ಸವಾಲುಗಳ ನಡುವೆ ಮೋದಿ ಸೆಕೆಂಡ್‌ ಇನಿಂಗ್ಸ್‌ ಸಾಧನೆ

ಕೊರೊನಾದಿಂದ ನೆಲಕಚ್ಚಿದ ಆರ್ಥಿಕತೆಯ ನಡುವೆಯೂ ಆತ್ಮನಿರ್ಭರ ಭಾರತದ ಕನಸಿನ ಹಾದಿಯಲ್ಲಿ.
– ಹರಿಪ್ರಕಾಶ್‌ ಕೋಣೆಮನೆ.

ಎಷ್ಟು ಬೇಗ ದಿನಗಳು ಉರುಳಿ ಹೋದವು! ಹದಿನೈದು ವರ್ಷದಷ್ಟು ದೀರ್ಘ ಕಾಲ ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ರಾಷ್ಟ್ರ ರಾಜಕಾರಣ ಮುಖ್ಯ ಭೂಮಿಕೆಗೆ ಬರುತ್ತಾರೆಂಬ ಊಹಾತ್ಮಕ ಚರ್ಚೆ ಶುರುವಾದದ್ದು, ಅದರ ಬೆನ್ನಲ್ಲೇ 2014ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡದ್ದು, ಮತ್ತೆ ಕೆಲವೇ ದಿನಗಳಲ್ಲಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದೆಲ್ಲ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ನೆನಪಿನ ಪುಟಗಳಿಗೆ ಹೊರಳಿದರೆ ಆ ಘಟನಾವಳಿಗಳೆಲ್ಲ ನಮ್ಮ ಕಣ್ಣೆದುರಲ್ಲೇ ನಿನ್ನೆ ಮೊನ್ನೆ ನಡೆದುಹೋದ ವಿದ್ಯಮಾನಗಳೇನೋ ಎಂಬಂತಿವೆ. ಹಾಗೆ ನೋಡು ನೋಡುತ್ತಲೇ ನರೇಂದ್ರ ಮೋದಿ ಅವರು ಐದು ವರ್ಷದ ಒಂದು ಅವಧಿ ಪೂರ್ಣಗೊಳಿಸಿ ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದಿಗೆ ಒಂದು ವರ್ಷ ತುಂಬುತ್ತಿದೆ. ಮೋದಿ ಪ್ರಧಾನಿಯಾಗಿ ಆರು ವರ್ಷ ಮುಗಿದು ಏಳಕ್ಕೆ ಪದಾರ್ಪಣೆ. ಬಿಜೆಪಿಗರಿಗೆ ಅಥವಾ ಅಭಿಮಾನಿ ಬಳಗಕ್ಕೆ ಮಾತ್ರವಲ್ಲ. ಇಡೀ ದೇಶಕ್ಕೆ, ಜಗತ್ತಿನ ಹಲವು ದೇಶಗಳಿಗೆ ಮೋದಿ ಎಂದರೆ ನಿರೀಕ್ಷೆಗಳ ಬೆಟ್ಟ. ಆ ಎಲ್ಲ ಕಾರಣಕ್ಕೆ ಮೋದಿ ಅಥವಾ ದೇಶ ಮುನ್ನಡೆಸುತ್ತಿರುವ ಬಿಜೆಪಿ ಸರಕಾರದ ಸಾಧನೆ, ವೇದನೆ, ಏಳು ಬೀಳುಗಳು ಬಲು ಮುಖ್ಯ.
ಮೋದಿ ಸರಕಾರ ಸಾಧಿಸಿದ್ದೇನು? ಸಾಧಿಸಬೇಕಾದದ್ದೇನು? ಸಾಧಿಸಲಾಗದ್ದೇನು? ಕೆಲ ಪ್ರಮುಖ ಸಂಗತಿಗಳನ್ನು ಗಮನಿಸೋಣ.
ಸದ್ಯಕ್ಕೆ ಮೋದಿಗೆ ಮೋದಿಯೇ ಸಾಟಿ!
ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮೋದಿ ಎಲ್ಲ ಸವಾಲುಗಳನ್ನು ಸಮಚಿತ್ತದಿಂದ ಎದುರಿಸಿ ಸರಳ ಬಹುಮತ ಗಳಿಸಿ ದೇಶದ ಪ್ರಧಾನಿಯಾಗಿ ಜನಮನ್ನಣೆ ಪಡೆದು ಆಯ್ಕೆಯಾದರು. ಮಾತ್ರವಲ್ಲ, ಪ್ರಪಂಚದ ಅತ್ಯುನ್ನತ ಪ್ರಜಾಪ್ರಭುತ್ವದ ದೇಶದ ಪ್ರಧಾನಿ ಹುದ್ದೆಯ ಹೊಣೆಗಾರಿಕೆಯನ್ನು ತಮ್ಮದೇ ಶೈಲಿಯಲ್ಲಿ ನಿಭಾಯಿಸಿ ವಿಶ್ವನಾಯಕನಾಗಿ ಹೊರಹೊಮ್ಮಿದ್ದು ಸಾಮಾನ್ಯವೇನಲ್ಲ.
