ಕೋವಿಡ್ ಕಷ್ಟದಲ್ಲಿ ನಿಮ್ಮ ಸಂಸದರು ಏನು‌ ಮಾಡ್ತಿದ್ದಾರೆ? ಯಾರು ಬೆಸ್ಟ್, ಯಾರು ಕಳಪೆ..

ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕೊರೊನಾದಿಂದ ಒಟ್ಟೊಟ್ಟಿಗೆ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಲಾಕ್‌ಡೌನ್‌ನಿಂದ ಹತ್ತು ಹಲವು ಕಂಟಕಗಳು ಎದುರಾದವು. ನಿಜಕ್ಕೂ ಇದೊಂದು ಸವಾಲಿನ ಸನ್ನಿವೇಶ. ಇಂಥ ಸಂದರ್ಭದಲ್ಲಿ ನಮ್ಮ ಸಂಸದರು ಹೇಗೆ ಸ್ಪಂದಿಸಿದರು? ಜನರಿಗೆ ಹೇಗೆ ನೆರವಾದರು ಎಂಬುದರ ಕುರಿತು ವಿಕ ರಿಯಾಲಿಟಿ ಚೆಕ್ ನಡೆಸಿ ಸಂಸದರ ಸಾಧನೆಯನ್ನು ಪರಿಗಣಿಸಿ ಉತ್ತಮ, ಸಾಧಾರಣ, ಕಳಪೆಯೆನ್ನುವ ಗ್ರೇಡ್ ನೀಡಿದೆ.

ಉತ್ತಮ: 

-ನಾರಾಯಣ ಸ್ವಾಮಿ ದಾಸೋಹ
ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಅಧಿಕಾರಿಗಳ ಜತೆ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಸ್ಯಾನಿಟೈಸರ್, ಮಾಸ್ಕ್ ವಿತರಿಸಿದ್ದಾರೆ. ಬಡವರು, ನಿರ್ಗತಿಕರ ಹಸಿವು ನೀಗಿಸಲು ಚಿತ್ರದುರ್ಗದ ಗುರುಭವನದ ಆವರಣದಲ್ಲಿಏ.20ರಿಂದ ತಮ್ಮ ಸ್ವಂತ ಖರ್ಚಿನಲ್ಲಿ ದಾಸೋಹ ಏರ್ಪಡಿಸಿದ್ದಾರೆ.

-ವೈದ್ಯರಾಗಿರುವ ಜಾಧವ್
ಸ್ವತಃ ವೈದ್ಯರಾಗಿರುವ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಆಹಾರ ಕಿಟ್‌ಗಳನ್ನು ಹಂಚುತ್ತಿದ್ದಾರೆ. ಕಲಬುರಗಿಯಲ್ಲಿ ಕೊರೊನಾಗೆ ಮೊದಲ ಸಾವು ಸಂಭವಿಸಿದ ತಕ್ಷಣ ಜಿಲ್ಲೆಯಲ್ಲೂ ಪ್ರಯೋಗಾಲಯ ಆರಂಭಕ್ಕೆ ಶ್ರಮಿಸಿದ್ದಾರೆ.

– ಅಂಗಡಿ ಪಾಸ್
ಬೆಳಗಾವಿ ಸಂಸದ, ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಕೊರೊನಾ ಪಾಸಿಟಿವ್ ಬಂದಿರುವ ಗ್ರಾಮಗಳಿಗೂ ಭೇಟಿ ನೀಡಿದ್ದಾರೆ. ಅಲ್ಪಸಂಖ್ಯಾತರಿಗೆ ಭರವಸೆ ತುಂಬಿದ್ದಾರೆ. ರೈತರು ಹಾಗೂ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಯತ್ನಿಸಿದ್ದಾರೆ.

