ಮುಜುಗರಕ್ಕೆ ಮತ್ತೊಂದು ಸೇರ್ಪಡೆ?

ಶ್ರೀನಿವಾಸ ಪ್ರಸಾದ್ ರಾಜೀನಾಮೆ ಅಂಗೀಕಾರಕ್ಕೆ ಮೀನಮೇಷ ನಡೆದಿದೆ. ಉಪಚುನಾವಣಾ ಕದನಕಣಕ್ಕೆ ಹೆದರಿ ಸರ್ಕಾರ ಇಂಥ ನಿಲುವಿಗೆ ಬಂದಿದೆ ಎಂಬ ಚರ್ಚೆಯೂ ಶುರುವಾಗಿದೆ. ಹಾಗಾದರೆ ಇದು ಸಿದ್ದು ಸರ್ಕಾರದ ಯಡವಟ್ಟುಗಳ ಸಾಲಿಗೆ ಹೊಸ ಸೇರ್ಪಡೆ ಆಗುವುದೇ? ಹಿಂದೆಯೂ ಸರ್ಕಾರ ಅನೇಕ ಪ್ರಕರಣಗಳಲ್ಲಿ ಎಡವಟ್ಟು ಮಾಡಿಕೊಂಡಿದ್ದಿದೆ.

ಸರಿಯಾಗಿ ಹತ್ತು ವರ್ಷದ ನಂತರ ಮತ್ತೊಂದು ಅಂಥದ್ದೇ ಸನ್ನಿವೇಶ ನಿರ್ವಣವಾಗಿದೆ! ಪಾತ್ರಧಾರಿಗಳು ಅದಲುಬದಲು ಅಷ್ಟೇ. ಅಂದು

v-srinivasa-prasadಸಿದ್ದರಾಮಯ್ಯ. ಇಂದು ಶ್ರೀನಿವಾಸ ಪ್ರಸಾದ್. ದೇವೇಗೌಡರು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿದರು ಎಂಬ ಕಾರಣಕ್ಕೆ ಬಂಡಾಯ ಸಾರಿ ಜೆಡಿಎಸ್ನಿಂದ ಹೊರನಡೆದ ಸಿದ್ದರಾಮಯ್ಯ ಚಾಮುಂಡೇಶ್ವರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಕ್ತಿಪ್ರದರ್ಶನಕ್ಕೆ ಸಂಕಲ್ಪಿಸಿದ್ದರು. ಮಂತ್ರಿಮಂಡಳದಿಂದ ಅಗೌರವಯುತವಾಗಿ ಹೊರಹಾಕಿದರು ಎಂಬ ಕಾರಣಕ್ಕೆ ಶ್ರೀನಿವಾಸ ಪ್ರಸಾದ್ ಇದೀಗ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದಾರೆ. ವ್ಯತ್ಯಾಸ ಇಷ್ಟೆ, ಅಂದು ಸ್ಪೀಕರ್ ಆಗಿದ್ದ ಕೆಆರ್ ಪೇಟೆ ಕೃಷ್ಣ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ಮರುಮಾತಿಲ್ಲದೆ ಅಂಗೀಕರಿಸಿದ್ದರು. ಇಂದು ಸ್ಪೀಕರ್ ಕೆ.ಬಿ.ಕೋಳಿವಾಡ ಕಾನೂನು ಮತ್ತು ನೈತಿಕ ಕಾರಣಗಳನ್ನು ಮುಂದೆ ಮಾಡಿ ರಾಜೀನಾಮೆ ಅಂಗೀಕರಿಸಲು ಮೀನಮೇಷ ಎಣಿಸುತ್ತಿದ್ದಾರೆ. ಈ ತಂತ್ರಗಾರಿಕೆಯ ಒಳಮರ್ಮವನ್ನು ಬಿಡಿಸಿ ಹೇಳುವುದೇನೂ ಬೇಕಿಲ್ಲ.

