ಬರಲಿವೆ ಕಿಲ್ಲರ್‌ ರೋಬಾಟ್‌!

ಅಮೆರಿಕ ಹಾಗೂ ಚೀನಾಗಳು ಸದ್ದಿಲ್ಲದೆ ಕಿಲ್ಲರ್‌ ರೋಬಾಟ್‌ಗಳನ್ನು ತಯಾರಿಸುತ್ತಿವೆ ಎಂಬ ಗುಸುಗುಸು ಮಿಲಿಟರಿ ವಲಯದಲ್ಲೇ ಇದೆ. ಇವುಗಳನ್ನು ನಿಷೇಧಿಸಬೇಕು ಎಂಬ ಕೂಗು ಎದ್ದಿದೆ. ಏನಿದು ಕೊಲೆಗಾರ ಯಂತ್ರ? ಅವುಗಳಿಂದ ಏನು ಅಪಾಯ?

ಯುದ್ಧರಂಗದಲ್ಲಿ ಮಾನವರಿಲ್ಲದೆ ಬರೀ ಯಂತ್ರಗಳು ಹೊಡೆದಾಡುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಮುಂದುವರಿದ ದೇಶವೊಂದರ ದೈತ್ಯ ರೋಬಾಟ್‌ಗಳು ಪಕ್ಕದ ಬಲಹೀನ ದೇಶದ ಗಡಿಯೊಳಗೆ ನುಗ್ಗಿ ಸೈನಿಕರನ್ನು ಹುಳಗಳಂತೆ ಜಜ್ಜಿಹಾಕುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಇದ್ದಕ್ಕಿದ್ದಂತೆ ಆಕಾಶದಿಂದ ಸಾವಿರಾರು ಡ್ರೋನ್‌ಗಳು ಇದ್ದಕ್ಕಿದ್ದಂತೆ ಬೆಂಕಿಯ ಮಳೆ ಸುರಿಸುವುದನ್ನು ಊಹಿಸಿಕೊಳ್ಳಿ. ಮಿಲಿಟರಿಯಲ್ಲಿ ಕೊಲೆಗಾರ ಯಂತ್ರಗಳ ಬಳಕೆಗೆ ಅನುಮತಿ ಸಿಕ್ಕಿದರೆ ಇಂಥ ದೃಶ್ಯ ಖಂಡಿತಾ ಸೃಷ್ಟಿಯಾಗಬಹುದು. ಇವು ಬೇರೇನೂ ಅಲ್ಲ, ಮನುಷ್ಯನ ಹಸ್ತಕ್ಷೇಪವಿಲ್ಲದೆ ರಣರಂಗದಲ್ಲಿ ಎದುರಾಳಿಗಳ ಮೇಲೆ ದಾಳಿ ನಡೆಸಬಲ್ಲ, ನಿಷ್ಕರುಣೆಯಿಂದ ಶತ್ರುನಾಶ ಮಾಡಬಲ್ಲ ಯಂತ್ರಗಳು. ಇವುಗಳ ನಿಯಂತ್ರಣ ಯಾವ ಸೈನ್ಯಾಧಿಕಾರಿಯ ಕೈಯಲ್ಲೂ ಇರುವುದಿಲ್ಲ. ಬದಲಾಗಿ ಈಗಾಗಲೇ ಪ್ರೋಗ್ರಾಮ್‌ ಮಾಡಿರುವ ಕೃತಕ ಬುದ್ಧಿಮತ್ತೆ ಅದನ್ನು ನಿರ್ವಹಿಸುತ್ತಿರುತ್ತದೆ.

