ನಮ್ಮ ರಕ್ಷಣಾ ವ್ಯವಸ್ಥೆ ಸಂಪೂರ್ಣ ಸನ್ನದ್ಧ ಆಗುವುದೆಂದು?

ಮೋದಿ ಲಾಹೋರ್ ಭೇಟಿ ಮಾತ್ರವಲ್ಲ, ಇಬ್ಬರು ಯುವ ನೇತಾರರಾದ ರಾಜೀವ್-ಬೆನಜೀರ್ ಮಾತುಕತೆ ನಡೆಸಿದಾಗ, ವಾಜಪೇಯಿ ಬಸ್ ಯಾತ್ರೆ ಕೈಗೊಂಡಾಗಲೂ ಪಾಪಿ ಪಾಕಿಸ್ತಾನ ಹಾದಿಗೆ ಬರುತ್ತದೆ ಅಂತಲೇ ಭಾವಿಸಲಾಗಿತ್ತು. ಅದು ಸಾಧ್ಯವಾಯಿತೇ?

obamaಅಮೆರಿಕದ ಭಯೋತ್ಪಾದನೆ ದಮನ ನೀತಿ ವಿಚಾರದಲ್ಲಿ ಒಂದು ಅನುಮಾನದ ದೃಷ್ಟಿ ಮುಂಚಿನಿಂದಲೂ ಇದ್ದೇ ಇತ್ತು. ಅಫ್ಘಾನಿಸ್ತಾನದಲ್ಲಿ ರಷ್ಯಾದ ಪ್ರಾಬಲ್ಯ ಮುರಿಯಲು ಅಲ್​ಖೈದಾ ಸ್ಥಾಪಕ ಒಸಾಮ ಬಿನ್ ಲಾಡೆನ್ ಸಂತತಿಯನ್ನು ಪೋಷಿಸಿ, ಬೆಳೆಸಿದ ಅಮೆರಿಕದ ಸ್ವಾರ್ಥಪರ ನೀತಿ ಮತ್ತು ಶುದ್ಧ ಅವಿವೇಕದ ನಡೆ ಅದಕ್ಕೆ ಕಾರಣ. ಹೀಗಾಗಿ ಭಯೋತ್ಪಾದಕರ ವಿರುದ್ಧ ಅಮೆರಿಕ ಅದೆಷ್ಟೇ ಬಡಬಡಾಯಿಸಿದರೂ ನಂಬುಗೆ, ವಿಶ್ವಾಸ ಬರುವುದು ತುಸು ಕಷ್ಟವೆ. ಅದು ನಮಗೆ ಮಾತ್ರವಲ್ಲ ಬಿಡಿ… ಇಡೀ ಜಗತ್ತಿನಲ್ಲಿ ಆ ರೀತಿಯ ಭಾವನೆ ಮನೆಮಾಡಿದೆ. ಆದರೆ ಅದೇ ಅಮೆರಿಕ ಈ ಪರಿ ಭಂಡದೇಶ ಎಂಬುದು ಗೊತ್ತಾಗಿದ್ದು ಈಗಲೇ ನೋಡಿ.

ಹೀಗೆ ಹೇಳುವುದಕ್ಕೊಂದು ತಾಜಾ ಕಾರಣವಿದೆ. ಭಯೋತ್ಪಾದನೆ ವಿಷಯ ಬಂದರೆ ಅಮೆರಿಕದ ಪೌರುಷವನ್ನು ಅಧ್ಯಕ್ಷ ಬರಾಕ್ ಒಬಾಮ ಪುಂಖಾನುಪುಂಖವಾಗಿ ಹರಿಬಿಡುವುದು ಗೊತ್ತೇ ಇದೆ. ತಮ್ಮ ದೇಶವನ್ನು ಕೆಣಕಲು ಬಂದವರ ಜನ್ಮ ಜಾಲಾಡುತ್ತೇವೆಂದು ಅವರು ಅಬ್ಬರಿಸುತ್ತಾರೆ. ಅಮೆರಿಕದ ಮೇಲೆ ದಾಳಿ ಮಾಡುವ ಮೊದಲು ಲಾಡೆನ್​ಗೆ ಆದ ಗತಿಯನ್ನೊಮ್ಮೆ ನೆನಪಿಸಿಕೊಳ್ಳಿ ಎಂದು ಭಯೋತ್ಪಾದಕ ಸಂಘಟನೆಗಳಿಗೆ ಎಚ್ಚರಿಕೆ ನೀಡುತ್ತಾರೆ. ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಈ ಮಾತನ್ನು ಅವರು ಹತ್ತಾರು ಬಾರಿ ಹೇಳಿದ್ದಾರೆ. ಆದರೆ ಅದೇ ಒಬಾಮ ಅಮೆರಿಕ ಸಂಸತ್ತಿನಲ್ಲಿ ಕಳೆದ ಬುಧವಾರ ಸ್ಟೇಟ್ ಆಫ್ ದಿ ಯೂನಿಯನ್ (ಎಸ್​ಒಟಿ) ಉದ್ದೇಶಿಸಿ ಕೊನೆಯ ಭಾಷಣ ಮಾಡಿದರು ನೋಡಿ, ಅದನ್ನು ಕೇಳುತ್ತಿದ್ದಾಗ ಒಂದು ಕ್ಷಣ ನಗಬೇಕೋ ಅಳಬೇಕೋ ತೋಚಲಿಲ್ಲ. ಏನಂದರು ಗೊತ್ತಲ್ಲ? ‘ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗವಾಗಬಹುದು, ಹೊಸ ಭಯೋತ್ಪಾದಕ ಸಂಘಟನೆಗಳಿಗೆ ಆಸರೆ ತಾಣವಾಗಬಹುದು, ಮುಂದಿನ ಕೆಲ ವರ್ಷಗಳವರೆಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಅಸ್ಥಿರತೆ ಮುಂದುವರಿಯಬಹುದು’ ಬಹುದು…ಬಹುದು… ಹಾಗಾದರೆ ಪಾಕಿಸ್ತಾನ ಈಗೇನಾಗಿದೆ? ಅದೊಂದು ಭಾರಿ ಸಂಭಾವಿತ ದೇಶ ಅಂತ ಭಾವಿಸಿದ್ದಾರೆಯೇ ಈ ಒಬಾಮ? ಆ ದೇಶದಲ್ಲಿ ಭಯೋತ್ಪಾದನೆ ಇನ್ನು ಮೇಲೆ ಹುಟ್ಟಿ ಬೆಳೆದು ಬಲಗೊಳ್ಳಬೇಕೇನು? ಪಾಕಿಸ್ತಾನದಲ್ಲಿ ಭಯೋತ್ಪಾದಕರು ಯಾರು, ಸೀದಾ ಸಾದಾ ಜನರು ಯಾರು ಎಂಬ ಭೇದವೆಣಿಸಲು ಸಾಧ್ಯವೇನು ಈ ಅಮೆರಿಕಕ್ಕೆ? ಎಂಥಾ ಪರಮ ನೀಚತನ ನೋಡಿ! ಸಿಟ್ಟು, ಬೇಸರ, ಹತಾಶೆ ಒತ್ತರಿಸಿಕೊಂಡು ಬರುತ್ತದೆ. ಇತ್ತೀಚೆಗೆ ಪಠಾಣ್​ಕೋಟ್​ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಅಧ್ಯಕ್ಷ ಒಬಾಮ ಮಾತಿನ ಧಾಟಿಯನ್ನು ನೋಡಿದರೆ, ಅಮೆರಿಕಕ್ಕೆ ಭಾರತದ ಹಿತಾಸಕ್ತಿಗಿಂತ ಹೆಚ್ಚಾಗಿ, ಉಗ್ರರ ದಮನಕ್ಕಿಂತ ಮುಖ್ಯವಾಗಿ ತನ್ನ ಪ್ರತಿಷ್ಠೆ, ಸ್ವಾರ್ಥ, ಸ್ವಹಿತಾಸಕ್ತಿ ಮತ್ತು ರಾಜಕೀಯ ದಾಳವೇ ಮುಖ್ಯ ಎಂಬುದು ಮನವರಿಕೆಯಾಗುತ್ತದೆ.

ಭಯೋತ್ಪಾದನೆ ದಮನದ ವಿಚಾರದಲ್ಲಿ ಅಮೆರಿಕವೇ ಈ ರೀತಿ ನಖರಾ ನೀತಿ, ದ್ವಂದ್ವವನ್ನು ಅನುಸರಿಸುತ್ತದೆ ಎಂದ ಮೇಲೆ ಜಾಗತಿಕ ಉಗ್ರರ ನೆಲೆಯಾಗಿರುವ ಪಾಕಿಸ್ತಾನದಲ್ಲಿ ಅಲ್ಲಿನ ಸರ್ಕಾರ, ಸೇನೆ ಇವೆಲ್ಲ ಉಗ್ರದಮನಕ್ಕೆ ಮುಂದಾಗುತ್ತವೆ ಎಂದು ಭಾರತ ಯಾಕಾಗಿ ನಂಬಬೇಕು, ಹೇಗೆ ನಂಬಬೇಕು ಹೇಳಿ? ಪಾಕಿಸ್ತಾನ ಭಯೋತ್ಪಾದಕರ ದಮನ ಮಾಡುವುದು ಸದ್ಯೋಭವಿಷ್ಯತ್ತಿನಲ್ಲಿ ಹಾಸ್ಯಾಸ್ಪದ ಸಂಗತಿ ಎನಿಸುತ್ತದೆ.

ಹಾಗಾದರೆ ಪಠಾಣ್​ಕೋಟ್ ದಾಳಿಯಲ್ಲಿ ಪಾಕ್ ಮೂಲದ ಜೈಷ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತೋಯ್ಬಾ ಸಂಘಟನೆಯ ಉಗ್ರರ ಕೈವಾಡ ಇರುವುದನ್ನು ಪಾಕಿಸ್ತಾನ ಮರುಮಾತಿಲ್ಲದೆ ಒಪ್ಪಿಕೊಂಡಿದ್ದೇಕೆ? ಉಗ್ರರ ನೆಲೆಗಳ ಮೇಲೆ ದಾಳಿಗೆ ಮುಂದಾಗಿದ್ದೇಕೆ ಎಂಬ ಪ್ರಶ್ನೆ ಏಳುವುದು ಸಹಜ ತಾನೆ. ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದ್ದು ಭಾರತದೊಂದಿಗೆ ಸಂಬಂಧ ಸುಧಾರಣೆ ಮಾಡಿಕೊಳ್ಳಬೇಕೆಂಬ ಪ್ರಧಾನಿ ನವಾಜ್ ಶರೀಫ್ ಅವರ ಪ್ರಾಮಾಣಿಕ ಬಯಕೆ. ಅದಕ್ಕಿಂತ ಮುಖ್ಯವಾದ ಕಾರಣ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಾಪಸಾಗುವ ವೇಳೆ ಲಾಹೋರ್​ನಲ್ಲಿ ಹಠಾತ್ತನೆ ಇಳಿದು ಶರೀಫ್​ಗೆ ಹುಟ್ಟುಹಬ್ಬದ ಶುಭಾಶಯ ಕೋರುವುದರ ಜೊತೆಗೆ ಅವರ ಮೊಮ್ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೆರೆದ ರಾಜತಾಂತ್ರಿಕ ಜಾಣ್ಮೆ ಮತ್ತು ಅದರ ಫಲವಾಗಿ ಪಾಕಿಸ್ತಾನದ ಮೇಲೆ ಅಮೆರಿಕ ಆದಿಯಾಗಿ ವಿಶ್ವ ರಾಷ್ಟ್ರಗಳ ಒತ್ತಡ.

