ಲಾಕ್ ಓಪನ್ ಸಾವಧಾನ್!

– 54 ದಿನಗಳ ಬಳಿಕ ಸಹಜ ಸ್ಥಿತಿಯತ್ತ ಜನಜೀವನ
– ಸಾರಿಗೆ ಸೇರಿ ಬಹುತೇಕ ಎಲ್ಲಾ ಚಟುವಟಿಕೆಗಳಿಗೂ ಗ್ರೀನ್ ಸಿಗ್ನಲ್
– ಕಂಟೈನ್ಮೆಂಟ್ ಝೋನ್‌ಗಳಿಗೆ ಮಾತ್ರ ಲಾಕ್‌ಡೌನ್ ಸೀಮಿತ
– ಸೋಂಕು ನಿಯಂತ್ರಣ ಜವಾಬ್ದಾರಿ ಇನ್ನು ಜನರ ಕೈಗೆ

ವಿಕ ಸುದ್ದಿಲೋಕ ಬೆಂಗಳೂರು
ರಾಜ್ಯದಲ್ಲಿ ಲಾಕ್‌ಡೌನ್ ಬಹುತೇಕ ತೆರವಾಗಿದ್ದು, ಮಂಗಳವಾರದಿಂದ ಸಾಮಾನ್ಯ ಜನಜೀವನ ಸಹಜ ಸ್ಥಿತಿಯತ್ತ ಮರಳಲಿದೆ. ಮಾಲ್, ಸಿನಿಮಾ, ಹೋಟೆಲ್, ಶಾಲಾ ಕಾಲೇಜು, ಮೆಟ್ರೊ, ಮುಕ್ತ ಅಂತಾ ರಾಜ್ಯ ಪ್ರಯಾಣ ಹೊರತುಪಡಿಸಿ ರಾಜ್ಯದೊಳಗಿನ ಬಹುತೇಕ ಎಲ್ಲ ಚಟುವಟಿಕೆಗಳ ಪುನಾರಂಭಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.
ಲಾಕ್‌ಡೌನ್ -4.0 ಸಂಬಂಧ ಕೇಂದ್ರ ಸರಕಾರದ ಮಾರ್ಗಸೂಚಿಗಳ ಅನ್ವಯ ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಯಿತು. ಕೆಲವೊಂದು ನಿರ್ಬಂಧ ಹೊರತಾಗಿ ಲಾಕ್‌ಡೌನ್ ತೆರವುಗೊಳಿಸುವ ನಿರ್ಧಾರವನ್ನು ಸಭೆ ಕೈಗೊಂಡಿತು.
ಅಂತರ ಜಿಲ್ಲಾ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಹವಾನಿಯಂತ್ರಿತ ಬಸ್‌ಗಳ ಹೊರತಾಗಿ ರಾಜ್ಯ ಸಾರಿಗೆ ಸಂಸ್ಥೆಗಳ ಎಲ್ಲ ಬಸ್ ಸಂಚಾರ ಮಂಗಳವಾರ ಬೆಳಗ್ಗೆ ಶುರುವಾಗಲಿದೆ. ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಸೆಲೂನ್ ಸಹಿತ ಎಲ್ಲಾ ಅಂಗಡಿ, ಮುಂಗಟ್ಟುಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ‘‘4ನೇ ಹಂತದ ಲಾಕ್ಡೌನ್ ಮೇ 31ರವರೆಗೆ ಮುಂದುವರಿಯಲಿದೆ. ಕಂಟೈನ್ಮೆಂಟ್ ಝೋನ್‌ಗಳಲ್ಲಿ ಬಿಗಿ ಭದ್ರತೆ ಮಾಡುತ್ತೇವೆ. ಈ ಪ್ರದೇಶದಲ್ಲಿ ಯಾರಾದರೂ ಕಾನೂನು ಬಾಹಿರ ವರ್ತನೆ ಮಾಡಿದರೆ ಕ್ರಿಮಿನಲ್ ಕೇಸ್ ಹಾಕುತ್ತೇವೆ. ಉಳಿದ ಕಡೆಗಳಲ್ಲಿ ಜನರ ಓಡಾಟ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ,’’ ಎಂದು ಪ್ರಕಟಿಸಿದರು.

ಸರಕಾರಿ, ಖಾಸಗಿ ಬಸ್
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಎಲ್ಲಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಒಂದು ಬಸ್‌ನಲ್ಲಿ 30 ಮಂದಿ ಮಾತ್ರ ಸಂಚರಿಸಬಹುದಾಗಿದೆ. ಆದರೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಖಾಸಗಿ ಬಸ್‌ಗಳ ಸಂಚಾರಕ್ಕೂ ಅನುಮತಿ.

ಟ್ಯಾಕ್ಸಿ,ಆಟೊ
ಆಟೊ, ಮ್ಯಾಕ್ಸಿಕ್ಯಾಬ್ ಟ್ಯಾಕ್ಸಿಗೆ ಅವಕಾಶ. ಆಟೊ, ಟ್ಯಾಕ್ಸಿಯಲ್ಲಿ ಚಾಲಕ ಸೇರಿ ಮೂವರು, ಮ್ಯಾಕ್ಸಿಕ್ಯಾಬ್‌ನಲ್ಲಿ ಅಂತರ ಕಾಪಾಡಿಕೊಂಡು ಪ್ರಯಾಣ

ರೈಲು ಸಂಚಾರ
ರಾಜ್ಯದ ಒಳಗೆ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಅಂತಾರಾಜ್ಯ ರೈಲುಗಳ ಸಂಚಾರಕ್ಕೆ ಅನುಮತಿ ಇರುವುದಿಲ್ಲ.

ಇ-ಕಾಮರ್ಸ್
ಕಂಪನಿಗಳು ಅತ್ಯಾವಶ್ಯಕವಲ್ಲದ ಉತ್ಪನ್ನಗಳನ್ನೂ ಪೂರೈಕೆ ಮಾಡಲು ಕೇಂದ್ರ ಸರಕಾರ ಷರತ್ತುಬದ್ಧ ಅನುಮತಿ ನೀಡಿದೆ. ಸೋಮವಾರದಿಂದಲೇ ಕೆಲವೊಂದು ಇ-ಕಾಮರ್ಸ್ ತಾಣಗಳಲ್ಲಿ ಎಲ್ಲಾ ವಸ್ತುಗಳ ಮಾರಾಟ ಆರಂಭವಾಗಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆಗೆ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ.

ಪಾರ್ಕ್‌ಗಳು 
ಪಾರ್ಕ್‌ಗಳು ಪ್ರತಿದಿನ ಬೆಳಗ್ಗೆ 7 ರಿಂದ 9 ಗಂಟೆವರೆಗೆ ಹಾಗೂ ಸಂಜೆ 5 ರಿಂದ 7ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತವೆ.

ವ್ಯಾಪಾರ
ಬೀದಿ ಬದಿ ವ್ಯಾಪಾರ ಸೇರಿ ಎಲ್ಲ ವಾಣಿಜ್ಯ ಚಟುವಟಿಕೆಗೆ ಅವಕಾಶ. ಜಿಮ್ ಹೊರತಾಗಿ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ.

ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ
ಅನಿವಾರ್ಯ ಪರಿಸ್ಥಿತಿಯಲ್ಲಿ ಹೊರ ರಾಜ್ಯಗಳಿಂದ ರಾಜ್ಯಕ್ಕೆ ಪ್ರವೇಶಿಸಲು ಅವಕಾಶವಿದೆ. ಆದರೆ, ಅವರು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ  ಒಳಗಾಗಬೇಕು.

