ಕರುನಾಡ ಕಟ್ಟುವ ಕಾಯಕಕ್ಕೆ ವಿಕ ನಾಯಕ- ಕೊರೊನೋತ್ತರ ಕರ್ನಾಟಕದ ಪುನಶ್ಚೇತನ ಅಭಿಯಾನಕ್ಕೆ ಪ್ರವಾಸೋದ್ಯಮದ ಮುನ್ನುಡಿ

ವಿಕ ಸುದ್ದಿಲೋಕ ಬೆಂಗಳೂರು. 
ಕೊರೊನಾ ಒಡ್ಡಿದ ಸವಾಲನ್ನು ಕರ್ನಾಟಕ ದಿಟ್ಟವಾಗಿ ಎದುರಿಸುತ್ತಿದೆ. ಆದರೆ, ಈ ಸಂಘರ್ಷ ದೀರ್ಘಕಾಲೀನವಾಗಿರುವುದರಿಂದ ಜನಜೀವನವನ್ನು ಮರಳಿ ಹಳಿಗೆ ತಂದು ಮುನ್ನಡೆಸಬೇಕಾದ ತುರ್ತು ಅನಿವಾರ್ಯತೆಯೂ ಇದೆ. ಈ ನಿಟ್ಟಿನಲ್ಲಿ ಕನ್ನಡದ ಅತಿ ಹೆಚ್ಚು ಓದುಗರನ್ನು ಹೊಂದಿರುವ ‘ವಿಜಯ ಕರ್ನಾಟಕ’ ಪತ್ರಿಕೆಯು ‘ಕರುನಾಡ ಕಟ್ಟೋಣ ಬನ್ನಿ’ (Re-Building Karnataka) ಎಂಬ ಘೋಷವಾಕ್ಯದಡಿಯಲ್ಲಿ ಜನರಿಂದ ಜನರಿಗಾಗಿ ಕರ್ನಾಟಕದ ಪುನರುತ್ಥಾನದ ಅಭಿಯಾನವನ್ನು ಆರಂಭಿಸಿದೆ.
ಈ ಸುದೀರ್ಘ ಸರಣಿಯ ಮೊದಲ ಚರಣವಾಗಿ 35 ಲಕ್ಷ ಮಂದಿಯ ಬದುಕಿಗೆ ಆಧಾರವಾದ ‘ಪ್ರವಾಸೋದ್ಯಮ’ ಕ್ಷೇತ್ರದ ಪುನಶ್ಚೇತನಕ್ಕೆ ಕಾರ್ಯತಂತ್ರವನ್ನು ರೂಪಿಸುವ ನಿಟ್ಟಿನಲ್ಲಿ ಸಂವಾದ ನಡೆಯಿತು. ಪ್ರವಾಸೋದ್ಯಮದ ಭಾಗವಾಗಿರುವ ಪ್ರವಾಸಿ ತಾಣಗಳು, ಅಮ್ಯೂಸ್ ಮೆಂಟ್ ಪಾರ್ಕ್‌ಗಳು, ಟೂರಿಸಂಗೆ ಪೂರಕವಾಗಿರುವ ಹೋಟೆಲ್‌ಗಳು, ಬಸ್ ಮತ್ತು ಟ್ಯಾಕ್ಸಿಗಳ ವ್ಯವಸ್ಥೆಯನ್ನು ಒದಗಿಸುವ ಸಂಘಟನೆಗಳ ಮಾಲೀಕರ ಜತೆಗಿನ ಚಿಂತನ ಮಂಥನ ಉದ್ಯಮದ ಮರುಚೈತನ್ಯಕ್ಕೆ ಹೊಸ ಬೆಳಕು ತೋರಿಸಿತು.
ಕೊರೊನೋತ್ತರ ಬದುಕನ್ನು ಮರು ರೂಪಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿರುವ ಆತ್ಮನಿರ್ಭರತೆಯ ಮಾರ್ಗಕ್ಕೆ ಸಮಾಲೋಚನೆ, ಸಹಕಾರ, ಸಬಲೀಕರಣಗಳೇ ಮೂಲ ಬೇರುಗಳು. ಕೃಷಿಯಿಂದ ಕೈಗಾರಿಕೆವರೆಗೆ ಎಲ್ಲ ಕ್ಷೇತ್ರಗಳನ್ನು ಚರ್ಚೆ ಮತ್ತು ಸಮರ್ಥ ಸಾರಥ್ಯದ ಮೂಲಕವೇ ಮರುರಚನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಪರಿಣತರನ್ನು ಒಂದೆಡೆ ಸೇರಿಸಿ ಸಮಾಧಿಲೋಚನೆಗೆ ಒಡ್ಡುವ ಕಾಯಕಕ್ಕೆ ವಿಕ ನೇತೃತ್ವ ವಹಿಸಿದೆ.
ಈ ನಿಟ್ಟಿನ ಮೊದಲ ಕಾರ್ಯಕ್ರಮವೇ ಯಶಸ್ಸನ್ನು ಕಂಡಿತು. ಬೆಂಗಳೂರಿನ ವಿಕ ಕಚೇರಿಯನ್ನು ಕೇಂದ್ರವಾಗಿಟ್ಟು ನಡೆದ ಸಮಾಲೋಚನೆ ಇಡೀ ರಾಜ್ಯದೆಲ್ಲೆಡೆ ಸಂಚಲನ ಸೃಷ್ಟಿಸಿತು. ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರ ಸಮ್ಮುಖದಲ್ಲಿ ನಾನಾ ಕ್ಷೇತ್ರದ ಐವರು ಗಣ್ಯರು ಸಮಾಲೋಚನೆ ನಡೆಸಿದರೆ ರಾಜ್ಯದ 12 ನಗರಗಳಿಂದ ಧಾರ್ಮಿಕ, ಹೋಟೆಲ್, ಅಮ್ಯೂಸ್ಮೆಂಟ್ ಪಾರ್ಕ್ ಸೇರಿದಂತೆ ನಾನಾ ಕ್ಷೇತ್ರಗಳಿಗೆ ಸಂಬಂಧಿಸಿದ ಗಣ್ಯರು ಆನ್‌ಲೈನ್‌ ಮೂಲಕ ಚರ್ಚೆಯಲ್ಲಿ ಭಾಗಿಯಾದರು. ಪ್ರವಾಸೋದ್ಯಮದೊಂದಿಗೆ ಆರಂಭಗೊಂಡಿರುವ ಈ ಅಭಿಯಾನ ಕೃಷಿ, ಕೈಗಾರಿಕೆ, ಉದ್ಯೋಗ, ಆರ್ಥಿಕತೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಸೇರಿದಂತೆ ಜೀವನದ ಎಲ್ಲ ಸ್ತರಗಳಲ್ಲಿ ರಾಜ್ಯದ ಮರುಕಟ್ಟೋಣದ ಬಗ್ಗೆ ಚರ್ಚೆಯ ಮೂಲಕ ನೀಲ ನಕ್ಷೆಯನ್ನು ರೂಪಿಸಿ ಸರಕಾರಕ್ಕೆ ಸಾಥ್ ನೀಡಲಿದೆ.

