– ನಿರಂಜನ
ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ
ಮಂಚೂ ಸೇನೆಗಳು ಈ ಹಿಂದೆ ಟಿಬೆಟ್‌ಗೆ ಬಂದಿದ್ದಾಗ ಅಧಿಕಾರದಲ್ಲಿದ್ದ ದಲಾಯಿ ಲಾಮಾ ಕಾಲವಾಗಿ, ಹೊಸ ದಲಾಯಿಗಾಗಿ ದೀರ್ಘ ಶೋಧ ನಡೆದಿತ್ತು. ಆಗ ಹುಡುಕಾಟಕ್ಕೆ ಸಿಕ್ಕ ‘ದಲಾಯಿ’ ಮಗುವನ್ನು ಪೊಟಾಲಾ ಅರಮನೆಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ದಲಾಯಿ ಲಾಮನ ಹೆಸರಲ್ಲಿ ಟಿಬೆಟಿನ ಮಂತ್ರಿಮಂಡಲ ರಾಜ್ಯಭಾರ ಮಾಡುತ್ತಿತ್ತು. ಚೀನದ ಬಂಧ ವಿಮೋಚನಾ ಪಡೆಗಳು ಟಿಬೆಟಿನ ಗಡಿಯ ಬಳಿಗೆ ಬಂದಾಗ ದಲಾಯಿ ಲಾಮಾಗೆ ಇನ್ನೂ ಹತ್ತು ಹನ್ನೆರಡರ ವಯಸ್ಸು. ಆದರೂ ಆತ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವ ಒಬ್ಬ ಸಮರ್ಥ ಸೂಕ್ಷ್ಮಮತಿ ಹುಡುಗನಾಗಿದ್ದ.
ಸಾಮ್ರಾಜ್ಯವಾದೀ ಮಂಚೂ ಪಡೆಗಳು, ಅದಕ್ಕೂ ಹಿಂದೆ ಮಂಗೋಲ್ ಸುಲಿಗೆಗಾರರು, ಬಂದಿದ್ದ ದಾರಿಯಲ್ಲೇ ಚೀನದ ಜನತಾ ಸೇನೆಗಳೂ ದೂರದ ದಾರಿ ಕ್ರಮಿಸಿ ಟಿಬೆಟನ್ನು ಹೊಕ್ಕವು. ಗುಡ್ಡಗಾಡು ಜನರಾದ ಖಾಂಪಾಗಳು ಚೀನಿ ಸೈನ್ಯಕ್ಕೆ ಘಾಸಿಯುಂಟು ಮಾಡಲು ಯತ್ನಿಸಿದರು. ಆದರೆ ಅಸಂಖ್ಯ ಟ್ರಕ್ಕುಗಳು, ಸ್ವಯಂಚಾಲಿತ ಅಗ್ನ್ಯಸ್ತ್ರಗಳು, ವಿಮಾನಗಳಿದ್ದ ಚೀನಾದ ಸುಸಜ್ಜಿತ ಸೇನೆಯ ಎದುರು ಖಾಂಪಾಗಳ ಪ್ರಾಚೀನ ಸಮರ ಕೌಶಲ ನಿರರ್ಥಕವಾಯಿತು. ಕಳವಳದ ಕರಿಯ ಛಾಯೆ ಟಿಬೆಟನ್ನು ಮುಸುಕಿತು. ಟಿಬೆಟಿನ ರಾಜಧಾನಿಯಾದ ಲ್ಹಾಸಾದ ಹೊರಗೆ ಚೀನೀ ಸೇನೆ ಬೀಡು ಬಿಟ್ಟಿತು. ಲ್ಹಾಸಾದ ಜಸಂಖ್ಯೆ ಎಪ್ಪತ್ತು ಸಾವಿರವಾದರೆ, ನಗರದ ಹೊರಗೆ ವಿಸ್ತಾರವಾದ ಸೇನಾ ಶಿಬಿರವನ್ನು ಹೂಡಿದ ಚೀನೀ ಸೈನಿಕರ ಸಂಖ್ಯೆಯೂ ಅಷ್ಟೇ ಆಗಿತ್ತು. ಟ್ಯಾಂಕುಗಳೂ ಫಿರಂಗಿಗಳೂ ಲ್ಹಾಸಾದ ಕಡೆಗೆ ಮುಖ ಮಾಡಿದ ಮೇಲೆ ಚೀನೀ ಸೇನಾನಿ ಟಿಬೆಟಿಗೆ ಸಂದೇಶ ಕಳುಹಿಸಿದ: ‘ಮಾತುಕತೆಗೆ ಬನ್ನಿ’ ಎಂದು. ಚೀನೀ ಸೇನೆ ತಮ್ಮ ಕಡೆಗೆ ಬರುತ್ತಲಿದ್ದಂತೆಯೇ ಟಿಬೆಟಿನ ಮಂತ್ರಿಮಂಡಲವು ದಿಲ್ಲಿಗೆ ನಿಯೋಗ ಕಳುಹಿಸಿತು. ಆ ನಿಯೋಗ ವಿಶ್ವಸಂಸ್ಥೆಗೂ ಹೋಯಿತು. ಕೊರಿಯಾ ಯುದ್ಧವನ್ನು ತಡೆಗಟ್ಟುವುದರಲ್ಲಿ, ಚೀನಿಯರನ್ನು ಅಲ್ಲಿಂದ ಹೊರಕ್ಕಟ್ಟುವುದರಲ್ಲಿ ನಿರತವಾಗಿದ್ದ ವಿಶ್ವಸಂಸ್ಥೆ ಟಿಬೆಟಿಗಾಗಿ ಏನನ್ನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಟಿಬೆಟಿನ ಆರ್ತನಾದಕ್ಕೆ ಕಿವಿಗೊಟ್ಟು ರಾಷ್ಟ್ರಗಳೆಲ್ಲ ಸಹಾನುಭೂತಿಯನ್ನು ಮಾತ್ರ ತೋರಿದವು.
