ನೀರಿನ ವ್ಯಾಜ್ಯಗಳಿಗೆ ಅದರಾಚೆಗಿನ ಪರಿಹಾರವೂ ಉಂಟು

ಮಳೆ, ನದಿ, ತೊರೆಗಳನ್ನೇ ಕಾಣದ ಜಗತ್ತಿನ ನೂರಾರು ದೇಶಗಳು ನೀರಿನ ಸಮೃದ್ಧಿಯನ್ನು ಕಂಡುಕೊಂಡಿರುವ ಸಂಗತಿ ಗೊತ್ತಲ್ಲವೇ? ಆದರೆ ಆ ಎಲ್ಲವೂ ಇರುವ ನಾವುಗಳು ಮಾತ್ರ ನದಿ ನೀರಿನ ವ್ಯಾಜ್ಯದಲ್ಲೇ ಮುಳುಗಿಬಿಟ್ಟಿದ್ದೇವೆ. ಅದೇನು ವಿಚಿತ್ರ ಅಂತೀರಿ?

ಮಹದಾಯಿ ನದಿ ನೀರಿನ ಪಾಲಿಗಾಗಿ ಉತ್ತರ ಕರ್ನಾಟಕದ ರೈತರು ಹೋರಾಟ ನಡೆಸುತ್ತಿರುವುದು ಇಂದು ನಿನ್ನೆಯಿಂದಲ್ಲ. ಮಹದಾಯಿ ಹೋರಾಟಕ್ಕೆ ಒಂದು ಸುದೀರ್ಘ ಇತಿಹಾಸವೇ ಇದೆ. ಒಂದೊಂದು ಸಲವೂ ಒಂದೊಂದು ತಿರುವು; ಆರೋಪ ಪ್ರತ್ಯಾರೋಪಗಳಿಗೆ ಮಾತ್ರ ಕೊನೆಯಿಲ್ಲ. ನೀರಿನ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಈ ಸಂದರ್ಭದಲ್ಲಿ ಕಾಡುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುವ ಬನ್ನಿ.

#ರೈತಸೇನಾ ಹೋರಾಟ ರಾಜಕೀಯ ಪ್ರೇರಿತವೇ?

ಇಲ್ಲಿಯವರೆಗೆ ಅಂತಹ ಅನುಮಾನಕ್ಕೆ ಆಸ್ಪದ ಇರಲಿಲ್ಲ ನಿಜ. ಮಹದಾಯಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ರೈತ ಸೇನಾ ಮುಖ್ಯಸ್ಥ ವೀರೇಶ ಸೊಬರದಮಠ ರಾಜಕೀಯ ಹಿತಾಸಕ್ತಿಗಳಿಂದ ಅಷ್ಟರಮಟ್ಟಿಗೆ ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ಮಹದಾಯಿ ನದಿ ನೀರಿಗಾಗಿ ತರಹೇವಾರಿ, ಕಠಿಣತಮ ಹೋರಾಟವನ್ನು ನಡೆಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಅದೇ ರೈತ ಸೇನಾ ಪ್ರಮುಖರು ಮಹದಾಯಿ ನೀರಿನ ಪಾಲಿಗೆ ಆಗ್ರಹಿಸಿ ಬಿಜೆಪಿ ರಾಜ್ಯ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳುವ ಮೂಲಕ ಮಹದಾಯಿ ಹೋರಾಟ ರಾಜಕೀಯ ಪ್ರೇರಿತವೇ? ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಈ ಹೋರಾಟ ದಿಕ್ಕುತಪ್ಪುತ್ತಿದೆಯೇ ಎಂಬ ಅನುಮಾನದ ಮಾತುಗಳಿಗೆ ಆಸ್ಪದ ಮಾಡಿಕೊಟ್ಟದ್ದು ಸುಳ್ಳಲ್ಲ. ಅಷ್ಟು ಸಾಲದ್ದಕ್ಕೆ ಈ ಹೋರಾಟ ರಾಜಕೀಯ ಪ್ರೇರಿತ ಎಂಬ ಆರೋಪ ಕೇಳಿ ಬರುತ್ತಿದ್ದಂತೆ ರೈತ ಸೇನಾ ಪ್ರಮುಖರು ಕಾಂಗ್ರೆಸ್ ಪ್ರಮುಖರಿಗೆ, ಜೆಡಿಎಸ್ ವರಿಷ್ಠರಿಗೆ, ರಾಜ್ಯಪಾಲರಿಗೆ ಮನವಿ ಅರ್ಪಿಸಿ ಬಿಜೆಪಿ ಕಚೇರಿ ಮುಂದಿನ ಚಳವಳಿ ಕೈಬಿಡಲು ಮುಂದಾದರು. ಇದು ಈಗಾಗಲೇ ಕೇಳಿ ಬಂದ ಆರೋಪಗಳಿಗೆ ಇಂಬು ನೀಡಿತು. ಟೀಕೆಗಳಿಂದ ರೈತ ಹೋರಾಟಗಾರರು ಅಧೀರರಾದರೇ ಎಂಬ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವೂ ಆಯಿತು.