ಪ್ರವಾಸೋದ್ಯಮ ಕೇತ್ರದಲ್ಲಿ 35 ಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ. ಅವರ ಬದುಕನ್ನು ಮರಳಿ ಹಳಿಗೆ ತರುವುದರ ಜತೆಗೆ ರಾಜ್ಯದ ಆರ್ಥಿಕತೆ ಬಲಗೊಳಿಸುವ ಪ್ರಯತ್ನವಾಗಿ ಪ್ರವಾಸೋದ್ಯಮಕ್ಕೆ ಮರುಜೀವ ತುಂಬಲಾಗುತ್ತಿದೆ.
– ಸಿ.ಟಿ. ರವಿ ಪ್ರವಾಸೋದ್ಯಮ ಸಚಿವ

ಕರ್ನಾಟಕದ ಸಿಎಂ ಯಡಿಯೂರಪ್ಪ ಅವರು ಕೊರೊನಾವನ್ನು ನಿರ್ವಹಿಸುತ್ತಿರುವ ರೀತಿಗೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಚೇತರಿಕೆಯ ವಿಷಯದಲ್ಲೂ ರಾಜ್ಯವು ಇತರರಿಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಜನರು, ಆಡಳಿತ ವ್ಯವಸ್ಥೆಗೆ ಸೇತುವೆಯಾಗಿ ವಿಕ ನಿಂತಿದೆ.
-ರಂಜಿತ್ ಕಾಟೆ, ಸಿಇಒ, ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್.

