ಒಂದು ವರ್ಷಕ್ಕೇ ಸರ್ಕಾರ ಏದುಸಿರು ಬಿಟ್ಟರೆ ಹೇಗೆ?

ಕುಸಿಯುತ್ತಿರುವ ಸರ್ಕಾರದ ವರ್ಚಸ್ಸಿಗೆ ಹೊಳಪು ತುಂಬಲು ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯಗಳಂಥ ಯೋಜನೆಗಳೂ ವಿಫಲವಾದರೆ ಸಿದ್ದರಾಮಯ್ಯ ಸರ್ಕಾರಕ್ಕೆ ನವಚೈತನ್ಯ ತುಂಬುವ ಪರ್ಯಾಯ ಮಾರ್ಗ ಯಾವುದು?

may1328siddu1

ಗಳಿಸಿದ ಅಧಿಕಾರವನ್ನು ಉಳಿಸಿಕೊಳ್ಳಲು ಗಮನ ಕೊಡದೇ ಹೋದರೆ ನಿಮ್ಮವರೇ ಆದರೂ ಎಷ್ಟು ದಿನ ಅಂತ ನಿಮ್ಮನ್ನು ಸಹಿಸಿಕೊಂಡಾರು? ಹಗಲಿರುಳೂ ದುಡಿದು ಪಕ್ಷವನ್ನು ಅಧಿಕಾರಕ್ಕೆ ತಂದ ಕಾಂಗ್ರೆಸ್‍ನ ಲಕ್ಷಾಂತರ ಕಾರ್ಯಕರ್ತರು ಈ ಪ್ರಶ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಳಾಂತರ್ಯದಲ್ಲಾದರೂ ಕೇಳುತ್ತಿರಲು ಸಾಕು. ವನವಾಸ ಅನುಭವಿಸಿ, ಹೋರಾಟ ನಡೆಸಿ ಗಳಿಸಿದ ಅಧಿಕಾರ ಹೊಳಪು ಕಳೆದುಕೊಳ್ಳುತ್ತಾ ಹೋಗುತ್ತಿದ್ದರೆ ನಂಬಿಕೊಂಡವರ ಮನಸ್ಸು ಅದೆಷ್ಟು ಕಲ್ಲವಿಲಗೊಳ್ಳಲಿಕ್ಕಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಕುಸಿದು ಕುಳಿತಿರುವಾಗ ಗಟ್ಟಿ ಭರವಸೆ ಅಂತಿರುವ ಕರ್ನಾಟಕ ಸರ್ಕಾರವೂ ಭಾರವಾದ ಹೆಜ್ಜೆಯಿಡತೊಡಗಿದರೆ ವರಿಷ್ಠರು ಮೂಕಪ್ರೇಕ್ಷಕರಾಗಿರಲು ಸಾಧ್ಯವೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇನ್ನೆಷ್ಟು ದಿನ ಹಿಡಿಯಬಹುದು?

ಒಂದು ಸರ್ಕಾರದ ಆಯಸ್ಸಿನಲ್ಲಿ ಒಂದು ವರ್ಷದ ಕಾಲಾವಧಿ ಅಂದರೆ ಕಡಿಮೆಯೇನಲ್ಲ. ರಾಜ್ಯದ ಜನತೆಗೆ ಕೊಟ್ಟ ಭರವಸೆಗಳ ಪಟ್ಟಿಯನ್ನು ಕಣ್ಣಮುಂದೆ ಹರವಿಕೊಂಡು ಕುಳಿತರೆ ಒಬ್ಬ ಮುಖ್ಯಮಂತ್ರಿಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ಕಡಿಮೆಯೇ. ಮುಂದಿನ ನಾಲ್ಕು ವರ್ಷಪೂರ್ತಿ ಕಣ್ಣಲ್ಲಿ ಎಣ್ಣೆಬಿಟ್ಟುಕೊಂಡು ಕೆಲಸ ಮಾಡಿದರೂ ಸಮಯ ಸಾಲದು. ಅಂಥದ್ದರಲ್ಲಿ ಹೋದಲ್ಲಿ ಬಂದಲ್ಲಿ ಸರ್ಕಾರ ತೂಕಡಿಸತೊಡಗಿದರೆ ಏನನ್ನಬೇಕು? ನಿಮ್ಮನ್ನು ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸಿದ ಜನರಿಗೆ, ಕಾರ್ಯಕರ್ತರಿಗೆ, ಪಕ್ಷದ ವರಿಷ್ಠರಿಗೆ ಹೇಗಾಗಿರಬೇಡ. ಸ್ವರ್ಗವನ್ನೇ ಧರೆಗಿಳಿಸಲು ಸಾಧ್ಯವಾಗದಿದ್ದರೆ ಪರವಾಗಿಲ್ಲ, ಕನಿಷ್ಠಪಕ್ಷ ಸುಖಾಸುಮ್ಮನೆ ಇರಿಸುಮುರಿಸು ಉಂಟಾಗದಂತಾದರೂ ನೋಡಿಕೊಳ್ಳಬೇಡವೇ? ಅದು ಸರ್ಕಾರದ ಚುಕ್ಕಾಣಿ ಹಿಡಿದವರ ಪ್ರಾಥಮಿಕ ಕರ್ತವ್ಯ ಕೂಡ. ಅದನ್ನೇ ಅಲಕ್ಷೃ ಮಾಡಿದರೆ ಸರ್ಕಾರದ ಪಾಲಿಗೆ ನೆಮ್ಮದಿಯ ನಾಳೆಗಳು ಬರಬಹುದೇ? ಯೋಚಿಸಲೇಬೇಕು!

ಬೇರೆ ಎಲ್ಲ ಬಿಡಿ, ಇತ್ತೀಚೆಗೆ ಹಾದಿ-ಬೀದಿ ರಂಪಾಟವಾದ ಎಡಿಜಿಪಿ ರವೀಂದ್ರನಾಥ ಪ್ರಕರಣವನ್ನೇ ತೆಗೆದುಕೊಳ್ಳೋಣ. ಅದನ್ನು ಸರ್ಕಾರ ನಿಭಾಯಿಸಿದ ರೀತಿ ನಿಜಕ್ಕೂ ನಾಚಿಕೆಗೇಡು. ಆ ಒಂದು ಘಟನೆಯಿಂದ ರಾಜ್ಯ ಸರ್ಕಾರದ ಘನತೆ, ಗೌರವವೇ ಪಾತಾಳ ಸೇರಿಬಿಟ್ಟಿತು. ಆದ ಅಪಮಾನವನ್ನು ಮರೆಯಲು ಅದಿನ್ನೆಷ್ಟು ಕಾಲ ಬೇಕೋ ಆ ದೇವರೇ ಬಲ್ಲ. ರವೀಂದ್ರನಾಥ ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದಷ್ಟೇ ಗೊತ್ತಾಗಬೇಕು. ಆದರೆ ಆ ಪ್ರಕರಣ ಸಾರ್ವತ್ರಿಕವಾಗಿ ಅಸಹ್ಯ ಹುಟ್ಟಿಸುವಂತಾಗಿದ್ದರೂ ಸಬೂಬು ಹೇಳುತ್ತ, ಏನೂ ಆಗಿಲ್ಲ ಎಂಬಂತೆ ಸರ್ಕಾರ ಕೈಕಟ್ಟಿ ಕುಳಿತಿದ್ದಿದೆಯಲ್ಲ ಅದು ಯೋಚನೆಗೆ ಹಚ್ಚುವಂಥದ್ದು.

ಮೊದಲನೆಯದಾಗಿ, ಉನ್ನತ ಪೊಲೀಸ್ ಅಧಿಕಾರಿಗಳೇ ಈ ಮಟ್ಟಕ್ಕೆ ಇಳಿದು, ಹಾವು-ಮುಂಗುಸಿಯಂತೆ ಕಚ್ಚಾಡಿದ್ದು ಯಾರಿಗೆತಾನೆ ಶೋಭೆ ತರಲು ಸಾಧ್ಯ? ಹಾಗೆ ಮಾಡುವುದರಿಂದ ಇಡೀ ಆಡಳಿತ ವ್ಯವಸ್ಥೆ ಅರಾಜಕತೆಗೆ ಜಾರುತ್ತದೆ ಎಂಬುದರ ಕನಿಷ್ಠಪ್ರಜ್ಞೆಯಾದರೂ ಸರ್ಕಾರ ನಡೆಸುವವರಿಗೆ ಬೇಡವೇ? ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರೇ ಬೀದಿಗಿಳಿದು ಬಡಿದಾಡಿಕೊಳ್ಳಲು ಇದೇನು ಪಾಕಿಸ್ತಾನವೋ ಅಫ್ಘಾನಿಸ್ತಾನವೋ? ನಿಜಕ್ಕೂ ಬೇಸರವಾಗುತ್ತದೆ.

