ರಾಜ್ಯದ ಮಂಗಳೂರಿನಲ್ಲಿ, ಮುಂಬಯಿ- ಚೆನ್ನೈ ಮುಂತಾದ ಹಲವು ಕಡೆ ಕೋವಿಡ್ ಕಾಯಿಲೆಗೆ ಬಲಿಯಾದವರ ಮೃತದೇಹಗಳ ಅಂತಿಮ ಸಂಸ್ಕಾರಕ್ಕೆ ಕೆಲವರು ಸ್ಥಳೀಯ ನಿವಾಸಿಗಳು ಅಡ್ಡಿಪಡಿಸಿರುವುದು ವರದಿಯಾಗಿದೆ. ಮಂಗಳೂರಿನ ಹಲವು ಕಡೆ ಗ್ರಾಮಸ್ಥರು ಪ್ರತಿರೋಧ ಮಾಡಿದ್ದು, ಕಡೆಗೂ ಒಂದು ಕಡೆ ಹೇಗೋ ಅಂತ್ಯಕ್ರಿಯೆ ನಡೆದಿದೆ. ಮುಂದೆ ನಿಂತು ಸಂಸ್ಕಾರ ನಡೆಸಬೇಕಿದ್ದ ಶಾಸಕರೊಬ್ಬರು ಸಕಾರಣವಿಲ್ಲದೆ ಅಡ್ಡಿಪಡಿಸಿದ್ದಾರೆ. ಚೆನ್ನೈಯಲ್ಲಿ ಒಂದು ಕಡೆ ಕೋವಿಡ್‌ಗೆ ಬಲಿಯಾದ ನರರೋಗ ವೈದ್ಯರೊಬ್ಬರ ಶವವನ್ನು ಸುಡುವುದಕ್ಕೆ ಬಿಡದೆ, ಆಂಬುಲೆನ್ಸ್‌ನಲ್ಲಿದ್ದ ವೈದ್ಯರು ಸೇರಿದಂತೆ ಎಲ್ಲರ ಮೇಲೂ ದಾರುಣವಾಗಿ ಹಲ್ಲೆ ನಡೆಸಿದ ಘಟನೆಯೂ ನಡೆದಿದೆ. ಮೇಘಾಲಯ, ಆಂಧ್ರಗಳಲ್ಲೂ ಹೀಗೆ ವೈದ್ಯರ ಸಂಸ್ಕಾರಕ್ಕೂ ಅಡ್ಡಿಪಡಿಸಿದ ಘಟನೆಗಳು ನಡೆದಿರುವುದು ಆಘಾತಕಾರಿ; ಕೋವಿಡ್ ಜೊತೆಗಿನ ಯುದ್ಧದಲ್ಲಿ ಮುಂಚೂಣಿಯ ಯೋಧರಾಗಿರುವ ವೈದ್ಯ ಸಂಕುಲಕ್ಕೆ ನಾವು ಮಾಡುವ ಅವಮಾನ. ಕೋವಿಡ್‌ನ ಹೆಸರಿನಲ್ಲಿ ಮನುಷ್ಯತ್ವ ಮರೆಯಾಗುತ್ತಿರುವುದು ನಿಧಾನವಾಗಿ ಗೋಚರಿಸುತ್ತಿದೆ.
ಈ ಪ್ರತಿಭಟನೆ ಅಥವಾ ಗಲಭೆಯಲ್ಲಿ ಭಾಗವಹಿಸಿದವರು ಸರಳವಾದ ಒಂದು ಪ್ರಶ್ನೆಯನ್ನು ಕೇಳಿಕೊಂಡರೆ ಇದು ಬಗೆಹರಿಯುತ್ತದೆ- ಒಂದು ವೇಳೆ ತಮ್ಮ ಮನೆಯವರಿಗೇ ಹೀಗಾಗಿದ್ದರೆ ಇವರು ಯಾವ ರೀತಿ ವರ್ತಿಸುತ್ತಿದ್ದರು? ತಮ್ಮ ಕುಟುಂಬದವರನ್ನು ಬೀದಿ ಹೆಣವಾಗಿ ಕಾಣಲು ಯಾರೂ ಇಚ್ಛಿಸುವುದಿಲ್ಲ ಎನ್ನುವುದು ನಿಜವಷ್ಟೆ. ಅದನ್ನೇ ಎಲ್ಲರಿಗೂ ಅನ್ವಯಿಸಬೇಕಾಗುತ್ತದೆ. ಪ್ರತಿಯೊಬ್ಬರ ಪಾರ್ಥಿವ ದೇಹವೂ ಗೌರವಯುತವಾದ ಅಂತ್ಯಸಂಸ್ಕಾರವನ್ನು ಬೇಡುತ್ತದೆ. ಅದು ವ್ಯಕ್ತಿಯ ಮೂಲಭೂತ ಹಕ್ಕು ಕೂಡ. ಅದಕ್ಕೆ ಅವಕಾಶ ನೀಡದಿರುವುದು ಅನಾಗರಿಕತೆ.