#ವಿನಾಕಾರಣ ವಿವಾದ ಎಳೆದುಕೊಂಡರೇ ಬಿಎಸ್​ವೈ?

ಮೇಲ್ನೋಟಕ್ಕೆ ಹಾಗೆ ಕಾಣಿಸುವುದು ಸತ್ಯ. ಮಹದಾಯಿ ವಿವಾದವನ್ನು ಬಗೆಹರಿಸಬೇಕೆಂಬ ಯಡಿಯೂರಪ್ಪನವರ ಪ್ರಾಮಾಣಿಕ ಕಳಕಳಿಯನ್ನು ಪ್ರಶ್ನೆ ಮಾಡುವಂತಿಲ್ಲವಾದರೂ, ವಿವಾದಕ್ಕೆ ತೆರೆ ಎಳೆದು ಅದರ ಹೆಚ್ಚುಗಾರಿಕೆಯನ್ನು ಮುಡಿಗೇರಿಸಿಕೊಳ್ಳಬೇಕೆಂಬ ಧಾವಂತ ಅವರಿಗೆ ತುಸು ದುಬಾರಿ ಆದದ್ದಂತೂ ಸತ್ಯ. ಏಕೆಂದರೆ ಮಹದಾಯಿ ವಿವಾದದ ಒಳಸುಳಿ ಅಷ್ಟು ಸರಳವಾಗಿಲ್ಲ. ‘ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಇನ್ನು ಹದಿನೈದು ದಿನದಲ್ಲಿ ಸಿಹಿ ಸುದ್ದಿ ಕೊಡುತ್ತೇನೆ’ ಎಂದು ಯಾವಾಗ ಹೇಳಿದರೋ, ಆ ಕ್ಷಣದಿಂದಲೇ ಜಾಗೃತರಾದ ಬಿಜೆಪಿ ಮತ್ತು ಬಿಎಸ್​ವೈ ರಾಜಕೀಯ ವಿರೋಧಿಗಳು ಮಹಾರಾಷ್ಟ್ರ ಮತ್ತು ಗೋವಾದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಕರ್ನಾಟಕದ ಪರ ತುಟಿ ಬಿಚ್ಚದಂತೆ ಮಾಡುವ ಕಾರ್ಯಾಚರಣೆ ಶುರು ಮಾಡಿದ್ದರು. ಅದರ ಪರಿಣಾಮ ಎಂಬಂತೆ ಕರ್ನಾಟಕದ ಅವಶ್ಯಕತೆಗೆ ತಕ್ಕಂತೆ ಮಹದಾಯಿ ನದಿಯಿಂದ ಕುಡಿಯುವ ಉಪಯೋಗಕ್ಕೆ ನೀರು ಬಿಡುವ ಕುರಿತು ಗೋವಾ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದೇ ತಡ, ಅಲ್ಲಿನ ಕಾಂಗ್ರೆಸ್ ಪ್ರಮುಖರು ಮುಖ್ಯಮಂತ್ರಿ ಪರಿಕ್ಕರ್ ಕೈಬಾಯಿ ಕಟ್ಟಿಹಾಕಲು ಮುಂದಾದರು. ಒತ್ತಡಕ್ಕೆ ಮಣಿದ ಪರಿಕ್ಕರ್ ತನ್ನ ನಿಲುವನ್ನು ಬದಲಾಯಿಸಲೇಬೇಕಾದ ಅನಿವಾರ್ಯತೆಗೆ ಕಟ್ಟುಬಿದ್ದರು. ಅಲ್ಲಿಗೆ ಮಹದಾಯಿ ನೀರಿನ ವಿವಾದಕ್ಕೆ ಸೌಹಾರ್ದ ಪರಿಹಾರ ಕಂಡುಕೊಳ್ಳುವ ತವಕದಲ್ಲಿದ್ದ ಯಡಿಯೂರಪ್ಪ ಅವರಿಗೆ ಸಂಪೂರ್ಣ ನಿರಾಸೆ ಮುತ್ತಿಕೊಂಡಿದ್ದನ್ನು ಎಲ್ಲರೂ ಗಮನಿಸಬಹುದು.