– ಕಟೀಲ್ ವಾರ್ ರೂಮ್
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಆರಂಭದಲ್ಲೇ ಕೊರೊನಾ ಬಾಧಿತರ ಸಮಸ್ಯೆಗಳಿಗೆ ಸ್ಪಂದಿಸಲು ಮಂಗಳೂರಿನ ತಮ್ಮ ಕಚೇರಿಯಲ್ಲಿ ವಾರ್ ರೂಮ್ ಆರಂಭಿಸಲು ಸೂಚಿಸಿದ್ದರು. ಹಸಿದವರಿಗೆ ಊಟ, ಆಹಾರ ಕಿಟ್, ಆರೋಗ್ಯ ಸ್ಪಂದನೆ, ಆ್ಯಂಬುಲೆನ್ಸ್ ಪೂರೈಕೆಗೆ ಶ್ರಮಿಸುತ್ತಿದ್ದಾರೆ. ತುರ್ತು ಪ್ರಕರಣಗಳಲ್ಲಿ ಪಾಸ್ ವಿತರಣೆಗೂ ಸ್ಪಂದಿಸುತ್ತಿದ್ದಾರೆ.

– ದಿಲ್ಲಿಯಲ್ಲಿದ್ದುಕೊಂಡೇ ಕೆಲಸ
ಹಾವೇರಿ ಸಂಸದ ಶಿವಕುಮಾರ ಉದಾಸಿ ದಿಲ್ಲಿಯಲ್ಲಿ ಲಾಕ್ ಆಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಗಂಭೀರ ಪರಿಸ್ಥಿತಿ ಇಲ್ಲ. ಆದರೂ ಬಡವರಿಗೆ, ವಲಸೆ ಕಾರ್ಮಿಕರಿಗೆ ಫುಡ್ ಕಿಟ್, ಸ್ಯಾನಿಟೈಸರ್, ಮಾಸ್ಕ್ ಹಾಗೂ ನಿತ್ಯದ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ.

– ಭಗವಂತನ ವರ ಇನ್ನೂ ಬೇಕು
ಬೀದರ್ ಸಂಸದ ಭಗವಂತ ಖೂಬಾ ಅವರು ಅಧಿಕಾರಿಗಳಿಗೆ ಎಚ್ಚರಿಸಿ, ಜಿಲ್ಲೆಯ ಜನರ ಬೆನ್ನಿಗೆ ನಿಲ್ಲುತ್ತಿದ್ದಾರೆ. ಕಂಟೈನ್ಮೆಂಟ್ ಪ್ರದೇಶಕ್ಕೆ ಜನರಿಗೆ ತರಕಾರಿ, ಹಣ್ಣು, ಹಂಪಲು ತಲುಪಿಸಲು ಪಾಸ್‌ಗಳನ್ನು ಕೊಡಿಸಿದ್ದಾರೆ. ಕೊರೊನಾ ವಾರಿಯರ್ಸ್‌ಗೆ ಪತ್ರ ಬರೆದು ಉತ್ತೇಜಿಸಿದ್ದಾರೆ.

– ಬೆಳೆಗಾರರಿಗೆ ಆಪ್ತ ಡಿಕೆಸು
ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಪ್ರತಿ ನಿತ್ಯ ರೈತರ ತೋಟಕ್ಕೆ ತೆರಳಿ ಸಂಕಷ್ಟವನ್ನು ಆಲಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಯನ್ನು ಡಿಕೆಶಿ ಟ್ರಸ್ಟ್ ಮುಖಾಂತರ ಮಾರುಕಟ್ಟೆ ದರದಲ್ಲಿ ಖರೀದಿಸುತ್ತಿರುವ ಅವರು, ಅದನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.

