ಕೊರೊನಾ ಜತೆಗೇ ಬದುಕು – ಲಾಕ್‌ಡೌನ್‌ ಕಲಿಸಿದ ಅನುಭವವೇ ನಮಗೆ ದಾರಿ

ಇಡೀ ಜಗತ್ತನ್ನೇ ಕಂಗೆಡಿಸಿರುವ ಕೊರೊನಾ ವೈರಸ್(ಕೋವಿಡ್-19) ಕೂಡಲೇ ನಿರ್ನಾಮ ಆಗಲಿದೆಯೇ, ದೀರ್ಘಕಾಲದವರೆಗೆ ಇರಲಿದೆಯೇ ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ), ‘‘ಕೋವಿಡ್-19 ಕೂಡ ಎಚ್ಐವಿ ರೀತಿಯಲ್ಲಿ ದೀರ್ಘಕಾಲಿನ ಸೋಂಕು ರೋಗವಾಗಿ ಉಳಿಯುವ ಸಾಧ್ಯತೆ ಇದ್ದು, ಇದರ ಜತೆಗೇ ಜೀವನ ನಡೆಸುವ ವಿಧಾನಗಳನ್ನು ಕಂಡುಕೊಳ್ಳಬೇಕಿದೆ,’’ ಎಂದು ಹೇಳಿದೆ. ಇದೇ ರೀತಿಯ ಅಭಿಪ್ರಾಯವನ್ನು ಕೆಲವು ದಿನಗಳ ಹಿಂದೆ ಭಾರತ ಸರಕಾರದ ಆರೋಗ್ಯ ಇಲಾಖೆ ಕೂಡ ವ್ಯಕ್ತಪಡಿಸಿ, ‘‘ನಾವು ಕೊರೊನಾ ವೈರಾಣುವಿನೊಂದಿಗೆ ಬದುಕುವುದನ್ನು ಕಲಿಯಬೇಕಿದೆ,’’ ಎಂದು ಹೇಳಿತ್ತು. ಕೊರೊನಾ ವೈರಸ್ ಹಬ್ಬುತ್ತಿರುವ ವ್ಯಾಪಕತೆ ಹಾಗೂ ಲಸಿಕೆಗಳು ಸರಿಯಾದ ಸಮಯಕ್ಕೆ ಸಿಗದೇ ಇರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ಇಲಾಖೆಯ ಮಾತುಗಳನ್ನು ನಾವು ಒಪ್ಪಲೇಬೇಕು ಮತ್ತು ಕೊರೊನಾವನ್ನು ನಮ್ಮ ಜೀವನದ ಭಾಗವಾಗಿ ಸ್ವೀಕರಿಸದೇ ಅನ್ಯ ದಾರಿಯಿಲ್ಲ. ಯಾಕೆಂದರೆ, ಕೊರೊನಾ ಸಂಪೂರ್ಣವಾಗಿ ತೊಡೆದು ಹಾಕುಲು ಸಾಧ್ಯವಿಲ್ಲ ಎಂಬುದು ಈ ಆರು ತಿಂಗಳಲ್ಲಿ ಬಹುತೇಕ ಎಲ್ಲರಿಗೂ ಮನದಟ್ಟವಾಗಿದೆ. ಹಾಗೆಯೇ, ಸೋಂಕು ನಿಯಂತ್ರಣಕ್ಕೆ ಜಗತ್ತು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಮತ್ತು 100ಕ್ಕೂ ಹೆಚ್ಚು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಅವೆಲ್ಲವೂ ಯಶಸ್ವಿಯಾಗಿ ಮಾರುಕಟ್ಟೆಗೆ ಪ್ರವೇಶಿಸುವ ಹೊತ್ತಿಗೆ ಇನ್ನು ಬಹಳಷ್ಟು ಕಾಲ ಹಿಡಿಯಬಹುದು. ಇದು ವಾಸ್ತವ. ಹಾಗಾಗಿ, ನಾವು ನಮ್ಮ ಬದುಕನ್ನು ಈ ಕೊರೊನಾದೊಂದಿಗೇ ರೂಪಿಸಿಕೊಳ್ಳುವುದೇ ಸದ್ಯದ ಮಟ್ಟಿನ ಪರಿಹಾರ ಕ್ರಮ.
