ಜಾಬ್‌ಗೆ ಕೆಪಿಎಸ್‌ಸಿ ಕಂಟಕ

-ಇನ್ನೂ ಸುಧಾರಣೆ ಕಾಣದ ಕರ್ನಾಟಕ ಲೋಕಸೇವಾ ಆಯೋಗ

-ನಿರಂತರ ವಿವಾದ, ಅಕ್ರಮದ ಕಾರಣ ನೇಮಕಾತಿ ನಡೆಯದ ಸ್ಥಿತಿ.

ಶ್ರೀಕಾಂತ್‌ ಹುಣಸವಾಡಿ, ಬೆಂಗಳೂರು.

ದಕ್ಷತೆ ಹಾಗೂ ಜೇಷ್ಠತೆ ಆಧರಿಸಿ ಪಾರದರ್ಶಕವಾಗಿ ನೇಮಕಾತಿ ಮಾಡಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಕ್ರಮಗಳ ಕೂಪದೊಳಗೆ ಸಿಲುಕಿ ಉದ್ಯೋಗಾಕಾಂಕ್ಷಿಗಳ ಪಾಲಿಗೆ ಕಂಟಕವಾಗಿದೆ. ಹಾಗಾಗಿ, ರಾಜ್ಯದಲ್ಲಿ ಸಾವಿರಾರು ಸರಕಾರಿ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ನಿಷ್ಪಕ್ಷಪಾತವಾಗಿ ಭರ್ತಿ ಮಾಡುವಂತಹ ದಕ್ಷ ಸಂಸ್ಥೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಆಯೋಗಕ್ಕೆ ‘ಅಕ್ರಮಗಳ ಕೂಪ’ವೆಂಬ ಹಣೆಪಟ್ಟಿ ಬಿದ್ದು ಹಲವು ದಶಕಗಳೇ ಕಳೆದರೂ ಇನ್ನೂ ಅದನ್ನು ಕಳಚಿ ಹಾಕುವ ನಿಟ್ಟಿನಲ್ಲಿ ಆಯೋಗ ಮತ್ತು ಸರಕಾರ ಗಂಭೀರ ಪ್ರಯತ್ನ ನಡೆಸುತ್ತಿಲ್ಲ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಅತಂತ್ರಕ್ಕೆ ಸಿಲುಕಿದ್ದಾರೆ.
ಇತ್ತೀಚಿನ ವರ್ಷಗಳಲ್ಲಂತೂ ಕಳಂಕ ರಹಿತವಾಗಿ ಯಾವೊಂದು ನೇಮಕವೂ ನಡೆದ ಉದಾಹರಣೆ ಇಲ್ಲ ಎನ್ನುತ್ತಾರೆ ಸರಕಾರದ ನಿವೃತ್ತ ಹಿರಿಯ ಅಧಿಕಾರಿಯೊಬ್ಬರು. ಇದಕ್ಕೆ ಮುಖ್ಯ ಕಾರಣ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕದಲ್ಲಿ ನಡೆಯುವ ರಾಜಕಾರಣ, ಜಾತಿ, ವರ್ಗ ಮತ್ತಿತರ ಅಂಶಗಳು. ಮೊದಲಿಗೆ 7 ಸದಸ್ಯರು ಮತ್ತು ಒಬ್ಬ ಅಧ್ಯಕ್ಷರಿದ್ದರು. ಆನಂತರ ಆ ಸಂಖ್ಯೆಯನ್ನು 12+1 = 13ಕ್ಕೆ ಹೆಚ್ಚಿಸಲಾಗಿದೆ. ಅಲ್ಲಿಯೂ ಗುಂಪುಗಾರಿಕೆ ಇದೆ ಎಂಬ ಆರೋಪವಿದೆ.
ಕೆಪಿಎಸ್‌ಸಿ ಕರ್ಮಕಾಂಡಗಳು ಹೆಚ್ಚಾದಾಗ ಹಲವು ಬಾರಿ ಶಾಸನಸಭೆಗಳಲ್ಲಿ ‘ಆಯೋಗ ಒಂದು ಬಿಳಿಯಾನೆ, ಅದನ್ನು ಮುಚ್ಚಬೇಕು’ ಎಂಬ ಮಾತು ಕೇಳಿ ಬಂದವು. ಆದರೆ ಅವೆಲ್ಲ ಮಾತಾಗಿಯೇ ಉಳಿದವು.
ಜಾರಿಯಾಗದ ಹೋಟಾ ಸಮಿತಿ ವರದಿ 2011ರ ಕೆಎಎಸ್‌ ನೇಮಕ ಹಗರಣ ಹೊರಬಂದ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕೆಪಿಎಸ್‌ಸಿಗೆ ಕಾಯಕಲ್ಪ’ ನೀಡಲಾಗುವುದೆಂದು ಹೋಟಾ ಸಮಿತಿ ರಚಿಸಿದ್ದರು. ಆ ಸಮಿತಿ 2014ರಲ್ಲಿ ವ್ಯಾಪಕ ಅಧ್ಯಯನ ನಡೆಸಿ ಆಯೋಗದ ಸಮಗ್ರ ಸುಧಾರಣೆಗೆ ವರದಿ ಸಲ್ಲಿಸಿತು. ಆದರೆ ಸಮಿತಿಯ ಶಿಫಾರಸುಗಳನ್ನು ಪೂರ್ಣ ಪ್ರಮಾಣದಲ್ಲಿ ಸರಕಾರಗಳು ಜಾರಿಗೊಳಿಸಿಲ್ಲ, ಆಯೋಗ ಮತ್ತು ಡಿಪಿಎಆರ್‌ ತಾಳಕ್ಕೆ ತಕ್ಕಂತೆ ಕುಣಿಯುವ ಸರಕಾರಗಳು, ಸಂದರ್ಶನ, ಪರೀಕ್ಷೆಗೆ ಸಂಬಂಧಿಸಿದ ಕೆಲ ಶಿಫಾರಸುಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಜಾರಿಗೊಳಿಸಿವೆ. ಉಳಿದ ಪ್ರಮುಖ ಶಿಫಾರಸುಗಳತ್ತ ಕೊಂಚವೂ ಗಮನಹರಿಸಿಲ್ಲ. 2016ರಲ್ಲಿ ನ್ಯಾ. ಎನ್‌.ಕುಮಾರ್‌ ನೇತೃತ್ವದ ಹೈಕೋರ್ಟ್‌ ವಿಭಾಗೀಯ ಪೀಠ ಹೋಟಾ ಸಮಿತಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಆದೇಶಿಸಿದ್ದರೂ ಸರಕಾರಗಳು ಅದಕ್ಕೆ ಕ್ಯಾರೇ ಎಂದಿಲ್ಲ.