ಜಿಎಸ್‌ಟಿ ವಿನಾಯ್ತಿ ಇರಲಿ
ಟೂರಿಸಂ ಸ್ಥಳಗಳಲ್ಲಿರುವ 3,000 ರೂ.ವರೆಗಿನ ಹೋಟೆಲ್ ಕೊಠಡಿಗಳ ಬಾಡಿಗೆಗಳ ಮೇಲಿನ ಜಿಎಸ್‌ಟಿಗೆ ವಿನಾಯ್ತಿ ನೀಡಬೇಕು. ಇಲ್ಲವೇ, ವಸೂಲಿ ಮಾಡಿದ ಜಿಎಸ್‌ಟಿಯನ್ನು ವಾಪಸ್ ಮಾಡಬೇಕು. 6 ತಿಂಗಳ ತನಕವಾದರೂ ಇದು ಜಾರಿಯಾದರೆ ಹೋಟೆಲ್‌ಗಳಿಗೆ ಅನುಕೂಲವಾಗುತ್ತದೆ. ಹೋಟೆಲ್‌ಗಳನ್ನು ಆರಂಭಿಸಲು ನಾವು ಸಿದ್ಧರಿದ್ದೇವೆ. ಆರೋಗ್ಯ, ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಿದ್ದೇವೆ. ನಮ್ಮ ಹೋಟೆಲ್ ಕಾರ್ಮಿಕರು ಮತ್ತು ಗ್ರಾಹಕರ ಸುರಕ್ಷತೆಗೆ ತಕ್ಕ ಏರ್ಪಾಟುಗಳನ್ನು ಮಾಡಿಕೊಂಡಿದ್ದೇವೆ. ಆರೋಗ್ಯ ದೃಷ್ಟಿಯಿಂದ ಮೂರು ತಿಂಗಳು ಹೋಟೆಲ್‌ಗಳಲ್ಲಿ ಬಿಸಿನೀರು ಒದಗಿಸಲೂ ನಾವು ಸಿದ್ಧರಿದ್ದೇವೆ. ಕೋವಿಡ್ ಸೋಂಕು ನಿವಾರಣೆಯಾಗುವ ತನಕ ರಸ್ತೆ ಬದಿಯ ಹೋಟೆಲ್ ಗಾಡಿ ವ್ಯಾಪಾರವನ್ನು ನಿಷೇಧಿಸುವುದು ಒಳ್ಳೆಯದು. ಮುಂದಿನ ದಿನಗಳಲ್ಲಿ ಬೇಕಿದ್ದರೇ ಫುಡ್‌ಕೋರ್ಟ್‌ಗಳನ್ನು ಮಾಡಬಹುದು.
– ಪಿ.ಸಿ.ರಾವ್, ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ

ಬಸ್‌ಗಳಿಗೆ ರಸ್ತೆ ತೆರಿಗೆ ಬೇಡ
ಟೂರಿಸಮ್ ಸ್ಪೆಷಲ್ ಪರ್ಮಿಟ್ ವಿಷಯದಲ್ಲಿ ಕಿರಿಕಿರಿಗಳು ಮುಂದುವರೆದಿವೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಒಂದಷ್ಟು ತಿಂಗಳು ಪ್ರವಾಸಿ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕವನ್ನಾದರೂ ತೆಗೆದು ಹಾಕಿ. ಕನಿಷ್ಠ 6 ತಿಂಗಳವರೆಗಾದರೂ ರಸ್ತೆ ತೆರಿಗೆ ವಿನಾಯಿತಿಯನ್ನು ಕೊಡಬೇಕು. ನಂತರದ 6 ತಿಂಗಳ ತನಕ ಶೇ.50 ವಿನಾಯಿತಿ ನೀಡಬೇಕು. ಅಂತಾರಾಜ್ಯ ಬಸ್‌ಗಳ ಟೂರಿಸ್ಟ್ ಪರ್ಮಿಟ್‌ಗೆ ವಿಧಿಸುತ್ತಿರುವ ಶುಲ್ಕ, ತೆರಿಗೆಯನ್ನು ಸರಕಾರ ತೆರವುಗೊಳಿಸಬೇಕು. ನಮ್ಮ ಖಾಸಗಿ ಬಸ್ ವಲಯವೇ ಸರಕಾರಕ್ಕೆ ಹೆಚ್ಚಿನ ಆದಾಯವನ್ನು ಸೃಷ್ಟಿಸುತ್ತಿದೆ. ಬಸ್ಗಳಿಗೆ 2 ಲಕ್ಷ ರೂ. ತೆರಿಗೆ ಕಟ್ಟುತ್ತೇವೆ. ಉದ್ಯೋಗವನ್ನೂ ಸೃಷ್ಟಿಸುತ್ತೇವೆ. ಪ್ರವಾಸೋದ್ಯಮ ಬೆಳವಣಿಗೆಗೆ ನಮ್ಮ ಬಸ್‌ಗಳ ಪಾತ್ರವೂ ಇದೆ. ಆದರೆ, ನಮ್ಮನ್ನು ಸರಕಾರ ನಿರ್ಲಕ್ಷ್ಯ ಮಾಡಿದೆ. ನಮ್ಮ ಬೇಡಿಕೆಗಳ 5 ಸಲ ಮನವಿ ಸಲ್ಲಿಸಿದರೂ ಸಾರಿಗೆ ಸಚಿವರು ಒಂದು ಸಭೆ ಸಹ ಕರೆದಿಲ್ಲ.
– ನಟರಾಜ್ ಶರ್ಮಾ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ

ಸಾಲದ ಬಡ್ಡಿ ದರ ಇಳಿಯಲಿ
ಕೋವಿಡ್-19 ಬಿಕ್ಕಟ್ಟಿನ ನಂತರ ಬಹುತೇಕ ಉದ್ದಿಮೆಗಳು ನಷ್ಟದಲ್ಲಿವೆ. ಖಾಸಗಿ ಟ್ಯಾಕ್ಸಿ, ಖಾಸಗಿ ಕ್ಯಾಬ್ ವಲಯದ ಪುನಶ್ಚೇತನಕ್ಕೆ ಸರಕಾರ ಕಾರ್ಯಪ್ರವೃತ್ತವಾಗಿದೆ. ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಟ್ರಾವೆಲ್ಸ್ , ಕ್ಯಾಬ್ ವಲಯದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಹಾಗಾಗಿ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನೀಡುವ ಸಾಲದ ಬಡ್ಡಿ ದರವನ್ನು ಇಳಿಸಬೇಕು. ಲಾಕ್‌ಡೌನ್‌ ನಂತರ ಕೇಂದ್ರ ಸರಕಾರ ಟ್ರಾವೆಲ್ಸ್ ವಲಯದ ಕ್ಯಾಬ್ಸ್ ಉದ್ದಿಮೆದಾರರಿಗೆ, ವಾಹನ ಮಾಲೀಕರಿಗೆ ಕಿರು ಉದ್ದಿಮೆ ಅಡಿಯಲ್ಲಿ ಸಾಲ ಸೌಲಭ್ಯ ಕಲ್ಪಿಸಿದೆ. ಆದರೆ ಇದರ ಬಡ್ಡಿ ದರ ಶೇ.7.5 ಉನ್ನತ ಮಟ್ಟದಲ್ಲಿದೆ. ಹೀಗಾಗಿ ಬಡ್ಡಿ ದರವನ್ನು ಶೇ.3.5ಕ್ಕೆ ಇಳಿಸಿದರೆ ಅನುಕೂಲವಾಗಲಿದೆ. ಎರಡನೆಯದಾಗಿ ಕ್ಯಾಬ್ಸ್ ನಡೆಸುತ್ತಿರುವವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚಕ್ಕೆ ಪ್ರತ್ಯೇಕ ನಿಧಿ ಸ್ಥಾಪಿಸಬೇಕು.
-ಕೆ.ರಾಧಾಕೃಷ್ಣ ಹೊಳ್ಳ ಅಧ್ಯಕ್ಷ , ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಸಂಘಟನೆ, ಬೆಂಗಳೂರು

