ಮಹಾಗುರುಗಳ ಮನಮುಟ್ಟುವ ಬೋಧನೆಯ ಝಲಕ್‌ಗಳು

– ಡಾ.ಆರತೀ ವಿ.ಬಿ.

ಜಗತ್ತಿನ ಎಲ್ಲ ಮಹಾಗುರುಗಳು ಸ್ವಾನುಭವದ ಹಿನ್ನಲೆಯಲ್ಲಿ, ಸರಳ ಸುಭಗ ಶೈಲಿಯಲ್ಲಿ ಉಪದೇಶಗಳನ್ನಿತ್ತಿದ್ದಾರೆ. ಇತ್ತೀಚೆಗಷ್ಟೆ ಆಚರಿಸಿದ ಗುರುಪೂರ್ಣಿಮೆಯ ಹಿನ್ನಲೆಯಲ್ಲಿ ಕೆಲವು ಮಹಾಗುರುಗಳ ಉಪದೇಶದ ಬಿಂದುಗಳನ್ನು ಇಲ್ಲಿ ಆಸ್ವಾದಿಸೋಣ.
ಶ್ರೀ ರಾಮಕೃಷ್ಣ ಪರಮಹಂಸರ ಬಳಿಗೆ ಒಬ್ಬಳು ಮಹಿಳೆ ಪುಟ್ಟ ಮಗನನ್ನು ಕರೆತಂದು ವಿನಂತಿಸಿದಳು- ‘‘ಮಹಾಶಯರೇ! ನನ್ನ ಮಗುವಿಗೆ ಕಾಯಿಲೆ. ನಾಟಿ ಚಿಕಿತ್ಸೆ ನಡೆಯುತ್ತಿದೆ. ಸಿಹಿ ತಿನ್ನುವಂತಿಲ್ಲ, ಆದರೆ ಮಗುವು ಸಿಹಿ ಬೇಕು ಎಂದು ಹಟ ಮಾಡುತ್ತಿದೆ. ಮಗುವಿಗೆ ಸ್ವಲ್ಪ ತಿಳಿಹೇಳುವಿರಾ?’’ ರಾಮಕೃಷ್ಣರು ನುಡಿದರು, ‘‘ಮೂರು ದಿನ ಬಿಟ್ಟು ಬಾರಮ್ಮ.’’ ಮೂರು ದಿನದ ಬಳಿಕ ಮಹಿಳೆ ಮಗುವಿನೊಡನೆ ಬಂದಳು. ರಾಮಕೃಷ್ಣರು ಮಗುವನ್ನು ಮಡಿಲಲ್ಲಿ ಕೂರಿಸಿಕೊಂಡು ಸ್ನೇಹದಿಂದ ತಿಳಿಹೇಳಿದರು. ಮಗುವು ಒಪ್ಪಿಕೊಂಡಿತು. ಮಹಿಳೆ ಕೇಳಿದಳು, ‘‘ಈ ಬುದ್ಧಿಮಾತನ್ನು ಮೊನ್ನೆಯೇ ಏಕೆ ಹೇಳಲಿಲ್ಲ?’’ ರಾಮಕೃಷ್ಣರು ಉತ್ತರಿಸಿದರು- ‘‘ಅಮ್ಮ, ನಾನು ಸ್ವತಃ ಸಿಹಿತಿನಿಸುಗಳನ್ನು ತಿನ್ನುತ್ತಿರುತ್ತೇನೆ. ನಾನು ಮೂರು ದಿವಸ ಸಿಹಿಯನ್ನು ತ್ಯಾಗ ಮಾಡಿದೆ. ನನ್ನಿಂದ ಸಾಧ್ಯವಾದದ್ದನ್ನು ಮಾತ್ರ ಮಗುವಿಗೆ ಉಪದೇಶವಿತ್ತೆ!’’ ಎಂದರಂತೆ! ‘ಎಲ್ಲರುಂ ಸಾಧುಗಳು ಎಲ್ಲರುಂ ಬೋಧಕರೆ ಜೀವನಪರೀಕ್ಷೆ ಬಂದಿದಿರುನಿಲುವನಕ!’ ಎಂಬಂತೆ, ಉಪದೇಶಶೂರರಾದ ಗುರುಗಳು ಹಲವರು. ಆದರೆ ಸ್ವಯಂ ಆಚರಿಸಿ, ಶಿಷ್ಯರಿಗೆ ಉಪದೇಶವೀಯುವ ಸದ್ಗುರುಗಳು ಎಷ್ಟು ಮಂದಿ? ರಾಮಕೃಷ್ಣರ ಈ ಪ್ರಾಮಾಣಿಕತೆಯೇ ಅವರನ್ನು ಮಹಾಗುರುವಿನ ಪಟ್ಟಕ್ಕೇರಿಸಿದ್ದು!
ಭಗವಾನ್‌ ರಮಣಮಹರ್ಷಿಗಳ ಬಳಿಗೆ ಒಬ್ಬ ಭಕ್ತನು ಬಂದು ಕೇಳಿದ- ‘‘ಭಗವನ್‌! ಕರ್ಮಕ್ಕೂ ಕರ್ಮಯೋಗಕ್ಕೂ ಏನು ವ್ಯತ್ಯಾಸ?’’ ಭಗವಾನರು ಮಿತಭಾಷಿ, ‘ಮೌನೀಸ್ವಾಮಿ’ ಎಂದೇ ಕರೆಯಲ್ಪಡುತ್ತಿದ್ದರು. ರಮಣರು ಭಕ್ತನನ್ನು ಜೊತೆಗೂಡಿಕೊಂಡು ಅರುಣಗಿರಿಯನ್ನು ಹತ್ತಲಾರಂಭಿಸಿದರು. ಬೆಟ್ಟದಲ್ಲಿ ಒಬ್ಬಳು ಮುದುಕಿ ಕಟ್ಟಿಗೆಗಳ ಹೊರೆಯನ್ನು ಹೊತ್ತು, ಆಯಾಸಪಡುತ್ತ ಹತ್ತುತ್ತಿದ್ದಳು. ಭಗವಾನರು ಅವಳ ತಲೆಯ ಹೊರೆಯಿಂದ ಒಂದು ಉದ್ದನೆಯದನ್ನು ತೆಗೆದು, ಅವಳ ಕೈಗಿತ್ತು ಹೇಳಿದರು- ‘‘ಅಮ್ಮ, ಇದನ್ನು ಊರಿಕೊಂಡು ನಡೆ, ಆಯಾಸವಾಗದು,’’ ಎಂದು. ಆ ಬಳಿಕ ಭಗವಾನರು ಭಕ್ತನತ್ತ ತಿರುಗಿ ಹೇಳಿದರು- ‘‘ನೋಡು ಆಕೆ ಮೊದಲು ಕಷ್ಟಪಟ್ಟು ಕಟ್ಟಿಗೆ ಹೊರುತ್ತಿದ್ದಳಲ್ಲ, ಅದು ‘ಕರ್ಮ’! ಅದೇ ಕಟ್ಟಿಗೆಯಲ್ಲಿ ಒಂದನ್ನು ಊರುಗೋಲನ್ನಾಗಿಸಿಕೊಂಡು ನಡೆಯುತ್ತಿದ್ದಾಳಲ್ಲ, ಇದೇ ‘ಕರ್ಮಯೋಗ’. ‘ಭಾರ’ ಮಾಡಿಕೊಂಡರೆ ಕರ್ಮ, ಹಗುರ ಮಾಡಿಕೊಂಡು ಮಾಡಿದರೆ ಅದೇ ಕರ್ಮಯೋಗ,’’ ಎಂದು! ಮಾನುಷ ಜೀವನದಲ್ಲಿ ಕೆಲವು ಕರ್ತವ್ಯಗಳು ಅನಿವಾರ್ಯ. ಅಂತೆಯೇ ಕೆಲವು ತ್ಯಾಗ, ಸೇವೆ, ಹೊಂದಾಣಿಕೆ, ಬಲಿದಾನಗಳೂ ಅಪೇಕ್ಷಿತ. ಆದರೆ ನಾವು ಇವನ್ನೆಲ್ಲ ಮಾಡುವಾಗ ಬೇಸರಿಸುತ್ತ, ಗೊಣಗುತ್ತ ಸಾಗುತ್ತೇವೆ. ಕರ್ಮ! ಕರ್ಮ! ಎಂದು ತಲೆ ಚಚ್ಚಿಕೊಳ್ಳುತ್ತೇವೆ! ಇಂತಹ ಕರ್ಮದಿಂದ ತನುಮನಗಳಿಗೆ ಆಯಾಸ ಕೊರಗು ಜಾಸ್ತಿ, ತೃಪ್ತಿ-ಪ್ರಸನ್ನತೆಗಳು ಬಾರವು. ಆದರೆ, ಇದೇ ಕರ್ತವ್ಯಗಳನ್ನೂ ಸೇವೆಯನ್ನೂ ಹೊಂದಾಣಿಕೆ-ತ್ಯಾಗಗಳನ್ನೂ ‘ದೇವರ ಇಚ್ಛೆ, ಜೀವನನೀತಿ’ ಎಂದು ಅಂಗೀಕರಿಸಿ, ಪ್ರೀತಿಯಿಂದ ಆಸ್ಥೆಯಿಂದ ಮಾಡುತ್ತ ಸಾಗಿದರೆ, ಆ ಎಲ್ಲ ಕಾರ್ಯಗಳೂ ನಮಗೆ ತೃಪ್ತಿಯನ್ನೂ ಕರ್ಮಕೌಶಲವನ್ನೂ ಸ್ನೇಹವನ್ನೂ ಕೀರ್ತಿಯನ್ನೂ ಸಂತೋಷವನ್ನೂ ತರುತ್ತವೆ. ಮಾಡುವ ಕೆಲಸವನ್ನೇ ‘ಯೋಗಕ್ಕೆ ಊರುಗೋಲನ್ನಾಗಿ’ ಬಳಸುವ ಈ ಭಾವ, ಕರ್ಮವನ್ನು ಕರ್ಮಯೋಗವನ್ನಾಗಿಸುತ್ತದೆ!
ಭಗವಾನ್‌ ಬುದ್ಧನ ತಪೋಮಯ ವ್ಯಕ್ತಿತ್ವವೂ, ಸರಳ ನಿರಾಡಂಬರ ಉಪದೇಶವು, ಸಾವಿರಾರು ಜನರನ್ನು ಸೆಳೆಯುತ್ತಿದ್ದವು. ಇದನ್ನು ಕಂಡು ಪಂಡಿತನೊಬ್ಬನಿಗೆ ಮತ್ಸರ. ತಾನು ವರ್ಷಗಟ್ಟಲೆ ಓದಿಕೊಂಡು ವ್ಯಾಖ್ಯಾನಿಸುವ ಶಾಸ್ತ್ರಾರ್ಥಗಳನ್ನು ಆಲಿಸಲು ಬಾರದ ಜನರು, ಈ ಪರದೇಶಿ ಸಂನ್ಯಾಸಿಯ ಮಾತನ್ನಾಲಿಸಲು ಅಪಾರ ಸಂಖ್ಯೆಯಲ್ಲಿ ಮುತ್ತುತಾರಲ್ಲ! ಬುದ್ಧನ ಮಾತುಗಳಲ್ಲಿ ಹೊಸತೇನೂ ಇಲ್ಲ, ಅನಾದಿಯಿಂದ ಉಪದೇಶಿಸಲಾದ ಸತ್ಯಧರ್ಮಗಳ, ಶಮದಮಗಳ ಹಾಗೂ ಜೀವದಯೆ-ವಿಶ್ವಪ್ರೇಮಗಳ ಬಗ್ಗೆಯೇ ಹೇಳುತ್ತಿದ್ದಾನೆ, ಅಷ್ಟೆ! ಆದರೂ ಏನೀ ಆಕರ್ಷಣೆ?! ಎಂದು ಗೊಂದಲಪಟ್ಟ. ಕೊನೆಗೆ ಬುದ್ಧನ ಬಳಿಸಾರಿ ಕೇಳಿಯೇಬಿಟ್ಟ. ‘‘ನನಗೆ ನೀನು ಹೇಳುವ ಎಲ್ಲವೂ ಮೊದಲೇ ಗೊತ್ತು. ಆದರೂ ನಿನ್ನ ಬಳಿಗೆ ಬಂದಿದ್ದೇನೆ. ನಿನಗಂತಹದ್ದೇನು ಗೊತ್ತೋ ಕಲಿಸು,’’ ಎಂದ. ಬುದ್ಧನು ಪಂಡಿತನನ್ನು ಸ್ನೇಹಾದರಗಳಿಂದ ಕೂರಿಸಿ, ಅವನ ಕೈಯಲ್ಲಿ ಒಂದು ಬಟ್ಟಲನ್ನಿಟ್ಟು ಅದರೊಳಗೆ ಕಷಾಯವನ್ನು ಬಡಿಸಲಾರಂಭಿಸಿದ. ಬಟ್ಟಲು ತುಂಬಿ ಕಷಾಯವು ಹೊರ ಚೆಲ್ಲಲಾರಂಭಿಸಿದರೂ ನಿಲ್ಲಿಸಲಿಲ್ಲ. ಅವಾಕ್ಕಾದ ಪಂಡಿತ ಚೀರಿದ- ‘‘ಬಟ್ಟಲು ತುಂಬಿರುವುದು ಕಾಣುತ್ತಿಲ್ಲವೆ? ಇನ್ನೂ ಕಷಾಯ ಸುರಿದರೆ ಹೇಗೆ ಹಿಡಿಸೀತು?’’ ಬುದ್ಧನು ನಗುತ್ತ ನುಡಿದನಂತೆ, ‘‘ಎಲ್ಲವೂ ಗೊತ್ತು ಎಂದು ಮನಸ್ಸನ್ನು ತುಂಬಿಕೊಂಡೇ ಬಂದರೆ, ನಾನದರೊಳಗೆ ಏನನ್ನು ತಾನೇ ತುಂಬಲಿ?’’ ಪಂಡಿತನಿಗೆ ಅರ್ಥವಾಯ್ತು! ನನಗೆಲ್ಲವೂ ಮೊದಲೇ ಗೊತ್ತು ಎನ್ನುವ ಭಾವವೇ ಹೆಚ್ಚಿನ ಜ್ಞಾನಾರ್ಜನೆಗೆ ಅವನ ಪಾಲಿಗೆ ತಡೆಗೋಡೆಯಾಗಿದೆ ಎಂದು!