ಕೋವಿಡ್ ಸೋಂಕಿತರಾಗಲೀ ಇತರರಾಗಲೀ, ಅವರೊಂದಿಗೆ ದೈಹಿಕ ಅಂತರ (ಸೋಷಿಯಲ್ ಡಿಸ್ಟೆನ್ಸ್) ಕಾಪಾಡಿಕೊಳ್ಳಬೇಕು ಎಂಬುದು ನಿಯಮ. ಇದು ಕಾಯಿಲೆ ಹರಡದಿರಲಿ ಎಂಬ ಮುನ್ನೆಚ್ಚರಿಕೆ. ಆದರೆ ಮೃತದೇಹದಿಂದ ಕಾಯಿಲೆ ಹಾಗೆ ಹರಡುವ ಯಾವ ಸಾಧ್ಯತೆಯೂ ಇಲ್ಲ. ಹೀಗಾಗಿ ಶವಸಂಸ್ಕಾರದ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಿದರೆ ಸಾಕಾಗುತ್ತದೆ. ಕೋವಿಡ್‌ನಿಂದ ಸತ್ತವರ ಶವಸಂಸ್ಕಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹಲವು ಮಾರ್ಗದರ್ಶಿ ಸೂತ್ರಗಳನ್ನು ಕೊಟ್ಟಿದ್ದು, ವಿಶ್ವದೆಲ್ಲೆಡೆ ಅನುಸರಿಸಲಾಗುತ್ತಿರುವ ಜಾಗರೂಕತೆಯ ಕ್ರಮಗಳನ್ನೇ ಭಾರತದಲ್ಲೂ ಅನುಸರಿಸಲಾಗುತ್ತಿದೆ. ಶವವನ್ನು ಎಚ್ಚರಿಕೆಯಿಂದ ಪ್ಯಾಕ್ ಮಾಡಿ ಹೈಪೋಕ್ಲೋರೈಟ್ ದ್ರಾವಣ ಸಿಂಪಡಿಸಿ, ನಂತರ ಸಂಸ್ಕಾರಕ್ಕೆ ಕೊಂಡೊಯ್ಯಲಾಗುತ್ತದೆ. ಸಂಸ್ಕಾರದ ಬಳಿಕವೂ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತದೆ. ಸಂಸ್ಕಾರದಲ್ಲಿ ಪಾಲುಗೊಂಡವರಿಗೂ ಇತರರಿಗೂ ಸೋಂಕು ತಗುಲುವ ಸಾಧ್ಯತೆಯೇ ಇಲ್ಲ. ದಹನದಲ್ಲಾಗಲೀ ದಫನದಲ್ಲಾಗಲೀ ವೈರಾಣುಗಳು ಉಳಿಯುವ, ಗಾಳಿಯಲ್ಲಿ ಹರಡುವ ಸಾಧ್ಯತೆಯೂ ಇಲ್ಲ. ವಾಸ್ತವವಾಗಿ, ಅತಿ ಹೆಚ್ಚಿನ ಶಾಖ ಇರುವ ಜಾಗದಲ್ಲಿವೈರಾಣು ಬದುಕುಳಿಯುವುದಿಲ್ಲ.
ಕೊರೊನಾ ವೈರಸ್ ನಮ್ಮ ದೇಶದಲ್ಲಿ ನಿಯಂತ್ರಿತ ರೀತಿಯಲ್ಲಿ ಹರಡುತ್ತಿದ್ದು, ಮುಂದಿನ ಹಲವು ತಿಂಗಳುಗಳ ಕಾಲವಾದರೂ ನಾವು ಕೋವಿಡ್ ಸೋಂಕಿತರ ಶವಗಳನ್ನು ಸಂಸ್ಕಾರ ಮಾಡುವ ಸನ್ನಿವೇಶ ನೋಡಬೇಕಾಗಬಹುದು. ಅಲ್ಲೆಲ್ಲಾ ಕಡೆ ಇಂಥ ಪ್ರತಿಭಟನೆ, ಅಸಂಬದ್ಧ ವಿರೋಧದ ಸನ್ನಿವೇಶಗಳು ಉಂಟಾಗದಂತೆ ನೋಡಿಕೊಳ್ಳುವುದು ಸರಕಾರ, ಸ್ಥಳೀಯಾಡಳಿತಗಳ ಕರ್ತವ್ಯ. ಸರಕಾರ ಕೂಡ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಹಾಗೂ ಈ ಶವಸಂಸ್ಕಾರದಿಂದ ಸ್ಥಳೀಯರಿಗೆ ಯಾವುದೇ ಅಪಾಯವಿಲ್ಲ ಎಂಬ ಭರವಸೆ ನೀಡುವ ಅಭಿಯಾನವನ್ನು ಜಾರಿಗೆ ತರಬೇಕು. ಜನತೆ ಕೂಡ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಿಕೊಳ್ಳಬೇಕು. ಕೋವಿಡ್ ಸೋಂಕಿತರು ಅಥವಾ ಸೋಂಕು ಶಂಕಿತರನ್ನು ಅಸ್ಪೃಶ್ಯರಂತೆ ನೋಡುವುದು, ಸಾಮಾಜಿಕ ಬಹಿಷ್ಕಾರ ಹಾಕುವುದು ಕೂಡ ಮಾನವೀಯ ಕ್ರಮಗಳಲ್ಲ. ಈ ಕಾಯಿಲೆಯನ್ನು ಗೆಲ್ಲಲು ನಮ್ಮ ನಡುವೆ ದೈಹಿಕ ಅಂತರ ಇರಬೇಕೇ ಹೊರತು ಭಾವನಾತ್ಮಕ ಅಸ್ಪೃಶ್ಯತೆ ಅಲ್ಲ. ಇದೊಂದು ಹೊಸಬಗೆಯ ಅಸ್ಪೃಶ್ಯತೆ ಆಗದಿರಲಿ.