ಜನರಲ್ಲಿ ವಿಶ್ವಾಸ ತುಂಬಿ
ಹೋಟೆಲ್ ಉದ್ಯಮ ಮತ್ತು ಪ್ರವಾಸೋದ್ಯಮ ಪರಸ್ಪರ ಪೂರಕ ಮತ್ತು ಅವಲಂಬಿಸಿವೆ. ಹಾಗಾಗಿ, ಈ ಬಿಕ್ಕಟ್ಟಿನ ನಂತರ ಆತಂಕದಲ್ಲಿರುವ ಪ್ರವಾಸಿಗರಲ್ಲಿ ವಿಶ್ವಾಸ ವೃದ್ಧಿಸುವ ಕಾರ್ಯಕ್ರಮಗಳು ಹೆಚ್ಚಬೇಕಾಗಿದೆ. ಪ್ರತಿಯೊಂದು ಪ್ರವಾಸಿ ತಾಣದಲ್ಲೂ ವೀಕ್ಷಕರಿಗೆ ಹೊಸ ಆಕರ್ಷಣೆಗಳನ್ನು ಅಭಿವೃದ್ಧಿಪಡಿಸಬೇಕು. ಹೋಟೆಲ್‌ಗಳ ಜತೆಗೆ ಮಂದಿರಗಳೂ ತೆರೆಯಲಿವೆ. ಹೋಟೆಲ್‌ಗಳು ಜನಜೀವನದ ಅಗತ್ಯದ ಭಾಗವಾಗಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪತ್ರಿಕೆಗಳು ವ್ಯಾಪಕವಾದ ಜನ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇವೆಲ್ಲದರ ಫಲವಾಗಿ ಹೋಟೆಲ್ ಗಳು ಮತ್ತೆ ಪುನಾರಂಭವಾಗುವ ಹಂತಕ್ಕೆ ಬಂದಿವೆ. ಈ ಸಂದರ್ಭದಲ್ಲಿ ವಿಶೇಷವಾಗಿ ‘ವಿಜಯ ಕರ್ನಾಟಕ’ ಪತ್ರಿಕೆ ಸಲ್ಲಿಸಿರುವ ಸೇವೆಗೆ ರಾಜ್ಯದ ಹೋಟೆಲ್ ಉದ್ದಿಮೆದಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
– ಚಂದ್ರಶೇಖರ್ ಹೆಬ್ಬಾರ ಅಧ್ಯಕ್ಷ , ಕರ್ನಾಟಕ ಹೊಟೇಲ್ ಮಾಲೀಕರ ಸಂಘ, ಬೆಂಗಳೂರು

