ಇರುಳು ಕಂಡ ಬಾವಿಗೆ ಹಗಲು ಬೀಳುವುದು!

– ಎನ್. ರವಿಶಂಕರ್.

ಕಳೆದ ಹತ್ತು ದಿನಗಳಲ್ಲಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ(ಕೋವಿಡ್‌ ಹೊರತುಪಡಿಸಿ) ಅತಿಹೆಚ್ಚು ಚರ್ಚೆಯಾದ ವಿಷಯಗಳಿವು.
– ಡ್ರೋನ್‌ ಪ್ರತಾಪ್‌ ತನಗೆ ಅನ್ವರ್ಥನಾಮವಾಗಿರುವ ತಂತ್ರಜ್ಞಾನ ಸಾಧನದ ಕುರಿತು ಮಾಡಿರುವ ಮೋಸ!
– ಭೂಪನೊಬ್ಬ ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳನ್ನು ಬಳಸಿ ಭಾವಿ ವಧುಗಳಿಗೆ ಮಾಡಿರುವ ವಂಚನೆ!
– ಇವೆಲ್ಲಕ್ಕೂ ಕಳಶವಿಟ್ಟಂತೆ- ತಮಿಳುನಾಡಿನಲ್ಲಿ ಮಹಾ ವಂಚಕನೊಬ್ಬ ಎಸ್‌ಬಿಐ ನಕಲಿ ಶಾಖೆಯೊಂದನ್ನು ಸ್ಥಾಪಿಸಿ, ಮೂರು ತಿಂಗಳು ಯಶಸ್ವಿಯಾಗಿ ವಹಿವಾಟು ನಡೆಸಿದ್ದು!
ಜಗತ್ತಿನಲ್ಲಿ ನಡೆಯುವ ಎಲ್ಲ ಮೋಸಗಳ ವಿಷಯದಲ್ಲಿ ಒಂದು ಸಾಮ್ಯವಿರುತ್ತದೆ. ಅದೇನೆಂದರೆ, ಅಂತಹವರನ್ನು ನಂಬಿದ ನಮ್ಮಂಥ ದಡ್ಡರಿರುತ್ತೇವೆ! ಕೊನೆಗೆ, ನಂಬಿ ಮೋಸ ಹೋದ ನಾವೇ ನಿಂದಕರೂ ಆಗಿರುತ್ತೇವೆ. ಮೋಸದ ಕೊನೆಗಿನ ನಮ್ಮ ಸಿಟ್ಟು, ದುರದೃಷ್ಟವಶಾತ್‌, ಮೋಸಗಾರನ ಬಗ್ಗೆ ಇರುತ್ತದೆಯೇ ಹೊರತು ಮೋಸ ಹೋದದ್ದರ ಬಗ್ಗೆ ಇರುವುದಿಲ್ಲ. ಇಲ್ಲಿ ಮೋಸ ಮಾಡಿದ ವ್ಯಕ್ತಿ ಮುಖ್ಯವಾಗಿ, ಮೋಸ ಗೌಣವಾಗುತ್ತದೆ. ಹಾಗಾಗಿ, ಮತ್ತೆ ಮತ್ತೆ ಮೋಸ ನಡೆಯುತ್ತಲೇ ಇರುತ್ತದೆ!
ಯೋಚಿಸಿ ನೋಡಿ! ಮೇಲೆ ಉಲ್ಲೇಖಿಸಿದ ಪ್ರಕರಣಗಳಲ್ಲಿ(ಅಥವಾ, ಮೋಸ ನಡೆದ ಯಾವುದೇ ಪ್ರಕರಣದಲ್ಲಿ), ಮೋಸ ಹೇಗೆ ನಡೆಯಿತು ಎನ್ನುವುದರ ಬಗೆಗಿನ ವಿವರಗಳೇನಾದರೂ ಸುಲಭಕ್ಕೆ ಲಭ್ಯವಿವೆಯೇ? ಇಂಥಹ ಕಥೆಗಳಲ್ಲಿ ಕೊನೆಗೇನಾಯ್ತು ಎನ್ನುವುದರ ಬಗ್ಗೆ ಸಮರ್ಪಕ ಫಾಲೋ-ಅಪ್‌ ಇರುತ್ತದೆಯೇ? ಸಾಮಾನ್ಯವಾಗಿ ಇರುವುದಿಲ್ಲ!
ಏಕೆಂದರೆ, ಪತ್ರಕರ್ತರು ವಿಷಯತಜ್ಞರಲ್ಲ. ಇಂಥ ಮೋಸಗಳಿಗೆ ಸಂಬಂಧಪಟ್ಟಂತೆ ಪತ್ರಕರ್ತರಿಗೆ ಮಾಹಿತಿ ನೀಡುವ ಅಧಿಕಾರಿಗಳೂ ಕೂಡ ಅರೆತಜ್ಞರು. ಏಕೆಂದರೆ, ಸಾಮಾನ್ಯವಾಗಿ ಇವರೆಲ್ಲರೂ Generalists. ಇವರಿಗೆ ವಿಷಯದ ಸ್ಥೂಲವಾದ ಗ್ರಹಿಕೆ ಇರುತ್ತದೆಯೇ ಹೊರತು ಪೂರ್ಣ ಗ್ರಹಿಕೆ ಇರುವುದಿಲ್ಲ. ಅದನ್ನು ಅಪೇಕ್ಷಿಸುವುದೂ ತರವಲ್ಲ. ಏಕೆಂದರೆ, ಆ ವೃತ್ತಿಗೆ ಬೇಕಾದ್ದು ಅನೇಕ ವಿಷಯಗಳ ಮೇಲ್ಪದರದ ಜ್ಞಾನ. ಹಾಗಾಗಿ, ಬುದ್ಧಿವಂತರಾದ Jack of allಗಳಿಗೆ ಎಲ್ಲೆಡೆ ಮನ್ನಣೆ. ಸಮಸ್ಯೆ ಬರುವುದೆಲ್ಲಿ ಎಂದರೆ, ಈ ಜ್ಯಾಕ್‌ಗಳು ತಮಗಿಂತ ಬುದ್ಧಿವಂತ/ವ್ಯವಹಾರಕುಶಲ ವಂಚಕರ ಸಂಪರ್ಕಕ್ಕೆ ಬಂದಾಗ! ವಿಷಯಜ್ಞಾನದಲ್ಲಿ Journalist ಗಳನ್ನೂ Generalistಗಳನ್ನೂ ಮಣಿಸುವಷ್ಟು ಸಾಮರ್ಥ್ಯ‌ ಈ ವಂಚಕರಿಗೆ ಇದ್ದೇ ಇರುತ್ತದೆ. ಅಂತಹ ವಿಷಯಗಳನ್ನು ಮತ್ತು ವ್ಯಕ್ತಿಗಳನ್ನೇ ಇವರು ತಮ್ಮ ಪ್ರಯೋಗಕ್ಕೆ ಆಯ್ದುಕೊಂಡಿರುತ್ತಾರೆ. ಬೆರಗು ಹುಟ್ಟಿಸಬಲ್ಲ ಸಾಧನೆಗಳನ್ನು ಅರೆಬರೆ ಪುರಾವೆಗಳೊಡನೆ ಹೇಳಿದರೂ ಸಾಕು?