ಸಮಯ ಸಂದರ್ಭ, ಪ್ರದೇಶ ಆಧರಿಸಿ ಕೋವಿಡ್ ವೈರಾಣು ಪ್ರಭಾವದಲ್ಲಿ ವ್ಯತ್ಯಾಸ ಆಗುತ್ತದೆ. ಆದರೆ, ಖಚಿತವಾಗಿಯೂ ಇದು ಜೀವಕ್ಕೆ ಅಪಾಯಕಾರಿ ಎನ್ನುವುದನ್ನು ಜನ ನೆನಪಿನಲ್ಲಿಟ್ಟುಕೊಳ್ಳಬೇಕು. ನಿಯಂತ್ರಣ ಕ್ರಮಕ್ಕಾಗಿ ಸರಕಾರಗಳನ್ನು ಮಾತ್ರವೇ ನೆಚ್ಚಿಕೊಳ್ಳಬಾರದು. ವೈಯಕ್ತಿಕವಾಗಿ ನಮ್ಮ ಪಾತ್ರ ಮುಖ್ಯವಾಗಿರಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇದರ ನಿಯಂತ್ರಣದ ಭಾಗವೇ ಆಗಲಿದೆ. ಲಾಕ್‌ಡೌನ್‌ಗಿಂತ ಮುಂಚೆ ನಮ್ಮ ಬದುಕಿಗೆ ನಿಗದಿತ ಆರೋಗ್ಯಕ್ಕ ಸಂಬಂಧಿಸಿದಂತೆ ಸಾರ್ವಜನಿಕವಾಗಿರುವಂಥ ನಿರ್ದಿಷ್ಟ ಕ್ರಮವಿರಲಿಲ್ಲ. ಸಾರ್ವಜನಿಕ ಸ್ವಚ್ಛತೆ, ಸಾರ್ವಜನಿಕ ಅಂತರ ಎಂಬ ಕಲ್ಪನೆಗಳು ಬಾಯಿ ಮಾತಿಗೆ ಮಾತ್ರ ಸೀಮಿತವಾಗಿದ್ದವು. ಆದರೆ, ಕೊರೊನಾ ಪರಿಣಾಮ ಈ ಲಾಕ್‌ಡೌನ್‌ ಅವಧಿಯಲ್ಲಿ ನಾವು ಸ್ವಚ್ಛತೆಯ ಹಾಗೂ ಸಾರ್ವಜನಿಕ ಅಂತರ, ವೈಯಕ್ತಿಕ ನೆಲೆಯಲ್ಲಿನ ಆರೋಗ್ಯದ ಮಹತ್ವವನ್ನು ಅರಿತುಕೊಂಡಿದ್ದೇವೆ ಮತ್ತು ಅದನ್ನು ಅಚ್ಚುಕಟ್ಟಾಗಿ ದೈನಂದಿನ ಜೀವನದಲ್ಲಿ ರೂಢಿಸಿಕೊಂಡಿದ್ದೇವೆ. ಸೋಂಕು ನಿವಾರಣೆಗೆ ಬೇಕಾಗಿರುವ ನಮ್ಮೊಳಗಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ನಾನಾ ಬಗೆಗಳನ್ನು ಕಂಡುಕೊಂಡಿದ್ದೇವೆ. ಈ ಎಲ್ಲ ಹೊಸ ಕಲಿಕೆ ಮತ್ತು ಪದ್ಧತಿಗಳನ್ನು ನಾವು ಇನ್ನು ಮುಂದೆ ಜೀವನಪೂರ್ತಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ. ಇದು ನಮ್ಮ ಆರೋಗ್ಯ ಮತ್ತು ದೇಶದ ಆರೋಗ್ಯ ದೃಷ್ಟಿಯಲ್ಲಿ ಅನಿವಾರ್ಯದ ಕ್ರಮವಾಗಿದೆ.
ಒಂದೊಮ್ಮೆ ಈ ಲಾಕ್‌ಡೌನ್‌ ಅವಧಿಯಲ್ಲಿ ಕೊರೊನಾಗೂ ಮುಕ್ತಿ ಸಿಕ್ಕಿದ್ದರೆ ನಾವು ಮತ್ತೆ ಎಂದಿನ ಅಶಿಸ್ತಿನ ಜೀವನಕ್ಕೆ ಮರಳಿ ಬಿಡುತ್ತಿದ್ದೆವು. ಇದರಿಂದಾಗಿ ಮತ್ತೊಂದು ಸಂಭಾವ್ಯ ವೈರಾಣು ಸೋಂಕಿಗೆ ದಾರಿ ಮಾಡಿಕೊಡುತ್ತಿದ್ದೆವು. ಆದರೆ, ಈಗಿರುವ ಲಾಕ್‌ಡೌನ್ ಅನ್ನು ನಮ್ಮ ಹೊಸ ಬದುಕಿನ ಆರಂಭದ ಅವಕಾಶವೆಂದು ಭಾವಿಸಿಕೊಂಡು, ಈಗ ಅಳವಡಿಸಿಕೊಂಡಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಮುಂದೆಯೂ ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು. ಆಗಲೇ, ನಾವು ಈ ಕೊರೊನಾ ವೈರಾಣುವಿನೊಂದಿಗೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಲಿದೆ. ಈ ಕೊರೊನಾ ವೈರಾಣುವಿನ ಪ್ರತಾಪ ಇಷ್ಟಕ್ಕೆ ಮುಗಿಯಲಿದೆ ಎಂಬ ಭರವಸೆಯನ್ನು ಯಾರೂ ನೀಡಲು ಸಾಧ್ಯವಿಲ್ಲ. ಅಥವಾ ಅದಕ್ಕೊಂದು ಪರಿಣಾಮಕಾರಿಯಾದ ಮದ್ದು ದೊರೆಯಲಿದೆ ಎಂಬ ವಿಶ್ವಾಸವನ್ನೂ ವೈದ್ಯವಿಜ್ಞಾನಲೋಕ ದೃಢವಾಗಿ ಹೇಳುತ್ತಿಲ್ಲ. ಅದು ತನ್ನ ಪ್ರಯತ್ನಶೀಲತೆಯನ್ನು ಮುಂದುವರಿಸಿದೆ. ಅದರಲ್ಲಿ ಯಶಸ್ಸು ಸಿಗಬಹುದು, ಯಶಸ್ಸು ಸಿಗುವುದು ವಿಳಂಬವಾಗಬಹುದು. ಆದರೆ, ನಮ್ಮ ಜೀವನ ಮಾತ್ರ ನಡೆಯಲೇಬೇಕಲ್ಲ. ಹಾಗಾಗಿ, ನಮಗೆ ಉಳಿದಿರುವ ದಾರಿ ಅದರೊಂದಿಗೇ ಬದುಕುವುದು ಮಾತ್ರ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top