ನೀರವ್ ಮೋದಿ ಪ್ರಕರಣ ಮತ್ತು ಬ್ಯಾಂಕಿಂಗ್ ವಾಸ್ತವ

ವಿಜಯ್ ಮಲ್ಯ, ನೀರವ್ ಮೋದಿ ಪ್ರಕರಣಗಳು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಿರುವುದು ನಿಜ. ಭಾರತದ ಬ್ಯಾಂಕುಗಳು ಸುಸ್ತಿದಾರರ ಸಮಸ್ಯೆಯಿಂದ ನರಳುವುದು ಇದೇ ಮೊದಲೇನಲ್ಲ. ಬ್ಯಾಂಕಿಂಗ್ ಸುಧಾರಣೆಯ ನರಸಿಂಹನ್ ಕಮಿಟಿ ಶಿಫಾರಸನ್ನು ಅನುಷ್ಠಾನಕ್ಕೆ ತಂದಿದ್ದು ಎರಡು ಬಿಜೆಪಿ ಸರ್ಕಾರಗಳೇ ಎಂಬುದು ಗಮನಾರ್ಹ.

ವಜ್ರೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಹತ್ತು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾದ ಸುದ್ದಿ ನಿಧಾನಕ್ಕೆ ತಣ್ಣಗಾಗುತ್ತಿದೆ. ಈ ಪ್ರಕರಣ ವಿಜಯ್ ಮಲ್ಯ ಪ್ರಕರಣದಷ್ಟು ತೀವ್ರಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಕಡಿಮೆ.
ರಾಹುಲ್ ಗಾಂಧಿ, ಶತ್ರುಘ್ನ ಸಿನ್ಹಾರಿಂದ ಹಿಡಿದು ನಮ್ಮ ನಟ ಜಗ್ಗೇಶ್‍ವರೆಗೆ ಎಲ್ಲರೂ ತಮ್ಮದೇ ಧಾಟಿಯಲ್ಲಿ ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಟೀಕೆ-ಟಿಪ್ಪಣಿ, ಪರವಿರೋಧದ ಚರ್ಚೆಗಳ ಸುನಾಮಿಯ ನಡುವೆಯೂ ಜಗ್ಗೇಶ್ ತಮ್ಮ ಫೇಸ್‍ಬುಕ್ ಅಕೌಂಟಿನಲ್ಲಿ ಹಾಕಿದ್ದ ಕಮೆಂಟ್ ನನಗೆ ವಿಶೇಷ ಅನ್ನಿಸಿತು. ಏಕೆಂದರೆ, ಪಕ್ಷಪಾತದ ಗಂಧವೇ ಗೊತ್ತಿರದ ಓರ್ವ ಸಾಮಾನ್ಯ ಪ್ರಜೆ ಹೇಗೆ ಪ್ರತಿಕ್ರಿಯಿಸುತ್ತಾನೋ ಅದೇ ತೆರನಾಗಿ ಎಂದಿನ ತಮ್ಮ ಸಿನಿಮಾ ಡೈಲಾಗ್ ಧಾಟಿಯಲ್ಲಿ ಜಗ್ಗೇಶ್ ಪ್ರತಿಕ್ರಿಯಿಸಿದ್ದರು. `ಬ್ಯಾಂಕುಗಳಲ್ಲಿ ಚಲನ್ ತುಂಬಲು ಬಳಸುವ ಮೂರು ಕಾಸಿನ ಪೆನ್ನಿಗೂ ದಾರ ಕಟ್ಟಿ ಬಂದೋಬಸ್ತ್ ಮಾಡಿಡುವ ಈ ಬ್ಯಾಂಕಿನ ನನ್ ಮಕ್ಕಳು ಹತ್ತಿಪ್ಪತ್ತು ಸಾವಿರ ಕೋಟಿ ರೂ. ಟೋಪಿ ಹಾಕಿದ ಮನುಷ್ಯನನ್ನು ಅದ್ಹೇಗೆ ಅಷ್ಟು ಸುಲಭದಲ್ಲಿ ಬಿಟ್ಟುಬಿಡ್ತಾರಪ್ಪ?’ ಎಂಬುದು ಅವರ ಪ್ರಶ್ನೆಯಾಗಿತ್ತು. ಈ ಕಮೆಂಟ್ ನಾವು ನೀವೆಲ್ಲ ನೋಡುವ ಬ್ಯಾಂಕ್ ಶಾಖೆಗಳ ಸಹಜ ವ್ಯವಸ್ಥೆಯಿಂದ ಹಿಡಿದು ದೊಡ್ಡವರು ಮಾಡುವ ಮೋಸಕ್ಕೆ ದೊಡ್ಡ ಹಂತದಲ್ಲೇ ರಕ್ಷಣೆ ಇರುತ್ತದೆ ಎಂಬುದರವರೆಗೆ ಹಲವು ಅರ್ಥಗಳನ್ನು ಧ್ವನಿಸುತ್ತದೆ.
