ಮೋದಿ ಸರ್ಕಾರಕ್ಕೆ ಜನರ ನಾಡಿಮಿಡಿತ ಅರ್ಥವಾಗುವುದಿಲ್ಲವೆ?

14-epfo-employees-get-fiveyear-ri-for-fraudulent-withdrawals_020814082504ಕೇಂದ್ರ ಸರ್ಕಾರ ಯಾಕೆ ಹೀಗೆ ಕೆಲವೊಂದು ಮುಖ್ಯ ವಿಷಯಗಳಲ್ಲಿ ವಿವೇಚನಾರಹಿತವಾಗಿ ನಡೆದುಕೊಳ್ಳುತ್ತಿದೆ ಎಂಬ ಚರ್ಚೆಗೆ ಪರಿಚಿತರೊಬ್ಬರು ಮುಂದಿಟ್ಟ ತರ್ಕ ಬಹಳ ಕುತೂಹಲಕರವಾಗಿತ್ತು. ‘ಕಾರಣ ಸರಳ. ಮೋದಿ ಸರ್ಕಾರವೇ ಒಂದು ಕಾರ್ಪೆರೇಟ್ ಕಂಪನಿಯ ರೀತಿಯಲ್ಲಿ ನಡೆಯುತ್ತಿದೆ. ಬಹಳಷ್ಟು ಸಚಿವರು ಅದರಲ್ಲೂ ಆಯಕಟ್ಟಿನ ಖಾತೆಗಳನ್ನು ನಿರ್ವಹಿಸುವ ಮತ್ತು ಸರ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಬಹುತೇಕ ಸಚಿವರು ಜನರಿಂದ ಆಯ್ಕೆಯಾದವರಲ್ಲ. ಜನಸಾಮಾನ್ಯರ ಕಷ್ಟ-ಸುಖ ಅರಿತವರಲ್ಲ. ಎಸಿ ರೂಮಲ್ಲಿ ಕುಳಿತು, ಪವರ್ ಪಾಯಿಂಟ್ ಪ್ರಸೆಂಟೇಶನ್ ಮಾಡುತ್ತ, ನೋಡುತ್ತ ಬೆಳೆದವರು. ಅವರು ಮತ್ತಿನ್ನೇನು ಮಾಡಿಯಾರು? ಅವರದೇ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳುತ್ತ ಹೋದರೆ ಸರ್ಕಾರದ ಬಗ್ಗೆ ಜನರಲ್ಲಿ ಎಂತಹ ಭಾವನೆ ಬೆಳೆದೀತು?’ ಎಂದು ಮರುಪ್ರಶ್ನೆ ಹಾಕಿದರು. ಹಣಕಾಸು ಖಾತೆ ಹೊಂದಿರುವ ಅರುಣ್ ಜೇಟ್ಲಿ, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ನಗರಾಭಿವೃದ್ಧಿ ಮತ್ತು ಬಡತನ ನಿಮೂಲನೆ ಖಾತೆ ನಿರ್ವಹಿಸುತ್ತಿರುವ ವೆಂಕಯ್ಯ ನಾಯ್ಡು, ಇಂಧನ ಖಾತೆಯ ಪೀಯೂಷ್ ಗೋಯೆಲ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಒಂದೊಂದೇ ಉದಾಹರಣೆ ನೋಡುತ್ತ ಹೋಗೋಣ. ಮೊದಲು ಸರ್ಕಾರಕ್ಕೆ ಮುಖಭಂಗ ಆದದ್ದು ಭೂಸ್ವಾಧೀನ ಮಸೂದೆ ವಿಚಾರದಲ್ಲಿ. ಆ ಮಸೂದೆ ಕುರಿತು ತಕರಾರಿಲ್ಲ. ಕೈಗಾರಿಕೆ ಬೆಳೆಯದೇ ಆರ್ಥಿಕತೆ ಬೆಳೆದು ಸದೃಢ ಆಗಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಉದ್ದೇಶಿತ ಭೂಸ್ವಾಧೀನ ಮಸೂದೆ ಜಾರಿಗೊಳ್ಳಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆ ಮಸೂದೆ ವಿಫಲ ಆದದ್ದು, ವಿಪಕ್ಷಗಳಿಗೆ ಅಸ್ತ್ರ ಆದದ್ದು ಎಲ್ಲಿ ಗೊತ್ತೇ? ಮಸೂದೆಯಲ್ಲಿ ಸೇರಿಸಲಾದ ಒಂದು ಪದ ಮತ್ತು ಭಾಷೆಯ ವಿಚಾರದಲ್ಲಿ. ‘ಕೈಗಾರಿಕೆಗಳಿಗೆ ಒದಗಿಸುವ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುವಾಗ ರೈತರ ಪರವಾನಗಿ ಪಡೆಯಬೇಕಿಲ್ಲ’ ಎಂಬ ಒಂದು ಸಾಲು ಇಡೀ ಮಸೂದೆಯನ್ನು ಹಳ್ಳಹಿಡಿಸಿತು. ಆ ಒಂದು ಪದ ದೇಶದ ಕೋಟ್ಯಂತರ ರೈತರ ಸ್ವಾಭಿಮಾನವನ್ನು ಕೆಣಕಿತು. ಇದನ್ನೇ ವಿಪಕ್ಷಗಳು ದಾಳವಾಗಿಸಿಕೊಂಡವು. ದೇಶಾದ್ಯಂತ ರೈತರು ಬೀದಿಗಿಳಿದರು. ಸರ್ಕಾರ ಮಸೂದೆ ಜಾರಿ ಪ್ರಯತ್ನವನ್ನು ಕೈಚೆಲ್ಲಬೇಕಾಗಿ ಬಂತು. ಅದರ ಬದಲು ‘ರೈತರ ಮನವೊಲಿಸಿ ಸ್ವಾಧೀನಪಡಿಸಿಕೊಳ್ಳಲಾಗುವುದು’ ಎಂದು ಮಸೂದೆ ಕರಡಿನಲ್ಲಿ ಬರೆದಿದ್ದರೆ ಇಷ್ಟು ದೊಡ್ಡ ರಾದ್ಧಾಂತ ಆಗುತ್ತಿರಲಿಲ್ಲ. ಇನ್ನು ಈ ಸರ್ಕಾರದ ಅವಧಿಯಲ್ಲಿ ಭೂಸ್ವಾಧೀನ ಮಸೂದೆ ಜಾರಿ ತೀರಾ ಕಷ್ಟ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತ: ರಾಷ್ಟ್ರೀಯ ಉಳಿತಾಯ ಪತ್ರ(ಎನ್ಎಸ್ಸಿ), ಪಿಪಿಎಫ್, ಸುಕನ್ಯಾ ಸಮೃದ್ಧಿ ಇತ್ಯಾದಿ ಸಣ್ಣ ಉಳಿತಾಯದ ಯೋಜನೆಗಳಲ್ಲಿ ಹಣ ತೊಡಗಿಸುವವರು ಯಾರು? ಬಡ ಮಧ್ಯಮ ವರ್ಗದವರು. ಅವರ ಉಳಿಕೆ ಮೇಲಿನ ಬಡ್ಡಿದರ ಕಡಿತದಿಂದ ಮಾಡುವ ಸಾಧನೆಯಾದರೂ ಏನು?

