ಮಾನ್ಯ ಮುಖ್ಯಮಂತ್ರಿಗಳೇ ಈ ಮಾತನ್ನೊಮ್ಮೆ ಕೇಳಿಸಿಕೊಳ್ಳುವಿರಾ?

ರಾಜಕಾರಣಿಗಳ ಬಗ್ಗೆ ಜನರಲ್ಲಿ ಯಾಕಿಷ್ಟು ಆಕ್ರೋಶ? ಮರಳುಗಾಡಿನಲ್ಲಿ ಓಯಸಿಸ್‍ನಂತೆ ರವಿಯಂತಹ ಒಬ್ಬ ದಕ್ಷ, ಜನಾನುರಾಗಿ ಅಧಿಕಾರಿ ಸಿಕ್ಕರೆ ಜನರು ಯಾಕಿಷ್ಟು ಆರಾಧಿಸುತ್ತಾರೆ ಮತ್ತು ಮನೆಮಗನಂತೆ ಪ್ರೀತಿಸುತ್ತಾರೆಂಬುದನ್ನು ಒಂದು ಕ್ಷಣವಾದರೂ ಆಲೋಚನೆ ಮಾಡುತ್ತೀರಾ ಮುಖ್ಯಮಂತ್ರಿಗಳೇ? 

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ…

ಈ ಸಂದರ್ಭದಲ್ಲಿ ಬೇರಿನ್ನೇನನ್ನೂ ಬರೆಯುವ ಮನಸ್ಥಿತಿಯಲ್ಲಿ ನಾವಿಲ್ಲ್ಲ. ಇಲ್ಲಿ ನಾವು ಅಂದರೆ ಪತ್ರಕರ್ತ ಸಮುದಾಯದವರು. ದಕ್ಷ ಐಎಎಸ್ ಅಧಿಕಾರಿ ಎಂದೇ ಹೆಸರಾಗಿದ್ದ ಡಿ.ಕೆ ರವಿ ಅವರ ಅಕಾಲಿಕ ಸಾವು ಉಂಟುಮಾಡಿರುವ ನೋವಿನ ಪರಿಣಾಮವದು. ಬಹುಶಃ ಬೇರೆ ಪತ್ರಕರ್ತರ ಮನಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದುಕೊಂಡಿದ್ದೇನೆ. ಅದರ ಪರಿಣಾಮವನ್ನು ನೀವೇ ನೋಡುತ್ತಿದ್ದೀರಾ. ಯಾವುದೇ ಪತ್ರಿಕೆಯನ್ನು ಕೈಗೆತ್ತಿಕೊಳ್ಳಿ, ರವಿ ಸುದ್ದಿಗೇ ಪ್ರಾಮುಖ್ಯತೆ. ಯಾವುದೇ ಟಿವಿ ಚಾನೆಲ್ ಬಟನ್ ಅದುಮಿ ನೋಡಿ. ರವಿ ಸಾವು ಮತ್ತು ಅದಕ್ಕೆ ಸಂಬಂಧಿಸಿದ ಸುದ್ದಿ, ವಿಶೇಷ ವರದಿಯನ್ನು ಬಿಟ್ಟರೆ ಬೇರೆ ಇನ್ನೇನನ್ನೂ ನೀವು ನೋಡಲು ಸಾಧ್ಯವಿಲ್ಲ. ಬೇರೆ ಚರ್ಚೆ ಇಲ್ಲ, ಮಾತಿಲ್ಲ, ಕತೆಯಿಲ್ಲ. ಯಾಕೆ ಹೀಗೆ? ಪತ್ರಕರ್ತರಿಗೆ, ಪತ್ರಿಕೆಗಳಿಗೆ ಮಾಡಲು ಕೆಲಸ ಇಲ್ಲ, ಬರೆಯಲು ಬೇರೆ ವಿಷಯವಿಲ್ಲ ಅಂತ ನೀವು ಅಂದುಕೊಳ್ಳಲು ಕಾರಣವಿಲ್ಲ. ಬರೆಯಲು ಮತ್ತು ಸುದ್ದಿ ಮಾಡಲು ಬೇಕಾದಷ್ಟು ಸಮಾಚಾರಗಳಿವೆ. ಟಿವಿ ಕಾರ್ಯಕ್ರಮ ಮಾಡಲು ಬೆಟ್ಟದಷ್ಟು ವಿಷಯಗಳೂ ಇವೆ. ಆದರೆ ರವಿ ಸಾವಿನ ದುರಂತದ ಮುಂದೆ ಅದ್ಯಾವುದೂ ಸುದ್ದಿ ಅಂತಲೇ ನಮಗೆ ಅನ್ನಿಸುತ್ತಿಲ್ಲ. ಬೇರಾವುದರ ಕುರಿತೂ ಬರೆಯಲು, ವರದಿ ಮಾಡಲು ಮನಸ್ಸಾಗುತ್ತಿಲ್ಲ. ನೀವೂ ಒಮ್ಮೆ ಹಿಂತಿರುಗಿ ಆ ಕುರಿತು ಆಲೋಚನೆ ಮಾಡುತ್ತೀರಾ? ಅಂತಹ ನಿರೀಕ್ಷೆಯಲ್ಲೇ ನಾವಿದ್ದೇವೆ.

ಡಿ.ಕೆ.ರವಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ
ಡಿ.ಕೆ.ರವಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ

ರಾಜಕಾರಣಿಗಳ ಬಗ್ಗೆ ಜನರಲ್ಲಿ ಯಾಕಿಷ್ಟು ಆಕ್ರೋಶ? ಮರಳುಗಾಡಿನಲ್ಲಿ ಓಯಸಿಸ್‍ನಂತೆ ರವಿಯಂತಹ ಒಬ್ಬ ದಕ್ಷ, ಜನಾನುರಾಗಿ ಅಧಿಕಾರಿ ಸಿಕ್ಕರೆ ಜನರು ಯಾಕಿಷ್ಟು ಆರಾಧಿಸುತ್ತಾರೆ ಮತ್ತು ಮನೆಮಗನಂತೆ ಪ್ರೀತಿಸುತ್ತಾರೆಂಬುದನ್ನು ಒಂದು ಕ್ಷಣವಾದರೂ ಆಲೋಚನೆ ಮಾಡುತ್ತೀರಾ ಮುಖ್ಯಮಂತ್ರಿಗಳೇ?

ರವಿ ತುಮಕೂರಿನವರಾಗಿದ್ದರು ಎಂಬ ಕಾರಣಕ್ಕೆ ಅಲ್ಲಿನ ಜನರ ಸಹನೆ ಕಟ್ಟೆಯೊಡೆಯಿತು ಎಂದಿಟ್ಟುಕೊಳ್ಳೋಣ. ಆದರೆ ಎಲ್ಲಿಯ ರವಿ, ಎಲ್ಲಿಯ ಕೋಲಾರ? ಎಲ್ಲಿಯ ಕೊಪ್ಪಳ, ಹುಬ್ಬಳ್ಳಿ, ಕಲಬುರ್ಗಿಯ ಜನ? ರವಿಯವರ ಜಾತಿ, ಕುಲ, ಮೂಲವನ್ನು ನೋಡಿಕೊಂಡು ಜನ ರೊಚ್ಚಿಗೆದ್ದಿದ್ದಾರೆ ಅಂತ ಅಂದುಕೊಂಡಿದ್ದೀರಾ? ಹಾಗಂದುಕೊಂಡರೆ ಅದಕ್ಕಿಂತ ದೊಡ್ಡ ತಪ್ಪು ಬೇರೊಂದಿರಲಾರದು. ಅವತ್ತಿನ ದಿನ.. ಅಂದರೆ ಭ್ರಷ್ಟರ ಮೇಲೆರಗಿ ಗರ್ಜನೆ ಮಾಡುತ್ತಿದ್ದ ಖಡಕ್ ಅಧಿಕಾರಿ ರವಿ ನಿರ್ಜೀವವಾಗಿ ಮಲಗಿದ್ದ ದಿನ ಕೋಲಾರ, ತುಮಕೂರಿನ ಜನರು ರೌದ್ರಾವತಾರ ತಾಳಿ ಬೀದಿಗಿಳಿದಿದ್ದನ್ನು ನೀವೇ ಕಣ್ಣಾರೆ ಕಂಡಿದ್ದೀರ. ಅದೆಲ್ಲ ಬಿಜೆಪಿ, ಜೆಡಿಎಸ್ ಮತ್ತು ಇತರ ಸಂಘಟನೆಗಳ ಪ್ರಚೋದನೆಯ ಕಾರಣದಿಂದ ಆದದ್ದು, ಜನರು ಕಲ್ಲು, ಇಟ್ಟಿಗೆ, ಬಡಿಗೆಯನ್ನು ಕೈಗೆ ತೆಗೆದುಕೊಂಡು ಭ್ರಷ್ಟ, ಅಕ್ರಮ ಕುಳಗಳ ಅಡ್ಡೆಗಳ ಮೇಲೆ ದಾಳಿ ಮಾಡಿ ಪುಡಿಗೈದದ್ದು ಪ್ರತಿಪಕ್ಷಗಳ ರಾಜಕೀಯ ಪ್ರೇರಣೆಯಿಂದ ಎಂದುಕೊಂಡು ಸುಮ್ಮನಾಗುತ್ತೀರಾ ಸಿಎಂ ಸಿದ್ದರಾಮಯ್ಯನವರೇ?

ಒಂದು ವಿಷಯ ಹೇಳುತ್ತೇನೆ ಕೇಳಿ. ಇದು, ಮೀತಿಮೀರಿರುವ ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಮಾಜದಲ್ಲಿ ಮಡುಗಟ್ಟಿರುವ ಆಕ್ರೋಶ ಸ್ಫೋಟಗೊಂಡ ಒಂದು ಝಲಕ್ ಅಷ್ಟೆ ಸಿದ್ದರಾಮಯ್ಯನವರೇ.. ಆಗಲೂ `ಪಬ್ಲಿಕ್ ಮೆಮರಿ ಈಸ್ ಶಾರ್ಟ್’ ಅಂತ ಯಾರಾದರೂ ನಿಮ್ಮ ಕಿವಿಯಲ್ಲಿ ಉಸುರಿರಲಿಕ್ಕೂ ಸಾಕು. ಅದನ್ನು ಕೇಳಿಸಿಕೊಂಡ ನೀವು ರವಿ ಸಾವಿನ ವಿರುದ್ಧದ ಜನಾಕ್ರೋಶವೂ ಮೂರು ಮತ್ತೊಂದು ದಿನದ್ದು ಅಂತ ಭಾವಿಸಿರಲೂಬಹದು. ಆದರೆ ಒಂದು ಮಾತನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಸಿದ್ಧ ಅಭಿಪ್ರಾಯವನ್ನು `ಪಬ್ಲಿಕ್ ಮೆಮರಿ ಈಸ್ ವೆರಿ ಶಾರ್ಟ್ ಅಲ್ಲ, ಶಾರ್ಪ್’ ಎಂದು ಬದಲಿಸಿಕೊಳ್ಳಬೇಕಾದೀತು. ಅಷ್ಟೇ ಅಲ್ಲ, ಸರ್ಕಾರದ ವಿರುದ್ಧ ಬೀದಿಗಿಳಿಯದೇ ಇರುವವರೆಲ್ಲ ಮೂಕಪ್ರೇಕ್ಷಕರು ಅಂತ ಭಾವಿಸಬೇಕಾಗಿಯೂ ಇಲ್ಲ. ಅವರೆಲ್ಲ ತಮ್ಮೊಳಗಿನ ಆಕ್ರೋಶವನ್ನು ಸಮಯ ಸಂದರ್ಭ ನೋಡಿಕೊಂಡು ಸರಿಯಾಗಿ ದಾಖಲಿಸುತ್ತಾರೆಂಬುದು ನೆನಪಿರಲಿ. ನಿಮ್ಮ ವಿಷಯದಲ್ಲಿ ಹಾಗಾಗದಿರಲಿ ಎಂದು ಹಾರೈಸುತ್ತೇನೆ.