ಹಾಗಂದ ಮಾತ್ರಕ್ಕೆ ಪಾಕ್ ಪ್ರಧಾನಿ ಶರೀಫ್ ಭಯೋತ್ಪಾದನೆ ನಿಮೂಲನೆ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರೇ? ಅದು ಅಸಾಧ್ಯದ ಮಾತು. ಏಕೆಂದರೆ ದಾವೂದ್ ಇಬ್ರಾಹಿಂ, ಮೌಲಾನಾ ಮಸೂದ್ ಅಜರ್ ಸೇರಿ ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ನೂರಾರು ಭಯೋತ್ಪಾದಕರ ಮೇಲೆ ಕ್ರಮ ಕೈಗೊಳ್ಳಲು ಪ್ರಧಾನಿ ಶರೀಫ್ ಎಳ್ಳಷ್ಟೂ ಸ್ವತಂತ್ರರಲ್ಲ. ಅದರ ಒಂದು ಝುಲಕ್ಕನ್ನು ನಾವೀಗ ನೋಡುತ್ತಿದ್ದೇವೆ. ಮೊದಲು ಭಯೋತ್ಪಾದಕರ ದಮನದ ಮಾತನಾಡಿದ್ದ ಪಾಕಿಸ್ತಾನ ಸರ್ಕಾರ ಇದೀಗ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ ನೋಡಿ. ಪಠಾಣ್​ಕೋಟ್​ಗೆ ತನಿಖಾ ತಂಡ ಭೇಟಿ ನೀಡಿದ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಜರುಗಿಸುವುದಾಗಿ ಪಾಕ್ ಸರ್ಕಾರದ ವಕ್ತಾರರು ರಾಗ ಬದಲಿಸಿದ್ದಾರೆ. ಇದೇನೂ ಹೊಸ ಬೆಳವಣಿಗೆಯಲ್ಲ. ಪಾಕಿಸ್ತಾನದ ಇಂಥ ನಡವಳಿಕೆಗೆ ಒಂದು ಐತಿಹಾಸಿಕ ಕಾರಣವಿದೆ. ಅದೇನೆಂದರೆ ಅಧಿಕಾರಕ್ಕಾಗಿ ಅಲ್ಲಿ ದಶಕಗಳಿಂದಲೂ ಚುನಾಯಿತ ಸರ್ಕಾರ ಮತ್ತು ಸೇನೆ ನಡುವೆ ನಡೆಯುತ್ತಿರುವ ತಿಕ್ಕಾಟ. ಹಾಲಿ ಸೇನಾ ಮುಖ್ಯಸ್ಥ ರಾಹಿಲ್ ಶರೀಫ್ ಪ್ರಧಾನಿ ನವಾಜ್ ಶರೀಫ್ ಅವರೇ ಆಯ್ಕೆ ಮಾಡಿಕೊಂಡ ವಿಶ್ವಾಸಿಗರಾದರೂ ಸಹ ಪಾಕ್ ಸೇನೆಯಲ್ಲಿ ಶೇ.99ರಷ್ಟು ಹಿರಿ ಕಿರಿಯ ಅಧಿಕಾರಿಗಳು ಮೂಲಭೂತವಾದದ ಕಟ್ಟಾ ಬೆಂಬಲಿಗರೇ ಆಗಿರುವುದರಿಂದ ಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವ ಪ್ರಧಾನಿ ಶರೀಫ್ ಮಾತಿಗೆ ಕವಡೆ ಕಿಮ್ಮತ್ತೂ ಬರಲು ಸಾಧ್ಯವಿಲ್ಲ. ಈಗಲ್ಲ ಮುಂದೆ ದಶಕಗಳೇ ಕಳೆದರೂ ಪಾಕಿಸ್ತಾನದ ಸೇನೆಯಲ್ಲಿರುವವರಿಗೆ ವಿವೇಕ ಮೂಡುವುದನ್ನು ನಿರೀಕ್ಷಿಸಲಾಗದು.

ಅಂದಮೇಲೆ, ಮುಂಬೈ ದಾಳಿಯಿಂದ ಹಿಡಿದು ಪಠಾಣ್​ಕೋಟ್ ದಾಳಿಯವರೆಗಿನ ಉಗ್ರರನ್ನು ಪಾಕಿಸ್ತಾನ ಶಿಕ್ಷಿಸುತ್ತದೆ, ಆ ದೇಶಕ್ಕೆ ತನ್ನ ತಪ್ಪಿನ ಅರಿವಾಗುತ್ತದೆ, ತಪ್ಪನ್ನು ತಿದ್ದಿಕೊಳ್ಳಲು ಕಿಂಚಿತ್ತಾದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಭಾರತ ನಿರೀಕ್ಷೆ ಮಾಡುವುದು ಶುದ್ಧ ಮೂರ್ಖತನವಾಗುತ್ತದೆ.

ಇಲ್ಲಿ ಮುಖ್ಯವಾಗುವುದು ಇನ್ನು ಮೇಲಾದರೂ ಭಯೋತ್ಪಾದಕರ ನಿಗ್ರಹದ ವಿಷಯದಲ್ಲಿ, ದೇಶದ ಆಂತರಿಕ ಸುರಕ್ಷೆಯನ್ನು ಭದ್ರ ಮಾಡಿಕೊಳ್ಳುವ ವಿಚಾರದಲ್ಲಿ ನಮ್ಮ ಸರ್ಕಾರ ಸರಿಯಾದ ಹೆಜ್ಜೆ ಇಡುತ್ತದೆಯೇ ಎಂಬುದು.