ನೀರವ್ ಮೋದಿ ಯಾರು?: ಮೋದಿ ಅಂದ ತಕ್ಷಣ ಎಲ್ಲರ ಕಿವಿ ನೆಟ್ಟಗಾಗುವುದು ಪ್ರಧಾನಿ ಮೋದಿಗೂ ಈ ಮನುಷ್ಯನಿಗೂ ಏನಾದರೂ ಸಂಬಂಧ ಇದೆಯೇ ಎಂದು. ನೀರವ್ ಮೂಲ ಗುಜರಾತ್ ಆಗಿರುವುದರಿಂದ ಮತ್ತು ಮೋದಿ ಎಂಬ ಪದನಾಮ ಸೇರಿಕೊಂಡಿರುವುದರಿಂದ ಹಾಗೂ ದೊಡ್ಡ ಉದ್ಯಮಿಯೂ ಆಗಿರುವುದರಿಂದ ಈ ಕುತೂಹಲ ಮತ್ತಷ್ಟು ಹೆಚ್ಚಿದೆ. ಆದರೆ ವಾಸ್ತವದಲ್ಲಿ ಈ ಇಬ್ಬರು ಮೋದಿಗಳ ನಡುವೆ ಯಾವ ಸಂಬಂಧವೂ ಇಲ್ಲ.
ಹುಟ್ಟಿ ಬೆಳೆದದ್ದು ಬೆಲ್ಜಿಯಂನಲ್ಲಿ: 48 ವರ್ಷ ವಯಸ್ಸಿನ ನೀರವ್ ಹುಟ್ಟಿ ಬೆಳೆದದ್ದೆಲ್ಲ ಬೆಲ್ಜಿಯಂನಲ್ಲಿ. ವಾರ್ಟನ್ ಬಿಸಿನೆಸ್ ಸ್ಕೂಲ್‍ನಲ್ಲಿ ಕಲಿಯುತ್ತಿದ್ದಾಗ ಅರ್ಧದಲ್ಲೇ ಓದನ್ನು ಬಿಟ್ಟು ಗುಜರಾತಿಗೆ ಬರುತ್ತಾರೆ. ಹತ್ತಿರದ ಸಂಬಂಧಿ, ಹೆಸರಾಂತ ಗೀತಾಂಜಲಿ ಜುವೆಲರಿ ಉದ್ಯಮ ಸಮೂಹದ ಸಂಸ್ಥಾಪಕ ಮೇಹುಲ್ ಚೋಕ್ಸಿ(ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಈಗ ಇವರೂ ಓರ್ವ ಪ್ರಮುಖ ಆರೋಪಿ) ಅವರಲ್ಲಿ ವಜ್ರದ ಆಭರಣ ವಿನ್ಯಾಸ ಕರಗತ ಮಾಡಿಕೊಳ್ಳುತ್ತಾನೆ. ಸಣ್ಣಪ್ರಮಾಣದ ಡೈಮಂಡ್ ವ್ಯಾಪಾರಿಯಾಗಿ ಜುವೆಲರಿ ಉದ್ಯಮಕ್ಕೆ ಪದಾರ್ಪಣೆ ಮಾಡಿದ ನಿರವ್ 1999ರಲ್ಲಿ ಫೈರ್ ಸ್ಟಾರ್ ಎಂಬ ಹೆಸರಿನ ಡೈಮಂಡ್ ಟ್ರೇಡಿಂಗ್ ಕಂಪನಿ ಶುರು ಮಾಡುತ್ತಾರೆ. ಆದರೂ ಉದ್ಯಮಿಯಾಗಿ, ವಜ್ರಾಭರಣದ ಜಾಗತಿಕ ಪ್ರಸಿದ್ಧ ವಿನ್ಯಾಸಗಾರನಾಗಿ ಹೆಸರು ಮಾಡಿ ಪ್ರವರ್ಧಮಾನಕ್ಕೆ ಬಂದದ್ದು ಕಳೆದ 2005ರ ನಂತರದ ದಿನಗಳಲ್ಲಿ(ಅದು ಯುಪಿಎ ಆಡಳಿತಾವಧಿ ಎಂದರೆ ರಾಜಕೀಯ ಬಣ್ಣ ಬರುತ್ತದೆ). ನೀರವ್ ಒಡೆತನದ ಫೈರ್ ಸ್ಟಾರ್ ಮಳಿಗೆಗಳಲ್ಲಿ ಐದು ಲಕ್ಷದಿಂದ 50 ಕೋಟಿ ರೂ.