ಮೋದಿಗೆ ಹೇಳಿದ ಮಾತನ್ನು ಸಿದ್ರಾಮಯ್ಯ ಕೇಳಿಸಿಕೊಳ್ತಾರಾ?

ಮಾರುಕಟ್ಟೆಯಲ್ಲಿ ನೂರು ರೂಪಾಯಿ ವಸ್ತು ಕೊಳ್ಳುವಾಗ ಗ್ಯಾರಂಟಿ ಕೇಳುವ ನಾವು, ಸರ್ಕಾರ ಹಮ್ಮಿಕೊಳ್ಳುವ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಯಾಕೆ ಗ್ಯಾರಂಟಿ ಕೇಳುತ್ತಿಲ್ಲ…

 siddu_mwn

ಧೋರಣೆಗಳು ಹೇಗೆ, ಎಷ್ಟು ಬೇಗ ಬದಲಾಗುತ್ತವೆ ನೋಡಿ. ಏಪ್ರಿಲ್ ತಿಂಗಳ ಆರಂಭ ಅದು. ಆಗಷ್ಟೇ ಚುನಾವಣಾ ಕಾವು ಚಟಪಟಗುಡುತ್ತಿತ್ತು. ಲೋಕಸಭಾ ಚುನಾವಣೆ ಪಡೆದುಕೊಳ್ಳುತ್ತಿರುವ ತಿರುವುಗಳ ಕುರಿತು `ಟೈಮ್’ ಮ್ಯಾಗಜಿನ್‍ನಲ್ಲಿ ಪ್ರಧಾನ ವರದಿ ಪ್ರಕಟವಾಗಿತ್ತು. `ವಾಟ್ ಇಂಡಿಯಾ ವಾಂಟ್ಸ್’ ಅನ್ನುವುದು ಅದರ ತಲೆಬರಹ. `ಹತ್ತು ವರ್ಷ ದೇಶ ಆಳಿದ ಕಾಂಗ್ರೆಸ್ ಪಕ್ಷದ ನೀರಸ ಪ್ರಚಾರ ಮತ್ತು ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತಿರುವ ವಿಭಜಕ ಶಕ್ತಿ ಮೋದಿ ನಡುವಿನ ಸಮರದಲ್ಲಿ ಭಾರತೀಯರು ಏನನ್ನು ನಿರೀಕ್ಷಿಸುತ್ತಾರೆ’ಎಂದು ಆ ವರದಿಯಲ್ಲಿ ವಿಶ್ಲೇಷಿಸಲಾಗಿತ್ತು. ಲೇಖಕಿ ಶೋಭಾ ಡೇಯಿಂದ ಹಿಡಿದು, ನಮ್ಮ ರಾಮಚಂದ್ರ ಗುಹಾ ಅವರವರೆಗೆ ಹಲವು ಖ್ಯಾತನಾಮರು ನೀಡಿದ ಅಭಿಪ್ರಾಯಗಳೇ ಆ ವರದಿಗೆ ಆಧಾರ. ಚುನಾವಣಾ ಪ್ರಚಾರದಲ್ಲಿ ಮೋದಿ ಪಾತ್ರ ಮತ್ತು ಅದರ ಸಂಭಾವ್ಯ ಪರಿಣಾಮಗಳ ಕುರಿತು ಆ ವರದಿಯಲ್ಲಿ ಪ್ರಸ್ತಾಪ ಮಾಡಿರಲಿಲ್ಲ. ನೇರವಾಗಿ ಹೇಳುವುದಾದರೆ ಮೋದಿ ಮತ್ತು ಬಿಜೆಪಿ ವಿಷಯದಲ್ಲಿ ಒಂದೇ ಒಂದು ಪೂರಕ ಅಂಶ ಆ ವರದಿಯಲ್ಲಿರಲಿಲ್ಲ.

