ದಾದಿ ಸೇವೆಯ ಆದಿ

ಕಣ್ಣೆದುರೇ ಮಗು ಇದ್ದರೂ ಮುದ್ದಾಡಲು ಆಗದ ಸ್ಥಿತಿ… ಹೆರಿಗೆ ದಿನಾಂಕ ಹತ್ತಿರವೇ ಇದ್ದರೂ ಕರ್ತವ್ಯದ ಕರೆಯೇ ಮೇಲು… ಅಮ್ಮಾ, ನಿನ್ನ ನೋಡಬೇಕು ಎನ್ನುವ ಒಡಲ ಕುಡಿಗಳ ಅಳಲು… ಎಂಥದ್ದೇ ಪರಿಸ್ಥಿತಿಯಲ್ಲೂ ರೋಗಿಗಳ ಆರೈಕೆ ಮಾಡಬೇಕೆಂಬ ವೃತ್ತಿಪ್ರಜ್ಞೆ… ಕೊರೊನಾ ಸಂದರ್ಭದಲ್ಲಿ ಆರೈಕೆ ಮಾಡುತ್ತಿರುವ ದಾದಿಯರ ಬಿಡಿ ಬಿಡಿ ಭಾವಗಳಿವು. ಅಂತರಾಷ್ಟ್ರೀಯ ದಾದಿಯರ ದಿನದ ನೆಪದಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಸುಯೋಗ ನಮಗೆಲ್ಲರಿಗೂ ದೊರೆತಿದೆ. ನಾವಿಲ್ಲಿ ಕೆಲವು ದಾದಿಯರ ಸೇವೆಯ ಕತೆಯನ್ನು ನಿಮ್ಮ ಮುಂದೆ ಹರವಿಟ್ಟಿದ್ದೇವೆ. ಓದಿಕೊಳ್ಳಿ.

ಹೆರಿಗೆಗೆ ಒಂಬತ್ತು ದಿನ ಬಾಕಿ, ಆದರೂ ಸೇವೆಯ ಹುಮ್ಮಸ್ಸು
ಹೆರಿಗೆಗೆ ಕೇವಲ ಒಂಬತ್ತೇ ದಿನ ಬಾಕಿ, ಒಡಲಲ್ಲಿ ಶಿಶುವನ್ನು ಇಟ್ಟುಕೊಂಡು ಹತ್ತು ಹಲವು ಕನಸುಗಳನ್ನು ಕಾಣುತ್ತಲೇ ನಿತ್ಯ ಆರು ಗಂಟೆಗೂ ಹೆಚ್ಚು ಕಾಲ ರೋಗಿಗಳ ಶೂಶ್ರೂಷೆ ಮಾಡುತ್ತಿದ್ದಾರೆ ಹಾಸನ ಜಿಲ್ಲಾಸ್ಪತ್ರೆಯ ನರ್ಸ್ ಟಿ.ಲಕ್ಷ್ಮಿ. ಮನೆಯಿಂದ ಆಸ್ಪತ್ರೆಗೆ ಹೊರಡುವಾಗ ಕೊರೊನಾ ಸೋಂಕಿನ ಭಯ ಕ್ಷಣಕಾಲ ಕಣ್ಣಮುಂದೆ ಬಂದರೂ, ಏನೆಲ್ಲ ಆಲೋಚನೆ, ಭಯ ಎದುರಾದರೂ, ಸಮವಸ್ತ್ರ ತೊಟ್ಟು ಕರ್ತವ್ಯಕ್ಕೆ ನಿಂತರೆ ಅದೇನೋ ಧೈರ್ಯ, ಹುಮ್ಮಸ್ಸು ಬಂದು ಬಿಡುತ್ತದೆ ಎನ್ನುತ್ತಾರೆ. ಮೇ 20ರಂದು ಹೆರಿಗೆ ಎಂದು ವೈದ್ಯರು ದಿನಾಂಕ ನೀಡಿದ್ದಾರೆ. ‘‘ಕೊರೊನಾ ಸೋಂಕು ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿರುವ ಸಂದರ್ಭದಲ್ಲಿ ಗರ್ಭಿಣಿಯರು ಮನೆಯಿಂದ ಹೊರ ಹೋಗುವುದುಂಟೇ ಎಂಬ ಭಯ ಪಡುವವರು ಇದ್ದಾರೆ. ಆದರೆ ಆರೋಗ್ಯ ಸೇವೆಯಲ್ಲಿ ಇರುವ ನಾವೇ ಭಯಪಟ್ಟರೆ ಹೇಗೆ? ಇಂತಹ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ,’’ ಎನ್ನುತ್ತಾರೆ ಲಕ್ಷ್ಮಿ. ‘‘ಕೊರೊನಾ ಸೊಂಕು ಜಿಲ್ಲೆಗೆ ಕಾಲಿಟ್ಟಿಲ್ಲ ಎಂದಾಕ್ಷಣ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ತನ್ನ ಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸುತ್ತಲೇ ಕೊರೊನಾ ಸೋಂಕು ಜಿಲ್ಲೆಗೆ ಕಾಲಿಡದಂತೆ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಜತೆ ತಾನು ಕೂಡ ಹೋರಾಟ ಮಾಡುತ್ತಿದ್ದೇನೆ. ಮನುಷ್ಯನಿಗೆ ಆತ್ಮಸ್ಥೈರ್ಯ, ಜಾಗೃತಿ, ಮುನ್ನೆಚ್ಚರಿಕೆ ಮುಖ್ಯ. ಅದರಿಂದ ಎಂತಹ ಕಾಯಿಲೆಯನ್ನೂ ಮೆಟ್ಟಿ ನಿಲ್ಲಬಹುದು,’’ ಎಂಬುದು ಲಕ್ಷ್ಮೀ ಅವರ ಅಭಿಪ್ರಾಯ.

ನಿನ್ನನ್ನು ಮುಟ್ಟುವುದಿಲ್ಲ, ದೂರದಿಂದಲೇ ನೋಡುತ್ತೇನಮ್ಮ
ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯ ಮೂವರು ದಾದಿಯರು ತಮ್ಮ ಕರ್ತವ್ಯಕ್ಕೆ ಮಕ್ಕಳು ಅಡ್ಡಿಯಾಗಬಾರದೆಂದು ಅವರನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದಾರೆ. ತಮ್ಮ ಕರುಳಬಳ್ಳಿಗಳನ್ನು ನೋಡದೆ, ಸ್ಪರ್ಶಿಸದೆ, ಕರ್ತವ್ಯವೇ ತಾಯಿಯೆಂದು ನಿತ್ಯವೂ ಕರ್ತವ್ಯಕ್ಕೆ ಹಾಜರಾಗುತ್ತಿರುವ ಶ್ವೇತಾ, ಲತಾ ಮತ್ತು ಶೈಲಜಾ ಅವರಿಗೆ ಜನರ ಮೆಚ್ಚುಗೆ ವ್ಯಕ್ತವಾಗಿದೆ. ‘‘ಎಲ್ಲೆಡೆ ಕೊರೊನಾ ಹರಡುತ್ತಿರುವ ಸುದ್ದಿ ನಮಗೂ ಭಯ ತರಿಸಿದೆ. ಆದರೆ, ಕೊರೊನಾ ನಿಯಂತ್ರಣಕ್ಕೆ ಅಳಿಲು ಸೇವೆ ಸಲ್ಲಿಸಿದ ತೃಪ್ತಿ ನಮಗಿದೆ. ಮಕ್ಕಳನ್ನು ನೋಡದಿರಲು ಕಷ್ಟವಾದರೂ ಸಹಿಸಿಕೊಳ್ಳಬೇಕಿದೆ. ಮನೆಗೆ ಹೋಗಿ ಮಕ್ಕಳ ಬಳಿ ಸುಳಿಯಲು ಕೊರೊನಾ ಭಯ ಕಾಡುತ್ತದೆ. ನಮ್ಮಿಂದ ದೂರವಿರುವುದೇ ಅವರಿಗೆ ಸುರಕ್ಷ ತೆ ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ. ವಿಡಿಯೋ ಕಾಲಿಂಗ್ ಮಾಡಿ ಮಕ್ಕಳೊಂದಿಗೆ ಮಾತನಾಡುತ್ತೇವೆ. ಆದರೆ, ಹೆಚ್ಚು ಮಾತನಾಡಿದರೆ ಹಚ್ಚಿಕೊಳ್ಳುತ್ತಾರೆಂದು ಸ್ವಯಂ ನಿಯಂತ್ರಣ ಹಾಕಿಕೊಂಡಿದ್ದೇವೆ,’’ ಎಂದು ಹೇಳುತ್ತಾರೆ. ‘‘ಅಮ್ಮ, ಮನೆ ಬಳಿ ಬಂದು ನಿಲ್ಲು. ನಿನ್ನನ್ನು ಮುಟ್ಟುವುದಿಲ್ಲ, ದೂರದಿಂದಲೇ ನೋಡುತ್ತೇನೆ,’’ ಎಂದ ನನ್ನ ಮಗುವಿನ ಮನವಿಗೆ ಉತ್ತರಿಸಲಾಗದ ಸ್ಥಿತಿಯಲ್ಲಿರುವುದಾಗಿ ಹೇಳುವಾಗ ಕ್ಷ ಣ ಕಾಲ ದಾದಿ ಲತಾ ಭಾವುಕರಾದರು. ಪಕ್ಕದಲ್ಲೇ ಇದ್ದ ಶ್ವೇತಾ, ಶೈಲಜಾ ಕಣ್ಣಾಲಿಗಳು ತೇವಗೊಂಡಿದ್ದವು. ‘‘ನಾವು ಕರುಳಬಳ್ಳಿಗಳ ಅಂತರ ಕಾಯ್ದುಕೊಂಡಿದ್ದೇವೆ. ಇಡೀ ದೇಶವೇ ಸಂಕಷ್ಟದಲ್ಲಿರುವಾಗ ಸೇವೆ ಮಾಡುವ ಅವಕಾಶ ನಮ್ಮದೆಂಬ ಹೆಮ್ಮೆ ಇದೆ. ಕೊರೊನಾ ಭೀತಿಯ ನಡುವೆ ಕರ್ತವ್ಯ ಮುಖ್ಯ ಎನಿಸಿದೆ,’’ ಎಂದು ಅವರೆಲ್ಲರೂ ಒಕ್ಕೊರಲಿನಿಂದ ಹೇಳುತ್ತಾರೆ.

ಮಗನ ಅಳು ನೋಡಲಾಗದೇ ವಿಡಿಯೊ ಕಾಲ್ ಮಾಡೋದೇ ಬಿಟ್ಟರು
ಒಂದೂವರೆ ವರ್ಷದ ಮಗ ವಿಡಿಯೋ ಕಾಲ್‌ನಲ್ಲಿ ನೋಡಿದರೆ ಅಳುತ್ತಾನೆ ಎಂಬ ಕಾರಣಕ್ಕೆ ಈ ನರ್ಸ್ ವಿಡಿಯೋ ಕಾಲ್ ಮಾಡುವುದನ್ನೇ ಬಿಟ್ಟಿದ್ದಾರೆ! ಬಾಗಲಕೋಟೆ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ರೋಗಿಗಳೊಂದಿಗೆ ಆತ್ಮೀಯರಾಗಿ ಬೆರೆಯುವ ನರ್ಸ್ ರೂಪಾ ವಂಟಮುರಿ ಹೀಗೆ ಭಾವನೆಗಳನ್ನು ಅದುಮಿಟ್ಟು ವಾರಿಯರ್ ಆಗಿ ಗುರುತಿಸಿಕೊಂಡವರು. ಹುನಗುಂದ ತಾಲೂಕಿನ ಅಮೀನಗಡದ ಪತಿಯ ಮನೆಯಲ್ಲಿ ಒಂದೂವರೆ ವರ್ಷದ ಪುತ್ರ ತನುಶ್, ಐದು ವರ್ಷದ ಪುತ್ರ ಅನುಶ್‌ನನ್ನು ಬಿಟ್ಟು ರೂಪಾ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ರೂಪಾ ಅವರ ಪತಿ ಡಾ.