ಪರಾಮರ್ಶೆ ಮಾಡುವ ಸಾಮರ್ಥ್ಯ‌, ಸಮಯ ಮತ್ತು ವ್ಯವಧಾನಗಳಿರದ ಮಿಕಗಳು ಬಲೆಗೆ ಬಿದ್ದೇ ಬೀಳುತ್ತವೆ! ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ವಿಷಯತಜ್ಞರಿದ್ದರೂ, ಅವರ ಧ್ವನಿ ‘ಸಮಾಜ’ದ ಗದ್ದಲದಲ್ಲಿ ಉಡುಗಿಹೋಗುತ್ತದೆ. ಮೋಸಗಾರನ ಅಲೆ ನಡೆಯುತ್ತಿದೆ ಎಂದರೆ, ಅದರ ವಿರುದ್ಧದ ಸಣ್ಣಹನಿಗಳಿಗೆ ಯಾರೂ ಕಿವಿಗೊಡುವುದಿಲ್ಲ. ಹಾಗೆ ವಿರೋಧಿಸುವವರನ್ನು ವಿಘ್ನಸಂತೋಷಿಗಳು ಎಂಬಂತೆ ಬಿಂಬಿಸಲಾಗುತ್ತದೆ. ಹಾಗೆಯೇ, ಮೋಸ ಬಯಲಾದ ಕ್ಷಣದಲ್ಲಿ ಮೋಸಗಾರನ ಪರವಹಿಸಿ ಮಾತನಾಡುವವರನ್ನೂ ಜನ ಸಹಿಸುವುದಿಲ್ಲ. ಟ್ರೋಲ್‌ಗಳ ಕಾಟದಿಂದಾಗಿ ತಾರ್ಕಿಕವಾದ ಪರ-ವಿರೋಧ ಚರ್ಚೆಗೆ ಅಲ್ಲಿ ಆಸ್ಪದವಿಲ್ಲ. ಹೀಗಾಗಿ, ಕಾಳನ್ನು ಜೊಳ್ಳಿನಿಂದ ಬೇರ್ಪಡಿಸಲು ಸಾಮಾಜಿಕ ಮಾಧ್ಯಮಗಳು ಸರಿಯಾದ ಸ್ಥಳಗಳಲ್ಲ. ಹೀಗಾಗಿ, ಮಾಹಿತಿ ಸುಲಭವಾಗಿ, ಯಥೇಚ್ಛವಾಗಿ ಲಭ್ಯವಿರುವ ಇಂದಿನ ಕಾಲದಲ್ಲಿಯೂ ವಂಚಕರು ಕೊಬ್ಬಿ ಬೆಳೆಯುತ್ತಾರೆ! ಒಂದರ್ಥದಲ್ಲಿ ಜನರು ಸ್ವಯಂಪ್ರೇರಣೆಯಿಂದ ತಾವಾಗಿಯೇ ಮೋಸಗಾರನ ಮೋಡಿಗೆ ಒಳಪಡುತ್ತಾರೆ.
ಯೋಚಿಸಿ ನೋಡಿ. ತಮ್ಮ ನಿತ್ಯ ವ್ಯವಹಾರಗಳಲ್ಲಿ ಜನರು ಇತರರನ್ನು ಇಷ್ಟು ಸುಲಭವಾಗಿ ನಂಬುತ್ತಾರೆಯೇ? ಖಂಡಿತವಾಗಿಯೂ ಇಲ್ಲ. ಆದರೆ, ಸಾರ್ವತ್ರಿಕ ಮೋಸಗಳ ಹಿಂದಿರುವ ತತ್ವವೇ ಬೇರೆ. ಸಂವಹನದ ಪರಿಭಾಷೆಯಲ್ಲಿ ಇದನ್ನು Willing Suspension of Disbelief ಎಂದು ಕರೆಯಬಹುದು. ತೀರಾ ನಂಬಲಾಗದ ವಿಷಯವೊಂದನ್ನು ಯಾರಾದರೂ ನಮಗೆ ಹೇಳಿದಾಗ, ಅದು ನಿಜಕ್ಕೂ ನಂಬಲಸದಳವಾದ ಉತ್ಪ್ರೇಕ್ಷೆ ಎಂದು ನಮಗನ್ನಿಸಿದಾಗ ನಾವು ಈ ‘ಸಸ್ಪೆಂಷನ್‌ ಆಫ್‌ ಡಿಸ್‌ಬಿಲೀಫ್‌’ ಸ್ಥಿತಿಗೆ ಹೋಗುತ್ತೇವೆ. ಅಂದರೆ, ನಡೆಯುತ್ತಿರುವುದೆಲ್ಲವೂ ಸುಳ್ಳೆಂದು ಗೊತ್ತಿದ್ದರೂ, ‘ನಂಬುವುದಿಲ್ಲ’ ಎನ್ನುವ ಸಹಜ ಮನಃಸ್ಥಿತಿಯನ್ನು ನಾವಾಗಿಯೇ ತಾತ್ಕಾಲಿಕವಾಗಿ ಪಕ್ಕಕ್ಕಿಟ್ಟು, ನಮಗೆ ಈ ಕಟ್ಟುಕಥೆ ಹೇಳುತ್ತಿರುವ ವ್ಯಕ್ತಿಯೊಡನೆ ಅವನ ಕಥೆಯಲ್ಲಿ ಸ್ವಲ್ಪ ದೂರ ಪ್ರಯಾಣ ಮಾಡಲು ನಿರ್ಧರಿಸುತ್ತೇವೆ!
ಇದನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು, ಜಾಕಿಚಾನ್‌ ಅಥವ ರಜನಿಕಾಂತ್‌ರಂತಹವರ ಚಿತ್ರಗಳನ್ನು ನೋಡುವಾಗ ವೀಕ್ಷಕರಲ್ಲಾಗುವ ವಿಶೇಷ ಬದಲಾವಣೆಯನ್ನು ಗಮನಿಸಬೇಕು. ನೂರು ಜನರನ್ನು ಒಟ್ಟಿಗೆ ಹೊಡೆದು ಹಿಮ್ಮೆಟ್ಟಿಸುವ, ಮುಷ್ಠಿಯಿಂದ ಗೋಡೆಯನ್ನು ಪುಡಿಮಾಡುವ, ಕಾರು-ಬೈಕುಗಳನ್ನು ಮೂವತ್ತು ಪಲ್ಟಿ ಹೊಡಿಸಿದರೂ ಏನೂ ಆಗದ ಒಟ್ಟಿನಲ್ಲಿ ತೆರೆಯ ಮೇಲೆ ನಡೆಯುವುದೆಲ್ಲವನ್ನೂ ತರ್ಕಿಸದೆ, ಪ್ರಶ್ನಿಸದೆ, ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ ನೋಡದೆ, ಕಂಡದ್ದನ್ನು ಕಂಡಂತೆ ಒಪ್ಪಿಕೊಳ್ಳುವ ಮನಃಸ್ಥಿತಿಯೇ ಈ ‘ಸಸ್ಪೆಂಷನ್‌ ಆಫ್‌ ಡಿಸ್‌ಬಿಲೀಫ್‌’. ಇದು, ಸಾಮಾನ್ಯವಾಗಿ ವೀಕ್ಷಕನ ಚಿಕಿತ್ಸಕ ಮನೋಭಾವಕ್ಕೆ ವಿರುದ್ಧವಾದುದು. ಆದರೆ, ತಾವು ಮೆಚ್ಚಿದವರ ಬಗ್ಗೆ ಜನರು ಸಹಜತರ್ಕಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ. ವೀಕ್ಷಕ ಈ ‘ಸಸ್ಪೆಂಷನ್‌ ಆಫ್‌ ಡಿಸ್‌ಬಿಲೀಫ್‌’ ಸ್ಥಿತಿಯಲ್ಲಿ ವಿವರಿಸಲಾಗದ ವಿಲಕ್ಷಣ ಸುಖ ಅನುಭವಿಸುತ್ತಾನೆ.
