಧಿಕಾರ ಹೊಂದಿದ್ದರು. ನರೇಂದ್ರ ಮೋದಿಯವರ ಸರಕಾರ ಈ ಉಪವಾಕ್ಯದ ಅನುಕೂಲದ ಲಾಭ ಪಡೆದುಕೊಂಡು, ಜಮ್ಮು- ಕಾಶ್ಮೀರದ ವಿಷಯದಲ್ಲಿ ಭಾರತದ ಸಂವಿಧಾನ ಪರಮಾಧಿಕಾರವನ್ನು ಹೊಂದಿದೆ ಎನ್ನುವ ರಾಷ್ಟ್ರಪತಿ ಆಜ್ಞೆಯನ್ನು ಹೊರಡಿಸಿ ದಶಕಗಳಿಂದ ದೇಶದ ನೆಮ್ಮದಿಗೆ ಭಂಗ ತಂದಿದ್ದ ಸಂವಿಧಾನದ 370 ಮತ್ತು 35ಎ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿತು. 2019 ಆಗಸ್ಟ್ 5ರಂದು ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಕೇಂದ್ರ ಸರಕಾರ ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುತ್ತಿದೆ ಎಂದು ಘೋಷಿಸಿದ್ದರು. ಅದೇ ದಿನ ಜಮ್ಮು- ಕಾಶ್ಮೀರ ಪುನಾರಚನಾ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅದಕ್ಕೆ ಅನುಮೋದನೆ ಪಡೆದುಕೊಂಡಿದ್ದರು. ಈ ಮಸೂದೆ ಅನ್ವಯ ಜಮ್ಮು- ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲಾಯಿತು. ಲಡಾಕ್ ಒಂದು ಹಾಗೂ ಜಮ್ಮು- ಕಾಶ್ಮೀರ ಇನ್ನೊಂದು ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವ ಪಡೆದವು.
ಈ ಮೂಲಕ ಸ್ವಾತಂತ್ರ್ಯನಂತರ ಭಾರತದ ನೆಮ್ಮದಿಗೆ ಭಂಗ ಉಂಟುಮಾಡಿದ್ದ ಅತಿದೊಡ್ಡ ತಲೆನೋವು ನಿವಾರಣೆ ಆದಂತಾಗಿತ್ತು. ಇಂಥದೊಂದು ಐತಿಹಾಸಿಕ ನಿರ್ಧಾರದ ಜೊತೆಜೊತೆಗೆ ಶತಮಾನಗಳ ತಲೆನೋವಾಗಿದ್ದ ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದವೂ ಕೊನೆಗೊಂಡಿದೆ. ಜಮ್ಮು- ಕಾಶ್ಮೀರ ವಿವಾದಕ್ಕೆ 2019ರ ಆಗಸ್ಟ್ 5ರಂದು ಪರಿಹಾರ ದೊರಕಿಸಿದ ನರೇಂದ್ರ ಮೋದಿಯವರ ಸರಕಾರ ಒಂದೇ ಒಂದು ವರ್ಷದ ಅವಧಿಯಲ್ಲಿ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಐತಿಹಾಸಿಕ ನಿರ್ಧಾರಕ್ಕೆ ಚಾಲನೆ ನೀಡಿದ್ದಾರೆ. ದಿಕ್ಕು ಬದಲಿಸುವ ಇಂಥದೊಂದು ಐತಿಹಾಸಿಕ ನಿರ್ಧಾರಕ್ಕೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ ನಿಜಕ್ಕೂ ಅಭಿನಂದನಾರ್ಹರು.
(ಲೇಖಕರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು)