ಬದುಕು ಬದಲಿಸಿದ ಮಹಾಗುರುಗಳು

ಇಂದು ಗುರು ಪೌರ್ಣಿಮೆ. ಗುರು ಎಂದರೆ ಕೇವಲ ಜ್ಞಾನ ನೀಡಿದ, ಅಕ್ಷರ ಕಲಿಸಿದವರು ಮಾತ್ರವಲ್ಲ. ‘ಗುರು’ವಿನ ಪಾತ್ರವನ್ನು ನಿರ್ವಹಿಸಿದವರು ಎಲ್ಲರ ಜೀವನದಲ್ಲೂ ಇರುತ್ತಾರೆ. ಯಾವುದೇ ಒಂದು ಸಣ್ಣ ಬೈಗುಳ, ಹಿತ ವಚನಗಳು ನಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತವೆ. ಅಂಥ ಘಟನೆಗಳಿಗೆ ಕಾರಣರಾದವರ ಬಗ್ಗೆ ಬರೆಯುವಂತೆ ವಿಜಯ ಕರ್ನಾಟಕ ಕರೆ ನೀಡಿತ್ತು. ನಮ್ಮ ಈ ಆಹ್ವಾನಕ್ಕೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ನಮಗೆ ಬಂದ ಪತ್ರಗಳ ಪೈಕಿ ಕೆಲವು ಆಯ್ದ ಪತ್ರಗಳನ್ನು ಇಲ್ಲಿಪ್ರ ಕಟಿಸಿದ್ದೇವೆ. ಓದಿಕೊಳ್ಳಿ… 

ಶಿಕ್ಷಕಿಯಾಗಲು ಪ್ರೇರಣೆ : ನನ್ನ ತಂದೆಯವರು ದಿವಂಗತರಾದಾಗ ಸುಮಾರು ದಿನಗಳವರೆಗೆ ಕಾಲೇಜ್‌ಗೆ ಹೋಗಲು ಸಾಧ್ಯವಾಗಿರಲಿಲ್ಲ. ಹಾಜರಾತಿ ಕಡಿಮೆ ಇತ್ತು. ಇದರಿಂದ ನನಗೆ ಹಾಲ್ ಟಿಕೆಟ್ ಕೊಡಲಿಲ್ಲ. ಆದರೆ, ಎಸ್‌ಟಿಜಿ ಕಾಲೇಜ್‌ನ ಕನ್ನಡ ಉಪನ್ಯಾಸಕರಾದ ವಿಶ್ವಮೂರ್ತಿಗಳು ನನ್ನ ಸಮಸ್ಯೆಯನ್ನು ಕೇಳಿ ತಿಳಿದಕೊಂಡು ಹಾಲ್ ಟಿಕೆಟ್ ತೆಗೆಸಿಕೊಟ್ಟರು. ಒಂದು ವೇಳೆ, ಅವರು ಹಾಲ್ ಟಿಕೆಟ್ ಸಿಗುವಂತೆ ಮಾಡದಿದ್ದರೆ ನಾನು ಇಂದು ಶಿಕ್ಷಕಿಯಾಗಲು ಸಾಧ್ಯವೇ ಆಗುತ್ತಿರಲಿಲ್ಲ. ಅವರೇ ನನಗೆ ರೋಲ್ ಮಾಡೆಲ್. – ಇಂದುಮತಿ, ಶಿಕ್ಷಕಿ, ಚಿಕ್ಕಮಗಳೂರು.

ಚೈತನ್ಯ ತುಂಬಿದರು : ಸೆಕೆಂಡ್ ಪಿಯು ಚೆನ್ನಾಗಿಯೇ ಓದುತ್ತಿದ್ದೆ. ಕ್ರಿಯಾಶೀಲಳಾಗಿದ್ದೆ. ಎಲ್ಲದರಲ್ಲೂ ಪಾಲ್ಗೊಳ್ಳುತ್ತಿದ್ದೆ. ಆದರೆ, ಒಂದು ದಿನ ಇದ್ದಕ್ಕಿದ್ದ  ಹಾಗೆ ಓದುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟೆ. ಮನೆಯಲ್ಲಿ ಮಂಕಾಗಿ ಕುಳಿತೆ. ತುಂಬಾ ಚಿಂತಿತರಾದ ಅಪ್ಪ-ಅಮ್ಮ ಸುಮಾರು ಡಾಕ್ಟರ್ ಹತ್ತಿರ ನನ್ನನ್ನು ತೋರಿಸಿ, ಉಪಚರಿಸಿದರೂ ಏನೂ ಉಪಯೋಗವಾಗಲಿಲ್ಲ. ಆಗ ಪದ್ಮನಾಭ ಎಂಬ ಗುರುಗಳ ಹತ್ತಿರ ಕರೆದುಕೊಂಡು ಹೋದರು. ಅವರು ನನ್ನ ಸಮಸ್ಯೆ ಏನು ಅಂತ ಕೇಳಲಿಲ್ಲ. ಆದರೆ, ಇವಳು ಸರಿ ಹೋಗಬೇಕು; ಸರಿ ಹೋಗ್ತಾಳೆ ಎಂದಷ್ಟೇ ಹೇಳಿದರು. ಅದು ನನ್ನ ಮನಸ್ಸಿನಲ್ಲಿ ಭರವಸೆ ಮೂಡಿಸಿತು. ಪದೇ ಪದೇ ಅವರ ಹತ್ತಿರ ಹೋಗುತ್ತಿದ್ದೆ. ನನಗೆ ನನ್ನ ಬಗ್ಗೆನೆ ನಂಬಿಕೆ ಮೂಡಿಸುತ್ತಿದ್ದರು. ಅವರು ಹೇಳುತ್ತಿದ್ದ ಪ್ರತಿ ಮಾತು ನನ್ನಲ್ಲಿ ಧೈರ್ಯ ಭರವಸೆ ತುಂಬಿತು. ಇವತ್ತು ನಾನು ಸ್ನಾತಕೋತ್ತರ ಪದವೀಧರೆ.  -***196

ಗಣಿತದ ಹುಚ್ಚು ಹಿಡಿಸಿದ್ರು : 1988ರಲ್ಲಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯ ಹತ್ತನೇ ಕ್ಲಾಸಿನಲ್ಲಿದ್ದೆ. ಅಲ್ಲಿಯವರೆಗೂ ಗಣಿತದಲ್ಲಿ ನಾನು ಡಮ್ಮಿ. ಆಗ ಗಣಿತದ ಮೇಷ್ಟ್ರು ಕೆ.ಎಸ್.ಕರಿಗೌಡರು ತುಂಬಾ ಅಂತಃಕರಣಿ. ಗಣಿತವನ್ನು ತುಂಬ ಅದ್ಭುತವಾಗಿ ಕಲಿಸುತ್ತಿದ್ದರು. ಆದರೆ, ನನಗೆ ಆಸಕ್ತಿ ಇರಲಿಲ್ಲ. ಒಮ್ಮೆ ಪಾಠ ಮಾಡುತ್ತಾ ಗೌಡರ್ ಸರ್, ‘‘ಕನ್ನಡ ಮಾಧ್ಯಮದಿಂದ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದವರಿಗೆ ನೂರು ರೂಪಾಯಿ ನಗದು ಬಹುಮಾನ ಕೊಡಲಾಗುವುದು,’’ ಎಂದರು. ಬಹುಮಾನದ ಆಸೆಗೋ ಏನೋ ಹಗಲು ರಾತ್ರಿ ಗಣಿತದ ಅಭ್ಯಾಸ ಶುರು ಮಾಡಿದೆ. ಗುರುಗಳೂ ಕಲಿಸಿದರು. ಇದರ ಫಲವಾಗಿ ನಾನು ನೂರಕ್ಕೆ ತೊಂಭತ್ತೆರಡು ಅಂಕ ಪಡೆದು ಪಾಸಾದೆ. ಬಹುಮಾನ ಸಿಗದಿದ್ದರೂ ಗಣಿತದ ಗೀಳು ಅಂಟಿತು.  – ಪ್ರಮೋದಿನಿ(ಜೋಶಿ) ಕುಲಕರ್ಣಿ, ಧಾರವಾಡ.