ವೀಕ್ಷಕನ ಇದೇ ಮನಃಸ್ಥಿತಿ ವಂಚಕನ ಬಂಡವಾಳವಾಗುತ್ತದೆ. ನಂಬುವುದಿಲ್ಲ ಎಂದು ಚೆನ್ನಾಗಿಯೇ ಗೊತ್ತಿರುವ ಸುಳ್ಳನ್ನು ಆತನ ಮುಂದಿಡುತ್ತಾರೆ. ಇದು ಸುಳ್ಳು ಎಂದು ಇಬ್ಬರೂ ಒಪ್ಪಿದ್ದೇವೆ ಎನ್ನುವಂತೆ ಸ್ವಲ್ಪ ಹೊತ್ತು ನಟಿಸುತ್ತಾರೆ. ಅದಕ್ಕೆ ಮರುಳಾಗಿ ನಾವು ‘ಸಸ್ಪೆಂಷನ್‌ ಆಫ್‌ ಡಿಸ್‌ಬಿಲೀಫ್‌’ ಸ್ಥಿತಿಯನ್ನು ಸುಲಭವಾಗಿಯೇ ತಲುಪುತ್ತೇವೆ. ಆಗ ಅವರು ನಿಧಾನವಾಗಿ ಸುಳ್ಳಿನ ಜೊತೆಗೆ ಅರೆಸತ್ಯಗಳನ್ನೂ ಉಣಬಡಿಸುತ್ತಾರೆ. ನಿಧಾನವಾಗಿ ನಮ್ಮಿಂದಾಗಬೇಕಾದ ಲಾಭದ ಕಡೆಗೆ ಹೊರಳುತ್ತಾರೆ. ಅದನ್ನು ನಮಗೇ ಲಾಭದಾಯಕ ಎನ್ನುವಂತೆ ಬಿಂಬಿಸುತ್ತಾರೆ. ‘ಸಸ್ಪೆಂಷನ್‌ ಆಫ್‌ ಡಿಸ್‌ಬಿಲೀಫ್‌’ ಸ್ಥಿತಿಯಲ್ಲಿ ಭಾವನಾತ್ಮಕವಾಗಿ ನಿತ್ರಾಣವಾಗಿರುವ ನಾವು ಅವರ ಮಾತನ್ನೂ, ಮಾರಾಟದ ಸರಕನ್ನೂ ಈಗಾಗಲೇ ಮೋಹಿಸಲು ಆರಂಭಿಸಿರುತ್ತೇವೆ. ಅವರ ಪ್ರಸ್ತಾಪಗಳೆಲ್ಲವೂ ನಮಗೆ ಲಾಭದಾಯಕವಾಗಿರುವಂತೆ ಕಾಣಲಾರಂಭವಾಗುತ್ತದೆ. ತಾರ್ಕಿಕವಾಗಿ ಯೋಚಿಸುವ ಬದಲು, ‘ಸಸ್ಪೆಂಷನ್‌ ಆಫ್‌ ಡಿಸ್‌ಬಿಲೀಫ್‌’ ಸ್ಥಿತಿಯಲ್ಲಿರುವ ನಾವು ‘ಈ ಸುಸಂದರ್ಭವನ್ನು ಬಳಸಿಕೊಳ್ಳದಿದ್ದರೆ ನಾವು ಮೂರ್ಖರಾಗುತ್ತೇವೆ’ ಎಂದು ಯೋಚಿಸುತ್ತೇವೆ. ಪರಾಮರ್ಶಿಸದೆಯೇ ಪರವಹಿಸುತ್ತೇವೆ. ಕೆಲವೊಮ್ಮೆ, ಪರ್ಸ್‌ ಕೂಡ ತೆಗೆಯುತ್ತೇವೆ!
ಈ ಪ್ರಕ್ರಿಯೆಯನ್ನು ಸುಸಜ್ಜಿತವಾದ ಪಿತೂರಿಯಂತೆ ಅಥವ ಮಂಕುಬೂದಿ ಎರಚಿ ಮಾಡುವ ಯಾವುದೋ ಮಾಟದಂತೆ ವಿವರಿಸಿರುವುದಕ್ಕೆ ನಿಮ್ಮ ಕ್ಷಮೆಯಿರಲಿ. ವಂಚಕರಿಗೆಲ್ಲ ಈ ‘ಸಸ್ಪೆಂಷನ್‌ ಆಫ್‌ ಡಿಸ್‌ಬಿಲೀಫ್‌’ನ ಥಿಯರಿ/ ತತ್ವ ಗೊತ್ತಿರದಿದ್ದರೂ ಅದರ ಕಾರ್ಯವೈಖರಿ ಗೊತ್ತು! ತಾನು ಏನು ಹೇಳಿದರೆ ಕೇಳುಗ ಮರುಳಾಗುತ್ತಾನೆ ಎನ್ನುವ ಸೂಕ್ಷ್ಮವನ್ನು ಬುದ್ಧಿವಂತ ವಂಚಕರೆಲ್ಲರೂ ಬಲ್ಲರು. ಮೊದಲಿಗೆ ನಿಮಗೆ ಬೇಕಾದ್ದನ್ನು ಹೇಳುತ್ತಾರೆ! ನಂತರ, ತಮಗೆ ಬೇಕಾದ್ದನ್ನು ಮಾಡಿಸುತ್ತಾರೆ!