ಈಗ ಅದೇ `ಟೈಮ್’ ಮ್ಯಾಗಜಿನ್‍ನ ಜೂನ್ ತಿಂಗಳ ಸಂಚಿಕೆ ಮಾರುಕಟ್ಟೆಗೆ ಬಂದಿದೆ. ಅದರಲ್ಲೇನಿದೆ ಗೊತ್ತಾ? ಮೋದಿ ನವಭಾರತದ ಹೊಸ ಭರವಸೆ ಅಂತ ಮುಖಪುಟದಲ್ಲಿ ಚಿತ್ರಿಸಿದೆ. ನೂರಿಪ್ಪತ್ತು ಕೋಟಿ ಜನರು ಮೋದಿಯ ಮುಂದಿನ ನಡೆಗಾಗಿ ಕಾಯುತ್ತಿದ್ದಾರೆ, ಮೋದಿ ನಾಯಕತ್ವವನ್ನು ಬೆರಗು, ಭಯ ಮತ್ತು ಹೊಸ ನಿರೀಕ್ಷೆಗಳೊಂದಿಗೆ ಎದುರು ನೋಡುತ್ತಿದ್ದಾರೆಂದು ಹೇಳುತ್ತ, ಅವರ ಮುಂದಿರುವ ಸವಾಲುಗಳ ಪಟ್ಟಿಯನ್ನೇ ಮುಂದಿಡಲಾಗಿದೆ. ಇದು ಒಂದೇ ತಿಂಗಳಲ್ಲಿ ಆಗಿರುವ ಬದಲಾವಣೆಯ ಒಂದು ಉದಾಹರಣೆ ಅಷ್ಟೆ.

ನಮ್ಮ ದೇಶದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಾಧ್ಯಮಗಳೂ ಹೇಗೆ ಮೋದಿ ನಡೆಯ ಮೇಲೆ ಕಣ್ಣಿಟ್ಟಿವೆ ಎಂಬುದನ್ನು ಹೇಳುವುದಕ್ಕಾಗಿ `ಟೈಮ್’ ವರದಿಯ ಉಲ್ಲೇಖ ಮಾಡಬೇಕಾಯಿತು. ಇಲ್ಲಿ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು, ಸಲಹೆಗಾರರು ಒಂದು ಸೂಕ್ಷ್ಮ ಸಂಗತಿಯನ್ನು ಗಮನಿಸಬೇಕು. ಯುಪಿಎ ಸರ್ಕಾರ ಹತ್ತು ವರ್ಷ ಗಡದ್ದಾಗಿ ನಿದ್ರೆಮಾಡಿದ್ದನ್ನು ಎಲ್ಲರೂ ಸಹಿಸಿಕೊಂಡಿರಬಹುದು. ಆದರೆ ಮೋದಿ ಸರ್ಕಾರದ ಒಂದು ಚಿಕ್ಕ ತೂಕಡಿಕೆಯನ್ನೂ ಸಹಿಸಿಕೊಳ್ಳಲು ಯಾರೊಬ್ಬರೂ ತಯಾರಿಲ್ಲ. ಮೋದಿ ಎಲ್ಲಿ ಎಡವುತ್ತಾರೆ, ಹೇಗೆ ಏಗುತ್ತಾರೆಂಬುದನ್ನು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಇಡೀ ಜಗತ್ತು ಗಮನಿಸುತ್ತಿದೆ. ಒಂದು ರೀತಿಯಲ್ಲಿ ಇಂಥ ಕಣ್ಗಾವಲು ಒಳ್ಳೆಯದೇ ಅಲ್ಲವೇ?

ಮೋದಿ ಸರ್ಕಾರದ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಅದಕ್ಕೆ ಕಾರಣ ಹಲವು. ನಿರೀಕ್ಷೆ ಕಿಂಚಿತ್ ಹುಸಿಯಾದರೂ ಉಬ್ಬಿರುವ ಬಲೂನು ಒಡೆದುಹೋದೀತು. ಹಾಗಾಗಬಾರದು ಅನ್ನುವುದಾದರೆ ಕೆಲ ವಿಚಾರಗಳನ್ನು ಮೋದಿ ಸರ್ಕಾರ ಕೇಳಿಸಿಕೊಳ್ಳಲೇಬೇಕು.