1947ರಲ್ಲಿ ಭಾರತ ಸ್ವತಂತ್ರವಾದಾಗ ತನ್ನ ಆಂತರಿಕ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಗಮನ ಹರಿಸಬೇಕಿದ್ದ ಕಾರಣ, ಟಿಬೆಟ್ ಮೇಲಿನ ತನ್ನ ಹಕ್ಕುಗಳ ಕುರಿತು ಯೋಚಿಸುವುದಕ್ಕೆ ಸಮಯವಿರಲಿಲ್ಲ. ಅಲ್ಲಿದ್ದ ಬ್ರಿಟಿಷ್ ಅಧಿಕಾರಿಯ ಸ್ಥಾನದಲ್ಲಿ ಭಾರತೀಯನೊಬ್ಬನನ್ನು ನೇಮಿಸುವುದಕ್ಕೂ ಅದಕ್ಕೆ ಸ್ವಲ್ಪ ಕಾಲ ಹಿಡಿದಿತ್ತು. ಚೀನಾ ಬಲಶಾಲಿಯಾದಾಗಲೆಲ್ಲ ಟಿಬೆಟನ್ನು ಗೆಲ್ಲುವ, ನಂತರ ಟಿಬೆಟ್ ತನ್ನ ಸ್ವಾತಂತ್ರ್ಯ ಸಾರುವ ಇತಿಹಾಸ ಮತ್ತೊಮ್ಮೆ ಪುನರಾವರ್ತನೆಯಾಯಿತು. ಚೀನದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವ ಅನಿವಾರ್ಯದಿಂದ ಟಿಬೆಟಿನ ಮಂತ್ರಿಮಂಡಳ, ಅದರೊಡನೆ ಸಂಧಾನ ಆರಂಭಿಸಿತು. 1951ರ ಮಾ.19ರಂದು ಟಿಬೆಟ್-ಚೀನಾಗಳ ನಡುವೆ ಹದಿನೇಳು ಅಂಶಗಳ ಒಡಂಬಡಿಕೆಯಾಯಿತು. ಟಿಬೆಟಿಗೆ ಪ್ರಾದೇಶಿಕ ಸ್ವಾಯತ್ತೆ ಇರಲಿದೆಯೆಂಬ ಹುಸಿ ಆಶ್ವಾಸನೆ ಸಿಕ್ಕಿತು. ಟಿಬೆಟಿನ ವಿದೇಶ ವ್ಯವಹಾರ ಚೀನೀಯರದಾಯಿತು. ಟಿಬೆಟಿನ ಸೈನ್ಯ ಚೀನದ ಜನತಾ ಸೈನ್ಯದಲ್ಲಿ ವಿಲೀನಗೊಳ್ಳಬೇಕೆಂದಾಯಿತು. ಟಿಬೆಟಿನಲ್ಲಿ ‘ಸುಧಾರಣೆ’ಗಳನ್ನು ಮಾಡಲು ಚೀನಕ್ಕೆ ಅಧಿಕಾರ ದೊರೆಯಿತು.