ಶ್ರೀನಿವಾಸ ಪ್ರಸಾದ್ರನ್ನು ಸಂಪುಟದಿಂದ ಕೈಬಿಟ್ಟಿದ್ದು, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದದ್ದೆಲ್ಲ ಒಂದು ಭಾಗ. ಅವರ ರಾಜೀನಾಮೆಯನ್ನು ಅಂಗೀಕರಿಸಲು ಸ್ಪೀಕರ್ ನಿಧಾನಿಸುತ್ತಿರುವುದರಿಂದ ಪ್ರಕರಣ ಮತ್ತೊಂದು ಮಗ್ಗುಲಿಗೆ ಹೊರಳಿದೆ. ನೇರವಾಗಿ ಹೇಳುವುದಾದರೆ ಪ್ರಸಾದ್ ರಾಜೀನಾಮೆಯ ನಂತರ ನಡೆಯುವ ಉಪಚುನಾವಣೆಯನ್ನು ಎದುರಿಸಲಾಗದೆ ರಾಜೀನಾಮೆಯ ಸಮಂಜಸತೆ, ಪ್ರಜಾಪ್ರತಿನಿಧಿಯ ಜವಾಬ್ದಾರಿಯ ಕಾರಣಗಳನ್ನು ಮುಂದೆ ಮಾಡಿ ಸರ್ಕಾರ ಪಲಾಯನವಾದಕ್ಕೆ ಶರಣಾಗಿದೆ ಎಂತಲೇ ವಿಶ್ಲೇಷಿಸಬೇಕಾಗುತ್ತದೆ.

ರಾಜೀನಾಮೆ ಅಸಮಂಜಸವೇ?: ಶಾಸಕಾಂಗದ ನಡಾವಳಿಗಳ ಚರ್ಚೆ ಬೇರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಓರ್ವ ಪ್ರಜೆ ಮತ್ತು ಪ್ರಜಾಪ್ರತಿನಿಧಿಯ ಹಕ್ಕು, ಕರ್ತವ್ಯ ಮತ್ತು ಬಾಧ್ಯತೆಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು ನೋಡುವುದಾದರೂ ಪ್ರಸಾದ್ ರಾಜೀನಾಮೆ ತಿರಸ್ಕಾರಕ್ಕೆ ಮತ್ತು ವಿಳಂಬ ಧೋರಣೆ ಅನುಸರಿಸಲು ಕಾರಣ ಆಗುವುದಿಲ್ಲ. ಪ್ರಸಾದ್ ಓರ್ವ ಪ್ರಜೆಯೂ ಹೌದು, ಪ್ರಜಾಪ್ರತಿನಿಧಿಯೂ ಹೌದು. ಇಲ್ಲಿ ಮೂಲಭೂತ ಹಕ್ಕಿನ ವಿಚಾರವನ್ನೇ ಪ್ರಧಾನವಾಗಿ ತೆಗೆದುಕೊಂಡರೂ ಪ್ರಜಾಪ್ರತಿನಿಧಿ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರ

ಅವರ ಮೂಲಭೂತ ಹಕ್ಕಿಗೆ ಸಂಬಂಧಿಸಿದ್ದು. ಸಭಾಧ್ಯಕ್ಷರು ಅವರ ರಾಜೀನಾಮೆಯನ್ನು ಅಂಗೀಕರಿಸದೆ ನಿರಾಕರಿಸುವಂತಿಲ್ಲ. ಮುಂದೆ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೂ ಇದೇ ನೆಲೆಗಟ್ಟಿನಲ್ಲಿ ನ್ಯಾಯ ನಿಷ್ಕರ್ಷೆ ನಡೆಯುವುದು ನಿಶ್ಚಿತ.