ಠಿಕಾಣಿ ಹೂಡಿರುವ ಸಿಬ್ಬಂದಿ: ಸಿಬ್ಬಂದಿಯನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಸರಕಾರದ ಬೇರೆ ಇಲಾಖೆಗೆ ನಿಯೋಜಿಸಿ, ಬೇರೆ ಇಲಾಖೆ ಸಿಬ್ಬಂದಿಯನ್ನು ಆಯೋಗಕ್ಕೆ ನಿಯೋಜಿಸಬೇಕು ಎಂದು 2014ರಲ್ಲಿಯೇ ಹೋಟಾ ಸಮಿತಿ ಶಿಫಾರಸು ಮಾಡಿತ್ತು. ಆದರೆ ಈ ಬಗ್ಗೆ ನಿಯಮಗಳನ್ನು ರೂಪಿಸಬೇಕಾದ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ (ಡಿಪಿಎಆರ್‌) ಇಲಾಖೆ ಕಣ್ಮುಚ್ಚಿ ಕುಳಿತಿದೆ.

ಎಲ್ಲ ಪಕ್ಷಗಳದ್ದೂ ಸಮಪಾಲು : ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಬೇಕಾಗಬೇಕಿದ್ದ ಕೆಪಿಎಸ್‌ಸಿ, ಭ್ರಷ್ಟಾಚಾರದ ಕೂಪ ಎಂಬ ಶಾಶ್ವತ ಹಣೆಪಟ್ಟಿ ಕಟ್ಟಿಕೊಳ್ಳಲು ಮೂರು ಪಕ್ಷಗಳು ಸಮಾನ ಕಾರಣವಾಗಿವೆ. ಪ್ರತಿಪಕ್ಷಗಳಲ್ಲಿದ್ದಾಗ ಬೊಬ್ಬೆ ಹೊಡೆಯುವ ರಾಜಕೀಯ ಪಕ್ಷಗಳು, ಆಡಳಿತಕ್ಕೆ ಬಂದ ತಕ್ಷಣ ಹೊಂದಾಣಿಕೆ ಮಾಡಿಕೊಂಡು ಬಿಡುತ್ತವೆ. ಇದಕ್ಕೆ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳೂ ಹೊರತಲ್ಲ.

ಹೋಟಾ ಸಮಿತಿ ಶಿಫಾರಸುಗಳೇನು?

-ಆಯೋಗದ ಅಧ್ಯಕ್ಷರು-ಸದಸ್ಯರ ನೇಮಕಕ್ಕೆ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಶೋಧನಾ ಸಮಿತಿ ರಚನೆ.