ಮೊದಲ ಸವಾಲು ಆಂತರಿಕ ಭದ್ರತೆಯದ್ದು. ಮೋದಿ ಪ್ರಮಾಣಕ್ಕೆ ನವಾಜ್ ಷರೀಫ್ ಬಂದು ಕೈಕುಲುಕಿದ ಮಾತ್ರಕ್ಕೆ ಪಾಕಿಸ್ತಾನ ನಮ್ಮ ಸ್ನೇಹಿತ ಅನ್ನುವಹಾಗಿಲ್ಲ. ಕಾರ್ಗಿಲ್ ಅತಿಕ್ರಮಣ ನಡೆದದ್ದು ದೆಹಲಿ-ಲಾಹೋರ್ ಬಸ್ ಸಂಚಾರದ ಒಡಂಬಡಿಕೆಯ ಬೆನ್ನಲ್ಲೇ ಅಲ್ಲವೇ? ಮುಖ್ಯವಾಗಿ ಜಮಾತ್ ಉದ್-ದವಾದ ಮುಖ್ಯಸ್ಥ ಹಫೀಜ್ ಸಯೀದ್, ಪಾತಕಿ ದಾವೂದ್ ಇಬ್ರಾಹಿಂ, ಐಎಸ್‍ಐನ ಮಾಜಿ ಮುಖ್ಯಸ್ಥ ಮಿಹಿರ್ ಗುಲ್ ಇಡೀ ಜಿಹಾದ್ ಉಗ್ರರನ್ನು ಒಂದುಗೂಡಿಸಿ ಭಾರತದ ವಿರುದ್ಧ ಟೋಳಿ ಕಟ್ಟುತ್ತಿದ್ದಾರೆ. ಷರೀಫ್-ಮೋದಿ ದೆಹಲಿಯಲ್ಲಿ ದೋಸ್ತಿ ಮಾತುಕತೆ ನಡೆಸುತ್ತಿದ್ದರೆ, ಅತ್ತ ಲಾಹೋರ್‍ನಲ್ಲಿ ಐಎಸ್‍ಐ ಹೆಡ್‍ಕ್ವಾರ್ಟರ್ಸ್‍ನಿಂದ ಅನತಿ ದೂರದಲ್ಲಿ ಬಹಿರಂಗ ಸಭೆ ನಡೆಸಿ ಭಾರತದ ವಿರುದ್ಧ ಅಂತಿಮ ಜಿಹಾದ್‍ಗಾಗಿ ಅಣಿಯಾಗಿರೆಂದು ಹಫೀಜ್ ಕರೆಕೊಡುತ್ತಿದ್ದ. ಅಷ್ಟೇ ಅಲ್ಲ, ಇನ್ನೊಂದು ಆರು ತಿಂಗಳಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಸಂಪೂರ್ಣವಾಗಿ ಕಾಲುಕೀಳುತ್ತದೆ. ಅಲ್ಲಿಗೆ ಅಫ್ಘಾನ್ ಮತ್ತೊಮ್ಮೆ ತಾಲಿಬಾನಿಗಳ ಕೋಟೆಯಾಗುತ್ತದೆ. ಭಾರತದ ವಿರುದ್ಧ ಕತ್ತಿಮಸೆಯಲು ಹಫೀಜ್ ಮತ್ತು ದಾವೂದ್‍ಗೆ ಇದು ಮತ್ತಷ್ಟು ಅನುಕೂಲ. ಕಂದಹಾರ್ ವಿಮಾನ ಬಿಡಿಸಿಕೊಳ್ಳಲು ವಾಜಪೇಯಿ ಸರ್ಕಾರ ಹಫೀಜ್‍ನನ್ನು ಬಿಟ್ಟುಕೊಟ್ಟು ಎಂಥ ತಪ್ಪು ಮಾಡಿತಲ್ಲವೇ? ಭಯೋತ್ಪಾದಕರ ದಮನದ ವಿಚಾರದಲ್ಲಿ ನಮಗೆ ಅಮೆರಿಕವೇ ಮಾದರಿ. ಅಲ್ಲಿ ಸೆಪ್ಟೆಂಬರ್ ಹನ್ನೊಂದರ ದಾಳಿ ನಡೆದು ಹದಿನಾಲ್ಕು ವರ್ಷಗಳಾಗಿವೆ. ಬಳಿಕ ಒಬ್ಬನೇ ಒಬ್ಬ ಭಯೋತ್ಪಾದಕ ಅಮೆರಿಕದೊಳಕ್ಕೆ ನುಸುಳಲು ಸಾಧ್ಯವಾಗಿದೆಯೇ? ಉಹೂಂ..ಕೇಳಬೇಡಿ. ಅದೇ ಇಲ್ಲಿ…ಎಲ್ಲಿ ಕಾಲಿಟ್ಟಲ್ಲಿ ಬಾಂಬ್ ಸಿಡಿಯುವ ಭೀತಿ. ಇಂಥ ಭಯದ ನೆರಳಿನ ನರಕದಲ್ಲಿ ಜನರು ಇನ್ನೆಷ್ಟು ವರ್ಷ ಬದುಕಬೇಕು. ಭಯೋತ್ಪಾದನೆ ವಿಷಯದಲ್ಲಿ `ಜೀರೋ ಟಾಲರನ್ಸ್’ ಶಪಥ ಮಾಡಿದ್ದೀರಲ್ಲ? ಅದನ್ನು ಆಚರಣೆಗೆ ತನ್ನಿ. ಅದು ಜಿಹಾದಿ ಉಗ್ರರೇ ಇರಲಿ, ಮತ್ತೊಬ್ಬರೇ ಇರಲಿ.