ಎಂದೂ ಮರೆಯಲಾಗದ ಗುರು ಪ್ರೀತಿ : ಗುರುವೊಬ್ಬ ತನ್ನ ಶಿಷ್ಯರ ಮೇಲೆ ಎಂಥ ಪ್ರೀತಿ, ವಿಶ್ವಾಸ ಇಟ್ಟುಕೊಂಡಿರುತ್ತಾರೆ ಎಂಬುದಕ್ಕೆ ನನ್ನ ಜೀವನದಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ. ಎರಡು ವರ್ಷಗಳ ಹಿಂದೆ ನನ್ನದೊಂದು ಪುಸ್ತಕ ಲೋಕಾರ್ಪಣೆಗೊಳ್ಳುವುದಿತ್ತು. ನನ್ನ ಜೀವನದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣರಾಗಿದ್ದ ಹನುಮಂತಗೌಡ ಗೊಲ್ಲರ್ ಸರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ವಿಶೇಷ ಏನೆಂದರೆ, ನನ್ನ ಪುಸ್ತಕ  ಬಿಡುಗಡೆಯ ದಿನವೇ, ಎಂಡಿಯಲ್ಲಿ ಟಾಪರ್ ಆಗಿದ್ದ ಅವರ ಮಗನಿಗೆ ಸನ್ಮಾನ ಸಮಾರಂಭವಿತ್ತು. ಆದರೆ, ಗೊಲ್ಲರ ಸರ್ ಅವರು ಆ ಸಮಾರಂಭವನ್ನು ತ್ಯಾಗ ಮಾಡಿ, ಹಾವೇರಿಯಿಂದ ಮೈಸೂರುಗೆ ಬಂದಿದ್ದರು. ಮೈಸೂರಿನ ಶಾರದಾ ವಿಲಾಸ ಲಾ ಕಾಲೇಜ್‌ನಲ್ಲಿ ನನ್ನ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾದರು. ಇದು ನನ್ನ ಜೀವನದ ಅವಿಸ್ಮರಣೆಯ ಕ್ಷ ಣವಾಗಿತ್ತು. – ರಾಮಣ್ಣ ತಟ್ಟಿ, ತಾಂಡವ, ಮೈಸೂರು ಜಿಲ್ಲೆ.

ಭಿನ್ನಾಭಿಪ್ರಾಯ ಮೆಚ್ಚಿದರು : ನಾನು ಸಂಸ್ಕೃತ ಎಂಎ ಮಾಡುತ್ತಿದ್ದೆ. ಒಂದು ದಿನ ಗ್ರಂಥಾಲಯದಲ್ಲಿ ಪತ್ರಿಕೆ ಓದುತ್ತಿದ್ದಾಗ, ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇರಲಿಲ್ಲ ಎಂಬ ವಿಷಯವಿದ್ದ ಲೇಖನ ಕಾಣಿಸಿತು. ಅದನ್ನು ನಮಗೆ ಉಪನ್ಯಾಸಕಿಯಾಗಿದ್ದ  ಡಾ. ಮೀರಾ ಚಕ್ರವರ್ತಿ ಬರೆದಿದ್ದರು. ಬಳಿಕ ತರಗತಿಗೆ ಹೋದೆ; ಅವರದ್ದೇ ಕ್ಲಾಸ್ ಇತ್ತು. ತರಗತಿ ಮುಗಿದ ಮೇಲೆ, ತಮ್ಮ ಲೇಖನ ಯಾರಾದರೂ ಓದಿದ್ದೀರಾ ಎಂದು ಕೇಳಿದರು. ಕೆಲವು