ಸಾಮ್ರಾಜ್ಯವಾದಿಗಳ ವಿಭಜಿಸಿ ಆಳುವ ನೀತಿಯನ್ನು ಚೀನಿಯರು ಟಿಬೆಟಿನಲ್ಲಿ ಅನುಸರಿಸಿದರು. ದಲಾಯಿ ಲಾಮಾಗಿಂತ 2 ವರ್ಷ ಕಿರಿಯನಾಗಿದ್ದ ಪಂಚೆನ್ ಲಾಮನ ಮೇಲೆ ಮೋಡಿ ಬೀರಿದರು. ಆತನನ್ನು ದಲಾಯಿಗಿದರು ಎತ್ತಿ ಕಟ್ಟಿದರು. ಟಿಬೆಟ್ ಸಮಾಜದಲ್ಲಿನ ದಟ್ಟ ದರಿದ್ರರಿಗೆ ಆಮಿಷ ತೋರಿಸಿ ಉಳ್ಳವರ ವಿರುದ್ಧ ಅವರನ್ನು ಹೋರಾಟಕ್ಕೆ ಹೂಡಿದರು. ಪೀಕಿಂಗಿನಿಂದ (ಇಂದಿನ ಬೀಜಿಂಗ್) ಪಶ್ಚಿಮಕ್ಕೆ ಹೊರಟ ಬ್ರಾಡ್‌ಗೇಜ್ ರೈಲುದಾರಿ ಲ್ಹಾಸಾದವರೆಗೂ ವಿಸ್ತರಿಸಲ್ಪಟ್ಟಿತು. ಟಿಬೆಟಿನ ವಿವಿಧ ಭಾಗಗಳಿಗೆ ಹೆದ್ದಾರಿಗಳು, ಸಂಬಳದ ಹಾಗೂ ಒತ್ತಾಯದ ದುಡಿಮೆಯ ಮೂಲಕ ರಚಿಸಲ್ಪಟ್ಟವು. ನೇಪಾಳದ ಗಡಿಯವರೆಗೂ ಲ್ಹಾಸಾದಿಂದ ರಸ್ತೆ ಸಿದ್ಧವಾಯಿತು. ಭಾರತದ ಗಡಿ ಪ್ರದೇಶದ ತನಕವೂ ಬರಲು ಸಾಧ್ಯವಾಗುವಂತೆ ದಾರಿಗಳ ದುರಸ್ತಿ ಮೊದಲಾಯಿತು. ವಿಮಾನ ನಿಲ್ದಾಣಗಳು ಟಿಬೇಟಿನಲ್ಲಿ ಅನೇಕ ಕಡೆ ಸ್ಥಾಪಿಸಲ್ಪಟ್ಟವು.
ಆದರೆ ಚೀನೀಯರಿಗೆ ಅಡ್ಡಿಯಾಗಿದ್ದದ್ದೇನೆಂದರೆ ಭಾರತ ಹಾಗೂ ಟಿಬೆಟ್‌ಗಳ ನಡುವಿನ ಸೌಹಾರ್ದ ಸಂಬಂಧ. ಇದನ್ನು ಕೆಡಿಸಲೆಂದೇ ಚೌ ಎನ್-ಲೇ ಭಾರತಕ್ಕೆ ಬಂದರು. ಕೆಲಸ ಅವರು ಎಣಿಸಿದ್ದಕ್ಕಿಂತ ಸುಲಭವಾಗಿತ್ತು. ಟಿಬೆಟಿಗೆ ಸಂಬಂಧಿಸಿದಂತೆ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಬಳುವಳಿಯಾಗಿ ಬಂದಿದ್ದ ವಿಶಿಷ್ಟ ಹಕ್ಕುಗಳನ್ನು ಭಾರತ ಬಿಟ್ಟುಕೊಟ್ಟತು. ಮುಂದೆ ಮುರಿಯುವುದಕ್ಕೋಸ್ಕರವೇ ಏರ್ಪಟ್ಟ ಇತಿಹಾಸದ ಹಲವು ಸಹಸ್ರ ಒಪ್ಪಂದಗಳ ಮಾಲಿಕೆಗೆ ಈ ಹೊಸತೊಂದನ್ನೂ ಸೇರಿಸಿ ಚೌ ಎನ್-ಲೇ ಸ್ವದೇಶಕ್ಕೆ ಮರಳಿದರು. ಆ ದಿನದಿಂದ ಚೀನೀ ಮರ್ದನ ಯಂತ್ರ ಟಿಬೆಟಿನಲ್ಲಿ ತನ್ನ ವೇಗ ಹೆಚ್ಚಿಸಿ ಚಲಿಸತೊಡಗಿತು.