ಸಶಸ್ತ್ರ ಡ್ರೋನ್‌ಗಳು ಸಜ್ಜು
ಈ ಕೊಲೆಗಾರ ರೋಬಾಟ್‌ಗಳ ಮೊದಲಿನ ಅವತಾರವಾದ ಸಶಸ್ತ್ರ ಡ್ರೋನ್‌ಗಳನ್ನು ಈಗಾಗಲೇ ಚೀನಾ, ಇಸ್ರೇಲ್‌, ದಕ್ಷಿಣ ಕೊರಿಯಾ, ರಷ್ಯಾ, ಬ್ರಿಟನ್‌ ಮತ್ತು ಅಮೆರಿಕ ದೇಶಗಳು ಅಭಿವೃದ್ಧಿಪಡಿಸಿವೆ. ಈ ಡ್ರೋನ್‌ಗಳು ಆಕಾಶದಿಂದ ಬೆಂಕಿಯನ್ನು ರಾಚಲು ಶಕ್ತವಾಗಿವೆ. ಅಮೆರಿಕದ ಕೆಲವು ಖಾಸಗಿ ಕಂಪನಿಗಳು (ಉದಾ: ಎಲಾನ್‌ ಮಸ್ಕ್‌ನ ಬೋರಿಂಗ್‌ ಕಂಪನಿ) ಇಂಥ ಡ್ರೋನ್‌ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಟ್ಟಿದ್ದು, ಸಾವಿರಾರು ಸಂಖ್ಯೆಯಲ್ಲಿ ಇವು ಮಾರಾಟವಾಗಿವೆ. ಆದರೆ ಯಾವುದೇ ಡ್ರೋನ್‌ಗೆ ಶಸ್ತ್ರಾಸ್ತ್ರಗಳನ್ನು ಅಳವಡಿಸಿದರೆ ಶಿಕ್ಷಾರ್ಹ ಅಪರಾಧ ಎಂದು ಎಲ್ಲ ದೇಶಗಳು ಕಾನೂನು ತಂದಿವೆ. ಆದರೆ ಈ ಕಾನೂನು ಮಿಲಿಟರಿಗೆ ಅನ್ವಯವಾಗುವುದಿಲ್ಲ. ಸಾಕಷ್ಟು ಎತ್ತರದಿಂದ ವಾತಾವರಣಕ್ಕೆ ವಿಷಕಾರಿ ರಾಸಾಯನಿಕವನ್ನು ಸಿಂಪಡಿಸಬಲ್ಲ ಹಲವು ಬಗೆಯ ಡ್ರೋನ್‌ಗಳು ಚೀನಾ, ರಷ್ಯಾ ಮತ್ತು ಅಮೆರಿಕದ ಮಿಲಿಟರಿಯಲ್ಲಿ ಈಗಾಗಲೇ ತುಂಬಿವೆ.

ಈಗಾಗಲೇ ಇರುವ ಯಂತ್ರಗಳು
– ಅಮೆರಿಕದ ಎಎನ್‌-2 ಅನಕೊಂಡಾ ಗನ್‌ಬೋಟ್‌ ಎಂಬ ನೌಕೆ. ಇದು ಕೃತಕ ಬುದ್ಧಿಮತ್ತೆಯಿಂದ ನಿರ್ವಹಿಸಲ್ಪಡುವ ಸಂಪೂರ್ಣ ಸ್ವಾಯತ್ತ ಯಂತ್ರ. ಮನುಷ್ಯನ ಉಪಸ್ಥಿತಿ ಅಥವಾ ಹಸ್ತಕ್ಷೇಪದ ಅಗತ್ಯವೇ ಇಲ್ಲದೆ ಬಹು ದೀರ್ಘ ಕಾಲ ಇದು ಸಮುದ್ರದ ಮೇಲಿನ ವಿಸ್ತಾರ ಪ್ರದೇಶವನ್ನು ಗಮನಿಸುತ್ತಿರಬಲ್ಲದು.
– ರಷ್ಯಾ ದೇಶದ ಟಿ-14 ಅರ್ಮಟಾ ಟ್ಯಾಂಕ್‌ಗಳು. ಇದರಲ್ಲಿ ಮನುಷ್ಯನಿರುವುದಿಲ್ಲ. ಆದರೆ ತನ್ನ ದಿಕ್ಕಿನಲ್ಲಿ ಫೈರಿಂಗ್‌ ಶುರುವಾದರೆ ಇದು ಅದನ್ನು ಗುರುತಿಸಿ ಪ್ರತಿಕ್ರಿಯೆಯಾಗಿ ಫೈರಿಂಗ್‌ ಶುರುಮಾಡಬಲ್ಲದು.
– ಅಮೆರಿಕದ ಸೀ ಹಂಟರ್‌ ನೌಕೆ. 40 ಮೀಟರ್‌ ಯುದ್ಧದ ಈ ನೌಕೆ, ಯಾವುದೇ ಮನುಷ್ಯನೂ ಇಲ್ಲದೇ ಸಮುದ್ರದಲ್ಲಿ ತಿಂಗಳುಗಟ್ಟಲೆ ಓಡಾಡುತ್ತ, ಗಸ್ತು ಕೆಲಸ ಮಾಡುತ್ತದೆ.