ಮನಸ್ಸು ಮಾಡಿದರೆ ಪಾಕ್ ಪ್ರಚೋದಿತ ಭಯೋತ್ಪಾದನೆ, ಹಿಂಸಾಚಾರವನ್ನು ನಿಗ್ರಹಿಸುವುದು ದೊಡ್ಡ ಸವಾಲೇನಲ್ಲ. ನಮ್ಮಲ್ಲಿ ಸೇನೆಯ ಮೂರು ವಿಭಾಗಗಳಿವೆ. ಬಲವಾದ ಪೊಲೀಸ್ ವ್ಯವಸ್ಥೆಯಿದೆ. ಎನ್​ಐಎನಂತಹ ಹತ್ತಾರು ತನಿಖಾ ಸಂಸ್ಥೆಗಳಿವೆ. ಆದರೆ ಸಮಸ್ಯೆ ಎಂದರೆ ಇವ್ಯಾವುವೂ ಏಕಮುಖವಾಗಿ ಒಂದು ನೇತೃತ್ವದಡಿ ಕೆಲಸ ಮಾಡುತ್ತಿಲ್ಲ. ಅದರಿಂದಾಗಿ ಮಾನವ ಸಂಪನ್ಮೂಲ ಮಾತ್ರವಲ್ಲ ಅಪಾರ ಪ್ರಮಾಣದ ಹಣಕಾಸು ಕೂಡ ಅಪವ್ಯಯವಾಗುತ್ತಿದೆ. ಅದೆಲ್ಲ ಸರಿ. ದೇಶದ ರಕ್ಷಣಾ ವ್ಯವಸ್ಥೆ ಇಷ್ಟೊಂದು ದುರ್ಬಲವಾಗಿರುವುದರ ಹಿಂದೆ ಬ್ರಿಟಿಷರ ದುರಾಲೋಚನೆ ಇದೆ ಎಂಬುದು ಎಷ್ಟು ಜನಕ್ಕೆ ಗೊತ್ತಿದೆ?

ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿ ಈಗಲೂ ಸಿಂಗಲ್ ಕಮಾಂಡ್ ವ್ಯವಸ್ಥೆಯಿಲ್ಲ. ಅದಕ್ಕೆ ಕಾರಣ ಬ್ರಿಟಿಷರ ವ್ಯವಸ್ಥಿತ ಕುತಂತ್ರ. ನಮ್ಮ ರಕ್ಷಣಾ ವ್ಯವಸ್ಥೆ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಹೀಗೆ ಮೂರು ವಿಧದಲ್ಲಿ ವಿಭಜನೆಯಾಗುವುದರ ಹಿಂದೆ ಇದ್ದದ್ದು ಬ್ರಿಟಿಷರ ಒಡೆದು ಆಳುವ ಆಲೋಚನೆ. ಇಬ್ಬರು ಬ್ರಿಟಿಷ್ ಅಧಿಕಾರಿಗಳಾದ ಲಾರ್ಡ್ ಜನರಲ್ ಹೇಸ್ಟಿಂಗ್ಸ್ ಲಿಯೋನ್ ಇಸ್ಮೆ ಮತ್ತು ಲಾರ್ಡ್ ಮೌಂಟ್ ಬ್ಯಾಟನ್ ಈ ಮೂರು ಕವಲು ಹಾದಿಯ ಸೃಷ್ಟಿಕರ್ತರು. ಎರಡನೆಯ ಜಾಗತಿಕ ಯುದ್ಧದಲ್ಲಿ ವಿನ್​ಸ್ಟನ್ ರ್ಚಚಿಲ್​ಗೆ ಸಹಾಯಕನಾಗಿದ್ದ ಹೇಸ್ಟಿಂಗ್ಸ್ 1947ರಲ್ಲಿ ಭಾರತದ ಕೊನೆಯ ವೈಸ್​ರಾಯ್ ಆಗಿದ್ದ ಮೌಂಟ್ ಬ್ಯಾಟನ್​ರ ವಿಶೇಷಾಧಿಕಾರಿಯೂ ಆಗಿದ್ದ. ಆತನೇ ಇಂಥ ‘ಮನೆಯೊಂದು ಮೂರು ಬಾಗಿಲು’ ಎಂಬಂತಹ ಮನೆಹಾಳು ಐಡಿಯಾ ಕೊಟ್ಟವ. ಆ ಯೋಜನೆಯನ್ನು ಮೌಂಟ್ ಬ್ಯಾಟನ್ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮುಂದಿಡುತ್ತಾರೆ. ನೆಹರು ಅದನ್ನೆ ಪ್ರಸಾದ ಎಂದು ಸ್ವೀಕರಿಸಿ ಆಚರಣೆಗೆ ತರುತ್ತಾರೆ. ಹೀಗಾಗಿ ಭಾರತದ ಮಿಲಿಟರಿ ವ್ಯವಸ್ಥೆಯಲ್ಲಿ ಇಂದಿಗೂ ಸಿಂಗಲ್ ಕಮಾಂಡ್ ಎಂಬುದು ಕನಸಾಗಿಯೇ ಉಳಿದಿದೆ.