ಎರಡನೆಯದ್ದು ಬಡತನ ನಿರ್ಮೂಲನೆ. ಮೊದಲೇ ಹೇಳುತ್ತೇನೆ, ಬಡತನ ಗುರುತಿಸುವಾಗ ಜಾತಿ ನೋಡಲು ಹೋಗಬೇಡಿ. ಬಡವನ ಬವಣೆಗೆ ಜಾತಿ, ಧರ್ಮ ಯಾವುದೂ ಇರುವುದಿಲ್ಲ. ಹಾಗೇ ಸರ್ಕಾರಗಳನ್ನು ಚುನಾಯಿಸುವ ಪ್ರಕ್ರಿಯೆಯಲ್ಲೂ ಬಡ-ಮಧ್ಯಮ ವರ್ಗದವರ ಪಾಲೇ ದೊಡ್ಡದು. ಅಂಥ ಬಡವರ ದುಃಖ ದುಮ್ಮಾನಗಳಿಗೆ ಹತ್ತಾರು ಮುಖಗಳಿವೆ. ನೂರಾರು ಕಾರಣಗಳಿವೆ. ಮೊದಲು ಬಡ-ಮಧ್ಯಮ ವರ್ಗದವರಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಸುಲಭದಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿ. ಅಲ್ಲಿಗೆ ಈ ದೇಶದ ಅರ್ಧಕ್ಕರ್ಧ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆಯೇ.

ಆ ನಂತರದ್ದು, ಉದ್ಯೋಗ ಸೃಷ್ಟಿಯ ವಿಚಾರ. ನೀವು ಉದ್ಯಮಿಗಳ ಪರ ಅಂತ ಬೊಬ್ಬೆ ಹೊಡೆಯುವವರು ಹೊಡೆಯಲಿ ಬಿಡಿ. ನೀವು ಖಾಸಗೀಕರಣ, ಉದಾರೀಕರಣ, ಔದ್ಯಮೀಕರಣದಿಂದ ಯಾವ ಕಾರಣಕ್ಕೂ ವಿಮುಖರಾಗಬೇಡಿ. ಅದಕ್ಕೆ ಅಗತ್ಯ ನೀತಿನಿರೂಪಣೆ ಮಾಡಿ, ಕಾಲಕಾಲಕ್ಕೆ ನೀತಿಯಲ್ಲಿ ಮಾರ್ಪಾಡು ಮಾಡುವ ಅಧಿಕಾರವನ್ನಷ್ಟೇ ನಿಮ್ಮ ಕೈಲಿ ಇಟ್ಟುಕೊಳ್ಳಿ ಸಾಕು. ಎಷ್ಟು ವೇಗದಲ್ಲಿ ನೀವು ಸರ್ಕಾರಿ ನಿಯಂತ್ರಣವನ್ನು ಕಡಿಮೆ ಮಾಡುತ್ತ ಹೋಗುತ್ತೀರೋ, ಅಷ್ಟು ಬೇಗ ಇಲ್ಲಿ ವಿಕಾಸದ ಹೊಂಗಿರಣ ಬಲಗಾಲಿಟ್ಟು ಒಳಬರುತ್ತದೆ. ಕನಿಷ್ಠಪಕ್ಷ ಇನ್ನು ಹದಿನೈದು ಇಪ್ಪತ್ತು ವರ್ಷಗಳ ನಂತರವಾದರೂ ಅನ್ನಭಾಗ್ಯ ಯೋಜನೆ, ಆಹಾರ ಭದ್ರತಾ ಮಸೂದೆ ಜಾರಿಯ ಜಂಜಾಟ, ಬಡತನ ನಿರ್ಮೂಲನೆಯ ವರಾತ ತಪ್ಪುತ್ತದೆ. ಯೋಚನೆ ಮಾಡಿ ನೋಡಿ.

