ಮನ ಕಲಕುವ ಕೊರೊನೇತರರ ಸಂಕಟ

ಕೊರೊನಾ ಅಬ್ಬರದ ಮಧ್ಯೆ ಕೊರೊನೇತರ ರೋಗಿಗಳ ಗೋಳನ್ನು ಯಾರೂ ಕೇಳುತ್ತಿಲ್ಲ. ಬಹುತೇಕ ಆಸ್ಪತ್ರೆಗಳು ಇಂಥ ರೋಗಿಗಳನ್ನು ಅನುಮಾನದಿಂದ ನೋಡುತ್ತಿವೆ; ಆಸ್ಪತ್ರೆಗಳಿಗೂ ಸೇರಿಸಿಕೊಳ್ಳುತ್ತಿಲ್ಲ. ಪರಿಣಾಮವಾಗಿ ಕೆಲವರು ಬೀದಿಯಲ್ಲಿ ನರಳಾಡುತ್ತ ಬಿದ್ದರೆ, ಮತ್ತೆ ಕೆಲವರು ಸೂಕ್ತ ಚಿಕಿತ್ಸೆ ಸಿಗದೇ ಸತ್ತೇ ಹೋಗುತ್ತಿದ್ದಾರೆ. ಅಂಥ ಹೃದಯವಿದ್ರಾವಕ ಇತ್ತೀಚಿನ ಕೆಲವು ಘಟನೆಗಳು ಇಲ್ಲಿವೆ.

ರಕ್ತಸ್ರಾವದಿಂದ ಮಹಿಳೆ ಸಾವು
ಕನಕಪುರ ತಾಲೂಕಿನ ಟಿ.ಹೊಸಹಳ್ಳಿ ಗ್ರಾಮದ 40 ವರ್ಷದ ಮಹಿಳೆಗೆ ರಕ್ತಸ್ತ್ರಾವ ಉಂಟಾಗಿತ್ತು. ಇದರಿಂದಾಗಿ ಉಸಿರಾಟದ ಸಮಸ್ಯೆಯೂ ಎದುರಾಗಿತ್ತು. ಆದರೆ, ಕನಕಪುರ, ರಾಮನಗರ, ಬೆಂಗಳೂರಿನ ಜಯದೇವ, ರಾಜೀವ್ ಗಾಂಧಿಧಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿಲ್ಲ. ಆದರೆ, ಗ್ರಾಮಸ್ಥರು ಸಹ ಊರಿಗೆ ಸೇರಿಸಿಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದರು. ಆಸ್ಪತ್ರೆ ಹುಡುಕುವುದರಲ್ಲೇ ಸಮಯ ವ್ಯರ್ಥವಾಗಿ ಮಹಿಳೆ ಜುಲೈ 12 ರಂದು ಮೃತಪಟ್ಟಿದ್ದಳು. ಬಳಿಕ ನಡೆಸಿದ ಟೆಸ್ಟ್‌ನಲ್ಲಿ ಈಕೆಗೆ ಕೊರೊನಾ ನೆಗೆಟಿವ್ ವರದಿ ಬಂದಿತ್ತು.

ಚಿಕಿತ್ಸೆ ಸಿಗದೆ ಸತ್ತ ಮಗು
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ 7 ತಿಂಗಳ ಹೆಣ್ಣು ಮಗು ಚನ್ನಪಟ್ಟಣದಲ್ಲಿ ಸೋಮವಾರ ಮೃತ ಪಟ್ಟಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಲೆದು ಮಗು ಸಾವನ್ನಪ್ಪಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಪೇಟೆಬೀದಿ ನಿವಾಸಿ ಪ್ರದೀಪ್ ಅವರು ಮಗುವಿಗೆ ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಬೆಳಗ್ಗೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚಿಕಿತ್ಸೆ ದೊರೆತಿಲ್ಲ. ಬಳಿಕ ಖಾಸಗಿ ಆಸ್ಪತ್ರೆಗೆ ಹೋದಾಗ, ಮಗುವಿನ ಸ್ಥಿತಿ ಗಂಭೀರವಾಗಿದ್ದು ದೊಡ್ಡಾಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಪರೀಕ್ಷೆ ಮಾಡಿದಾಗ ಮಗು ಸತ್ತು ಹೋಗಿರುವುದು ಗೊತ್ತಾಗಿದೆ.

