ಪ್ರಾಕೃತಿಕ ವಿಕೋಪ ಎದುರಿಸೋಣ – ತುರ್ತು ಕಾರ್ಯಾಚರಣೆ, ಪರಿಹಾರ ಜತೆ ಸಾಗಲಿ

ಕಳೆದ ವರ್ಷ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಬಂದ ಮಾಸದಲ್ಲೇ ಈ ವರ್ಷವೂ ಅದು ಮರುಕಳಿಸುತ್ತಿದೆ. ಹಾಗೆಯೇ ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿ ಹಲವು ಮಂದಿಯನ್ನು ಬಲಿ ತೆಗೆದುಕೊಂಡು ನೂರಾರು ಮಂದಿಯನ್ನು ನಿರಾಶ್ರಿತರನ್ನಾಗಿಸಿತ್ತು. ನಿನ್ನೆ ತಲಕಾವೇರಿಯಲ್ಲಿ ಅಂಥದೇ ಇನ್ನೊಂದು ದುರಂತ ಸಂಭವಿಸಿದ್ದು, ಹಲವರು ಜೀವಂತ ಸಮಾಧಿಯಾಗಿರುವ ಶಂಕೆ ಇದೆ. ಭಾರಿ ಮಳೆ ಸುರಿಯುತ್ತಲೇ ಇರುವುದರಿಂದ ದುರಂತಗಳ ಸಂಖ್ಯೆ ನಾವು ಬೇಡವೆಂದರೂ ಹೆಚ್ಚಾಗಬಹುದು; ಮುನ್ನೆಚ್ಚರಿಕೆ ಹಾಗೂ ತಕ್ಷಣದ ರಕ್ಷಣಾ ಕಾರ್ಯಾಚರಣೆಗಳು ಈಗ ಅಗತ್ಯವಿದೆ.
ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸದ್ಯ ತಲೆದೋರಿದೆ. ಮಲೆನಾಡು ಹಾಗೂ ಕರಾವಳಿಯ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಎಸ್‌ಡಿಆರ್‌ಎಫ್‌ನ 15 ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ವಿವಿಧೆಡೆ 12 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದ್ದು, 292 ಜನರು ಆಶ್ರಯ ಪಡೆದಿದ್ದಾರೆ. ಸಾಕಷ್ಟು ಬೆಳೆ ಹಾನಿಯೂ ಆಗಿದೆ. ಕಂದಾಯ ಹಾಗೂ ಗೃಹ ಸಚಿವರು ಅಧಿಕಾರಿಗಳ ಸಭೆ ನಡೆಸಿದ್ದು, ತಕ್ಷಣದ ಪರಿಹಾರಕ್ಕೆ 50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಹಾಗೂ ಜಿಲ್ಲಾಧಿಕಾರಿಗಳ ನಿಧಿಯ ವಿವೇಚನಾ ಬಳಕೆಗೆ ಸೂಚಿಸಲಾಗಿದೆ.
ಪ್ರಾಕೃತಿಕ ವಿಕೋಪಗಳು ಅನಿರೀಕ್ಷಿತವೇ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ಜಿಲ್ಲೆಗಳಲ್ಲಿ ಪ್ರತಿ ಮಳೆಗಾಲದಲ್ಲೂ ಇಂಥ ಅನಾಹುತಗಳು ಮರುಕಳಿಸುತ್ತಿವೆ. ಇದರಲ್ಲಿ ಪ್ರಾಕೃತಿಕ ವಿಕೋಪದ ಪ್ರಮಾಣವೇ ಹೆಚ್ಚಿದ್ದರೂ ಮಾನವನಿರ್ಮಿತ ವಿಕಲ್ಪದ ಪಾಲೂ ಸಾಕಷ್ಟು ಇದೆ. ತಡೆಗೋಡೆಗಳು, ರಸ್ತೆಗಳು ಕುಸಿಯುವುದರ ಹಿಂದೆ ಅವೈಜ್ಞಾನಿಕ ರಚನೆಗಳ ಪಾಲಿದೆ. ಪ್ರಾಕೃತಿಕ ವಿಕೋಪಗಳ ಸಾಧ್ಯತೆಯನ್ನು ಮುಂದಾಗಿಯೇ ಊಹಿಸಿ ಇವುಗಳನ್ನು ನಿರ್ಮಿಸುವ ದೂರದೃಷ್ಟಿ ನಮಗೆ ಸಾಧ್ಯವಾಗಬೇಕು; ಕಳೆದ ಸಾಲಿನ ದುರಂತಗಳಿಂದ ನಾವು ಪಾಠ ಕಲಿಯಬೇಕಿದೆ. ಹಾಗೇ ಇಂಥ ನೈಸರ್ಗಿಕ ವಿಕೋಪಗಳನ್ನು ಎದುರಿಸುವ ರೀತಿಯೂ ಆಯಾ ಸಾಲಿನಲ್ಲಿ ಕಲಿತ ಪಾಠಗಳಿಂದಾಗಿ ವರ್ಷದಿಂದ ವರ್ಷಕ್ಕೆ ಉತ್ತಮಗೊಳ್ಳುತ್ತ ಹೋಗಬೇಕು. ಸನ್ನದ್ಧತೆಯೊಂದಿದ್ದರೆ ಎಂಥ ವಿಕೋಪವನ್ನಾದರೂ ಎದುರಿಸಬಹುದು. ಈ ಬಾರಿ, ಕಳೆದ ಸಲದಂತೆ ಜೀವಹಾನಿ, ಅಸ್ತಿನಷ್ಟ ಆಗದಿರಲಿ ಎಂದು ಆಶಿಸೋಣ. ರಕ್ಷಣಾ ಕಾರ್ಯಾಚರಣೆಯನ್ನೂ ಸಾಂತ್ವನ ಕೇಂದ್ರಗಳನ್ನೂ ಇನ್ನಷ್ಟು ತಜ್ಞತೆ, ದಕ್ಷತೆಯಿಂದ ನಿಭಾಯಿಸುವುದು ನಮಗೆ ಸಾಧ್ಯವಾಗಲಿ.