ಘನತೆ ಗೌರವದ ವಿಚಾರ ಹಾಗಿರಲಿ, ಸರ್ಕಾರಿ ನಿಯಮಾವಳಿ ಪ್ರಕಾರ ಅಧಿಕಾರಿಗಳಾದವರು ತಮ್ಮೊಳಗಿನ ಹುಳುಕನ್ನು ನಿರ್ದಿಷ್ಟ ಚೌಕಟ್ಟಿನೊಳಕ್ಕೆ ಬಗೆಹರಿಸಿಕೊಳ್ಳಬೇಕೇ ಹೊರತು ಮಾಧ್ಯಮದ ಮುಂದೆ ಹೇಳಿಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ಅದೂ ಇರಲಿ, ಟಿವಿ ಚಾನೆಲ್‍ವೊಂದರ ಪ್ಯಾನಲ್ ಚರ್ಚೆಯಲ್ಲಿ ಕುಳಿತುಕೊಂಡು ಈ ರಾಜ್ಯದ ಗೃಹಮಂತ್ರಿಯನ್ನು ಎಡಿಜಿಪಿ ರವೀಂದ್ರನಾಥ ಪ್ರಶ್ನೆ ಮಾಡುವುದು, ಅವರು ಕೇಳುವ ಪ್ರಶ್ನೆಗಳಿಗೆಲ್ಲ ಗೃಹ ಸಚಿವರು ದೈನೇಸಿಯಾಗಿ ಉತ್ತರ ಕೊಡುತ್ತ, ವಿವರಣೆ ಹೇಳುತ್ತ ಹೋಗುವುದು ಯಾವ ಸೀಮೆಯ ನ್ಯಾಯ. ಇಂಥ ಸನ್ನಿವೇಶವನ್ನು ಬೇರೆಲ್ಲಾದರೂ ಕಂಡಿದ್ದೇವಾ? ಕೇಳಿದ್ದೇವಾ? ಕೊನೆಗೆ ಎಡಿಜಿಪಿ ಪ್ರಕರಣ ತಮಗೆ ಸಂಬಂಧಿಸಿದ್ದಲ್ಲ, ಅದು ಡಿಜಿಪಿಗೆ ಸೇರಿದ್ದು ಅಂತ ಹೇಳಿ ಜಾರ್ಜ್ ಕೈತೊಳೆದುಕೊಂಡರು. ರವೀಂದ್ರನಾಥ ಮನವೊಲಿಸಲು ಅವರದ್ದೇ ಕೋಮಿಗೆ ಸೇರಿದ ಇಬ್ಬರು ಮಂತ್ರಿಗಳು ಸಂಧಾನಕ್ಕಿಳಿದರು. ಇದು ಸರಿ ಅಂತೀರಾ? ಎಲ್ಲದಕ್ಕಿಂತ ಹೆಚ್ಚು ತಲೆತಗ್ಗಿಸುವಂಥ ವಿಷಯ ಅಂದರೆ ಉನ್ನತ ಅಧಿಕಾರಿಗಳೇ ಜಾತಿಯ ಹೆಳೆಯಲ್ಲಿ ಕೆಸರೆರಚಾಟದಲ್ಲಿ ತೊಡಗಿದ್ದು. ಇದು ಏಕಾಏಕಿ ಆದ ಬೆಳವಣಿಗೆ ಅನ್ನಬಹುದೇ? ಒಂದು ಸಂಗತಿಯನ್ನು ಗಮನಿಸಿ, ಬರಬರುತ್ತ ಇಡೀ ಸರ್ಕಾರಿ ವ್ಯವಸ್ಥೆ ಜಾತಿ ಹೆಸರಲ್ಲಿ ಚಿಂದಿ ಚಿತ್ರಾನ್ನವಾಗುತ್ತಿದೆ. ಜಾತಿ ಹಿನ್ನೆಲೆಯಲ್ಲಿ ಕೆಲವರು ಆಯಕಟ್ಟಿನ ಜಾಗಕ್ಕೆ ಬಂದರೆ, ಇನ್ನು ಕೆಲವರು ಅದೇ ಕಾರಣಕ್ಕೆ ಮೂಲೆ ಸೇರಿದ್ದಾರೆ. ವಿಧಾನಸೌಧ, ಬಹುಮಹಡಿ ಕಟ್ಟಡದಲ್ಲಿ ಒಂದು ಸುತ್ತು ಹಾಕಿ ಬಂದರೆ ಅಲ್ಲಿನ ಕಲ್ಲು ಬೆಂಚು, ಗೋಡೆ, ಕಂಬಗಳೆಲ್ಲ ಇದನ್ನೇ ಮಾತಾಡಿಕೊಳ್ಳುತ್ತಿವೆ. ಸರ್ಕಾರ ಕಿವಿತೆರೆದು ಕೇಳಿಸಿಕೊಳ್ಳುತ್ತಾ?