ಬೆಡ್‌ನಲ್ಲಿ ನರಳಿ ಸಾವು
ತೀವ್ರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಬೆಳಗಾವಿ ಜಿಲ್ಲೆಯ ಅಥಣಿಯ ಮಹಿಳೆಯೊಬ್ಬಳು ಒಂದು ವಾರದ ಹಿಂದೆ ಚಿಕಿತ್ಸೆಗಾಗಿ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರಲ್ಲಿ ಕೊರೊನಾ ಲಕ್ಷಣಗಳು ಕಂಡ ಬಳಿಕ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲಎಂದು ಕಳುಹಿಸಿದ್ದಾರೆ. ಬೇರೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಇದ್ದಾಗ ಕೊನೆಯಲ್ಲಿ ಮಹಿಳೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾಳೆ. ಮಹಿಳೆ ಮೂರು ದಿನಗಳ ಬಳಿಕ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಬೆಡ್ ಮೇಲೆಯೇ ನರಳಿ ಮೃತಪಟ್ಟಿದ್ದಾರೆ.

ಅನಾಥವಾದ ಗಾಯಾಳು
ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಕೇವಲ 100 ಮೀಟರ್ ದೂರದಲ್ಲಿ ತೀವ್ರ ಗಾಯಗಳಿಂದ ನರಳುತ್ತ ಬಿದ್ದಿದ್ದ ಯುವಕನನ್ನು ಆಸ್ಪತ್ರೆಗೆ ಸೇರಿಸಿಕೊಂಡಿರಲಿಲ್ಲ. ಈ ವಿಷಯ ಗೊತ್ತಾಗುತ್ತಿದ್ದಂತೆ ಮಂಗಳವಾರ ನಗರ ಠಾಣೆ ಇನ್ಸ್‌ಪೆಕ್ಟರ್‌ ತಿಮ್ಮಪ್ಪ ನಾಯ್ಕ್ ಗಮನಕ್ಕೆ ಬಂದು ಅವರು ವಿಚಾರಣೆ ಮಾಡಿದ್ದಾರೆ. ಸರಕಾರಿ ಆಸ್ಪತ್ರೆಯಿಂದ ಹೊರಹಾಕಿದ್ದಾರೆ, ನಾನು ಚಿಕ್ಕಮಗಳೂರಿನವನು ಎಂದೆಲ್ಲ ಹೇಳಿದ್ದಾನೆ. ಆ ಬಗ್ಗೆ ಸರಕಾರಿ ಆಸ್ಪತ್ರೆಯ ವೈದ್ಯರು, ‘‘ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗಿದ್ದಾನೆ,’’ ಎಂದು ಸ್ಪಷ್ಟಪಡಿಸಿದ್ದಾರೆ. ಶಂಕರನನ್ನು ಮಂಗಳವಾರ ಸಂಜೆ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ನೇತೃತ್ವದಲ್ಲಿ ಯುವಕರು ಮತ್ತೆ ಸರಕಾರಿ ಆಸ್ಪತ್ರೆಗೆ ಸೇರಿಸಿದರು. ಶಂಕರನ ಅಣ್ಣ ಬಾಬು ಎಂಬವರನ್ನು ‘ವಿಜಯ ಕರ್ನಾಟಕ’ ದೂರವಾಣಿ ಮೂಲಕ ಸಂಪರ್ಕಿಸಿದಾಗ, ‘‘ಮಂಗಳೂರಲ್ಲಿ ಕೆಲ ದಿನಗಳ ಹಿಂದೆ ಯಾರೋ ಮುನ್ನನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬುಧವಾರ ನಾವು ಪುತ್ತೂರಿಗೆ ಬಂದು ಮುನ್ನನನ್ನು ಊರಿಗೆ ಕರೆದೊಯ್ಯುತ್ತೇವೆ’’ ಎಂದು ಬಾಬು ತಿಳಿಸಿದರು.