ಈ ತತ್ವವನ್ನು ಲೇಖನದ ಮೊದಲಲ್ಲಿ ಹೇಳಿದ ಉದಾಹರಣೆಗಳಿಗೆ ಅನ್ವಯಿಸಿ ನೋಡಿ. ಈ ಪ್ರಕ್ರಿಯೆ ಕೆಲಸ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಉದಾಹರಣೆಗೆ – ಮೇಲಿನ ನಕಲಿ ಬ್ಯಾಂಕ್‌ ಪ್ರಕರಣ. ಅಲ್ಲಿನ ಜನರಿಗೆ ಬ್ಯಾಂಕ್‌ ಬೇಕಿತ್ತು. ಅವರು ಅದಕ್ಕೆ ಪೂರಕವಾದ ಪುರಾವೆಗಳನ್ನು ಹುಡುಕಿದರೇ ವಿನಃ ವಿರುದ್ಧವೆನಿಸುವ ಸಬೂತುಗಳನ್ನಲ್ಲ. ವಂಚಕನೂ ಅಷ್ಟೆ! ಆ ಈ ಬ್ಯಾಂಕ್‌ನ ಶಾಖೆ ತೆರೆಯಲಿಲ್ಲ. ಭಾರತದ ಅತಿದೊಡ್ಡ ಮತ್ತು ಸರ್ಕಾರಿ ಸ್ವಾಮ್ಯದ ಎಸ್‌ಬಿಐ ಹೆಸರು ಬಳಸಿದ. ಅಲ್ಲಿಗೆ ಜನರಲ್ಲಿ ಅನುಮಾನದ ಲವಶೇಷವೂ ಇಲ್ಲದಾಯ್ತು. ಹಾಗಾಗಿಯೇ ಎಸ್‌ಬಿಐನ ಲೋಗೋ ಇರುವ ಬೋರ್ಡ್‌, ಲೆಟರ್‌ಹೆಡ್‌, ಸ್ಟ್ಯಾಂಪ್‌ – ಇಷ್ಟೇ ಸಾಕಾಯ್ತು ಬ್ಯಾಂಕ್‌ ಖಾತೆ ತೆರೆಯಲು! ‘ಸಸ್ಪೆನ್ಶನ್‌ ಆಫ್‌ ಡಿಸ್‌ಬಿಲೀಫ್‌’ನ ಸ್ಥಿತಿಯಲ್ಲಿದ್ದ ಜನರು ನಕಲಿ ಬ್ಯಾಂಕ್‌ನ ವಹಿವಾಟಿನ ಮುಂದಿನ ಪದರದ ನ್ಯೂನತೆಗಳನ್ನು ಗಮನಿಸುವ ಗೋಜಿಗೇ ಹೋಗಲಿಲ್ಲ. ನಮ್ಮ ಚಿಕ್ಕ ಊರಿನಲ್ಲಿ ಎಸ್‌ಬಿಐ ಏಕೆ ಶಾಖೆ ತೆರೆಯುತ್ತದೆ ಎಂದು ಯೋಚಿಸಲಿಲ್ಲ. ಹೀಗೆ, ಜನರು ತಮಗೆ ಇಷ್ಟವಾಗುವ ಸತ್ಯವನ್ನು ನಂಬುವ ಜನರು ಸುಲಭಕ್ಕೆ ಮೋಸಹೋಗುತ್ತಾರೆ.