#ಬಿಜೆಪಿಗೆ ಪತ್ರ ಬರೆದದ್ದು ಪ್ರಮಾದವೇ?

ಹೌದು, ವ್ಯಾವಹಾರಿಕವಾಗಿ ನೋಡಿದರೆ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆಯಬೇಕಿತ್ತು. ಅದು ಚುನಾಯಿತ ಸರ್ಕಾರಗಳ ವ್ಯಾವಹಾರಿಕ ಲಕ್ಷಣವೂ ಹೌದು. ಅದರಲ್ಲೂ ಮಹದಾಯಿ ನದಿನೀರಿನ ವ್ಯಾಜ್ಯಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಗೋವಾ ಮುಖ್ಯಮಂತ್ರಿ ಪರಿಕ್ಕರ್​ಗೆ ಪತ್ರ ಬರೆದಿದ್ದರಿಂದ ಪರಿಕ್ಕರ್ ಸಿಎಂ ಸಿದ್ದರಾಮಯ್ಯ ಅವರಿಗೇ ಪತ್ರ ಮುಖೇನ ಉತ್ತರ ಕೊಡುವುದು ಸಾಂವಿಧಾನಿಕವಾಗಿ, ವ್ಯಾವಹಾರಿಕವಾಗಿ ಮತ್ತು ರಾಜಕೀಯ ತಂತ್ರಗಾರಿಕೆ ದೃಷ್ಟಿಯಿಂದ ಸರಿಯಾದ ಕ್ರಮವಾಗಿರುತ್ತಿತ್ತು. ಹಾಗೆ ಮಾಡದೆ ಇದ್ದದ್ದು ಪ್ರಮಾದವಾಯಿತು.

#ಬಿಜೆಪಿ ವರಿಷ್ಠರೂ ಹೆಜ್ಜೆ ತಪ್ಪಿದರೇ?

ಈ ಪ್ರಶ್ನೆಗೂ ಕೂಡ ಉತ್ತರ ಹೌದು ಎಂಬುದೇ ಸರಿ. ಅದಕ್ಕಿಂತ ಮುಖ್ಯವಾಗಿ ರಾಜಕೀಯ ತಂತ್ರಗಾರಿಕೆಯಲ್ಲಿ ಚಾಣಾಕ್ಷ ಎಂದು ಕರೆಸಿಕೊಂಡ ಅಮಿತ್ ಷಾ ಮತ್ತು ಮಾಜಿ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮಹದಾಯಿ ನದಿನೀರಿನ ಹಂಚಿಕೆ ಕುರಿತು ಸಾಂವಿಧಾನಿಕ ಅಧಿಕಾರ ಸ್ಥಾನದಲ್ಲಿಲ್ಲದ ರಾಜ್ಯ ಬಿಜೆಪಿ ನಾಯಕರಿಗೆ ಪತ್ರ ಬರೆಯುವ ಮುನ್ನ ಅದರ ಸಾಧಕಬಾಧಕವನ್ನು ಪರಿಶೀಲನೆ ಮಾಡಲಿಲ್ಲವೇ ಎಂಬುದು ಅಚ್ಚರಿಯಾಗಿ ಕಾಣಿಸುತ್ತದೆ.

