ನಡುರಾತ್ರಿಯಲ್ಲಿ ಬೆಳಕು ಕಂಡಿತೇ ಈ ದೇಶ…

ದೇಶದಲ್ಲಿ ಹಲವು ಸಮಸ್ಯೆಗಳಿರಬಹುದು. ಆದರೆ ಕಿತ್ತು ತಿನ್ನುತ್ತಿರುವುದು ಭ್ರಷ್ಟಾಚಾರ, ಕಪ್ಪುಹಣ ಮತ್ತು ಭಯೋತ್ಪಾದನೆ ಈ ಮೂರೇ ಅಂಶಗಳು. ಚಾಲ್ತಿ ನೋಟುಗಳ ಹಠಾತ್ ರದ್ದತಿ ಈ ಪಿಡುಗಿಗೆ ಸಿಂಹಪಾಲು ಪರಿಹಾರ ನೀಡಿದೆ ಎಂಬುದು ಸಾಮಾನ್ಯ ಅಭಿಪ್ರಾಯ. ಇಂತಹ ಇನ್ನಷ್ಟು ಉಪಕ್ರಮಗಳನ್ನು ನಾವು ನಿರೀಕ್ಷೆ ಮಾಡೋಣ.

black-money`ಕುರಿ ಕೇಳಿಕೊಂಡೇ ಮಸಾಲೆ ಅರೀಬೇಕು’- ಇದು ಈ ದೇಶದಲ್ಲಿ ಇದುವರೆಗಿನ ಸಂಪ್ರದಾಯ. ಏಕೆಂದರೆ ನಮ್ಮದು ಪ್ರಜಾತಂತ್ರ ದೇಶ ನೋಡಿ! ಇದೇ ಮೊದಲ ಬಾರಿಗೆ ಆ ಸಂಪ್ರದಾಯ ಮುರಿದ ಪ್ರಧಾನಿ ನರೇಂದ್ರ ಮೋದಿ ಕುರಿ, ಕೋಳಿಗಳನ್ನು ಕೇಳದೆ ಮಸಾಲೆ ಅರೆದಿದ್ದಾರೆ. ಅದಕ್ಕಾಗಿಯೇ ಕೆಲವರು ಅವರನ್ನು ಜರಿಯುತ್ತಿದ್ದಾರೆ. ಇರಲಿ, ಯಾವತ್ತಿದ್ದರೂ ಅದು ಇರುವಂಥದ್ದೇ.
ಮೊದಲು ನಾವು ಆಲೋಚಿಸಬೇಕಾದ್ದು ಈ ದೇಶದಲ್ಲಿ ಯಾವುದೇ ಕಠಿಣ ನಿರ್ಧಾರವನ್ನು ಜಾರಿ ಮಾಡುವುದು ಅಷ್ಟು ಸುಲಭದ ಮಾತೇ ಎಂಬುದರ ಕುರಿತು. ಈ ಉದಾಹರಣೆ ನೋಡಿ. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಎಂಭತ್ತರ ದಶಕದಲ್ಲೇ ಭಾರತ ಅಣ್ವಸ್ತ್ರ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕಿತ್ತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅಣ್ವಸ್ತ್ರ ಪರೀಕ್ಷೆಗೆ ಮನಸ್ಸು ಮಾಡಿದ್ದರು. ಅದಕ್ಕನುಗುಣವಾಗಿ ರಾಜಾರಾಮಣ್ಣ ನೇತೃತ್ವದ ವಿಜ್ಞಾನಿಗಳ ತಂಡ ಅಣ್ವಸ್ತ್ರ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಸಿದ್ಧತೆಯ ವಿವರವನ್ನು ನೀಡಿ ವಿಜ್ಞಾನಿಗಳ ತಂಡ ಹಿಂತಿರುಗಿದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ನಿರ್ಧಾರ ಬದಲಿಸಿ ಸದ್ಯಕ್ಕೆ ಅಣ್ವಸ್ತ್ರ ಪರೀಕ್ಷೆ ಬೇಡ ಎಂದು ಹೇಳಿ ವಿಜ್ಞಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ಇಂದಿರಾ ತಮ್ಮ ಅಚಲ ನಿಲುವನ್ನು ಬದಲಿಸಲು ಕಾರಣವಾದದ್ದು ಅಣ್ವಸ್ತ್ರ ಪರೀಕ್ಷೆಯ ಗೌಪ್ಯ ಮಾಹಿತಿ ಸೋರಿಕೆ. ಅದಾದದ್ದು ವಿಪಕ್ಷ ಮುಖಂಡರಿಗಲ್ಲ, ಅಮೆರಿಕಕ್ಕೆ. ಅಣ್ವಸ್ತ್ರ ಪರೀಕ್ಷೆ ಯೋಜನೆ ಕೈ ಬಿಡದಿದ್ದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಅಮೆರಿಕದ ಎಚ್ಚರಿಕೆಗೆ ಇಂದಿರಾ ಹಿಂದಡಿ ಇಟ್ಟರು. ಆ ಯೋಜನೆ ಕೈಗೂಡಿದ್ದು ಅಟಲ್ ಬಿಹಾರಿ ವಾಜಪೇಯಿ ಆಡಳಿತದ ಕಾಲದಲ್ಲಿ.
