ಕೊರೊನಾ ಕಾಲದಲ್ಲಿ ಮಂತ್ರಿಗಳ ದಿನಚರಿ…

ಇಡೀ ವಿಶ್ವವನ್ನೇ ನಡುಗಿಸಿರುವ ಕೊರೊನಾ ರಾಜ್ಯಕ್ಕೂ ಸಂಕಷ್ಟ ತಂದಿದೆ. ಇದನ್ನೇ ಒಂದಂಶದ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿರುವ ಸರಕಾರ ಮಾರಕ ವೈರಾಣು ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದೆ. ಇಂಥ ವಿಷಮ ಸನ್ನಿವೇಶದಲ್ಲಿ ಯೋಧರಂತೆ ಕ್ರಿಯಾಶೀಲರಾಗಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ, ಜನತೆಗೆ ಯಾವ ರೀತಿ ಒತ್ತಾಸೆ ನೀಡಿದ್ದಾರೆ, ‘ಉಸ್ತುವಾರಿ’ ಎಂಬುದರ ಅರ್ಥವನ್ನು ಹೇಗೆ ವಿಸ್ತರಿಸಿದ್ದಾರೆ ಎಂಬುದರ ಕುರಿತು ವಿಕ ರಿಯಾಲಿಟಿ ಚೆಕ್.

ಸಚಿವರ ಕ್ರಿಯಾಶೀಲತೆ ಬಡಿದೆಬ್ಬಿಸಿದ ಕೊರೊನಾ

ಬೀದರ್‌ನಲ್ಲಿ ಪ್ರಭು ಕಾರುಣ್ಯ
ಬೀದರ್: ಕೊರೊನಾ ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿರುವ ಬೀದರ್ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಬಡವರ ಗುಡಸಲಿಗೆ ತೆರಳಿ ಅಕ್ಕಿ ಹಾಗೂ ಬೇಳೆ ವಿತರಣೆ ಮಾಡುತ್ತಿದ್ದಾರೆ. ಅಧಿಕಾರಿಗಳ ಸಂಗಡ ಈಗಾಗಲೇ ನಾಲ್ಕು ಸಭೆ ನಡೆಸಿದ್ದಾರೆ. ಇಂದು ಮತ್ತೊಂದು ಸಭೆ ನಡೆಯಲಿದೆ. ಜಿಲ್ಲೆಯಲ್ಲಿ 10 ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಸಿಟಿ ರೌಂಡ್ಸ್ ಹಾಕಿ ಮನೆಯಿಂದ ಜನತೆಗೆ ಹೊರ ಬಾರದಂತೆ ಕೈ ಮುಗಿದು ಮನವಿ ಮಾಡಿದ್ದಾರೆ. ಬೀದರ್‌ಗೆ ಹೋಲಿಸಿಕೊಂಡರೆ ಯಾದಗಿರಿಯಲ್ಲಿ ಅವರ ನಡೆ ಅಷ್ಟು ಚುರುಕಾಗಿಲ್ಲ.

ಕೊರೊನಾ ವಾರಿಯರ್
ಹುಬ್ಬಳ್ಳಿ: ಸಿಎಂ ಆಗಿ ಕೆಲಸ ಮಾಡಿದ ಅನುಭವವನ್ನು ಜಗದೀಶ್ ಶೆಟ್ಟರ್, ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದು, ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ನಿರಂತರ ಶ್ರಮವಹಿಸುತ್ತಿದ್ದಾರೆ. ಮಾ.25 ರಿಂದ ಏ.6ರ ವರಗೆ ಬರೋಬ್ಬರಿ 16 ಬಾರಿ ಅಧಿಕಾರಿಗಳ ಸಭೆ ನಡೆಸಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಅಧಿವೇಶನ ಮುಗಿದ ತಕ್ಷಣ ಜಿಲ್ಲೆಗೆ ಆಗಮಿಸಿ ನಿತ್ಯ ಬಿಡುವಿಲ್ಲದೆ ಸ್ಥಳೀಯ ಮಟ್ಟದಿಂದ ರಾಜ್ಯಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಧಿಕಾರಿಗಳ ತಂಡ ಕಟ್ಟಿಕೊಂಡು ವಿವಿಧ ವಾರ್ಡ್‌ಗಳು, ಪ್ರದೇಶಗಳಿಗೆ ತೆರಳಿ ಜನರ ಸಮಸ್ಯೆ ಆಲಿಸಿದ್ದಾರೆ. ಬೆಳಗಾವಿ ಉಸ್ತುವಾರಿ ಆಗಿರುವ ಶೆಟ್ಟರ್ ಅಲ್ಲೂ ಕೂಡ ಕ್ರಿಯಾಶೀಲರಾಗಿದ್ದಾರೆ.