ಪ್ರಶಾಂತ್ ಟಿಎಚ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 45 ದಿನಗಳಲ್ಲಿ ಕೇವಲ 2 ದಿನ ಮಾತ್ರ ಊರಿಗೆ ತೆರಳಿ ಮಕ್ಕಳನ್ನು ಮಾತನಾಡಿಸಿ ಬಂದಿದ್ದಾರೆ. ಒಂದು ವಾರ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡ ನಂತರ ಮತ್ತೆ ಒಂದು ವಾರ ವೈದ್ಯಕೀಯ ಸಿಬ್ಬಂದಿ ಕ್ವಾರಂಟೈನ್ ಆಗಬೇಕಾಗುತ್ತದೆ. ಹೀಗಾಗಿ ಊರಿಗೆ ತೆರಳಲು ಅವಕಾಶವೇ ದೊರೆಯುವುದಿಲ್ಲ. ಕುಟುಂಬ ಸದಸ್ಯರೇ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

ಮಗನನ್ನು ಪಕ್ಕದ ಮನೆಯಲ್ಲಿ ಬಿಟ್ಟು ಕೆಲಸ ಮಾಡುವ 6 ತಿಂಗಳ ಗರ್ಭಿಣಿ
ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 7ನೇ ಹೊಸಕೋಟೆ ಉಪಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ್ ಸೌಮ್ಯಾ ಈಗ 6 ತಿಂಗಳ ಗರ್ಭಿಣಿ. ಆದರೆ ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಸೇವೆಗೆ ಆದ್ಯತೆ ಕೊಟ್ಟಿದ್ದಾರೆ. ತನ್ನ ಮತ್ತೊಬ್ಬ ಮಗನನ್ನು ಪಕ್ಕದ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳುವ ಇವರು ಸುಂಟಿಕೊಪ್ಪ ವ್ಯಾಪ್ತಿಯ 7ನೇ ಹೊಸಕೋಟೆ, ತೊಂಡೂರು ಅಂದಗೋವೆ ಮತ್ತಿತರ ಕುಗ್ರಾಮಗಳಿಗೆ ಕಾಲ್ನಡಿಗೆಯಲ್ಲೇ ತೆರಳಿ ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗೆ ಭೇಟಿ ಕೊಟ್ಟು ಮಾಹಿತಿಗಳನ್ನು ಪಡೆಯುವುದರ ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ತಮ್ಮ ಸೇವಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನಾರೋಗ್ಯಕ್ಕೆ ಸಂಬಂಧಿಸಿದ ಕರೆ ಬಂದ ಕೂಡಲೇ ಸ್ಪಂದಿಸುವ ಮೂಲಕ ಈ ವ್ಯಾಪ್ತಿಯಲ್ಲಿ ಅಚ್ಚುಮೆಚ್ಚಿನ ದಾದಿಯಾಗಿದ್ದಾರೆ.

ರಾಜ್ಯದ ಮೊದಲ ಕೊರೊನಾ ರೋಗಿಗೆ ಆರೈಕೆ ಮಾಡಿದ ನರ್ಸ್
ರಾಜ್ಯದಲ್ಲಿ ಮೊದಲ ಕೊರೊನಾ ರೋಗಿ ಆಸ್ಪತ್ರೆಗೆ ದಾಖಲಾದಾಗ ದಿನವಿಡೀ ಅವರ ಸೇವೆಯಲ್ಲಿದ್ದು, ಗುಣಮುಖರಾಗುವಂತೆ ಮಾಡಿದ್ದರು ಈ ಸ್ಟಾಫ್ ನರ್ಸ್.