ಸುರಕ್ಷತಾ ಕ್ರಮಗಳಿಗೆ ಆದ್ಯತೆ
ಸ್ವಚ್ಛತೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಪ್ರವಾಸೋದ್ಯಮ ಪೂರಕ ಚಟುವಟಿಕೆ ಆರಂಭಿಸಲಾಗುವುದು. ಇವುಗಳನ್ನು ಪಾಲಿಸಬೇಕು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯೂ ಸವಾಲುಗಳನ್ನು ಎದುರಿಸುತ್ತಿದೆ. 3 ತಿಂಗಳಿಂದ ಆದಾಯವಿಲ್ಲದೆ ಇಲಾಖೆಯೂ ಸಂಕಷ್ಟದಲ್ಲಿದೆ. ಆದರೆ ಸುರಕ್ಷತಾ ಮಾರ್ಗಸೂಚಿಗಳ ಅನುಸಾರ ಜೂ.8ರಿಂದ ಹೋಟೆಲ್, ರೆಸ್ಟೋರೆಂಟ್‌ಗಳನ್ನು ತೆರೆಯಲು ಸರಕಾರ ಅನುವು ಮಾಡಿಕೊಟ್ಟಿರುವುದು ಎಲ್ಲರಿಗೂ ಹೊಸ ಅವಕಾಶಗಳನ್ನು ಸೃಷ್ಟಿಸಿದಂತಾಗಿದೆ. ಹಾಗಾಗಿ ನಿರ್ದಿಷ್ಟ ಮಾರ್ಗಸೂಚಿಗಳನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು. ಕೆಎಸ್‌ಟಿಡಿಸಿಗೆ ಸೇರಿದ 20 ಹೋಟೆಲ್‌ಗಳಿದ್ದು ಜೂ.8ಕ್ಕೆ ಮೊದಲ ಹಂತದಲ್ಲಿ ಮೈಸೂರು, ಮಡಿಕೇರಿ, ಬಾದಾಮಿಯಲ್ಲಿ ಕಾರ್ಯಾರಂಭ ಮಾಡಲಿವೆ. ಕಾರ್ಯನಿರ್ವಹಣೆ ಸಂಬಂಧಪಟ್ಟವರಿಗೆ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಉಳೆದೆಡೆಗಳಲ್ಲಿ ಕಾರ್ಯಾರಂಭ ಮಾಡುವ ಕುರಿತು ನಿರ್ಧರಿಸಲಾಗುವುದು.
– ಕುಮಾರ್ ಪುಷ್ಕರ, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಟಿಡಿಸಿ, ಬೆಂಗಳೂರು

ಕೊರೊನೋತ್ತರ ಕಾಲದಲ್ಲಿ ಜನಜೀವನವನ್ನು ಮರಳಿ ಹಳಿಗೆ ತರುವ ನಿಟ್ಟಿನಲ್ಲಿ ಆಯಾ ಕ್ಷೇತ್ರದ ಪರಿಣಿತರು ಮತ್ತು ಸಮಾಜದ ನಾನಾ ಸ್ತರದ ಜನರ ನಡುವೆ ಚಿಂತನ ಮಂಥನಕ್ಕೆ ವಿಜಯ ಕರ್ನಾಟಕ ಚಾಲನೆ ನೀಡಿದೆ.
– ಹರಿಪ್ರಕಾಶ್ ಕೋಣೆಮನೆ, ಸಂಪಾದಕ

ವರ್ಕಿಂಗ್ ಕ್ಯಾಪಿಟಲ್ ಸಾಲದ ಮೇಲಿನ ಬಡ್ಡಿದರ ಹೆಚ್ಚಿದ್ದು, ಅದನ್ನು ತಗ್ಗಿಸಬೇಕು. ಟರ್ಮ್ ಲೋನ್ ಅನ್ನು ಹೆಚ್ಚುವರಿಯಾಗಿ ಮತ್ತು ದೀರ್ಘಾವಧಿಗೆ ನೀಡುವ ಕೆಲಸವಾಗಬೇಕು. ಈಗ ಮೂರು ತಿಂಗಳವರೆಗೂ ಇರುವ ವಿದ್ಯುತ್ ಫಿಕ್ಸೆಡ್‌ ಶುಲ್ಕವನ್ನು ಒಂದು ವರ್ಷದವರೆಗೂ ವಿಸ್ತರಿಸಬೇಕು.
– ದಿನೇಶ್ ಪೈ, ಓಷಿಯನ್ ಪರ್ಲ್ ರೆಸಾರ್ಟ್ಸ್, ಹುಬ್ಬಳ್ಳಿ

ರೆಸಾರ್ಟ್‌ಗಳಿಗೆ ವಿಧಿಸಲಾಗುತ್ತಿರುವ ಜಿಎಸ್‌ಟಿಗೆ ವರ್ಷದವರೆಗೆ ವಿನಾಯ್ತಿ ನೀಡಬೇಕು. ಹೊಟೇಲ್, ರೆಸಾರ್ಟ್ ಕಟ್ಟಡಗಳ ಕಂದಾಯಕ್ಕೆ ವರ್ಷದವರೆಗೆ ವಿನಾಯ್ತಿ ನೀಡಬೇಕು. ಹೊಟೇಲ್ ಅನ್ನು ಉದ್ಯಮವಾಗಿ ಪರಿಗಣಿಸಬೇಕು. ಎಂಎಸ್ಎಂಇ ಮಾನ್ಯತೆ ದೊರೆತರೆ ಸೌಲಭ್ಯಗಳು ದೊರೆಯುತ್ತವೆ.
– ನಾಗೇಂದ್ರ ಪ್ರಸಾದ್, ರೆಸಾರ್ಟ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ , ಕೊಡಗು