ವರೆಗಿನ ವಜ್ರಾಭರಣ ನಮೂನೆಗಳು ಲಭ್ಯವಿದ್ದವು. ಮುಂಬೈ, ದೆಹಲಿ ಮಾತ್ರವಲ್ಲ, ಹಾಂಕಾಂಗ್, ಬೀಜಿಂಗ್, ಸಿಂಗಾಪುರ, ನ್ಯೂಯಾರ್ಕ್, ಲಾಸ್ ವೆಗಾಸ್, ಹವಾಯ್, ಲಂಡನ್ ಮುಂತಾದೆಡೆ ಮಳಿಗೆಗಳನ್ನು ತೆರೆದರು. ಫೈರ್ ಸ್ಟಾರ್ 2.3 ಮಿಲಿಯನ್ ಡಾಲರ್ ಕಂಪನಿಯಾಗಿ ಬೆಳೆಯಿತು. ನೀರವ್ ಫೈರ್ ಸ್ಟಾರ್ ಜುವೆಲ್ಲರಿ ಆರಂಭಿಸುವ ಸಂದರ್ಭದಲ್ಲಿ ದೇಶದಲ್ಲಿ ಆರ್ಥಿಕ ಹಿಂಜರಿತ ಇತ್ತು. ಅದರ ಪರಿಣಾಮ ಜ್ಯುವೆಲರಿ ಉದ್ಯಮವೂ ಸಂಕಷ್ಟದಲ್ಲಿತ್ತು. ಆದರೆ ನೀರವ್ ಮೋದಿ ಅದೇ ಸಂದರ್ಭ ಬಳಸಿಕೊಂಡು ಕಡಿಮೆ ಮೊತ್ತಕ್ಕೆ ಅಪಾರ ಡೈಮಂಡ್ ಖರೀದಿಸಿದ್ದು ಅವರ ವ್ಯವಹಾರ ಕುಶಲತೆಗೆ ಒಂದು ಉದಾಹರಣೆ.
ನ್ಯೂಯಾರ್ಕ್‍ನ ಮಳಿಗೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರೇ ಉದ್ಘಾಟಿಸಿದ್ದು ಜಾಗತಿಕವಾಗಿ ನೀರವ್ ಹೊಂದಿದ್ದ ಪ್ರಭಾವಕ್ಕೆ ಪುರಾವೆ. 2016 ಫೋರ್ಬ್ಸ್  ಶ್ರೀಮಂತ ಭಾರತೀಯರ ಪಟ್ಟಿಯಲ್ಲೂ ನೀರವ್ ಸ್ಥಾನ ಪಡೆದುಕೊಳ್ಳುತ್ತಾರೆ. ಇಷ್ಟು ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ನೀರವ್ 2017ರ ಕೊನೆಯ ಹೊತ್ತಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 11,500 ಕೋಟಿ ರೂ. ಸುಸ್ತಿದಾರರಾಗಿರುತ್ತಾರೆ. ಇದು ಬೆಳಕಿಗೆ ಬರುತ್ತಿದ್ದಂತೆ 2018 ಜನವರಿ 1ರಂದು ನೀರವ್ ತನ್ನ ಪತ್ನಿ ಅಮಿ, ಸಹೋದರ ನಿಶಾಲ್, ಸಂಬಂಧಿ ಮೇಹುಲ್ ಚೋಕ್ಸಿ ಜತೆಗೆ ದೇಶದಿಂದ ಪರಾರಿ ಆಗುತ್ತಾರೆ.