ಒಂದಿಷ್ಟು ಮಂದಿ ವಿಪರೀತ ಅಭಿಮಾನದಿಂದ ಮೋದಿ ಬೇರೆ ಅಲ್ಲ, ಭಾರತ ದೇಶ ಬೇರೆ ಅಲ್ಲ ಎಂದು ಹೇಳುವುದುಂಟು. (ಕಾಂಗ್ರೆಸ್‌ ಮುಖಂಡ ಡಿ. ಕೆ. ಭರೂಚ ಅವರು ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ ಎಂದಿದ್ದರು) ಈ ಅತಿರೇಕದ ಬಣ್ಣನೆ, ಪ್ರಶಂಸೆಯನ್ನು ಚಿಕಿತ್ಸಕವಾಗಿ ನೋಡುತ್ತಲೇ, ಪ್ರಧಾನಿ ಮೋದಿಯ ಕಾರಣಕ್ಕಾಗಿ ಜಗತ್ತಿನ ಭೂಪಟದಲ್ಲಿ ಭಾರತವೂ ಎದೆಯುಬ್ಬಿಸಿ ನಿಂತಿರುವುದು ಸುಳ್ಳಲ್ಲ ಎಂಬ ಮಾತನ್ನು ಒಪ್ಪಲೇಬೇಕಾಗುತ್ತದೆ. ಜಗತ್ತಿನ ಜನರ ಚಿತ್ತಾಕರ್ಷಣೆಯ ಕೇಂದ್ರವಾಗಿದೆ.
ಮೋದಿ ನೇತೃತ್ವದ ಎನ್‌ಡಿಎ-1 ಅವಧಿಯಲ್ಲಿ ಕೈಗೊಂಡ ನೋಟು ರದ್ದತಿ, ಜಿಎಸ್‌ಟಿ ಜಾರಿಯಂತಹ ಬ್ಯಾಕ್‌ ಟು ಬ್ಯಾಕ್‌ ಧಮಾಕಾಗಳನ್ನು ಕಾರ್ಯಗತಗೊಳಿಸಿದ ಸರಕಾರ ಜನಸಾಮಾನ್ಯರನ್ನು ತಲುಪಬಲ್ಲ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳ ಸರಣಿಯನ್ನೂ ಘೋಷಿಸಿ ಸೈ ಎನಿಸಿಕೊಂಡಿತು. ಕೇವಲ ಸಾಧನೆಯಲ್ಲ, ಈ ಹಿಂದಿನ ಅವಧಿಯಲ್ಲಿ ಮೋದಿ ಸರಕಾರ ರಫೇಲ್‌ ಡೀಲ್‌ನಂತಹ ವಿವಾದದ ಸವಾಲನ್ನೂ ಎದುರಿಸಿತು. ಅದಕ್ಕೆ ಸಂಬಂಧಪಟ್ಟ ಸಚಿವರ ಅನನುಭವ, ಪ್ರತಿಪಕ್ಷಗಳ ತರ್ಕರಹಿತ ತಂತ್ರಗಾರಿಕೆಯೂ ಕಾರಣ. ಅಪರಿಮಿತ ಜನಪ್ರಿಯತೆಯ ಅಲೆಯಲ್ಲಿ ತೇಲುತ್ತಿದ್ದ ಮೋದಿ ಸರಕಾರಕ್ಕೆ ರಫೇಲ್‌ ವಿವಾದ ಕಗ್ಗಂಟಾಗಿ ಕಾಡಿದ್ದು ಸುಳ್ಳಲ್ಲ. ಮೊದಲ ಅವಧಿಯ ಕೊನೇ ಚರಣದಲ್ಲಿ ಭಾರತೀಯ ಸೇನೆ ನಡೆಸಿದ ಬಾಲಾಕೋಟ್‌ ದಾಳಿ, ಪಾಕ್‌ ಉಗ್ರರ ದಮನ, ಕಡೇ ವಿಕೆಟ್‌ ಕೊನೇ ಓವರ್‌ನಲ್ಲಿ ಸಿಕ್ಸರ್‌ ಸಿಡಿಸಿದಂತೆ ಆಯಿತು. 2019ರ ಚುನಾವಣೆಯ ಗತಿಯನ್ನು ಬದಲಾಯಿಸಿದ್ದಲ್ಲದೆ, ಬಿಜೆಪಿ ಏಕಾಂಗಿಯಾಗಿ ಐತಿಹಾಸಿಕ 300 ಸ್ಥಾನಗಳ ಗಡಿ ದಾಟುವಂತೆ ಮಾಡಿದ್ದು ಬಾಲಾಕೋಟ್‌ ಮಿಲಿಟರಿ ದಾಳಿಯೇ! ಇದರಲ್ಲಿ ಅನುಮಾನ, ಅತಿಶಯೋಕ್ತಿ ಯಾವುದೂ ಇಲ್ಲ.