ಬೇರೆಲ್ಲ ಹೇಗೂ ಇರಲಿ. ರವಿ ಸಾವಿನ ನಂತರ ಸರ್ಕಾರ ಏಕೆ ಹೆಜ್ಜೆಹೆಜ್ಜೆಗೂ ತಡಬಡಾಯಿಸಿ ಹೋಗುತ್ತಿದೆ ಎಂಬುದನ್ನು ಸ್ವಲ್ಪ ವಿವರಿಸುತ್ತೀರಾ?
ರವಿ ಸಾವಿನ ಸುದ್ದಿ ತಿಳಿದ ಮರುಕ್ಷಣದಲ್ಲಿ ಅವರು ವಾಸವಿದ್ದ ಸೇಂಟ್ ಜಾನ್‍ವುಡ್ ಅಪಾರ್ಟ್‍ಮೆಂಟ್‍ಗೆ ಗೃಹ ಸಚಿವರ ಆಪ್ತರೊಬ್ಬರು ಎಲ್ಲರಿಗಿಂತ ಮೊದಲು ತಲುಪಿ ಸಟಸಟನೆ ಪರಿಸ್ಥಿತಿ ನಿಭಾಯಿಸಲು ಮುಂದಾದರಲ್ಲ, ಯಾಕೆ ಅಂತ ಆಲೋಚನೆ ಮಾಡುತ್ತೀರಾ? ಅದೇ ವ್ಯಕ್ತಿ ಮುಂದೆ ಆಸ್ಪತ್ರೆಯಲ್ಲಿ ನಿಂತು ಪೋಸ್ಟ್‌ಮಾರ್ಟಂ ಉಸ್ತುವಾರಿ ನೋಡಿಕೊಂಡರು ಎಂಬ ಮಾತು ನಿಮ್ಮ ಕಿವಿಯನ್ನೂ ತಲುಪಿರಬಹುದಲ್ಲವೇ? ಆ ಬಗ್ಗೆ ಯೋಚಿಸಿದ್ದೀರಾ?