ಸರ್ವರ್ ಸೋಮಣ್ಣ
ಮೈಸೂರು: ಕೊರೊನಾ ಲಾಕ್‌ಡೌನ್ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಎಲ್ಲ ಕಡೆ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಅಗತ್ಯ ಸಾಮಗ್ರಿಗಳನ್ನು ಮನೆಗಳಿಗೆ ಪೂರೈಸಲು ಕ್ರಮ ತೆಗೆದುಕೊಂಡಿದ್ದಾರೆ. ಕೊಡಗಿನಲ್ಲೂ ತಮ್ಮ ಕಾರ್ಯ ಸಾಮರ್ಥ್ಯ ತೋರಿಸಿದ್ದಾರೆ.

ಸಂಕಟ ಕಾಲದಲ್ಲಿ ಕ್ರಿಯಾಶೀಲತೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢ ಪಟ್ಟು, ಲಾಕ್‌ಡೌನ್ ಆದ ಬಳಿಕ ಮೊದಲ ಬಾರಿಗೆ ಏ.3ರಂದು ಡಾ.ಅಶ್ವತ್ಥ್ ನಾರಾಯಣ್ ಜಿಲ್ಲಾ ಪ್ರವಾಸ ಕೈಗೊಂಡರು. ವಿವಿಧ ಇಲಾಖೆಗಳ ಸಭೆ ನಡೆಸಿ ಕೊರೊನಾ ನಿಯಂತ್ರಣದಲ್ಲಿ ಕಾರ್ಯಸಮನ್ವಯ ಸಾಧಿಸಿದರು.

ಶಿವಮೊಗ್ಗದಲ್ಲಿ ಈಶ್ವರಪ್ಪ ಚುರುಕು
ಶಿವಮೊಗ್ಗ: ಕೊರೊನಾ ಸಂಕಷ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿದ್ದಾರೆ. ಲಾಕ್ ಡೌನ್ ಘೋಷಿಸಿದಾಗಿನಿಂದ ಶಿವಮೊಗ್ಗದಲ್ಲೇ ಇದ್ದು, ಅಧಿಕಾರಿಗಳೊಂದಿಗೆ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಎಲ್ಲ ವಿಷಯಗಳಲ್ಲಿ ನೈತಿಕ ಬಲ ತುಂಬುವ ಕೆಲಸ ಮಾಡಿದ್ದಾರೆ.

ಶ್ರೀರಾಮುಲು ಹುಮ್ಮಸ್ಸು
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಕೊರೊನಾ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದು, ಇದುವರೆಗೆ ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗದಿರುವುದಕ್ಕೆ ಜಿಲ್ಲಾಡಳಿತದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಅಗತ್ಯ ಸಹಕಾರದ ಭರವಸೆ ನೀಡಿದ್ದಾರೆ.

ಜನರ ಪೂಜಾರಿ
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೋವಿಡ್-19 ನಿಯಂತ್ರಣ ಕುರಿತು ನಿರಂತರವಾಗಿ ಸಭೆಗಳನ್ನು ನಡೆಸಿದ್ದಾರೆ. ಜಿಲ್ಲೆಗೆ ಬೇಕಾದ ಎಲ್ಲ ಅಗತ್ಯಗಳನ್ನು ಪೂರೈಸಲು ತಮ್ಮನ್ನು ಮೀಸಲಾಗಿಟ್ಟುಕೊಂಡಿದ್ದಾರೆ.

ಒಂದು ಸಲ ಬಂದ್ರು ಹೋದ್ರು
ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದಕ್ಕಾಗಿ ಜಿಲ್ಲೆಗೆ ಮೊದಲ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಏಪ್ರಿಲ್ 7 ರಂದು (ಮಂಗಳವಾರ) ಆಗಮಿಸಿದರು. ಮೊದಲ ಬಾರಿ ಅಧಿಕಾರಿಗಳ ಸಭೆ ನಡೆಸಿದರು. ಆದರೆ ಇದಕ್ಕೂ ಪೂರ್ವದಲ್ಲಿ ಹೊಸಪೇಟೆಯಲ್ಲಿ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆ ಅಧಿಕಾರಿಗಳ ಸಭೆ ನಡೆಸಿ ಕೈತೊಳೆದುಕೊಂಡಿದ್ದರು. ಜಿಲ್ಲೆಯಲ್ಲಿ ಏನು ನಡೆಯುತ್ತಿದೆ? ಕೈಗೊಂಡ ಕ್ರಮಗಳೇನು ಎನ್ನುವುದರ ಕುರಿತು ಜಿಲ್ಲೆಯಲ್ಲಿ ಸಂಚರಿಸಿ ಒಮ್ಮೆಯೂ ಅವಲೋಕಿಸಿರಲಿಲ್ಲ. ಬಳ್ಳಾರಿ ಜಿಲ್ಲೆಯ ಉಸ್ತುವಾರಿಯೂ ಆಗಿರುವ ಅವರು, ಅಲ್ಲಿಗೆ ಎರಡು ಬಾರಿ ಭೇಟಿ ನೀಡಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅಷ್ಟು ಬಿಟ್ಟರೆ ಅವರು ತಮ್ಮ ಸ್ವಕ್ಷೇತ್ರದಲ್ಲಿ ಕ್ವಾರಂಟೈನ್ ಆಗಿದ್ದಾರೆ.