ಬಾಕಿ ಇಲಾಖೆಗಳು ಹೇಗೂ ಇರಲಿ, ಪೊಲೀಸ್ ಮತ್ತು ರಕ್ಷಣಾ ವ್ಯವಸ್ಥೆಯಾದರೂ ಬಿಗಿಯಾಗಿರಬೇಕು. ಪೊಲೀಸ್ ವ್ಯವಸ್ಥೆಯ ಘನತೆಗೆ ಚ್ಯುತಿ ಬರಬಾರದು. ಗೌರವದ ಮಾತು ಹಾಗಿರಲಿ, ಪೊಲೀಸ್ ಇಲಾಖೆಯ ಜಂಘಾಬಲ ಉಡುಗಿಸುವ ಘಟನೆಗಳೇ ನಡೆಯುತ್ತಿವೆಯಲ್ಲ. ಗುಲ್ಬರ್ಗದ ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ ಶೂಟೌಟ್ ಪ್ರಕರಣವನ್ನೇ ತೆಗೆದುಕೊಳ್ಳಿ, ಅದು ನಡೆದ ರೀತಿಯೇ ನಿಗೂಢ, ಅನುಮಾನಾಸ್ಪದ. ಬಂಡೆ ಸಾವಿನ ಹಿನ್ನೆಲೆಯಲ್ಲಿ ಡಿಐಜಿ ವಜೀರ್ ಅಹಮದ್ ವಿರುದ್ಧವೇ ಆರೋಪ ಕೇಳಿಬಂತು. ವಜೀರ್ ಅಹಮದ್ ಮತ್ತು ಬಂಡೆ ನಡುವಿನ ಮನಸ್ತಾಪವೇ ಇಷ್ಟೆಲ್ಲ ಅನಾಹುತಕ್ಕೆ ಕಾರಣ ಎಂಬ ಮಾತು ಕೇಳಿಬಂತು. ಆದರೆ ಸರ್ಕಾರ ಪ್ರಕರಣವನ್ನು ಸಿಐಡಿ ಹೆಗಲಿಗೆ ಹಾಕಿ ಮೌನಕ್ಕೆ ಶರಣಾಗಿಬಿಟ್ಟಿತು. ಮಲ್ಲಿಕಾರ್ಜುನ ಬಂಡೆ ಪ್ರಕರಣದ ತನಿಖೆ ನಡೆದ ರೀತಿ ಮತ್ತು ಸಿಐಡಿ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆಯೋ ಇಲ್ಲವೋ ಎಂಬುದರ ಕುರಿತೇ ವಿಭಿನ್ನ ಮಾತುಗಳು ಕೇಳಿಬರುತ್ತಿವೆ. ಮಲ್ಲಿಕಾರ್ಜುನ ಬಂಡೆ ಸಾವಿನ ಹಿಂದೆಯೂ ಮತ್ತದೇ ಜಾತಿ-ಧರ್ಮದ ಲೆಕ್ಕಾಚಾರ. ಹೇಳುತ್ತ ಹೋದರೆ ಅದೇ ದೊಡ್ಡ ಕತೆ.