ಒಂದು ಸರ್ಕಾರದ ಮೂಲ ಅರ್ಹತೆ ಅದರ ಗೌಪ್ಯತೆ ಸಾಮಥ್ರ್ಯ. ಭಾರತದಲ್ಲಿ ಈ ಮಾತು ಪಕ್ಕಾ ತದ್ವಿರುದ್ಧ. ಗೌಪ್ಯವಾಗಿರಬೇಕಾದ್ದು ಸೋರಿಕೆ ಆಗುತ್ತದೆ. ಸಹಜವಾಗಿ ಸಿಗಬೇಕಾದ ಮಾಹಿತಿ ಅತ್ಯಂತ ಗೌಪ್ಯವಾಗಿರುತ್ತದೆ. ದೇಶದ ಒಳಗೆ ಮತ್ತು ಹೊರಗೆ ಇರುವ ಕಪ್ಪುಹಣದ ಲೆಕ್ಕ ಅತ್ಯಂತ ಗೌಪ್ಯವಾಗಿದೆ. ಕಪ್ಪುಹಣದ ಕುಳಗಳ ಮೇಲೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಮುಂಚಿತವಾಗಿ ತಿಳಿಯಬೇಕಿತ್ತು ಎಂದು ಕೆಲವರು ಬಯಸುತ್ತಿದ್ದಾರೆ. 500, 1000 ರೂ. ಮುಖಬೆಲೆಯ ನೋಟಿನ ಚಲಾವಣೆ ರದ್ದತಿ ವಿಚಾರದಲ್ಲಿ ಮೋದಿ ತನ್ನ ಸರ್ಕಾರ ತನ್ನ ಗೌಪ್ಯತಾ ಸಾಮಥ್ರ್ಯವನ್ನೂ ಒರೆಗೆ ಹಚ್ಚಿದೆ. ಭಾರತದ ಸ್ವಾತಂತ್ರೊೃೀತ್ತರ ಇತಿಹಾಸದಲ್ಲಿ ಪೆÇೀಖ್ರಾನ್ ಅಣುಪರೀಕ್ಷೆ ಹೊರತುಪಡಿಸಿದರೆ ಇಂತಹ ಪ್ರಸಂಗ ಇದೇ ಮೊದಲು ಎಂದರೆ ತಪ್ಪಲ್ಲ. ಅಕಸ್ಮಾತ್ ಸರ್ಕಾರ ತನ್ನ ನಿರ್ಧಾರವನ್ನು ಅಂದು ರಾತ್ರಿ 8-30ರ ಬದಲು ಸಾಯಂಕಾಲ 5 ಗಂಟೆಗೆ ತಿಳಿಸಿದ್ದಿದ್ದರೆ ಮುಕ್ಕಾಲು ಪಾಲು ಯೋಜನೆ ತಲೆಕೆಳಗಾಗುತ್ತಿತ್ತು. ನಮ್ಮಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಅಷ್ಟು ಶುದ್ಧವಾಗಿದೆ!. ಜನಸಾಮಾನ್ಯರ ದೈನಂದಿನ ಜೀವನದೊಂದಿಗೆ ನೇರವಾಗಿ ಬೆಸೆದುಕೊಂಡಿರುವ ವ್ಯವಹಾರಕ್ಕೆ ಸಂಬಂಧಿಸಿದ ಇಂತಹ ಕಠಿಣ ನಿರ್ಧಾರವನ್ನು ಘೋಷಿಸಬೇಕಾದರೆ ಕನಿಷ್ಠ ಆರು ತಿಂಗಳು ಮೊದಲು ಪ್ರಕ್ರಿಯೆ ಆರಂಭಿಸಿರಲೇಬೇಕು. ಚಲಾವಣೆಯಲ್ಲಿರುವ ನೋಟನ್ನು ನಿಲ್ಲಿಸುವ ಮುನ್ನ ಅಗತ್ಯ ಇರುವಷ್ಟು ಹೊಸ ನೋಟಿನ ಮುದ್ರಣ ಆಗಿರಬೇಕು; ಹೊಸ ನೋಟನ್ನು ನಕಲಿ ಮಾಡಲಾಗದಂತಹ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು; ಒಂದು