ಪಿಎಫ್ ಹಣ ವಾಪಸಾತಿ ನಿರ್ಬಂಧ(ಪಿಎಫ್ನಲ್ಲಿ ಮಾಲೀಕರ ಪಾಲಿನ ಶೇ.3.6 ಮೊತ್ತ) ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತು. ವಿಶೇಷವಾಗಿ ತಿಂಗಳಿಂದ ಐದರಿಂದ ಹತ್ತು ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುವ ಗಾರ್ವೆಂಟ್ ಫ್ಯಾಕ್ಟರಿ ನೌಕರರು ಹಾಗೂ ಇನ್ನಿತರ ಸಣ್ಣಪುಟ್ಟ ನೌಕರಿದಾರರು ಬೆಂಗಳೂರಿನಲ್ಲಿ ಬೀದಿಗಿಳಿದು ರಣಾಂಗಣವನ್ನೇ ಸೃಷ್ಟಿಸಿದರು. ಅದಕ್ಕೊಂದು ಕಾರಣವಿದೆ. ವಿಶೇಷವಾಗಿ ಗಾರ್ವೆಂಟ್ಸ್ ಇತ್ಯಾದಿಗಳಲ್ಲಿನ ಕಾರ್ವಿುಕರು ಮೂರ್ನಾಲ್ಕು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡುವುದಿಲ್ಲ. ಮೇಲಿಂದ ಮೇಲೆ ಕೆಲಸ ಬದಲಿಸುತ್ತಿರುತ್ತಾರೆ. ಒಂದೇ ಕಡೆ ಕೆಲಸ ಮಾಡುತ್ತೇವೆಂದರೂ ಕಂಪನಿ ಮಾಲೀಕರು ಅವರನ್ನು ಹೆಚ್ಚು ಕಾಲ ಇಟ್ಟುಕೊಳ್ಳಲು ಸಿದ್ಧರಿರುವುದಿಲ್ಲ. ಅಂಥ ಸಂದರ್ಭದಲ್ಲಿ ತಿಂಗಳಿಗೆ ಉಳಿಸುವ ಒಂದೋ ಎರಡೋ ಸಾವಿರ ರೂಪಾಯಿ ಪ್ರಾವಿಡೆಂಟ್ ಫಂಡನ್ನು ಹಿಂಪಡೆಯಲು ಐವತ್ತೆಂಟು ವರ್ಷ ಕಾಯಬೇಕು; ಅದರೊಳಗೆ ಹಿಂಪಡೆಯಲು ಸಾಧ್ಯವಿಲ್ಲ ಎಂದರೆ ಯಾರು ತಾನೆ ಸುಮ್ಮನಿರುತ್ತಾರೆ? ಮುಖ್ಯವಾಗಿ ತಿಂಗಳ ದುಡಿಮೆಯಲ್ಲಿ ಪಕ್ಕಾ ಉಳಿತಾಯ ಖಾತೆಗೆ ಸೇರುವುದು ಪಿಎಫ್ ಹಣ ಮಾತ್ರ. ಐವತ್ತೆಂಟು ವರ್ಷದೊಳಗೇ ಸಾವನ್ನಪ್ಪುವವರೂ ಇರುತ್ತಾರೆ. ವಾಸ್ತವ ಹೀಗಿರುವಾಗ ಪಿಎಫ್ ಹಿಂಪಡೆಯಲು ನಿರ್ಬಂಧ ವಿಧಿಸಿದ್ದಕ್ಕೆ ಸರ್ಕಾರಕ್ಕೆ ಯಾವ ಪರಿ ಮಂಗಳಾರತಿ ಆಯಿತು ಎಂಬುದನ್ನು ಗೊತ್ತೇ ಇದೆ.