ನೀರವ್ ಮೋಸಗಾರನೇ?: ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕಾರ ನೀರವ್ 11,500 ಕೋಟಿ ರೂ.ಬಾಕಿ ಪಾವತಿಸಬೇಕು. ಆದರೆ ನೀರವ್ ಪ್ರಕಾರ 5000 ಕೋಟಿ ರೂ. ಮಾತ್ರ ಸಾಲ ಬಾಕಿ ಇರುವುದು. `ಪಿಎನ್‍ಬಿ ಈ ಪ್ರಕರಣವನ್ನು ಬಹಿರಂಗಗೊಳಿಸದಿದ್ದಿದ್ದರೆ ನಾನು ಬೇರೆ ಮೂಲಗಳಿಂದ ನಿಧಿ ಸಂಗ್ರಹಿಸಿ ಬಾಕಿ ಪಾವತಿ ಮಾಡುತ್ತಿದ್ದೆ. ಆದರೆ ಬ್ಯಾಂಕ್ ನನ್ನೆಲ್ಲ ನಿಧಿ ಸಂಗ್ರಹದ ಮೂಲಗಳನ್ನು ಬಂದ್ ಮಾಡಿದೆ’ ಎಂದು ನೀರವ್ ಹೇಳಿದ್ದಾರೆ. ಇದರ ಅರ್ಥ, ಈ ಸಾಲ ತೀರುವಳಿ ಮಾಡಲು ಇನ್ನೆಲ್ಲಿಂದಲೋ ಸಾಲ ತರುತ್ತಿದ್ದೆ, ಅದು ಈಗ ಅಸಾಧ್ಯವಾಗಿದೆ ಎಂದೂ ಆಗುತ್ತದೆ. ನಕಲಿ ಅಥವಾ ಸುಳ್ಳು ಪ್ರಮಾಣಪತ್ರಗಳನ್ನು ನೀಡಿ ಬ್ಯಾಂಕ್‍ನಿಂದ ಅಪಾರ ಸಾಲ ಎತ್ತಿರುವುದು ನೀರವ್ ಮೂಲದಲ್ಲೇ ದ್ರೋಹ ಚಿಂತನೆಯ ವ್ಯಕ್ತಿ ಎಂಬುದು ಗೊತ್ತಾಗುತ್ತದೆ. ಆದರೆ ಇಲ್ಲಿ ಪಿಎನ್‍ಬಿಯ ಉನ್ನತ ಅಧಿಕಾರಿಗಳ ಪಾತ್ರವೂ ದೊಡ್ಡದಿದೆ. ವಿಜಯ್ ಮಲ್ಯ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳು, ಆಡಿಟಿಂಗ್ ಕಂಪನಿಗಳು, ಆಗಿನ ಪ್ರಧಾನಿ, ಪ್ರಧಾನಿಯ ಸೂತ್ರಧಾರರು ಇಂಥವರೆಲ್ಲರ ಹೆಸರು ಕೇಳಿಬಂದಿದೆ. ಪಿಎನ್‍ಬಿ ಮತ್ತು ನೀರವ್ ಮಿಲಾಪಿ ಹಗರಣದ ಕಾಲಘಟ್ಟವೂ ಅದೇ ಆಗಿರುವುದರಿಂದ ಉಳಿದ ವಿಚಾರಗಳು ಇನ್ನಷ್ಟೇ ಹೊರ ಬರಬೇಕಿದೆ.