ಅದೂ ಇರಲಿ. ಓರ್ವ ಸಾಮಾನ್ಯ ವ್ಯಕ್ತಿಯಾಗಿದ್ದರೂ, ಅಸಹಜ ಸಾವನ್ನಪ್ಪಿದಾಗ ಮರಣೋತ್ತರ ಪರೀಕ್ಷೆಗಿಂತ ಮೊದಲೇ, ಇದು ಇಂಥ ಕಾರಣದಿಂದಲೇ ಸಂಭವಿಸಿದ ಸಾವು ಅಂತ ಘೋಷಿಸಿದ್ದನ್ನು ಎಲ್ಲಾದರೂ ಕಂಡಿದ್ದೀರಾ? ಕೇಳಿದ್ದೀರಾ? ರವಿ ಸ್ವಭಾವ ಗೊತ್ತಿರುವವರಿಗೆ, ಅವರು ಆತ್ಮಹತ್ಯೆಯಂತಹ ಹತಾಶ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಎಂಬ ಅನುಮಾನ ಸಹಜವಾಗಿಯೇ ಕಾಡುತ್ತದೆ. ರವಿ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾರೆ ಅಂತಲೇ ಇಟ್ಟುಕೊಳ್ಳಿ. ಅದನ್ನು ನಂಬುವುದು ಹೇಗೆ? ಸಿಐಡಿ ತನಿಖೆಯಿಂದ ನಿಜ ಸಾಬೀತಾದರೂ ಜನ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ ಎಂಬುದು ನಿಮಗೆ ಗೊತ್ತಿರಬೇಕಲ್ಲವೇ? ಅಂಥದ್ದರಲ್ಲಿ ಘಟನಾ ಸ್ಥಳಕ್ಕೆ ತಲುಪಿದ ಮರುಕ್ಷಣದಲ್ಲೇ ಬೆಂಗಳೂರು ಪೊಲೀಸ್ ಕಮಿಷನರ್ ಎಂ.ಎನ್. ರೆಡ್ಡಿ ಸಾಹೇಬರು, ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಘೋಷಿಸಿಬಿಟ್ಟರಲ್ಲ! ಇದಕ್ಕೇನು ಕಾರಣ ಮತ್ತು ಪ್ರೇರಣೆ ಎಂಬುದನ್ನು ಆಲೋಚಿಸುತ್ತೀರಾ? ಅವರಂತಹ ಹಿರಿಯ ಪೊಲೀಸ್ ಅಧಿಕಾರಿಯಿಂದ ಇಂಥ ಹೇಳಿಕೆ ಬರಬಾರದಿತ್ತಲ್ಲವೇ? ರೆಡ್ಡಿ ಹೇಳಿದ್ದನ್ನೇ ಮಾನ್ಯ ಗೃಹ ಸಚಿವರಾದಿಯಾಗಿ ಎಲ್ಲರೂ ಪುನರುಚ್ಚರಿಸಿದರು. ನೀವೂ ಹಾಗೇ ಹೇಳಿದಿರಿ ಅಂತ ತೋರುತ್ತದೆ. ಇದು ಒಂದು ಜವಾಬ್ದಾರಿಯುತ ಸರ್ಕಾರದ ನಡವಳಿಕೆಯೇ? ನೀವೇ ಹೇಳಿ ಮಾನ್ಯ ಮುಖ್ಯಮಂತ್ರಿಗಳೇ.
ಈ ವಿಷಯವನ್ನು ನಿಜವಾಗಿ ಇಲ್ಲಿ ಪ್ರಸ್ತಾಪಿಸಬಾರದು. ಆದರೂ ಅನಿವಾರ್ಯವಾಗಿ ಮಾಡುತ್ತಿದ್ದೇನೆ ಕೇಳಿ. ರವಿ ಸಾವಿನ ನಂತರ ಎಷ್ಟು ತರಾವರಿ ಊಹಾಪೋಹಗಳು ಹಬ್ಬಿದವು ಎಂಬುದನ್ನು ಕೇಳಿಸಿಕೊಂಡಿದ್ದೀರಾ? ಮೊದಲು ರವಿಗೂ ಮತ್ತು ಅವರ ಪತ್ನಿಗೂ ಆಗಿಬರುತ್ತಿರಲಿಲ್ಲವಂತೆ ಎಂಬ ವದಂತಿ ಬಂತು. ಎಲ್ಲಿಂದ… ವಿಧಾನಸೌಧ ಕಾರಿಡಾರ್‍ನಿಂದ. ಅದಲ್ಲ ಅಂದಮೇಲೆ ರವಿಗೆ ಮತ್ಯಾರೋ ಲೇಡಿ ಅಧಿಕಾರಿ ಜತೆಗೆ ಅಫೇರ್ ಇತ್ತು, ಸಾಯುವ ಮೊದಲು ರವಿ ಆ ಮಹಿಳಾ ಅಧಿಕಾರಿಗೆ ನಲ್ವತ್ತು ಬಾರಿ ಮಿಸ್ಡ್ ಕಾಲ್ ಮಾಡಿದ್ದರು, `ಮೈ ಲಾಸ್ಟ್ ಗೋಲ್ ಈಸ್ ಯು, ಐ ವಿಲ್ ಮೀಟ್ ಯು ಇನ್ ಇನ್ ಮೈ ನೆಕ್ಸ್ಟ್ ಲೈಫ್’ ಎಂದು ಎಸ್ಸೆಮ್ಮೆಸ್ ಮಾಡಿದ್ದರು ಎಂಬ ವದಂತಿ ಹರಿದಾಡತೊಡಗಿತು. ಈಗಲೂ ವದಂತಿ ಹಬ್ಬಿಸುವ ಪ್ರವೃತ್ತಿ ನಿಂತಿಲ್ಲ. ಆ ಮಹಿಳಾ ಅಧಿಕಾರಿ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದಾರಂತೆ, ಮೌಖಿಕ ದೂರು ಕೊಟ್ಟಿದ್ದಾರಂತೆ, ಹಾಗಂತೆ, ಹೀಗಂತೆ ಅಂತೆಕಂತೆ ನಡೆದೇ ಇದೆ. ರವಿ ಸಾವಿನ ಕತೆಯನ್ನು ಇನ್ನೆರಡು ದಿನದಲ್ಲಿ ಬಟಾಬಯಲು ಮಾಡುತ್ತೇವೆಂದು ನೀವು ಸದನದಲ್ಲಿ ಎರಡು ದಿನದ ಹಿಂದೆ ಹೇಳಿದಿರಿ. ಆ ನಿಮ್ಮ ಮಾತಿನ ಧಾಟಿಗೂ, ನೀಡಿದ ಹೇಳಿಕೆಗೂ ಮತ್ತು ಅದಕ್ಕೂ ಮೊದಲು ವಿಧಾನಸೌಧದ ಮೊಗಸಾಲೆಯಲ್ಲಿ ಹಬ್ಬಿದ ಗಾಳಿಮಾತಿಗೂ ಒಂದಕ್ಕೊಂದು ಸಂಬಂಧ ಇರುವಂತೆ ಸಹಜವಾಗಿ ಭಾಸವಾಗುವುದಿಲ್ಲವೇ ಮುಖ್ಯಮಂತ್ರಿಗಳೇ…