ರಾಜತಾಂತ್ರಿಕ ಮೈಲಿಗಲ್ಲು
2014ರಲ್ಲಿ ಮೊದಲ ಬಾರಿ ಪ್ರಧಾನಿ ಆದ ಮೋದಿ ಮೊದಲ ವಿದೇಶ ಭೇಟಿ ಕೈಗೊಂಡದ್ದು ನೆರೆಯ ಪುಟ್ಟ ರಾಷ್ಟ್ರ ಭೂತಾನ್‌ಗೆ. ಅಲ್ಲಿಂದ ಮುಂದೆ ಭಾರತದ ಗಡಿಗುಂಟ ಇರುವ ಎಲ್ಲ ರಾಷ್ಟ್ರಗಳ ವಿಶ್ವಾಸ ಗಟ್ಟಿಗೊಳಿಸಿದ್ದು ಮೋದಿ ಸರಕಾರದ ಉತ್ತಮ ಉಪಕ್ರಮ. ಹಾಗೆಯೇ ಅರಬ್‌ ದೇಶಗಳಿಂದ ಅಮೆರಿಕದವರೆಗೆ ನೂರಾರು ರಾಷ್ಟ್ರಗಳೊಂದಿಗಿನ ಭಾರತದ ಸ್ನೇಹ ಸೌಹಾರ್ದಕ್ಕೆ ಸತತ ಎರಕ ಹೊಯ್ದಿದ್ದು ಸಣ್ಣ ಕೆಲಸವಲ್ಲ.
ಗೆಲುವಿನ ಬೆನ್ನಲ್ಲೇ ಕಾಡಿದ ಸರಣಿ ಸೋಲುಗಳು ಅಭೂತಪೂರ್ವ ವಿಜಯದೊಂದಿಗೆ ಕಳೆದ ವರ್ಷದ ಮೇ 31ರಂದು ಎರಡನೇ ಅವಧಿಗೆ ಪ್ರಧಾನಿ ಹುದ್ದೆಯ ಹೊಣೆಗಾರಿಕೆ ವಹಿಸಿಕೊಂಡ ನಂತರ ಮೋದಿ ಸವೆಸಿದ್ದು ಹೂವಿನ ಹಾಸನ್ನಲ್ಲ.
ಮೊದಲ ಅವಧಿಯಲ್ಲಿ ಗುಜರಾತ್‌ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಏದುಸಿರಿನ ಗೆಲುವು ಪಡೆದ ನಂತರ ಎರಡನೇ ಅವಧಿ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಸರಣಿ ಸೋಲುಗಳನ್ನು ಕಾಣಬೇಕಾಯಿತು. ಸ್ಥಳೀಯವಾಗಿ ಜನಮನ ಗೆಲ್ಲಲು ಬಿಜೆಪಿ ವಿಭಿನ್ನ ಆಲೋಚನೆ ಮಾಡಲೇಬೇಕು ಎಂಬ ಸೋಲಿನ ಪಾಠವನ್ನು ಜನ ಬಿಜೆಪಿಗೆ ಮನವರಿಕೆ ಮಾಡಿಕೊಟ್ಟರು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಮಹಾರಾಷ್ಟ್ರ, ಹರಿಯಾಣದ ಚುನಾವಣೆ ಮೂಲಕ ಬಿಜೆಪಿ ನಾಯಕತ್ವಕ್ಕಿಂತಲೂ ಮತದಾರ ಹೆಚ್ಚು ಜಾಣನಾಗಿದ್ದಾನೆ ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ತನ್ನಲ್ಲಿಯೇ ಇಟ್ಟುಕೊಂಡಿದ್ದಾನೆ ಎಂಬುದನ್ನು ಸಾಬೀತುಪಡಿಸಿತು. ಮೋದಿ, ಶಾ ಹೊರತುಪಡಿಸಿ ಸ್ಥಳೀಯ ಸಮರ್ಥ ನಾಯಕತ್ವ ಗುರುತಿಸಲು ಬಿಜೆಪಿ ಗಮನ ಕೊಡಲೇಬೇಕು ಎಂಬುದು ಜನಾದೇಶಗಳ ಒಟ್ಟು ತಾತ್ಪರ್ಯ.
