ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಾವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಅಲ್ಪ ಸಂಖ್ಯಾತ, ಖಾಸಗಿ ಶಾಲೆಗಳಿಗೆ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಂತಿಮ ಶರಾ ಬರೆದಿದೆ. ಇದರೊಂದಿಗೆ ಹಲವು ವರ್ಷಗಳಿಂದ ಈ ನಿಟ್ಟಿನಲ್ಲಿ ನಡೆದುಕೊಂಡು ಬಂದಿದ್ದ ತಾರತಮ್ಯಕ್ಕೆ ಮಂಗಳ ಹಾಡಿದಂತಾಗಿದೆ. ಇನ್ನು ಮುಂದೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ಖಾಸಗಿ ಕಾಲೇಜುಗಳು ಮತ್ತು ಡೀಮ್ಡ್ ವಿವಿಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳಿಗೆ ನೀಟ್ ಅನ್ವಯಿಸುತ್ತದೆ. ಇದರ ಹೊರತಾಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ಬೇರಾವುದೇ ಪರೀಕ್ಷೆಗಳು ಇರುವುದಿಲ್ಲ. ಅನುದಾನಿತ/ಅನುದಾನ ರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ‘ನೀಟ್’ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಧಿಸಿದೆ. ಸಾರ್ವತ್ರಿಕವಾಗಿ ದೇಶಾದ್ಯಂತ ಒಂದೇ ಪ್ರವೇಶ ಪರೀಕ್ಷೆಯನ್ನು ನಡೆಸುವ ಸರಕಾರದ ಕ್ರಮದಿಂದ ಸಂವಿಧಾನದ 19(1)(ಜಿ) ಮತ್ತು 30 ವಿಧಿ ಅಡಿಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ದೊರೆತಿರುವ ಯಾವುದೇ ಹಕ್ಕು ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನೀಟ್ ಪರೀಕ್ಷೆಯಿಂದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ, ತಮ್ಮ ವ್ಯವಹಾರಗಳನ್ನು ನಡೆಸುವ ಹಕ್ಕಿಗೆ ಚ್ಯುತಿಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಆದರೆ ಈ ವಿಚಾರದಲ್ಲಿ ಪ್ರತಿಭೆಯೇ ಅಂತಿಮ ಎಂದಿರುವ ಕೋರ್ಟ್, ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ಮತ್ತು ದೇಶದ ಹಿತಾಸಕ್ತಿಯೂ ಇದರಲ್ಲಿ ಅಡಗಿದೆ ಎಂದು ಗುರುತಿಸಿದೆ. ನೀಟ್ ಪರೀಕ್ಷೆ ಜಾರಿಗೆ ಬಂದಂದಿನಿಂದಲೂ ಒಂದಲ್ಲ ಒಂದು ತಕರಾರಿನಲ್ಲಿ ಸಿಲುಕಿ ನಲುಗುತ್ತಿತ್ತು. 2013ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಈ ಪ್ರಕ್ರಿಯೆಯನ್ನು ಆರಂಭಿಸಿತ್ತು. ಇದರ ಬೆನ್ನಲ್ಲೇ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು ಈ ಪರೀಕ್ಷೆಯನ್ನು ತಮಗೆ ಅನ್ವಯಿಸಬಾರದು ಎಂದು ಕೋರ್ಟ್ ಮೊರೆ ಹೋಗಿದ್ದವು. ಮಧ್ಯೆ ತಡೆಯಾಜ್ಞೆಗಳು, ಸರಕಾರದ ಆದೇಶ ಇತ್ಯಾದಿಗಳು ಬಂದು ನೀಟ್ ವ್ಯವಸ್ಥೆ ಕದಡುತ್ತಲೇ ಇತ್ತು. ಪ್ರಸ್ತುತ ಈ ಅಂತಿಮ ತೀರ್ಪಿನೊಂದಿಗೆ, ಈ ವ್ಯವಸ್ಥೆ ಸರಿಯಾಗಿ ಮುನ್ನಡೆಯಬಹುದು ಎಂದು ಆಶಿಸುವಂತಾಗಿದೆ.
ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು, ಅಲ್ಪಸಂಖ್ಯಾತರು ನಡೆಸುವವರು ಎಂಬ ಕಾರಣಕ್ಕಾಗಿಯಷ್ಟೇ ಹಾಗೆಂದು ಹೆಸರು ಪಡೆದಿವೆ. ನಿರ್ದಿಷ್ಟವಾಗಿ ಅಲ್ಪಸಂಖ್ಯಾತರ ಹಿತ ಕಾಯುವ ಸಂಸ್ಥೆಗಳಾಗಿ ಅವು ಕಾರ್ಯಾಚರಿಸುತ್ತಿವೆಯೇ ಎಂಬ ಪ್ರಶ್ನೆ ಇಲ್ಲಿ ಕೇಳಬಹುದು. ಅಲ್ಪಸಂಖ್ಯಾತ ಸಮುದಾಯದ, ಆದರೆ ವೈದ್ಯಕೀಯ ಶುಲ್ಕ ಕಟ್ಟಲು ಸಾಧ್ಯವಿಲ್ಲದ ವಿದ್ಯಾರ್ಥಿಗಳಿಗೆ ಅವು ಪ್ರವೇಶ ನೀಡುತ್ತಿವೆಯೇ, ಅಥವಾ ಸಾಕಷ್ಟು ಶುಲ್ಕ ಕಟ್ಟಿಸಿಕೊಂಡು ಅನ್ಯಮತೀಯ ಅಥವಾ ಬಹುಸಂಖ್ಯಾತ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುತ್ತಿಲ್ಲವೇ ಎಂಬ ಪ್ರಶ್ನೆಗಳನ್ನೂ ಕೇಳಬಹುದಾಗಿದೆ. ಮತೀಯ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪರಿಭಾವಿಸುವುದು, ಅವುಗಳನ್ನು ಹಾಗೆಯೇ ನಡೆಸುವುದು ಸರಿಯೇ ಎಂಬ ವಿಶಾಲ ನೆಲೆಯ ಪ್ರಶ್ನೆಯೂ ಇಲ್ಲಿ ಬರುತ್ತದೆ. ಸರಕಾರದ ಎಲ್ಲ ಸವಲತ್ತು ಸೌಲಭ್ಯಗಳನ್ನು ಪಡೆದೂ, ಸರಕಾರ ನಡೆಸುವ ಸರ್ವಮಾನ್ಯ ಪರೀಕ್ಷೆಯನ್ನು ತಿರಸ್ಕರಿಸುವುದು ವಿಚಿತ್ರವೆನಿಸುತ್ತದೆ. ಶಿಕ್ಷಣ ಪಡೆಯುವ ಹಕ್ಕು ಎಲ್ಲರಿಗೂ ಇದೆ. ಹಾಗೆಯೇ ವೈದ್ಯಕೀಯ ಶಿಕ್ಷಣ ಬರೆಯುವವರ ಸಂಖ್ಯೆ ಅಗಾಧ; ಆದರೆ ಲಭ್ಯ ಸೀಟುಗಳು ಅಲ್ಪ. ಇಂಥ ಸನ್ನಿವೇಶದಲ್ಲಿ ಅಲ್ಪಸಂಖ್ಯಾತ ಸಂಸ್ಥೆಗಳನ್ನು ಹೊರಗಿಟ್ಟಾಗ ದೊಡ್ಡ ಪ್ರಮಾಣದ ಸೀಟುಗಳು ಈ ವ್ಯವಸ್ಥೆಯ ಹೊರಬೀಳುತ್ತವೆ. ಇವು ನ್ಯಾಯಯುತವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಲ್ಲುತ್ತವೆ ಎಂಬ ಬಗ್ಗೆ ಖಾತ್ರಿಪಡಿಸುವ ಒಂದು ವ್ಯವಸ್ಥೆ ಇರಲಿಲ್ಲ. ಈ ನಿಟ್ಟಿನಲ್ಲಿ ನೀಟ್ನ ಈ ವ್ಯಾಪ್ತಿ ಗೊಂದಲ ನಿವಾರಣೆ ಶ್ಲಾಘನೀಯ.