ಅಂದಹಾಗೆ ಒಮ್ಮೆ ಫ್ಲಾೃಷ್‍ಬ್ಯಾಕ್‍ಗೆ ಬನ್ನಿ. ಒಂದೂವರೆ ವರ್ಷ ಹಿಂದೆ ಸಹಕಾರ ಸಂಘಗಳ ಆಡಿಟರ್ ಆಗಿದ್ದ ಪ್ರಾಮಾಣಿಕ ಅಧಿಕಾರಿ ಎಂಬ ಖ್ಯಾತಿಯ ಮಹಾಂತೇಶ್ ಬೆಂಗಳೂರಿನಲ್ಲಿ ಹತ್ಯೆಯಾದಾಗಲೂ ಹೆಣ್ಣಿನ ಸಂಬಂಧದೊಂದಿಗೆ ತಳಕುಹಾಕಲಾಗಿತ್ತು ಎಂಬುದು ನಿಮಗೂ ನೆನಪಿರಬಹುದು ಮಾನ್ಯ ಮುಖ್ಯಮಂತ್ರಿಗಳೆ. ಆದರೆ ಅದು ಸಾಬೀತಾಗಲೇ ಇಲ್ಲವಲ್ಲ. ಹೋಗಲಿ ಸರಿಯಾಗಿ ತನಿಖೆ ನಡೆದು ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸುವ ಕೆಲಸವಾದರೂ ಆಯಿತೇ? ಅದೂ ಆಗಲಿಲ್ಲ. ಇನ್ನು ಅಂಥ ಆಸೆ ಇಟ್ಟುಕೊಳ್ಳುವುದಿಲ್ಲ ಬಿಡಿ. ಆಸೆ ಇಟ್ಟುಕೊಂಡು ಏನು ಪ್ರಯೋಜನ ಹೇಳಿ? ಇನ್ನು ಕಲಬುರಗಿಯಲ್ಲಿ ಪ್ರಾಣ ಕಳೆದುಕೊಂಡ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಹತ್ಯೆ ಪ್ರಕರಣದ ತನಿಖೆ, ಕಂಡುಕೊಂಡ ಸತ್ಯಾಂಶದ ಕುರಿತು ಪ್ರಸ್ತಾಪಿಸದಿರುವುದೇ ಲೇಸು.

ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ. ರವಿ ಸಾವಿನ ಪ್ರಕರಣದ ಜತೆಗೆ ನಿಮ್ಮ ಸಂಪುಟದ ಪ್ರಭಾವಿ ಸಚಿವರ ಹೆಸರು ತಳಕು ಹಾಕಿಕೊಂಡಿದೆ. ಆ ಕುರಿತು ಅವರು ಸಾರ್ವಜನಿಕ ವಿವರಣೆ ನೀಡಿದ್ದಾರಾದರೂ ಜನರಲ್ಲಿ ಅನುಮಾನ, ಸಂಶಯ ಒಂದಿಷ್ಟೂ ನಿವಾರಣೆ ಆಗಿಲ್ಲ ಎಂಬುದು ನಿಮಗೂ ಗೊತ್ತು. ಹೊರ ಜಗತ್ತಿಗೂ ಗೊತ್ತು. ಯಾರು ಆ ಬಗ್ಗೆ ಹೇಳುವವರು?