ಅಮೆರಿಕದ ಹೌಡಿ ಮೋದಿ ಸಮಾವೇಶ ಇಡೀ ವಿಶ್ವವನ್ನು ಬೆರಗುಗೊಳಿಸಿತು. ಅದರಿಂದ ಭಾರತ-ಅಮೆರಿಕ ಬಂಧ ಮತ್ತಷ್ಟು ಗಟ್ಟಿ ಆಯಿತು. ಹೌಡಿ ಮೋದಿಗೆ ಪ್ರತಿಯಾಗಿ ಅಧ್ಯಕ್ಷ ಟ್ರಂಪ್‌ರನ್ನು ಗುಜರಾತಿಗೆ ಆಹ್ವಾನಿಸಿ ಗೌರವಿಸಿದ್ದು ಮತ್ತೊಂದು ಮೈಲುಗಲ್ಲು. ಆದರೆ ಮುಂದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ದೃಷ್ಟಿಯಿಂದ ಟ್ರಂಪ್‌ ಅಭ್ಯರ್ಥಿತನವನ್ನು ಪದೇ ಪದೆ ಅನುಮೋದಿಸುತ್ತಿರುವುದು ರಾಜತಾಂತ್ರಿಕವಾಗಿ ಸರಿಯೇ ಎಂಬ ಪ್ರಶ್ನೆ ಎತ್ತಿರುವುದನ್ನೂ ಕಂಡಿದ್ದೇವೆ. ಆದರೆ ಮೇಲಿಂದ ಮೇಲೆ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಚೀನಾದ ಸೊಕ್ಕನ್ನು ಕಂಡಾಗ ಅಮೆರಿಕ ಸ್ನೇಹದ ವಿಷಯದಲ್ಲಿ ಮೋದಿ ನಡೆಯೇ ಸರಿಯೆಂದು ಅನಿಸಿದರೆ ಅಚ್ಚರಿ ಏನೂ ಇಲ್ಲ.
ಮೋದಿ ಆಡಳಿತದ ಮೊದಲ ಅವಧಿಗೆ ಹೋಲಿಸಿದರೆ ಎರಡನೇ ಅವಧಿಯ ಮೊದಲ ಒಂದು ವರ್ಷದಲ್ಲಿ ಹಲವು ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಂಡಿರುವುದು ಗಮನಾರ್ಹ.
ಮಂದಿರಕ್ಕಾಗಿ ಬುದ್ಧಿವಂತಿಕೆಯ ತೀರ್ಮಾನ
ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನಿರ್ಣಯಕ್ಕೆ ಬದ್ಧ ಎಂದಿದ್ದು ಮೋದಿ ಸರಕಾರದ ಬುದ್ಧಿವಂತಿಕೆಯ ನಡೆ. ತೀರ್ಪು ಮಂದಿರದ ಪರ ಬಂದಾಗ ಇಡೀ ದೇಶದ ಕಾನೂನು ಸುವ್ಯವಸ್ಥೆಗೆ ಎಳ್ಳಷ್ಟು ಭಂಗ ಬರದಂತೆ ನೋಡಿಕೊಂಡದ್ದು ಮೆಚ್ಚಲೇಬೇಕು.
ತ್ರಿವಳಿ ತಲಾಕ್‌ ಮುಕ್ತಿಗೆ ಬದ್ಧತೆ
ತ್ರಿವಳಿ ತಲಾಕ್‌ ರದ್ದುಪಡಿಸಲು ಸುಗ್ರೀವಾಜ್ಞೆ ಹೊರಡಿಸಿದ್ದು, ಮೋದಿ ಅವರ ಮತ್ತೊಂದು ಸೂಕ್ಷ್ಮಮತಿಯಿಂದ ಕೂಡಿದ ಐತಿಹಾಸಿಕ ತೀರ್ಮಾನ. ಸುಗ್ರೀವಾಜ್ಞೆ ಬೆನ್ಲಲ್ಲೇ ನಡೆದ ಸುದೀರ್ಘ ಚರ್ಚೆಯ ನಂತರ ರೂಪಿಸಿದ ಕಾಯಿದೆ ಸಾಮಾಜಿಕ, ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಮಹತ್ವದ ಹೆಜ್ಜೆ.