– ಉದಾರ ನೆರವು
ಧಾರವಾಡ ಸಂಸದ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಅವರು ಲಾಕ್‌ಡೌನ್‌ ಜಾರಿಯಾದಾಗಿನಿಂದ ದಿಲ್ಲಿಯಲ್ಲಿ ಇದ್ದಾರೆ. ಅದರೂ ಅವರ ನೇತೃತ್ವದ ಕ್ಷಮತಾ ಸಂಸ್ಥೆಯಿಂದ ಬಡವರಿಗೆ ನಿರ್ಗತಿಕರಿಗೆ, ವಲಸೆ ಬಂದ ಕಾರ್ಮಿಕರಿಗೆ ಅಕ್ಕಿ, ಗೋಧಿ ಹಿಟ್ಟು, ಎಣ್ಣೆ, ತೊಗರಿ ಬೇಳೆ, ಸಕ್ಕರೆ ಸೇರಿದ ಅಹಾರ ಕಿಟ್ ವಿತರಣೆ ಮಾಡಿಸಿದ್ದಾರೆ. ಅಲ್ಲದೇ ಅದೇ ಸಂಸ್ಥೆಯಿಂದ ಸಹಸ್ರಾರು ಮಾಸ್ಕ್ ತಯಾರಿಸಿ ಉಚಿತವಾಗಿ ನೀಡುತ್ತಿದ್ದಾರೆ.

– 14 ದಿನಗಳ ನಂತರ ಸಕ್ರಿಯ
ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅಮೆರಿಕದಿಂದ ಆಗಮಿಸಿದ್ದ ಇವರ ಪುತ್ರಿ ಮತ್ತು ತಮ್ಮನ ಮಗನಿಗೆ ಕೊರೊನಾ ಪಾಸಿಟಿವ್ ಇದ್ದಿದ್ದರಿಂದ ತಾವು ಕೂಡ 14 ದಿನ ಹೋಂ ಕ್ವಾರಂಟೈನ್‌ನಲ್ಲಿದ್ದರು. ಆ ನಂತರ ಇವರು ಸಕ್ರಿಯರಾಗಿದ್ದಾರೆ.

– ರೈತರಿಗೆ ಮುನಿಸ್ವಾಮಿ ಅಭಯ
ಕೋಲಾರ ಸಂಸದ ಎಸ್. ಮುನಿಸ್ವಾಮಿ ಜಿಲ್ಲೆಯ ರೈತರ ನೆರವಿಗೆ ನಿಂತಿದ್ದು, ಸಂಕಷ್ಟದಲ್ಲಿರುವ ಕೃಷಿಕರ ಕೈಹಿಡಿದಿದ್ದಾರೆ. ರೈತರ ತೋಟಗಳಿಗೆ ಹೋಗಿ ತಮ್ಮ ಸ್ವಂತ ಹಣದಲ್ಲಿ ರೈತರ ಬೆಳೆಗಳನ್ನು ಖರೀದಿಸುತ್ತಿದ್ದಾರೆ. ಇದನ್ನು ಬಡ ಕುಟುಂಬಗಳಿಗೆ ಹಂಚುತ್ತಿದ್ದಾರೆ. ಸಾವಿರಾರು ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಪಡಿತರ ಮತ್ತು ಇತರ ಅಗತ್ಯ ದಿನಸಿ ವಸ್ತುಗಳನ್ನು ದೊರಕಿಸಿಕೊಡುವಲ್ಲೂ ಕ್ರಿಯಾಶೀಲರಾಗಿದ್ದಾರೆ.

– ಕೆಲಸದಲ್ಲಿ ಪ್ರತಾಪ
ಮೈಸೂರು ಸಂಸದ ಪ್ರತಾಪ್ ಸಿಂಹ ಕೊರೊನಾ ಸಂಕಷ್ಟ ಕಾಲದಲ್ಲಿ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ವಿಶೇಷವಾಗಿ ಕೇರಳ ಗಡಿಯನ್ನು ಮುಚ್ಚಿಸುವಲ್ಲಿ ಹಾಗೂ ನಂಜನಗೂಡು ಸೀಲ್‌ಡೌನ್‌ ಮಾಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಮೈಸೂರಿನಲ್ಲಿ ನಿತ್ಯ ಸಂಚರಿಸುತ್ತಿದ್ದಾರೆ. ಮೈಸೂರಿಗೆ ಆಗಮಿಸುವ ಎಲ್ಲಾ ಸಚಿವರೊಂದಿಗೆ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಬಡವರ ಮನೆ ಬಾಗಿಲಿಗೆ ಆಹಾರ ಇಲಾಖೆ ಹಾಗೂ ನಗರಪಾಲಿಕೆಯಿಂದ ಪಡಿತರ ವಿತರಣೆ ಮಾಡಿಸುತ್ತಿದ್ದಾರೆ. ಕರೆ ಮಾಡಿದವರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ.