ಪ್ರಜಾಸತ್ತೆಯಲ್ಲಿ ವಾಸಿಸುವ ಜನರಿಗೆ ತಿಳಿಯದಂತಹ, ಅರ್ಥವಾಗದಂತಹ, ವಿಶಿಷ್ಟ ರೀತಿನೀತಿಗಳೂ ಸಾಮಾಜಿಕ ನಡವಳಿಕೆಗಳೂ ಕಮ್ಯೂನಿಸ್ಟ್ ಸರಕಾರವಿರುವ ಸಮಾಜಗಳಲ್ಲಿ ಇರುತ್ತವೆ. ಅವು, ಅವರ ಬತ್ತಳಿಕೆಯ ವಿನೂತನ ಅಸ್ತ್ರಗಳು. ಮೆದುಳನ್ನು ತೊಳೆದು ಸ್ವಚ್ಛಗೊಳಿಸುವುದೊಂದು ಅವರ ಆಧುನಿಕ ವಿಧಾನ. ಅದಕ್ಕಾಗಿ ಟಿಬೆಟಿಗೆ ಒಬ್ಬ ‘ರೋಗಗ್ರಸ್ತ’ ದೊರೆಯನ್ನು ಅವರು ಆರಿಸಿದರು. ಪೀಕಿಂಗಿಗೆ ಬರುವಂತೆ, ಆಗ ತಾನೇ ತಾರುಣ್ಯಕ್ಕೆ ಕಾಲಿಡುತ್ತಿದ್ದ ದಲಾಯಿ ಲಾಮರಿಗೆ ಕರೆ ಬಂತು. ಅವರ ಜೊತೆ ಪಂಚೆನ್ ಲಾಮರನ್ನೂ ಆಹ್ವಾನಿಸಲಾಯಿತು. ಪೀಕಿಂಗ್‌ನಲ್ಲಿ ಕಮ್ಯೂನಿಸ್ಟ್ ಸರಕಾರದ ಮಹತ್ಸಾಧನೆಗಳನ್ನು ದಲಾಯಿ ಲಾಮರಿಗೆ ತೋರಿಸಲಾಯಿತು. ಭೂಮಿಯ ಮೇಲೆ ನಿರ್ಮಾಣವಾಗುತ್ತಲಿರುವ ಸ್ವರ್ಗ. ಎಲ್ಲಿ ನೋಡಿದರಲ್ಲಿ ಶಿಸ್ತು, ನೋಡಿ ಬೆರಗಾಗದವರು ಯಾರುಂಟು?
ಅದು, ಚೀನದ ಜನತಾ ಪ್ರತಿನಿಧಿ ಸಭೆಯ ಅಧಿವೇಶನ ಜರಗುತ್ತಿದ್ದ ಕಾಲ. ಅಲ್ಲಿ ಜನತಾಪ್ರತಿನಿಧಿಗಳನ್ನು ಉದ್ದೇಶಿಸಿ ದಲಾಯಿ ಲಾಮರು ಪುಟ್ಟ ಭಾಷಣ ಕೊಡುವಂತೆ ಏರ್ಪಾಟು ಮಾಡಲಾಯಿತು. ಪಂಚೆನ್ ಲಾಮರೂ ಒಂದು ಭಾಷಣ ಕೊಟ್ಟರು. ಅವರಿಬ್ಬರನ್ನೂ ಸಮಾನ ಸ್ಥಾನದಲ್ಲಿಟ್ಟು ಗೌರವಿಸಲಾಯಿತು. ತಿಂಗಳ ಮೇಲೆ ತಿಂಗಳು ಉರುಳಿದರೂ ದಲಾಯಿ ಲಾಮರನ್ನು ಟಿಬೆಟಿಗೆ ಕಳುಹಿಸಿಕೊಡುವ ಯಾವ ಅಪೇಕ್ಷೆಯನ್ನೂ ಚೀನೀ ಸರಕಾರ ತೋರಿಸಲಿಲ್ಲ. ಸತ್ಕಾರ-ಕೂಟಗಳು ಮತ್ತೂ ನಡೆದುವು. ಚೌ ಎನ್-ಲೇ ದಲಾಯಿ ಲಾಮರೊಡನೆ ಧಾರ್ಮಿಕ ತಾತ್ವಿಕ ಚರ್ಚೆಗಳನ್ನೂ ಮಾಡಿದರು. ತಾವು ಸ್ವದೇಶಕ್ಕೆ ಹಿಂತಿರುಗಬಯಸುವುದಾಗಿ ಸ್ವತಃ ದಲಾಯಿ ಲಾಮರೇ ಹೇಳಿದ ಮೇಲೆ ತಕ್ಕ ಏರ್ಪಾಟನ್ನು ಚೀನೀ ಸರಕಾರ ಮಾಡಬೇಕಾಯಿತು. ಆದರೆ ಆ ಸುದೀರ್ಘ ಚೀನಾ ಯಾತ್ರೆಯ ಅನಂತರ ದಲಾಯಿ ಲಾಮರ ‘ಮೆದುಳು’ ಸ್ವಚ್ಛವಾಗಬಹುದೆಂದು ಚೀನಾದ ನಿರೀಕ್ಷೆಯಾಗಿತ್ತು, ಅದು ಆಗಲೇ ಇಲ್ಲ!
(ನಾಳೆ: ನೆಹರೂ ಮುಂದೆ ದಲಾಯಿ ಲಾಮ, ಚೌ ಎನ್-ಲೇ ಚಕಮಕಿ)