ಸಹಪಾಠಿಗಳು, ಲೇಖನದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ನಾನು ಮೌನವಾಗಿದ್ದೆ. ಆಗ ಮೀರಾ ಮೇಡಂ, ‘‘ಜಯಲಕ್ಷ್ಮಿ, ಯಾಕೆ ಏನೂ ಹೇಳುತ್ತಿಲ್ಲ. ಇಷ್ಟವಾಗದಿದ್ರೆ ಹೇಳಿ’’ ಎಂದರು. ನಾನು ತುಸು ಹಿಂಜರಿಕೆಯಿಂದಲೇ, ‘‘ನಿಮ್ಮ ಲೇಖನದ ವಿಚಾರದಲ್ಲಿ ನನ್ನ ಚಿಂತನೆ , ಅಭಿಪ್ರಾಯ ಬೇರೆ ಇದೆ,’’ ಎಂದೆ.  ಆಗ ಅವರು, ‘‘ನಾನು ಇಂಥ ಅಭಿಪ್ರಾಯವನ್ನೇ ಬಯಸಿದ್ದೆ.  ಗುರುಗಳು ಹೇಳಿದ್ದು ಎಲ್ಲವನ್ನೂಹಾಗೆಯೇ ಒಪ್ಪಿಕೊಳ್ಳಬಾರದು. ತಪ್ಪುಗಳು ಕಂಡು ಬಂದಲ್ಲಿ ಪ್ರಶ್ನಿಸುವ, ತಿದ್ದುವ ಕಾರ್ಯ ತಪ್ಪಲ್ಲ,’’ ಎಂದರು. ನಂತರ, ಅದೇ ಪತ್ರಿಕೆಗೆ ಲೇಖನದ ಬಗ್ಗೆ ವಿಮರ್ಶಾತ್ಮಕ ಲೇಖನ ಬರೆಯಲು ಸೂಚಿಸಿದರು. ಹಾಗೆ ನನ್ನ ಬರವಣಿಗೆ ಕೃಷಿ ಆರಂಭವಾಯಿತು. ಇಂದು ನಾನು ಲೇಖಕಿಯಾಗಿದ್ದೆನೆಂದರೆ ಅದಕ್ಕೆ ಅವರೇ ಕಾರಣ.- ಡಾ. ಎಸ್. ಜಯಲಕ್ಷ್ಮಿ, ಪ್ರಾಧ್ಯಾಪಕಿ, ಬೆಂಗಳೂರು.

ಶಿಸ್ತು ಕಲಿಸಿದ ಘಟನೆ :  ಗುರು, ಗೌರವ ಪದಗಳು ಗೊತ್ತಿದ್ದರೂ ಅವುಗಳನ್ನು ಪಾಲಿಸುತ್ತಿರಲಿಲ್ಲ. ಹುಂಬುತನವೇ ತುಂಬಿದ್ದ ನನ್ನಲ್ಲಿ ಅಚ್ಚರಿ ಎನಿಸುವಷ್ಟು ಬದಲಾವಣೆಗೆ ಕಾರಣರಾಗಿದ್ದು ಸಿಂದಗಿಯ ಎಸ್.ಜಿ. ಹೀರೆಮಠ ಸರ್. ಅದೊಂದು ದಿನ ಬೆಳಗಿನ ಪ್ರಥಮ ಅವಧಿಯಲ್ಲಿ ಹೀರೆಮಠ ಸರ್, ಪಾಠ ಮಾಡುತ್ತಿದ್ದರು. ಆಗ ಹುಡುಗಿಯೊಬ್ಬಳು ಲೇಟಾಗಿ ಬಂದು ಸರ್ ಅನುಮತಿಯೊಂದಿಗೆ ಕ್ಲಾಸ್‌ನಲ್ಲಿ ಕುಳಿತುಕೊಂಡಳು. ನನ್ನ ಬೆಂಚಿನಲ್ಲಿದ್ದ ಸ್ನೇಹಿತ ಅವಳ ಕುರಿತು ಏನೋ ಗೊಣಗಿದ. ಆ ಮಾತಿಗೆ ನಾನು ಗೊಳ್ಳೆಂದು ನಕ್ಕೆ. ಗುರುಗಳು ನನ್ನನ್ನು ಎಬ್ಬಿಸಿ ನಿಲ್ಲಿಸಿ, ‘‘ಯಾಕೆ ನಕ್ಕಿದ್ದು?’’ ಎಂದು ಪ್ರಶ್ನಿಸಿದರು. ಏಕಾಗ್ರತೆಯಿಂದ ಪಾಠ ಮಾಡುವಾಗ ನೀವು ಹೀಗೆ ನಕ್ಕರೆ ಎಲ್ಲವೂ ಏರುಪೇರಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಮೋಸ ಮಾಡಿದಂತಾಗುತ್ತದೆ ಎಂದು ಬಿಟ್ಟರು. ಚಿಂತಕರೆಂದು ಗುರುತಿಸಿಕೊಂಡಿದ್ದ ಅವರಿಂದ ಎಲ್ಲರ ಎದುರು ಬೈಸಿಕೊಂಡಿದ್ದರಿಂದ ಭಾರಿ ಹಿಂಸೆಯಾಯಿತು. ತರಗತಿ ಮುಗಿದ ಮೇಲೆ ಒಬ್ಬನೇ ಕುಳಿತು ಅತ್ತು ಬಿಟ್ಟೆ. ಆ ಮೇಲೆ ಅವರ ಮನೆಗೆ ಹೋದಾಗ ಜಗಳಾಡಲು ಬಂದಿದ್ದೇನೆಂದು ಅವರು ಭಾವಿಸಿದ್ದರು. ಆದರೆ, ನಾನು ಅವರ ಕಾಲಿಗೆ ಬಿದ್ದು ಕ್ಷ ಮೆ ಕೇಳಿದೆ. ಅಲ್ಲಿಂದ ಮತ್ತೆ ಅಂಥ ತಪ್ಪು ಮಾಡಲಿಲ್ಲ. ಆ ಒಂದು ಘಟನೆ ನನ್ನ ಜೀವನಕ್ಕೆ ಶಿಸ್ತು ತಂದುಕೊಟ್ಟಿತು. – ಸಿ ಎಂ ಬಂಡಗರ, ಇಂಡಿ.

ಉಪನ್ಯಾಸಕರ ನೆರವು : ನಮ್ಮದು ಮಧ್ಯಮ ವರ್ಗ. ತಂದೆ ತಾಯಿ ಅನಕ್ಷರಸ್ಥರು. ಹೇಗೋ ಡಿಗ್ರಿ ಪಾಸ್ ಮಾಡಿಕೊಂಡೆ. ಅಕ್ಕ ಪಕ್ಕದವರಿಂದ ಹೆಣ್ಣು ಮಗಳನ್ನು ಓದಿಸಿದರೆ ಏನು ಲಾಭ ಎಂಬಂಥ ಕೊಂಕು ಮಾತುಗಳು ಬೇರೆ. ಇಂಥ ಹೊತ್ತಿನಲ್ಲಿ ಧಾರವಾಡದ ವಿದ್ಯಾರಣ್ಯ ಪಪೂ ಕಾಲೇಜಿನ ಉಪನ್ಯಾಸಕ ಡಾ. ಸುರೇಶ್ ಮೋಳೆ ಅವರು ದೇವರಂತೆ ಬಂದರು. ನನ್ನ ಪರಿಸ್ಥಿತಿ ಎಲ್ಲ ತಿಳಿದು, ಧೈರ್ಯ ತುಂಬಿ ನನಗೆ ಕರ್ನಾಟಕ ವಿವಿಯಲ್ಲಿ ಎಂಎ ಪ್ರವೇಶ ಪರೀಕ್ಷೆ ಬರೆಯಲು ಪ್ರೇರೇಪಿಸಿದರು. ಹಣಕಾಸಿನ ಸಹಾಯ ಮಾಡಿದರು. ಅದರ ಫಲಪವಾಗಿ ನಾನು ಸರಕಾರಿ ಸೀಟ್ ಪಡೆದು, ಎಂಎ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿಕೊಂಡೆ. ಅಂದು ಸರ್ ನನಗೆ ಸಹಾಯ ಮಾಡದಿದ್ದರೆ ಇಂದು ನಾನು ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ. ಸರ್ ನಿಮ್ಮಂಥ ಉತ್ತಮ ಶಿಕ್ಷ ಕರು ಇದ್ದರೆ ಯಾವ ಬಡ ವಿದ್ಯಾರ್ಥಿಗಳೂ ಶಿಕ್ಷಣದಿಂದ ವಂಚಿತರಾಗಲು ಸಾಧ್ಯವಿಲ್ಲ.  -ಮಮತಾಜ್  ಬೇಗಂ, ಧಾರವಾಡ.