ಸರ್ಕಾರ ಮಾಡಿಕೊಂಡಿರುವ ಎಡವಟ್ಟುಗಳ ಸರಣಿ ಇಷ್ಟಕ್ಕೇ ನಿಲ್ಲುವುದಿಲ್ಲ. `ಸಿಬಿಐ ಬದಲು ಸಿಐಡಿಗೇ ಕೊಡುತ್ತೇವೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ. ರವಿ ಸಾವಿನ ಕಾರಣ ಕಂಡುಹಿಡಿಯುತ್ತಾರೆ’ ಅಂತ ಹೇಳುತ್ತಲೇ, ಒಂದು ಕಡೆ ಸಿಐಡಿ ತನಿಖೆಗೆ ಅಧಿಸೂಚನೆ ಹೊರಡಿಸಿ ಮತ್ತೊಂದೆಡೆ ಸಿಐಡಿ ಐಜಿಪಿ ಪ್ರಣಬ್ ಮೊಹಂತಿಯವರನ್ನೇಕೆ ಎತ್ತಂಗಡಿ ಮಾಡಿದಿರಿ? ಇದು ಮಾಮೂಲಿ ವರ್ಗಾವಣೆ ಎಂದು ಹೇಳಬಹುದಾದರೂ, ವರ್ಗಾವಣೆ ಮಾಡಿದ ಸಮಯವಾದರೂ ಎಂಥದ್ದು? ಸರ್ಕಾರಕ್ಕೆ ಅಷ್ಟೂ ಸೂಕ್ಷ್ಮ ಸಂವೇದನೆ ಬೇಡವೆ? ವರ್ಗಾವಣೆ ಮಾಡಿದಿರಿ ನಿಜ. ಆ ನಿರ್ಧಾರಕ್ಕಾದರೂ ಬದ್ಧರಾಗಿರಬೇಕಲ್ಲವೇ? ಯಾರೋ ಪ್ರಶ್ನೆ ಮಾಡಿದರು, ಟೀಕಿಸಿದರು, ಬರೆದರು ಅಂದಕೂಡಲೇ ಮತ್ತೇಕೆ ವರ್ಗಾವಣೆಯನ್ನು ತಡೆಹಿಡಿದಿರಿ? ಸರ್ಕಾರದ ಉನ್ನತ ಹಂತದಲ್ಲಿ ಏನೋ ಗಲಿಬಿಲಿ ಉಂಟಾಗಿದೆ ಎಂಬುದಕ್ಕೆ ಇದೊಂದೇ ನಿದರ್ಶನ ಸಾಕಲ್ಲವೇ? ಈ ಎಲ್ಲ ಗೊಂದಲ ಸೃಷ್ಟಿಸುತ್ತಿರುವುದರ ಹಿಂದಿನ ಶಕ್ತಿ ಯಾವುದು ಹೇಳಿ ಮಾನ್ಯ ಮುಖ್ಯಮಂತ್ರಿಗಳೇ.

ಇಷ್ಟೆಲ್ಲ ಕಣ್ಣಾರೆ ಕಂಡ ಬಳಿಕವೂ ಮತ್ತದೇ ನಿಮ್ಮ ಕೈಕೆಳಗೆ ಕೆಲಸ ಮಾಡುವ ಪೊಲೀಸರಿಂದಲೇ ತನಿಖೆ ಮಾಡಿಸುತ್ತೇವೆಂದು ಹೇಳುವುದು ಎಷ್ಟು ಸರಿ ಸಿದ್ದರಾಮಯ್ಯನವರೇ? ಒಂದೊಮ್ಮೆ ನೀವು ಹೇಳುವ ಹಾಗೆ ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಲೇ ಇಟ್ಟುಕೊಳ್ಳೋಣ. ಸಿಐಡಿ ವರದಿ ಹಾಗೆ ಹೇಳಿದರೆ ಜನ ನಂಬಬಹುದೇ? ಅದಕ್ಕೋಸ್ಕರವಾಗಿಯಾದರೂ ನೀವು ಈ ಪ್ರಕರಣವನ್ನು ಒಂದು ಘಳಿಗೆಯೂ ತಡ ಮಾಡದೆ ಸಿಬಿಐಗೆ ವಹಿಸಬೇಕಿತ್ತಲ್ಲವೇ?

ಯಾಕೆ ಇಷ್ಟೆಲ್ಲ ಹೇಳುತ್ತಿದ್ದೇನೆ ಅಂದರೆ, ಯಾವುದೇ ಸರ್ಕಾರ ಜನರಲ್ಲಿ ಭರವಸೆ ಮೂಡಿಸುವಂತಿರಬೇಕು, ವಿಶ್ವಾಸ ತುಂಬುವಂತಿರಬೇಕು. ಇದರ ಬದಲು ಜನರೇ ಸರ್ಕಾರವನ್ನು ಅನುಮಾನದಿಂದ ನೋಡುವಂತಾದರೆ ಹೇಗೆ? ಆದರೇನು ಬಂತು, ಯಾವುದು ಆಗಬಾರದಿತ್ತೋ ಅದೇ ಈಗ ಆಗಿಹೋಗಿದೆ. ಪರಿಹಾರ ಏನು? ಸರ್ಕಾರ ಪಾರದರ್ಶಕವಾಗಿ ನಡೆದುಕೊಳ್ಳುವ ಮೂಲಕ ಸಾರ್ವಜನಿಕ ವಲಯದಲ್ಲಿ ನಿರ್ಮಾಣವಾಗಿರುವ ಅನುಮಾನದ ಭೂತವನ್ನು ದೂರಮಾಡಬೇಕು. ಅದಾಗಬೇಕಾದರೆ ಪ್ರಕರಣವನ್ನು ಸಿಬಿಐಗೆ ವಹಿಸುವುದೇ ಸರ್ಕಾರಕ್ಕೆ ಉಳಿದಿರುವ ಮಾರ್ಗ. ಯೋಚನೆ ಮಾಡುತ್ತೀರಾ ಸಿಎಂ ಸಾಹೇಬರೇ..