ಕಾಶ್ಮೀರ ನಿಟ್ಟುಸಿರು
ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲದಿಂದಲೂ ಭಾರತದ ಮುಕುಟ ಕಾಶ್ಮೀರ ದೇಶದ ಇತರ ರಾಜ್ಯಗಳಿಗಿಂತ ಬೇರೆಯಾಗಿ ಉಳಿದು, ಪ್ರತ್ಯೇಕತೆಯ ಬೀಜ ಬಿತ್ತಲು ಕಾರಣವಾಗಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಐತಿಹಾಸಿಕ ತೀರ್ಮಾನ. ಅದನ್ನು ಮೋದಿ ಸರಕಾರವಲ್ಲದೆ ಬೇರೆ ಯಾವ ಸರಕಾರವೂ ಮಾಡಲು ಸಾಧ್ಯವೇ ಇರಲಿಲ್ಲ. ಕಾಶ್ಮೀರ ಭಾರತದ ಮುಕುಟ, ಮುಕುಟವಿಲ್ಲದ ಭಾರತವನ್ನು ಊಹಿಸಲೂ ಸಾಧ್ಯವಿಲ್ಲ. ಮುಕುಟದೊಂದಿಗೆ ಭಾರತ ಭದ್ರವಾಗುವುದು ಪಾಕ್‌ ಆಕ್ರಮಿತ ಕಾಶ್ಮೀರ ಸಂಪೂರ್ಣ ಭಾರತ ವಶವಾದಾಗ. ಆ ದಿನಗಳ ಸಾಕಾರ ಈ ಸರಕಾರಕ್ಕೆ ಅಸಾಧ್ಯದ ಮಾತಲ್ಲ!
ಪೌರತ್ವ ಕಾಯಿದೆ
ಒಂದು ಪ್ರಜಾಸತ್ತಾತ್ಮಕ ದೇಶ ಧರ್ಮ ಛತ್ರದಂತಿರಲು ಅಸಾಧ್ಯ ಎಂದು ಸಾರಿ ಹೇಳಿದ್ದು ಪೌರತ್ವ ಕಾಯಿದೆ. ಆದರೆ ಅದನ್ನು ಜಾರಿಗೊಳಿಸಲು 370ನೇ ವಿಧಿ ರದ್ದುಗೊಳಿಸುವ ಮುನ್ನ ಅಥವಾ ರಾಮಮಂದಿರ ತೀರ್ಪಿನ ಸಂದರ್ಭದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಹೋದದ್ದು ಹಾಗೂ ಅಗತ್ಯ ಭೂಮಿಕೆಯನ್ನು ಸಿದ್ಧಪಡಿಸದೇ ಹೋಗಿದ್ದು ದೊಡ್ಡ ಪ್ರಮಾದವಾಯಿತು. ಮುಂದೆ ಇಂಥ ಅನೇಕ ಬಾಕಿ ಸುಧಾರಣೆಗಳನ್ನು ಜಾರಿಗೊಳಿಸಲು ತಡೆಯಾಗಿ ಹೋಯಿತು.
ಆರ್ಥಿಕತೆ ಪ್ರಶ್ನಾರ್ಥಕ!
ಈ ಸರಕಾರಕ್ಕೆ ಆರ್ಥಿಕತೆ ನಿರ್ವಹಿಸುವ ತಿಳಿವಳಿಕೆ ಇಲ್ಲ ಎಂಬುದು ಒಂದು ಅಭಿಪ್ರಾಯ. ಹಾಗೆಯೇ ಯಾವ ಸರಕಾರಕ್ಕೆ ಆ ತಿಳಿವಳಿಕೆ ಇದೆ ಅಥವಾ ಇತ್ತು ಎಂಬ ಪ್ರಶ್ನೆಯೂ ಅಷ್ಟೇ ಸಮಂಜಸ. ನಿಜ ರಾಜಕೀಯ ನಾಯಕತ್ವಕ್ಕೆ ಆರ್ಥಿಕತೆ, ವಿಜ್ಞಾನ, ತಂತ್ರಜ್ಞಾನದ ಮೇಲೆ ದೊಡ್ಡ ಮಟ್ಟದ ಪರಿಣಿತಿ ಬೇಕಿಲ್ಲ. ಆದರೆ ತಿಳಿದವರಿಂದ ತಿಳಿದುಕೊಳ್ಳುವ, ತಿಳಿದವರನ್ನು ದುಡಿಸಿಕೊಳ್ಳುವ ಬುದ್ಧಿ ಬೇಕು. ಈ ವಿಷಯದಲ್ಲಿ ಮೋದಿ ಸರಕಾರ ಇನ್ನಷ್ಟು ಎಚ್ಚರಿಕೆಯ ಹೆಜ್ಜೆ ಇಡಬೇಕು. ಆರ್ಥಿಕತೆ ವಿಚಾರದಲ್ಲಿ ಸರಕಾರ ಹೊಗಳುಭಟ್ಟರಿಗಿಂತ ಟೀಕಾಕಾರರನ್ನು ನೆಚ್ಚಿಕೊಳ್ಳುವುದು ಉಚಿತವಾದ್ದು.