ಚೂರು ಆಕ್ಷೇಪ, ಅನಾಹುತಕ್ಕೆ ಎಡೆ ಮಾಡಿಕೊಡದಂತಹ ವಿನ್ಯಾಸ ರೂಪಿಸಬೇಕು; ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು. ಇಷ್ಟಾದರೂ ಈ ಬಾರಿ ಗುಟ್ಟು ರಟ್ಟಾಗಲಿಲ್ಲ. ಪ್ರಧಾನಿ ತೆಗೆದುಕೊಂಡ ನಿರ್ಧಾರ ಅವರದೇ ಕ್ಯಾಬಿನೆಟ್ಟಿನ ಎಲ್ಲ ಸದಸ್ಯರಿಗೆ ಗೊತ್ತಾಗಿದ್ದರೂ ಈ ನಿರ್ಧಾರ ಜಾರಿಗೊಳಿಸುವುದು, ಕಾಳಧನಿಕರ ಮಗ್ಗುಲು ಮುರಿಯುವುದು ಅಸಾಧ್ಯದ ಮಾತಾಗುತ್ತಿತ್ತು. ಈ ಸರ್ಕಾರ ಗೌಪ್ಯತಾ ಸಾಮಥ್ರ್ಯದಲ್ಲಿ ನೂರಕ್ಕೆ ನೂರು ಅಂಕದೊಂದಿಗೆ ಪಾಸಾಗಿದೆ ಅಂತಲೇ ಹೇಳಬೇಕು. ಹಾಗಾದರೆ ಸರ್ಕಾರ ಇಂಥ ಮಹತ್ವದ ನಿರ್ಧಾರವನ್ನು ಮೊದಲೇ ಘೋಷಿಸಿದ್ದು ಸರಿಯೋ.. ತಪ್ಪೇ? ನಿಜಕ್ಕೂ ಸಂಕಷ್ಟ ಯಾರಿಗೆ?
ಜನರ ಕಷ್ಟನಷ್ಟ ಕಂಡು ಕೆಲ ನೇತಾರರು ತುಸು ಹೆಚ್ಚೇ ಕಳವಳಕ್ಕೀಡಾಗಿದ್ದಾರೆ!. ಆದರೆ ವಾಸ್ತವದಲ್ಲಿ ಇದು `ಜನರ ಹೆಳೆ ಕಾಳಧನಿಕರ ಬೆಳೆ’ ಎಂಬುದೇ ಸರಿಯಾದ ಮಾತು. ನೋಟು ನಿಷೇಧದ ವಿಚಾರದಲ್ಲಿ ಜನಸಾಮಾನ್ಯರಿಗೆ ತೊಂದರೆ ಆಗುವಂಥದ್ದೇನಿದೆ? ಸಣ್ಣಪುಟ್ಟ ತೊಂದರೆ ಆಗಿರಬಹುದು. ಆದರೆ ದೇಶಕ್ಕಾಗಿ ಅಷ್ಟೂ ತ್ಯಾಗ ಮಾಡಲು ಒಲ್ಲೆ ಎಂದು ಶ್ರೀಸಾಮಾನ್ಯ ಹೇಳಿಯಾನೆ? ಈ ಹಿಂದೆ ಪ್ರಧಾನಿ ಆಗಿದ್ದ ಲಾಲಬಹಾದ್ದೂರ ಶಾಸ್ತ್ರಿ ಅವರು ದೇಶಕ್ಕಾಗಿ ಒಪ್ಪೊತ್ತಿನ ತುತ್ತನ್ನು ಎತ್ತಿಡಿ ಎಂದಾಗ ಕೋಟಿ ಕೋಟಿ ಜನರು ಕಾಯಾ ವಾಚಾ ಮನಸಾ ಸ್ಪಂದಿಸಿರಲಿಲ್ಲವೇ? ಹೇಳುವ ವ್ಯಕ್ತಿಯ ಯೋಗ್ಯತೆ ನೋಡಿಕೊಂಡು ಜನ ಸ್ಪಂದಿಸುತ್ತಾರೆ. ಪ್ರಾಮಾಣಿಕವಾಗಿ ದುಡಿದ ದುಡ್ಡಿಗೆ, ತೆರಿಗೆ ಕಟ್ಟಿದ ದುಡ್ಡಿಗೆ ಒಂದಿಷ್ಟೂ ತೊಡಕಿಲ್ಲ. ಅಕ್ರಮವಾಗಿ, ಲೆಕ್ಕಾಚಾರವಿಲ್ಲದೆ ಸಂಗ್ರಹಿಸಿದ ದುಡ್ಡಿಗೆ ಇನ್ನು ಉಳಿಗಾಲವಿಲ್ಲ.