ಪರಿಣತರ ಪ್ರಕಾರ ಭಾರತೀಯ ಬ್ಯಾಂಕುಗಳು ಭ್ರಷ್ಟ ಆಗುತ್ತಿರುವುದು ಇದೇ ಮೊದಲಲ್ಲ. ಆದರೆ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದರೆ ಇದೇ ಕೊನೆ ಎಂಬ ಹಾಗೆ ಮಾಡಬಹುದು. ಬ್ಯಾಂಕುಗಳ ಆಡಳಿತ ಮಂಡಳಿ ಮತ್ತು ಸರ್ಕಾರಗಳು ಮನಸ್ಸು ಮಾಡಬೇಕಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಕೆ ಕಡಿಮೆ ಇದ್ದಾಗ ಪ್ರತಿ ಬ್ರಾಂಚ್‍ಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಉದಾಹರಣೆಗೆ ಹತ್ತು ಸಾವಿರ ರೂಪಾಯಿ ಸಾಲ ಮಂಜೂರಾತಿಗೆ ಶಾಖಾ ಕ್ಲರ್ಕ್ ಮತ್ತು ಬ್ರಾಂಚ್ ಮ್ಯಾನೇಜರ್ ಕೈ ಬಿಸಿ ಮಾಡಲೇಬೇಕಿತ್ತು. ಇದರ ಪರಿಣಾಮ ಸಣ್ಣ ಸಾಲಗಾರರು ಸುಸ್ತಿದಾರರಾಗಿ ಉಳಿಯುತ್ತಿದ್ದರು. ಈಗ ತಂತ್ರಜ್ಞಾನದಿಂದಾಗಿ ಬ್ಯಾಂಕ್ ವ್ಯವಸ್ಥೆಯ ಕೆಳಹಂತದಲ್ಲಿ ಪಾರದರ್ಶಕತೆ ಬಂದಿದೆ. ಉನ್ನತ ಹಂತದಲ್ಲಿ ಮಲ್ಯ, ನೀರವ್ ಹಗರಣದಂತಹವು ನಡೆಯುತ್ತಿವೆ. ಈ ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ಬ್ಯಾಂಕ್ ವಂಚನೆ ಪ್ರಕರಣಗಳು ಕಡಿಮೆ ಆಗಿವೆೆ, ವಂಚನೆ ಮೊತ್ತ ಹೆಚ್ಚಾಗಿದೆ ಅಥವಾ ಅಷ್ಟೇ ಇದೆ ಎನ್ನಬಹುದು. ಈ ಹಿಂದೆಯೂ ವಸೂಲಾಗದ ಸಾಲವೇ ಬ್ಯಾಂಕುಗಳಿಗೆ ಹೊರೆಯಾಗಿತ್ತು.
ನರಸಿಂಹನ್ ಕಮಿಟಿ ಹೇಳಿದ್ದೇನು: 90ರ ದಶಕದಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿತ್ತು. ಭಾರತದ ಆರ್ಥಿಕ ಭದ್ರತೆಗೆ ಇಟ್ಟಿದ್ದ ಬಂಗಾರವನ್ನೂ ವಿಶ್ವಬ್ಯಾಂಕ್‍ನಲ್ಲಿ ಅಡವಿಡಲಾಗಿತ್ತು. ಆ ವೇಳೆ ಆಗಿನ ಸರ್ಕಾರ ಬ್ಯಾಂಕಿಂಗ್ ಅರ್ಥಶಾಸ್ತ್ರಜ್ಞ ನರಸಿಂಹನ್ ನೇತೃತ್ವದಲ್ಲಿ ಸಲಹಾ ಸಮಿತಿ ನೇಮಕ ಮಾಡಿತು. ನರಸಿಂಹನ್ ಕಮಿಟಿ-1 1991ರಲ್ಲಿ ಮತ್ತು ನರಸಿಂಹನ್ ಕಮಿಟಿ-2 1998ರಲ್ಲಿ ಬ್ಯಾಂಕಿಂಗ್ ಸುಧಾರಣೆಗೆ ಸಲಹೆ ನೀಡಿತು. 1960ರಿಂದ 1980 ರ ದಶಕದಲ್ಲಿ ಭಾರತವನ್ನು ಆಳಿದ ಸರ್ಕಾರಗಳ ಸಮಾಜವಾದಿ ಆರ್ಥಿಕ ಚಿಂತನೆ ಜಾಗತಿಕ ಮಟ್ಟದಲ್ಲಿ ಅಪಮಾನಕ್ಕೆ ಗುರಿ ಆಯಿತು ಎಂಬುದನ್ನು ವರದಿ ಪ್ರಮುಖವಾಗಿ ಉಲ್ಲೇಖಿಸುವುದರ ಜೊತೆಗೆ, ಬ್ಯಾಂಕಿಂಗ್ ವ್ಯವಸ್ಥೆ ಸಬಲೀಕರಣಕ್ಕೆ ಕ್ರಮಗಳನ್ನು ಸಲಹೆ ಮಾಡಿತ್ತು. ಅವೆಂದರೆ-
1) ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಮತ್ತು ಮರುವರ್ಗೀಕರಣ. 2) ಬ್ಯಾಂಕುಗಳಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಬೇಕು. 3) ಕಳೆದ 40-50 ವರ್ಷಗಳಿಂದ ವಸೂಲಾಗದ ಸಾಲದ ಮೊತ್ತವನ್ನು ಮನ್ನಾ ಮಾಡಿ,ಸರ್ಕಾರಗಳು ಅಗತ್ಯ ಬಂಡವಾಳ ತೊಡಗಿಸಿ ಬ್ಯಾಂಕುಗಳನ್ನು ರೋಗಮುಕ್ತ ಮಾಡಬೇಕು 4) ಬ್ಯಾಂಕುಗಳ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಕಡಿಮೆ ಮಾಡಿ, ಬ್ಯಾಂಕಿಂಗ್ ತಜ್ಞರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು 5) ಬ್ಯಾಂಕುಗಳಲ್ಲಿ ಸರ್ಕಾರದ ಪಾಲನ್ನು ಶೇ.33ಕ್ಕೆ ಇಳಿಸಿ ಹೆಚ್ಚಿನ ನಿರ್ವಹಣಾ ಸ್ವಾತಂತ್ರ್ಯ(ಮ್ಯಾನೇಜಿಂಗ್ ಅಟಾನಮಿ) ನೀಡಬೇಕು. 6) ಬ್ಯಾಂಕುಗಳ ನಿರ್ವಹಣೆಯಲ್ಲಿ ಆರ್‍ಬಿಐ ಪಾತ್ರ ನಿರ್ದಿಷ್ಟಪಡಿಸುವುದು. 7) ವಿದೇಶಿ ಬ್ಯಾಂಕುಗಳ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡುವುದು ಇತ್ಯಾದಿ.
ನರಸಿಂಹನ್ ಕಮಿಟಿ ಸಲಹೆಯನ್ನು ಗಮನಿಸಿದರೆ ಈ ಹಿಂದೆಯೂ ಬ್ಯಾಂಕುಗಳು ಮರುಪಾವತಿ ಆಗದ ಸಾಲದಿಂದ ಉಂಟಾಗಿರುವ ಬಂಡವಾಳ ಕೊರತೆಯಿಂದ ಬಳಲುತ್ತಿದ್ದವು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಈ ಹಿಂದಿನ ಯಾವುದೇ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನದ ರಿಸ್ಕ್ ತೆಗೆದುಕೊಂಡಿರಲಿಲ್ಲ. ಕಾರಣ ಟ್ರೇಡ್ ಯೂನಿಯನ್ ಹಾವಳಿ. ಸರ್ಕಾರದ ದೌರ್ಬಲ್ಯದ ಪರಿಣಾಮ ಬ್ಯಾಂಕುಗಳ ನಿರ್ವಹಣಾ ವೆಚ್ಚದ ಹೊರೆ ಏರುತ್ತಲೇ ಇತ್ತು. ಅದೊಂದೇ ಅಲ್ಲ, ಬ್ಯಾಂಕುಗಳನ್ನು ಸಶಕ್ತಗೊಳಿಸಲು ಬಂಡವಾಳ ಹೂಡಿಕೆಯನ್ನೂ ಮಾಡಿರಲಿಲ್ಲ. 1999ರಲ್ಲಿ ವಾಜಪೇಯಿ ಸರ್ಕಾರ ನರಸಿಂಹನ್ ಕಮಿಟಿಯ ಕೆಲ ಶಿಫಾರಸುಗಳನ್ನು ಅನುಷ್ಠಾನಗೊಳಿಸಿತು. ಈಗ ನರೇಂದ್ರ ಮೋದಿ ಸರ್ಕಾರ ಬ್ಯಾಂಕಿಂಗ್ ಸುಧಾರಣೆಗೆ ವಿಶೇಷ ಆಸಕ್ತಿ ವಹಿಸಿದ್ದು, ಬ್ಯಾಂಕುಗಳ ವಿಲೀನ, ಬ್ಯಾಂಕುಗಳಲ್ಲಿ ದೊಡ್ಡ ಮೊತ್ತದ ಬಂಡವಾಳ ತೊಡಗಿಸುವ ಕೆಲಸವನ್ನು ಮಾಡಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳ ಎನ್‍ಪಿಎ ಹೊರೆ ಇಳಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳೂ ಕೂಡ ಟೀಕೆಗೆ ಹೊರತಾಗಲಿಲ್ಲ. ವಿಜಯ್ ಮಲ್ಯ ಸಾಲದ ಹೊರೆಯನ್ನು ಮೋದಿ ಸರ್ಕಾರ ತೀರಿಸಿತು ಎಂಬ ಟೀಕೆಗಳು ಕೇಳಿಬಂದವು. ಬ್ಯಾಂಕ್‍ಗಳ ವಿಲೀನದ ಸಿಟ್ಟನ್ನು ಟ್ರೇಡ್ ಯೂನಿಯನ್‍ಗಳು ನೋಟು ರದ್ದತಿ ವೇಳೆ ತೀರಿಸಿಕೊಂಡವು. ನೋಟು ರದ್ದತಿ ಕ್ರಮ ಹೆಚ್ಚು ಗೋಜಲಾಗಲು ಟ್ರೇಡ್ ಯೂನಿಯನ್‍ಗಳ ಅಸಹಕಾರ ಮುಖ್ಯ ಕಾರಣ ಎಂಬ ಮಾತುಗಳು ಬ್ಯಾಂಕಿಂಗ್ ವಲಯದಿಂದಲೇ ವ್ಯಕ್ತವಾಗಿವೆ.
ಈಗ ಕೆಲ ದೊಡ್ಡ ಉದ್ಯಮಿಗಳು ಕೆಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ವಂಚನೆ ಮಾಡಿರುವ ಪ್ರಕರಣಗಳು ವರದಿ ಆಗುತ್ತಿವೆ. ಆದರೆ ಜಿಲ್ಲಾಮಟ್ಟದ ಮಧ್ಯವರ್ತಿ ಬ್ಯಾಂಕುಗಳು ಮತ್ತು ಸಹಕಾರ ಬ್ಯಾಂಕುಗಳ ವಲಯದಲ್ಲಿಯೂ ಭಾರಿ ಹಗರಣಗಳು ನಡೆದಿವೆ. ಅದಕ್ಕೆ ಕಾರಣ ರಾಜಕೀಯ ನೇತೃತ್ವ ಮತ್ತು ಹಸ್ತಕ್ಷೇಪ. ಈ ಟೊಳ್ಳುಗಟ್ಟಿ ಕೂಡ ಭಾರತದ ಆರ್ಥಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಟೀಕೆಗಳ ವಾಸ್ತವ ಏನು?: ಮಲ್ಯ ಮತ್ತು ನೀರವ್ ಮೋದಿ ಇಬ್ಬರೂ ವಿದೇಶಕ್ಕೆ ಪರಾರಿಯಾದದ್ದನ್ನು ಇಟ್ಟುಕೊಂಡು ಇದರಲ್ಲಿ ಸರ್ಕಾರದ ಹಿತಾಸಕ್ತಿ ಇದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಅದು ಅರ್ಧಸತ್ಯ ಮಾತ್ರ. ಕಾರಣ ಇಷ್ಟೆ, ಇವೆರಡೂ ಪ್ರಕರಣಗಳು ನಡೆದಿರುವುದು ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ. ಈಗ ಇವರು ಪರಾರಿ ಆಗುತ್ತಿದ್ದಾರೆಂದರೆ ಇಂಥವರಿಗೆ ಇನ್ನು ಕಾಲವಿಲ್ಲ ಎಂಬ ಅರ್ಥವೂ ಬರುತ್ತದೆ. ಇಲ್ಲಿ ಸರ್ಕಾರದ ಒಂದೇ ಲೋಪ ಅಂದರೆ ಇವರು ಪರಾರಿ ಆಗಲು ಬಿಟ್ಟದ್ದು. ಆ ನಿಟ್ಟಿನಲ್ಲಿ ನಮ್ಮ ವ್ಯವಸ್ಥೆ ಇನ್ನೂ ಸಾಕಷ್ಟು ಸುಧಾರಣೆ ಆಗಬೇಕು.
