ಹಿಂದೆಂದೂ ವೈದ್ಯಲೋಕ ಇಂಥದೊಂದು ಕಠೋರ, ನಿರ್ದಯಿ ವ್ಯವಸ್ಥೆಗೆ ಸಾಕ್ಷಿಯಾಗಿರಲಿಲ್ಲ. ಬೆಂಗಳೂರಿನಲ್ಲಿ ಈಗ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಹೊತ್ತುಕೊಂಡು ಆಸ್ಪತ್ರೆಗೆ ಹೋದರೂ, ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬನ್ನಿ, ಇಲ್ಲವೇ ಸಾಯಿರಿ ಎಂಬರ್ಥದ ಉತ್ತರಗಳೇ ಸಿಗುತ್ತಿವೆ. ರಾಜ್ಯದ ಇತರ ಕಡೆಗಳ ಆಸ್ಪತ್ರೆಗಳೂ ಇದೇ ಮಾದರಿಯನ್ನು ಅನುಸರಿಸಲಾರಂಭಿಸಿವೆ. ಶುಲ್ಕದ ಮಾತು, ಪರೀಕ್ಷೆ ನಂತರ; ರೋಗಿಯ ಪ್ರಾಣ ಉಳಿಸುವ ಹೊಣೆಯನ್ನು ಮೊದಲು ಹೊರಬೇಕಾದ ಆಸ್ಪತ್ರೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿವೆ. ಇದರಿಂದಾಗಿ ಕಳೆದ ಒಂದು ತಿಂಗಳಿನಲ್ಲಿ ಹತ್ತಾರು ರೋಗಿಗಳು ಆಸ್ಪತ್ರೆಗಳಿಗೆ ಅಲೆದಾಡಿಯೇ ಪ್ರಾಣ ಬಿಟ್ಟಿದ್ದಾರೆ; ಅದೂ ಕೋವಿಡ್ ಸೋಂಕಿತರಲ್ಲ, ಇತರ ರೋಗಿಗಳು. ಇದೊಂದು ದಾರುಣ ಸನ್ನಿವೇಶ. ಇತ್ತ ಕೊರೊನಾ ರೋಗಿಗಳಿಗೂ ಚಿಕಿತ್ಸೆ ಗಗನಕುಸುಮವಾಗಿದೆ. ಇಲ್ಲಿ ವೈದ್ಯರ ಪಾಲೆಷ್ಟು, ಆಸ್ಪತ್ರೆ ಆಡಳಿತಗಳ ಪಾಲೆಷ್ಟು ಗೊತ್ತಾಗಬೇಕು. ಅವೇಳೆಯಲ್ಲಿ ಏಕಾಏಕಿ ಆರೋಗ್ಯ ಸಮಸ್ಯೆ ಆದವರು ಆಸ್ಪತ್ರೆಗೆ ಓಡಿದರೆ, ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದರೆ ತಕ್ಷಣ ಅದು ಸಾಧ್ಯವಿಲ್ಲ. ಇದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿ, ಜೀವ ಉಳಿಸಿಕೊಳ್ಳಲು ಸಾಲ ಮಾಡಿಯಾದರೂ ಲಕ್ಷಗಟ್ಟಲೆ ಹಣ ಹೊಂಚುವುದು ಅನಿವಾರ‍್ಯ ಎಂಬ ಅಸಹಾಯಕ ಸ್ಥಿತಿಗೆ ರೋಗಿಯನ್ನು ತಳ್ಳುತ್ತಿದೆ. ಒಟ್ಟಾರೆ ಆರೋಗ್ಯ ಸೇವೆಯೇ ಸಾವು ಬದುಕಿನ ನಡುವೆ ಹೋರಾಡುತ್ತಿದೆ.
ಹೀಗೆ ಸಾಯುತ್ತಿರುವವರಲ್ಲಿ ಉಸಿರಾಟದ ತೊಂದರೆ ಅನುಭವಿಸುತ್ತಿರುವವರು, ಹೃದಯ ತೊಂದರೆ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಸುಳೆಗಳಿಗೂ ಹೀಗೆ ಚಿಕಿತ್ಸೆ ನೀಡದೆ ಸಾಯಿಸಲಾಗಿದೆ. ಆಸ್ಪತ್ರೆಗೆ ಸೇರಿಸಿ ಎಂದು ಸಿಎಂ ಮನೆ ಮುಂದೆ ಬಂದು ಗೋಳಾಡುವುದೇ ವಾಸಿ ಎಂದು ರೋಗಿಗಳಿಗೆ ಅನಿಸತೊಡಗಿರುವುದು ಮಹಾ ದುರಂತ. ನಿಯಮ ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಹೈಕೋರ್ಟ್ ಸೂಚಿಸಿದೆ. ಆದರೆ ಇದುವರೆಗೂ ಕೆಲವು ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಕೈ ತೊಳೆದುಕೊಳ್ಳಲಾಗಿದೆ ಹೊರತು ಯಾವ ಆಸ್ಪತ್ರೆ ವಿರುದ್ಧವೂ ಸರಕಾರ ಪ್ರಕರಣ ದಾಖಲಿಸಿಲ್ಲ. ತುರ್ತು ಚಿಕಿತ್ಸೆ ನೀಡದ ಆಸ್ಪತ್ರೆಗಳ ಹೊರ ರೋಗಿ ವಿಭಾಗ ಬಂದ್ ಮಾಡುವುದು, ಆಸ್ಪತ್ರೆಯ ಪರವಾನಗಿ ರದ್ದುಪಡಿಸುವುದು, ಕಾನೂನು ಕ್ರಮ- ಹೀಗೆ ಎಚ್ಚರಿಕೆಗಳನ್ನು ಸರಕಾರ ನೀಡಿದೆಯಾದರೂ ಆಸ್ಪತ್ರೆಗಳು ಕ್ಯಾರೇ ಎಂದಿಲ್ಲ. ಇದು ಇನ್ನಷ್ಟು ಕಠಿಣ ಕ್ರಮ ಹಾಗೂ ಸಂದೇಶದ ಅಗತ್ಯವನ್ನು ಒತ್ತಿ ಹೇಳುತ್ತಿದೆ.