ಇನ್ನು ಹಕ್ಕು ಬಾಧ್ಯತೆಯ ವಿಚಾರ. ಸಂಪುಟದಿಂದ ಕೈ ಬಿಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಕಾರಣ ಮತ್ತು ವಿವರಣೆ ಶ್ರೀನಿವಾಸ್ ಪ್ರಸಾದ್ ಅವರ ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯವನ್ನೇ ಪ್ರಶ್ನೆ ಮಾಡುವಂಥದ್ದು. ‘ಸರ್ಕಾರದ ವರ್ಚಸ್ಸನ್ನು ಹೆಚ್ಚಿಸುವ, ಸಮರ್ಥರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ನಿಮ್ಮನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ನನಗೆ ವಿವರಣೆ ನೀಡಿದ್ದಾರೆ’ಎಂದು ಪ್ರಸಾದ್ ಒಂದಲ್ಲ ಹತ್ತು ಬಾರಿ ಬಹಿರಂಗವಾಗಿ ಹೇಳಿದ್ದಾರೆ. ಇಲ್ಲಿ ‘ನೀನು ಅಸಮರ್ಥ’ ಎಂಬ ವಿವರಣೆಯಿಂದ ಓರ್ವ ಶಾಸಕ, ತದನಂತರ ಮಂತ್ರಿ ಆಗಿದ್ದ ಪ್ರಸಾದ್ ಅವರ ಹಕ್ಕುಚ್ಯುತಿಯಾಗಿದೆ. ಬಹಿರಂಗ ತೇಜೋವಧೆ ಆಗಿದೆ. ಈ ಎಲ್ಲ ಅಂಶಗಳಿಗಿಂತ ಮುಖ್ಯವಾಗಿ ಶಾಸನಸಭಾ ಸದಸ್ಯನಾಗಿ ಮಾಡಿದ ಪ್ರಮಾಣದಂತೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕೆಂದು ಬಯಸುವ ಪ್ರಸಾದ್ ಹಕ್ಕನ್ನು ಸ್ಪೀಕರ್ ಮೊಟಕುಗೊಳಿಸುವುದಾದರೂ ಹೇಗೆ? ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ನೇತಾರ ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಚುನಾವಣಾ ಅಖಾಡ ಸೂಕ್ತ ವೇದಿಕೆ ತಾನೆ? ಈ ಕಾಲಘಟ್ಟದಲ್ಲಿ ತಾನೊಬ್ಬ ಸಮರ್ಥ ಎಂದು ರುಜುವಾತು ಮಾಡಲು ಪ್ರಸಾದ್ಗೆ ಇರುವ ಏಕೈಕ ಅವಕಾಶ ಸಹ ಚುನಾವಣೆಯೇ.