– ಪ್ರಜ್ವಲ್ ಬ್ರಿಗೇಡ್
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮನೆಯಲ್ಲಿ ಕೂರದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಉಸ್ತುವಾರಿ ಸಚಿವ ಮಾಧುಸ್ವಾಮಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಸಮಸ್ಯೆ ವಿವರಿಸಿದ್ದಾರೆ. ಪ್ರಜ್ವಲ್ ಬ್ರಿಗೇಡ್ ಹೆಸರಿನಲ್ಲಿ ಯುವಕರ ತಂಡ ಕಟ್ಟಿಕೊಂಡು ಬಡವರಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ನೀಡಿದ್ದಾರೆ. ಸಂಘ, ಸಂಸ್ಥೆಗಳು ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಚಿತ ಆಹಾರ ಮತ್ತಿತರ ಪದಾರ್ಥಗಳನ್ನು ವಿತರಿಸಲು ಪ್ರೇರಣೆ ನೀಡುತ್ತಿದ್ದಾರೆ.

– ಸ್ವಂತ ಹಣದಿಂದ ಜನರಿಗೆ ನೆರವು
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ವಾರದ ಹಿಂದಷ್ಟೇ ಮಂಡ್ಯಕ್ಕೆ ಭೇಟಿ ನೀಡಿ ಕೊರೊನಾ ನಿಯಂತ್ರಣ ಸಂಬಂಧ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇದೇ ವೇಳೆ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲ್ಪಟ್ಟಿರುವ ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆ ಹಾಗೂ ಮಳವಳ್ಳಿ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರ ನಡುವೆ ತಮ್ಮ ಸ್ವಂತ ಹಣದಿಂದ ಒಂದಷ್ಟು ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಜನರಿಗೆ ತಮ್ಮ ಕಾರ್ಯಕರ್ತರ ಮೂಲಕ ವಿತರಣೆ ಮಾಡಿಸಿದ್ದಾರೆ.

– ರಾಘವೇಂದ್ರ ಪವರ್
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಕೊರೊನಾ ಲಾಕ್‌ಡೌನ್‌ ದಿನದಿಂದಲೂ ಕ್ಷೇತ್ರದಲ್ಲಿ ಚಟುವಟಿಕೆಯಿಂದ ಓಡಾಡುತ್ತಿದ್ದಾರೆ. ತಂದೆಯ ವರ್ಚಸ್ಸಿನಿಂದ ಜಿಲ್ಲೆಯ ಸಮಸ್ಯೆಗಳಿಗೆ ಬಹಳ ಬೇಗ ಪರಿಹಾರ ಹುಡುಕುತ್ತಿದ್ದಾರೆ. ಬಡವರು, ಕೂಲಿ ಕಾರ್ಮಿಕರಿಗೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ದಿನಸಿ ಕಿಟ್ಗಳನ್ನು ವಿತರಿಸುವುದು, ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ತಮ್ಮ ಬಳಿ ಬಂದವರಿಗೆ ನೆರವಿನ ಖಾತ್ರಿ ನೀಡಿದ್ದಾರೆ.