ನಾಲ್ಕನೆಯದು ಆರೋಗ್ಯ. ದಿನದಿಂದ ದಿನಕ್ಕೆ ಔಷಧ ಎಷ್ಟೊಂದು ದುಬಾರಿಯಾಗುತ್ತಿದೆ ಗೊತ್ತಾ? ದುಬಾರಿ ಚಿಕಿತ್ಸೆ ಸಾಧ್ಯವಾಗದೆ ಸಾವಿಗೆ ಶರಣಾಗುವವರು ಎಷ್ಟು ಮಂದಿ ಗೊತ್ತಾ? ವರ್ಷಕ್ಕೆ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು. ತುತ್ತು ಅನ್ನಕ್ಕೆ ಪರದಾಡುವವರು ದುಬಾರಿ ಔಷಧವನ್ನು ಎಲ್ಲಿಂದ ತಂದಾರು. ಇದಕ್ಕೇನಾದರೂ ಪರಿಹಾರ ಬೇಡವೆ. ಮೊದಲು ಆರೋಗ್ಯ ವಿಮೆ ಕಡ್ಡಾಯ ಮಾಡಿ. ಕೇಂದ್ರ-ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಾದರೂ ಆದೀತು, ಬಡಬಗ್ಗರ ಚಿಕಿತ್ಸೆಗೆ ಸಂಪೂರ್ಣ ನೆರವು ಕೊಡಿ. ದೇಶದ ಕಾರ್ಪಣ್ಯ ಅಷ್ಟರಮಟ್ಟಿಗೆ ದೂರಾಗುತ್ತದೆ.

ಭ್ರಷ್ಟಾಚಾರ ನಿರ್ಮೂಲನೆ ವಿಚಾರ.. ಇದು ಬರೀ ಬಾಯಿ ಮಾತಿನಿಂದ, ತರಾತುರಿಯಲ್ಲಿ ಹುಟ್ಟಿಕೊಳ್ಳುವ ಹೋರಾಟದಿಂದ ರಾತ್ರಿ ಬೆಳಗಾಗುವುದರೊಳಗಾಗಿ ಪರಿಹಾರವಾಗುವ ವ್ಯಾಧಿಯಲ್ಲ. ಲೋಕಾಯುಕ್ತ, ಲೋಕಪಾಲ ಕಾಯ್ದೆಗಳಿಂದಲೂ ಭ್ರಷ್ಟಾಚಾರದ ಸಂಪೂರ್ಣ ನಿವಾರಣೆ ಅಸಾಧ್ಯ. ಮೂಲಭೂತವಾಗಿ ಜನರ ಮಾನಸಿಕತೆಯಲ್ಲಿ ಬದಲಾವಣೆಯಾಗಬೇಕು. ಲಂಚಕೋರರನ್ನು ಪ್ರಶ್ನಿಸುವ ಮನೋಭಾವ ಬೆಳೆಯಬೇಕು. ಇದಕ್ಕೆಲ್ಲ ಸಮಯ ಬೇಕು. ಭ್ರಷ್ಟಾಚಾರದ ಮೂಲ ರಾಜಕಾರಣಿಗಳೇ. ಆ ನಂತರ ಅಧಿಕಾರಿಗಳು, ಕಾರಕೂನರು ಮತ್ತೊಬ್ಬರು. ಅದಕ್ಕಾಗಿ ಮೊದಲು ನಿಮ್ಮ ಮಂತ್ರಿಮಂಡಳದಲ್ಲಿ ಬಿಗಿ ತನ್ನಿ. ಪಾರದರ್ಶಕತೆ ಕಾಯ್ದುಕೊಳ್ಳಿ. ನಿಧಾನಗತಿ ಭೂತವನ್ನು ಒದ್ದೋಡಿಸಿ. ಅದಕ್ಕೆ ಒಗ್ಗಿಕೊಳ್ಳದವರನ್ನು ಮುಲಾಜಿಲ್ಲದೆ ಹೊರಗಟ್ಟಿ. ಅದಕ್ಕಾಗಿಯೇ ನಿಮಗೆ ಮತದಾರರು ಬುದ್ಧಿವಂತಿಕೆಯ ತೀರ್ಪು ಕೊಟ್ಟದ್ದು. ಆಡಳಿತದಲ್ಲಿ ಹೆಚ್ಚೆಚ್ಚು ತಂತ್ರಜ್ಞಾನ ಅಳವಡಿಸಿಕೊಳ್ಳಿ. ಟೆಂಡರ್‍ನಿಂದ ಹಿಡಿದು, ಯೋಜನೆ ಜಾರಿಯವರೆಗೆ ಎಲ್ಲವನ್ನೂ ಗಣಕೀಕರಣ ಮಾಡಿ. ಬೆರಳ ತುದಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಸಿಗುವಂತೆ ನೋಡಿಕೊಳ್ಳಿ. ಮೂರನೆಯ ಪರಿಹಾರ…ಸರ್ಕಾರದ ಕಾಮಗಾರಿಗಳಿಗೆ ಗ್ಯಾರಂಟಿ ಕೊಡಿ. ಮಾರುಕಟ್ಟೆಯಲ್ಲಿ ನೂರು ರೂಪಾಯಿ ವಸ್ತು ಕೊಂಡುಕೊಳ್ಳುವಾಗ ಗ್ಯಾರಂಟಿ ಕೇಳುತ್ತೇವಲ್ಲ, ಸರ್ಕಾರ ಹಮ್ಮಿಕೊಳ್ಳುವ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೂ ಗ್ಯಾರಂಟಿ ಕೇಳಿ. ಸರ್ಕಾರ ಕಟ್ಟಿಸುವ ಮೂತ್ರಿಯಿಂದ ಹಿಡಿದು ಎಲ್ಲದಕ್ಕೂ ಬಾಳಿಕೆ ಗ್ಯಾರಂಟಿ ಫಿಕ್ಸ್ ಮಾಡಿ. ಉಪಯೋಗದ ಅಂದಾಜು ಪಕ್ಕಾ ಆಗದೆ ಯಾವುದೇ ಕಾಮಗಾರಿಗೆ ಮಂಜೂರಾತಿ ಕೊಡಬೇಡಿ. ಅದಕ್ಕೆ ತಪ್ಪಿದರೆ ಸಂಬಂಧಪಟ್ಟ ಅಧಿಕಾರಿ, ಗುತ್ತಿಗೆದಾರನಿಗೆ ಜುಲ್ಮಾನೆ ಹಾಕಲು ಹಿಂದೆಮುಂದೆ ನೋಡಬೇಡಿ. ಇಷ್ಟು ಮಾಡಿದರೆ ಸಾಕು, ಜನರ ದುಡ್ಡು ಅರ್ಧಕ್ಕರ್ಧ ಸದ್ವಿನಿಯೋಗ ಆಗುವುದರಲ್ಲಿ ಅನುಮಾನವೇ ಬೇಡ. ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸು ಕೊರತೆಯ ಕೊರಗೂ ಬಹುಪಾಲು ನೀಗುತ್ತದೆ.

ಜನಸಾಮಾನ್ಯರು ಸರ್ಕಾರದ ಮೇಲೆ ಹಿಡಿಶಾಪ ಹಾಕದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಏನೇ ಮಾಡಿದರೂ ಅಧಿಕಾರಿಗಳ ವಿಳಂಬ ಪ್ರವೃತ್ತಿ, ಉದಾಸೀನ ಧೋರಣೆಗೆ ಕಡಿವಾಣ ಹಾಕುವುದು ಸಾಧ್ಯವಾಗಿಲ್ಲ ಎಂದರೆ ಏನು ಪ್ರಯೋಜನ. ಕೆಳಹಂತದ ಅಧಿಕಾರಿಗಳು ಬಡಬಗ್ಗರ ರಕ್ತ-ಮಾಂಸವನ್ನು ಯಾವ ರೀತಿ ಹೀರುತ್ತಿದ್ದಾರೆಂಬುದನ್ನು ಆಳುವವರು ಅರಿತುಕೊಳ್ಳಬೇಕು. ಸರ್ಕಾರಿ ಕಚೇರಿಗಳಿಗೆ ಬರುವ ಜನರನ್ನು ಕಾಡಿಸುವ, ಒಂದು ಕ್ಷಣದಲ್ಲಿ ಮಾಡಿಕೊಡಬಹುದಾದ ಕೆಲಸಕ್ಕೂ ಹತ್ತಾರುದಿನ ಅಲೆದಾಡಿಸಿ ಪೀಡಿಸುವ, ಮನುಷ್ಯತ್ವದ ಗಂಧವೇ ಇಲ್ಲದವರಂತೆ ವರ್ತಿಸುವ, ಸರ್ಕಾರ ಕೊಡುವ ಅನ್ನದ ಋಣದ ಪರಿವೆಯೂ ಇಲ್ಲದವರಂತೆ ವರ್ತಿಸುವ ಅಧಿಕಾರಿಗಳನ್ನು ಮುಲಾಜಿಲ್ಲದೆ ದಂಡಿಸಲು ತುರ್ತಾಗಿ ಯೋಜನೆ ರೂಪಿಸುವ ಕೆಲಸವಾಗಬೇಕು.

