ಮನೋಬಲವೇ ಮಹಾಬಲ

– ಕೊರೊನಾಗಿಂತಲೂ ಆತಂಕ, ಆಘಾತದಿಂದಲೇ ಹೆಚ್ಚುತ್ತಿದೆ ಸಾವು
– ವೈರಸ್ ಎದುರಿಸಲು ಬೇಕಿರುವುದು ಬರೀ ಆಸ್ಪತ್ರೆಗಳಲ್ಲ, ಮಾನಸಿಕ ದೃಢತೆ

ವಿಕ ಸುದ್ದಿಲೋಕ ಬೆಂಗಳೂರು.
ರಾಜ್ಯದಲ್ಲಿ ಕೊರೊನಾಗಿಂತಲೂ ಅದರ ಕುರಿತ ಭಯವೇ ಹೆಚ್ಚು ಹೆಚ್ಚು ಸಾವಿಗೆ ಕಾರಣವಾಗುತ್ತಿದೆ. ಸಣ್ಣಗೆ ಜ್ವರ ಬಂದರೂ ಕೊರೊನಾ ಇರಬಹುದು ಎಂಬ ಭಯ, ಸ್ವಾಬ್ ಟೆಸ್ಟ್‌ನ ಫಲಿತಾಂಶದ ನಿರೀಕ್ಷೆಯಲ್ಲೇ ಹೆಚ್ಚುವ ಆತಂಕ, ಪಾಸಿಟಿವ್ ಎಂದು ಪ್ರಕಟಿಸಿದ ಬಳಿಕದ ಉದ್ವೇಗಗಳಿಂದ ರಾಜ್ಯದಲ್ಲಿ ಈಗಾಗಲೇ 20ಕ್ಕೂ ಅಧಿಕ ಮಂದಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. 10ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರೆ, ನಿಜವೆಂದರೆ, ಕೊರೊನಾ ಮಾರಣಾಂತಿಕ ರೋಗವೇ ಅಲ್ಲ. ಈ ವೈರಸ್ ಎಷ್ಟು ದುರ್ಬಲವೆಂದರೆ ರಾಜ್ಯದಲ್ಲೇ ಶೇ. 72.5 ಪ್ರಕರಣಗಳಲ್ಲಿ ಸೋಂಕಿತರಿಗೆ ಜ್ವರದಂಥ ಸಣ್ಣ ಲಕ್ಷಣಗಳೂ ಇಲ್ಲ ಎನ್ನುವುದು ದಾಖಲೆಗಳಿಂದ ಸಾಬೀತಾಗಿದೆ. ಕೇವಲ ಅನ್ಯ ರೋಗಗಳಿದ್ದವರಲ್ಲಿ ಮಾತ್ರ ಇದು ಸಣ್ಣ ಪ್ರಮಾಣದಲ್ಲಿ ತೊಂದರೆ ಮಾಡಿದೆ. ಜನರಲ್ಲಿ ಕೊರೊನಾದ ಬಗ್ಗೆ ಇರುವ ಅನಗತ್ಯ ಭಯದಿಂದಲೇ ಅದು ಭೂತಾಕಾರವನ್ನು ಪಡೆದಿದೆ ಎನ್ನುವುದು ತಜ್ಞರ ಅಭಿಮತ.

ಕೊರೊನಾ ವೈರಸ್‌ನ್ನು ಎದುರಿಸಲು ಆಸ್ಪತ್ರೆಗಳು, ಔಷಧ ಯಾವುದೂ ಬೇಕಾಗಿಲ್ಲ. ಸಾಧಾರಣ ದೇಹಾರೋಗ್ಯ ಮತ್ತು ಮಾನಸಿಕ ದೃಢತೆ ಸಾಕು ಎನ್ನುತ್ತಾರೆ ಹಲವು ತಜ್ಞ ವೈದ್ಯರು ಮತ್ತು ಮನೋಶಾಸಜ್ಞರು. ನಾವು ಧೈರ್ಯವಾಗಿದ್ದರೆ ವೈರಸ್ ನಮ್ಮ ಮೇಲೆ ಯಾವ ಪರಿಣಾಮವನ್ನೂ ಉಂಟು ಮಾಡುವುದಿಲ್ಲ. ಅದೇ ಧೈರ್ಯಗೆಟ್ಟರೆ, ಮಾನಸಿಕವಾಗಿ ಕುಗ್ಗಿ ಹೋದರೆ ದೇಹದ ಇತರ ವ್ಯವಸ್ಥೆಗಳು ದುರ್ಬಲಗೊಂಡು ಅನಾರೋಗ್ಯಕ್ಕೆ ದಾರಿಯಾಗಬಹುದು ಹೊರತು ಅದು ಕೊರೊನಾದ ನೇರ ದಾಳಿ ಅಲ್ಲ ಎನ್ನುತ್ತಾರೆ ವೈದ್ಯರು.