# ಪತ್ರ ಬರೆದ ಪರಿಕ್ಕರ್ ಕುಬ್ಜರಾದರೇ?

ಖಂಡಿತವಾಗಿ ಹೌದು ಎನ್ನಲೇಬೇಕಾಗುತ್ತದೆ. ಮನೋಹರ ಪರಿಕ್ಕರ್ ಗೋವಾ ಮುಖ್ಯಮಂತ್ರಿ ಎಂಬುದಕ್ಕಿಂತ ಹೆಚ್ಚಾಗಿ ಈ ದೇಶದ ರಕ್ಷಣಾ ಸಚಿವರಾಗಿ ಇಡೀ ದೇಶಕ್ಕೆ ಚಿರಪರಿಚಿತರಾದವರು. ಅಂಥವರು ರಾಜಕೀಯವಾಗಿ ಹೀಗೆಲ್ಲ ಎಡವುತ್ತಾರಾ? ದಿನಕ್ಕೊಂದು ನಿಲುವನ್ನು ಬದಲಿಸುತ್ತಾರಾ ಎಂಬ ಪ್ರಶ್ನೆಗಳಿಗೆ ಗ್ರಾಸವಾಗುವ ಮೂಲಕ ಪರಿಕ್ಕರ್ ಸಣ್ಣವರಾದರು ಎಂಬ ಮಾತುಗಳು ರಾಜಕೀಯದ ಪಡಸಾಲೆಯಲ್ಲಿ ಕೇಳಿಬರುವಂತಾಯಿತು.

# ಬಿಜೆಪಿ ನಾಯಕರು ಏನು ಮಾಡಬಹುದಿತ್ತು?

ಹೇಗೂ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರ ಇತ್ತು. ನದಿ ನೀರಿನ ಹಂಚಿಕೆಗೆ ಸಂಬಂಧಿಸಿ ಅಲ್ಲಿನ ಸರ್ಕಾರಗಳನ್ನು ಒಪ್ಪಿಸುವುದು ನಮ್ಮ ಜವಾಬ್ದಾರಿ. ನೀವು ಮೊದಲು ತಕರಾರು ತೆಗೆಯುವುದಿಲ್ಲ ಎಂದು ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಪ್ರತಿಪಕ್ಷವಾದ ಕಾಂಗ್ರೆಸ್ ನಾಯಕರಿಂದ ಮುಚ್ಚಳಿಕೆ ಪಡೆದುಕೊಳ್ಳಿ ಎಂದ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಿಗೆ ಸ್ವತಃ ಯಡಿಯೂರಪ್ಪ ಶರತ್ತು ವಿಧಿಸಿದ್ದರೆ ಒಂದೋ ಸಮಸ್ಯೆ ಪರಿಹಾರ ಕಾಣುತ್ತಿತ್ತು, ಇಲ್ಲ ಎಂದಾದರೆ ರಾಜಕೀಯವಾಗಿ ಬಿಜೆಪಿಗೆ ಹಿನ್ನಡೆ ಆಗುವುದರಿಂದಲಾದರೂ ಬಚಾವು ಆಗಬಹುದಿತ್ತು. ಆ ಎರಡೂ ಅವಕಾಶವನ್ನು ಬಿಜೆಪಿ ನಾಯಕರು ವಿನಾಕಾರಣ ಕೈಚೆಲ್ಲುವಂತಾಯಿತು.