ಅಶೋಕ್ ಬೆಂಗಳೂರಿನಲ್ಲೇ ಲಾಕ್
ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಲಾಕ್‌ಡೌನ್ ಸಂದರ್ಭದಲ್ಲಿ ಈವರೆಗೆ ಜಿಲ್ಲೆಗೆ ಭೇಟಿ ನೀಡಿಯೇ ಇಲ್ಲ. ಜಿಲ್ಲಾಧಿಕಾರಿ ಅವರೊಂದಿಗೆ ವಿಡಿಯೊ ಕಾಲ್ ಮೂಲಕ ಜಿಲ್ಲೆಯ ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜತೆಗೆ ಮಂಡ್ಯ ಉಸ್ತುವಾರಿಯನ್ನು ಹೊತ್ತಿರುವ ಸಚಿವರು ಜಿಲ್ಲಾಧಿಕಾರಿಯೊಂದಿಗೆ ಸಂವಹನ ನಡೆಸುತ್ತಿದ್ದಾರೆ.

ಗದಗದ ಮೇಲೆ ಸಿಸಿ ಕಣ್ಗಾವಲು
ಗದಗ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಕೊರೊನಾ ಸಂಕಷ್ಟದ ಸಮಯದಲ್ಲಿ ಜಿಲ್ಲೆಯಲ್ಲಿದ್ದು, ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದಾರೆ. ಮಾ.28ರಂದು ಅಧಿಕಾರಿಗಳ ಸಭೆ ನಡೆಸಿ ಲಾಕ್‌ಡೌನ್ ಪರಿಸ್ಥಿತಿ ಅವಲೋಕಿಸಿದ್ದಾರೆ. ನರಗುಂದದ ತಮ್ಮ ನಿವಾಸದಿಂದ ಸತತ 3 ದಿನ ವಿಡಿಯೊ ಕಾನ್ಪರೆನ್ಸ್ ಮೂಲಕ ಗದಗ ಮತ್ತು ವಿಜಯಪುರ ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತು ಎಸ್ಪಿಗಳ ಜತೆ ಚರ್ಚೆ ನಡೆಸಿ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ಚಕ್ರವ್ಯೂಹ
ಚಿಕ್ಕಮಗಳೂರು: ಅನ್ಯರಾಜ್ಯಗಳಿಂದ ಬರುವ ತೋಟದ ಕಾರ್ಮಿಕರು, ವೀಕೆಂಡ್‌ನಲ್ಲಿ ಮುಗಿಬೀಳುವ ಪ್ರವಾಸಿಗರ ನಡುವೆಯೂ ಚಿಕ್ಕಮಗಳೂರು ಕೊರೊನಾ ಮುಕ್ತವಾಗಿದೆ. ಈ ಯಶಸ್ಸಿನ ಹಿಂದಿರುವ ಶಕ್ತಿಯೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ.ರಾಜ್ಯದಲ್ಲಿ ಕೋವಿಡ್-19 ಭೀತಿ ಆವರಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವ ಸಿ.ಟಿ.ರವಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜಿಲ್ಲೆಯೊಳಗೆ ಕೊರೊನಾ ಕಾಲಿಡದಂತೆ ಕಟ್ಟೆಚ್ಚರ ವಹಿಸಿದರು. ವೈದ್ಯಕೀಯ ವ್ಯವಸ್ಥೆಗೆ ಮಾರ್ಗದರ್ಶನ ಮಾಡುತ್ತಲೆ ಲಾಕ್‌ಡೌನ್ ಬಿಸಿ ಜನರಿಗೆ ಅಷ್ಟೇನೂ ಬಾಧಿಸದಂತೆ ಪಕ್ಷಾತೀತವಾಗಿ ಸಂಘ ಸಂಸ್ಥೆಗಳ ನೆರವಿನೊಂದಿಗೆ ಅಖಾಡಕ್ಕಿಳಿದರು. ಸೈಕಲ್ ಏರಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top