ಇಂತದೊಂದು ಪರಿಸ್ಥಿತಿ ತಲೆದೋರಬಹುದು ಎಂಬ ಮುನ್ನೋಟ ಸರಕಾರಕ್ಕೆ ಮೊದಲೇ ಇರಬೇಕು ಹಾಗೂ ಆದಕ್ಕೆ ತಕ್ಕಂತ ಮಾರ್ಗದರ್ಶಿ ಸೂತ್ರಗಳನ್ನು, ನಿಯಮಾವಳಿಯನ್ನು ರೂಪಿಸಬೇಕಿತ್ತು. ಮಹಾರಾಷ್ಟ್ರ ಮುಂತಾದೆಡೆಗಳ ಸನ್ನಿವೇಶವನ್ನು ನೋಡಿ, ಅದೇ ರೀತಿ ನಮ್ಮಲ್ಲಿ ಏರುತ್ತಿರುವ ಪ್ರಕರಣಗಳನ್ನು ಗಮನಿಸಿ ಈ ಕುರಿತು ಮುಂಚಿತವಾಗಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಖಾಸಗಿ ಆಸ್ಪತ್ರೆಗಳನ್ನೂ ಸೇರಿಸಿಕೊಂಡ ಸಮಿತಿಗಳನ್ನು ರಚಿಸಿ, ಇಂಥ ಸನ್ನಿವೇಶವನ್ನು ನಿಭಾಯಿಸುವ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಬೇಕಿತ್ತು. ಹಾಗೆಯೇ ಸದ್ಯ ಎಲ್ಲ ಪ್ರಮುಖ ಸರಕಾರಿ ಆಸ್ಪತ್ರೆಗಳನ್ನೂ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿಸಲಾಗಿದೆ. ಕೆಲವು ತಜ್ಞ ಕೇಂದ್ರಗಳನ್ನಾದರೂ ಹೃದಯ ಸಮಸ್ಯೆ, ಕಿಡ್ನಿ ಕಾಯಿಲೆ, ಉಸಿರಾಟದ ತೊಂದರೆಗಳ ನಿವಾರಣೆಗೆ ಮೀಸಲು ಇಡಬೇಕಾದುದು ಅಗತ್ಯವಾಗಿತ್ತು. ಈಗಲೂ ಕಾಲ ಮಿಂಚಿಲ್ಲ. ತಿದ್ದಿಕೊಳ್ಳಲು ಇನ್ನೂ ಅವಕಾಶವಿದೆ. ದುಂಡಾವರ್ತಿ ತೋರಿಸುವ ಆಸ್ಪತ್ರೆಗಳಿಗೆ ಮೂಗುದಾರ ಹಾಕುವುದರೊಂದಿಗೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಸರಕಾರಿ ಚಿಕಿತ್ಸಾ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದರಿಂದ ಇದು ಸಾಧ್ಯ. ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಲಭ್ಯ, ಎಲ್ಲಿ ಕೋವಿಡ್ ಚಿಕಿತ್ಸೆ ಹಾಗೂ ಕೊರೊನೇತರ ಚಿಕಿತ್ಸೆ ಲಭ್ಯ ಎಂಬ ವಿವರ ನೀಡುವ ಡ್ಯಾಶ್‌ಬೋರ್ಡ್ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ರೋಗಿಗೆ ಕೊರೊನಾ ಇದ್ದರೂ ಇಲ್ಲದಿದ್ದರೂ ತುರ್ತು ಚಿಕಿತ್ಸೆ ಲಭ್ಯವಾಗಲೇಬೇಕು; ಇದು ಸರಕಾರದ ನೆಲೆಯಲ್ಲಿ ಆಡಳಿತದ ಪರಿಣಾಮಕಾರಿತನ ಹಾಗೂ ಆಸ್ಪತ್ರೆಗಳ ನೆಲೆಯಲ್ಲಿ ಮಾನವೀಯತೆಯ ಪ್ರಶ್ನೆ.