ಗೊಂದಲದಲ್ಲಿ ರೈತ ಹೋರಾಟ: ಬೆಂಗಳೂರು ಬಿಜೆಪಿ ಕಚೇರಿ ಎದುರು ಧರಣಿ ಹಮ್ಮಿಕೊಂಡಿದ್ದರ ಬೆನ್ನಲ್ಲೇ ಮಹದಾಯಿ ಹೋರಾಟಗಾರರು ಉತ್ತರ ಕರ್ನಾಟಕ ಬಂದ್​ಗೂ ಕರೆ ನೀಡಿದರು. ಬಂದ್ ಕರೆ ಯಾರ ವಿರುದ್ಧ? ಮಹದಾಯಿ ನೀರಿನ ಹಂಚಿಕೆ ಸಂಬಂಧ ಸೌಹಾರ್ದ ಪರಿಹಾರ ಕಂಡುಕೊಳ್ಳಲು ಗೋವಾ ಸರ್ಕಾರದ ಮನವೊಲಿಕೆ ಪ್ರಯತ್ನ ಮಾಡಿದ ಬಿಜೆಪಿ ನಾಯಕರ ವಿರುದ್ಧವೋ? ಅಥವಾ ಗೋವಾ, ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ಹೋರಾಟಕ್ಕೆ ತೊಡೆ ತಟ್ಟಿರುವ ಅಲ್ಲಿನ ಕಾಂಗ್ರೆಸ್ ನಾಯಕರನ್ನು ಮನವೊಲಿಸಲು ವಿಫಲವಾದ ಕರ್ನಾಟಕದ ಕಾಂಗ್ರೆಸ್ ನಾಯಕರ ವಿರುದ್ಧವೋ ಎಂಬುದನ್ನು ಸ್ಪಷ್ಟಪಡಿಸುವಲ್ಲಿ ಹೋರಾಟಗಾರರು ವಿಫಲರಾದರು. ಅಷ್ಟು ಮಾತ್ರವಲ್ಲ ಮಹದಾಯಿ ಹೋರಾಟಗಾರರಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳುವವರ ಕೊರತೆಯೂ ಎದ್ದು ಕಾಣಿಸುವಂತಾಯಿತು.

ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ: ಹಾಗೆ ನೋಡಿದರೆ ಮಹದಾಯಿ ಹೋರಾಟಗಾರರ ಪರ ಬಿಎಸ್​ವೈ ನಿಲುವು ತಾಳಿದ್ದು ಇದೇ ಮೊದಲಲ್ಲ. ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಮಹದಾಯಿ ಯೋಜನೆಗಾಗಿ ನೂರು ಕೋಟಿ ರೂಪಾಯಿ ಮೀಸಲಿರಿಸಿದ್ದರು. ಮಹದಾಯಿ ಯೋಜನೆಗೆ ಅಡಿಗಲ್ಲು ಹಾಕುವ ವೇಳೆ ಸಣ್ಣಪುಟ್ಟ ಕಾರಣಕ್ಕೆ ಗೈರು ಹಾಜರಾದ ಜೆಡಿಎಸ್ ಮುಖಂಡರು ಈ ಬಾರಿ ಮಹದಾಯಿ ಹೋರಾಟಗಾರರ ಪರ ನಿಂತುಕೊಂಡಿದ್ದರು. ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮಹದಾಯಿ ಯೋಜನೆ ಕುರಿತು ಒಂದೇ ಒಂದು ಸಭೆ, ಚರ್ಚೆ ಆಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಆ ವೇಳೆ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅದೇ ಕಾರಣಕ್ಕೆ ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಪಣಜಿಯಲ್ಲಿ ಹೇಳಿಕೆ ನೀಡಿ ಗೋವಾ ಪಾಲಿನ ಒಂದೇ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಬಿಡಲು ಸಾಧ್ಯವಿಲ್ಲ ಎಂದಿದ್ದರು. ಈಗ ಇತಿಹಾಸ ಕೆದಕುವುದು ಉಚಿತವಲ್ಲವಾದರೂ ಮಹದಾಯಿ ಹೋರಾಟದ ವಿವಿಧ ಮಜಲುಗಳನ್ನು ನೋಡುವಾಗ ಕೆಲ ಮಹತ್ವದ ಸಂಗತಿಗಳನ್ನು ಮೆಲುಕು ಹಾಕಲೇಬೇಕಾಗುತ್ತದೆ.

ಇದೆಲ್ಲ ಬಿಟ್ಟು ನಾವು ನದಿ ನೀರು ವಿವಾದಕ್ಕೆ ಪರಿಹಾರ ಮತ್ತು ನೀರಿನ ಅಭಾವ ನೀಗುವ ನಿಟ್ಟಿನಲ್ಲಿ ಪೂರಕ ಆಲೋಚನೆ ಮಾಡೋಣ ಬನ್ನಿ..