ಅದರ ಪರಿಣಾಮವನ್ನು ನಾವು ಈ ಹಿಂದೆ ನಡೆದ ಅನೇಕ ಯುದ್ಧಗಳ ಸಂದರ್ಭದಲ್ಲಿ ಕಂಡಿದ್ದೇವೆ. ಮುಂಬೈ ದಾಳಿ, ಸಂಸತ್ತಿನ ಮೇಲೆ ಉಗ್ರರ ದಾಳಿಯಂತಹ ಸಂದರ್ಭದಲ್ಲೂ ನಮ್ಮ ಯೋಧರು ಸಾವುನೋವು ಅನುಭವಿಸಲು, ಸಮರ್ಥವಾಗಿ ವೈರಿಗಳನ್ನು ಎದುರಿಸುವಲ್ಲಿ ಸೋಲಲು ಇಂಥ ಸಿಂಗಲ್ ಕಮಾಂಡ್ ಇಲ್ಲದಿರುವುದೇ ಕಾರಣ ಎಂದು ತಜ್ಞರು ಹತ್ತಾರು ಬಾರಿ ಸರ್ಕಾರವನ್ನು ಎಚ್ಚರಿಸಿದ್ದಾರೆ. ಕಾರ್ಗಿಲ್ ಯುದ್ಧದ ಬಳಿಕ ರಚನೆಯಾಗಿದ್ದ ‘ಕಾರ್ಗಿಲ್ ರಿವ್ಯೂ ಕಮಿಟಿ’ ಭಾರತಕ್ಕೆ ಸಿಂಗಲ್ ಕಮಾಂಡ್ ರಕ್ಷಣಾ ವ್ಯವಸ್ಥೆ ಬೇಕು ಎಂದು ಸರ್ಕಾರಕ್ಕೆ ಸಲಹೆ ಮಾಡಿತ್ತು. ಚೀನಾ ಯುದ್ಧ ಸೋಲಲು, ಪಾಕಿಸ್ತಾನದೊಂದಿಗಿನ ಎರಡು ಮೂರು ಯುದ್ಧದ ಸಂದರ್ಭದಲ್ಲಿ ಭಾರತ ಶುದ್ಧ ಮುಠ್ಠಾಳತನದ ತೀರ್ಮಾನ ತೆಗೆದುಕೊಳ್ಳಲು ಸಿಂಗಲ್ ಕಮಾಂಡ್ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂದು ತಜ್ಞರು ಹೇಳುತ್ತಾರೆ. 2000ನೇ ಸಾಲಿನಲ್ಲಿ ದೇಶದ ಗೃಹಮಂತ್ರಿಯಾಗಿದ್ದ ಎಲ್.ಕೆ.ಆಡ್ವಾಣಿ ಅಧ್ಯಕ್ಷತೆಯ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಸಂಪುಟ ಉಪ ಸಮಿತಿ ಸಿಂಗಲ್ ಕಮಾಂಡ್ ವ್ಯವಸ್ಥೆಗೆ ಶಿಫಾರಸನ್ನೂ ಮಾಡಿತ್ತು. ಮಾತ್ರವಲ್ಲ ಮೂರು ಸೇನಾ ವಿಭಾಗಗಳ ವ್ಯವಸ್ಥೆ ಸರಿಯಿಲ್ಲ ಎಂದು ತನ್ನ ವರದಿಯಲ್ಲಿ ಹೇಳಿತ್ತು. ಜಾಯಿಂಟ್ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ವ್ಯವಸ್ಥೆ ಮೂಲಕ ಸರ್ಕಾರಕ್ಕೆ ಒಬ್ಬರೇ ಸೇನಾ ಮುಖ್ಯಸ್ಥರು ಸಲಹೆ ಕೊಡುವಂತಿರಬೇಕು; ಮಿಲಿಟರಿ ಕೇಂದ್ರ ಕಚೇರಿಯನ್ನು ರಕ್ಷಣಾ ಸಚಿವಾಲಯದಲ್ಲಿ ವಿಲೀನಗೊಳಿಸಬೇಕು; ಡಿಫೆನ್ಸ್ ಇಂಟಲಿಜೆನ್ಸ್ ಏಜೆನ್ಸಿ ಮತ್ತು ನ್ಯಾಷನಲ್ ಡಿಫೆನ್ಸ್ ಯೂನಿವರ್ಸಿಟಿ ಸ್ಥಾಪನೆ ಆಗಬೇಕು ಎಂದು ಸಮಿತಿ ವರದಿಯಲ್ಲಿ ಹೇಳಿತ್ತು. ಈ ಪೈಕಿ ನ್ಯಾಷನಲ್ ಡಿಫೆನ್ಸ್ ಯೂನಿವರ್ಸಿಟಿ ಸ್ಥಾಪನೆಗೆ ಮೋದಿ ಸರ್ಕಾರ ಹಿಂದಿನ ವರ್ಷದ ಬಜೆಟ್​ನಲ್ಲಿ ಪ್ರಸ್ತಾಪಿಸಿದೆ. ಬಾಕಿ ಎಲ್ಲ ಹಾಗೇ ಇವೆ.