ಕದ್ದು ಸಿಕ್ಕಿ ಬಿದ್ದಿದ್ದವನನ್ನು ತಿದ್ದಿದರು : 8ನೇ ತರಗತಿಯಲ್ಲಿದ್ದಾಗ ನನ್ನ ಸಹಪಾಠಿಯೊಬ್ಬನ ಬಳಿ ಇದ್ದ ಕಿಂಗ್ ಪೆನ್ ಕಳವು ಮಾಡಿ ಸಿಕ್ಕಿಬಿದ್ದಿದೆ. ತುಂಬಾ ಸ್ಟ್ರಿಕ್ಟ್ ಆಗಿದ್ದ ನಮ್ಮ ಕ್ಲಾಸ್ ಟೀಚರ್ ಬಿ.ಎ. ಪಾಟೀಲ್ ಅವರಿಂದ ಹೊಡೆತ ಗ್ಯಾರಂಟಿ ಎಂದು ಭಾವಿಸಿದ್ದೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ನನ್ನನ್ನು ತಮ್ಮ ಬಳಿ ಕರೆದು ಕಳವು ಮಾಡುವುದು ತಪ್ಪು ಎಂದು ತಿದ್ದಿ ಹೇಳಿದರು. ಅಂದು ಅವರಾಡಿದ ಮಾತುಗಳು ನನ್ನನ್ನು ಬದಲಿಸಿದವು. ನಾನೀಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಆಗಿದ್ದೇನೆ. ಇದಕ್ಕೆ ಅವರೇ ಕಾರಣ. – ಶರಣು ಖವಟಗೊಪ್ಪ, ಬೆಳಗಾವಿ.

ಗುರುವಿನಂಥ ಗೆಳೆಯ : ಎಸ್ಎಸ್ಎಲ್‌ಸಿ ನಂತರ ಪೋಕರಿಗಳ ಜೊತೆ ಸೇರಿ,  ಅಡ್ಡದಾರಿ ಹಿಡಿದಿದ್ದೆ. ಜೀವನ ಬೇಸರವಾಗಿ ಊರು ಬಿಟ್ಟು ದೂರ ಹೊರಟು ಹೋಗಲು ಬಸ್ ಏರಿ ಕುಳಿತಿದ್ದ ನನ್ನನ್ನು ಅಂದು ತಡೆದು, ಬೈದು ಬುದ್ಧಿವಾದ ಹೇಳಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿ, ಬಸ್‌ನಿಂದ ಕೆಳಗಿಳಿಯುವವರೆಗೂ ನನ್ನ ಕೈಬಿಡದೇ ಬದುಕಿನ ಮೇಲೆ ಭರವಸೆ ಮೂಡಿಸಿದ್ದು ಗುರುವಿನಂತಿರುವ ಗೆಳೆಯ ಮಾದೇಶ್. ಅಂದು ಮಾದೇಶ್ ನೀಡಿದ ಧೈರ್ಯದಿಂದ ಅರ್ಧಕ್ಕೆ ನಿಂತು ಹೋಗಿದ್ದ ನನ್ನ ವಿದ್ಯಾಭ್ಯಾಸವನ್ನು ಪಿಯುಸಿ, ಬಿ ಎ ತದನಂತರ ಎಂ ಎ ಕನ್ನಡ ವಿಷಯದಲ್ಲಿ ದೂರ ಶಿಕ್ಷಣದ ಮೂಲಕ ಪೂರ್ಣಗೊಳಿಸಿ ಇಂದು ಸ್ನಾತಕೋತ್ತರ ಪದವೀಧರನಾಗಿರುವೆ. ಮಾದೇಶ್ ನೀವು ನನ್ನ ಗೆಳೆಯರಷ್ಟೇ ಅಲ್ಲ, ತಪ್ಪು ಮಾಡಿದಾಗಲೆಲ್ಲ ನನ್ನನ್ನು ತಿದ್ದಿ – ತೀಡಿ ದಾರಿ ತಪ್ಪದಂತೆ, ಸರಿ ದಾರಿ ತೋರಿಸಿದ ಗುರು ಸಮಾನರು.- ಚೌಡಪ್ಪ, ಆನೇಕಲ್.