ಹಳೇ ವಾಹನ ನಿರ್ಬಂಧ ಸಾಧ್ಯವೇ?: ಕೇಂದ್ರ ಸರ್ಕಾರದ ವಿವೇಚನಾ ರಹಿತ ತೀರ್ವನಕ್ಕೆ ಹೊಸ ಸೇರ್ಪಡೆ ಹದಿನೈದು ವರ್ಷ ತುಂಬಿದ ವಾಹನಗಳ ಪರವಾನಗಿಯನ್ನು ಆಟೋಮ್ಯಾಟಿಕ್ ಆಗಿ ರದ್ದುಮಾಡಬೇಕೆಂಬ ಚಿಂತನೆ. ಈ ತೀರ್ಮಾನ ಜಾರಿಗೆ ಬಂದರೆ ದೇಶದಲ್ಲಿ ಅಲ್ಲೋಲಕಲ್ಲೋಲ ಆಗುವುದು ಗ್ಯಾರಂಟಿ. ಅದಕ್ಕೆ ಕಾರಣಗಳು ಹಲವು:

  • ಈ ನಿಯಮ ಬಂದರೆ ಈಗಿನ ಲೆಕ್ಕಾಚಾರದಂತೆ ಸುಮಾರು 40 ಲಕ್ಷ ವಾಹನಗಳು ಗುಜರಿಗೆ ಸೇರಬೇಕಾಗುತ್ತದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಹೊಸ ವಾಹನಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ನಮ್ಮ ಅಟೋಮೊಬೈಲ್ ವಲಯಕ್ಕೆ ಇಲ್ಲ.
  • ಗುಜರಿಗೆ ಹಾಕುವ ಅಷ್ಟು ದೊಡ್ಡ ಸಂಖ್ಯೆಯ ವಾಹನಗಳನ್ನು ಇಡುವುದು ಎಲ್ಲಿ ಎಂಬ ಹೊಸ ಸಮಸ್ಯೆ ಉದ್ಭವವಾಗಲಿದೆ.
  • 40 ಲಕ್ಷ ವಾಹನಗಳು ಗುಜರಿಗೆ ಹೋದರೆ ಹೊಸದಾಗಿ 20 ಲಕ್ಷ ವಾಹನಗಳ ಖರೀದಿಯೂ ಕಷ್ಟಸಾಧ್ಯ. ಆಗ ಸಾರಿಗೆ ಸಂಚಾರ ಸಮಸ್ಯೆ ಉಲ್ಬಣವಾಗಲಿದೆ.
  • ಹಳೆಯ ವಾಹನಗಳ ಜಾಗದಲ್ಲಿ ಅರ್ಧದಷ್ಟು ಹೊಸ ವಾಹನಗಳು ಬಂದರೂ ಆ ಹೊರೆ ಭರಿಸಲು ವಾಹನ ಮಾಲೀಕರು ಸೇವೆಗೆ ದುಬಾರಿ ದರ ವಿಧಿಸುವುದು ಅನಿವಾರ್ಯ ಆಗಲಿದೆ. ಸೇವಾದರ ಶೇ.2ರಷ್ಟು ಹೆಚ್ಚಿದರೂ ಇಡೀ ಆರ್ಥಿಕ ವಹಿವಾಟಿನ ಸರಪಣಿಗೆ ಹೊಡೆತ ಉಂಟಾಗಲಿದೆ.
  • ಎಲ್ಲದಕ್ಕಿಂತ ಮುಖ್ಯವಾದದ್ದು ಉದ್ಯೋಗದ್ದು. ಅರ್ಹತೆ ಕಳೆದುಕೊಳ್ಳುವ 40 ಲಕ್ಷ ವಾಹನಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಒಂದು ಎರಡು ವಾಹನ ಹೊಂದಿದ ಮಾಲೀಕರದ್ದೇ ಆಗಿರುತ್ತವೆ. ಸಾಮಾನ್ಯವಾಗಿ ಒಂದು ಸರಕು ವಾಹನ ಮೂರರಿಂದ ನಾಲ್ಕು ಮಂದಿಗೆ ಉದ್ಯೋಗ, ಅನ್ನ ಕೊಡುತ್ತದೆ. ಅಂದರೆ 20 ಲಕ್ಷ ವಾಹನಗಳು ಕಡಿಮೆಯಾದರೂ ಅಂದಾಜು ಒಂದರಿಂದ ಒಂದೂ ಕಾಲು ಕೋಟಿ ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲದಂತಾಗುತ್ತದೆ. ಈ ಲೆಕ್ಕಾಚಾರ ಎಸಿ ರೂಮಲ್ಲಿ ಕುಳಿತು ಪವರ್ ಪಾಯಿಂಟ್ ಲೆಕ್ಕಾಚಾರದಲ್ಲೇ ಮುಳುಗುವವರಿಗೆ ಹೇಗೆ ಅರ್ಥವಾಗಬೇಕು ಹೇಳಿ?
