ಮೊದಲ ಪತ್ರಕರ್ತ ನಾರದ ಮುನಿ

ಇಂದು ನಾರದ ಜಯಂತಿ

ವಿಶ್ವದ ಮೊದಲ ಪತ್ರಕರ್ತನೆಂದು ನಾರದ ಮುನಿಗಳನ್ನೇ ಹೆಸರಿಸಬೇಕಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾರ್ತೆ, ವಿಶ್ಲೇಷಣೆಯನ್ನು ಒಯ್ಯುತ್ತಿದ್ದ ಈ ನಾರದ ಮುನಿಗಳು ಪರಮ ಹರಿಭಕ್ತರು. ತಮ್ಮ ಈ ಕಾಯಕದಿಂದಲೇ ದುಷ್ಟ ಶಿಕ್ಷೆ, ಶಿಷ್ಟ ರಕ್ಷಣೆಯ ಕಾರ್ಯವನ್ನು ಸಾಧಿಸುತ್ತಿದ್ದವರು. ಇಂದಿನ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ವಸ್ತುನಿಷ್ಠ ಪತ್ರಿಕೋದ್ಯಮಕ್ಕೆ ಅವರೇ ಪ್ರೇರಣೆ.
ವೈಶಾಖ ಪೂರ್ಣಿಮೆಯ ನಂತರ ಕೃಷ್ಣ ಪಕ್ಷ ಪಾಡ್ಯದಂದು ನಾರದ ಜಯಂತಿ ಬರುತ್ತದೆ. ಹೆಚ್ಚಿನ ಎಲ್ಲ ಪುರಾಣಗಳಲ್ಲೂ ನಾರದ ಉಲ್ಲೇಖವಿದೆ. ರಾಮಾಯಣ ಮಹಾಭಾರತ ಭಾಗವತಗಳಲ್ಲೂ ನಾರದರು ಬರುತ್ತಾರೆ. ವಾಯು ಪುರಾಣದಲ್ಲಿ ಇವರು ಕಶ್ಯಪ ಪ್ರಜಾಪತಿಯ ಪುತ್ರ. ಅಯೋನಿಜ, ಸಂಕಲ್ಪ ಮಾತ್ರದಿಂದ ಹುಟ್ಟಿದವರು. ಮತ್ಸ್ಯ ಪುರಾಣದಲ್ಲಿ ಬ್ರಹ್ಮನ ಮಾನಸಪುತ್ರ. ಬ್ರಹ್ಮಾಂಡ ಮತ್ತು ಬ್ರಹ್ಮ ಪುರಾಣಗಳಲ್ಲಿ ಪರಮೇಷ್ಠಿ ದಕ್ಷ ಪುತ್ರಿಯ ಮಗ. ಭಾಗವತದಲ್ಲಿ ಸಾಕ್ಷಾತ್ ಬ್ರಹ್ಮನ ಮೂರನೆಯ ಅವತಾರ ಮತ್ತು ಅವನ ಜಂಘೆಯಿಂದ ಹುಟ್ಟಿದವರು. ಭಗವದ್ಭಕ್ತಿಯಿಂದ ಇವರಿಗೆ ವಿಷ್ಣು ಸಾನ್ನಿಧ್ಯ.
‘ನಾರದ’ ಎಂದರೆ ‘ನಾರಂ ಜ್ಞಾನಂ ದದಾತಿ’ ಅರ್ಥಾತ್ ಮನುಷ್ಯರಿಗೆ ಜ್ಞಾನವನ್ನು ಕೊಡುವವ ಎಂದರ್ಥ. ಐತರೇಯ ಬ್ರಾಹ್ಮಣದಲ್ಲಿ ಇವರು ಹರಿಶ್ಚಂದ್ರನ ಪುರೋಹಿತರಾಗಿದ್ದು ಎಂದು ಹೇಳಲಾಗಿದೆ. ಸಾಂಖ್ಯಾಯನ ಶ್ರೌತ ಸೂತ್ರದಲ್ಲಿ ಪರ್ವತ ಋುಷಿಗಳ ಸಹಯೋಗಿ. ಸಾಮವಿಧಾನ ಬ್ರಾಹ್ಮಣದಲ್ಲಿ ಬ್ರಹಸ್ಪತಿಯ ಶಿಷ್ಯ. ಸಾಮಗಾನದ ವಿಷಯದಲ್ಲಿ ನಾರದೀಯಾ ಶಿಕ್ಷಾ ಎಂಬ ಪ್ರಸಿದ್ಧ ಗ್ರಂಥವಿದೆ. ಮಹಾಭಾರತದಲ್ಲಿ ಇವರು ಸನತ್ಕುಮಾರ ಋುಷಿಗಳೊಡನೆ ಮಾಡಿದ ವಾರ್ತಾಲಾಪ, ಶುಕನಿಗೆ ಮಾಡಿದ ಜ್ಞಾನೋಪದೇಶ, ನಾರಾಯಣ ಮುನಿಗೆ ನೀಡಿದ ಆತ್ಮತತ್ವದ ಉಪದೇಶ ಇತ್ಯಾದಿಗಳ ಉಲ್ಲೇಖವಿದೆ. ಭಾಗವತದಲ್ಲಿ ಸೌವರ್ಣಿ ಎಂಬ ಎಂಟನೆಯ ಮನುವಿಗೆ ಪಂಚರಾತ್ರಾಗಮದ ಉಪದೇಶ ಹಾಗೂ ವಸುದೇವನಿಗೆ ಭಾಗವತ ಧರ್ಮವನ್ನು ಹೇಳಿದ ಸಂಗತಿ ಇದೆ. ಪುಂಡರೀಕನಿಗೆ ನಾರಾಯಣ ಮಹಾತ್ಮವನ್ನು ಹೇಳಿದವರು, ಧ್ರುವನಿಗೆ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ದ್ವಾದಶಾಕ್ಷ ರ ಮಂತ್ರವನ್ನು ಹೇಳಿ ದೀಕ್ಷೆ ಕೊಟ್ಟವರು ಇವರೇ.
‘ಅಘಟಿತಘಟನಾಪಟು’ ಎಂದು ಇವರ ಪ್ರಸಿದ್ಧಿ. ಆ ದೃಷ್ಟಿಯಿಂದ ಶಂಕರ ಪಾರ್ವತಿಯರ ವಿವಾಹದಲ್ಲಿ ಇವರು ಮಧ್ಯಸ್ಥರಾಗಿ ಕೆಲಸ ಮಾಡಿದರು. ವಿಷ್ಣುವಿನ ಐದನೆಯ ಅವತಾರವಾದ ವಾಮನನ ಉಪನಯನ ಕಾರ್ಯವನ್ನೆಸಗಿದುದು, ದಕ್ಷ ನ ಶಾಪವನ್ನು ನಿಷ್ಫಲಗೊಳಿಸಲು ಇವರು ಮಾಡಿದ ಕಾರ್ಯ, ಕೃಷ್ಣಾವತಾರದ ಸಂದರ್ಭದಲ್ಲಿ ಕಂಸನ ಬಳಿಗೆ ಬಂದು ಅವನಿಗೆ ಅಂತಕನಾಗಲಿರುವ ಮಗುವಿನ ಬಗ್ಗೆ ತಿಳಿಸಿದುದೆಲ್ಲ ಈತ ಆಡಿದ ಮಹತ್ವದ ಪಾತ್ರಗಳು. ಹಿರಣ್ಯಾಕ್ಷ ಹಿರಣ್ಯಕಶಿಪು ಮುಂತಾದ ದಾನವರನ್ನು ತಮ್ಮ ಬೋಧೆಯಿಂದ ಚಿತ್ತವಿಚಲಿತಗೊಳಿಸಿ, ಶ್ರೀಹರಿಯಿಂದ ಅವರು ಆದಷ್ಟು ಬೇಗನೆ ಶಿಕ್ಷೆಗೊಳಗಾಗುವಂತೆ ಮಾಡಿ ಲೋಕಕಲ್ಯಾಣ ಮಾಡಿದವರು ಇವರು. ವೇದಗಳನ್ನು ಮೊದಲ್ಗೊಂಡು ಪುರಾಣಾದಿಗಳಲ್ಲೆಲ್ಲಾ ಉಲ್ಲೇಖಿಸಲಾದ ಅನೇಕ ಘಟನೆಗಳಲ್ಲಿ ಇವರ ಪಾತ್ರ ರಂಜನೀಯವಾಗಿದೆ. ವಿದ್ವತ್ತಿನಿಂದ ಪರಿಫ್ಲುತರಾದ, ಜ್ಞಾನಚಕ್ಷುಗಳಾದ, ಮೂರು ಮುಕ್ಕಾಲು ಗಲಿಗೆಯಲ್ಲಿ ಲೋಕವನ್ನೆಲ್ಲ ಸುತ್ತಿ ಬರಬಲ್ಲವರು ಎಂದು ಬಣ್ಣಿತರಾದ, ಇವರು ಹರಿಭಕ್ತಿಯ ವಿಚಾರದಲ್ಲಿ ಪರಮ ಭಾಗವತರು. ತಂಬೂರಿ ತಾಳವನ್ನು ಹಿಡಿದುಕೊಂಡು, ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ಹಾಡುತ್ತಾ ಕುಣಿಯುತ್ತಾ, ತ್ರಿಭುವನ ಸಂಚಾರ ಮಾಡುತ್ತ ದೇವಮಾನವರಲ್ಲಿಯ, ದೇವದೇವತೆಗಳಲ್ಲಿಯ ತೊಡಕುಗಳನ್ನು ಬಿಗಿಯುತ್ತ ಸಡಲಿಸುತ್ತ ಹೋಗುತ್ತಿರುವ ಭಕ್ತಾಗ್ರೇಸರ ಈತ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top