ಭಾರತ ಕೊರೊನಾ ಸಂಕಷ್ಟ ನಿರ್ವಹಣೆ ಮಾಡಿದ ರೀತಿಗೆ ವಿಶ್ವದ ಮನ್ನಣೆ ಸಿಕ್ಕಿದೆ. ಅದಕ್ಕಿಂತಲೂ ಹೆಚ್ಚು ಗಮನ ಸೆಳೆದದ್ದು ಕೊರೊನಾ ಜಯಿಸಲು ಕ್ರಮಕ್ಕೆ ಮುಂದಾಗುವ ಮೊದಲು ಪ್ರತಿ ಹಂತದಲ್ಲಿ ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಗೆ ಅನನ್ಯ. ಪ್ರಧಾನಿಯೇ ಸಂಬಂಧಿಸಿದ ಪಾಲುದಾರರೊಂದಿಗೆ ಸಂವಹನ, ಸಂವಾದ ನಡೆಸಿದ್ದು, ಹೆಜ್ಜೆ ಹೆಜ್ಜೆಗೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ್ದು ಭಾರತದ ಪ್ರಜಾತಂತ್ರ ಮತ್ತು ಒಕ್ಕೂಟ ವ್ಯವಸ್ಥೆ ಬಲಗೊಳಿಸುವ ದೃಷ್ಟಿಯಿಂದಲೂ ಮಹತ್ವವಾದುದೇ!
ತಂತ್ರಜ್ಞಾನಕ್ಕೆ ಮನ್ನಣೆ
ಮೋದಿ ಸರಕಾರದ ಮೊದಲ ಅವಧಿಯಲ್ಲಿ ಆಡಳಿತದಲ್ಲಿ ತಂತ್ರಜ್ಞಾನ, ಡಿಜಿಟಲೀರಣಕ್ಕೆ ಅಡಿಪಾಯ ಹಾಕಲಾಯಿತು. ಅದರ ಪ್ರಯೋಜನದ ಪ್ರತ್ಯಕ್ಷ ಅನುಭವ ಆದದ್ದು ಕೊರೊನಾ ಕಾಲದಲ್ಲಿ. ತಂತ್ರಜ್ಞಾನ ವಿಶಾಲ ದೇಶದ ಆಡಳಿತ ವ್ಯವಸ್ಥೆಯನ್ನು ಸಮೀಪಕ್ಕೆ ತಂದಿತು. ಕೊರೊನಾ ಸಂಕಷ್ಟ ಕಾಲದಲ್ಲಿ ತಂತ್ರಜ್ಞಾನವೇ ಅಸ್ತ್ರವಾಯಿತು.
ಮೋದಿ ಎಲ್ಲದಕ್ಕಿಂತ ಹೆಚ್ಚು ಜನರಿಗೆ ಇಷ್ಟವಾಗಿರುವುದು ವೈಯಕ್ತಿಕವಾಗಿ ಕಾದುಕೊಂಡಿರುವ ಪಾರದರ್ಶಕತೆಗೋಸ್ಕರ. ಬೇರೆ ಏನಾದರೂ ಆಗಬಹುದು, ಮೋದಿ ಸುಪರ್ದಿಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ ಎಂಬುದು ಸಾಮಾನ್ಯರ ಅಭಿಪ್ರಾಯ. ಈ ಪ್ರಭಾವ ಇಡೀ ವ್ಯವಸ್ಥೆಯ ಮೇಲೆ ಆಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಕೂಡ ಪ್ರಧಾನಿಯ ಮೇಲಿದೆ ಎಂಬುದನ್ನು ಮರೆಯಬಾರದು.
ಕಾಂಗ್ರೆಸ್‌ ಮುಕ್ತ ಭಾರತದ ಘೋಷಣೆ ಅಹಂಕಾರದ್ದು. ಇದು ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಹಿತವಲ್ಲ. ವ್ಯವಸ್ಥೆಯಲ್ಲಿ ಸಮರ್ಥ ಆಡಳಿತ ಪಕ್ಷ ಮತ್ತು ಸಮರ್ಥ ಪ್ರತಿಪಕ್ಷ ಇರಬೇಕು. ಅದೊಂದು ಆರೋಗ್ಯಕರ ಅಪೇಕ್ಷೆ. ಮುಂದೆ ಉತ್ತಮ ಆಡಳಿತ, ಸಮರ್ಥ ನಾಯಕತ್ವವೇ ಪ್ರಧಾನ ಎಂಬಂತಾದಾಗ ಇಂಥ ಘೋಷಣೆಗಳು ಕ್ಷುಲ್ಲಕ ಎನಿಸಿಬಿಡುತ್ತವೆ.