ಪಠಾಣ್​ಕೋಟ್ ಉಗ್ರರ ದಾಳಿಯನ್ನೊಮ್ಮೆ ಅವಲೋಕಿಸಿದರೆ ಈ ಸಂಗತಿ ಮತ್ತಷ್ಟು ಚೆನ್ನಾಗಿ ಮನದಟ್ಟಾಗುತ್ತದೆ. ಆ ದಾಳಿ ಸಂದರ್ಭದಲ್ಲಿ ನಮ್ಮ ರಕ್ಷಣಾ ವ್ಯವಸ್ಥೆ ಅಯೋಮಯವಾಗಿತ್ತು. ಒಂದು ಆಯಕಟ್ಟಿನ ವಾಯುನೆಲೆಗೇ ಉಗ್ರರು ಒಳನುಸುಳಿದರೂ ಪಂಜಾಬ್ ಪೊಲೀಸ್, ಭೂಸೇನೆ, ವಾಯುಪಡೆ ಎಲ್ಲವೂ ಇದ್ದೂ ಏನೂ ಮಾಡಲಾಗದಂತಹ ಸ್ಥಿತಿ ಆಯಿತು ಎಂದರೆ ನಮ್ಮ ರಕ್ಷಣಾ ವ್ಯವಸ್ಥೆ ಎಷ್ಟು ಜಾಳು ಎಂಬುದಕ್ಕೆ ಬೇರೇನೂ ಬೇಕಿಲ್ಲ. ಇನ್ನಾದರೂ ನಮ್ಮಲ್ಲಿ ಸಿಂಗಲ್ ಕಮಾಂಡ್ ವ್ಯವಸ್ಥೆ ಜಾರಿಗೆ ಬರುತ್ತಾ?