ಬೆಂಗಳೂರಿನ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 12 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಜಯನಗರದ ಎಂ.ಶಾಂತಾ ಅವರು ಮಾ.9 ರಂದು ದಾಖಲಾದ ರಾಜ್ಯದ ಮೊದಲ ರೋಗಿಗೆ ಚಿಕಿತ್ಸೆ ನೀಡಿದ್ದರು. ನಂತರ ದಾಖಲಾದ ಹತ್ತಕ್ಕೂ ಅಧಿಕ ರೋಗಿಗಳು ಇವರು ಸೇವೆ ಪಡೆದಿದ್ದಾರೆ. ಈ ಹಿಂದೆ ಎಚ್1ಎನ್ 1 ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಪಿಪಿಇ ಕಿಟ್ ಬಳಸುತ್ತಿದ್ದುದರಿಂದ ಈ ರೀತಿಯ ಉಡುಪು ಧರಿಸುವ ಅನುಭವ ಅವರಿಗಿತ್ತು. ಸೋಂಕು ವೇಗವಾಗಿ ಹರಡುವ ಆತಂಕವಿದ್ದುದರಿಂದ ಮನೆಯಲ್ಲಿದ್ದ ಪತಿಯನ್ನು ಊರಿಗೆ ಕಳುಹಿಸಿದ್ದ ಶಾಂತಾ, ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮನೆಗೆ ಬಂದ ನಂತರವೂ ತಮ್ಮ ಕೆಲಸವನ್ನು ತಾವೇ ಮಾಡಬೇಕಾದ ಅನಿವಾರ್ಯ ಅವರಿಗಿತ್ತು. ರಜೆ ಇಲ್ಲದ್ದರಿಂದ ಕೆಲಸದ ಒತ್ತಡ ಅಧಿಕವಾಗಿತ್ತು. ಮಾರ್ಚ್‌ನಿಂದ ಮೇ 4 ರವರೆಗೆ ಅವರು ಕಾರ್ಯನಿರ್ವಹಿಸಿದ್ದು, ನಡುವೆ ಒಂದೆರಡು ದಿನ ಮಾತ್ರ ವಾರದ ರಜೆ ಸಿಕ್ಕಿತ್ತು. ‘‘ಮಾಸ್ಕ್ ಎಂದರೆ ನನಗೆ ಅಲರ್ಜಿ. ಆದರೆ, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಯಿತು. ಮೇ 4 ರ ಬಳಿಕ ಕ್ವಾರಂಟೈನ್ಗೆ ಒಳಗಾದೆ. ರೋಗಿಗಳ ಸೇವೆ ಮಾಡುವಾಗ ನನಗೂ ಸೋಂಕು ಬರಬಹುದು ಎಂಬ ಆತಂಕ ಬರಲೇ ಇಲ್ಲ,’’ ಎಂದು ಶಾಂತಾ ಅನುಭವ ಹಂಚಿಕೊಂಡರು.

ಆರೋಗ್ಯ ಕರ್ತವ್ಯ ಪ್ರಜ್ಞೆಯ ಪ್ರೇಮ
‘‘ಅಯ್ಯೋ ಮೇಡಂ ಗರ್ಭಿಣಿಯಾಗಿ ಮನೆಯಲ್ಲಿದ್ದು ವಿಶ್ರಾಂತಿ ಪಡೆಯುವುದಲ್ಲವೇ,’’ ಎಂದು ರೋಗಿಗಳು ಹಾಗೂ ಅವರ ಸಹಾಯಕರು ವ್ಯಕ್ತಪಡಿಸುವ ಪ್ರೀತಿಯ ಮಾತಿಗೆ ಉತ್ತರ ನೀಡುತ್ತಲೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಹಾಸನ ಜಿಲ್ಲಾಸ್ಪತ್ರೆಯ ನರ್ಸ್ ಪ್ರೇಮಾ ಕೆ. ‘‘ಕೊರೊನಾ ಸೋಂಕು ಜಿಲ್ಲೆಗೆ ಕಾಲಿಡದಂತೆ ವೈದ್ಯಕೀಯ ಸಮೂಹ, ಜಿಲ್ಲಾಡಳಿತ, ಸರಕಾರ ಶ್ರಮಿಸುತ್ತಿರುವಾಗ ಈ ದೇಶದ ಪ್ರಜೆಯಾಗಿ, ಆರೋಗ್ಯ ಸೇವಕಿಯಾಗಿ ತಾನು ಕೂಡ ಕೈಜೋಡಿಸದಿದ್ದರೆ ಹೇಗೆ,’’ ಎಂದು ಪ್ರಶ್ನಿಸುತ್ತಾರೆ ಪ್ರೇಮ. ನರ್ಸ್ ಆಗಿ ತನ್ನ ಸೇವಾವಧಿಯಲ್ಲಿ ಅದೆಷ್ಟೋ ಜನರಿಗೆ ಹೆರಿಗೆ ಮಾಡಿಸಿದ ಅನುಭವ ಇದೆ. ಹೀಗಿರುವಾಗ ತನಗೆ ಹೆರಿಗೆ ಬಗ್ಗೆ ಭಯ, ಆತಂಕವಿಲ್ಲ. ಇದೆಲ್ಲ ಸಹಜ ಕ್ರಿಯೆ. ಆದರೆ ಆರೋಗ್ಯ ಬಗ್ಗೆ ಎಚ್ಚರಿಕೆ ವಹಿಸಿ, ಸರಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳ ಶೂಶ್ರುಷೆ ಮಾಡಬೇಕು ಎನ್ನುತ್ತಾರೆ. ಇವರ ಸೇವಾಮನೋಭಾವ, ಕರ್ತವ್ಯ ಪ್ರಜ್ಞೆಗೆ ಅವರ ಸಹೋದ್ಯೋಗಿಗಳು, ವೈದ್ಯರು ಕೂಡ ಸಲಾಂ ಹೇಳಿದ್ದಾರೆ. ‘‘ಎಂತಹ ಕಷ್ಟದ ಸಂದರ್ಭದಲ್ಲೂ ಹಗಲು-ರಾತ್ರಿ ಸೇವೆ ಸಲ್ಲಿಸಲು ಸಿದ್ಧ ಎಂಬ ತೀರ್ಮಾನಕ್ಕೆ ಬಂದೇ ನರ್ಸ್ ವೃತ್ತಿ ಆಯ್ಕೆಮಾಡಿಕೊಂಡು ಬಂದಿದ್ದೇವೆ, ತರಬೇತಿ ಅವಧಿಯಲ್ಲೂ ಅದನ್ನೇ ಬೋಧಿಸಿರುತ್ತಾರೆ, ಕಣ್ಣೆದುರಿಗೆ ಬಂದು ನಿಂತ ಅದೆಷ್ಟೋ ನೋವು ಕಂಡು, ಚಿಕಿತ್ಸೆ ಬಳಿಕ ಗುಣಮುಖರಾಗಿ ಸಂತಸದಿಂದ ಮನೆಗೆ ತೆರಳುವ ಅದೆಷ್ಟೋ ಜನರನ್ನು ಕಂಡಾಗ ತಮ್ಮ ಸೇವೆ ಸಾರ್ಥಕ ಎನಿಸುತ್ತದೆ. ಹೀಗಾಗಿ ಕೊರೊನಾ ಗಂಭೀರತೆ ಅರಿತು ತಮ್ಮ ಕರ್ತವ್ಯದೊಂದಿಗೆ ಜನ ಜಾಗೃತಿಯನ್ನು ಮೂಡಿಸುತ್ತಿದ್ದೇವೆ,’’ ಎಂದು ಕರ್ತವ್ಯದತ್ತ ಜಾರಿದರು ಪ್ರೇಮ.