ಮೋದಿ, ಶಾ ದರಬಾರಿನಲ್ಲಿ 2ನೇ ಸ್ತರದ ಸಮರ್ಥ ನಾಯಕತ್ವ ಬೆಳೆಯುತ್ತಿಲ್ಲ. ಈ ಹಿಂದೆ ವಾಜಪೇಯಿ, ಆಡ್ವಾಣಿ ಯುಗದಲ್ಲಿ ಅಂಥ ಭರವಸೆ ಇತ್ತು ಎಂಬ ಮಾತಿದೆ. ಇಂಥ ನಿರೀಕ್ಷೆ-ಅಪೇಕ್ಷೆಗಳು ಪಕ್ಷದ ಒಳಗಿನಿಂದಲೇ ಕೇಳಿಬರುತ್ತಿವೆ. ಅಟಲ್‌-ಆಡ್ವಾಣಿ ಕಾಲದಲ್ಲಿ ಪ್ರಮೋದ್‌ ಮಹಾಜನ್‌, ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌, ಉಮಾ ಭಾರತಿ, ಅನಂತಕುಮಾರ್‌, ರಾಜನಾಥ ಸಿಂಗ್‌, ವೆಂಕಯ್ಯ ನಾಯ್ಡು- ಹೀಗೆ ಹೇಳಲು ಹತ್ತಾರು ಹೆಸರುಗಳಿದ್ದವು. ಈಗ ಮೋದಿ- ಶಾ ನಂತರ ಬಹಳಷ್ಟು ಜನರಿಗೆ ಹೊಸ ಹೆಸರುಗಳೇ ಹೊಳೆಯುತ್ತಿಲ್ಲ. ಸಂಬಂಧಪಟ್ಟವರು ಆಲೋಚನೆ ಮಾಡಬೇಕಿರುವ ಸಂಗತಿ.
ಪ್ರಧಾನಿ ಮೋದಿ ವ್ಯಕ್ತಿತ್ವದಲ್ಲಿ ಪಾರದರ್ಶಕತೆ ಹೇಗಿದೆಯೋ, ಅದೇ ರೀತಿ ಆಡಳಿತ ವ್ಯವಸ್ಥೆಯ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ಪ್ರತಿಷ್ಠಿತ ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಇನ್ನಷ್ಟು ಪಾರದರ್ಶಕತೆ ಬೇಕೆಂಬ ಮಾತುಗಳಿವೆ. ಇವುಗಳ ಪ್ರಮಾಣ-ಪರಿಣಾಮ ಏನೇ ಇರಲಿ, ಉನ್ನತ ನಾಯಕನಾದವ ತಾನೊಬ್ಬ ಪರಿಶುದ್ಧವಾದರೆ ಸಾಲದು. ತನ್ನ ಪರಿವಾರವೂ ಪರಿಶುದ್ಧವಾಗಿರುವಂತೆ ನೋಡಿಕೊಳ್ಳುವುದು ಧರ್ಮ ಎಂಬ ಪಂಚತಂತ್ರದ ನೀತಿಯನ್ನು ಮರೆಯಬಾರದು.
ಪ್ರಜಾತಂತ್ರದಲ್ಲಿ ಉತ್ತಮ ಆಡಳಿತಕ್ಕೆ ಉತ್ತಮ ಮಾಧ್ಯಮ ವ್ಯವಸ್ಥೆ ಬೇಕು. ಆರೋಗ್ಯಕರ ಟೀಕೆಯನ್ನು ಉತ್ತಮ ನಾಯಕತ್ವ ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಮೊದಲ ಅವಧಿಯಲ್ಲಿ ಎಲ್ಲವೂ ಸಾಮಾಜಿಕ ಮಾಧ್ಯಮಗಳಿಂದಲೇ ಸಾಧ್ಯ ಎಂದು ಭಾವಿಸಿದ್ದ ಮೋದಿ, ಎರಡನೇ ಅವಧಿಯಲ್ಲಿ ಸಾಂಸ್ಥಿಕ ಮಾಧ್ಯಮಗಳತ್ತ ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ. ಇದೊಂದು ಗಮನಾರ್ಹ, ಸ್ವಾಗತಾರ್ಹ ಬೆಳವಣಿಗೆ. ಸವಾಲುಗಳ ನಡುವೆ ಸಾಧನೆಗೆ ಇನ್ನೂ ನಾಲ್ಕು ವರ್ಷಗಳಿರುವಾಗ ಚುನಾಯಿತ ಸರಕಾರಕ್ಕೆ ಅವಲೋಕನವೇ ದಾರಿದೀಪ ಆಗಲಿ.