ನೋಟು ನಿಷೇಧ ಸಂಪೂರ್ಣ ನಿಷ್ಪ್ರಯೋಜಕ ಕ್ರಮವೇ?: ಈ ಅಭಿಪ್ರಾಯ ಕೆಲವರಲ್ಲಿರುವುದು ನಿಜ. ಆದರೆ ಈ ನಿಷೇಧ ಕ್ರಮ ಸಂಪೂರ್ಣ ನಿಷ್ಪ್ರಯೋಜಕ ಎನ್ನಲಾಗದು. ನೋಟು ನಿಷೇಧದ ನಂತರವೂ ಒಂದಿಷ್ಟು ಕಪ್ಪುಹಣ ಉಳಿದುಕೊಳ್ಳಬಹುದು ಎಂಬುದು ನಿಜ. ಪರಿಣಿತರ ಅಂದಾಜಿನ ಪ್ರಕಾರ ಶೇ.5ರಿಂದ 10ರಷ್ಟು ಕಪ್ಪುಹಣವನ್ನು ಬಚ್ಚಿಟ್ಟುಕೊಳ್ಳಬಹುದು. ಹೇಗೆಂದರೆ ಎರಡು ದಿನದ ಹಿಂದೆ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರಲ್ಲ, `ನಾನು ಇಂದು ನನ್ನ ಡ್ರೈವರ್ ಊಟಕ್ಕೆ, ಮನೆ ಕೆಲಸದ ಆಳಿಗೆಲ್ಲ ನೂರರ ನೋಟನ್ನು ಎಣಿಸಿ ಬಂದೆ, ಮೋದಿಗೆ ಬಡವರ ಕಷ್ಟ ಏನು ಗೊತ್ತು?’ ಅಂತ. ಇನ್ನು ಕೆಲ ದಿನ ಆಳುಕಾಳುಗಳ ಕೈಗೆ ರೂಪಾಯಿ ಲೆಕ್ಕದಲ್ಲಲ್ಲ ಲಕ್ಷಗಳ ಲೆಕ್ಕದಲ್ಲಿ ಕೊಟ್ಟರೂ ಅಚ್ಚರಿಯಿಲ್ಲ. ಅದರಿಂದ ಆಳಿಗೆ ಮತ್ತು ಧಣಿಗೆ ಇಬ್ಬರಿಗೂ ಅಷ್ಟೊಇಷ್ಟೋ ಲಾಭ ಆದೀತು. ಅದಕ್ಕಿಂತ ಹೆಚ್ಚೇನೂ ಆಗಲು ಸಾಧ್ಯವಿಲ್ಲ.