ತನಿಕೋಡು ಎನ್‍ಕೌಂಟರ್ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರ ನಡೆದುಕೊಂಡ ರೀತಿ ಇನ್ನೂ ವಿಚಿತ್ರ. ನಕ್ಸಲ್ ನಿಗ್ರಹ ದಳದ ಪೇದೆ ನವೀನ್ ನಾಯಕ್‍ನನ್ನು ಹಿಂದೆಮುಂದೆ ನೋಡದೆ ಕೆಲಸದಿಂದ ಅಮಾನತು ಮಾಡಲಾಯಿತು. ಮರುಕ್ಷಣದಲ್ಲಿ ಎಫ್‍ಐಆರ್ ದಾಖಲಾಯಿತು, ಅರೆಸ್ಟಾಯಿತು. ತನಿಖೆಯನ್ನು ಸಿಐಡಿಗೆ ವಹಿಸಲಾಯಿತು. ಯಾವುದಕ್ಕೂ ತಡವಿಲ್ಲ. ಯಾಕೆ ಹೀಗೆ? ಚುನಾವಣೆ ವೇಳೆ ನಕ್ಸಲ್ ದಾಳಿ ಸಂಭವ ಇದೆ ಎಂಬ ಕಟ್ಟೆಚ್ಚರವಿತ್ತು. ಆ ಹಿನ್ನೆಲೆಯಲ್ಲಿ ರಾತ್ರಿಯೆಲ್ಲ ನಕ್ಸಲ್ ನಿಗ್ರಹ ದಳದವರು ಎಚ್ಚರವಾಗಿ ಕುಳಿತಿದ್ದರು. ಒಂದು ವೇಳೆ ನಕ್ಸಲರೇ ದನ ಸಾಗಿಸುವವರ ಸೋಗಿನಲ್ಲಿ ಪಾರಾಗಿಹೋಗಿದ್ದರೆ? ಇದನ್ನೇಕೆ ಸರ್ಕಾರ ಆಲೋಚನೆ ಮಾಡಲಿಲ್ಲ. ಘಟನೆಯ ಕುರಿತು ಮೊದಲು ತನಿಖೆ ಮಾಡಿ ತಪ್ಪು ಸಾಬೀತಾದರೆ ಪೇದೆ ವಿರುದ್ಧ ಕ್ರಮ ಜರುಗಿಸಬಹುದಿತ್ತಲ್ಲ. ಸರ್ಕಾರ ನಡೆದುಕೊಂಡ ರೀತಿ ಪೆÇಲೀಸರ ಮಾನಸಿಕ ಸ್ಥೈರ್ಯ ಕುಗ್ಗಿಸುವುದಿಲ್ಲವೇ? ಬಾಕಿ ಎಲ್ಲದಕ್ಕಿಂತ ಸರ್ಕಾರಕ್ಕೆ ಒಂದು ಕೋಮಿನ ಓಲೈಕೆಯೇ ಮುಖ್ಯವಾಗಿಹೋಯಿತು.
ಇದಷ್ಟೇ ಅಲ್ಲ, ಸಿದ್ದು ಸರ್ಕಾರದ ಪ್ರಭೆ ಬರುಬರುತ್ತ ಮಸುಕಾಗಲು ಇನ್ನೂ ಸಾಕಷ್ಟು ಕಾರಣಗಳಿವೆ. ರಾಜ್ಯದಲ್ಲಿ ಸರ್ಕಾರ ಬದಲಾದದ್ದು, ಕಳಂಕಿತರನ್ನು ಅಧಿಕಾರದಿಂದ ದೂರ ಇಡುವ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿರೀಕ್ಷೆಯೊಂದಿಗೇನೇ. ಆದದ್ದೇನು? ಜನರ ನಿರೀಕ್ಷೆ ಹುಸಿಯಾಯಿತು ಅಷ್ಟೆ. ಆರೋಪಿಗಳೆಲ್ಲ ಅಪರಾಧಿಗಳಲ್ಲ ಎಂಬ ಹಳೇ ಸೂತ್ರದ ಮೊರೆಹೋಗಲಾಯಿತು. ವಿಧಾನಸೌಧದ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ ಅಂತ ಸ್ವತಃ ಮುಖ್ಯಮಂತ್ರಿಯೇ ಹತ್ತಾರು ಬಾರಿ ಮಂತ್ರಿಗಳಿಗೆ ಸೂಚನೆ ಕೊಡುವ ಪ್ರಸಂಗ ಬಂತು. ಅದನ್ನೂ ಬಹಳಷ್ಟು ಮಂತ್ರಿಗಳು ಕಿವಿಗೆ ಹಾಕಿಕೊಳ್ಳಲಿಲ್ಲ ಎಂಬ ಮಾತಿದೆ. ಅರ್ಧಕ್ಕರ್ಧ ಮಂತ್ರಿಗಳು ಕೈಗೇ ಸಿಗುತ್ತಿಲ್ಲ ಅಂತ ಕಾಂಗ್ರೆಸ್ ಕಾರ್ಯಕರ್ತರೇ ಬಹಿರಂಗವಾಗಿ ಬೇಸರ ತೋಡಿಕೊಳ್ಳುತ್ತಿದ್ದಾರೆ. ವಿಧಾನಸೌಧ ಮತ್ತು ಅದರ ಆಸುಪಾಸಿನಲ್ಲಿರುವ ಉನ್ನತ ಅಧಿಕಾರಿ ವಲಯದಲ್ಲೇ ಬೇರೆ ಬೇರೆ ಕಾರಣಕ್ಕೆ ಗುಂಪುಗಾರಿಕೆ ಮಿತಿಮೀರುತ್ತಿದೆಯೆಂಬ ಆರೋಪವಿದೆ. ಪೊಲೀಸ್ ಇಲಾಖೆ ಪದೇಪದೆ ವೈಫಲ್ಯಕ್ಕೀಡಾಗುತ್ತಿದೆ. ಬೆಳಗಾವಿ ರೈತ ಆತ್ಮಹತ್ಯೆ ಪ್ರಕರಣ, ಮಂಗಳೂರಿನ ಗುಂಪುಘರ್ಷಣೆ, ವಿಜಾಪುರದ ಕೋಮುಗಲಭೆ ಪ್ರಕರಣಗಳು ಅದಕ್ಕೊಂದು ನಿದರ್ಶನವಷ್ಟೆ. ರಾಜಧಾನಿ ಬೆಂಗಳೂರು ಸೇರಿ ಎಲ್ಲೆಡೆ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಪೆÇಲೀಸ್ ವ್ಯವಸ್ಥೆ ಆಧುನೀಕರಣಕ್ಕೆ ಚಾಲನೆ ಸಿಕ್ಕಿಲ್ಲ. ಚುನಾವಣೆ ನಡೆದು ವರ್ಷ ಕಳೆದರೂ ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಕೊಡಲಾಗಲಿಲ್ಲ. ಬಡಬಗ್ಗರಿಗೆ ವಸತಿ ಕಲ್ಪಿಸಿಕೊಡುವ ಯೋಜನೆ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ನೀಗುವ ಕೆಲಸ ಸಮರ್ಪಕವಾಗಿ ಆಗಿಲ್ಲ ಅಂತ ಕಾಂಗ್ರೆಸ್ ಕಾರ್ಯಕರ್ತರೇ ಅತೃಪ್ತಿ ತೋಡಿಕೊಂಡಿದ್ದಾರೆ. ಕೈಗಾರಿಕಾ ಅಭಿವೃದ್ಧಿಗೆ ಹೊಸ ಕಸರತ್ತು ನಡೆದೇ ಇಲ್ಲ. ಆರ್ಥಿಕ ಕ್ಷೇತ್ರದಲ್ಲಿ ಹುಮ್ಮಸ್ಸಿಲ್ಲ. ಮೂಲಸೌಕರ್ಯದ ನೀಲನಕ್ಷೆಯೇ ಇನ್ನೂ ತಯಾರಾಗಿಲ್ಲ. ಅಕ್ರಮ ಪಡಿತರ ಚೀಟಿ ಅವ್ಯಾಹತ, ಅನ್ನಭಾಗ್ಯದ ಕನ್ನಕ್ಕೆ ಕಡಿವಾಣವಿಲ್ಲ. ಕೃಷಿಕರ ಮೊಗದಲ್ಲೂ ಮಂದಹಾಸವಿಲ್ಲ. ಶಿಕ್ಷಕರ ನೇಮಕ, ವರ್ಗಾವಣೆ ಬವಣೆ ಯಥಾಸ್ಥಿತಿ ಮುಂದುವರೆದಿದೆ. ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೇಳಲೇಬಾರದು. ಸರ್ಕಾರಿ ಸಾರಿಗೆ ನಷ್ಟ ದುಪ್ಪಟ್ಟಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ನೂರು ಕೋಟಿ ರೂಪಾಯಿ ಸೀಟ್ ಬ್ಲಾಕಿಂಗ್ ಹಗರಣದ ಭೂತ ಮೇಲೆದ್ದು ಕುಳಿತಿದೆ. ಸಾಲದ್ದಕ್ಕೆ ಹಲವಾರು ಇಲಾಖೆಗಳಲ್ಲಿ ಜಪ್ಪಯ್ಯ ಅಂದರೂ ಫೈಲ್‍ಗಳು ಹಂದಾಡುತ್ತಿಲ್ಲ ಎನ್ನುವ ಆರೋಪವಿದೆ. ಹಾಗಿದ್ದರೆ ವರ್ಷದ ಹರ್ಷದ ಕತೆಯೇನು?