ದಾಳಿಗೆ ಬಳಸಿದ ಇರಾನ್‌
2019ರಲ್ಲಿ ಸೌದಿ ಅರೇಬಿಯದ ಎರಡು ದೊಡ್ಡ ತೃಲ ಸಂಗ್ರಹಾಗಾರಗಳಿಗೆ ಯೆಮೆನ್‌ನ ಹೌತಿ ಬಂಡುಕೋರರು ಡ್ರೋನ್‌ಗಳನ್ನು ನುಗ್ಗಿಸಿ ಸ್ಫೋಟಿಸಿದ್ದರು. ವಿಶೇಷವೆಂದರೆ, ಈ ಡ್ರೋನ್‌ಗಳು ಎಲ್ಲಿಂದ ಉಡಾವಣೆಯಾದವು, ಯೆಮೆನ್‌ನಿಂದ 500 ಕಿಲೋಮೀಟರ್‌ ದೂರದಲ್ಲಿರುವ ಈ ಕೇಂದ್ರಗಳಿಗೆ ಡ್ರೋನ್‌ಗಳನ್ನು ನುಗ್ಗಿಸಲು ಬಂಡುಕೋರರಿಗೆ ಹೇಗೆ ಸಾಧ್ಯವಾಯಿತು ಎಂಬುದು ಇನ್ನೂ ಗೊತ್ತಾಗಿಲ್ಲ. ಇದು ಇರಾನ್‌ನದೇ ಕಿತಾಪತಿ ಎಂದು ಅಮೆರಿಕ ಆರೋಪಿಸಿತ್ತು. ಇದರಿಂದ ಇರಾನ್‌- ಅಮೆರಿಕ ಸಂಬಂಧ ಇನ್ನಷ್ಟು ಹಳಸಿತ್ತು. ಕಿಲ್ಲರ್‌ ಡ್ರೋನ್‌ಗಳು ಕಾನೂನುಬಾಹಿರ ಶಕ್ತಿಗಳ ಕೈಗಳಿಗೆ ಸಿಕ್ಕಿದರೆ ಏನಾಗಬಹುದು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ಯಾಕೆ ಸೃಷ್ಟಿಸಲಾಗುತ್ತಿದೆ?
ಅಮೆರಿಕದಂಥ ಮುಂದುವರಿದ ದೇಶಗಳು ಸಾಕಷ್ಟು ಯುದ್ಧಗಳನ್ನು ಮಾಡಿದ ಪರಿಣತಿ, ಬಲಿಷ್ಠ ಮಿಲಿಟರಿ ಎಲ್ಲ ಹೊಂದಿದ್ದರೂ ಅಫಘಾನಿಸ್ತಾನ, ಸಿರಿಯಾ, ವಿಯೆಟ್ನಾಂ ಮುಂತಾದ ಕಡೆ ಪೂರ್ಣ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ನೇರ ಯುದ್ಧಗಳಿಗಿಂತಲೂ ಸದ್ದಿಲ್ಲದೆ ಶತ್ರುದೇಶದ ಒಳಹೊಕ್ಕು ಮಾಡುವ ಆಪರೇಶನ್‌ಗಳಲ್ಲಿ ಇವು ಹೆಚ್ಚು ನಿಖರ ಹಾಗೂ ಸಹಾಯಕಾರಿ ಆಗಬಲ್ಲವು. ಯುದ್ಧರಂಗದಲ್ಲಿರುವ ಸೈನಿಕನಲ್ಲಿ ಮನುಷ್ಯಸಹಜ ಭಾವನೆಗಳಿರುವುದರಿಂದ ಆತ ತಪ್ಪು ಮಾಡಲು ಸಾಧ್ಯ. ಆದರೆ ಕಿಲ್ಲರ್‌ ಯಂತ್ರಗಳು ಮೊದಲೇ ಪ್ರೋಗ್ರಾಮ್‌ ಮಾಡಿದಂತೆ ನಡೆದುಕೊಳ್ಳುವುದರಿಂದ ಹಾಗೂ ಅವುಗಳಿಗೆ ಭಯ- ಆತಂಕ- ಕರುಣೆ ಮುಂತಾದ ಮನುಷ್ಯ ಸಹಜ ಭಾವನೆಗಳಿಲ್ಲದಿರುವುದರಿಂದ ಅವು ಹೆಚ್ಚು ನಿಖರವಾಗಿ ಕೊಲೆಗಡುಕತನ ಪ್ರದರ್ಶಿಸಬಲ್ಲವು. ಜೊತೆಗೆ, ಸೈನಿಕರನ್ನು ದೊಡ್ಡ ಸಂಖ್ಯೆಯಲ್ಲಿ ಕಳೆದುಕೊಳ್ಳುವ ಭಯವಿಲ್ಲ. ಯುದ್ಧದಲ್ಲಿ ಇವು ನಾಶವಾದರೂ ಸೈನಿಕರನ್ನು ಸಾಯಿಸಿದ ಅಪಕೀರ್ತಿ ಇರುವುದಿಲ್ಲ.