ದೊಡ್ಡ ಮೋಸಗಾರರು ಮಾತ್ರವಲ್ಲ, ನಯವಂಚಕರೂ ಇದೇ ತಂತ್ರವನ್ನು ಅನುಸರಿಸುತ್ತಾರೆ. ಉದಾಹರಣೆಗೆ ಯಾರಾದರೂ ಅಜೆಂಡಾ ಇರುವ ವಾಗ್ಮಿಯನ್ನೋ ರಾಜಕಾರಣಿಯನ್ನೋ ಊಹಿಸಿಕೊಳ್ಳಿ. ಅಂಥವರ ಮಾತಿನ ಧಾಟಿ ಮತ್ತು ಹರಿವು ಗಮನಿಸಿ. ಮೊದಲಿಗೆ ವಿಶ್ವಾಸ ಹುಟ್ಟಿಸಲು ಈಗಾಗಲೇ ಸ್ಥಾಪಿತರಾಗಿರುವ ಸಾಮಾಜಿಕ ಅಥವಾ ಧಾರ್ಮಿಕ ನಾಯಕರ ಆವಾಹನೆ ಮಾಡುತ್ತಾರೆ. ಅಂಥವರ ವಾಕ್ಯಗಳನ್ನೂ ವ್ಯಾಖ್ಯೆಗಳನ್ನು ಜನರನ್ನು ‘ಸಸ್ಪೆಂಷನ್‌ ಆಫ್‌ ಡಿಸ್‌ಬಿಲೀಫ್‌’ ಸ್ಥಿತಿಗೆ ಕೊಂಡೊಯ್ಯಲು ಬಳಸುತ್ತಾರೆ. ಆನಂತರ ಅರೆಸತ್ಯಗಳನ್ನೂ, ತದನಂತರ ಅಬದ್ಧಗಳ ರಾಶಿಯನ್ನೂ ಪೇರಿಸುತ್ತಾರೆ. ಭಾವನಾತ್ಮಕವಾಗಿ ಮಾರುಹೋದ ಜನರಿಗೆ ಈ ಸತ್ಯ, ಅರೆಸತ್ಯ, ಅಬದ್ಧಗಳ ನಡುವಿನ ಗೆರೆಗಳು ಮಸುಕಾಗುತ್ತವೆ. ಮೋಸಹೋಗುತ್ತೇವೆ. ಮುಂದೊಮ್ಮೆ ಅದೇ ಮಾತುಗಳನ್ನು ಕೇಳಿದಾಗ ? ಛೆ, ನಾವದೆಷ್ಟು ದಡ್ಡರಾಗಿದ್ದೆವು!? ಅನಿಸಿದರೂ, ಆ ಹೊತ್ತಿಗೆ ಅದು ನಮಗಿಷ್ಟವಾದ ನಂಬಬಹುದಾದ ಸತ್ಯವಾಗಿತ್ತು ಎನ್ನುವುದಷ್ಟೆ ದಿಟ!

ಇಂಥ ಮೋಸಗಾರರ ಪತ್ತೆ ಹೇಗೆ?
– ಮೋಸಗಾರ ವಿಷಯದ ಸುತ್ತ ಮಾತನಾಡುತ್ತಾನೆ. ಆದರೆ, ಮೂಲವಿಷಯದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ.
– ಮೋಸಗಾರನ ಬಳಿ ಸಾಮಾನ್ಯವಾಗಿ ಒಂದು absurd claim / ಅಸಂಗತವಾದ ಸಾಧನೆ ಮಾಡಿರುವೆನೆಂಬ ಹೇಳಿಕೆ ಇರುತ್ತದೆ. ಅದನ್ನು ಪ್ರತಿಬಾರಿಯೂ ಬಳಸುತ್ತಾನೆ.
– ಮೋಸಗಾರರು ನೆವ ಹೇಳುವುದರಲ್ಲಿ ನಿಸ್ಸೀಮರು. Show and Tell ಮಾಡುವ ಬದಲು ವಿವರಿಸುತ್ತಾರೆ. ಅಂಗೈಯಲ್ಲಿ ಅರಮನೆ ತೋರಿಸುತ್ತಾರೆ.
– ಮಿಕ್ಕಂತೆ ಸಮಯ ಕೊಡುತ್ತಾರೆ. ಮುಖ್ಯ ವಿಷಯಕ್ಕೆ ಬಂದಾಗ ಅವಸರ ಮಾಡುತ್ತಾರೆ.
