– ಕಾರ್ಯಕರ್ತರನ್ನು ಹುರಿದುಂಬಿಸಿದ ಪ್ರಧಾನಿ
– ಪ್ರಧಾನಿಗೆ ಮೋದಿ, ಅಧ್ಯಕ್ಷ ನಡ್ಡಾಗೆ ರಾಜ್ಯದ ಕೊರೊನಾ ಮಾಹಿತಿ ನೀಡಿದ ರವಿಕುಮಾರ್.
ಹೊಸದಿಲ್ಲಿ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿಜನರ ನೆರವಿಗೆ ಧಾವಿಸಿರುವ ಬಿಜೆಪಿ ಕಾರ್ಯಕರ್ತರ ಗುಣಗಾನ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹೆಚ್ಚಿನ ಸೇವೆಗೆ ಅನುಕೂಲವಾಗುವ ದಿಸೆಯಲ್ಲಿ ಕಾರ್ಯಕರ್ತರಿಗೆ ಸಪ್ತ ಸೂತ್ರಗಳನ್ನು ನೀಡಿದ್ದಾರೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಯಕರ್ತರು ಯಾವ ರೀತಿ ಜನರ ನೆರವಿಗೆ ಧಾವಿಸಿದ್ದಾರೆ ಎಂಬ ಕುರಿತು ‘ಸೇವಾ ಹಿ ಸಂಘಟನಾ ಅಭಿಯಾನ್’ ವರ್ಚುವಲ್ ಸಭೆಯಲ್ಲಿ ಮಾಹಿತಿ ಪಡೆದ ಬಳಿಕ ಪ್ರಧಾನಿ ಅವರು ಹಲವು ಉಪಯುಕ್ತ ಸೇವಾ ಮಾದರಿಗಳನ್ನು ಕಾರ್ಯಕರ್ತರಿಗೆ ನೀಡಿದರು.
ಸೇವೆ, ಸಮತೋಲನ, ಸಂಯಮ, ಸಮನ್ವಯ, ಸಕಾರಾತ್ಮಕತೆ, ಸದ್ಭಾವನೆ ಮತ್ತು ಸಂವಾದ – ಈ ಏಳು ‘ಎಸ್’ಗಳ ಸರಳ ಸೂತ್ರವನ್ನು ಕಾರ್ಯಕರ್ತರಿಗೆ ನೀಡಿ ದರು. ‘‘ಬಿಜೆಪಿ ಬರೀ ಅಧಿಕಾರಕ್ಕಾಗಿ ಜನ್ಮ ತಳೆದ ಪಕ್ಷ ಅಲ್ಲ. ನಮ್ಮ ಸಂಘಟನೆ ಎಂದರೆ ‘ಸೇವೆ’. ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಬೇಕು. ಈ ವೇಳೆ ನಿಮ್ಮ ಸೇವೆಗೆ ಹೆಚ್ಚು ಬೆಲೆ ಇದೆ,’’ ಎಂದರು.
‘‘ಸೇವೆಯ ವಿಷಯದಲ್ಲಿ ತಾರತಮ್ಯ ಇಲ್ಲ. ‘ಸಬ್ ಕಾ ಸಾಥ್’ ನಮ್ಮ ಸಂಘಟನೆಯ ಸದಾಯಶ. ಎಲ್ಲರೂ ಸುಖವಾಗಿರಬೇಕು. ಸರ್ವರಿಗೂ ಒಳಿತಾಗಲಿ ಎನ್ನುವುದು ನಮ್ಮ ಕನಸು. ಅದನ್ನು ಸಾಧಿಸಲು ನಾವು ಪ್ರಯತ್ನಿಸಬೇಕು,’’ ಎಂದು ಪ್ರಧಾನಿ ಕಾರ್ಯಕರ್ತರಿಗೆ ಸಲಹೆ ಮಾಡಿದರು.
‘‘ಅಪಘಾತ ಸಂಭವಿಸಿದಾಗ ಸೇವೆಗೆ ನಿಮಗೊಂದು ಅವಕಾಶ ಸಿಕ್ಕುತ್ತದೆ. ಪ್ರಪಂಚದ ದೃಷ್ಟಿಯಲ್ಲಿ, ನೀವು ಕೊರೊನಾ ಯುಗದಲ್ಲಿ ಕೆಲಸ ಮಾಡುತ್ತಿದ್ದೀರಿ. ಆದರೆ ನನ್ನ ಪ್ರಕಾರ, ನೀವೇ ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿಕೊಳ್ಳುತ್ತಿದ್ದೀರಿ. ನಿಮ್ಮ ಆದರ್ಶಗಳಲ್ಲಿ ನೀವು ನಿಮ್ಮನ್ನು ಖಚಿತಪಡಿಸಿಕೊಳ್ಳುತ್ತಿದ್ದೀರಿ,’’ ಎಂದು ಹುರಿದುಂಬಿಸಿದರು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡರು.
ಸೂತ್ರಗಳು
1. ಸೇವೆ
2. ಸಮತೋಲನ
3. ಸಂಯಮ
4. ಸಮನ್ವಯ
5. ಸಕಾರಾತ್ಮಕತೆ
6. ಸದ್ಭಾವನೆ
7. ಸಂವಾದ
ಪಕ್ಷ-ಸರಕಾರದಿಂದ ವ್ಯವಸ್ಥಿತ ನಿರ್ವಹಣೆ
ವಿಕ ಸುದ್ದಿಲೋಕ ಬೆಂಗಳೂರು.