  • ಹಳೇ ವಾಹನಗಳಿಂದ ಮಾಲಿನ್ಯ ಉಂಟಾಗುತ್ತದೆ ಎಂಬುದು ವೈಜ್ಞಾನಿಕ ವಾದವಲ್ಲ. ಮಾಲಿನ್ಯ ಉಂಟಾಗುವುದು ನಿರ್ವಹಣೆ ಇಲ್ಲದ, ಕಳಪೆ ಇಂಧನ ಬಳಸುವ ವಾಹನಗಳಿಂದ. ಒಂದೆರಡು ವಾಹನ ಇಟ್ಟುಕೊಂಡು ಹೊಟೆ ಹೊರೆದುಕೊಳ್ಳುವವರು ನಿರ್ವಹಣೆಯನ್ನು ಅಲಕ್ಷಿಸುವುದಿಲ್ಲ, ಕಳಪೆ ಇಂಧನವನ್ನೂ ಬಳಸುವುದಿಲ್ಲ. ಹಾಗೆ ನೋಡಿದರೆ ಸರ್ಕಾರಿ ವಾಹನಗಳೇ ನಿರ್ವಹಣೆ ಇಲ್ಲದೆ ಹೊಗೆ ಉಗುಳುವುದು, ಕಳಪೆ ಇಂಧನ ಬಳಸುವುದು ಜಾಸ್ತಿ ಎಂಬ ಮಾತಿದೆ. ಈ ಸಂಗತಿ ಸರ್ಕಾರಕ್ಕೆ ಅರ್ಥವಾಗುವುದು ಯಾವಾಗ?

ಒಂದು ವಿಷಯವನ್ನು ಇಲ್ಲಿ ಉಲ್ಲೇಖಿಸಬೇಕು. ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಪಕ್ಷದ ನಾಯಕರ ಆಂತರಿಕ ಸಭೆಗಳಲ್ಲಿ, ಬಜೆಟ್ ಸಿದ್ಧತೆಯ ಮೀಟಿಂಗ್ಗಳಲ್ಲಿ ಒಂದು ವಿಷಯವನ್ನು ಯಾವಾಗಲೂ ಪ್ರಸ್ತಾಪಿಸುತ್ತಿದ್ದರಂತೆ. ಅದೆಂದರೆ ‘ಸರ್ಕಾರದ ಯಾವುದೇ ಯೋಜನೆ ಬಡವರ, ರೈತರ ಮತ್ತು ಮಧ್ಯಮ ವರ್ಗದವರ, ನೌಕರಿ ಮಾಡಿ ಬದುಕುವವರ ನೆಮ್ಮದಿಯನ್ನು ಕೆಡಿಸುವಂತಿರಬಾರದು’ ಎಂದು. ಬಿಜೆಪಿಯಲ್ಲಿ ವಾಜಪೇಯಿ ಪ್ರಭಾವ ಇರುವವರೆಗೂ ಪಕ್ಷದ ಚಿಂತನೆ ಮತ್ತು ಸರ್ಕಾರದ ಯೋಜನೆಗಳು ಅದಕ್ಕೆ ಪೂರಕವಾಗಿಯೇ ಇದ್ದವು. ಈಗ ಆಗುತ್ತಿರುವುದೆಲ್ಲ ತದ್ವಿರುದ್ಧ. ಆದರೆ ಪರಿಣಾಮ ಗೊತ್ತಾಗಲು ಹೆಚ್ಚು ಕಾಲ ಹಿಡಿಯಲಿಕ್ಕಿಲ್ಲ. ಈಗಲೇ ಎಚ್ಚೆತ್ತುಕೊಂಡರೆ ಒಳಿತು. ಏನಂತೀರಿ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top