ಇಂಥವರ ಮೇಲೆ ನಿಗಾ ಬೇಕು: ಚಾಪೆಯ ಕೆಳಗೆ, ರಂಗೋಲಿಯ ಅಡಿಗೆ ತೂರಿಕೊಳ್ಳುವವರು ಎಲ್ಲ ಕಾಲಕ್ಕೂ ಇರುತ್ತಾರೆ. ಉದಾಹರಣೆಗೆ ಕೆಲ ಗ್ಯಾಸ್ ಏಜೆನ್ಸಿ ಮತ್ತು ಪೆಟ್ರೋಲ್ ಬಂಕ್ ಮಾಲೀಕರು ಇತ್ಯಾದಿಗಳು. ಗ್ಯಾಸ್ ಏಜೆನ್ಸಿ- ಪೆಟ್ರೋಲ್ ಬಂಕ್‍ಗಳು, ಆಸ್ಪತ್ರೆಗಳಲ್ಲಿ ಹಳೆ ನೋಟನ್ನು ಸ್ವೀಕರಿಸಬೇಕು ಎಂಬ ಸರ್ಕಾರದ ಕಟ್ಟುನಿಟ್ಟಿನ ಸೂಚನೆಯ ಹೊರತಾಗಿಯೂ ನೂರು, ಐವತ್ತರ ನೋಟು ನೀಡಲು ಜುಲುಮೆ ಮಾಡುತ್ತಿದ್ದಾರೆ. ಗ್ಯಾಸ್ ಏಜೆನ್ಸಿ ಮತ್ತು ಪೆಟ್ರೋಲ್ ಬಂಕ್ ಮಾಲೀಕರು ಗ್ರಾಹಕರಿಂದ ಪಡೆಯುವ ನೂರು-ಐವತ್ತರ ನೋಟನ್ನು ಇಟ್ಟುಕೊಂಡು ತಾವು ಈಗಾಗಲೇ ಕೂಡಿಟ್ಟುಕೊಂಡಿರುವ ಕಪ್ಪುಹಣವನ್ನು ಮುಂದಿನ ಐವತ್ತು ದಿನಗಳ ಕಾಲ ಬ್ಯಾಂಕಿಗೆ ಕಟ್ಟಿ ಅಕ್ರಮ ಸಕ್ರಮ ಮಾಡಿಕೊಳ್ಳುತ್ತಾರೆ. ಆಗ ಇಂಥವರ ಬಳಿ ಒಂದಿಷ್ಟು ಕಾಳಧನದ ಸಂಗ್ರಹ ಹಾಗೆಯೇ ಉಳಿಯುತ್ತದೆ. ಇಲ್ಲಿ ಇನ್ನೊಂದು ಪ್ರಮುಖಾಂಶವನ್ನು ನಾವು ಗಮನಿಸಬೇಕು. ಗ್ಯಾಸ್ ಏಜೆನ್ಸಿ ಮತ್ತು ಪೆಟ್ರೋಲ್ ಬಂಕ್‍ಗಳು ರಾಜಕಾರಣಿಗಳು ಅಥವಾ ಅವರ ಸಂಬಂಧಿಕರದ್ದೇ ಆಗಿರುವುದರಿಂದ ಕೇಂದ್ರ/ರಾಜ್ಯ ಸರ್ಕಾರಗಳ ಹಣಕಾಸು ಇಲಾಖೆ ಅಧಿಕಾರಿಗಳು ಇಂಥವರ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟರೆ ಈ ಯೋಜನೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲು ಸಾಧ್ಯ. ಗಮನಿಸಬೇಕಾದ ಇನ್ನೊಂದು ಅಂಶ ನೂರು, ಸಾವಿರ, ಲಕ್ಷ ಕೋಟಿ ಲೆಕ್ಕದಲ್ಲಿ ಕಾಳಧನ ಸಂಗ್ರಹ ಮಾಡಿಟ್ಟುಕೊಂಡಿರುವವರನ್ನು. ಇಂಥವರ ಹಣ ಸಂಪೂರ್ಣವಾಗಿ ನಿಷ್ಪ್ರಯೋಜಕ ಆಗುತ್ತದೆ. ಕಾಳಧನದಲ್ಲಿ ಇಂಥವರ ಪಾಲು ಶೇ.95 ಇರುವುದರಿಂದ ಸರ್ಕಾರದ ಈ ಕ್ರಮ ಪ್ರಯೋಜನಕಾರಿ ಅಲ್ಲ ಎಂದು ಹೇಳಲಾದೀತೇ? ಇಂತಹ ಮತ್ತಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುತ್ತ ಹೋದರೆ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ನಂಜುರಹಿತ ಆಗುವುದರಲ್ಲಿ ಅನುಮಾನ ಬೇಡ.