ರವಿ ಸಾವಿನ ನಂತರ ಜನಾಕ್ರೋಶದ ಸಾವಿರ ಸಾವಿರ ಬರಹಗಳು ಪತ್ರಿಕಾ ಕಚೇರಿ ತಲುಪುತ್ತಿವೆ. ಫೇಸ್‍ಬುಕ್ ಗೋಡೆಗಳ ಮೇಲೆ ರಾರಾಜಿಸುತ್ತಿವೆ. ಆ ಪೈಕಿ ರಾಕೇಶ್ ಶೆಟ್ಟಿ ಎಂಬುವವರು ಒಂದು ಫೇಸ್‍ಬುಕ್ ಬರಹವನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅದು ಹೀಗಿದೆ: “ಮಾನ್ಯ ಮುಖ್ಯಮಂತ್ರಿಗಳೇ.. ಸಿನಿಮಾ ಡೈಲಾಗ್ ರೀತಿಯಲ್ಲಿ ಡೈಲಾಗ್ ಬಿಟ್ಟಿದ್ದೀರಲ್ಲ.. ನಮ್ಮ ಪೊಲೀಸರ ಮೇಲೆ ನಂಬಿಕೆ ಇಡಿ, ರವಿ ಸಾವಿನ ಪ್ರಕರಣವನ್ನು ತನಿಖೆ ಮಾಡಲು ಬಿಡಿ ಅಂತ… ಅಪನಂಬಿಕೆ ಇರೋದು ಪೊಲೀಸರ ಮೇಲಲ್ಲ. ನಿಮ್ಮಂಥ ರಾಜಕಾರಣಿಗಳ ಮೇಲೆ..”. ಅದು ನಿಜ ಅನ್ನುವುದು ನನ್ನ ಮತ್ತು ಆ ಫೇಸ್‍ಬುಕ್ ಕಮೆಂಟಿಗೆ ದನಿಗೂಡಿಸಿದ ಸಾವಿರಾರು, ಲಕ್ಷಾಂತರ ಜನರದ್ದು.
ಕೊನೆಯದಾಗಿ ಮಾಜಿ ಸಚಿವ, ಜಂಟಲ್‍ಮನ್ ಪೊಲಿಟೀಷಿಯನ್ ಸುರೇಶ್‍ಕುಮಾರ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡ ಒಂದು ಕಮೆಂಟ್ ಪ್ರಸ್ತಾಪಿಸಲಾ?

“ರಾಜ್ಯದಲ್ಲಿ ಮುಂದೆ ಸೂಯಿಸೈಡ್‍ಭಾಗ್ಯ ಅನ್ನುವ ಯೋಜನೆ ಜಾರಿ ಮಾಡಿದರೆ ಹೇಗೆ… ಬೇಕಾದರೆ ಇದು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಮಾತ್ರ ಅನ್ನುವ ಕಂಡೀಷನ್ ಇರಲಿ” ಎಂದು ಚಟಾಕಿ ಹಾರಿಸಿದ್ದಾರೆ ಅವರು. ಎಷ್ಟು ಮಾರ್ಮಿಕವಲ್ಲವೇ?

ಕೊನೇ ಮಾತು….
ದೊರೆಗಳೇ ಅನ್ಯಥಾ ಭಾವಿಸಬೇಡಿ ಪ್ಲೀಸ್.. ರವಿ ಸಾವಿನ ನಂತರದ ಘಟನಾವಳಿಗಳನ್ನು ಕಂಡು ಅದೇಕೋ ನಿಮ್ಮ ಮುಂದೆ ಇದನ್ನೆಲ್ಲ ನಿವೇದಿಸಿಕೊಳ್ಳಬೇಕೆಂಬ ಮನಸ್ಸಾಯಿತು. ಅನಿಸಿದ್ದನ್ನು ಅನ್ನಿಸಿದ ಹಾಗೆ ತೆರೆದಿಟ್ಟಿದ್ದೇನೆ ಅಷ್ಟೆ..

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top