ತಪ್ಪಿದ ಲೆಕ್ಕಾಚಾರ: ರಾಜಕೀಯವಾಗಿ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಾದರೂ ಸಿದ್ದರಾಮಯ್ಯ ಸರ್ಕಾರ ತನ್ನ ಯಡವಟ್ಟುಗಳ ಸರಣಿಗೆ ಹೊಸದೊಂದು ಪ್ರಕರಣವನ್ನು ಸೇರ್ಪಡೆ ಮಾಡಿಕೊಂಡಿದೆ ಎಂತಲೇ ಹೇಳಬೇಕು. ಆರಂಭದಿಂದಲೂ ಸರ್ಕಾರ ಸೂಜಿಯಲ್ಲಿ ಹೋಗುವುದನ್ನು ಹಾರೆಯಿಂದ ಅಗೆದದ್ದೇ ಹೆಚ್ಚು. ಮೊದಲನೆಯದ್ದು ಮೌಢ್ಯ ನಿಷೇಧದ ವಿಚಾರ. ಪೂರ್ವಾಪರ ವಿಚಾರ ಮಾಡದೆ ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡುವ ಹೇಳಿಕೆ ನೀಡಿ ನಂತರ ಹಿಂದಡಿ ಇಟ್ಟಿತು. ಆದರೆ ಅಷ್ಟೊತ್ತಿಗಾಗಲೇ ಆಗುವಷ್ಟು ಹಾನಿ ಆಗಿತ್ತು. ಡಿನೋಟಿಫಿಕೇಶನ್ ಪ್ರಕರಣ ಎರಡನೆಯದ್ದು. ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಸಿಎಂ ತಮ್ಮನ್ನು ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳುವ ಬದಲು ಬಿಜೆಪಿಯವರ ಹಗರಣಗಳನ್ನು ಬಹಿರಂಗ ಮಾಡುತ್ತೇನೆ ಎಂದಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಯಿತು. ಮುಂದೆ ಲೋಕಾಯಕ್ತ ದುರ್ಬಲಗೊಳಿಸಿದ್ದು, ಕಾರಣವಿಲ್ಲದೆ ಉಪಲೋಕಾಯುಕ್ತರ ಪದಚ್ಯುತಿಗೆ ಮುಂದಾಗಿ ನ್ಯಾಯಾಲಯದಲ್ಲಿ ಮುಖಭಂಗ ಅನುಭವಿಸಿದ್ದು, ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿ ರಚನೆ ಮಾಡಿದ್ದು ಇವೆಲ್ಲ ಡಿನೋಟಿಫಿಕೇಶನ್ ಹಗರಣದ ನೇರ ಪರಿಣಾಮವೇ. ಮೂರನೆಯದು ದುಬಾರಿ ವಾಚಿನ ಪ್ರಕರಣ. ‘ಗೆಳೆಯ ನೀಡಿದ ವಸ್ತು ಅಮೂಲ್ಯವಾದದ್ದು, ಅದರ ಮೌಲ್ಯವನ್ನು ಲೆಕ್ಕಹಾಕಲು ಹೋಗಿಲ್ಲ’ ಎಂದು ಹೇಳಿದರೆ ಮುಗಿದುಹೋಗಬಹುದಾಗಿದ್ದ ಪ್ರಕರಣವನ್ನು ಚಾಲೆಂಜ್ ಮಾಡಿ, ಗದರಿಸಿ ಬಾಯಿಮುಚ್ಚಿಸಲು ಹೋಗಿ ಪೇಚಿಗೆ ಸಿಲುಕಿಕೊಂಡದ್ದನ್ನು ಇಡೀ ರಾಜ್ಯ ಗಮನಿಸಿದೆ. ಐಎಎಸ್ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣ, ಮೈಸೂರು ಡಿಸಿಗೆ ಧಮ್ಕಿ ಹಾಕಿದ ಸಿಎಂ ಹಿಂಬಾಲಕ ಮರಿಗೌಡ ಪ್ರಕರಣ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಆದದ್ದೂ ಅದೇ ಕತೆ. ಠಾಣೆಯ ಮಟ್ಟದಲ್ಲಿ ಮುಗಿಯುವ ಪ್ರಕರಣ ರಾಜ್ಯ, ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟದ್ದು ಸರ್ಕಾರದ ತಪ್ಪು ಲೆಕ್ಕಾಚಾರದ ಪರಿಣಾಮವೇ.

ಪ್ರಸಾದ್ ರಾಜೀನಾಮೆ ಪ್ರಕರಣವೂ ಅಷ್ಟೆ, ಈ ಸರ್ಕಾರಕ್ಕೆ ನುಂಗಲಾರದ ತುತ್ತಾಗುವುದರಲ್ಲಿ ಅನುಮಾನವಿಲ್ಲ. ಪ್ರಸಾದ್ಗೆ ವಯಸ್ಸಾಗಿರಬಹುದು, ಅನಾರೋಗ್ಯ ಇರಬಹುದು, ಆದರೆ ಅವರು ಆತ್ಮಗೌರವಕ್ಕೆ ಚ್ಯುತಿ ತಂದುಕೊಂಡವರಲ್ಲ. ಕೈ-ಬಾಯನ್ನು ಕೆಡಿಸಿಕೊಂಡವರಲ್ಲ. ಸ್ವಸಾಮರ್ಥ್ಯ ಮತ್ತು ಪ್ರಬುದ್ಧತೆ, ಹಿರಿತನದ ದೃಷ್ಟಿಯಿಂದ ಕರ್ನಾಟಕದಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಹಾಲಿ ನಾಯಕರ ಪೈಕಿ ಎತ್ತರದಲ್ಲಿ ಇರುವ ವ್ಯಕ್ತಿ. ರಾಜಕೀಯವಾಗಿ ನೋಡುವುದಾದರೂ ಹಳೆ ಮೈಸೂರು