ಕೊರೊನಾ ನಿಯಂತ್ರಣದಲ್ಲಿ ಪಕ್ಷ ಹಾಗೂ ಸರಕಾರ ಪರಸ್ಪರ ಸಮನ್ವಯತೆಯಿಂದ ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿದೆ. ಯಾವುದೇ ಗೊಂದಲಗಳಿಲ್ಲದೇ ಜನರಿಗೆ ತುರ್ತು ಸ್ಪಂದಿಸುವ ಕಾರ್ಯದಲ್ಲಿ ಎಲ್ಲ ನಾಯಕರೂ ತೊಡಗಿಕೊಂಡಿದ್ದಾರೆ ಎಂದು ಪ್ರಧಾನಿಗೆ ರಾಜ್ಯ ಬಿಜೆಪಿ ಘಟಕ ವಿವರಣೆ ಸಲ್ಲಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆಗೆ ನಡೆದ ‘ಸೇವಾ ಹೀ ಸಂಘಟನ್’ ವರ್ಚುವಲ್ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ವಿವರಣೆ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಉಪಸ್ಥಿತರಿದ್ದರು.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ‘‘ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳಿಗೆ ಸಂಬಂಧಪಟ್ಟಂತೆ ಏಳು ರಾಜ್ಯಗಳಿಂದ ಪ್ರಧಾನಿ ಮೋದಿಯವರು ಇಂದು ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಸರಕಾರ ಹಾಗೂ ಪಕ್ಷ ಒಟ್ಟೊಟ್ಟಿಗೆ ಮಾದರಿಯಾಗಿ ಕೆಲಸ ಮಾಡಿದ ರೀತಿಯನ್ನು ಶ್ಲಾಘಿಸಿದ್ದಾರೆ,’’ಎಂದರು.
‘‘ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇದುವರೆಗೆ 1.5 ಕೋಟಿ ಜನರಿಗೆ ಆಹಾರದ ಪೊಟ್ಟಣ ತಲುಪಿಸಲಾಗಿದೆ. 49 ಲಕ್ಷ ಜನರ ಮನೆಗೆ ರೇಷನ್ ತಲುಪಿಸಲಾಗಿದೆ. 1 ಕೋಟಿಗಿಂತ ಹೆಚ್ಚು ಮಾಸ್ಕ್ ವಿತರಿಸಲಾಗಿದೆ. ರಾಜ್ಯದ 311 ಮಂಡಲಗಳಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲಾಗಿದೆ ಎಂಬ ಮಾಹಿತಿಯನ್ನು ಪ್ರಧಾನಿ ಮೋದಿಯವರಿಗೆ ನೀಡಿದ್ದೇವೆ,’’ ಎಂದು ಹೇಳಿದರು.
‘‘ರಾಜಧಾನಿ ಬೆಂಗಳೂರಿನಲ್ಲಿ ಒಂದು ತಂಡವಾಗಿ ಸರಕಾರ ಕೋವಿಡ್ ನಿಯಂತ್ರಣ ಮಾಡುತ್ತಿದೆ. ಹೊಂದಾಣಿಕೆ ಕೊರತೆ ಇದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರಾದ ಸುಧಾಕರ್ ಹಾಗೂ ಶ್ರೀರಾಮುಲು ರಾಜ್ಯಮಟ್ಟದಲ್ಲಿ ನಿಗಾ ವಹಿಸಿದ್ದಾರೆ. ಕಂದಾಯ ಸಚಿವ ಆರ್.ಅಶೋಕ ಬೆಂಗಳೂರಿನಲ್ಲಿ ವ್ಯವಸ್ಥೆ ನಿಭಾಯಿಸುತ್ತಿದ್ದಾರೆ. ಯಾವುದೇ ಗೊಂದಲವಿಲ್ಲ,’’ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಸಿದ ಸೇವಾ ಕಾರ್ಯಕ್ರಮಗಳ ವರದಿಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪ್ರಧಾನಿ ಮೋದಿಯವರಿಗೆ ವಿವರವಾಗಿ ನೀಡಿದರು.
ಡಿಸಿಎಂ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವತ್ಥನಾರಾಯಣ, ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಮೊದಲಾದವರು ಭಾಗವಹಿಸಿದ್ದರು.
ಶಿವಕುಮಾರ್ ಆರಂಭ ಶೂರತ್ವ
‘‘ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರೇ ಒಟ್ಟಿಗೆ ಸೇರಿ ಡಿ.ಕೆ.ಶಿವಕುಮಾರ್ ಮುಕ್ತ ಕಾಂಗ್ರೆಸ್ ಮಾಡುತ್ತಾರೆ,’’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ವ್ಯಂಗ್ಯವಾಡಿದ್ದಾರೆ.
‘‘ಪದಗ್ರಹಣ ಸಂದರ್ಭದಲ್ಲಿ ಶಿವಕುಮಾರ್ ಆರಂಭಶೂರತ್ವ ತೋರಿದ್ದಾರೆ. ಕಾರ್ಯಕರ್ತರ ಪಕ್ಷವಾದ ಬಿಜೆಪಿಯನ್ನು ಮುಕ್ತಗೊಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಮುಳುಗುತ್ತಿರುವ ಹಡಗಿಗೆ ಶಿವಕುಮಾರ್ ನಾಯಕರಾಗಿದ್ದಾರೆ. ಕೆಲವೇ ದಿನದಲ್ಲಿ ಕಾಂಗ್ರೆಸ್ ನಾಯಕರು ಶಿವಕುಮಾರ್ ಮುಕ್ತ ಕಾಂಗ್ರೆಸ್ ನಿರ್ಮಾಣ ಮಾಡುತ್ತಾರೆ,’’ ಎಂದು ತಿಳಿಸಿದರು.