– ಅವರಿಗೆ ಇದುವರೆಗೂ ಮನ್ನಣೆ ನೀಡಿದವರು / ಅವರನ್ನು ಗುರುತಿಸಿದವರು ಸಾಮಾನ್ಯವಾಗಿ ಅದೃಶ್ಯರಾಗಿರುತ್ತಾರೆ. ಅಥವಾ, ಸಾಮಾನ್ಯರಿಗೆ ನಿಲುಕದ ‘ಪ್ರಖ್ಯಾತ’ರಾಗಿರುತ್ತಾರೆ.
ಬೇರೆಯವರು/ಸಮಾಜ ತಮಗೆ ಅನ್ಯಾಯ ಮಾಡಿರುವ ಕಥೆಯಿಂದ, ಇವರ ಯಶೋಗಾಥೆ ಆರಂಭವಾಗಿರುತ್ತದೆ.
– ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಪ್ರಕರಣಗಳ ಪ್ರಮುಖ ಪಾತ್ರಧಾರಿಗೆ ಸಾಮಾನ್ಯವಾಗಿ megalomania / ಮಹತ್ವೋನ್ಮಾದ, ಅಥವಾ ತನ್ನ ಬಗ್ಗೆ ಉತ್ಪ್ರೇಕ್ಷಿತ ಕಲ್ಪನೆ ಇರುತ್ತದೆ. ಅದನ್ನು ಮರೆಮಾಚಲು ಬೇಕಾದ ಸಭ್ಯತೆಯ ಸೋಗೂ ಇರುತ್ತದೆ. ಎರಡೂ ಸೇರಿ ಇವರ ನೈಜ ವ್ಯಕ್ತಿತ್ವ ಮರೆಮಾಚಿರುತ್ತದೆ, ಅವರ ಮಾತುಗಳು rehearsed / ಪೂರ್ವಾಭ್ಯಾಸ ಮಾಡಿದಂತಿರುತ್ತದೆ.
– ಪುನರಾವರ್ತನೆ ಇವರ ಮತ್ತೊಂದು ಅಸ್ತ್ರ. ಹೇಳಿದ್ದನ್ನೇ ಒತ್ತಿ ಹೇಳುವುದು. ಸತ್ಯವಲ್ಲದಿದ್ದರೆ ಇವರು ಅದನ್ನು ಇಷ್ಟೊಂದು ಖಂಡಿತವಾಗಿ ಹೇಳುತ್ತಿರಲಿಲ್ಲ ಎನಿಸುವಂತೆ ಮಾಡುವುದು.
– ಅದೃಶ್ಯ ಶತ್ರುವಿನೊಡನೆ ಹೋರಾಟ ಮಾಡುತ್ತಿದ್ದೇನೆ ಎನ್ನುವ ಭಾವನೆ ಬಿತ್ತುವುದು. ಯಾರು ಈ ಶತ್ರು ಎಂದು ಕೇಳಿದಾಗ ಉತ್ತರವಿಲ್ಲದಿರುವುದು.
– ಕಡೆಯದಾಗಿ, Playing the victim card! ಇವರನ್ನು ಹಿಮ್ಮೆಟ್ಟಿಸಲು ಅಥವ ಪುರಾವೆ ಕೇಳಲು ಬಂದೊಡನೆ ತಾನು ಲೋಕೋದ್ಧಾರಕ, ಮತ್ತು ಇತರರು ಅದನ್ನು ಸಹಿಸದ ದುರುಳರು, ತನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಘೋಷಿಸುವುದು.

ಮೇಲಿನ ಉದಾಹರಣೆಗಳನ್ನೂ, ನಿಮಗೆ ಗೊತ್ತಿರುವ ಇತರ ಉದಾಹರಣೆಗಳನ್ನೂ ಒರೆಗೆ ಹಚ್ಚಿ ನೋಡಿ. ನಮಗೆ ಮೋಸ ಮಾಡಿರುವ / ಮಾಡುತ್ತಿರುವವರ ವಿಷಯದಲ್ಲಿ, ಮೇಲಿನ ಬಹುಪಾಲು ಅಂಶಗಳು ನಿಜವಾಗಿರುತ್ತವೆ.
(ಲೇಖಕರು ಸಂವಹನ ಸಲಹೆಗಾರರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top