ಆದರೆ ಈ ಬಾರಿ ನಮ್ಮನ್ನು ಪೀಡಿಸಲು ನೈಸರ್ಗಿಕ ವಿಕೋಪದ ಜೊತೆಗೆ ಕೊರೊನಾ ಸೋಂಕು ಕೂಡ ಸೇರಿಕೊಂಡಿದೆ. ಕೊರೊನಾದ ಕಾರಣದಿಂದ ನಾವು ದೈಹಿಕ ಅಂತರ ಇತ್ಯಾದಿಗಳನ್ನು ಪಾಲಿಸಬೇಕಿದ್ದರೂ, ತುರ್ತು ಕಾರ್ಯಾಚರಣೆ ಹಾಗೂ ಪರಿಹಾರ ಕಾರ್ಯಗಳ ಸಂದರ್ಭದಲ್ಲಿ ಇದನ್ನೆಲ್ಲ ನಿರೀಕ್ಷಿಸುವುದು ಕಷ್ಟ. ಆದರೂ ಇದು ಕೊರೊನಾ ಉಲ್ಬಣಕ್ಕೆ ಕಾರಣವಾಗದಂತೆ ನೋಡಿಕೊಂಡೇ ನಾವು ವ್ಯವಹರಿಸಬೇಕಿದೆ. ಕಳೆದ ಹಾಗೇ ಕಳೆದ ಬಾರಿಯ ನೆರೆ ಪರಿಹಾರ ಕಾರ್ಯಗಳು, ಪುನರ್ವಸತಿ ಕಾರ್ಯಕ್ರಮಗಳು ಏನಾಗಿವೆ ಎಂಬ ಪ್ರಶ್ನೆಯನ್ನು ಕೂಡ ಈ ಸಂದರ್ಭದಲ್ಲೇ ಕೇಳುವುದು ಉಚಿತ. ಮನೆ ಕಳೆದುಕೊಂಡವರಿಗೆ ಮನೆ, ಆಸ್ತಿ- ಪಾಸ್ತಿ ಕಳೆದುಕೊಂಡವರಿಗೆ ಸಿಗಬೇಕಾದ ನ್ಯಾಯೋಚಿತವಾದ ಪರಿಹಾರ ಒಂದು ವರ್ಷವಾದರೂ ದೊರೆತಿದೆಯೇ ಎಂಬುದನ್ನು ಕೂಡ ಈಗ ಪರಿಶೀಲಿಸಬೇಕಿದೆ. ಹೆಚ್ಚಿನ ಕಡೆ ಸಂತ್ರಸ್ತರು ಇನ್ನೂ ಒಂದು ಸೂರಿಗಾಗಿ, ಪರಿಹಾರ ಧನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಕೊರೊನಾ ಇಲ್ಲದಾಗಲೇ ಸರಕಾರಿ ಯಂತ್ರ ಸಂತ್ರಸ್ತರನ್ನು ಸಾಕಷ್ಟು ಹತಾಶಗೊಳಿಸಿದೆ; ಇನ್ನು ಕೋವಿಡ್‌ ಕಾಲದಲ್ಲಿ ಸಂತ್ರಸ್ತರು ಪಡಬೇಕಾದ ಯಾತನೆ ಹೇಗಿದ್ದೀತು? ಅಂಥದೊಂದು ಸನ್ನಿವೇಶ ಬರದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳ, ಅಧಿಕಾರಿಗಳು ಕರ್ತವ್ಯವಾಗಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top