ಇನ್ನೊಂದು ವಿಷ್ಯ..ಇದು ನಿಮಗೂ ಅಪಥ್ಯವಾದೀತು. ಚುನಾವಣಾ ಸುಧಾರಣೆ ವಿಚಾರ. ಚುನಾವಣಾ ರಾಜಕಾರಣಕ್ಕೆ ಕನಿಷ್ಠ ಎಪ್ಪತ್ತರ ವಯೋಮಿತಿಯ ಗೆರೆ ಎಳೆಯಿರಿ. ಚುನಾಯಿತ ಪ್ರತಿನಿಧಿಗೆ ಎರಡು ಅಥವಾ ಮೂರು ಅವಧಿಯ ಮಿತಿಹಾಕಿ. ರಾಜಕೀಯ ಶುದ್ಧೀಕರಣಕ್ಕೆ ಬೇರೆ ಮದ್ದು ಹುಡುಕುವುದು ಬೇಕಿಲ್ಲ. ಅಲ್ಲಿಗೆ ದೇಶದ ಬಹುಪಾಲು ಸಮಸ್ಯೆ ನಿವಾರಣೆ ಆದಂತೆಯೇ. ಅಮೆರಿಕದ ಅಧ್ಯಕ್ಷರಿಗೇ ಸತತ ಎರಡು ಬಾರಿ ಮಾತ್ರ ಆಯ್ಕೆಯಾಗಲು ಅವಕಾಶ ಇರುವಾಗ, ಇಲ್ಲೇಕೆ ಹಾಗಿಲ್ಲ. ಅದರಿಂದ ಆ ದೇಶಕ್ಕೆ ಏನಾದರೂ ಕೊರತೆ ಕಾಡಿದೆಯೇ? ಇಲ್ಲ ತಾನೆ. ಅಂದಮೇಲೆ ಇಲ್ಲೇಕೆ ಒಬ್ಬ ವ್ಯಕ್ತಿ ಕೊನೆಯವರೆಗೂ ಸಂಸದ, ಎಂಎಲ್‍ಎ ಆಗಿರಬೇಕು, ಮಂತ್ರಿಯಾಗಿರಬೇಕು. ಆಲೋಚಿಸಬೇಡವೆ ಮಾನ್ಯ ಮೋದಿಯವರೆ? ಇನ್ನು ಹತ್ತು ವರ್ಷಕ್ಕೆ ನಿಮಗೂ ಎಪ್ಪತ್ಮೂರು ವರ್ಷವಾಗುತ್ತದೆ. ಆರಾಮಾಗಿ ನಿವೃತ್ತಿ ತೆಗೆದುಕೊಂಡು ಅದರಲ್ಲೂ ಮಾದರಿ ಆಗಿಬಿಡಿ. ನಿಮ್ಮ ಹೆಸರು ಚಿರಸ್ಥಾಯಿ ಆಗುತ್ತದೆ.