ತೊಂದರೆಯೇನು?
ಇವು ಶತ್ರುಗಳಿಗೂ ಮಿತ್ರರಿಗೂ ಪ್ರೋಗ್ರಾಮ್‌ ಮಾಡಿದಂತೆ ವ್ಯತ್ಯಾಸ ಕಲ್ಪಿಸಬಲ್ಲವಾದರೂ, ಮಿತ್ರರಂತೆ ವೇಷ ಮರೆಸುವ ಶತ್ರುಗಳನ್ನು ಕಂಡುಹಿಡಿಯಲಾರವು. ಶತ್ರುರಾಷ್ಟ್ರದ ಸೈನಿಕರಿಗೂ ಅಮಾಯಕ ಪ್ರಜೆಗಳಿಗೂ ವ್ಯತ್ಯಾಸ ಕಲ್ಪಿಸಲಾರವು. ಒಮ್ಮೆ ಅವುಗಳನ್ನು ಕಮಾಂಡ್‌ ಕೊಟ್ಟು ಬಿಟ್ಟರೆ ನಂತರ ಹಿಂದೆಗೆದುಕೊಳ್ಳುವುದು ಕಷ್ಟಸಾಧ್ಯ. ಕಾನೂನುಬಾಹಿರ ಶಕ್ತಿಗಳ ಕೈಗೆ ಸಿಕ್ಕಿದರೆ ಆಗುವ ಹಾನಿ ಊಹಾತೀತ.

ಇಸ್ರೇಲ್‌ನಿಂದ ಖರೀದಿಸಲಿದೆಯಾ ಭಾರತ?
ಇಸ್ರೇಲ್‌ ಬಳಿ ‘ಹರೋಪ್‌’ ಹೆಸರಿನ ಆತ್ಮಹತ್ಯಾ ಡ್ರೋನ್‌ಗಳಿವೆ. ಇವು ಎತ್ತರದಲ್ಲಿ ಹಾರುವಂಥವು. ಸುಲಭವಾಗಿ ಇವುಗಳನ್ನು ಪತ್ತೆ ಹಚ್ಚಲಾಗದು ಹಾಗೂ ರೇಡಾರ್‌ಗಳಿಗೆ ಇವು ಸುಳಿವು ನೀಡುವುದಿಲ್ಲ. ಸುಮಾರು 20 ಕಿಲೋ ತೂಕದ ಸ್ಫೋಟಕ ಇದರಲ್ಲಿರುತ್ತದೆ. ಇದು ಶತ್ರು ರೇಡಾರ್‌ಗಳನ್ನು ಅಥವಾ ವಿಕಿರಣಶೀಲ ಪದಾರ್ಥಗಳನ್ನು ಗುರುತಿಸುವಂತೆ ಇವುಗಳನ್ನು ಪ್ರೋಗ್ರಾಮ್‌ ಮಾಡಲಾಗಿದೆ. ಸದ್ದಿಲ್ಲದೆ ವೈರಿ ಪ್ರಾಂತ್ಯಕ್ಕೆ ನುಸುಳುವ ಇವು ಇದ್ದಕ್ಕಿದ್ದಂತೆ ಗುರಿಯ ಮೇಲೆ ಅಪ್ಪಳಿಸಿ ಸ್ಫೋಟಿಸಿಕೊಳ್ಳುತ್ತವೆ. ಹಾಗಾಗಿಯೇ ಇವಕ್ಕೆ ಸುಸೈಡ್‌ ಡ್ರೋನ್‌ಗಳೆಂದು ಹೆಸರು. 2016ರಲ್ಲಿ ಅಜರ್‌ಬೈಜಾನ್‌- ಅರ್ಮೇನಿಯ ಗಡಿಭಾಗದಲ್ಲಿ ಇಂಥ ಒಂದು ಡ್ರೋನ್‌ 7 ಮಂದಿಯನ್ನು ಬಲಿ ತೆಗೆದುಕೊಂಡ ದಾಖಲೆ ಇದೆ. ಇಸ್ರೇಲ್‌ನಿಂದ ಈ ಡ್ರೋನ್‌ಗಳನ್ನು ಖರೀದಿಸಲು ಭಾರತ ಮುಂದಾಗಿದೆ.