ಈ ಸಂಕಟ ಪರಿಸ್ಥಿತಿಯಿಂದ ಹೊರ ಬರಲು ಟೆಂಪಲ್ ಟೂರಿಸಮ್‌ಗೆ ಆದ್ಯತೆ ನೀಡಬೇಕು. ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ತೇಜಿಸಿ, ಅವುಗಳನ್ನು ಪ್ರವಾಸಿ ಆಕರ್ಷಣೆಗಳನ್ನಾಗಿ ಮಾಡಬೇಕು.
– ಎಸ್. ಪ್ರದೀಪ್ ಕಲ್ಕೂರು, ಧಾರ್ಮಿಕ ಸಂಘಟಕ ಮತ್ತು ದ.ಕ. ಕಸಾಪ ಅಧ್ಯಕ್ಷ , ಮಂಗಳೂರು

ಪ್ರವಾಸೋದ್ಯಮ ಸ್ಥಳಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲಿನವರಿಗೇ ಕೆಲಸ ನೀಡುವುದರಿಂದ ಪ್ರವಾಸೋದ್ಯಮ ಬಲವರ್ಧನೆ ಜೊತೆಗೆ ಸ್ಥಳೀಯರಿಗೂ ಜೀವನಕ್ಕೂ ದಾರಿಯಾಗುತ್ತದೆ.
– ಅಂಜಲಿ ಬೆಳಗಲ್ಲು, ಪ್ರವಾಸಿ ತಾಣಗಳ ತಜ್ಞೆ, ಹೊಸಪೇಟೆ

ಚಿತ್ರದುರ್ಗ ಕೋಟೆ ರೀತಿ ಇಕ್ಕಟ್ಟಲ್ಲದ ತಾಣಗಳ ಪ್ರವಾಸಕ್ಕೆ ಜನರನ್ನು ಸದ್ಯ ಪ್ರೋತ್ಸಾಹಿಸಬೇಕು. ರಾಜ್ಯದಲ್ಲಿ ಈ ಬಗೆಯ ಒಣ ಹವೆಯ ತಾಣಗಳನ್ನು ಪಟ್ಟಿ ಮಾಡಬಹದು. ಇಂಥ ಪ್ರದೇಶದಲ್ಲಿ ನೂಕು ನುಗ್ಗಲು ಆಗದ ಕಾರಣ ಕೊರೊನಾ ಭೀತಿ ಇರಲ್ಲ.
-ಅರುಣ್ ಕುಮಾರ್, ಐಶ್ವರ್ಯ ಪೋರ್ಟ್, ಚಿತ್ರದುರ್ಗ

ವೀಕೆಂಡ್ ಟೂರಿಸಮ್ ಪ್ರೋತ್ಸಾಹಿಸಬೇಕು. ಜಿಲ್ಲೆಯೊಳಗೇ ಇರುವ ತಾಣಗಳನ್ನು ಪ್ರವಾಸಿಗರು ನೋಡಲು ಬಸ್ ವ್ಯವಸ್ಥೆ ಮಾಡಬೇಕು. ಪ್ರವಾಸಿಗರಿಗೆ ದಿನದ ಪಾಸ್‌ಗಳನ್ನು ವಿತರಿಸಬೇಕು.
-ಉಮೇಶ್ ಬಾಳಿ, ಪ್ರವಾಸೋದ್ಯಮ ಹೊಟೇಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ , ಬೆಳಗಾವಿ