ಇದೊಂದು ವಿಚಾರದಲ್ಲಿ ನಮಗೆ ಅಮೆರಿಕವೇ ಆದರ್ಶ ಆಗಬಹುದು. 9/11ರ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ನಂತರ ಅಮೆರಿಕ ಪಾಠ ಕಲಿಯಿತು. ಆಂತರಿಕ ಸುರಕ್ಷೆ ಮೇಲೆ ನಿಗಾ ಇಡಲು ಹೋಮ್್ಯಾಂಡ್ ಸೆಕ್ಯುರಿಟಿ ಏಜೆನ್ಸಿ ಎಂಬ ಸಿಂಗಲ್ ಕಮಾಂಡ್ ವ್ಯವಸ್ಥೆ ಜಾರಿ ಮಾಡಿತು. ಇದರಿಂದಾಗಿ ಪೊಲೀಸ್ ವ್ಯವಸ್ಥೆಯಿಂದ ಹಿಡಿದು ಮಿಲಿಟರಿ ವ್ಯವಸ್ಥೆಯವರೆಗೆ ಸಂವಹನ, ಸಂಪರ್ಕ ಮತ್ತು ಸಂದೇಶ, ಆದೇಶ ಕೊಡುವುದು ಸುಲಭವಾಯಿತು. ಅದರ ಪರಿಣಾಮವನ್ನೂ ನಾವು ಕಾಣುತ್ತಿದ್ದೇವೆ. 9/11ರ ನಂತರ ಅಲ್ಲಿ ಭಯೋತ್ಪಾದಕ ದಾಳಿ ನಡೆಯುವುದಿರಲಿ, ಒಂದು ನುಸಿ ಕೂಡ ಒಳನುಸುಳುವುದು ಸಾಧ್ಯವಾಗಿಲ್ಲ. ಅಮೆರಿಕದ ವ್ಯವಸ್ಥೆ ಸುಧಾರಣೆ ಬಳಿಕ ನೆರೆಯ ಚೀನಾ ಪಾಠ ಕಲಿತು ರಕ್ಷಣಾ ವ್ಯವಸ್ಥೆಯನ್ನು ಸುಭದ್ರ ಮಾಡಿಕೊಂಡಿದೆ. ಅಂಥ ಕಮ್ಯುನಿಸ್ಟ್ ಚೀನಾ ದೇಶದ ಆಂತರಿಕ ಭದ್ರತಾ ವ್ಯವಸ್ಥೆ ಕುರಿತು ಬರೋಬ್ಬರಿ 9 ಶ್ವೇತಪತ್ರಗಳನ್ನು ಹೊರಡಿಸಿ ದೇಶದ ಜನರಲ್ಲಿ ಭರವಸೆ ಮೂಡಿಸಿದೆ. ಆದರೆ ನಾವು ಇನ್ನೂ ಒದೆ ತಿನ್ನುತ್ತಲೇ ಇದ್ದೇವೆ.

ಇನ್ನು, ನಮ್ಮ ಗಡಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಭದ್ರಪಡಿಸಲೇಬೇಕು. ಜಮ್ಮು-ಕಾಶ್ಮೀರದ ಆಯಕಟ್ಟಿನ ಗಡಿಗಳಲ್ಲಿ ಮಾತ್ರವಲ್ಲ, ಪಾಕಿಸ್ತಾನ, ಅಫ್ಘಾನಿಸ್ತಾನ ಬಾಂಗ್ಲಾದೇಶ, ನೇಪಾಳ ಮತ್ತು ಈಶಾನ್ಯದ ಗಡಿಗಳಲ್ಲಿಯೂ ಭದ್ರತೆಯನ್ನು ಮತ್ತಷ್ಟು ಬಿಗಿಮಾಡಬೇಕು. ನರಪಿಳ್ಳೆಯಲ್ಲ, ನೆರೆಯಿಂದ ಒಂದು ನೊಣವೂ ಈಚೆ ಇಣುಕದಂತೆ ಮಾಡಬೇಕು.

ತೋರುಗಾಣಿಕೆಗೆ ಲಾಹೋರ್ ಭೇಟಿಯಂತಹ ಅಚಾನಕ್ ಪ್ರಸಂಗಗಳು, ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ, ವಿದೇಶಾಂಗ ಕಾರ್ಯದರ್ಶಿ ಹಂತದ ಮಾತುಕತೆ ಪ್ರಹಸನಗಳು ನಡೆಯುತ್ತಿರಬೇಕು ಹೊರತು ನಿಲ್ಲಬಾರದು. ಇಂದಲ್ಲ ನಾಳೆ ಪಾಕಿಸ್ತಾನ ಸಂಪೂರ್ಣ ದಿವಾಳಿ ಆಗಿ ಅಫ್ಘಾನಿಸ್ತಾನದ ಹಾಗೆ ಬುದ್ಧಿ ಕಲಿಯುವ ದಿನ ಬಂದೇ ಬರುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಬೇಕು ಅಷ್ಟೆ.

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top