ಕೊರೊನಾ ಬಂದರೆ, ಆಸ್ಪತ್ರೆ ಸಿಗದಿದ್ದರೆ ಎಂಬ ಆತಂಕವೂ ಬೇಕಾಗಿಲ್ಲ. ನಾವು ಧೈರ್ಯವಾಗಿದ್ದರೆ ಆಸ್ಪತ್ರೆಗೆ ಹೋಗಬೇಕೆಂದೇ ಇಲ್ಲ. ಮನೆಯಲ್ಲೇ ಸರಳ ಚಿಕಿತ್ಸೆ ಸಾಕು. ಕೇವಲ ಗಂಭೀರ ಸಮಸ್ಯೆ ಇರುವವರಿಗಷ್ಟೇ ಆಸ್ಪತ್ರೆ ಚಿಕಿತ್ಸೆ ಬೇಕಾಗುತ್ತದೆ.
===================

ನನ್ನ ಅನುಭವದ ಪ್ರಕಾರ ಇದು ಎದುರಿಸಲಾಗದ ರೋಗವಲ್ಲ. ಆದರೆ, ಹೆಚ್ಚು ಭಯ ಹುಟ್ಟಿಸಿದ್ದೇವೆ. ನಾನು ಎಲ್ಲರಿಗೂ ಹೇಳುವುದಿಷ್ಟೆ. ಎಚ್ಚರಿಕೆ ವಹಿಸಿ, ಭಯ ಬಿಡಿ.
– ಸಿ.ಟಿ. ರವಿ ಸಚಿವರು (ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿ ಗುಣಮುಖರಾದವರು)

ಕೊರೊನಾ ಹೆಮ್ಮಾರಿಯಲ್ಲ
ಬೇರೆ ಕಾಯಿಲೆಗಳಿಗೆ ಹೋಲಿಸಿದರೆ ಕೊರೊನಾ ಮಹಾ ಮಾರಕ ಅಲ್ಲ. ಆದರೆ, ಈ ಬಗ್ಗೆ ಸೃಷ್ಟಿಯಾಗಿರುವ ಭಯವು ಸೂಕ್ಷ್ಮ ಹೃದಯದವರಲ್ಲಿ ಆತ್ಮಹತ್ಯೆಯಂತಹ ಆಲೋಚನೆಗಳಿಗೆ ತಳ್ಳುತ್ತದೆ. ಸೋಂಕು ತಗುಲಿದವರಿಗೆ ಆತ್ಮೀಯರ ಮೂಲಕ ಮಾತನಾಡಿಸಿ ಧೈರ್ಯ ತುಂಬಬೇಕು. ಜೊತೆಗೆ ಕುಟುಂಬದವರು, ಸ್ನೇಹಿತರು, ಮನೋತಜ್ಞರ ಮೂಲಕ ಕೌನ್ಸಿಲಿಂಗ್ ಮಾಡಿಸಬೇಕು. ಬೆಂಬಲವಾಗಿ ನಿಲ್ಲಬೇಕು. ಕೊರೊನಾದಿಂದ ಗುಣಮುಖರಾದವರ ಮೂಲಕ ಮಾತನಾಡಿಸಿ ಧೈರ್ಯ ತುಂಬಬೇಕು.
– ಪ್ರೊ. ಎಸ್.ಎಸ್. ಪ್ರಭುದೇವ್ ಮನಃಶಾಸಜ್ಞರು, ಬೆಂಗಳೂರು
++++++++++++++++

ಜನರಿಗೆ ಭಯವೇಕೆ?