ಮೊದಲನೆಯದಾಗಿ ಜಲವಿವಾದ ಎಂಬುದು ಜನನಾಯಕರು ಅಂತ ಕರೆಸಿಕೊಂಡವರಿಗೆ ಅಂಟಿಕೊಂಡಿರುವ ಹಲವು ಮನೋದಾರಿದ್ರ್ಯಳ ಪೈಕಿ ಒಂದು. ಈ ಮಾತಿಗೆ ಕೃಷ್ಣೆ, ಕಾವೇರಿ ಮತ್ತು ಇತ್ತೀಚಿನ ಮಹದಾಯಿ ಜಲ ವಿವಾದಗಳೂ ಹೊರತಲ್ಲ. ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಯಡಿಯೂರಪ್ಪ ಅವರು ಪರಿಕ್ಕರ್ ಕೈಲಿ ಪತ್ರ ಬರೆಸಿಕೊಂಡು ಬಂದ ತಕ್ಷಣ ಮಹದಾಯಿ ನೀರು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹರಿಯಲು ಸಾಧ್ಯವಿಲ್ಲ. ಯಡಿಯೂರಪ್ಪ ತಂದ ಪತ್ರದ ಬಗ್ಗೆ ದೇವೇಗೌಡ, ಕುಮಾರಸ್ವಾಮಿ ಮುಂತಾದವರೆಲ್ಲ ಸಿಡಿಮಿಡಿ ಆದ ತಕ್ಷಣ ಅವರವರ ಕಾಲಕ್ಕೆ ಯಾರ್ಯಾರು ಏನೇನು ಮಾಡಿದ್ದಾರೆ ಎಂಬುದನ್ನು ಮರೆಮಾಚಲು ಸಾಧ್ಯವಿಲ್ಲ. ಮಹದಾಯಿ ನೀರಿಗಾಗಿ ಕೆಲ ರೈತರು ಬಿಜೆಪಿ ಕಚೇರಿ ಎದುರು ಧರಣಿ ಕುಳಿತ ತಕ್ಷಣ ಈ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ತಾನು ಸಂಭಾವಿತ, ತನಗೇನೂ ಸಂಬಂಧವಿಲ್ಲ ಎಂದು ಬೀಗಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಮೂಲ ವಿಚಾರ ಏನೆಂದರೆ ಈ ತರಹದ ನಾಟಕಗಳಿಂದ ರೈತರಿಗಾಗಲಿ, ರಾಜಕಾರಣಿಗಳಿಗಾಗಲಿ ನಿಜವಾದ ಲಾಭ ದಕ್ಕಲು ಸಾಧ್ಯವಿಲ್ಲ. ಬರಬರುತ್ತ ಈ ಹೋರಾಟಗಳು ಮತ್ತು ರಾಜಕೀಯ ಚೀರಾಟಗಳ ಅಸಲಿತನ ಜನರಿಗೆ ಅರ್ಥವಾಗತೊಡಗಿದೆ. ಇದೊಂದು ಒಳ್ಳೆಯ ಬೆಳವಣಿಗೆಯೇ ಸರಿ.