ಮಧ್ಯಪ್ರಾಚ್ಯಕ್ಕೆ ಚೀನಾ ಮಾರಾಟ
ಚೀನಾ ಈಗಾಗಲೇ ಇಂಥ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದು, ಮಧ್ಯಪ್ರಾಚ್ಯದ ಕೆಲವು ದೇಶಗಳಿಗೆ ಹಾಗೂ ಪಾಕಿಸ್ತಾನಕ್ಕೆ ಇಂಥ ಕಿಲ್ಲರ್‌ ಮೆಶಿನ್‌ಗಳನ್ನು ಮಾರಾಟ ಮಾಡುತ್ತಿದೆ. ಇಲ್ಲಿನ ಝಿಯಾನ್‌ ಎಂಬ ಶಸ್ತ್ರಾಸ್ತ್ರ ಕಂಪನಿ, ‘ಬ್ಲೋಫಿಶ್‌ ಎ3’ ಎಂಬ ಡ್ರೋನ್‌ಗಳನ್ನು ಮಾರುತ್ತಿದೆ. ಇವುಗಳಲ್ಲಿ ಸ್ವಯಂಚಾಲಿತ ಮೆಶಿನ್‌ಗನ್‌ಗಳಿದ್ದು, ಪ್ರೋಗ್ರಾಮ್‌ ಮಾಡಿಬಿಟ್ಟಂತೆ ಗುರಿಯೆಡೆಗೆ ಸಾಗಿ ಗುಂಡಿನ ಮಳೆಗರೆಯಬಲ್ಲವು.

ವಿರೋಧದ ಅಲೆ
ಸ್ವಾಯತ್ತ ಶಸ್ತ್ರಾಸ್ತ್ರಗಳ ಬಳಕೆ ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಉಲ್ಲಂಘಿಸುತ್ತದೆ. ಇವು ಮನುಷ್ಯನ ಹಿಡಿತವಿಲ್ಲದೆಯೇ ವಿವೇಚನಾರಹಿತವಾದ ನಾಶ, ಜೀವಹಾನಿ ಇತ್ಯಾದಿ ಮಾಡುವ ಸಾಮರ್ಥ್ಯ‌ ಹೊಂದಿವೆ. ಇವುಗಳನ್ನು ನಿಯಂತ್ರಿಸುವ ಕಾಯಿದೆಗಳಿಲ್ಲ. ಇವು ಉಂಟುಮಾಡುವ ಹಾನಿಗೆ ಯಾರನ್ನು ಹೊಣೆ ಮಾಡಬೇಕು ಎಂದೇ ಗೊತ್ತಾಗುವುದಿಲ್ಲ. ಮನುಷ್ಯನ ಮೂಲಭೂತ ಹಕ್ಕು ಮತ್ತು ಮಾನವ ಘನತೆಯ ತತ್ವಕ್ಕೆ ಧಕ್ಕೆ ತರುತ್ತವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ವಾದಿಸಿವೆ. ಇಂಥ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಉತ್ಪಾದನೆ ಮತ್ತು ಬಳಕೆಯ ಮೇಲೆ ಪೂರ್ವಭಾವಿ ನಿಷೇಧ ಹೇರಬೇಕೆಂದು ಜಾಗತಿಕ ಸಂಸ್ಥೆ ಹ್ಯೂಮನ್‌ ರೈಟ್ಸ್‌ ವಾಚ್‌ ಒತ್ತಾಯಿಸಿದೆ. ಈಗಾಗಲೇ ಜೈವಿಕ ಅಸ್ತ್ರಗಳು, ರಾಸಾಯನಿಕ ಅಸ್ತ್ರಗಳು, ಕುರುಡಾಗಿಸುವ ಲೇಸರ್‌ ಇತ್ಯಾದಿಗಳನ್ನು ಬಳಸಲು ನಿಷೇಧವಿದೆ. ಇದೇ ಬಗೆಯ ನಿಷೇಧ ಕಿಲ್ಲಿಂಗ್‌ ರೋಬಾಟ್‌ಗಳಿಗೂ ಹೇರಬೇಕು ಎಂದು ಒತ್ತಾಯಿಸಲಾಗುತ್ತಿದೆ. ದೊಡ್ಡ ದೇಶಗಳು ಹೆಚ್ಚು ಹೆಚ್ಚು ಸರ್ವಾಧಿಕಾರಿಗಳಾಗುತ್ತಿವೆ. ಪ್ರಭುತ್ವದ ದೌರ್ಜನ್ಯಕಾರಿ ಕ್ರಮಗಳನ್ನು ಪ್ರತಿಭಟಿಸುವ ಚಳವಳಿಗಳನ್ನು ಹತ್ತಿಕ್ಕಲೂ ಈ ಯಂತ್ರಗಳನ್ನು ಅವು ಬಳಸಬಹುದು ಎಂಬ ಆತಂಕವಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top