ವೈದ್ಯರ ತಾಯಿಗೇ ಸಿಗಲಿಲ್ಲ ವೆಂಟಿಲೇಟರ್ !
ಕಲಬುರಗಿ
ಜಿಮ್ಸ್ ಮತ್ತು ಇಎಸ್ಐಸಿ ಸೇರಿ ಐದು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ದೊರಕದೆ ಉಸಿರಾಟ ಸಮಸ್ಯೆಯಿಂದ ಒದ್ದಾಡುತ್ತಿದ್ದ ವೈದ್ಯರೊಬ್ಬರ ತಾಯಿಯೇ ಪ್ರಾಣ ಬಿಟ್ಟ ಘಟನೆ ಮಂಗಳವಾರ ನಡೆದಿದೆ.
ಸಮೀಪದ ಹೊನ್ನಕಿರಣಗಿ ಗ್ರಾಮದ ಅಕ್ಕಮಹಾದೇವಿ ಛತ್ರಪತಿ (50) ಅಂಗನವಾಡಿ ಕಾರ್ಯಕರ್ತೆಯಾಗಿದ್ದರು. ಈಕೆಯ ಪುತ್ರ ಎಂಬಿಬಿಎಸ್ ಪದವಿ ಪಡೆದಿದ್ದು, ಈಗ ಎಂ.ಡಿ.ಸ್ನಾತಕೋತ್ತರ ಪದವಿಗಾಗಿ ಯತ್ನಿಸುತ್ತಿದ್ದಾರೆ. ಹೀಗಾಗಿ, ನಾನು ಸ್ವತಃ ವೈದ್ಯ ಎಂದು ಎಷ್ಟೇ ಗೋಗರೆದರೂ ಅವರ ತಾಯಿಗೆ ಯಾವುದೇ ಆಸ್ಪತ್ರೆಯಲ್ಲಿ ಭರ್ತಿ ಮಾಡಿಕೊಳ್ಳಲು ಮೀನಮೇಷ ಎಣಿಸಿದ್ದಾರೆ. ಪಾಸಿಟಿವ್ ಇರಬಹುದು ಎಂಬ ಕಾರಣಕ್ಕೆ ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಲು ಹಿಂದೇಟು ಹಾಕಲಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ದೂರುತ್ತಿದ್ದಾರೆ.
ಮಧ್ಯರಾತ್ರಿ ಸುಮಾರು 2ರ ಹೊತ್ತಿಗೆ ಅಕ್ಕಮಹಾದೇವಿಗೆ ರಕ್ತದೊತ್ತಡ ಕುಸಿದು, ಉಸಿರಾಟ ಸಮಸ್ಯೆಯಿಂದ ಒದ್ದಾಡಲು ಆರಂಭಿಸಿದ್ದಾರೆ. ತಕ್ಷಣ ಜಿಮ್ಸ್‌ಗೆ ಕರೆತಂದಿದ್ದರೂ ಆಕ್ಸಿಜನ್ ಪೂರೈಕೆಗೆ ಪೂರಕವಾಗಿ ವೆಂಟಿಲೇಟರ್ ವ್ಯವಸ್ಥೆ ಸದ್ಯಕ್ಕೆ ಲಭ್ಯವಿಲ್ಲ ಎಂದು ವೈದ್ಯರು ಪ್ರವೇಶ ನಿರಾಕರಿಸಿದ್ದಾರೆ. ಇಎಸ್ಐಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಯೂ ವೈದ್ಯರು ಇದೇ ಉತ್ತರ ನೀಡಿದ್ದಾರೆ. ತಕ್ಷ ಣ ನಗರದ ಮೂರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಎಡತಾಕಿದರೂ ಪ್ರಯೋಜನ ಆಗಿಲ್ಲ. ಕೊನೆಗೆ ವೆಂಟಿಲೇಟರ್ ವ್ಯವಸ್ಥೆಯ ಆಂಬುಲೆನ್ಸ್ ಮೂಲಕ ಹೈದರಾಬಾದ್ ನಗರಕ್ಕೆ ಕರೆದೊಯ್ಯುತ್ತಿದ್ದಾಗ ಮೃತಪಟ್ಟಿದ್ದಾರೆ.