ಬ್ಯಾಂಕಿಂಗ್ ಸಾಕ್ಷರತೆಗೆ ಸಹಕಾರಿ: ದೇಶ ಸದೃಢವಾಗಬೇಕೆಂದರೆ ಓದು-ಬರಹದ ಸಾಕ್ಷರತೆಯಷ್ಟೇ ಬ್ಯಾಂಕಿಂಗ್ ಸಾಕ್ಷರತೆಯೂ ಮುಖ್ಯ. ಆ ದೃಷ್ಟಿಯಿಂದ ನೋಡಿದರೆ ಮೋದಿ ಸರ್ಕಾರ ಜಾರಿಗೆ ತಂದ `ಪ್ರಧಾನಮಂತ್ರಿ ಜನಧನ ಯೋಜನೆ’ಯೂ ಅಷ್ಟೇ ಮಹತ್ವದ್ದು. ಈ ಯೋಜನೆಯಿಂದ ದಿನಕ್ಕೆ ನೂರು ರೂ. ದುಡಿಯುವ ಕೂಲಿಯೂ ಬ್ಯಾಂಕ್ ಖಾತೆ ಮಹತ್ವ ತಿಳಿಯುವಂತಾಯಿತು. `ಉಳಿತಾಯವೂ ದುಡಿತಾಯ’ವೇ ಎಂದು ಮನವರಿಕೆ ಆಗಲು ಬ್ಯಾಂಕ್ ಖಾತೆ ಹೊಂದುವುದನ್ನು ಬಿಟ್ಟರೆ ಅನ್ಯ ಮಾರ್ಗವಿಲ್ಲ. ಜನಧನ ಖಾತೆ ಆಮಿಷದ ಮೂಲಕ, ಒತ್ತಾಯದ ಮೂಲಕ ಅಂತಹ ಬ್ಯಾಂಕಿಂಗ್ ಸಾಕ್ಷರತೆಗೆ ಒಂದಿಷ್ಟು ದಾರಿ ಮಾಡಿಕೊಟ್ಟಿತ್ತು. ಈಗ ನೋಟು ಚಲಾವಣೆ ರದ್ದತಿಯಿಂದ ಪ್ರತಿ ವ್ಯಕ್ತಿ ಬ್ಯಾಂಕ್ ಮೆಟ್ಟಿಲು ತುಳಿಯಲೇಬೇಕಿದೆ. ಆತ ಇನ್ನುಮುಂದೆ ತನ್ನದೇ ಬ್ಯಾಂಕ್ ಖಾತೆ ಹೊಂದುತ್ತಾನೆ. ಅದರ ಪರಿಣಾಮ ಬ್ಯಾಂಕ್ ಖಾತೆರಹಿತ ಶೇ.37ರಷ್ಟು ಮಂದಿ ಇನ್ನು ಮುಂದೆ ಬ್ಯಾಂಕ್ ಮೂಲಕವೇ ವ್ಯವಹಾರ ಮಾಡುತ್ತಾರೆ. ರಾತ್ರಿ ಬೆಳಗಾಗುವುದರೊಳಗಾಗಿ ದೇಶ ನೂರಕ್ಕೆ ನೂರು ಬ್ಯಾಂಕಿಂಗ್ ಸಾಕ್ಷರತೆ ಹೊಂದುವುದೆಂದರೆ ಅದನ್ನು ಸಣ್ಣಪುಟ್ಟ ಕ್ರಾಂತಿ ಎನ್ನಲಾದೀತೇನು?