ಕೊರೊನಾ ಬಂದರೆ ಸಾವೇ ಗತಿ ಎಂಬ ಸುಳ್ಳು ನಂಬಿಕೆ.

– ಸೋಂಕು ಉಂಟಾದರೆ ಮನೆ ಮಂದಿಯಿಂದ ದೂರವಾಗುವ, ಸೂಕ್ತ ಅಂತ್ಯಕ್ರಿಯೆಯೂ ಇಲ್ಲದೆ ಅನಾಥ ಶವವಾಗುವ ಆತಂಕ.

– ಆಸ್ಪತ್ರೆ, ಕೇರ್ ಸೆಂಟರ್‌ಗಳಲ್ಲಿನ ಒಂಟಿತನದ ಭಯ, ನಿರ್ಲಕ್ಷ್ಯದ ಭೀತಿ.

-ಮನೆ ಸೀಲ್ ಡೌನ್, ಸಾಮಾಜಿಕ ಅಸ್ಪೃಶ್ಯತೆ ಭಯ
++++++++++++++++++

ಭಯ ನಿವಾರಣೆ ಹೇಗೆ?

-ಕೊರೊನಾ ಭಯಾನಕ ಕಾಯಿಲೆ ಎಂಬ ಸುಳ್ಳನ್ನು ತಲೆಯಿಂದ ಹೊರಹಾಕಿ.

-ಕೊರೊನಾ ಬಂದರೂ ಎದುರಿಸಬಲ್ಲೆ ಎನ್ನುವ ಧೈರ್ಯ ತುಂಬಿಕೊಳ್ಳಿ.

-ಯೋಗದ ಮೂಲಕ ಮಾನಸಿಕ ಸದೃಢತೆ ಹೆಚ್ಚಿಸಿಕೊಳ್ಳಿ.

-ಧಾರ್ಮಿಕ, ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿ.

– ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ, ಆಹಾರ ಸೇವಿಸಿ.

-ಆಸ್ಪತ್ರೆಗೆ ಹೋಗಬೇಕೆಂದರೂ ಭಯಪಡುವುದಿಲ್ಲ ಎಂದು ನಿರ್ಧರಿಸಿ.
++++++++++++++++

ಶನಿವಾರವೇ 3 ಕೇಸು
-ಜ್ವರದ ಕಾರಣಕ್ಕೆ ಕೋವಿಡ್ ಪರೀಕ್ಷೆಗೆ ಒಳಗಾದಾಗಲೇ ಭಯಭೀತರಾಗಿದ್ದ ಹಿರಿಯ ನಟರೊಬ್ಬರು ಸೋಮವಾರ ವರದಿ ಬಂದ ಬಳಿಕ ಇನ್ನಷ್ಟು ಆಘಾತಗೊಂಡು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

-ರಾಮನಗರ ಆರ್‌ಟಿಒ ಕಚೇರಿ ಏಜೆಂಟ್ ಆಗಿದ್ದ 60 ವರ್ಷದ ವ್ಯಕ್ತಿ ಸೋಂಕು ತಗುಲಿರಬಹುದೆಂಬ ಆತಂಕದಿಂದಲೇ ಹೃದಯಾಘಾತದಿಂದ ಪ್ರಾಣಬಿಟ್ಟಿದ್ದಾರೆ. ಅವರ ವರದಿ ನೆಗೆಟಿವ್ ಬಂದಿದೆ.

– ಚಿತ್ರದುರ್ಗ ಜಿಲ್ಲೆ ಹಿರಿಯೂರು ಪುರಸಭೆ ಮಾಜಿ ಸದಸ್ಯರೊಬ್ಬರು ಸ್ವಾಬ್ ಟೆಸ್ಟ್‌ಗೆ ಮೊದಲೇ ಗಾಬರಿಗೊಂಡು ಕುಸಿದು ಮೃತಪಟ್ಟರು. ಬಳಿಕ ನಡೆದ ಸ್ವಾಬ್ ಟೆಸ್ಟ್‌ನಲ್ಲಿ ಸೋಂಕೇ ಇರಲಿಲ್ಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top