ಸರ್ಕಾರದ ಉದಾಸೀನ ಧೋರಣೆಗೆ ಒಂದೊಳ್ಳೆ ಉದಾಹರಣೆ ಇದೆ. ಮೊನ್ನೆ ಶಿರಸಿಯ ಹಿರಿಯರಾದ ಕಾಶಿನಾಥ ಮೂಡಿ ಮಾತಿಗೆ ಸಿಕ್ಕಾಗ ಹೇಳಿದ್ದು. ಅವರ ವಯಸ್ಸು ತೊಂಭತ್ತರ ಆಸುಪಾಸಿನಲ್ಲಿದೆ. ಶಿರಸಿ ಹೃದಯಭಾಗದಲ್ಲಿರುವ ರುದ್ರಭೂಮಿಯ ಒಂದು ಭಾಗದಲ್ಲಿ ಸುಂದರ ಕಲಾಕ್ಷೇತ್ರ ನಿರ್ಮಿಸಬೇಕೆಂಬುದು ಅವರ ಮತ್ತು ಅವರ ಸ್ನೇಹಬಳಗದ ಜೀವಮಾನದ ಕನಸು. ಅವರು ಸ್ಮಶಾನವನ್ನೇ ನಂದನವನ ಮಾಡಲು ಹೊರಟಿದ್ದಾರೆ. ಶಿರಸಿಗೆ ಹೋದಾಗ ಅದನ್ನು ಮುದ್ದಾಂ ನೋಡುವ ಹಾಗಿದೆ. ಅದಕ್ಕಾಗಿ ಅವರು ಐದಾರು ವರ್ಷಗಳಿಂದ ಕನ್ನಡ ಸಂಸ್ಕøತಿ ಇಲಾಖೆಗೆ ಎಡತಾಕುತ್ತಿದ್ದಾರೆ. ಕಲಾಕ್ಷೇತ್ರ ನಿರ್ಮಾಣ ಮಾಡುವ ಸಂಬಂಧ ಅವರು ಅರ್ಜಿ ಕೊಟ್ಟಷ್ಟು ಸಲವೂ ಸಂಸ್ಕøತಿ ಇಲಾಖೆಯಲ್ಲಿ ಒಂದರಮೇಲೊಂದು ಕಡತ ನಿರ್ಮಾಣವಾಗುತ್ತಿದೆಯೇ ಹೊರತು ಕೆಲಸ ಆಗುತ್ತಿಲ್ಲ. ಸರ್ಕಾರ ಕೇಳಿದ ಎಲ್ಲ ವಿವರಣೆಯನ್ನೂ ಅವರು ಒದಗಿಸಿದ್ದಾರೆ. ಸಂಸ್ಕøತಿ ಇಲಾಖೆ, ಡಿಸಿಯಿಂದ ಬಂದ ಪತ್ರ, ನೀಡಿದ ಉತ್ತರಗಳಿಗೆ ಲೆಕ್ಕವಿಲ್ಲ. ಕೊನೆಗೂ ಕಲಾಕ್ಷೇತ್ರ ನಿರ್ಮಾಣಕ್ಕೆ ಅರವತ್ತು ಲಕ್ಷ ರೂ. ಅನುದಾನ ಬಿಡುಗಡೆಯಾಯಿತು. ಅದರಲ್ಲೂ ಒಂದು ಕೊಕ್ಕೆ. ಶಿರಸಿಯಲ್ಲಿ ಎಲ್ಲಿ, ಯಾವ ಸಂಸ್ಥೆಯ ಅಡಿ ಕಲಾಕ್ಷೇತ್ರ ನಿರ್ಮಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಆದೇಶದಲ್ಲಿ ನಮೂದಿಸಲೇ ಇರಲಿಲ್ಲ. ಈಗ ಹಣ ಬಿಡುಗಡೆ ಮಾಡಿದ್ದು ನಿಮಗೇ ಎಂಬುದಕ್ಕೆ ಪುರಾವೆ ಕೊಡಿ ಅಂತ ರುದ್ರಭೂಮಿ ಅಭಿವೃದ್ಧಿ ಸಮಿತಿಗೆ ಮತ್ತೆ ಸರ್ಕಾರದಿಂದ ಪತ್ರ ಬಂದಿದೆಯಂತೆ. ಮುಖ್ಯಮಂತ್ರಿಗಳಿಂದ ಮರುಆದೇಶ ಮಾಡಿಸಿಕೊಂಡು ಬಂದರೆ ಕಾಮಗಾರಿ ಆರಂಭಿಸಲು ಅನುಮತಿ ಕೊಡಬಹುದು ಅಂತ ಅಧಿಕಾರಿಗಳು ಖಾಸಗಿಯಾಗಿ ಹೇಳುತ್ತಿದ್ದಾರಂತೆ. ಮುಖ್ಯಮಂತ್ರಿಗಳ ಮನೆಕಾದು ಹೊಸ ಆದೇಶ ಮಾಡಿಸಿಕೊಳ್ಳುವುದು ಆ ವಯೋವೃದ್ಧರ ಪ್ರಾರಬ್ಧಕರ್ಮ. ಸರ್ಕಾರದ ಕಾರ್ಯವೈಖರಿಗೆ ಇದೊಂದು ಉದಾಹರಣೆ ಮಾತ್ರ.
ಬಾಕಿ ಎಲ್ಲಾ ಅತ್ಲಾಗಿರಲಿ, ಸರ್ಕಾರಕ್ಕೆ ಒಂದು ವರ್ಷ ಕಳೆಯುವ ಹೊತ್ತಿಗೆ ಕಾಂಗ್ರೆಸ್ ಪಕ್ಷದಲ್ಲಿ ಮೂರ್ನಾಲ್ಕು ಬಣಗಳಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಸಮಪಾಲು ಹೊಂದಿದ್ದ ಪರಮೇಶ್ವರ್ ಅವರನ್ನು ಬಲವಂತವಾಗಿ ಸರ್ಕಾರದಿಂದ ದೂರ ಇಟ್ಟದ್ದು ಸಹಜವಾಗಿ ದಲಿತ ವರ್ಗದ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಜತೆಗೆ ಸಿದ್ದರಾಮಯ್ಯ ನೆಚ್ಚಿಕೊಂಡಿದ್ದ ಅಹಿಂದ ವರ್ಗದ ಬೆಂಬಲವೂ ಕಾಂಗ್ರೆಸ್‍ನಿಂದ ಚೆಲ್ಲಾಪಿಲ್ಲಿಯಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ನಿರೀಕ್ಷೆಗಿಂತ ಅರ್ಧಕ್ಕರ್ಧ ಕಡಿಮೆ ಸ್ಥಾನ ಗಳಿಸಲು ಇದೇ ಕಾರಣ ಎಂಬುದು ತಜ್ಞರು ಮುಂದಿಡುವ ತರ್ಕ. ಅಲ್ಲಿಗೆ ಮಹತ್ವಾಕಾಂಕ್ಷೆಯ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಯೋಜನೆಗಳೂ ಕುಸಿಯುತ್ತಿರುವ ಸರ್ಕಾರದ ವರ್ಚಸ್ಸಿಗೆ ಹೊಳಪು ತುಂಬಲು ವಿಫಲವಾದವು ಅಂತಲೇ ಅರ್ಥವಲ್ಲವೇ? ಹಾಗಾದರೆ ಸರ್ಕಾರಕ್ಕೆ ನವಚೈತನ್ಯ ತುಂಬುವ ಮಾರ್ಗ ಯಾವುದು?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top