– ಮುದ್ರಾಂಕ ಶುಲ್ಕ ವಿನಾಯಿತಿ | ಅಕ್ರಮ ಸಕ್ರಮಕ್ಕೆ ಹೊಸ ಕಾಯಿದೆ
ವಿಕ ಸುದ್ದಿಲೋಕ, ಬೆಂಗಳೂರು
ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಡುವ ಭೂಸುಧಾರಣಾ ಕಾಯಿದೆ ತಿದ್ದುಪಡಿಯ ದಿಟ್ಟ ಹೆಜ್ಜೆ ಇಟ್ಟ ರಾಜ್ಯ ಸರಕಾರ ಇದೀಗ 2ನೇ ಹಂತದ ಭೂಸುಧಾರಣೆಗೆ ಸಿದ್ಧವಾಗಿದೆ. ನೋಂದಣಿ ಶುಲ್ಕದಲ್ಲಿ ವಿನಾಯಿತಿ, ಭೂ ಖರೀದಿ ನಿಯಮ ಸರಳೀಕರಣ ಸೇರಿದಂತೆ ಮಹತ್ವದ ತೀರ್ಮಾನಗಳು ಜಾರಿಯಾಗಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕೊರೊನಾ ಕಾಲಘಟ್ಟದಲ್ಲಿ ರಾಜ್ಯದ ಆರ್ಥಿಕತೆ, ವ್ಯವಹಾರ ಮತ್ತು ಜನಜೀವನದ ಪುನರುತ್ಥಾನಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಮಾಲೋಚನೆ ಮೂಲಕ ರೂಪಿಸುವ ‘ವಿಜಯ ಕರ್ನಾಟಕ’ದ ‘ಕರುನಾಡ ಕಟ್ಟೋಣ ಬನ್ನಿ’ ಅಭಿಯಾನದ ಮೂರನೇ ಕಾರ್ಯಕ್ರಮದಲ್ಲಿ ಅವರು ಮಹತ್ವಾಕಾಂಕ್ಷಿ ಸುಧಾರಣೆಯ ಸಂಕ್ಷಿಪ್ತ ಮಾಹಿತಿ ನೀಡಿದರು.
ಅಕ್ರಮ ಇನ್ನು ಸಕ್ರಮ
ರಾಜ್ಯದಲ್ಲಿ ಅಕ್ರಮ ನಿರ್ಮಾಣಗಳ ಸಕ್ರಮಕ್ಕೆ ಇರುವ ಕಾನೂನು ತೊಡಕು ನಿವಾರಿಸಲು ತಿಂಗಳಲ್ಲೇ ಹೊಸ ಕಾಯಿದೆ ರೂಪಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು. ಇದರಿಂದ ಕಂದಾಯ ಭೂಮಿಯಲ್ಲಿ ಹೆಚ್ಚುವರಿ ಮಹಡಿ ನಿರ್ಮಾಣ ಸೇರಿದಂತೆ ಅಕ್ರಮಗಳನ್ನು ದಂಡ ಕಟ್ಟಿ ಸಕ್ರಮಗೊಳಿಸಲು ಅವಕಾಶ ದೊರೆಯಲಿದೆ. ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಇದರಿಂದ ಆದಾಯ ದೊರೆಯಲಿದೆ.
2.0ನಲ್ಲಿ ಏನೇನಿರುತ್ತದೆ?
– ಸ್ಟಾಂಪ್ ಶುಲ್ಕದಲ್ಲಿ ವಿನಾಯಿತಿ ನಿರೀಕ್ಷೆ
– ಖರೀದಿಸಿದ ಜಾಗದ ನಡುವೆ ಸರಕಾರಿ ಜಾಗವಿದ್ದರೆ ಅದರ ಮಾಲೀಕತ್ವವನ್ನು ಮಾಲೀಕನಿಗೇ ಒದಗಿಸಲು ಅವಕಾಶ.
– ಪ್ರಸಕ್ತ 10 ಎಕರೆ ಜಾಗದಲ್ಲಿ ಐದು ಗುಂಟೆ ಸರಕಾರಿ ಜಮೀನು ಇದ್ದರೂ ಅಭಿವೃದ್ಧಿಗೆ ತೊಡಕಾಗುತ್ತಿತ್ತು
– ಅಕ್ಕಪಕ್ಕದ ಜಾಗದ ಮಾರುಕಟ್ಟೆ ಮೌಲ್ಯ ನಿಗದಿಯಲ್ಲಿ ಸಮತೋಲನ