ಅಮ್ಯೂಸ್ಮೆಂಟ್, ಫ್ಯಾಂಟಸಿ ಪಾರ್ಕ್‌ಗಳ ಉದ್ಯಮಕ್ಕೆ ಎಂಎಸ್ಎಂಇ ಸ್ಟೇಟಸ್ ದೊರೆತರೆ ಹಲ ಸೌಲಭ್ಯಗಳು ದೊರೆಯಲಿವೆ. ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ಫಿಕ್ಸೆಡ್ ಶುಲ್ಕ ಕೆಲ ಕಾಲ ವಿಧಿಸಬಾರದು. ಗ್ರಾಹಕರ ಹಿತರಕ್ಷ ಣೆಯನ್ನು ಗಮನದಲ್ಲಿಟ್ಟುಕೊಂಡು ಪಾರ್ಕ್ ಶುರು ಮಾಡುವೆವು. ಸರಕಾರ ನಮ್ಮ ಮನವಿ ಪರಿಗಣಿಸುತ್ತಿಲ್ಲ.
-ಯೋಗೇಶ್ ಡಾಂಗೆ, ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್, ಮೈಸೂರು

ಕರಕುಶಲ ವಸ್ತುಗಳ ಮಾರಾಟವೂ ಪ್ರವಾಸೋದ್ಯಮದ ಭಾಗ. ಕರಕುಶಲ ವಸ್ತುಗಳ ಮಾರಾಟದ ಮೇಲಿನ ಶೇ.12ರಷ್ಟು ಜಿಎಸ್‌ಟಿಗೆ ವಿನಾಯಿತಿ ನೀಡಿದರೆ ಸಹಕಾರಿಯಾಗುತ್ತದೆ.
– ಡಾ. ಮಲ್ಲಮ್ಮ ಯಾಳವಾರ, ಅಧ್ಯಕ್ಷೆ, ಸಬಲ, ವಿಜಯಪುರ

ದಕ್ಷಿಣ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ತಜ್ಞರ ಮಂಡಳಿ ಸ್ಥಾಪಿಸಬೇಕು. ಪ್ರವಾಸಿ ತಾಣಗಳಲ್ಲಿ ಕಲ್ಚರಲ್ ಓಪನ್ ಥಿಯೇಟರ ನಿರ್ಮಿಸಿ ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸಬೇಕು.
-ಉದಯಕುಮಾರ್ ಶೆಟ್ಟಿ, ಉಪಾಧ್ಯಕ್ಷ , ಚಿಕ್ಕಮಗಳೂರು ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್

ಸ್ವಚ್ಛ ಭಾರತ್ ರೀತಿ ಕೊರೊನಾ ಭಯವನ್ನು ಹೋಗಲಾಡಿಸಲು ಅಭಿಯಾನ ಶುರು ಮಾಡಬೇಕು. ಜನರಲ್ಲಿ ಭಯ ಹೋಗದ ಹೊರತು ಅವರು ಹೊರಬರುವುದಿಲ್ಲ; ಯಾವುದೇ ಉದ್ಯಮ ಚೇತರಿಸಿಕೊಳ್ಳುವುದಿಲ್ಲ. ಈ ನಿಟ್ಟಿನ ಕ್ರಮ ಕೈಗೊಳ್ಳಬೇಕು.
– ನಾಗರಾಜ ಅಡಿಗ, ಅಡಿಗಾಸ್ ಯಾತ್ರಾ, ಹುಬ್ಬಳ್ಳಿ

ಅಧಿಕಾರಿಗಳ ಕಿರಿಕಿರಿ ತಪ್ಪಿಸಬೇಕು. ರೆಸಾರ್ಟ್ ಆರಂಭಕ್ಕೆ ಮುಂಚೆ ಜಿಲ್ಲಾ ಮಟ್ಟದಲ್ಲಿ ತರಬೇತಿಯನ್ನು ಕೊಡಬೇಕು. ಸರಕಾರ ಮತ್ತು ರೆಸಾರ್ಟ್ ಮಾಲೀಕರ ನಡುವೆ ನೇರ ಸಂಪರ್ಕಕ್ಕಾಗಿ ವಿಡಿಯೊ ಕಾನರೆನ್ಸ್‌ಗಳನ್ನು ಮಾಡಬೇಕು.
– ಅರುಣೇಶ್ ಕೆ.ಆರ್. ರೆಸಾರ್ಟ್ ಅಸೋಷಿಯೇಷನ್ ಕಾರ್ಯದರ್ಶಿ, ರಾಮನಗರ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top