ಇಂಥ ಬ್ಯಾಂಕಿಂಗ್ ವಂಚನೆ ಪ್ರಕರಣಗಳು, ದೊಡ್ಡ ದೊಡ್ಡ ಕಂಪನಿಗಳು ನಡೆಸುವ ಹಗರಣಗಳು ಭಾರತದಲ್ಲಿ ಮಾತ್ರವೇ? ಹಾಗೇನಿಲ್ಲ. ಅಮೆರಿಕ, ಇಂಗ್ಲೆಂಡ್‍ನಂತಹ ದೇಶಗಳಲ್ಲೂ ನಡೆದಿವೆ. ಉದಾಹರಣೆಗೆ ಅಮೆರಿಕದಲ್ಲಿ 2000ನೇ ಇಸವಿ ಹೊತ್ತಿಗೆ ನಡೆದ ಎನ್ರಾನ್, ವಲ್ರ್ಡ್‍ಕಾಮ್, ಟೈಕೋ ಕಂಪನಿಗಳ ಹಗರಣಗಳು ನಮಗಿಂತ ದೊಡ್ಡವು. ಆದರೆ ಆಡಿಟಿಂಗ್ ವ್ಯವಸ್ಥೆಯಿಂದ ಹಿಡಿದು ಎಲ್ಲೆಲ್ಲಿ ದೌರ್ಬಲ್ಯಗಳಿವೆಯೋ ಅವನ್ನು ತಿದ್ದಿ ಸರಿಪಡಿಸಿಕೊಳ್ಳುವ ಕೆಲಸವನ್ನು ಅಲ್ಲಿನ ಸರ್ಕಾರ ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಒಟ್ಟಾಗಿ ಮಾಡಿದವು. ಆ ಕೆಲಸ ಇಲ್ಲೂ ಆಗಬೇಕಿದೆ.
ಭಾರತದ ಮಿಲಿಟರಿ, ತಂತ್ರಜ್ಞರಿಗೆ ವಿದೇಶಗಳಲ್ಲಿ ವಿಶೇಷ ಗೌರವ ಇರುವಂತೆ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಕುರಿತೂ ಗೌರವವಿದೆ. ಕಾರಣ ಇಲ್ಲಿನ ತಾತ್ವಿಕ ಹಿನ್ನೆಲೆ. ಅದರ ತಳಹದಿ ಮೇಲೆ ವೃತ್ತಿಪರತೆ ಮತ್ತು ತಂತ್ರಜ್ಞಾನ ಸಾಮರ್ಥ್ಯ ಹೆಚ್ಚಿಸಿಕೊಂಡರೆ ಭಾರತದ ಬ್ಯಾಂಕಿಗ್ ವ್ಯವಸ್ಥೆಗೆ ಇನ್ನೂ ಉಜ್ವಲ ಭವಿಷ್ಯ ಇದೆ ಎಂಬುದು ಪರಿಣತರ ಮಾತು. ಹಾಗಾಗಲೆಂಬುದು ಆಶಯ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top