ಅವರ ಪ್ರತಿಕೃತಿ ದಹಿಸಿದ್ದೆ! :  ಅದು ಎಂ ಎಡ್ ತರಗತಿ ಆರಂಭದ ದಿನ. ತರಗತಿಯಲ್ಲಿ ನನ್ನ ಹೆಸರು ಹಿಡಿದು ಕರೆದು ಪ್ರಶ್ನೆಯೊಂದಕ್ಕೆ ಉತ್ತರಿಸುವಂತೆ ಡಾ. ಶಶಿಕಲಾ ಮೇಡಂ ಸೂಚಿಸಿದರು. ಆಗ ಎದೆ ಧಸಕ್ಕೆಂದಿತು. ಯಾಕೆಂದರೆ, ನಾನು ಈ ಹಿಂದೆ ಅವರ ವಿರುದ್ಧವೇ ಪ್ರತಿಭಟನೆ ಮಾಡಿ, ಪ್ರತಿಕೃತಿ ದಹಿಸಿದ್ದೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಭಾವಿಸಿದೆ. ಆದರೆ, ನನ್ನ ಎಣಿಕೆ ಸುಳ್ಳಾಗಿತ್ತು. ಮುಂದೆ ಅವರೇ ನನ್ನ ನೆಚ್ಚಿನ ಗುರುಗಳಾದರು. ಪ್ರಬಂಧ ಹಾಗೂ ಪಿಎಚ್‌ಡಿ ಮಾರ್ಗದರ್ಶಕರಾದರು. ನನ್ನಂಥ ಬಡ ವಿದ್ಯಾರ್ಥಿಯನ್ನು ಗುರುತಿಸಿ ಮಾರ್ಗದರ್ಶನ ಮಾಡಿ, ಉನ್ನತ ವ್ಯಾಸಂಗಕ್ಕೆ ಅವಕಾಶ ಮಾಡಿಕೊಟ್ಟರು. – ಡಾ. ಗುರು ಬಾಗೇವಾಡಿ, ಯಲ್ಲಾಪುರ.

ಗೆಲುವಿಗೆ ಸಹಕರಿಸಿದ ಗುರುವಿನ ಛಲ : ‘ವಿಜಯ ಕರ್ನಾಟಕ’ದ ಸ್ಪೀಕರ್ ಫಾರ್ ಇಂಡಿಯಾ ಚರ್ಚಾ ಕೂಟದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದೆ.  ‘ಜನ ಮೆಚ್ಚಿದ ವಾಗ್ಮಿಯಾಗಲು’ ಜನರು ನೀಡುವ ಮತಗಳೇ ನಿರ್ಣಾಯಕವಾಗಿತ್ತು. ನನಗೆ ಹೆಚ್ಚೆಂದರೆ ಹತ್ತಾರು ಮತಗಳು ಬಿದ್ದಾವು ಎಂದೆಣಿಸಿದ್ದೆ. ಆದರೆ, ಆ ಸಮಯದಲ್ಲಿ ಜೊತೆಗೂಡಿದ ಮೋಹನ್ ಸರ್ ಅವರಿಂದ ಚಮತ್ಕಾರವೇ ನಡೆಯಿತು! 30 ದಿನಗಳ ನಿರಂತರ ಪ್ರಯತ್ನದ ಫಲವಾಗಿ, ‘ಅವಿರಥ’ ತಂಡದ ಪ್ರಯತ್ನದಿಂದಾಗಿ ನನಗೆ 42 ಸಾವಿರಕ್ಕೂ ಹೆಚ್ಚು ಮತಗಳು ಬಂದವು. ಅಷ್ಟೇ ಅಲ್ಲ ನಾನು ಗೆದ್ದೆ ಕೂಡ. ನನ್ನ ಈ ಪ್ರತಿಭೆ ಹಾಗೂ ಪ್ರಯತ್ನದ ಹಿಂದೆ ಮೋಹನ್ ಸರ್ ಅವರ ಕೊಡುಗೆ ಅನನ್ಯವಾಗಿದೆ. -ರೋಹಿತ್ ಜಿ. ಸರಕಾರಿ ವಿಜ್ಞಾನ ಕಾಲೇಜು, ಬೆಂಗಳೂರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top