– ಮಾಸದ ನಗು
ಬೆಂಗಳೂರು ಉತ್ತರ ಸಂಸದ, ಸಚಿವ ಡಿ.ವಿ.ಸದಾನಂದಗೌಡ ಮಾ.23ರಿಂದ ದಿಲ್ಲಿಯಲ್ಲೇ ಬೀಡುಬಿಟ್ಟಿದ್ದು, ಅಲ್ಲಿಂದಲೇ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದಾರೆ. ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ ಕ್ಷೇತ್ರದ ಕಾರ್ಯಗಳ ಮೇಲೆ ನಿಗಾ ಇಟ್ಟಿದ್ದಾರೆ. ಸದಾನಂದಗೌಡರು ಪೋಷಕರಾಗಿರುವ ‘ಸದಾ ಸ್ಮಿತ’ ಟ್ರಸ್ಟ್ ಕೋವಿಡ್-19ಗೆ ಸಂಬಂಧಿಸಿದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

– ಬಡವರ ಬಂಧು
ಬೆಂಗಳೂರು ಸೆಂಟ್ರಲ್ ಸದಸ್ಯ ಪಿ.ಸಿ. ಮೋಹನ್ ಅವರು ಲಾಕ್‌ಡೌನ್‌ ದಿನದಿಂದಲೇ ತಮ್ಮ ಪಕ್ಷ ದ ಕಾರ್ಯ ಕರ್ತರ ಜತೆಗೂಡಿ ಜನರ ನೆರವಿಗೆ ಟೊಂಕ ಕಟ್ಟಿದ್ದಾರೆ. ದೂರವಾಣಿ ಕರೆ ಮಾಡಿದವರಿಗೆ ದಿನಸಿ ಕಿಟ್, ಆಹಾರ ಧಾನ್ಯ, ಔಷಧ ನೀಡುತ್ತಿದ್ದಾರೆ.

– ಪ್ರಜ್ವಲಿಸುತ್ತಿರುವ ಕೆಲಸಗಳು
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಎಂಪಿ ಟಾಸ್ಕ್ ಫೋರ್ಸ್ ರಚಿಸಿದ್ದಾರೆ. ಇದರಡಿ 4500 ಕಾರ್ಯಕರ್ತರನ್ನು ಬಳಸಿಕೊಂಡು 150 ಗುಂಪುಗಳಾಗಿ ವಿಂಗಡಿಸಿ ಅವರನ್ನು ಆಯಾ ವಾಟ್ಸ್ಯಾಪ್ ಗ್ರೂಪ್‌ಗೆ ಸೇರಿಸಲಾಗಿದೆ. ತುರ್ತು ಅಗತ್ಯ ಇರುವವರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ.

– ಸಾಧಾರಣ ಸಂಸದರು-

– ಶೋಭಾಕ್ಕ ಉಡುಪಿಗೆ ಅಪರೂಪ
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೊರೊನಾ ಲಾಕ್‌ಡೌನ್‌ಗೂ ಹಿಂದಿನಿಂದಲೂ ತಮ್ಮ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಈ ಭಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಅಕ್ಕಿ ಹಾಗೂ ಬೇಳೆ, ವಿತರಿಸಿದ್ದಾರೆ. ಈಗ ಅವರು ಬೆಂಗಳೂರಿನಲ್ಲಿ ಹೆಚ್ಚು ಸಕ್ರಿಯರು.

– ಕರಡಿ ಸ್ಪಂದನ
ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಕ್ಷೇತ್ರಾದ್ಯಂತ ಸಂಚರಿಸುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಸಭೆ, ಅಕಾಲಿಕ ಮಳೆಯಿಂದ ಹಾಳಾದ ಜಮೀನುಗಳಿಗೆ ಭೇಟಿ, ಬಡವರಿಗೆ ಆಹಾರ ಕಿಟ್ ವಿತರಣೆ, ಮಾಸ್ಕ್ ವಿತರಣೆ ಮಾಡಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