ಪಂಡಿತನು ಬುದ್ಧನೊಡನೆ ಕೆಲಕಾಲ ವಾಸ ಮಾಡಿದ. ಶಾಸ್ತ್ರಚರ್ಚೆಗಳಲ್ಲಿ ತೊಡಗಿ, ಬುದ್ಧನಿಂದ ಕಲಿಯಬಹುದು, ಬುದ್ಧನಿಗೇ ಕಲಿಸಬಹುದು, ಎಂದೆಲ್ಲ ಆಲೋಚಿಸಿದ. ಆದರೆ ಬುದ್ಧನು ದಿನದ ಬಹುಭಾಗ ಮೌನದಲ್ಲೂ ಧ್ಯಾನದಲ್ಲೂ ಕರ್ಮಯೋಗದಲ್ಲೂ ತೊಡಗಿರುತ್ತಿದ್ದ. ಚರ್ಚೆಗೆಳೆದರೂ ಸರಳ-ನೇರ ಉತ್ತರವನ್ನಿತ್ತು ಮತ್ತೆ ಮೌನವಾಗಿರುತ್ತಿದ್ದ. ಈ ಮಟ್ಟದ ಮೌನ, ಶಾಂತಿ, ಅಂತರ್ಮುಖತೆಗಳನ್ನು ಎಂದೂ ಕಂಡಿರದ ರಾಜಸಸ್ವಭಾವದ ಪಂಡಿತನಿಗೆ ಚಡಪಡಿಕೆ ಶುರುವಾಯಿತು. ‘ತಾನು ಕೇವಲ ಬುದ್ಧಿಯಿಂದ ಗ್ರಹಿಸಿ, ವೈದುಷ್ಯದಿಂದ ಬಣ್ಣಿಸುವ ಸತ್ಯಗಳನ್ನು ಬುದ್ಧನು, ಅನುಭವದಲ್ಲಿ ಕಂಡುಕೊಂಡಿದ್ದರಿಂದಲೇ ಅವನ ಮಾತಿಗೆ ಅಷ್ಟು ಪುಷ್ಟಿ!’ ಎನ್ನುವುದು ಅವನಿಗೆ ಅರ್ಥವಾಯಿತು. ಮಹಾಗುರುವಿನ ಶಿಕ್ಷಣದ ಪರಿ ಎಷ್ಟು ಮನೋಜ್ಞ!
ಆದಿಶಂಕರರು ವಿವೇಕಚೂಡಾಮಣಿಯಲ್ಲಿ ಇದನ್ನೇ ಸಾರುತ್ತಾರೆ- ‘ವಾಗ್ವೈಖರೀಶಬ್ದಝರೀ ಶಾಸ್ತ್ರವ್ಯಾಖ್ಯಾನಕೌಶಲಂ ಋ ವೈದುಷ್ಯಂ/ ವಿದುಷಾಂ ತದ್ವದ್ಭುಕ್ತಯೇ ನ ತು ಮುಕ್ತಯೇ’- ವಾಗ್ವೈಖರಿಯೂ ಶಬ್ದಝರಿಯೂ ಶಾಸ್ತ್ರವ್ಯಾಖ್ಯಾನ ಕೌಶಲಗಳೆಲ್ಲ (ಕೀರ್ತಿ-ಪದವಿ- ಹಣ-ಉದ್ಯೋಗ ಹಾಗೂ ಶಿಷ್ಯಪ್ರಾಪ್ತಿಗಳಂತಹ) ಭೋಗವನ್ನೊದಗಿಸುತ್ತವೆಯೇ ಹೊರತು, ಮುಕ್ತಿಯನ್ನಲ್ಲ.