ಕಡೆ ಮಾತು: ಮೋದಿ ಸರಕಾರಕ್ಕೆ ವರ್ಷ ತುಂಬುವ ಹಾದಿಯಲ್ಲಿ ಕೊರೊನಾ ಎಂಬ ಕಣ್ಣಿಗೆ ಕಾಣದ ದೊಡ್ಡ ಶತ್ರುವೊಬ್ಬ ದಾಳಿಗಿಳಿದಿದ್ದಾನೆ. ಇಲ್ಲಿಯವರೆಗೂ ಮೋದಿ ಅವರು ಶತ್ರುವಿನ ವಿರುದ್ಧ ಜಾಣ್ಮೆಯ ಸಮರವನ್ನೇ ನಡೆಸುತ್ತಾ, ಯಶಸ್ವಿಯಾಗಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಆದರೆ, ಸಮರದಲ್ಲಿ ಯಾರೇ ಸೋತರೂ, ಯಾರೇ ಗೆದ್ದರೂ, ಎಲ್ಲರಿಗೂ ನೋವು ನಿಶ್ಚಿತ. ಅಂತೆಯೇ, ಕೊರೊನಾ ವಿರುದ್ಧದ ಸಮರದಲ್ಲಿ ವಲಸಿಗರು, ಕಾರ್ಮಿಕರು ಹಾಗೂ ಶ್ರೀಸಾಮಾನ್ಯರು ಬಳಲಿದ್ದಾರೆ. ಸಿರಿವಂತರ ಸುಸ್ತು ಸದ್ಯ ಕಾಣುತ್ತಿಲ್ಲ. ಎಲ್ಲರ ನೆರವಿಗೆ ಧಾವಿಸಲು ಮೋದಿ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿರುವುದರ ನಡುವೆಯೂ ಹತಾಶೆಯ ಮಾತುಗಳು ಕೇಳಿಬರುತ್ತಿವೆ. ಹೋರಾಟದ ವೇಳೆಯಲ್ಲಿ ಇದು ಸಾಮಾನ್ಯ. ಸುಸ್ತಾದವರನ್ನು, ಬಳಲಿ ಬೆಂಡಾದವರನ್ನು ಎದ್ದು ನಿಲ್ಲಿಸಲು ಸರಕಾರ ತತ್‌ಕ್ಷಣದ ಮದ್ದಾಗಿ ಗ್ಲೂಕೋಸ್‌ ನೀಡಿದರಷ್ಟೇ ಸಾಲದು. ಅವರು ಗಟ್ಟಿಯಾಗಿ ಎದ್ದು ನಿಂತು ರಟ್ಟೆ ಮುರಿದು ಕೆಲಸ ಮಾಡುವ ರೀತಿ ಮಾಡಬೇಕಿದೆ. ಮೋದಿ ಘೋಷಣೆ ಮಾಡಿರುವ ಆತ್ಮನಿರ್ಭರ ಭಾರತದ ಕನಸುಗಳು ನನಸಾಗಲಿ, ಸ್ವಾವಲಂಬಿ ಭಾರತ ಎದ್ದು ನಿಲ್ಲಲಿ ಎಂದು ಆಶಿಸೋಣ.

ಓದುಗರ ಒಡಲಾಳ
ಈ ಕಾಂಗ್ರೆಸ್ಸಿಗೆ ಬುದ್ಧಿ ಬರುವುದು, ನದಿಯಲ್ಲಿನ ಕಲ್ಲು ನೀರು ಕುಡಿಯುವುದೂ ಒಂದೇ ಅಂತ ತೋರುತ್ತದೆ. ಸಾವರ್ಕರ್‌ ವಿರುದ್ಧ ಮಾತನಾಡುವ ಕಾಂಗ್ರೆಸ್‌ ತನ್ನ ತಲೆಯೊಳಗೆ ಸರಕು ಖಾಲಿ ಆಗಿದೆ ಎಂದು ಜಗಜ್ಜಾಹೀರು ಮಾಡುತ್ತಿದೆ. ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್‌ ಸರಿದಾರಿಗೆ ಬರಲಿ.
– ಪರಶಿವಪ್ಪ ಎಸ್‌., ಹೊಳಲ್ಕೆರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top