– ಕಳಪೆ ಸಂಸದರು-
– ಲಾಕ್‌ಡೌನ್‌ ಪಾಲಿಸಿ
ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಅವರು ಒಮ್ಮೆ ಮಾತ್ರ ಸಭೆ ನಡೆಸಿ ಹೋದವರು ಮತ್ತೆ ಕ್ಷೇತ್ರದ ಕಡೆ ಸುಳಿದಿಲ್ಲ. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯಲ್ಲೂ ಕಾಣಿಸಿಕೊಳ್ಳದೆ ಮನೆಯಲ್ಲೇ ಲಾಕ್ ಆಗಿದ್ದಾರೆ. ಈ ಕುರಿತು ಜನರಲ್ಲಿ ಅಸಹನೆ ಇದೆ.

– ಹೊರಗಡೆ ಕಾಣದ ಗದ್ದಿಗೌಡರ
ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಅವರು ಕೊರೊನಾ ಮಣಿಸಲು ಯೋಧರಂತೆ ಕಾರ್ಯ ನಿರ್ವಹಿಸಿಲ್ಲ. ಮೂರ್ನಾಲ್ಕು ಸಭೆಗಳಲ್ಲಿ ಪಾಲ್ಗೊಂಡಿದ್ದರು. ಬಾದಾಮಿಯಲ್ಲಿ ಪಿಪಿಇ ಕಿಟ್ ವಿತರಣೆ ಸಂದರ್ಭದಲ್ಲಿ ಒಮ್ಮೆ ಕಾಣಿಸಿಕೊಂಡಿದ್ದು ಬಿಟ್ಟರೆ ಉಳಿದ ಕೆಲಸಗಳೇನೂ ಇಲ್ಲ.

– ಮನೆಯೇ ಮಂತ್ರಾಲಯ
ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೆರೆಯ ಸ್ವಗೃಹದಲ್ಲಿ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದಾರೆ. ಜಿಲ್ಲಾ ಕೇಂದ್ರಕ್ಕೆ ಸಚಿವರು ಬಂದ ಸಂದರ್ಭದಲ್ಲಿ ಮಾತ್ರ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

– ವಿಶೇಷ ಏನೂ ಇಲ್ಲಣ್ಣ
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಕ್ಷೇತ್ರದಲ್ಲಿ ಕೆಲವು ಕಡೆ ಓಡಾಡುತ್ತಿದ್ದಾರೆ. ಆದರೆ, ಕೊರೊನಾ ಸೋಂಕಿತ ಪ್ರಕರಣಗಳು ಇರುವ ಕಡೆ ವಿಶೇಷ ಚಟುವಟಿಕೆ ತೋರಿಸಿಲ್ಲ ಎಂಬ ಆರೋಪಗಳಿವೆ. ಕೊರೊನಾ ಪಾಸಿಟಿವ್ ಇರುವ ಕುಡಚಿ ಪಟ್ಟಣಕ್ಕೆ ಬಂದು ಹೋಗಿದ್ದರು.

– ದೀಪ ಬೆಳಗಿದ್ದೇ ಸಾಧನೆ
ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಲಾಕ್‌ಡೌನ್‌ ಘೋಷಣೆಯಾದ ನಂತರದಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ತಮ್ಮ ಮನೆಯಲ್ಲಿ ದೀಪ ಬೆಳಗಿದ ಫೋಟೊ ವಾಟ್ಸ್ ಆ್ಯಪ್ಗೆ ಕಳುಹಿಸಿದ್ದರು. ಆಧಿನಂತರ ಇವರನ್ನು ಹೊರಗಡೆ ಯಾರೂ ಕಂಡಿಧಿಲ್ಲ.

– ಅನಾರೋಗ್ಯವೇ ಅಡ್ಡಿ-
– ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ
– ತುಮಕೂರು ಸಂಸದ ಜಿ ಎಸ್ ಬಸವರಾಜು
– ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್
– ಚಾಮರಾನಗರ ಸಂಸದ ವಿ ಶ್ರೀನಿವಾಸ ಪ್ರಸಾದ್

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top