ಇದೆಲ್ಲ ಮಾಡಬೇಕಾದರೆ ಆಳುವವರಿಗೆ ಒಂದು ಗಟ್ಟಿ ನಿರ್ಧಾರ ಮತ್ತು ಸೂಕ್ಷ್ಮ ಸಂವೇದನೆ ಇರಬೇಕಾಗುತ್ತದೆ. ಅದಕ್ಕೊಂದು ಒಳ್ಳೆಯ ಉದಾಹರಣೆಯಿದೆ. ಮೂರ್ನಾಲ್ಕು ವರ್ಷಗಳ ಹಿಂದಿನ ಘಟನೆ. ಅಮೆರಿಕದ ಗಣ್ಯ ವ್ಯಕ್ತಿ ಕ್ರಿಸ್ ಮೊರ್ಟಿ ಎಂಬುವರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಆಗ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಗೆ ಕರೆದೊಯ್ಯಲಾಯಿತು. ಮಧ್ಯರಾತ್ರಿಯಲ್ಲೇ ತಜ್ಞವೈದ್ಯರು ಅವರ ತಪಾಸಣೆ ಮಾಡಿ, ಔಷಧ ಕೊಟ್ಟು ಬೇರೇನೂ ಅಪಾಯ ಇಲ್ಲ ಅಂತ ಹೇಳಿ ಕಳಿಸಿಕೊಟ್ಟರು. ಅದಕ್ಕೆ ಅವರಿಗೆ ತಗುಲಿದ ವೆಚ್ಚ ಎರಡು ಅಮೆರಿಕನ್ ಡಾಲರ್! ಅಂದರೆ ಅಂದಾಜು ತೊಂಭತ್ತೆರಡು ರೂಪಾಯಿ. ಅದರಿಂದ ಕ್ರಿಸ್ ಅಚ್ಚರಿಗೊಳ್ಳುತ್ತಾರೆ. ಅಮೆರಿಕದಲ್ಲಾದರೆ ಎಷ್ಟೊಂದು ದುಬಾರಿ ವೆಚ್ಚವಾಗುತ್ತಿತ್ತು. ಅದರಲ್ಲೂ ತಜ್ಞ ವೈದ್ಯರ ಸೇವೆ ಕನಸಿನ ಮಾತು. ಇಂಥ ವ್ಯವಸ್ಥೆಯನ್ನು ಅಮೆರಿಕದಲ್ಲೇಕೆ ಮಾಡಬಾರದೆಂದು ಆಲೋಚಿಸಿ, ಅಧ್ಯಕ್ಷ ಒಬಾಮರಿಗೆ ಕ್ರಿಸ್ ಪತ್ರ ಬರೆಯುತ್ತಾರೆ. ಪತ್ರ ಓದಿದ ಒಬಾಮ ತಕ್ಷಣ ಯೆಸ್ ಅಂದುಬಿಡುತ್ತಾರೆ. ಒಬಾಮ ತಮ್ಮ ಬಾಲ್ಯವನ್ನು ಮೆಲುಕುಹಾಕುತ್ತಾರೆ. ಬಡತನವಿತ್ತು, ತಾಯಿಗೆ ಮೆಡಿಕಲ್ ಇನ್ಶೂರೆನ್ಸ್ ಇರಲಿಲ್ಲ. ಆದ್ದರಿಂದ ಆಕೆಗೆ ಸರಿಯಾದ ಚಿಕಿತ್ಸೆ ಕೊಡಿಸಲಾಗದೆ ತೀರಿಕೊಂಡ ನೆನಪನ್ನು ಕ್ರಿಸ್ ಜತೆ ಹಂಚಿಕೊಂಡು ಮರುಗುತ್ತಾರೆ. ಅಮೆರಿಕದಲ್ಲಿ ಆರೋಗ್ಯ ವಿಮೆ ಜಾರಿಗೆ ಒಬಾಮ ಮುಂದಾಗಲು ಕ್ರಿಸ್ ಮೋರ್ಟಿ ಬರೆದ ಪತ್ರವೇ ಕಾರಣವಾಗುತ್ತದೆ. ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯನ್ನು ಅತ್ಯಂತ ಶ್ರದ್ಧೆಯಿಂದ, ಖಾಸಗಿಯವರಿಗೂ ಮಾದರಿಯಾಗುವಂತೆ ಕಟ್ಟಿ ಬೆಳೆಸಿದ ಅದರ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರನ್ನು ಇತ್ತೀಚೆಗೆ ಭೇಟಿಯಾದಾಗ ಮಾತಿನ ಮಧ್ಯೆ ಈ ವಿಚಾರ ಹೇಳಿದರು. ಒಬಾಮ ತೋರಿದ ಇಂಥ ಸೂಕ್ಷ್ಮ ಸಂವೇದನೆಯನ್ನು ನಮ್ಮ ಪ್ರಧಾನಿ, ಮುಖ್ಯಮಂತ್ರಿಗಳಿಂದಲೂ ನಿರೀಕ್ಷೆ ಮಾಡುವುದು ತಪ್ಪೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top