-ಪ್ರತಿವರ್ಷ ಜನವರಿಯಲ್ಲಿ ವೇಳಾಪಟ್ಟಿ ಪ್ರಕಟಿಸಿ ಕೆಎಎಸ್‌ ಸೇರಿ ಸರ್ಧಾತ್ಮಕ ಪರೀಕ್ಷೆ ನಡೆಸುವುದು.

-ಮುಖ್ಯ ಪರೀಕ್ಷೆಯ ಅಂಕಗಳನ್ನು ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಮೊದಲೇ ತಿಳಿಸುವಂತಿಲ್ಲ.

-ಮೊದಲು ಸಂದರ್ಶನಕ್ಕೆ ಅರ್ಹರ ಪಟ್ಟಿಯನ್ನು ಪ್ರಕಟಿಸಬೇಕು.

– ಮುಖ್ಯ ಪರೀಕ್ಷೆಯಲ್ಲಿ ಎರಡು ಐಚ್ಛಿಕ ವಿಷಯಗಳ ಬದಲಿಗೆ ಒಂದೇ ಐಚ್ಛಿಕ ವಿಷಯ ಇರಬೇಕು.

– ಆನಂತರ 1:3 ಅನುಪಾತದಲ್ಲಿ ಸಂದರ್ಶನ, ದಿನಕ್ಕೆ 9 ಮಂದಿಯ ಸಂದರ್ಶನ, ಒಬ್ಬರ ಸಂದರ್ಶನ ಕನಿಷ್ಠ 25ರಿಂದ 30 ನಿಮಿಷ.

– ಸಂದರ್ಶನದ ಅಂಕಗಳು ಮುಖ್ಯ ಪರೀಕ್ಷೆಯ ಒಟ್ಟು ಅಂಕದ ಶೇ.12.5 ಮೀರಬಾರದು.

– ಸಂದರ್ಶನ ಪದ್ಧತಿಯಲ್ಲಿ ಬದಲಾವಣೆ ತರಬೇಕು

ನೇಮಕ ಅವ್ಯವಸ್ಥೆ ಹೀಗಿದೆ…
1. 1998, 1999, 2004ರ ಕೆಎಎಸ್‌ ನೇಮಕ ಅಕ್ರಮ: ಹೈಕೋರ್ಟ್‌ ಆದೇಶ ಅರೆಬರೆ ಜಾರಿ

2. 2011ರ ಕೆಎಎಸ್‌ ನೇಮಕ: ನ್ಯಾಯಲಯದ ಆದೇಶದಂತೆ ರಿನೋಟಿಫೈ ಮಾಡಬೇಕು.

3. 2015ರ ಕೆಎಎಸ್‌ ನೇಮಕ-ಷರತ್ತಿನ ಒಳಪಟ್ಟು ಕೆಲವರಿಗೆ ನೇಮಕ ಆದೇಶ ವಿತರಣೆ, ಕೆಲವರಿಗಿಲ್ಲ

4. ಅಬಕಾರಿ ನಿರೀಕ್ಷಕರ ನೇಮಕ: ಇನ್ನೂ ನೇಮಕ ಆದೇಶ ಹೊರಬಿದ್ದಿಲ್ಲ

5. ವಾಹನ ನಿರೀಕ್ಷಕರ ನೇಮಕ: ಪ್ರಕ್ರಿಯೆ ಇನ್ನೂ ಬಾಕಿ ಇದೆ

6. ಗ್ರೂಪ್‌ ಸಿ ಹುದ್ದೆಗಳ ನೇಮಕ: ಇನ್ನೂ ಪ್ರಕಟವಾದ ಅಂತಿಮ ಆಯ್ಕೆ ಪಟ್ಟಿ

ಎಷ್ಟು ಅಕ್ರಮ ಮಾಡಿದರೂ ಯಾರೂ ಏನೂ ಮಾಡುವುದಿಲ್ಲವೆಂಬ ಮನೋಭಾವ ಸದಸ್ಯರು ಮತ್ತು ಸಿಬ್ಬಂದಿಯಲ್ಲಿದೆ. ಸರಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದರೆ ಮೊದಲು ಆಯೋಗವನ್ನು ‘ಕ್ಲೀನ್‌’ ಮಾಡಿ ನಂತರ ನೇಮಕ ಪ್ರಕ್ರಿಯೆ ನಡೆಸಬೇಕು.- ಕೆ.ಆರ್‌. ಖಲೀಲ್‌ ಆಹ್ಮದ್‌ ಆಯೋಗದ ವಿರುದ್ಧ ನಿರಂತರ ಹೋರಾಟದಲ್ಲಿರುವ ಅಭ್ಯರ್ಥಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top