ಪ್ರಾಂತದಲ್ಲಿ ಪ್ರಸಾದ್ಗೆ ಪರ್ಯಾಯವಾದ ಬೇರೊಬ್ಬ ದಲಿತ ನಾಯಕರಿಲ್ಲ. ಈ ಹಿಂದೆ ಚಾಮುಂಡೇಶ್ವರಿ ಉಪಚುನಾವಣೆ ಸಂದರ್ಭದಲ್ಲಿ ಮನೆಯಲ್ಲಿದ್ದ ಅವರನ್ನು ಸಿದ್ದರಾಮಯ್ಯ ಕೈಹಿಡಿದು ಕರೆದುಕೊಂಡು ಬಂದದ್ದು ಇದಕ್ಕೊಂದು ಉತ್ತಮ ನಿದರ್ಶನ. ಸಂಪುಟದಿಂದ ಯಃಕಶ್ಚಿತ್ ಎಂಬಂತೆ ಕೈಬಿಟ್ಟ ನಂತರ ಪ್ರಸಾದ್ ವಿಷಯದಲ್ಲಿ ನಂಜನಗೂಡು ಮತ್ತು ಮೈಸೂರು ಭಾಗದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ದಲಿತವರ್ಗದಲ್ಲಿ ಅನುಕಂಪ ಹೆಚ್ಚಾಗಿದೆ. ಈ ಸರ್ಕಾರ ಬಂದ ಲಾಗಾಯ್ತಿನಿಂದಲೂ ‘ಅಹಿಂದ’ದ ಪದ ದೂರಾಗುತ್ತಿದೆ ಎಂಬ ಮಾತು ಇದ್ದೇ ಇತ್ತು. ಈಗ ಅದು ಮತ್ತಷ್ಟು ಮನವರಿಕೆ ಆಗುವಂತಾಗಿದೆ. ಆ ಕಾರಣಕ್ಕಾಗಿಯೇ ಪ್ರಸಾದ್ ರಾಜೀನಾಮೆ ಅಂಗೀಕರಿಸಲು ಮೀನಮೇಷ ಎಣಿಸಲಾಗುತ್ತಿದೆ ಎಂಬ ಚರ್ಚೆಯೂ ವೇಗ ಪಡೆದುಕೊಳ್ಳುತ್ತಿದೆ. ಹಾಗೆ ನೋಡಿದರೆ ಒಂದು ಚುನಾಯಿತ ಸರ್ಕಾರಕ್ಕೆ ಒಂದು ಕ್ಷೇತ್ರದ ಉಪಚುನಾವಣೆ ಒಂದು ವಿಷಯವೇ ಆಗಬಾರದು. ಸೋಲು-ಗೆಲುವು ಪ್ರತಿಷ್ಠೆ ಆಗಬಾರದು. ಆದರೆ ಈಗ ನೋಡುತ್ತಿದ್ದರೆ ಸಿದ್ದರಾಮಯ್ಯ ಸರ್ಕಾರ ತನ್ನ ಜನಪ್ರಿಯತೆ ವಿಷಯದಲ್ಲಿ ತಾನೇ ಅನುಮಾನಪಡುತ್ತಿರುವಂತೆ ಭಾಸವಾಗುತ್ತದೆ. ಇನ್ನು ಚುನಾವಣೆ ನಡೆದರೂ, ನಡೆಯದಿದ್ದರೂ ಗೆಲ್ಲುವುದು ಜನಾಭಿಪ್ರಾಯವೇ. ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ ಪಲಾಯನವಾದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ. ಇನ್ನು ಪ್ರಸಾದ್ ಎದುರು ಸಚಿವ ಮಹದೇವಪ್ಪ ಅವರ ಮಗ ಸುನೀಲ್ ಬೋಸ್ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ತೇಲಿಬಿಟ್ಟಿರುವುದಂತೂ ತಮಾಷೆಯಂತೆ ಕಂಡುಬರುತ್ತಿದೆ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top