ಝೆನ್‌ ಗುರುವೊಬ್ಬ ಕಂಗ್‌ ಫೂ ವಿದ್ಯೆಯಲ್ಲಿ ಬಹಳ ಪ್ರವೀಣ. ನವಯುವಕನೊಬ್ಬನು ಅವನ ಬಳಿಗೆ ಬಂದು ಉತ್ಸಾಹದಿಂದ ಕೇಳಿದ- ‘‘ಗುರುಗಳೆ, ಕಂಗ್‌ ಫೂ ಕಲಿಯಲು ನನಗೆ ಎಷ್ಟು ವರ್ಷ ಬೇಕಾದಾವು?’’ ಗುರುವು ಹೇಳಿದ- ‘‘ಹತ್ತು ವರ್ಷಗಳು ಬೇಕಾದಾವು.’’ ‘‘ಅಯ್ಯೋ ಹತ್ತು ವರ್ಷಗಳೇ?! ಹಗಲೂ ರಾತ್ರಿ ಅಭ್ಯಾಸ ಮಾಡಿ, ಬೇಗ ಕಲಿತರೆ, ಎಷ್ಟು ವರ್ಷ ಹಿಡಿದಾವು?’’ ಗುರುವು ನಸುನಗುತ್ತ ಉತ್ತರಿಸಿದ- ‘‘ಇಪ್ಪತ್ತು ವರ್ಷಗಳು!’’ ಗುರುವಿನ ಉತ್ತರ ಎಷ್ಟು ಧ್ವನಿಪೂರ್ಣ! ವಿದ್ಯೆಗಳನ್ನು ಕಲಿಯುವಾಗ, ಅದರ ಆಳ-ವ್ಯಾಪ್ತಿಗಳನ್ನೂ, ಅನ್ವಯ- ಅನುಷ್ಠಾನಗಳನ್ನೂ ಪರಿಭಾವಿಸಿ, ಆದರ ತೋರಬೇಕು. ಆಗ ಮಾತ್ರ ಕಲಿಕೆಗೆ ಬೇಕಾದ ತಾಳ್ಮೆ ಉತ್ಸಾಹಗಳು ಮೊಳೆಯುತ್ತವೆ, ಕ್ರಮೇಣ ವಿದ್ಯೆಯೂ ಸಿದ್ಧಿಸುತ್ತದೆ. ಆದರೆ ವಿದ್ಯೆಯನ್ನು ಇಷ್ಟು ದಿನಗಳಲ್ಲಿ ಇಷ್ಟು ಅಧ್ಯಾಯಗಳನ್ನೂ, ಇಷ್ಟು ಪ್ರಯೋಗಗಳನ್ನೂ ಕಲಿತರಾಯ್ತು! ಎನ್ನುವ ಲೆಕ್ಕಾಚಾರ-ಆತುರ-ಉಢಾಫೆ ಭಾವದಲ್ಲಿ ಕಲಿತರೆ, ಆ ವಿದ್ಯೆ ಸಿದ್ಧಿಸಲಾಗದು. ಇವರಲ್ಲಿ ಅಪಕ್ವಜ್ಞಾನ ಬಿಂಬಿತವಾಗುತ್ತ, ಸಮಾಜದಲ್ಲಿ ನಗೆಪಾಟಲಾಗುತ್ತರೆ. ಹೀಗಾಗಿ ದಿನಗಳ ಲೆಕ್ಕದಲ್ಲಷ್ಟೇ ವಿದ್ಯೆ ಕಲಿಯುವವರಿಗೆ ಏನೂ ದಕ್ಕದು ಎನ್ನುವುದು ಝೆನ್‌ ಗುರುವಿನ ಮಾತಿನ ಧ್ವನಿ!
ಜಪಾನಿನ ಸಂತ ಹಾಕುಯೀ ಎಂಬವನನ್ನು ಯೋಧನೊಬ್ಬ ಕೇಳಿದ- ‘‘ಸ್ವರ್ಗ ಮತ್ತು ನರಕ- ಇವೆರಡರ ಬಗ್ಗೆ ತಿಳಿಸಿ,’’ ಎಂದು. ಗುರು ಹಾಕುಯೀ ಕೇಳಿದ- ‘‘ನೀನು ಯಾರು?’’ ಯೋಧ ಉತ್ತರಿಸಿದ- ‘‘ನನ್ನ ಹೆಸರು ನೋಬುಶೀಗೆ. ನಾನು ಒಬ್ಬ ಯೋಧ’’. ಹಾಕುಯೀ ಹೇಳಿದ- ‘‘ಏನು! ಯೋಧನೆ?! ನಿನ್ನಂತಹ ದುರ್ಬಲನನ್ನು ಯಾವ ರಾಜ ತಾನೇ ಸೈನ್ಯಕ್ಕೆ ಸೇರಿಸಿಕೊಂಡಾನು?’’ ನೋಬುಶೀಗೆ ಕೋಪದಿಂದ ಒರೆಯಿಂದ ಖಡ್ಗವನ್ನು ಸೆಳೆದು- ‘‘ನನ್ನನ್ನು ಏನೆಂದುಕೊಂಡಿದ್ದೀಯೆ?!’’ ಎಂದ! ಹಾಕುಯೀ ನುಡಿದ- ‘‘ನಿನ್ನ ಈ ತುಕ್ಕು ಹಿಡಿದ ಮೊಂಡು ಕತ್ತಿಗೆ, ನನ್ನ ತಲೆಯನ್ನು ಕತ್ತರಿಸುವ ಶಕ್ತಿಯೆಲ್ಲಿದೆ ಬಿಡು!’’ ನೋಬುಶೀಗೆ ಕೋಪಾವೇಶದಲ್ಲಿ ಹಾಕುಯೀ ತಲೆಯನ್ನೇ ಕತ್ತರಿಸಲು ನುಗ್ಗಿದ. ಆಗ ಹಾಕುಯೀ ನಗುತ್ತ ಹೇಳಿದ- ‘‘ಇದೋ! ಈಗ ನಿನ್ನಲ್ಲಿ ಸೃಷ್ಟಿಯಾಗಿರುವುದೇ ನರಕ!’’ ಆ ಮಾತಿಗೆ ನೋಬುಶೀಗೆ ಸ್ತಬ್ಧವಾದ. ಚಣಕಾಲ ಆಲೋಚಿಸಿ, ಶಾಂತನಾದ. ಸಂಕೋಚದಿಂದ ಕತ್ತಿಯನ್ನಿಳಿಸಿ ತಲೆ ಬಾಗಿದ. ಹಾಕುಯೀ ನಗುತ್ತ ಹೇಳಿದ- ‘‘ಇದೋ! ಈಗ ನಿನ್ನಲ್ಲಿ ಸೃಷ್ಟಿಯಾದದ್ದೇ ಸ್ವರ್ಗ!’’ ಎಂತಹ ಮಾತು! ಬಸವಣ್ಣನವರ ಮಾತೂ ‘ಅಯ್ಯಾ ಎಂದೊಡೆ ಸ್ವರ್ಗ, ಎಲವೋ ಎಂದೊಡೆ ನರಕ?’ ನಮಗೆ ಇದನ್ನೇ ತಿಳಿಸುತ್ತಿದೆ.
ಜಾನಪದೀಯ ಕಥೆಯೊಂದು ಹೀಗಿದೆ- ಹೊಳೆಯ ತೀರದಲ್ಲಿ, ಮರದಡಿಯಲ್ಲಿ ಗುರುಗಳು ನಾಲ್ಕಾರು ಶಿಷ್ಯರಿಗೆ ಉಪದೇಶಗೈಯ್ಯುತ್ತಿದ್ದರು. ಒಬ್ಬ ಶಿಷ್ಯನು ಹಠಾತ್ತನೆ ‘‘ಗುರುಗಳೇ, ನಾನು ಚಾಪೆ ಮರೆತುಬಂದೆ,’’ ಎನ್ನುತ್ತ, ನದಿಯ ಮೇಲೆ ನಡೆಯುತ್ತ ಆಚೆಯ ದಡದಲ್ಲಿದ್ದ ಆಶ್ರಮದಿಂದ ತನ್ನ ಚಾಪೆಯನ್ನು ತಂದ. ಕೆಲಕಾಲವಾಯಿತು. ಗುರುಗಳು ಮತ್ತೊಬ್ಬ ಶಿಷ್ಯನಿಗೆ, ‘‘ಆಶ್ರಮಕ್ಕೆ ಹೋಗಿ ನನ್ನ ಶಾಸ್ತ್ರಗ್ರಂಥವನ್ನು ತಾ,’’ ಎಂದರು. ಆತನೂ ನದಿಯ ಮೇಲೆ ಸಲೀಸಾಗಿ ನಡೆಯುತ್ತ ಹೋಗಿ ಗ್ರಂಥವನ್ನು ತಂದುಕೊಟ್ಟ. ಪಾಠವೆಲ್ಲ ಮುಗಿದ ಮೇಲೆ, ಹೊಸಶಿಷ್ಯನೊಬ್ಬನಿಗೆ ಕುತೂಹಲವೋ ಕುತೂಹಲ! ತಾನೂ ಹೊಳೆಯ ಮೇಲೆ ನಡೆದು ಹೋಗುವ ಉತ್ಸಾಹ! ಹೊಳೆಯ ನೀರಮೇಲೆ ಹೆಜ್ಜೆಯಿಟ್ಟೇ ಬಿಟ್ಟ! ಆದರೆ ನೀರಲ್ಲಿ ಮುಳುಗಿ, ಚಡಪಡಿಸಿದ. ಗುರುಗಳು ಅವನನ್ನು ಕಾಪಾಡಿದರು. ನಂತರ ಹೇಳಿದರು- ‘‘ಮಗು, ನದಿಯ ನೀರೊಳಗೆ ಅಲ್ಲಲ್ಲಿ ಬಂಡೆಗಳಿವೆ. ನೀನು ನನ್ನನ್ನು ಒಂದು ಮಾತು ಕೇಳಿದ್ದರೆ, ಎಲ್ಲೆಲ್ಲಿ ಕಾಲಿಟ್ಟರೆ ಸುರಕ್ಷಿತವಾಗಿ ನಡೆದು ಹೋಗಬಹುದು ಎಂದು ಕಲಿಸುತ್ತಿದ್ದೆನಲ್ಲ! ಏಕೆ ಹೀಗೆ ದುಡುಕಿದೆ?’’
ಜೀವನದ ಹೊಳೆಯಲ್ಲಿ ದಾಟಿ ಹೋದ ಮಹಾತ್ಮರೆಲ್ಲರೂ ಅದಾವುದೋ ಪವಾಡ ಮಾಡಿಯೇ ಗೆದ್ದರು ಎನ್ನುವ ಭ್ರಾಂತಿ ನಮ್ಮಲ್ಲಿರುತ್ತದೆ! ಹಾಗೇನಿಲ್ಲ. ಜೀವನನದಿಯಲ್ಲಿ ಎಲ್ಲಿ ಹೆಜ್ಜೆ ಇಟ್ಟರೆ ಕ್ಷೇಮ, ಎಲ್ಲಿ ಹೆಜ್ಜೆ ಇಟ್ಟರೆ ಮುಳುವು ಎನ್ನುವ ಪರಿಜ್ಞಾನವನ್ನು ಪಡೆದಿರುತ್ತಾರೆ, ಅಷ್ಟೆ. ಯೋಗ್ಯ ಆಚಾರ್ಯರ ಮೂಲಕವೋ, ಅನುಭವದ ಮೂಲಕವೋ ಸರ್ವಾಂತರ್ಯಾಮಿ ಗುರುವು ಎಲ್ಲರಿಗೂ ಅರಿವು ಮೂಡಿಸುತ್ತಿರುತ್ತಾನೆ. ಎಲ್ಲ ಮಹಾತ್ಮರ ಮಾತುಗಳಲ್ಲೂ ಒಂದೇ ಬಗೆಯ ವಿವೇಕವು ಸೂಸುವುದನ್ನು ಗಮನಿಸಬಹುದು. ಏಕೆಂದರೆ ಅವರೆಲ್ಲರ ಆಂತರ್ಯದಲ್ಲೂ ಪ್ರವರ್ತಿಸಿರುವ ಮಹಾಗುರುವು ಒಬ್ಬನೆ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top