ವೈದ್ಯರ ಮೇಲೆ ಹಲ್ಲೆ ಖಂಡನೀಯ: ಸಮುದಾಯಕ್ಕೆ ಹಾನಿ ಮಾಡಲಿರುವ ವರ್ತನೆ

ಕೊರೊನಾ ವೈರಸ್ ಶಂಕಿತರ ಆರೋಗ್ಯ ತಪಾಸಣೆಗಾಗಿ ತೆರಳುತ್ತಿರುವ ವೈದ್ಯಕೀಯ ಸಿಬ್ಬಂದಿಯ ಮೇಲೆ ಕೆಲವರು ಗುಂಪುಗೂಡಿ ಹಲ್ಲೆ ನಡೆಸುತ್ತಿರುವ ಘಟನೆ ದೇಶದ ಕೆಲವು ಕಡೆಗಳಲ್ಲಿ ವರದಿಯಾಗಿದೆ. ಬೆಂಗಳೂರಿನ ಒಂದು ಬಡಾವಣೆಯಲ್ಲಿ ವೈದ್ಯಕೀಯ ತಪಾಸಣೆಗೆ ಹೋದ ಆಶಾ ಕಾರ್ಯಕರ್ತರ ಮೇಲೆ ಸ್ಥಳೀಯ ನಿವಾಸಿಗಳ ಗುಂಪು ಹಲ್ಲೆ ನಡೆಸಿದೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಿವಾಸಿಗಳ ತಪಾಸಣೆಗೆ ಬಂದಿದ್ದ ಆರೋಗ್ಯ ಸೇವೆ ಸಿಬ್ಬಂದಿಯನ್ನು ಸ್ಥಳೀಯರ ಗುಂಪು ಹಿಗ್ಗಾಮುಗ್ಗಾ ಥಳಿಸಿ ಓಡಿಸಿದೆ. ಮಧ್ಯಪ್ರದೇಶದ ಸಿಲಾವತ್‌ಪುರದಲ್ಲಿ, ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ, ಉತ್ತರ ಪ್ರದೇಶದ ಮೀರತ್‌ನಲ್ಲೂ ಹೀಗೆ ಹಲ್ಲೆ ನಡೆಸಲಾಗಿದೆ. ಹೈದರಾಬಾದ್‌ನಲ್ಲಿ ಕೊರೊನಾ ಸೋಂಕಿನಿಂದ ಮೃತರಾದ ವ್ಯಕ್ತಿಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಒಂದು ನಿರ್ದಿಷ್ಟ ಸಮುದಾಯದ ಗುಂಪು- ವ್ಯಕ್ತಿಗಳು ಇಂಥ ಚಟುವಟಿಕೆಗಳಲ್ಲಿ ತೊಡಗಿರುವುದು ಆಘಾತಕರ ಮತ್ತು ವಿಷಾದನೀಯ. ವೈದ್ಯಕೀಯ ಕಾರ್ಯಕರ್ತರು ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಜೀವವನ್ನೇ ಪಣವಾಗಿಟ್ಟು ಪ್ರಜೆಗಳ ಜೀವ ಉಳಿಸುವ ಕಾಯಕದಲ್ಲಿ ತೊಡಗಿಕೊಂಡವರು. ಇಂಥವರ ಮೇಲೇ ಹಲ್ಲೆ ನಡೆಸುವ ಘಾತಕತನ ಹೇಗೆ ಸಾಧ್ಯವಾಯಿತು?
ಈ ಘಟನೆಗಳ ಉಪ ಪರಿಣಾಮ ಏನಾಗಬಹುದೆಂದು ತುಸು ಯೋಚಿಸೋಣ. ಇದರಿಂದ ಆತಂಕಕ್ಕೊಳಗಾಗುವ ವೈದ್ಯರು ಈ ಸಮುದಾಯ ಇರುವ ಪ್ರದೇಶಕ್ಕೆ ತೆರಳಲು, ಮಾಹಿತಿ ನೀಡಲು, ಅವರಿಗೆ ವೈದ್ಯಕೀಯ ನೆರವು ನೀಡಲು ನಿರಾಕರಿಸಿದರೆ ಅದು ಸಹಜ ತಾನೆ. ಆಗ ನಿಜಕ್ಕೂ ಹಾನಿಯಾಗುವುದು ಯಾರಿಗೆ? ಕೊರೊನಾ ಸಂಬಂಧಿಸಿ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವವರಲ್ಲಿ ಎಲ್ಲ ಸಮುದಾಯದವರೂ ಇದ್ದಾರೆ. ಕೊರೊನಾ ವೈರಸ್ ಆಗಲೀ ಇನ್ಯಾವುದೇ ಕಾಯಿಲೆಯಾಗಲೀ ನಿರ್ದಿಷ್ಟ ಮತಧರ್ಮ ನೋಡಿ ಬರುವುದಿಲ್ಲ; ನಿರ್ದಿಷ್ಟ ಮತೀಯರೆಂದು ಅದು ಬಿಡುವುದೂ ಇಲ್ಲ. ಆದರೆ ಕೊರೊನಾ ವೈರಸ್ ತಮ್ಮನ್ನು ಏನೂ ಮಾಡದು ಎಂಬ ಉಡೊಯೂ ಕೆಲವರಲ್ಲಿ ಇದ್ದಂತಿದೆ. ದಿಲ್ಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಕಾರ್ಯಕ್ರಮದ ಬಳಿಕ, ಅಲ್ಲಿ ಭಾಗವಹಿಸಿದವರ ಆರೋಗ್ಯ ಪರಿಶೀಲನೆಗೆ ಮುಂದಾದಾಗಲೂ ಅದಕ್ಕೆ ಸಹಕರಿಸದ ಒರಟುತನ ವ್ಯಕ್ತವಾಗಿತ್ತು. ಅಲ್ಲಿ ಭಾಗವಹಿಸಿದ ಹಲವರನ್ನು ಇನ್ನೂ ಹುಡುಕಲಾಗುತ್ತಿದೆ. ಇಂಥ ವರ್ತನೆಗಳಿಂದ ತಾವು ತಮ್ಮನ್ನಷ್ಟೇ ಅಲ್ಲದೆ, ಇಡೀ ಸಮುದಾಯವನ್ನು ಹಾಗೂ ತಾವು ವಾಸಿಸುತ್ತಿರುವ ಒಟ್ಟಾರೆ ಪ್ರದೇಶವನ್ನೇ ಅಪಾಯಕ್ಕೆ ಈಡುಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೂ ಇವರಲ್ಲಿ ಇಲ್ಲ. ಅಥವಾ, ಇದನ್ನು ತಿಳಿದಿದ್ದೂ ಹೀಗೆ ಮಾಡುತ್ತಿದ್ದಾರೆ ಎಂದರೆ ಅದರಲ್ಲಿ ವ್ಯವಸ್ಥಿತ ಸಂಚು ಇದೆ ಎನ್ನಬೇಕಾಗುತ್ತದೆ.
ಈ ಪ್ರವೃತ್ತಿಯನ್ನು ಸರಕಾರ ಸಹಿಸಬಾರದು. ಹಲ್ಲೆ ನಡೆಸಿದವರ ಮೇಲೆ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು. ಇದು ಸಮಾಜದ್ರೋಹ ಜೊತೆಗೆ ಧರ್ಮದ್ರೋಹ ಕೂಡ. ಇಂಥ ಪ್ರವೃತ್ತಿಯ ವಿರುದ್ಧ ಎಲ್ಲರೂ ಒಟ್ಟಾಗಿ ಪ್ರತಿಭಟನೆಯನ್ನು ದಾಖಲಿಸಬೇಕಿದೆ. ಸಮುದಾಯದ ಧರ್ಮಗುರುಗಳು, ರಾಜಕೀಯ ಮುಖಂಡರು ಈ ನಿಟ್ಟಿನಲ್ಲಿ ತಮ್ಮ ಮತದವರಲ್ಲಿ ಅರಿವು ಮೂಡಿಸುವ, ಪ್ರಜ್ಞಾವಂತರನ್ನಾಗಿಸುವ ಕೆಲಸ ಮಾಡಬೇಕು. ಪೌರತ್ವದಂಥ ವಿಚಾರಗಳಲ್ಲಿ ಕಿಚ್ಚು ಹಚ್ಚಿ ಒಂದು ಸಮುದಾಯವನ್ನು ಪ್ರತ್ಯೇಕಿಸುವ ಕೆಲಸ ಮಾಡುವವರು ಈಗಲಾದರೂ ಇವರಲ್ಲಿ ಕೊರೊನಾ ಬಗ್ಗೆ ತಿಳಿವಳಿಕೆ ಮೂಡಿಸುವ ಒಳ್ಳೆಯ ಕೆಲಸ ಮಾಡಲಿ. ಇಂಥ ಸಾಮೂಹಿಕ ಉತ್ಪಾತಗಳ ಕಾಲದಲ್ಲಿ ಜನಸಮುದಾಯಗಳಲ್ಲಿ ಹುದುಗಿರುವ ಆತಂಕ, ಮೂಢನಂಬಿಕೆ, ವ್ಯಗ್ರತೆಗಳ ಹುಲಿಯನ್ನು ಪಂಜರದಿಂದ ಹೊರಬಿಡುವ ಕೆಲಸ ಯಾರೂ ಮಾಡಬಾರದು. ವೈದ್ಯರು ತಮ್ಮ ಸೇವೆಯ ಮೂಲಕ ಒಳಿತು ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಅಪನಂಬಿಕೆ ಯಾರಿಗಾದರೂ ಇದ್ದರೆ ಅದನ್ನು ತೊಡೆದುಹಾಕಬೇಕು. ಕೊರೊನಾ ಮಾರಿಯನ್ನು ಹೊಡೆದೋಡಿಸಲು ಎಲ್ಲ ರಾಷ್ಟ್ರಗಳು ಕೈ ಜೋಡಿಸುತ್ತಿವೆ. ಹಾಗೇ ಎಲ್ಲ ಸಮುದಾಯಗಳು ಕೈ ಜೋಡಿಸಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top