ಆಲೋಚನೆ ಬದಲಿಸಿಕೊಳ್ಳೋಣ: ನಾನೀಗ ಹೇಳಲು ಹೊರಟಿರುವುದು ಒಂದು ದಿನ ಕಾವೇರಿ, ಮಹದಾಯಿ ನದಿಗಳು ನಮ್ಮ ಪಾಲಿಗೆ ಹರಿಯುವುದನ್ನೇ ನಿಲ್ಲಿಸಿದರೂ ಸಹ ನಾವು ನೀರಿನ ಬೇಡಿಕೆಯನ್ನು ಪೂರೈಸಿಕೊಳ್ಳಲು ಸಾಧ್ಯವಿದೆ ಎಂಬುದರ ವಿಚಾರವಾಗಿ. ಮೊದಲನೆಯದಾಗಿ ಅಂಥಹ ಒಂದು ಸಾಹಸ ಮಾಡುವುದು ಬ್ರಹ್ಮವಿದ್ಯೆ ಏನಲ್ಲ. ಈಗಾಗಲೇ ಜಗತ್ತಿನ 120 ದೇಶಗಳು ನದಿ ನೀರಿಗೆ ಪರ್ಯಾಯವಾಗಿ ಸಮುದ್ರದ ನೀರನ್ನೇ ನೆಚ್ಚಿಕೊಂಡಿವೆ. ಅಪಾರ ಮಳೆಬೀಳುವ ಅಮೆರಿಕ, ಮಳೆ ಮತ್ತು ನದಿಯನ್ನೇ ಕಾಣದ ಸೌದಿ ಅರೇಬಿಯ, ಕುವೈತ್,ಯುಎಇ, ಕತಾರ್, ಬಹರೇನ್, ಉತ್ತರ ಆಫ್ರಿಕಾ, ಲಿಬಿಯಾ, ಅಲ್ಜೀರಿಯ, ಇಸ್ರೇಲ್ ದೇಶಗಳು ಸಮುದ್ರದ ನೀರನ್ನೇ ಆಶ್ರಯಿಸಿಕೊಂಡಿವೆ. ಅದು ಕೃಷಿ, ಕೈಗಾರಿಕೆ ಮತ್ತು ಕುಡಿಯುವ ನೀರಿನ ಉಪಯೋಗಕ್ಕೆ ಎಲ್ಲದಕ್ಕೂ ಸಹ. ಇಸ್ರೇಲ್​ನಲ್ಲಿ 6,27,000 ಕ್ಯೂಬಿಕ್ ಟನ್ ಸಮುದ್ರ ನೀರನ್ನು ಶುದ್ಧೀಕರಿಸಿ ಕೃಷಿಗೆ ಬಳಸಲಾಗುತ್ತಿದೆ. ಈ ಪ್ರಯೋಗ ಭಾರತದಲ್ಲಿ ಇನ್ನೂ ಅನುಕೂಲಕರ ಮತ್ತು ಸುಲಭ. ಭಾರತ ಮೂರು ದಿಕ್ಕಿನಲ್ಲಿ ನೀರು ಒಂದು ದಿಕ್ಕಿನಲ್ಲಿ ಭೂಮಿ ಇರುವ ಉಪಖಂಡ. ಇಂತಹ ಸದವಕಾಶ ಜಗತ್ತಿನ ಇತರ ಅನೇಕ ದೇಶಗಳಿಗೆ ಇಲ್ಲ. ಭಾರತದಲ್ಲಿ ಸಮುದ್ರ ನೀರಿನ ಶುದ್ಧೀಕರಣ ಮಾಡಿ ಬಳಸುವ ಕಾರ್ಯಕ್ಕೆ ಉತ್ತೇಜನ ನೀಡಿದರೆ ಉಪ್ಪಿನ ಉತ್ಪಾದನೆಯಲ್ಲೂ ಏಕಸ್ವಾಮ್ಯ ಸಾಧಿಸಲು ಅವಕಾಶವಿದೆ. ಸಮುದ್ರ ನೀರಿನ ಶುದ್ಧೀಕರಣಕ್ಕೆ ಸಮುದ್ರದ ಮೇಲ್ಮೈ ಜಾಗವನ್ನು ಬಳಸಿದರೆ ಇತರೆ ಭೂಮಿಯ ಅವಶ್ಯಕತೆಯೂ ಇಲ್ಲ. ಪವನ ವಿದ್ಯುತ್​ನಂತಹ ಮೂಲಗಳನ್ನು ಬಳಸಿಕೊಂಡರೆ ಇಂಧನ ಮೂಲದ ಕೊರತೆಯೂ ಆಗಲಾರದು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ಆಗಿರುವ ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ಇಸ್ರೇಲ್ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತಾನ್ಯಹು ಜೊತೆಗೆ ತಂತ್ರಜ್ಞಾನ ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದಾರೆ.

ಖಾಲಿ ಬಾವಿ ಮತ್ತು ನೀರಿನ ರಗಳೆ ಪ್ರಸ್ತಾಪ ಬಂದಿದ್ದರಿಂದ ಇಷ್ಟು ಹೇಳುವುದು ಸಮಂಜಸ ಅನ್ನಿಸಿತು. ನೀರಿಗಾಗಿ ಕಾದಾಡುವ ರಾಜಕೀಯ ನಾಯಕರು ಮತ್ತು ಸರ್ಕಾರಗಳು ಈ ಬಗ್ಗೆ ಇನ್ನಾದರೂ ಯೋಚನೆ ಮಾಡುತ್ತಾರೆ ಅಂತ ನಿರೀಕ್ಷೆ ಇಟ್ಟುಕೊಳ್ಳೋಣವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top