ಭೂಮಿ ಬೆಲೆ ಧರೆಗೆ ಬರುವುದೇ?: ಅಂದಾಜಿನ ಪ್ರಕಾರ ರಿಯಲ್ ಎಸ್ಟೇಟ್, ಜ್ಯುವೆಲರಿ ವಹಿವಾಟು ಇತ್ಯಾದಿಗಳಲ್ಲಿ ಕಪ್ಪುಹಣದ ವಹಿವಾಟು ಹೆಚ್ಚಾಗಿದೆ. ಈಗಲೂ ಕಾಳಧನಿಕರು ಈ ಉದ್ಯಮಗಳಲ್ಲಿ ಹಣ ಹೂಡಿ ಅಕ್ರಮ ಸಂಪತ್ತನ್ನು ರಕ್ಷಣೆ ಮಾಡುವ ದುಸ್ಸಾಹಸ ಮಾಡಬಹುದು. ಅದಕ್ಕೆ ರಿಯಲ್ ಎಸ್ಟೇಟ್ ಮತ್ತು ಬೆಳ್ಳಿ-ಬಂಗಾರದ ಉದ್ಯಮದಲ್ಲಿರುವವರು ಅವಕಾಶ ನೀಡಿದರೆ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ. ಏಕೆಂದರೆ 2.5 ಲಕ್ಷಕ್ಕಿಂತ ಹೆಚ್ಚು ಹೂಡಿಕೆಗೆ ಹತ್ತು ಪಟ್ಟು ದಂಡ ಮತ್ತು ಕಠಿಣ ಶಿಕ್ಷೆ ನಿಗದಿ ಮಾಡಲಾಗಿದೆ. ಹಾಗೆಯೇ ಇನ್ನು ಮುಂದೆ ಕಾಳಧನ ಸಂಗ್ರಹಕೋರರು ನಗದು ಸಂಗ್ರಹಿಸುವ ಬದಲು ರಿಯಲ್ ಎಸ್ಟೇಟ್, ಜ್ಯುವೆಲರಿ, ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಮುಂದಾಗಬಹುದು. ಆಗ ಅಂತಹ ಹೂಡಿಕೆ ತೆರಿಗೆ ಬಲೆಯೊಳಗೆ ಬರುವುದರಿಂದ ಅಷ್ಟರಮಟ್ಟಿಗೆ ದೇಶದ ಸಂಪತ್ತು ವೃದ್ಧಿಗೆ ಅನುಕೂಲವೇ ಆಗಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಡಮಧ್ಯಮ ವರ್ಗದವರಿಗೆ ಗಗನ ಕುಸುಮವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮ ಕೈಗೆಟುಕುವಂತಾಗಬೇಕು. ಒಟ್ಟು ಪರಿಣಾಮ ಒಳಿತೇ ಆಗಲಿದೆ.
ಷೇರುಪೇಟೆ ಮುನ್ಸೂಚನೆ ಏನು?: ಷೇರುಪೇಟೆ ದೇಶದ ಆರ್ಥಿಕ ಮುನ್ನೋಟದ ಅಳತೆಗೋಲು. ನೋಟು ಚಲಾವಣೆ ರದ್ದತಿ ಘೋಷಿಸಿದ ಮರುದಿನ ಷೇರುಪೇಟೆ ತುಸು ತಲ್ಲಣ ಆಗಿದ್ದು ಹೌದು. ಆದರೆ ಕೇವಲ ಒಂದೇ ದಿನದಲ್ಲಿ ಅದು ಮತ್ತೆ ಚೇತರಿಸಿಕೊಂಡಿತು. ಈ ಚೇತರಿಕೆ ಕೆಲ ಆರ್ಥಿಕ ತಜ್ಞರೂ ಹುಬ್ಬೇರಿಸುವಂತೆ ಮಾಡಿತು. ಅಕಸ್ಮಾತ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ದಿಕ್ಸೂಚಿ ಕೆಲ ದಿನಗಳ ನಂತರ ಸಿಗುವಂತಿದ್ದರೆ ಭಾರತದ ಷೇರುಪೇಟೆ ಕೊಂಚವೂ ವಿಚಲಿತವಾಗುತ್ತಿರಲಿಲ್ಲವೇನೊ.
ಕಾಳಧನ ಸಂಗ್ರಹದ ಮೇಲೆ ಪ್ರಧಾನಿ ಮಾಡಿದ ಗದಾಪ್ರಹಾರ ಕಠಿಣಾತಿ ಕಠಿಣ ನಿರ್ಧಾರಗಳಲ್ಲೊಂದು. ಕಾಳಧನಕ್ಕೂ ರಾಜಕೀಯಕ್ಕೂ ಅವಿನಾಭಾವ ಸಂಬಂಧ ಇರುವುದು ಗೊತ್ತೇ ಇದೆ. ಅಂಥದ್ದರಲ್ಲಿ ಯಾರಿಗೂ ಗುಟ್ಟು ಬಿಟ್ಟು ಕೊಡದೆ ನೋಟು ರದ್ದತಿ ನಿರ್ಧಾರ ತೆಗೆದುಕೊಂಡದ್ದು ಸಾಮಾನ್ಯವಲ್ಲ. ಈ ನಿರ್ಧಾರದ ಕುರಿತು ಕಾಂಗ್ರೆಸ್ಸಿಗರು, ವಿಪಕ್ಷಗಳು ಮಾತ್ರವಲ್ಲ ಶೇ.90ರಷ್ಟು ಬಿಜೆಪಿ ನಾಯಕರೇ ಇನ್ನೂ ಜೈ ಎನ್ನುತ್ತಿಲ್ಲ. ಆ ಸರ್ಜಿಕಲ್ ದಾಳಿ ವಿಷಯದಲ್ಲಿ ಲಬೋ ಲಬೋ ಎಂದು ಬಾಯಿ ಹರಿದುಕೊಂಡವರು ಈ ಸರ್ಜಿಕಲ್ ದಾಳಿ ವಿಷಯದಲ್ಲಿ ಮೌನಕ್ಕೆ ಜಾರಿದ್ದಾರೆಂದರೆ, ಆಘಾತಕ್ಕೆ ಸಿಲುಕಿದ್ದಾರೆಂದರೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ.