ರಾಜಧಾನಿಯ ಕಥೆ
ಆಭರಣ ವ್ಯಾಪಾರಿ ನವರತನ್ ಲಾಲ್ (40) ಎದೆ ನೋವಿನಿಂದ ನಾಲ್ಕೈದು ಆಸ್ಪತ್ರೆಗಳಿಗೆ ಅಲೆದರು. ಕಿಮ್ಸ್‌ ಬಳಿ ಬಂದಾಗ ಕೊನೆಯುಸಿರೆಳೆದರು. ಅವರು ಸತ್ತ ಮೇಲೆ ಕೊರೊನಾ ವರದಿ ನೆಗೆಟಿವ್ ಆಗಿತ್ತು.
ನಿವೃತ್ತ ಪೊಲೀಸ್ ಅಧಿಕಾರಿ ಪಂಚಾಕ್ಷರಿ(67) ಉಸಿರಾಟದ ತೊಂದರೆಯಿಂದ ಏಳೆಂಟು ಆಸ್ಪತ್ರೆಗಳಿಗೆ ಅಲೆದರು. 48 ಗಂಟೆ ಕಳೆದರೂ ಕೊರೊನಾ ವರದಿ ಬರಲಿಲ್ಲ. ಆಸ್ಪತ್ರೆಯವರು ದಾಖಲಿಸಿಕೊಳ್ಳಲಿಲ್ಲ. ಕೊನೆಯುಸಿರೆಳೆದರು.
ವಿಜಯನಗರ ಠಾಣೆಯ ಪೇದೆ ರವಿ(38) ವೆಂಟಿಲೇಟರ್‌ಗಾಗಿ ಆಸ್ಪತ್ರೆಗಳಿಗೆ ಅಲೆದರು. ವೆಂಟಿಲೇಟರ್‌ ಸಿಗದೆ ಕೊನೆಗೆ ಜೀವ ಬಿಟ್ಟರು.
ವೆಂಕಟೇಶ್-ರಶ್ಮಿ ದಂಪತಿಯ ಒಂದು ತಿಂಗಳ ಕಂದನಿಗೆ ಉಸಿರಾಟ ತೊಂದರೆ. ಎದೆಗೆ ಮಗುವನ್ನು ಕವುಚಿಕೊಂಡು 200 ಕಿಮೀ ಸುತ್ತಾಡಿ ಹತ್ತಾರು ಆಸ್ಪತ್ರೆಗೆ ಹೋದರೂ ಸೇರಿಸಿಕೊಳ್ಳಲಿಲ್ಲ. ಮಗು ಸಾವನ್ನಪ್ಪಿತು. ಮಗುವಿಗೆ ಕೊರೊನಾ ಸೋಂಕು ಇರಲಿಲ್ಲ.
ರಾಜಾಜಿನಗರ ಮಂಜುನಾಥನಗರದ ನಿವಾಸಿ ಚಂದ್ರಶೇಖರ್‌ ಉಸಿರಾಟದ ತೊಂದರೆಯಿಂದ 3 ದಿನ ಏಳೆಂಟು ಆಸ್ಪತ್ರೆಗಳಿಗೆ ಅಲೆದರು. ಚಿಕಿತ್ಸೆ ಸಿಗದೇ ಜು.12 ರಂದು ಸಾವನ್ನಪ್ಪಿದರು.
ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ಆಸ್ಪತ್ರೆಗಳಿಗೆ ಅಲೆದಾಡಿದ ಶ್ರೀರಾಮಪುರದ ಗರ್ಭಿಣಿಗೆ ಕೊನೆಗೆ ಕೆ.ಸಿ.ಜನರಲ್ ಆಸ್ಪತ್ರೆ ಗೇಟಿನ ಬಳಿ ಆಟೊದಲ್ಲಿ ಹೆರಿಗೆಯಾಯಿತು. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಜನಿಸಿದ ಮಗು ಜೀವ ಹೋಗಿತ್ತು.
ಆಸ್ಪತ್ರೆಗೆ ಸೇರಿಸಿ ಎಂದು ಸಿಎಂ ಮನೆ ಹಾಗೂ ರಾಜಭವನದ ಎದುರಿಗೆ ಗೋಳಾಡಿದವರಿಗೆ ಮಾತ್ರ ಪೊಲೀಸರೆ ಆಸ್ಪತ್ರೆಗೆ ದಾಖಲಿಸಿದರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top