ನರ್ಸ್‌ಗಳ ಸೇವೆ ಸ್ಮರಣೀಯ
ಶುಶ್ರೂಷಕರು ಸಮಾಜಕ್ಕೆ ನೀಡಿರುವ ಸೇವೆಗಳ ಗೌರವಾರ್ಥವಾಗಿ ಪ್ರತಿ ವರ್ಷ ಮೇ 12ರಂದು ವಿಶ್ವಾದ್ಯಂತ ‘ಶುಶ್ರೂಷಕರ ದಿನ’ ಆಚರಿಸಲಾಗುತ್ತದೆ. ಇದನ್ನು ಫ್ಲಾರೆನ್ಸ್ ನೈಟಿಂಗೇಲ್ ಜನ್ಮದಿನೋತ್ಸವದ ಸ್ಮರಣಾರ್ಥಕವಾಗಿ ಕೂಡ ನೆರವೇರಿಸಲಾಗುತ್ತದೆ. ನಾಲ್ಕು ತಿಂಗಳಿಂದ ಸವಾಲಾಗಿರುವ ಕೊರೊನಾ ವಿರುದ್ಧದ ನರ್ಸ್‌ಗಳ ಹೋರಾಟ ಅಸಾಮಾನ್ಯ. ಕೇರಳದ ನರ್ಸ್‌ಗಳು ವಿಶ್ವದಲ್ಲೇ ಮುಂಚೂಣಿಯಲ್ಲಿದ್ದಾರೆ. ನಮ್ಮ ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಸರಕಾರಿ ಶುಶ್ರೂಷಕರಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಇದರ ಹತ್ತು ಪಟ್ಟು ನರ್ಸ್‌ಗಳಿದ್ದಾರೆ. ‘‘ಶುಶ್ರೂಷಕರು ತಮ್ಮ ಸುಖ ದುಃಖಗಳನ್ನು ಬದಿಗಿಟ್ಟು ಸೇವಾ ಮನೋಭಾವದಿಂದ ಕಾರ್ಯನಿರತರಾಗಿದ್ದಾರೆ. ಇವರ ಬಗ್ಗೆ ಸರಕಾರ ಹೆಚ್ಚಿನ ಗಮನಹರಿಸಬೇಕಿದೆ,’’ ಎನ್ನುತ್ತಾರೆ ಕರ್ನಾಟಕ ರಾಜ್ಯ ಸರಕಾರಿ ಶುಶ್ರೂಷಕರ ಸಂಘದ ಅಧ್ಯಕ್ಷರಾದ ಮಡಿವಾಳಪ್ಪ ನಾಗರಹಳ್ಳಿ. ಹೀಗೆ ಅವಿರತವಾಗಿ ಶ್ರಮಿಸುತ್ತಿರುವ ಶುಶ್ರೂಷಕರು ಕೆಲವು ಬೇಡಿಕೆಗಳನ್ನು ಹೊಂದಿದ್ದಾರೆ. ಶುಶ್ರೂಷಕರಿಗಾಗಿ ಪ್ರತ್ಯೇಕ ನಿರ್ದೇಶನಾಲಯ, 40 ವರ್ಷಗಳಿಂದ ಆಗದಿರುವ ಶುಶ್ರೂಷಕ ವೃಂದ ನೇಮಕಾತಿ ಬದಲಾವಣೆ, ಕೆಸಿಎಸ್ ನಿಯಮಾಳಿಯ ಮೇರೆಗೆ ಇದು ಪ್ರತಿ 3 ವರ್ಷಕ್ಕೊಮ್ಮೆ ಬದಲಾವಣೆ ಆಗಬೇಕು, ಪ್ರತಿ 3 ವರ್ಷಕ್ಕೊಮ್ಮೆ ಪದೋನ್ನತಿ ನೀಡಬೇಕು, ಕೊರೊನಾ ವಿರುದ್ಧ ಹೋರಾಡುತ್ತಿರುವ ಶುಶ್ರೂಷಕರಿಗೆ ರಿಸ್ಕ್ ಅಲೊವೆನ್ಸ್ (ಭದ್ರತಾ ಭತ್ಯೆ) ನೀಡಬೇಕು, ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಶುಶ್ರೂಷಕ ನರ್ಸಿಂಗ್ ಪದವಿ, ಡಿಪ್ಲೋಮಾ ಪೂರೈಸಿರುವವರಿಗೆ ಆರೋಗ್ಯ ಇಲಾಖೆ ಭರ್ತಿ ಮಾಡುವ ಸಂದರ್ಭದಲ್ಲಿ ತಾರತಮ್ಯ ನಿವಾರಿಸಬೇಕು ಇತ್ಯಾದಿ. ದಾದಿಯರಿಗೆ ಶುಭಾಶಯಗಳು.
– ವಿಜಯಕುಮಾರ ಪತ್ತಾರ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top