ಕಪ್ಪುಹಣಕ್ಕಿಂತಲೂ ಭಯೋತ್ಪಾದನೆ ಅಪಾಯ ಹೆಚ್ಚು: ಪರ್ಯಾಯ ಆರ್ಥಿಕತೆ ಎಂಬ ಕುಖ್ಯಾತಿ ಪಡೆದ ಕಪ್ಪುಹಣ ಮತ್ತು ನಕಲಿ ನೋಟು ದೇಶವನ್ನು ಅಸ್ಥಿರತೆಗೆ, ಅಭದ್ರತೆಗೆ ತಳ್ಳುವ ನಾನಾ ತೆರನಾದ ಭಯೋತ್ಪಾದಕತೆಗೆ ಬಳಕೆ ಆಗುತ್ತಿದೆ ಎಂಬುದು ರುಜುವಾತಾಗಿದೆ. ಅದಕ್ಕೆ ತಡೆ ಹಾಕಲು ಈಗ ಚಲಾವಣೆಯಲ್ಲಿರುವ ನೋಟುಗಳನ್ನು ರದ್ದತಿ ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಳ್ಳುವುದಕ್ಕಿಂತ ಕ್ಯೂನಲ್ಲಿ ನಿಂತು ಹೊಸ ನೋಟು ಪಡೆದುಕೊಳ್ಳುವುದು ಲೇಸು ಎನ್ನೋಣವೇ?
ಸ್ವಚ್ಛ ಪರ್ಸಿನ ಕಡೆಗೆ: ಪೊರಕೆ ಹಿಡಿದು ರಸ್ತೆ ಗುಡಿಸುವುದರಿಂದ ಆರಂಭವಾದ ಸ್ವಚ್ಛ ಭಾರತ ಅಭಿಯಾನ ಈಗ ಸ್ವಚ್ಛ ಕಿಸೆ, ಸ್ವಚ್ಛ ಪರ್ಸು, ಸ್ವಚ್ಚ ಬ್ಯಾಂಕ್ ಅಕೌಂಟಿನವರೆಗೆ ಬಂದು ತಲುಪಿದೆ. ಈ ಅಭಿಯಾನದ ನಿಜವಾದ ಆಚರಣೆ ಬಾಹ್ಯ ಕಸವಲ್ಲ, ಆಂತರಿಕ ಕೊಳೆ ತೊಳೆಯುವುದು ಎಂದು ಭಾವಿಸಿದರೆ ಸರಿಯಾದೀತು.
ಒಂದೇ ಒಂದು ಕಪ್ಪುಚುಕ್ಕೆ ಎಂದರೆ….
2 ಸಾವಿರ ರೂಪಾಯಿ ನೋಟು. ಕಾಳಧನ ಸಂಗ್ರಹಕ್ಕೆ, ಭ್ರಷ್ಟಾಚಾರದ ಪೆÇೀಷಣೆಗೆ, ನಕಲಿ ನೋಟು ಚಲಾವಣೆಗೆ 500, 1000 ರೂ. ನೋಟುಗಳೇ ಕಾರಣ ಎಂದು ತಿಳಿದೂ 2000 ರೂ. ನೋಟನ್ನು ಚಲಾವಣೆಗೆ ತಂದಿರುವುದು ಆಕ್ಷೇಪಕ್ಕೆ ಎಡೆ ಮಾಡಿಕೊಟ್ಟಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ದರೂ, ತಂತ್ರಜ್ಞಾನ ಅಳವಡಿಸಿದ್ದರೂ ಆತಂಕ ಇz್ದÉೀ ಇದೆ. ಇದೇಕೆ ಹೀಗೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಇರಲಿ ಇದೊಂದು ದೃಷ್ಟಿಬೊಟ್ಟು ಎಂದು ಭಾವಿಸೋಣ ಬಿಡಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top