ಬಸ್ ದರ ಏರಿಕೆ ಇಲ್ಲ
ಕಡಿಮೆ ಪ್ರಯಾಣಿಕರೊಂದಿಗೆ ಬಸ್‌ಗಳ ಸಂಚಾರದಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತದೆ. ಆದರೂ ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಮಾಡಲ್ಲ. ಸರಕಾರವೇ ಸಾರಿಗೆ ನಿಗಮಗಳ ನಷ್ಟ ಭರಿಸಿಕೊಡಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಹೋಟೆಲ್: ಪಾರ್ಸೆಲ್ ಕೊಡಲು ಮನವಿ
ಹೋಟೆಲ್ ಮಾಲೀಕರು ದೊಡ್ಡ ಪ್ರಮಾಣದಲ್ಲಿ ಪಾರ್ಸಲ್ ನೀಡಲು ಹಾಗೂ ಸ್ವಚ್ಛತೆ ಕಾಯ್ದುಕೊಳ್ಳಲು ಗಮನ ಕೊಡಬೇಕು ಎಂದು ಸಿಎಂ ಮನವಿ ಮಾಡಿದರು.

ಭಾನುವಾರ ಪೂರ್ಣ ಲಾಕ್‌ಡೌನ್
ವಾರದ 6 ದಿನಗಳು ಮುಕ್ತವಾಗಿದ್ದು, ಭಾನುವಾರ ಸಂಪೂರ್ಣ ಲಾಕ್ ಡೌನ್ ಆಚರಿಸಲಾಗುವುದು. ಭಾನುವಾರದಂದು ಎಲ್ಲ ವಾಣಿಜ್ಯ ಚಟುವಟಿಕೆ ಬಂದ್ ಜತೆಗೆ, ಸಾರ್ವಜನಿಕರ ಮುಕ್ತ ಸಂಚಾರಕ್ಕೂ ನಿರ್ಬಂಧ ಇರಲಿದೆ.

ಯಾವುದಕ್ಕೆ ನಿರ್ಬಂಧ?
ಮಾಲ್‌ಗಳು, ಸಿನಿಮಾ ಹಾಗೂ ಹೋಟೆಲ್‌ಗಳಿಗೆ ಅವಕಾಶ ಇಲ್ಲ
31ರವರೆಗೂ ಜಿಮ್‌ಗಳಿಗೆ ನಿರ್ಬಂಧ
ಮೆಟ್ರೊ ರೈಲು ಸಂಚಾರವೂ ಇಲ್ಲ

ಎಚ್ಚರ ವಹಿಸೋಣ
– ಲಾಕ್‌ಡೌನ್ ಸಡಿಲಗೊಳಿಸಿರುವುದು ಜೀವನೋಪಾಯಕ್ಕಾಗಿ, ಕೊರೊನಾ ನಿವಾರಣೆಯಾಗಿದೆ ಎಂದಲ್ಲ.
– ನಿಜವೆಂದರೆ ಕೊರೊನಾ ಹರಡುವಿಕೆಯ ಪ್ರಮಾಣ ಈ ಹಂತದಲ್ಲಿ ಇನ್ನಷ್ಟು ತೀವ್ರವಾಗಿದೆ, ಎಚ್ಚರವಿರಲಿ
– ವಾಹನ ಸಂಚಾರವಿದೆ ಎಂಬ ಕಾರಣಕ್ಕೆ ಅನಗತ್ಯ ತಿರುಗಾಟ ಬೇಡ, ಅಗತ್ಯವಿದ್ದರಷ್ಟೇ ಹೊರಗೆ ಬನ್ನಿ
– ಸಂಚಾರದ ವೇಳೆ ಮಾಸ್ಕ್ ಹಾಕಲೇಬೇಕು, ಸಾಮಾಜಿಕ ಅಂತರ ಕಾಪಾಡಿ.
– ಮರಳಿ ಮನೆಗೆ ಬಂದಾಗ ಸ್ವಚ್ಛತೆಗೆ ಆದ್ಯತೆ ಇರಲಿ, ಬಿಸಿ ನೀರು ಸ್ನಾನವೇ ಉತ್ತಮ.
– ಹಿರಿಯರು, 10 ವರ್ಷದೊಳಗಿನ ಮಕ್ಕಳು ಮನೆಯೊಳಗೇ ಇರಲಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top